ಭಾರತದ ಸಂಸ್ಕೃತಿಯ ಮೂಲ ಬೇರು ಅಥವಾ ಮುಖವಾಣಿ ಎಂದರೆ ರಾಮಾಯಣ ಮತ್ತು ಮಹಾಭಾರತ ಎನ್ನಬಹುದು. ಧರ್ಮಸಂಸ್ಥಾಪನೆಗೆ ಸಂಬಂಧಿಗಳಾದರೂ ಸರಿ ಅಧರ್ಮೀಯರನ್ನು ನಾಶ ಮಾಡಬೇಕು, ರಾಜನಾದವನ ಮೊದಲ ಕರ್ತವ್ಯ ಪ್ರಜಾರಂಜನೆ ಎಂದು ಸ್ಪಷ್ಟಪಡಿಸುತ್ತದೆ. ರಾಮ ಕುಟುಂಬಕ್ಕೋಸ್ಕರ ಬದುಕುವುದು ಹೇಗೆ ಎಂದು ತೋರಿಸಿಕೊಟ್ಟರೆ, ಕೃಷ್ಣ ಸಮಾಜಕ್ಕಾಗಿ ಬದುಕುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾನೆ. ಕೃಷ್ಣ ಅಧರ್ಮೀಯರಾದ ಕಂಸ, ದಂತವಕ್ರ, ಶಿಶುಪಾಲರನ್ನು ಸಂಹರಿಸುತ್ತಾನೆ. ಜರಾಸಂಧ, ಜಯಧ್ರತ ಮತ್ತು ಕೌರವ ಸೈನ್ಯವನ್ನು ಪಾಂಡವರ ಮೂಲಕ ನಿರ್ನಾಮ ಮಾಡುತ್ತಾನೆ. ಯುದ್ಧದ ಸಮಯದಲ್ಲಿ ಹಿಂಜರಿದ ಅರ್ಜುನನಿಗೆ ಬೋಧಿಸುವ ಮೂಲಕ ಮಾನವರಿಗೆ ಅಮೃತಮಯವಾದಂತಹ ಭವದ್ಗೀತೆಯನ್ನು ವಿಶ್ವಗುರುವಾಗಿ ನೀಡಿದ್ದು ಕೃಷ್ಣನೇ. ಭಾರತದ ಚರಿತ್ರೆಯ ಪುಟದಲ್ಲಿ ಇಂತಹುದೇ ಒಂದು ವ್ಯಕ್ತಿತ್ವ - 'ಆಚಾರ್ಯ ಚಾಣಕ್ಯ'.
![]()  | 
| ಆಚಾರ್ಯ ಚಾಣಕ್ಯ | 
![]()  | 
| ಧನನಂದನಿಂದ ಚಾಣಕ್ಯನಿಗೆ ಅವಮಾನ | 
ಚಾಣಕ್ಯ ತಕ್ಷಶಿಲೆಯಲ್ಲಿದ್ದ ಒಬ್ಬ ಅಧ್ಯಾಪಕ. ರಾಜ ಅಂಬಿಯ ಮತಾಂಧತೆಯಿಂದ ರೋಸಿ, ತನ್ನ ತಂದೆ ಚಣಕನನ್ನು ಕೊಂದ ನಂದರ ಆಸ್ತಾನದಲ್ಲಿ ಅವಮಾನಿತನಾಗಿ ಭಾರತದ ಸದೃಢ ಭವಿಷ್ಯಕ್ಕಾಗಿ ಚಂದ್ರಗುಪ್ತ ಮೌರ್ಯನನ್ನು ಚಕ್ರವರ್ತಿಯನ್ನಾಗಿ ಮಾಡಲು ತೀರ್ಮಾನಿಸುತ್ತಾನೆ. ತಾನು ಹುಟ್ಟಿ ಬೆಳೆದು, ವಿದ್ಯಾಭ್ಯಾಸ ಮಾಡಿ, ಅಧ್ಯಾಪಕನಾಗಿದ್ದ ತಕ್ಷಶಿಲೆಯನ್ನು ಬಿಟ್ಟು ಹೊರಡುತ್ತಾನೆ ಮಥುರಾವನ್ನು ಬಿಟ್ಟು ಹೊರಟ ಕೃಷ್ಣನಂತೆ. ಸ್ವಾರ್ಥಕ್ಕಾಗಿ ಅಲೆಕ್ಸಾಂಡರೊಂದಿಗೆ ಕೈ ಜೋಡಿಸಿದ ಅಂಬಿಯ ಸೇನೆಯನ್ನು ತನ್ನ ಬುದ್ಧಿ ಶಕ್ತಿ ಉಪಯೋಗಿಸಿ ವಿಭಜಿಸಿ, ರಕ್ತಪಾತವಿಲ್ಲದೆ ತಕ್ಷಶಿಲವನ್ನು ಗೆದ್ದು, ಚಂದ್ರಗುಪ್ತನನ್ನು ರಾಜನನ್ನಾಗಿ ಮಾಡುತ್ತಾನೆ. ಭೀಮನ ಮೂಲಕ ಕೃಷ್ಣ ಜರಾಸಂಧನನ್ನು ಗೆದ್ದದ್ದು ಇಲ್ಲಿ ನೆನಪಾಗುತ್ತದೆ. ಧನನಂದನ ಹೆಣ್ಣಿನ ಚಾಪಲ್ಯ, ಆತನ ಮಂತ್ರಿ ಶ್ರೀಯಕನ ಮತ್ತು ಅರಮನೆ ವೈದ್ಯನ ದುರಾಸೆ, ಮಹಾಮಾತ್ಯ ರಾಕ್ಷಸನ ಕುರುಡು ಸ್ವಾಮೀ ಭಕ್ತಿ ಚಾಣಕ್ಯನಿಗೆ ಮಗಧವನ್ನು ಗೆಲ್ಲುವ ಅವಕಾಶವಾಗಿ ಕಾಣಿಸಿತು. ಇವರೆಲ್ಲರ ದೌರ್ಬಲ್ಯಗಳನ್ನು ಉಪಯೋಗಿಸಿಕೊಂಡು ಧನನಂದನನ್ನು ಚಂದ್ರಗುಪ್ತನ ಮೂಲಕ ಕೊಲ್ಲುತ್ತಾನೆ. ಕೆಟ್ಟವರಿಗೆ ಕೆಡಕಾಗುತ್ತದೆ ಎಂಬಂತೆ ಅರಮನೆಯ ವೈದ್ಯನನ್ನು ಮಂತ್ರಿ ಶ್ರೀಯಕ ಮತ್ತು ಆತನನ್ನು ಅಮಾತ್ಯ ರಾಕ್ಷಸ ಕೊಲ್ಲುವಂತಾಗುತ್ತದೆ. ಅಮಾತ್ಯ ರಾಕ್ಷಸ ತಲೆಮರಿಸಿಕೊಳ್ಳುತ್ತಾನೆ. ಸಾಮರ್ಥ್ಯವಿಲ್ಲದಿದ್ದರೂ ಮಗಧದ ಅರ್ಧರಾಜ್ಯದ ಆಸೆಗೆ, ಹೆಣ್ಣಿನ ಚಾಪಲ್ಯಕ್ಕೆ ಒಳಗಾಗಿ ಪುರೂರವ ಬಲಿಯಾಗುತ್ತಾನೆ. ತಮ್ಮದೇ ದೌರ್ಬಲ್ಯಗಳನ್ನು ಹೊಂದಿದ್ದ ದುರ್ಯೋಧನ, ಕರ್ಣ, ಶಕುನಿ ಮತ್ತಿತರ ಕೌರವರನ್ನು ಕೊಲ್ಲಿಸಿದ್ದು ಇದೇ ಕೃಷ್ಣ. ಮಂತ್ರಿಯೊಬ್ಬನ ನಿಷ್ಟೆ ವ್ಯಕ್ತಿಗಲ್ಲ ಬದಲಾಗಿ ಸಿಂಹಾಸನಕ್ಕಾಗಿ ಅಥವಾ ರಾಷ್ಟ್ರಕ್ಕಾಗಿ ಎಂಬುದನ್ನು ತಿಳಿಸಿಕೊಟ್ಟು ರಾಕ್ಷಸನನ್ನು ಮತ್ತೆ ಮಗಧದ ಮಹಾಮಾತ್ಯನನ್ನಾಗಿ ಮಾಡಿ ಪುನಃ ತಕ್ಷಶಿಲೆಗೆ ಹಿಂತಿರುಗಿದ್ದು ಇದೇ ಚಾಣಕ್ಯ. ಪಾಂಡವರಿಗೆ ವಿಜಯಮಾಲೆಯನ್ನು ತೊಡಿಸಿ ಅವರನ್ನೇ ರಾಜರನ್ನಾಗಿ ಮಾಡಿ ತನ್ನ ಪಾಡಿಗೆ ಮಥುರಕ್ಕೆ ವಾಪಸ್ಸಾದ ಶ್ರೀ ಕೃಷ್ಣ ಮತ್ತೆ ನೆನಪಾಗುತ್ತಾನೆ. ದಂಡನೀತಿಯನ್ನು ಅಧ್ಯಾಯನ ಮಾಡಿದ್ದ ಚಾಣಕ್ಯ ರಾಜ್ಯದ ಆರ್ಥಿಕ ನೀತಿ, ಸೈನ್ಯದ ಕಾರ್ಯತಂತ್ರ, ಆಡಳಿತ ವ್ಯವಸ್ಥೆಯನ್ನು ಸಂವಿಧಾನದಂತೆಯೇ ವಿವರಿಸುವ ಕೃತಿ 'ಅರ್ಥಶಾಸ್ತ್ರ' ವನ್ನು ರಚಿಸುತ್ತಾನೆ. ಶ್ರೀಕೃಷ್ಣ ಮಾಡಿದ್ದು ಅದೇ ಅಲ್ಲವೇ? ಮಾನವರೆಲ್ಲರಿಗೂ ಮಾರ್ಗದರ್ಶಕವಾಗಿ, ಮೋಕ್ಷ ಮಾರ್ಗವಾದಂತಹ ಬೋಧನೆ ಭಗವದ್ಗೀತೆ.
![]()  | 
| ಚಾಣಕ್ಯನ ಅರ್ಥಶಾಸ್ತ್ರ | 
ಚಾಣಕ್ಯನ ಜೀವನ ಪ್ರತಿಯೊಬ್ಬ ಧರ್ಮಿಷ್ಠನುಗೂ ಪಾಠವೇ ಸರಿ. ಬುದ್ಧನ ನಿರ್ವಾಣದ ಕಲ್ಪನೆ ಎಲ್ಲರಿಗೂ, ಎಲ್ಲಾ ಕಾಲಕ್ಕೂ ಹೊಂದುವುದಿಲ್ಲ. ವೇದಕಾಲದ ವರ್ಣಾಶ್ರಮ ಸಮಾಜದ ಒಳಿತಿಗಾಗಿ ಮಾಡಿದ್ದು, ಶಾಸ್ತ್ರವನ್ನು ರಕ್ಷಿಸಲು ಶಸ್ತ್ರ ಅಗತ್ಯ, ರಾಜನೋರ್ವ ಒಂದು ಮತವನ್ನು ಓಲೈಕೆ ಮಾಡಬಾರದು ಎಂಬ ವೈದಿಕ ತತ್ವವನ್ನು ಉಳಿಸಲು ಹೋರಾಡಿದವನೇ ಚಾಣಕ್ಯ. ವ್ಯಕ್ತಿಗಿಂತ ರಾಷ್ಟ್ರ ಮುಖ್ಯ ಎಂಬುದು ಆತನ ಜೀವನದ ಸಾರಂಶ. ದ್ವಾಪರಯುಗದಲ್ಲಿ ಕೃಷ್ಣ ಮಾಡಿದ ಕೆಲಸವನ್ನು ಕಲಿಯುಗದಲ್ಲಿ ಭಾರತದ ಧರ್ಮವನ್ನು ಉಳಿಸಲು ತನ್ನ ಜೀವನವನ್ನು ಮುಡುಪಿಟ್ಟದ್ದು ಕುಟಿಲ ಗೋತ್ರೋದ್ಭವ ಚಣಕನ ಪುತ್ರ ಆಚಾರ್ಯ ಚಾಣಕ್ಯ!



ಕೃಷ್ಣ ಪರಮಾತ್ಮ ಹಾಗೂ ಚಾಣಕ್ಯ ಗುರುಗಳ ಧ್ಯೇಯ ಹಾಗೂ ಉದ್ದೇಶ ಮತ್ತು ಕಾಳಜಿ ಬಗ್ಗೆ ಹೇಳುವ ಅನೇಕ ಸಂಗತಿಗಳನ್ನ ತುಲನೆ ಮಾಡಿ ಅದ್ಭುತವಾದ ಹೋಲಿಕೆಯನ್ನ ನೀಡಿದ್ದೀರ ಅಣ್ಣ
ReplyDelete