ಸೆಪ್ಟಂಬರ್ 12, 2021 ಕ್ಕೆ ನನ್ನ ವೃತ್ತಿ ಜೀವನ ಶುರುಮಾಡಿ ಹತ್ತು ವರ್ಷ. ಹತ್ತು ವರ್ಷ ನಾನು Bosch ಅಲ್ಲೇ ಕೆಲಸ ಮಾಡಿದ್ದೇನೆ. ಒಂದೇ ಕಡೆ ಹತ್ತು ವರ್ಷ ಕೆಲಸ ಮಾಡಿರುವುದು ಹಲವರಿಗೆ ಹುಬ್ಬೇರಿಸುವ ವಿಚಾರವೆ. ಈಗಿನ ಕಾರ್ಪೊರೇಟ್ ಜಗತ್ತಿನಲ್ಲಿ 3-4 ವರ್ಷ ಒಂದೆಡೆ ಇರುವುದೇ ಹೆಚ್ಚು. ಕೆಲಸದ ಮೇಲಿನ ಆಸಕ್ತಿ, ಕಚೇರಿಯ ವಾತಾವರಣ, ಸಹೋದ್ಯೋಗಿಗಳು ಮತ್ತು ಮ್ಯಾನೆಜರ್ ಜೊತೆಗಿನ ಒಡನಾಟ ಅಥವಾ ಹಣ ಇವುಗಳು ಒಂದು ಕಂಪನಿಯಲ್ಲಿ ಇರುವ ಅವಧಿಯನ್ನು ನಿರ್ಧರಿಸುತ್ತದೆ ಎಂಬುದು ನನ್ನ ಅಭಿಪ್ರಾಯ. Bosch ಅಲ್ಲಿ ನನಗೆ ಇದಾವುದರಲ್ಲೂ ಕೊರತೆ ಕಾಣಲಿಲ್ಲವಾದ್ದರಿಂದ ನಾನು ಈ ಸಂಸ್ಥೆಯನ್ನು ಬಿಟ್ಟಿಲ್ಲ. ಇದರ ಬಗ್ಗೆ ನನ್ನ ಸ್ನೇಹಿತರು, ಹಾಲಿ ಮತ್ತು ಮಾಜಿ ಸಹೋದ್ಯೋಗಿಗಳಲ್ಲಿ ಆಕ್ಷೇಪವಿರಬಹುದು. ಅದು ಅವರವರ ಭಾವಕ್ಕೆ ಬಿಟ್ಟ ವಿಚಾರ ಎಂದು ನನ್ನ ಅಭಿಮತ. ವೃತ್ತಿ ಜೀವನದಲ್ಲಿ ಹತ್ತು ವರ್ಷ ದೊಡ್ಡದು ಅಥವಾ ಚಿಕ್ಕದ್ದು ಎಂಬ ಚಿಂತನೆ ನನ್ನದಲ್ಲವೇ ಅಲ್ಲ. ನನ್ನ ಅನುಭವದ ಮಾತನ್ನು ಬರೆಯುವುದು ನನ್ನ ಮನೋಧರ್ಮ, ಹಾಗಾಗಿ ಬರೆಯುತ್ತಿದ್ದೇನೆ.
![]()  | 
| Momento for a Decade @ Bosch | 
***********************************************************************
ವೃತ್ತಿ ಜೀವನದ ಗುರುಗಳು
ಸತೀಶ್ ಶಿವ ಷಣ್ಮುಗಂ (SSS) :
ಈಜು ಬಾರದವನಿಗೆ ನದಿ ಅಥವಾ ಸಮುದ್ರಕ್ಕೆ ತಳ್ಳಿ ಈಜು ಕಲಿತುಕೊ ಅನ್ನುವಂತಹ, ಏನೇ ಪ್ರಶ್ನೆ ಕೇಳಿದರು ನಮ್ಮಿಂದಲೇ ಉತ್ತರ ಹೊರಡಿಸುವ ವ್ಯಕ್ತಿತ್ವ ಇವರದು. ಭೌತ್ತಶಾಶ್ತ್ರದ ಮೂಲತತ್ವಗಳ ಮೂಲಕವೇ ಮಾತಾಡುತ್ತಿದ್ದರು. ಇವರೊಟ್ಟಿಗೆ ಮಾತಾಡಬೇಕಾದರೆ ನನಗೆ ನಿಜಕ್ಕೂ ಭಯವೇ ಆಗುತ್ತಿತ್ತು. ಮಾತಾಡುವ ಮುನ್ನ ಪೂರ್ವತಯಾರಿಯ ಅವಶ್ಯಕತೆ ತುಂಬಾ ಇರುತಿತ್ತು. ವಹಿಸಿದ ಕೆಲಸ ನಮಗೆ ಸಾಧ್ಯವಿಲ್ಲ ಎಂದು ಕೈಚೆಲ್ಲಿದರೆ ಆತ ಹೇಳುತ್ತಿದ್ದದ್ದು "ಮನೆಗೆ ಹೋಗು" ಎಂದು. ನಮ್ಮಲ್ಲಿ ಸಾಮರ್ಥ್ಯವಿದೆ ಮತ್ತು ನಾವು ಕೆಲಸ ಮಾಡುತ್ತೇವೆ ಎಂದು ಅನ್ನಿಸಿದರೆ ಮಾತ್ರ ಅವರು ಸಹಾಯ ಮಾಡುತ್ತಿದ್ದರು. ಆಗೆಲ್ಲ ಅವರನ್ನು ಮನಸ್ಸಿನಲ್ಲೇ ಬೈದುಕೊಂಡದ್ದು ಇದೆ. ಆದರೆ, ಕೆಲವು ವರ್ಷಗಳಾದ ಮೇಲೆ ತಿಳಿಯಿತು. ಅವರು ಹಾಗೆ ಮಾಡಿದ್ದರಿಂದಲೇ ನಮ್ಮ ಕಲಿಕೆಯ ವೇಗ ಮತ್ತು ಸಾಮರ್ಥ್ಯ ಹೆಚ್ಚಿತು ಎಂದು. 4-5 ವರ್ಷಗಳ ನಂತರ ಅವರೊಂದಿಗೆ ಮತ್ತೆ ಕೆಲಸ ಮಾಡುವ ಅವಕಾಶವಾಯಿತು. ಆಗಲೂ ಒಂದು ರೀತಿಯ ಭಯವಿತ್ತು ಆದರೆ, ಅನುಭವದ ಬಲದಿಂದ, ಪೂರ್ವ ತಯಾರಿಯೊಂದಿಗೆ ಮಾತಾಡುತ್ತಿದ್ದೆ. ಇವರು ಕೆಲಸ ಮಾಡುತ್ತಿದ್ದ ಮತ್ತು ಮಾಡಿಸುತ್ತಿದ್ದ ರೀತಿಯ ಬಗ್ಗೆ ನನ್ನ juniors ಗೆ ಹಲವು ಸಲ ಹೇಳಿದ್ದೇನೆ. ಸತೀಶ್ ರವರಿಗೆ ಈ ಮೂಲಕ ನನ್ನ ಧನ್ಯವಾದಗಳು.
ವಿಜಯ್ ಜೇ :
ಅಧಿಕೃತವಾಗಿ ಇವರು ನನ್ನ ಮೊದಲ ಮೆಂಟರ್ ಆಗಿದ್ದರು. Bosch ಅಲ್ಲಿನ ಕ್ರಮದ ಬಗೆಗಿನ ಅ,ಆ,ಇ,ಈ ಹೇಳಿಕೊಟ್ಟವರು ಇವರು. ಯಾವುದೇ ಕೆಲಸವಾಗಲಿ ಪರಿಪೂರ್ಣವಾಗಿರಬೇಕು ಎಂಬುದನ್ನು ಇವರು ಅಪೇಕ್ಷಿಸುತ್ತಿದ್ದರು. ವಿಚಾರಗಳನ್ನು ಸಹ ತುಂಬಾ ತಾಳ್ಮೆಯಿಂದ ಹೇಳಿಕೊಡುತ್ತಿದ್ದರು. Mail ಅನ್ನು ಸ್ಪಷ್ಟವಾಗಿ, ತೀಕ್ಷ್ಣವಾಗಿ ಬರೆಯುವುದನ್ನು ನಾನು ಮೊದಲು ಕಲಿತದ್ದೇ ವಿಜಯ್ ಅವರಿಂದ. ಇವರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡ ಮೇಲೆ ಇವರು ಮಾಡುತ್ತಿದ್ದ ಕೆಲಸ ನನ್ನ ನಿರ್ವಹಣೆಗೆ ಬಂತು. ಸುಮಾರು 2 ವರ್ಷಗಳ ಕಾಲ ಅನೇಕ technical ವಿಚಾರಗಳಲ್ಲಿ ಒಬ್ಬನೇ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬಂತು. ಇದು ನನ್ನನ್ನು, ನನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಿಕೊಳ್ಳುವುದಕ್ಕೆ ಒದಗಿ ಬಂದ ಅವಕಾಶವಾಗಿತ್ತು ಮತ್ತು ಅದರಲ್ಲಿ ನಾನು ಸಫಲನಾಗಿದ್ದೆ. ಅದಕ್ಕೆ ವಿಜಯ್ ಹಾಕಿಕೊಟ್ಟ ಮಾರ್ಗದರ್ಶನ ಕಾರಣ. ಇವರಲ್ಲಿ ನನಗಿದ್ದ ಒಂದೇ ಒಂದು ತೊಂದರೆ ಎಂದರೆ ಈತ ಮಾತಾಡುತ್ತಿದ್ದದ್ದೇ ಕಮ್ಮಿ. ಎರಡು ವರ್ಷದ ಅವಧಿಯಲ್ಲಿ ಕೆಲಸದ ವಿಚಾರವನ್ನು ಹೊರತು ಪಡಿಸಿ ಇವರು ಮಾತಾಡಿದ್ದು 2-3 ಬಾರಿ ಮಾತ್ರ! ಈ ಮೂಲಕ ವಿಜಯ್ ಗೆ ನನ್ನ ಧನ್ಯವಾದಗಳು. ಹಾಂ, ಮುಖ್ಯವಾದ ಒಂದು ವಿಚಾರ ಒಂದಿದೆ. ನಾನು ಒಬ್ಬನೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನನ್ನ ಮೇಲೆ ನಂಬಿಕೆ ಇಟ್ಟವರು ನಮ್ಮ ಮ್ಯಾನೇಜರ್ಗಳು. ಆದ್ದರಿಂದಲೇ ನನಗೂ ನನ್ನ ಸಾಮರ್ಥ್ಯ ಸಾಬೀತು ಪಡಿಸಲು ಸಾಧ್ಯವಾಯಿತು. ನಂಬಿಕೆ ಇದ್ದಲ್ಲಿ ಬದುಕು ಅಲ್ಲವೇ!
ರಾಮಕೃಷ್ಣ (RK) ಮತ್ತು ಸಂದೀಪ್ ಜಾಂಬ್ಲಿ :
ನಾನು ಒಬ್ಬನೇ ನಿರ್ಧಾರ ತೆಗೆದುಕೊಳ್ಳುವ 2-3 ವರ್ಷದ ಅವಧಿಯಲ್ಲಿ ಈ ಇಬ್ಬರೂ ಮುಂದಾಳತ್ವ ವಹಿಸಿದ್ದ ಪ್ರಾಜೆಕ್ಟಿನಲ್ಲಿ ನಾನು ಕೆಲಸ ಮಾಡಿದ್ದು. ಇವರೊಂದಿಗೆ ಅಧಿಕೃತವಾಗಿ ಮೀಟಿಂಗ್ ಕೋಣೆಯಲ್ಲಿ ಚರ್ಚೆ ಮಾಡಿದ್ದು ನನಗಂತೂ ನೆನಪೇ ಇಲ್ಲ. ಸಂದೀಪ್ ಅವರನ್ನು ನಾನು ಮೊದಲು ಭೇಟಿಯಾಗಿ ಮಾತಾಡಿದ್ದೆ ನಮ್ಮ ಕಚೇರಿಯ ಕ್ಯಾಂಟೀನ್ನಲ್ಲಿ. ಅನೇಕ ಸಲ ಇವರ ಜೊತೆ ಕಾಫೀ, ಸಂಜೆಯ ತಿಂಡಿ ಸಮಯದಲ್ಲಿ ಮಾತಾಡಿದ್ದೇನೆ. ಮಧ್ಯಾಹ್ನ ಊಟದ ನಂತರ ಓಡಾಡಬೇಕಾದರೂ ಸಹ ಚರ್ಚೆ ಮಾಡಿದ್ದುಂಟು. ಅದೊಂದು ದಿವಸ ನಾನು 6:30 ಹೊತ್ತಿಗೆ ಮನೆಗೆ ಹೊರಡುವವನಿದ್ದೆ. ಸ್ನೇಹಿತನನ್ನು ಮಾತಾಡಿಸಿಕೊಂಡು ಹೋಗೋಣ ಎಂದು ಸಂದೀಪ್ ಮತ್ತು RK ಇರುವಲ್ಲಿಗೆ ಬಂದೆ. ಯಾವುದೋ ವಿಚಾರವಾಗಿ ನಮ್ಮ ಚರ್ಚೆ ಶುರುವಾಯಿತು. ಅವರೊಂದಿಗಿನ ಮಾತುಗಳು ನನಗೆ ಪಾಠವಾಗುತ್ತಿತ್ತು. ಅಂದು ಮಾತು ಮುಗಿಸಿ ಹೊರಡುವಷ್ಟರಲ್ಲಿ ರಾತ್ರಿ 9:30. ನನ್ನ ಸ್ನೇಹಿತ ನನಗೆ ಹೇಳಿ ಮನೆ ತಲುಪಿದ್ದನಾದರೂ ನಮ್ಮ ಚರ್ಚೆ ಮುಗಿದಿರಲಿಲ್ಲ! ಯಾವುದೇ ವಿಚಾರವನ್ನಾಗಲಿ ವಿವಿಧ ದೃಷ್ಠಿಕೋನದಿಂದ ನೋಡುವುದನ್ನು ಈ ಇಬ್ಬರಿಂದ ನಾನು ಕಲಿತೆ. ನಾನು ನನ್ನ ಕೆಲವು ಸಹೊದ್ಯೋಗಿಗಳು ಸಂದೀಪ್ ಅವರನ್ನು 'Uncle' ಎಂಬ ಅಡ್ಡಹೆಸರಿನಿಂದ ಕರೆಯುತ್ತಿದ್ದೆವು. ಇದು ನಮ್ಮಲ್ಲಿ ಮಾತಾಡಬೇಕಾದರೆ ಪ್ರಯೋಗವಾಗುತ್ತಿದ್ದ ಪದ. ಇದು ಆಡಿಕೊಳ್ಳುವ ರೀತಿಯಲ್ಲ ಬದಲಾಗಿ ಅವರೊಂದಿಗೆ ನಮಗಿದ್ದ ಸಲುಗೆ. ವೃತ್ತಿಜೀವನದಲ್ಲಿ ನನ್ನ ಜ್ಞಾನವನ್ನು ಹೆಚ್ಚು ಮಾಡಿದ ಇಬ್ಬರಿಗೂ ನನ್ನ ಧನ್ಯವಾದಗಳು.
ಕಿರಣ್ :
ನಾನು Bosch ಗೆ ಸೇರುವ ಹೊತ್ತಿಗೆ ಇವರಿಗೆ ನಮ್ಮ ಕಂಪನಿಯಲ್ಲಿ 5-6 ವರ್ಷ ಮತ್ತು ಒಟ್ಟಾರೆ 10 ವರ್ಷದಷ್ಟು ಅನುಭವವಾಗಿತ್ತು. ಯಾವುದೋ ವಿಚಾರದಲ್ಲಿ ಇವರ ಹತ್ತಿರ ಚರ್ಚೆ ಮಾಡಿ ತಿಳಿದುಕೊಳ್ಳುವ ಅವಶ್ಯಕತೆ ಇತ್ತು. ನನಗೋ ನನ್ನ ಜಾಗ ಬಿಟ್ಟು ಹೋಗಿ ಯರನ್ನಾದರೂ ಮಾತಾಡಿಸಲು ಹಿಂಜರಿಕೆ ಅಥವಾ ಭಯ (RK ಮತ್ತು ಸಂದೀಪ್ ಅವರ ಜೊತೆ ಮಾತಾಡುವಷ್ಟರಲ್ಲಿ 1.5-2 ವರ್ಷ ಅನುಭವವಾಗಿತ್ತು)! ಶುಕ್ರವಾರ ಮಾತಾಡಿಸಲಾಗದೇ ಸೋಮವಾರದ ತನಕ ಕಾದು, ನನ್ನ ಮತ್ತೊಬ್ಬ ಸಹೋದ್ಯೋಗಿ ಜೊತೆ ಕಿರಣ್ ರವರ ಬಳಿ ಹೋಗಿ ಚರ್ಚಿಸಿದೆ. ಬಹುಶಃ ನಾನು ಒಬ್ಬಂಟಿಯಾಗಿ ಚರ್ಚಿಸಿದ್ದು ಇವರ ಹತ್ತಿರವೇ ಮೊದಲು ಎಂದು ತೋರುತ್ತದೆ. ವಿಷಯವನ್ನು ಕೂಲಂಕುಷವಾಗಿ ಗ್ರಹಿಸುವುದನ್ನು ಇವರಿಂದ ಕಲಿತೆ. 6-7 ವರ್ಷಗಳ ನಂತರ ನಾನು ಇವರು ಕಚೇರಿಗೆ ಕಾರಿನಲ್ಲಿ ಒಟ್ಟಿಗೆ ಹೋಗುತ್ತಿದ್ದೆವು. ಕಾರಲ್ಲಿ ಅನೇಕ ಚರ್ಚೆಗಳನ್ನು ಮಾಡಿದ್ದೇವೆ. ಕೆಲಸದ ಹೊರತಾಗಿ ಅನೇಕ ವಿಚಾರಗಳು ಸಹ ಮಾತಾಡಿದ್ದೇವೆ. ಕೆಲವು ಬಾರಿ ಜಗಳ ಅನ್ನುವ ಮಟ್ಟಿಗೆ debate ಕೂಡ ನಮ್ಮಲ್ಲಿ ನಡೆದಿದೆ. ಈ ಕಾರಣದಿಂದಾಗಿ ನಮ್ಮಲ್ಲಿ ಸ್ನೇಹದ ಸಲುಗೆ ಕೂಡ ಬೆಳೆದಿದೆ. ಆದ್ದರಿಂದ ಧನ್ಯವಾದ ಹೇಳುವುದು ತೋರಿಕೆಯಂತಾಗುತ್ತದೆ.
Volvo Group :
ಕೆಲಸದ ಮೂಲಕ ಕಲಿತ ಪಾಠಗಳು
ಅದೊಂದು ಗುರುವಾರ ಒಂದು feature implementation ಅನ್ನು ಎರಡೇ ದಿನಗಳಲ್ಲಿ ಮುಗಿಸಬೇಕು ಎಂಬಂತಹ ಪರಿಸ್ಥಿತಿ ಬಂತು. ಅಂದು ರಾತ್ರಿ ಕಚೇರಿಯಲ್ಲೇ ಉಳಿಯಬೇಕಾಯಿತು. ರಾತ್ರಿ ಅಲ್ಲೇ ಊಟ ಮಾಡಿ ಕೆಲಸ ಶುರುಮಾಡಿದೆ. ಬೆಳಿಗ್ಗೆ ನಮ್ಮ ತಂಡದವರಿಗೆ ಆಶ್ಚರ್ಯ ರಾತ್ರಿ ಅಲ್ಲೇ ಉಳಿದು ಕೆಲಸ ಮಾಡಿದ್ದೇನಲ್ಲಾ ಎಂದು. ಬೆಳಿಗ್ಗೆ ಉಪಹಾರ ಮುಗಿಸಿ ಮತ್ತೆ ಕೆಲಸ ಶುರುಮಾಡಿದೆ. ಸಂಜೆ 4:00 ತನಕ ಒಂದು ರೀತಿ marathon ಓಡಿದಂತೆ ಕೆಲಸ ಮಾಡಿದೆ. ಮಧ್ಯಾಹ್ನ ಊಟ ಮಾಡುವ ಯೋಚನೆ ಕೂಡ ಬರಲಿಲ್ಲ. ಕೆಲಸ ಮುಗಿಸಿದ ನಂತರ ಮನಸ್ಸಿಗೆ ಒಂದು ರೀತಿಯ ನೆಮ್ಮದಿ ಮತ್ತು ಅದನ್ನು ಅನುಭವಿಸಿಯೇ ಅರ್ಥ ಮಾಡಿಕೊಳ್ಳಬೇಕು. ಈಗಲೂ ನೆನಪಿದೆ, ಕೆಲಸ ಮುಗಿಸಿ ಕೂತಾಗ ಕಾಲು ನಡುಗುತ್ತಿತ್ತು. ಆದರೆ, ಮನಸ್ಸಿಗೆ ಸಮಾಧಾನವಾಗಿತ್ತು.
ಕೆಲವು ಸಲ ಯಾವುದಾದರು ಕ್ಲಿಷ್ಟವಾದ ಸಮಸ್ಯೆಯನ್ನು ಪರಿಶೀಲಿಸಬೇಕಾದಾಗ ಮನಸ್ಸು ಒಂದೆಡೆ ಸಿಕ್ಕಿಹಾಕಿಕೊಳ್ಳುತ್ತಿತ್ತು. Change of work is rest ಅನ್ನುವ ಹಾಗೆ ಹೊರಗೆ ಓಡಾಡುವುದೋ, ಟೀ ಅಥವಾ ಹಾಲು ಕುಡಿಯುವುದು ಅಥವಾ ಇಷ್ಟವಾದ ಹಾಡನ್ನು ಕೇಳುವುದು ನನ್ನ ಅಭ್ಯಾಸ. ಇದೆಲ್ಲಕ್ಕಿಂತಲೂ ಹೆಚ್ಚು ಮಾಡುತ್ತಿದ್ದದ್ದು youtube ಅಲ್ಲಿ ಸಾಯಿಕುಮಾರ್ ರವರ ಚಿತ್ರದ ಕೆಲವು ದೃಶ್ಯವನ್ನು ನೋಡುವುದು. ಅದರಿಂದ ಮನಸ್ಸು ಬೇರೆಡೆ ಹೋಗುತ್ತಿತ್ತು. ಸ್ವಲ್ಪ ಸಮಯದ ನಂತರ ಮತ್ತೆ ಕೆಲಸ ಶುರು ಮಾಡುತ್ತಿದೆ. ಅನೇಕ ಬಾರಿ ಈ ಪ್ರಕ್ರಿಕೆ ಕೆಲಸ ಮಾಡಿದ್ದುಂಟು.
Volvo ತಂಡದಲ್ಲಿದ್ದಾಗ ನಾನು software architect ಆಗಿದ್ದ project ಅಲ್ಲಿ 3-4 ತಿಂಗಳಿಂದ ಒಂದು ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದೆವು. ಕೆಲವು ತಜ್ಞರ ಬಳಿ ಚರ್ಚೆ ಕೂಡ ನಡೆದಿತ್ತು. ಈ ಸಮಸ್ಯೆಯ ಕುರಿತು ಇತರೆ ತಂಡದ ನನ್ನ ಸ್ನೇಹಿತರ ಜೊತೆಗೂ ಚರ್ಚೆ ಮಾಡಿದ್ದು ಉಂಟು. ಆದರೆ, ಪರಿಹಾರ ಮಾತ್ರ ಸಿಕ್ಕಿರಲಿಲ್ಲ. ಅದೊಂದು ರಾತ್ರಿ ಬಹುಶಃ 2:00 ರ ತನಕ ನನ್ನ ಹಾಲಿ ಮತ್ತು ಮಾಜಿ ಸಹೋದ್ಯೋಗಿಗಳ ಜೊತೆಗೆ conference call ಅಲ್ಲಿ ಚರ್ಚೆ ಮಾಡಿ ಮಲಗಿದೆ. ಈ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಅನ್ನಿಸುವುದರಲ್ಲಿತ್ತು. ಆ ದಿನ ಬೆಳಗಿನ ಜಾವ ಅದೇನು ಅರೆ ನಿದ್ರೆಯಲ್ಲೋ ಅಥವಾ ಕನಸಿನಲ್ಲೋ ನನಗೆ ನೆನಪಿಲ್ಲ ಆದರೆ, ಪರಿಹಾರವೊಂದು ಹೊಳೆಯಿತು. ಬೆಳಿಗ್ಗೆ 6:25 ಸಮಯ, ಎದ್ದು ನನಗೆ ಹೊಳೆದ ಪರಿಹಾರವನ್ನು implement ಮಾಡಿ ಪರೀಕ್ಷಿಸಿದೆ, ಕೆಲಸ ಮಾಡಿತು! ಆ ಕ್ಷಣ ಒಂದು ರೀತಿ ಜಗತ್ತನ್ನು ಗೆದ್ದ ಅನುಭವ. ನನ್ನ manager ಗೆ, ರಾತ್ರಿ ಚರ್ಚೆ ಮಾಡಿದ್ದ ಇಬ್ಬರಿಗೆ ಅದೇ ಹೊತ್ತಲ್ಲಿ ಕರೆ ಮಾಡಿ ಈ ವಿಚಾರ ಹಂಚಿಕೊಂಡೆ. ಯಾವುದೇ ಕೆಲಸವಾಗಲಿ ತಪಸ್ಸಿನ ರೀತಿ ನಮ್ಮ ಮೇಲೆ ನಂಬಿಕೆ ಇಟ್ಟು ಮಾಡಿದ್ದಲ್ಲಿ ಅದು ಸಫಲವಾಗುತ್ತದೆ ಎಂಬುದನ್ನು ನಾನು ಕಲಿತದ್ದು ಹೀಗೆ. ಈ ಪರಿಹಾರವನ್ನು ನನಗೆ ಯಾರೂ ಹೇಳಿದ್ದಲ್ಲ ಅಥವಾ ಎಲ್ಲೂ ನೋಡಿಯೂ ಇಲ್ಲ. ಇದು ನನಗೆ ಗೋಚರವಾಯಿತು (intuition ಕೆಲಸ ಮಾಡಿತು) ಎಂದೇ ನಾನು ಈವರಿಗೂ ನಂಬಿದ್ದೇನೆ.
ಕೆಲಸದಲ್ಲಿ ನಾನು ಅನೇಕ ತಪ್ಪುಗಳನ್ನು ಮಾಡಿದ್ದೇನೆ. ಹಾಗೆ ಮಾಡಿದಾಗಲೆಲ್ಲ ಇತರರಿಗಿಂತ ನನಗೆ ನನ್ನ ಮೇಲೆ ಬೇಸರವಾಗಿದೆ, ನನಗೆ ನಾನೇ ಬೈದುಕೊಂಡಿದ್ದೇನೆ. ಆದರೆ, ಎಂದು ಕೂಡ ಧೈರ್ಯಗೆಡಲಿಲ್ಲ. ಮಾಡಿದ ತಪ್ಪನ್ನು ನಾನೇ ಸರಿ ಮಾಡಿ ಮತ್ತೆ ಅದೇ ತಪ್ಪಾಗದಂತೆ ಎಚ್ಚರ ವಹಿಸಿದ್ದೇನೆ. ಇನ್ಯಾವುದೋ ಹೊಸ ತಪ್ಪನ್ನು ಮಾಡುತ್ತಿದ್ದೆ. ಹೆಚ್ಚಾಗಿ ನನ್ನನ್ನು ಕಾಡಿದ್ದು CPD (Copy Paste Defects). ಬೇರೊಂದು ಕಡೆಯಿಂದ copy ಮಾಡಿ ನಾನು ಬರೆಯಬೇಕಿದ್ದ ಕಡೆ ಅದನ್ನು ಉಪಯೋಗ ಮಾಡಿದಾಗಲೆಲ್ಲಾ ಏನಾದರು ಒಂದು ತಪ್ಪಾಗುತ್ತಿತ್ತು. ಅದರ ಪರಿಣಾಮ ತುಂಬಾ ಗಂಭೀರವಾಗಿರುತ್ತಿತ್ತು. ಆದರೆ, ತಪ್ಪನ್ನು ಹುಡುಕಿದಾಗ ಅದು silly mistake ಆಗಿರುತ್ತಿತ್ತು. ಈ ತಪ್ಪುಗಳು ನನ್ನನ್ನು ಅನೇಕ ವರ್ಷಗಳು ಕಾಡಿದೆ. ನನ್ನ ಅನೇಕ ಸಹೋದ್ಯೋಗಿಗಳು ಈ ವಿಚಾರವಾಗಿ ನನ್ನನ್ನು ರೇಗಿಸಿದ್ದು ಉಂಟು.
ಮತ್ತೊಂದು ಸಲ ಯಾವುದೋ ಒಂದು ಕೆಲಸವನ್ನು 100 ಗಂಟೆ ಎಂದು ಅಂದಾಜು ಮಾಡಿದ್ದೆ. ಪ್ರಾರಂಭದಲ್ಲಿ ಆ ಕೆಲಸಕ್ಕೆ ಅಷ್ಟು ಹೊತ್ತು ಬೇಕಾಗಿತ್ತು ಎಂಬುದು ನಿಜವಾಗಿತ್ತು. ನಂತರ ಆ ಕೆಲಸದಲ್ಲಿ ತಿದ್ದುಪಡಿಗಳಾಗಿ ಕೇವಲ 3 ಗಂಟೆಯಲ್ಲಿ ಮುಗಿದಿತ್ತು. ಕೆಲಸ ಮಾಡಿದ ಅವಧಿಯನ್ನು ಮೂರು ಎಂದೇ ದಾಖಲಿಸಿದೆ. ಮಾರನೆ ದಿವಸ manager ನನ್ನನ್ನು ಕರೆದು ನನ್ನ ತಪ್ಪನ್ನು ನನಗೆ ಅರ್ಥ ಮಾಡಿಸಿದರು. 100 ಗಂಟೆ ಎಂದು ಅಂದಾಜಿಸಿ ಕೇವಲ 3 ಗಂಟೆಯಲ್ಲಿ ಮುಗಿದಿದೆ ಎಂದರೆ ಏನೋ ಗಂಭೀರ ತಪ್ಪಾಗಿದೆ ಎಂದು ಹೊರಜಗತ್ತಿಗೆ ತೋರಿಸಿದಂತಾಗುತ್ತದೆ, ಆದ್ದರಿಂದ ಜೋಪಾನ ಎಂದು ತಪ್ಪನ್ನು ಸರಿ ಪಡಿಸಿದರು. ಅದೇ ಕೊನೆ, ಈ ರೀತಿಯ ತಪ್ಪು ಮತ್ತೆ ಮರುಕಳಿಸಲಿಲ್ಲ. ನನಗೆ ಸಿಕ್ಕ manager ಗಳು ನನ್ನ ತಪ್ಪನ್ನು ಸಹಿಸಿಕೊಂಡು, ತಿದ್ದಿ, ನನ್ನ ಮೇಲೆ ನಂಬಿಕೆ ಇಟ್ಟು ಹೆಚ್ಚಿನ ಜವಾಬ್ದಾರಿಯನ್ನು ಕೊಟ್ಟರು. ಅವರು ನನ್ನನ್ನು ನಂಬದೇ ಇದ್ದಿದ್ದರೆ ನಾನು ಕುಸಿದು ಹೋಗುತ್ತಿದ್ದೆ ಅಥವಾ Bosch ಯಿಂದ ಹೊರ ಹೋಗುತ್ತಿದ್ದೆ. ಆದರೆ, ಆ ನಂಬಿಕೆಯ ಭಾವದಿಂದಲೇ ನನ್ನ ಸಾಮರ್ಥ್ಯ ಹೆಚ್ಚಿತು. ಹಾಗಾಗಿ ನನ್ನ managers ಗಳಿಗೆ ಈ ಮೂಲಕ ನನ್ನ ಧನ್ಯವಾದಗಳು.
ವೃತ್ತಿ ಬದುಕನ್ನು ಶುರು ಮಾಡುವ ಮುನ್ನ ವಿದೇಶಿಯರ ಮಾತು ಕೇಳಿದ್ದು ಕ್ರಿಕೆಟ್ ನೋಡಬೇಕಾದರೆ ಮಾತ್ರ. ಒಂದೆರಡು ಆಂಗ್ಲ ಭಾಷೆಯ ಚಿತ್ರಗಳನ್ನು ನೋಡಿದ್ದೆ ಆದರೂ ಅವರು ಮಾತಾಡುವ ರೀತಿ ಅರ್ಥವಾಗುತ್ತಿರಲಿಲ್ಲ. Bosch ಗೆ ಬಂದ ಮೇಲೆ ಮೊದಲ ಬಾರಿಗೆ ವಿದೇಶಿಯರ ಜೊತೆ ಮಾತಾಡಿದ್ದು. ಅಚ್ಚರಿ ಎಂದರೆ ಅವರ ಶೈಲಿ ಮತ್ತು ಭಾಷೆ ನನಗೆ ಸುಲಭವಾಗಿ ಅರ್ಥವಾಗುತ್ತಿತ್ತು. ಜರ್ಮನಿ, ಚೀನಾ, ಅಮೇರಿಕಾ, ಸ್ವೀಡನ್, ಕೊರಿಯಾ, ವಿಯೆಟ್ನಾಮ್ ಮತ್ತು ಜಪಾನ್ ದೇಶದವರ ಜೊತೆ ನಾನು ಮಾತಾಡಿದ್ದೇನೆ, ಕೆಲಸ ಮಾಡಿದ್ದೇನೆ. ಇದರ ಮೂಲಕ ಆಯಾ ದೇಶದವರು ಕೆಲಸ ಮಾಡುವ ರೀತಿಯನ್ನು ಅರ್ಥ ಮಾಡಿಕೊಳ್ಳುವ ಅವಕಾಶ ನನಗೆ ಸಿಕ್ಕಿತು. ಜರ್ಮನಿ, ಸ್ವೀಡನ್, ಚೀನಾ ದೇಶಗಳಿಗೆ ಹೋಗಿ ಅಲ್ಲಿನ ಕೆಲಸದ ರೀತಿಯನ್ನು ಪ್ರತ್ಯಕ್ಷ ಕಂಡು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಅನೇಕ ಸಹೋದ್ಯೋಗಿಗಳು, ಕೆಲವು customer ಗಳು ಅವರ ಮಾತು, ಕೆಲಸದ ಮೂಲಕ ನನಗೆ ಪರೋಕ್ಷವಾಗಿ ಪಾಠ ಮಾಡಿದ್ದಾರೆ. ಅವರೆಲ್ಲರಿಗೂ ಈ ಮೂಲಕ ನನ್ನ ಧನ್ಯವಾದಗಳು.
ಸಾಗರದಾಚೆಗಿನ ಅನುಭವ
ಸ್ವೀಡನ್ - ಇದು ಒಂದು ವಾರದ ಕಥೆ
ಕಮ್ಯುನಿಸ್ಟ್ ನಾಡು ಚೀನಾ - ಭಾಗ 1
ಕಮ್ಯುನಿಸ್ಟ್ ನಾಡು ಚೀನಾ - ಭಾಗ 2

Congratulations
ReplyDeleteThis reminds my Bosch days.. :-)
Sir, I hope you have a habit of writing daily notes in your dairy, I was just wondering how could you remember such minute details right from your interview to till date conversations. You have great memories indeed working @Bosch. I must say I have become fan of your way of story telling or narration of events & giving credits to all those responsible in your decade journey @Bosch, it's simple yet leaves an impact on readers. Well, congratulations and wishing you all the best for all your future endeavours & projects. May you reach your goal of success in life and capture heights in your career. May God bless you and your family.����
ReplyDelete