November 5, 2013

ನಾವ್ಯಾಕೆ ಹೀಗೆ...? - ದೀಪಾವಳಿ ವಿಶೇಷಾಂಕ

ನಾನು ಹೇಳಲು ಹೊರಟಿರುವ ವಸ್ತು ಅಲ್ಪವಾದರೂ, ವಿಚಾರ ಸೂಕ್ಷ್ಮವಾದದ್ದು. "ನಾವು ಎಷ್ಟೇ ಮೇಲೆ ಬಂದರೂ ನಾವು ಮೇಲೆ ಹತ್ತಲು ಸಹಾಯ ಮಾಡಿದ ಏಣಿಯನ್ನು ಬೀಳಿಸಬಾರದು." ಈ ಲೇಖನ ನನ್ನ ಮಟ್ಟಿಗೆ ಈ ವರ್ಷದ ದೀಪಾವಳಿ ವಿಶೇಷಾಂಕ ಎಂದು ಹೇಳಿದರೆ ತಪ್ಪಾಗಲಾರದು. ಯಾಕೆಂದರೆ, ನನಗೆ ಕನ್ನಡದ ಕೆಲವು ನುಡಿಮುತ್ತುಗಳು ಪ್ರತ್ಯಕ್ಷವಾಗಿ ಅನುಭವಕ್ಕೆ ಬಂದವು.
  • ಹಣ ಮನುಷ್ಯನ ವಿವೇಕವನ್ನು ಹಾಳುಮಾಡುತ್ತದೆ.
  • ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
  • ಹೇಳೋದು ವೇದಾಂತ, ತಿನ್ನೋದು ಬದನೆಕಾಯಿ.
  • ಮಾಡೋದು ಅನಾಚಾರ, ಮನೆ ಮುಂದೆ ಬೃಂದಾವನ.
ಬಹುಶಃ ಪೀಠಿಕೆ ಹೆಚ್ಚಾಯಿತೆಂದು ತೋರುತ್ತದೆ ನೇರವಾಗಿ ವಿಷಯಕ್ಕೆ ಬರುತ್ತೇನೆ

ನನಗೆ ತಿಳುವಳಿಕೆ ಬಂದಾಗಿನಿಂದ ನನಗೆ ಗೊತ್ತಿರುವವರ ಹತ್ತಿರ ಒಂದು ಏಣಿ ಇತ್ತು. ನನಗೆ ತಿಳಿದಮಟ್ಟಿಗೆ ಅವರ ಮನೆಯ ಎಲ್ಲಾ ಸಮಾರಂಭಕ್ಕೂ ಸಾಕ್ಷಿಯಾಗಿತ್ತು.
  • ಮನೆಯ ತಾರಸಿಯಲ್ಲಿ ಕೊಳೆಯನ್ನು ತೆಗೆಯುವುದಕ್ಕೆ
  • ಹೊಸದಾದ ಗಡಿಯಾರ ನೇತುಹಾಕಲು
  • ಮರದಿಂದ ಕಾಯಿ ಕೀಳಲು
  • ಮನೆಗೆ ಹೊಸ ಬಣ್ಣಬಳಿದು ಹೊಸದೊಂದು ರೂಪು ಕೊಡಲು.
  • ನನಗೆ ಇನ್ನು ನೆನಪಿದೆ ಆ ದಿನ ಅವರ ಮನೆಯ ಹೆಣ್ಣುಮಗಳ ಮದುವೆ ಇತ್ತು, ಈ ಏಣಿಯನ್ನು ಉಪಯೊಗಿಸಿ ಮನೆಯ ಮುಂದೆ ಚಪ್ಪರವನ್ನು ಹಾಕಿದರು.
  • ಆ ಮನೆಯಲ್ಲಿ ಹೊಸದೊಂದು ಮಗು ಜನಿಸಿದಾಗ ಅಟ್ಟದ ಮೇಲೆ ಇದ್ದ ತೊಟ್ಟಿಲನ್ನು ಅದನ್ನು ಹತ್ತಿಯೆ ತೆಗೆದಿದ್ದು.
ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ನಾವು ಉಪಯೋಗಿಸುವ ಪ್ರತಿ ವಸ್ತುವನ್ನು ಪೂಜಿಸುತ್ತೆವೆ. ಹಾಗೆ ಆಯುಧ ಪೂಜೆ ದಿನದಂದು ಎಲ್ಲ ಸಾಮಾನುಗಳಿಗು ಆರತಿ ಮಾಡುವಂತೆ ಆ ಏಣಿಗೂ ಕೂಡ ಅರಿಶಿಣ, ಕುಂಕುಮ, ಮಂತ್ರಾಕ್ಷತೆ ಹಾಕಿ ಪೂಜೆ ಮಾಡುತ್ತಿದ್ದರು. ಸಂಜೆಗೆ ಮನೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಸಿದರು. ಬಂದಿದ್ದ ನೆಂಟರು, ಸ್ನೇಹಿತರೆಲ್ಲರಿಗೂ ಮನಃತೃಪ್ತಿ ಆಗುವಂತೆ ನೋಡಿಕೊಂಡಿದ್ದರು. ನನಗೆ ಅವರ ಸಂಸ್ಕಾರ ನೋಡಿ ತುಂಬ ಸಂತೋಷವಾಗಿತ್ತು. ಅವರು ಮಾಡುತ್ತಿದ್ದದು ಅವರ ಸಂತೋಷಕ್ಕೋ ಅಥವಾ ತಮ್ಮ ದೊಡ್ಡಸ್ತಿಕೆ ತೋರಿಸಿಕೊಳ್ಳುವುದಕ್ಕೊ ತಿಳಿಯಲ್ಲಿಲ್ಲ. ನಾನು ನೋಡಿರುವಂತೆ ಸಂಗೀತ ಪ್ರಿಯರಾಗಿದ್ದರು. ಸಾಮಾನ್ಯವಾಗಿ ಸಂಗೀತ ಪ್ರಿಯರ ಮುಖ ಶಾಂತ ಹಾಗು ಸೌಮ್ಯವಾಗಿರುತ್ತದೆ. ಆದರೆ, ಇಷ್ಟು ದಿನಗಳಲ್ಲಿ ನಾನವರ ಮುಖದಲ್ಲಿ ಯಾವತ್ತು ಶಾಂತತೆಯನ್ನಾಗಲಿ, ಸೌಮ್ಯತೆಯನ್ನಾಗಲಿ ಕಂಡಿದ್ದೆ ಇಲ್ಲ. ಮಾತು ಕೆಲವು ಸಲ ಒರಟಾಗಿರುತ್ತಿತ್ತು ಆಗ ನಾನು ಅವರ ಮಾತಷ್ಟೇ ಒರಟು, ಅಂತಹ ಮಾತುಗಳು ಹೃದಯದಿಂದ ಬಂದಿದ್ದಲ್ಲ ಎಂದುಕೊಳ್ಳುತ್ತಿದೆ.

ಮೊನ್ನೆ, ಹಬ್ಬದಲ್ಲಿ ಏನೋ ಕೆಲಸಕ್ಕಾಗಿ ಏಣಿಯನ್ನು ಉಪಯೋಗಿಸುತ್ತಿದ್ದರು. ಏಣಿ ಕೂಡ ಹಳೆಯದಾಗಿತ್ತು, ಅವರು ಹತ್ತಬೇಕಾದರೆ ಒಂದು ಮೆಟ್ಟಿಲು ಮುರಿದುಹೋಯಿತು. ಅದರಿಂದ, ಅವರಿಗೆ ಸ್ವಲ್ಪ ತೊಂದರೆ ಆಯಿತು. ಅದನ್ನು ಮುಂದೆ ಉಪಯೋಗಿಸದೆ ಒಂದು ಮೂಲೆಯಲ್ಲಿ ಇಡಬಹುದಾಗಿತ್ತು. ಆದರೆ, ಆ ಏಣಿಯನ್ನು ಮುರಿದು ಎಸೆದು ಬಿಟ್ಟರು. ಅದನ್ನು ನೋಡಿ ನನಗೆ ತುಂಬ ಬೇಸರವಾಯಿತು. ತಮಗೆ ಒಂದು ತೊಂದರೆ ಮಾಡಿತು ಎಂಬ ಕಾರಣದಿಂದ ಅದನ್ನು ಮುರಿದರು. ಎಂತಹ ಕ್ರೌರ್ಯ ಮನಸ್ಸಿನಲ್ಲಿ ಎಂದುಕೊಂಡೆ. ಅವರ ಮೇಲಿದ್ದ ಗೌರವವೆಲ್ಲ ಒಂದೇ ಕ್ಷಣದಲ್ಲಿ ಉಡುಗಿ ಹೋಯಿತು.

ಒಂದು ಸಣ್ಣ ತೊಂದರೆ ಆಗಿದಕ್ಕೆ ಆ ಏಣಿಯನ್ನು ಮುರಿದರು, ಅದೇ ರೀತಿ ಒಬ್ಬ ಮನುಷ್ಯನಿಗೆ ವಯಸ್ಸಾದ ಮೇಲೆ ಏನೋ ಒಂದು ತೊಂದರೆ ಮಾಡಿದರು ಅಥವಾ ತೊಂದರೆ ಆಯಿತು ಎಂಬ ಕಾರಣಕ್ಕೆ ಅವರನ್ನು ಹೊರಗಟ್ಟುವುದಿಲ್ಲ ಎಂದು ಯಾವ ನಂಬೆಕೆಯೂ ಇಲ್ಲ. ಆ ಏಣಿಯನ್ನು ಒಂದು ಮನುಷ್ಯನನ್ನಾಗಿ ನೋಡಿದಾಗ ಅವರ ನಡುವಳಿಕೆಯಲ್ಲಿ ಎಂತಹ ಕ್ರೌರ್ಯ ತುಂಬಿದೆ ಎಂದು ತಿಳಿಯುತ್ತದೆ.

ನಿಜವಾಗಲು, ಆ ಕೆಲಸ ಮನುಷ್ಯರಿಗೆ ಯಾರದರೂ ಮಾಡಿದಲ್ಲಿ ಅದು - "ಅವರ ಅಂತ್ಯದ ಆರಂಭ". "It's Beginning of their End"