November 5, 2013

ನಾವ್ಯಾಕೆ ಹೀಗೆ...? - ದೀಪಾವಳಿ ವಿಶೇಷಾಂಕ

ನಾನು ಹೇಳಲು ಹೊರಟಿರುವ ವಸ್ತು ಅಲ್ಪವಾದರೂ, ವಿಚಾರ ಸೂಕ್ಷ್ಮವಾದದ್ದು. "ನಾವು ಎಷ್ಟೇ ಮೇಲೆ ಬಂದರೂ ನಾವು ಮೇಲೆ ಹತ್ತಲು ಸಹಾಯ ಮಾಡಿದ ಏಣಿಯನ್ನು ಬೀಳಿಸಬಾರದು." ಈ ಲೇಖನ ನನ್ನ ಮಟ್ಟಿಗೆ ಈ ವರ್ಷದ ದೀಪಾವಳಿ ವಿಶೇಷಾಂಕ ಎಂದು ಹೇಳಿದರೆ ತಪ್ಪಾಗಲಾರದು. ಯಾಕೆಂದರೆ, ನನಗೆ ಕನ್ನಡದ ಕೆಲವು ನುಡಿಮುತ್ತುಗಳು ಪ್ರತ್ಯಕ್ಷವಾಗಿ ಅನುಭವಕ್ಕೆ ಬಂದವು.
  • ಹಣ ಮನುಷ್ಯನ ವಿವೇಕವನ್ನು ಹಾಳುಮಾಡುತ್ತದೆ.
  • ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
  • ಹೇಳೋದು ವೇದಾಂತ, ತಿನ್ನೋದು ಬದನೆಕಾಯಿ.
  • ಮಾಡೋದು ಅನಾಚಾರ, ಮನೆ ಮುಂದೆ ಬೃಂದಾವನ.
ಬಹುಶಃ ಪೀಠಿಕೆ ಹೆಚ್ಚಾಯಿತೆಂದು ತೋರುತ್ತದೆ ನೇರವಾಗಿ ವಿಷಯಕ್ಕೆ ಬರುತ್ತೇನೆ

ನನಗೆ ತಿಳುವಳಿಕೆ ಬಂದಾಗಿನಿಂದ ನನಗೆ ಗೊತ್ತಿರುವವರ ಹತ್ತಿರ ಒಂದು ಏಣಿ ಇತ್ತು. ನನಗೆ ತಿಳಿದಮಟ್ಟಿಗೆ ಅವರ ಮನೆಯ ಎಲ್ಲಾ ಸಮಾರಂಭಕ್ಕೂ ಸಾಕ್ಷಿಯಾಗಿತ್ತು.
  • ಮನೆಯ ತಾರಸಿಯಲ್ಲಿ ಕೊಳೆಯನ್ನು ತೆಗೆಯುವುದಕ್ಕೆ
  • ಹೊಸದಾದ ಗಡಿಯಾರ ನೇತುಹಾಕಲು
  • ಮರದಿಂದ ಕಾಯಿ ಕೀಳಲು
  • ಮನೆಗೆ ಹೊಸ ಬಣ್ಣಬಳಿದು ಹೊಸದೊಂದು ರೂಪು ಕೊಡಲು.
  • ನನಗೆ ಇನ್ನು ನೆನಪಿದೆ ಆ ದಿನ ಅವರ ಮನೆಯ ಹೆಣ್ಣುಮಗಳ ಮದುವೆ ಇತ್ತು, ಈ ಏಣಿಯನ್ನು ಉಪಯೊಗಿಸಿ ಮನೆಯ ಮುಂದೆ ಚಪ್ಪರವನ್ನು ಹಾಕಿದರು.
  • ಆ ಮನೆಯಲ್ಲಿ ಹೊಸದೊಂದು ಮಗು ಜನಿಸಿದಾಗ ಅಟ್ಟದ ಮೇಲೆ ಇದ್ದ ತೊಟ್ಟಿಲನ್ನು ಅದನ್ನು ಹತ್ತಿಯೆ ತೆಗೆದಿದ್ದು.
ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ನಾವು ಉಪಯೋಗಿಸುವ ಪ್ರತಿ ವಸ್ತುವನ್ನು ಪೂಜಿಸುತ್ತೆವೆ. ಹಾಗೆ ಆಯುಧ ಪೂಜೆ ದಿನದಂದು ಎಲ್ಲ ಸಾಮಾನುಗಳಿಗು ಆರತಿ ಮಾಡುವಂತೆ ಆ ಏಣಿಗೂ ಕೂಡ ಅರಿಶಿಣ, ಕುಂಕುಮ, ಮಂತ್ರಾಕ್ಷತೆ ಹಾಕಿ ಪೂಜೆ ಮಾಡುತ್ತಿದ್ದರು. ಸಂಜೆಗೆ ಮನೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಸಿದರು. ಬಂದಿದ್ದ ನೆಂಟರು, ಸ್ನೇಹಿತರೆಲ್ಲರಿಗೂ ಮನಃತೃಪ್ತಿ ಆಗುವಂತೆ ನೋಡಿಕೊಂಡಿದ್ದರು. ನನಗೆ ಅವರ ಸಂಸ್ಕಾರ ನೋಡಿ ತುಂಬ ಸಂತೋಷವಾಗಿತ್ತು. ಅವರು ಮಾಡುತ್ತಿದ್ದದು ಅವರ ಸಂತೋಷಕ್ಕೋ ಅಥವಾ ತಮ್ಮ ದೊಡ್ಡಸ್ತಿಕೆ ತೋರಿಸಿಕೊಳ್ಳುವುದಕ್ಕೊ ತಿಳಿಯಲ್ಲಿಲ್ಲ. ನಾನು ನೋಡಿರುವಂತೆ ಸಂಗೀತ ಪ್ರಿಯರಾಗಿದ್ದರು. ಸಾಮಾನ್ಯವಾಗಿ ಸಂಗೀತ ಪ್ರಿಯರ ಮುಖ ಶಾಂತ ಹಾಗು ಸೌಮ್ಯವಾಗಿರುತ್ತದೆ. ಆದರೆ, ಇಷ್ಟು ದಿನಗಳಲ್ಲಿ ನಾನವರ ಮುಖದಲ್ಲಿ ಯಾವತ್ತು ಶಾಂತತೆಯನ್ನಾಗಲಿ, ಸೌಮ್ಯತೆಯನ್ನಾಗಲಿ ಕಂಡಿದ್ದೆ ಇಲ್ಲ. ಮಾತು ಕೆಲವು ಸಲ ಒರಟಾಗಿರುತ್ತಿತ್ತು ಆಗ ನಾನು ಅವರ ಮಾತಷ್ಟೇ ಒರಟು, ಅಂತಹ ಮಾತುಗಳು ಹೃದಯದಿಂದ ಬಂದಿದ್ದಲ್ಲ ಎಂದುಕೊಳ್ಳುತ್ತಿದೆ.

ಮೊನ್ನೆ, ಹಬ್ಬದಲ್ಲಿ ಏನೋ ಕೆಲಸಕ್ಕಾಗಿ ಏಣಿಯನ್ನು ಉಪಯೋಗಿಸುತ್ತಿದ್ದರು. ಏಣಿ ಕೂಡ ಹಳೆಯದಾಗಿತ್ತು, ಅವರು ಹತ್ತಬೇಕಾದರೆ ಒಂದು ಮೆಟ್ಟಿಲು ಮುರಿದುಹೋಯಿತು. ಅದರಿಂದ, ಅವರಿಗೆ ಸ್ವಲ್ಪ ತೊಂದರೆ ಆಯಿತು. ಅದನ್ನು ಮುಂದೆ ಉಪಯೋಗಿಸದೆ ಒಂದು ಮೂಲೆಯಲ್ಲಿ ಇಡಬಹುದಾಗಿತ್ತು. ಆದರೆ, ಆ ಏಣಿಯನ್ನು ಮುರಿದು ಎಸೆದು ಬಿಟ್ಟರು. ಅದನ್ನು ನೋಡಿ ನನಗೆ ತುಂಬ ಬೇಸರವಾಯಿತು. ತಮಗೆ ಒಂದು ತೊಂದರೆ ಮಾಡಿತು ಎಂಬ ಕಾರಣದಿಂದ ಅದನ್ನು ಮುರಿದರು. ಎಂತಹ ಕ್ರೌರ್ಯ ಮನಸ್ಸಿನಲ್ಲಿ ಎಂದುಕೊಂಡೆ. ಅವರ ಮೇಲಿದ್ದ ಗೌರವವೆಲ್ಲ ಒಂದೇ ಕ್ಷಣದಲ್ಲಿ ಉಡುಗಿ ಹೋಯಿತು.

ಒಂದು ಸಣ್ಣ ತೊಂದರೆ ಆಗಿದಕ್ಕೆ ಆ ಏಣಿಯನ್ನು ಮುರಿದರು, ಅದೇ ರೀತಿ ಒಬ್ಬ ಮನುಷ್ಯನಿಗೆ ವಯಸ್ಸಾದ ಮೇಲೆ ಏನೋ ಒಂದು ತೊಂದರೆ ಮಾಡಿದರು ಅಥವಾ ತೊಂದರೆ ಆಯಿತು ಎಂಬ ಕಾರಣಕ್ಕೆ ಅವರನ್ನು ಹೊರಗಟ್ಟುವುದಿಲ್ಲ ಎಂದು ಯಾವ ನಂಬೆಕೆಯೂ ಇಲ್ಲ. ಆ ಏಣಿಯನ್ನು ಒಂದು ಮನುಷ್ಯನನ್ನಾಗಿ ನೋಡಿದಾಗ ಅವರ ನಡುವಳಿಕೆಯಲ್ಲಿ ಎಂತಹ ಕ್ರೌರ್ಯ ತುಂಬಿದೆ ಎಂದು ತಿಳಿಯುತ್ತದೆ.

ನಿಜವಾಗಲು, ಆ ಕೆಲಸ ಮನುಷ್ಯರಿಗೆ ಯಾರದರೂ ಮಾಡಿದಲ್ಲಿ ಅದು - "ಅವರ ಅಂತ್ಯದ ಆರಂಭ". "It's Beginning of their End"

August 9, 2013

ಸೈಕಲ್ ಸವಾರಿ

ಕೆಲವು ದಿನಗಳ ಹಿಂದೆ ಮನೆ ಹತ್ತಿರ ಮಗುವೊಂದು ಸೈಕಲ್ ಕಲಿಯುತ್ತಿತ್ತು. ಆ ಮಗುವಿನ ತಂದೆ ಹೇಳಿಕೊಡುತಿದ್ದರು. ಅದನ್ನು ನಾನು ಅಕಸ್ಮಾತಾಗಿ ನೋಡಿದೆ. ಮನಸ್ಸಿಗೆ ಒಂದು ತರಹ ಸಂತೋಷವಾಯಿತು. ಇದೊಂದೆ ಸಲವಲ್ಲ ದಾರಿಯಲ್ಲಿ ಯಾರು ಸೈಕಲ್ ಹೊಡೆಯೊದನ್ನ ನೋಡಿದಾಗಲ್ಲೆಲ್ಲಾ ಮನಸ್ಸಿಲ್ಲಿ ಬಾಲ್ಯ ಜೇವನದ ಪುಟಗಳು ತಿರುವಿಹಾಕಿದಂತಾಗುತ್ತದೆ. ಹೀಗೆ ಬಾಲ್ಯವನ್ನು ನೆನೆಯುವುದೇ ಒಂದು ರೀತಿ ಖುಷಿ.
 

ನಾನು ಮೊದಲ ಸಲ ಸೈಕಲ್ ಮೇಲೆ ಕೂತಾಗ ನಾನು ಎರಡನೆ ತರಗತಿಯಲ್ಲಿ ಇದ್ದೆ ಅನಿಸುತ್ತದೆ. ನಾನೇನು ಸೈಕಲ್ ಕಲಿತಿರಲ್ಲಿಲ್ಲ ಆದರೆ, ಹಿಂದಿನ ಚಕ್ರಕ್ಕೆ ಮತ್ತೆರಡು ಚಕ್ರ ಜೋಡಿಸಿ ಓಡಿಸುವ ಪ್ರಯತ್ನ ಮಾಡುತ್ತಿದ್ದೆ. ಮಾಡುತ್ತಿದ್ದೆ ಎನ್ನುವುದಕ್ಕಿಂತ ಮಾಡಿಸುತ್ತಿದ್ದರು ಎನ್ನಬಹುದು. ನನಗೇನು ಆಗ ಸೈಕಲ್ ಎಂದರೆ ಆಸಕ್ತಿ ಇರಲ್ಲಿಲ್ಲ. ಹೇಳಿ, ಕೇಳಿ ನಾನು ಸೊಂಭೇರಿ. ಸ್ವಲ್ಪ ದಿನಗಳು ಹಾಗೆ ಪ್ರಯತ್ನ ಮುಂದುವರೆದ್ದಿತ್ತು ಆದರೆ ಏನು ಪ್ರಯೋಜನವಾಗಲ್ಲಿಲ್ಲ. ಕೆಲ ದಿನಗಳ ನಂತರ ಎನ್.ಆರ್.ಕಾಲೋನಿ ಇಂದ ಬಾಪೂಜಿನಗರಕ್ಕೆ ಮನೆ ಬದಲಾಯಿಸಿದೆವು. ಅಲ್ಲಿ, ಮನೆಯ ಮುಂದಿನ ರಸ್ತೆ ತುಂಬ ಚಿಕ್ಕದಾಗಿತ್ತು ಆದ್ದರಿಂದ ಸೈಕಲ್ ಕಲಿಯುವುದಕ್ಕೆ ಆಗಲ್ಲಿಲ್ಲ. ನನ್ನ ಹತ್ತಿರವಿದ್ದ ಸೈಕಲ್ ಮೂಲೆ ಸೇರಿತು. 

ಸುಮಾರು ಮೂರರಿಂದ ಎಂಟನೆ ತರಗತಿಯ ತನಕ ಶಾಲೆಗೆ ನಡೆದು ಹೋಗುತ್ತಿದ್ದೆ. ರಸ್ತೆಯಲ್ಲಿ ನನ್ನ ವಯಸ್ಸಿನವರು, ನನಗಿಂತ ಚಿಕ್ಕವರು, ಹಿರಿಯರನೇಕರು ಸೈಕಲ್ ಓಡಿಸುವುದನ್ನು ನೋಡುತ್ತಿದ್ದೆ. ಒಂದೊಂದು ಸಲ ನಾನು ಕಲಿತು ಓಡಿಸಬೇಕು ಅನ್ನಿಸಿತ್ತಿತ್ತು ಆದರೆ ಪ್ರಯತ್ನ ಮಾತ್ರ ಶೂನ್ಯ. ಅಮ್ಮ, ನನ್ನ ಚಿಕ್ಕಮ್ಮ, ಮಾವನ ಮಕ್ಕಳು ಎಲ್ಲರೂ ಸೈಕಲ್ ಕಲಿಯಲು ಹೇಳುತ್ತಿದ್ದರು. ಆದರೆ ಅದಾವುದನ್ನು ನಾನು ತಲೆಗೆ ಹಚ್ಚಿಕೊಳ್ಳುತ್ತಿರಲ್ಲಿಲ್ಲ. ಮುಂದೊಂದು ದಿನ ಯಾವಾಗಲಾದರು ನನಗೆ ಅನ್ನಿಸಿದಾಗ ಕಲಿತರಾಯಿತು ಎಂಬ ಉದಾಸೀನತೆ. 

ಪ್ರತಿ ವರ್ಷದಂತೆ ಆ ಸಲವೂ ಕೂಡ ಬೇಸಿಗೆ ರಜ ಬಂತು. ವಾಡಿಕೆಯಂತೆ ನಾನು, ವಿಶ್ವಾಸ ಊರಿಗೆ ಹೋದೆವು, ಆ ಸಲ ಅಲೋಕ, ಅಕ್ಷಯ, ಭಾರ್ಗವ ಯಾರು ಬಂದಿರಲ್ಲಿಲ್ಲ. ಅಮ್ಮ, ಅಜ್ಜಿಯ ಬಲವಂತವೂ ಜಾಸ್ತಿ ಆಯಿತು ಆದ್ದರಿಂದ ಸುಮ್ಮನೆ ಪುಟ್ಟಿಯ ಸೈಕಲ್ ತೆಗೆದುಕೊಂಡು ಪ್ರಯತ್ನ ಅಂತ ಶುರು ಮಾಡಿದೆ. ಆಗ ನಾನು ಎಂಟನೆ ತರಗತಿ ಮುಗಿಸಿದ್ದೆ. ಆ ವಯಸ್ಸಿನಲ್ಲಿ, ಸೈಕಲ್ ಕಲಿಯುವುದನ್ನು ಜನರು ನೋಡಿದಾಗ ನಾಚಿಕೆ ಆಗುತ್ತಿತ್ತು. ಅಸಲಿಗೆ ಯಾರು ಏನು ತಿಳಿದುಕೊಳ್ಳುತ್ತಿರಲ್ಲಿಲ್ಲ. ಎಲ್ಲರಿಗೂ ಅವರವರದೆ ಆದ ಯೋಚನೆಯಲ್ಲಿ ಮುಳುಗಿದ್ದರು. ವಿಶ್ವಾಸ ಮತ್ತು ಪುಟ್ಟಿ ನಾನು ಕಲಿಯುವುದನ್ನು ನೋಡುತ್ತಿದ್ದರು. ಅಜ್ಜಿ ಮನೆಯ ಪಕ್ಕದಲ್ಲಿ ಜೋಯಿಸರು ಅವರ ಮನೆಯ ಜಗುಲಿಯ ಮೇಲೆ ಕೂತು ನನ್ನನ್ನು ಪ್ರೋತ್ಸಾಹಿಸುತ್ತಿದ್ದರು. ಆತನಿಗೆ ಆಗ ಸುಮಾರು 85 ವರ್ಷಗಳಾಗಿತ್ತು ಎಂದು ತೋರುತ್ತದೆ. ಆ ವಯಸ್ಸಿನಲ್ಲೂ ಅವರಿಗಿದ್ದ ಉತ್ಸಾಹ ನೋಡಿದಾಗ ಹೃದಯ ತುಂಬಿ ಬಂತು. ಬಹುಶಃ 2 ದಿನಗಳ ಪ್ರಯತ್ನದ ಅನ್ನಿಸುತ್ತದೆ ನನಗೆ ಸರಿಯಾಗಿ ನೆನೆಪಿಲ್ಲ, ನಂತರ ನನಗೂ ಸೈಕಲ್ ತುಳಿಯಲು ಬಂತು!

ನನಗೆ ಈಗಲು ಚೆನ್ನಾಗಿ ನೆನಪಿದೆ ಆ ಕ್ಷಣ, ಸೈಕಲ್ ಕಲಿತ ಆ ಕ್ಷಣ ಜಗತ್ತನ್ನೇ ಗೆದ್ದಂತ ಅನುಭವಾಯಿತು. ನಾನು ಎಷ್ಟು ಹೆಡ್ಡ ಎನ್ನಬಹುದು ಅಂದರೇ ಸೈಕಲ್ ಕಲಿತು 2 ಸುತ್ತು ಹೋಡೆದಿದ್ದೆ ಎರಡು ಕೈ ಬಿಟ್ಟು ಓಡಿಸಲು ಪ್ರಯತ್ನಿಸಿದ್ದೆ! ಬೆಂಗಳೂರಿಗೆ ಬಂದ ಮೇಲೆ ನನ್ನ ಹಳೇ ಸೈಕಲ್ ತೆಗೆದು ಓಡಿಸಲು ಪ್ರಯತ್ನಿಸಿದೆ. ಅದು ನೊಡುಗರಿಗೆ ಹೇಗಿತ್ತು ಎಂದರೆ, ಇಲಿ ಮೇಲೆ ಆನೆ ಕೂತ ಹಾಗೆ ಕಾಣಿಸುತ್ತಿತ್ತು. 2 ಸುತ್ತು ಹೊಡೆದೆ ಅಷ್ಟೆ ಚಕ್ರ ಒಡೆದು ಹೋಯಿತು!

ಸ್ವಲ್ಪ ದಿನಗಳಾದ ಮೇಲೆ ಅಣ್ಣ ಅಮ್ಮನನ್ನು ಕೇಳಿ ನನ್ನದೇ ಆದ ಒಂದು ಸೈಕಲ್ ತೆಗೆಸಿಕೊಂಡೆ. Thriller ಸೈಕಲ್, ಮೊದಲು ಕೆಲವು ದಿನಗಳು ಹೊಡೆಯಲು ಸುಲಭ ಎನ್ನಿಸಲ್ಲಿಲ್ಲ, ಕ್ರಮೇಣ ಅದೇ ನನ್ನ ವಾಹನನಾಯಿತು. ಅದನ್ನು ಮಗು ಎನ್ನುತ್ತಿದ್ದೆ. ಹತ್ತನೇ ತರಗತಿ ಮುಗಿದ ಮೇಲೆ ಬರಿ ಮನೆ ಹತ್ತಿರ ಓಡಾಡಲು ಉಪಯೋಗಿಸುತ್ತಿದ್ದೆ. ಯಾವತ್ತು ಏನು ತೊಂದರೆ ಕೊಟ್ಟಿದ್ದೆ ಇಲ್ಲ. 

ನಾನು 2nd PUCಗೆ ಬಂದೆ, ನಮ್ಮ ಮನೆ ಇಂದ ಕಾಲೇಜಿಗೆ 9 ಕಿ.ಮೀ ಇತ್ತು. ಆ ವರ್ಷ ಪೂರ ಮನೆ ಇಂದ ಕಾಲೇಜಿಗೆ ಸೈಕಲ್ಲಿನಲ್ಲೇ ಓಡಾಡುತ್ತಿದ್ದೆ. ಉತ್ತರಹಳ್ಳಿ ರಸ್ತೆಯಲ್ಲಿ ಕಾಲೇಜಿಗೆ ಹೋಗಬೇಕಿತ್ತು, ಆ ರಸ್ತೆಯೋ ಡಬ್ಬ ತರಹವಿತ್ತು. ರಸ್ತೆಗೆ ಡಾಂಬರು ಹಾಕಿರಲ್ಲಿಲ್ಲ ಬರೀ ಕಲ್ಲು ಮಣ್ಣು ಒಂದು ಮೂರು ತಿಂಗಳಾದ ಮೇಲೆ ನನ್ನ ಸೈಕಲ್ಲಿನ ಹಿಂದಿನ ಚಕ್ರ ಒಡೆದು ಹೋಯಿತು. ಆ ರಸ್ತೆಯಲ್ಲಿ ಅಷ್ಟು ದಿವಸ ಓಡಿದ್ದೇ ಹೆಚ್ಚು. ಚಕ್ರವನ್ನು ಸರಿಪಡಿಸಿದೆ, ಆ ನಂತರ ಮತ್ತೆ ಕಾಲೇಜಿಗೆ ತೆಗೆದುಕೊಂಡು ಹೋಗಲು ಶುರುಮಾಡಿದೆ.
 
ಪೋಲಿ ನನ್ನ ಮಗ, ಯಾವಾಗಲು ಹುಡಿಗಿಯರ ಸೈಕಲ್ ಪಕ್ಕನೇ ನಿಲ್ಲಬೇಕು ಎನ್ನುತ್ತಿದ್ದ. ಪಾಪ, ನಾನೇಕೆ ಆತನನ್ನು ನಿರಾಸೆ ಗೊಳಿಸಲಿ, ನಾನು ಕೊಡ ಹುಡಿಗಿಯರ ಸೈಕಲ್ ಪಕ್ಕಾನೇ ನಿಲ್ಲಿಸಿತ್ತಿದ್ದೆ. ಒಂದು ದಿವಸ ಕಾಲೇಜಿಗೆ ಬೇಗ ಹೋಗಬೇಕಿತ್ತು ಆದರೆ ಹೊರಡಬೇಕಾದರೆ, ನನ್ನ ಸೈಕಲ್ಲಿನ ಚಕ್ರ ಪಂಚರ್ ಆಗಿತ್ತು. ಆ ಕ್ಷಣದಲ್ಲಿ ನನಗೆ ತುಂಬ ಕೋಪ ಬಂತು ಅವನಿಗೆ ನನ್ನ ಕಾಲಿನಿಂದ ಒದ್ದೆ, ಸಿಟ್ಟು ಮಾಡಿಕೊಂಡು ಹೊರಟುಹೋದೆ, ಅಮ್ಮ ಹಾಗೆ ಮಾಡಬಾರದು ಎಂದು ಬುದ್ದಿ ಹೇಳಿದಳು. ಕಾಲೇಜಿಗೆ ಹೋದಮೇಲೆ ನನ್ನ ಸೈಕಲ್ಲಿನ ಬಗ್ಗೆ ಯೊಚಿಸಿದೆ, ಪಾಪ ಇಷ್ಟು ದಿವಸ ನನ್ನನು ಹೊತ್ತು ಆ ಸರಿ ಇಲ್ಲದಿರುವ ರಸ್ತೆಗಳಲ್ಲಿ ಒಡಾದಿತ್ತು ನನ್ನನ್ನು ಕ್ಷೇಮವಾಗಿ ಮನೆಗೆ ಸೆರಿಸಿತ್ತು ಆದರೆ, ಅ ದಿನ ನಾನು ಅದನ್ನು ಒದ್ದಿದ್ದೆ ಮನಸ್ಸಿಗೆ ತುಂಬ ಬೇಸರವಾಯಿತು. ಮನೆಗೆ ಹೋದ ಮೇಲೆ ಅದನ್ನು ಸ್ವಚ್ಚಗೊಳಿಸಿ ಚಕ್ರವನ್ನು ಸರಿಮಾಡಿಸಿದೆ.

ಆದಾದ ಕೆಲವು ದಿನಗಳ ಮೇಲೆ ಶನಿವರ ಮಧ್ಯಾಹ್ನ ಕಾಲೇಜಿನಿಂದ ಹೊರಡಬೇಕಾದರೆ ಮತ್ತೆ ಸೈಕಲ್ ಕೈಕೊಟ್ಟಿತು. ಈ ಸಲ ಸೈಕಲ್ಲಿನ ಮುಂದಿನ ಚಕ್ರ ಒಡೆದು ಹೋಗಿತ್ತು. ಬೇಸರವಾಯಿತು ಆದರೆ ಕೋಪ ಬರಲ್ಲಿಲ್ಲ. ಸೈಕಲ್ಲನ್ನು, ಮನೆಗೆ ತಳ್ಳಿಕೊಂಡು ಹೋದೆ. ಆ ಮೇಲೆ ಅದನ್ನು ಸರಿಪಡಿಸಿದೆ. ಅದಾದ ನಂತರ ನನ್ನ ಸೈಕಲ್ ಯಾವತ್ತು ತಂಟೆಮಾಡಲಿಲ್ಲ ಅವಾಗವಾಗ ಉಪಯೋಗಿಸುತ್ತಿದ್ದೆ. ಕೆಲ ದಿನಗಳ ನಂತರ ಮೋಟರು ಗಾಡಿ ಬಂತು ಆದ್ದರಿಂದ ಸೈಕಲ್ ಸವಾರಿ ನಿಂತಿತು.

ಹಾಗೆ ಮೂಲೆಯಲ್ಲಿ ಉಳಿದು ಹಾಳಾಗುವ ಬದಲು ಅದನ್ನು ಮನೆ ಹತ್ತಿರ ಆಟಾಡುತ್ತಿದ್ದ ಕೂಲಿ ಮಕ್ಕಳಿಗೆ ಕೊಟ್ಟುಬಿಟ್ಟೆ. ಅದು, ನನ್ನಿಂದ ಏನು ಪ್ರಯೋಜನ ಪಡೆದುಕೊಳ್ಳದಿದ್ದರೂ ನನಗೆ ನನ್ನ ಜೇವನವಿಡೀ ಮರೆಯಲಾಗದಂತಹ ಒಂದು ಉಪಕಾರ ಮಾಡಿತು. ದಮ್ಮು ತೊಂದರೆ ಅನುಭವಿಸುತ್ತಿದ್ದ ನಾನು ಸೈಕಲ್ ಒಡಿಸುವುದರ ಮೂಲಕ ಆ ತೊಂದರೆಯಿಂದ ಮುಕ್ತನಾಗಿದ್ದೇನೆ. ಯಾರಾದರು ಸೈಕಲ್ ಓಡಿಸುವುದನ್ನು ನೋಡಿದಾಗಲೆಲ್ಲ ಈ ತರಹದ ಹಲವು ನೆನಪು ನನ್ನ ಮನಸ್ಸಿನ ಮುಂದೆ ಸುಳಿಯುತ್ತದೆ. ಆ ದಿನಗಳ ನೆನೆಪೇ ಚಂದ. ಎಂದಿಗೂ ಮರೆಯಲಾಗುವುದಿಲ್ಲ.

January 12, 2013

ಮನದರಸಿ

 
ಚಂದಮಾಮನೂ ನಾಚುವ ಆ ನಗುವು
ಮಧುವು ಸಪ್ಪೆ ಎನ್ನಿಸುವ ಆ ನುಡಿಯು
ಅಪ್ಸರೆಯನ್ನು ಮರೆಮಾಚುವ ಅ ಚೆಲುವು
ಪಾರಿಜಾತವನ್ನು ನೆನಪಿಸುವ ಆ ಪರಿಮಳವೂ
ಸಿಂಧೂರಕ್ಕೆ ಭೂಷಣದಂತಿರುವ ಆ ರೂಪವು

ಮುತ್ತು ಸುರಿಯುವಂತಿದೆ ನನ್ನ ಚೆಲುವೆಯ ನಗು
ಗೋಧುಳಿಯ ಆಗಸ ನನ್ನವಳ ಮುನಿಸು
ಶ್ವೇತ ವಸ್ತ್ರಾಂಬರಿಯಾದರೆ ಸಾಗರದ ಮುತ್ತು
ಬೆಲೆಕಟ್ಟಲಾಗದ ನಿರಾಭರಣ ಸುಂದರಿ
ನನ್ನ ಮಡಿಲಲ್ಲಿ ಪವಡಿಸಿದಾಗ... ನಿದ್ರಾಸುಂದರಿ

ನವ ವಸಂತದ ಗಾಳಿ ಬೀಸಲು
ಪ್ರಣಯದ ಗೀತೆ ಹಾಡಿತು ಕೋಗಿಲೆ
ಶೃಂಗಾರ ವೀಣೆ ನುಡಿಸಲು...
ಒಲಿದು ಧರೆಗಿಳಿದಳು ನೈದಿಲೆ
 
ಬಲ್ಲವರಾರು ಹೆಣ್ಣಿನ ಆಂತರ್ಯ...?
ಬಲ್ಲವನೇ ಬಲ್ಲ ಆ ಮೋಹಕ ಸೌಂದರ್ಯ
ಬೆರಗಾದ ನಾ... ಇಂದು ಅವಳ ಮೋಹಿತ...
ಬಣ್ಣಿಸಲಾಗದೆ ಆ ಚೆಲುವನ್ನು ನಾನಾದೆ ಮೂಕ ವಿಸ್ಮಿತ
 
ಮುಂಜಾವಿನ ಮಂಜು... ನನ್ನವಳ ಸ್ಪರ್ಶ
ಅವಳಿಲ್ಲದ ಒಂದೊಂದು ಘಳಿಗೆ... ನೂರಾರು ವರುಷ
ನೆನೆದಾಗಲೆಲ್ಲಾ ನನ್ನೊಳಗೆ ಹೊಸದೊಂದು ಹರುಷ
ಅರಳಿದೆ ನಾ ರವಿಯನ್ನು ಕಂಡ ಹೂವಂತೆ
ಹಗಲಲ್ಲೂ ಆ ಮೊಗದ ಕನಸು ಕಂಡಂತೆ
 
ಹೃದಯಕೊಳದಲಿ ಮುಳುಗಿತೊಂದು ಹೂವು
ಎದೆಯಾಂತರಾಳದಲ್ಲಿ ಇರಿಯುತ್ತಿತ್ತು ಕಳೆದುಕೊಂಡ ನೋವು
ಮನಸ್ಸಿಗಾಗಿತ್ತೋಂದು ಆರದ ಗಾಯ
ಮುಗ್ಧ ಮನಸ್ಸಿಗೆ ಕಾಣಲಿಲ್ಲ ಪ್ರಣಯ ಪ್ರಳಯ
 
ಆಗಸದಲ್ಲಿ ಮುಳುಗುತ್ತಿದ್ದನಾ ರವಿ
ಮುಳುಗಿತಿನ್ನು ಭುವಿಗೆ ಬರುವ ಭರವಸೆಯ ರಶ್ಮಿ
ಬಾನಿನಲ್ಲಿ ಉದಯಿಸುತ್ತಿದ್ದ ತಂಪೆರೆಯುತಾ ಶಶಿ
ನಲಿಯುತಿದ್ದ ಅವ, ಹೆಪ್ಪುಗಟ್ಟಿರುವ ನನ್ನ ಹೃದಯವ ನೋಡಿ