ಸಾಮಾನ್ಯವಾಗಿ ನಾನು ಭಾನುವಾರ ಯಾವ ಪೇಶೆಂಟ್ಗೂ appointment ಕೊಡುವುದಿಲ್ಲ ಆದರೂ ಕೆಲವೊಂದು ಬಾರಿ ಕೆಲವರು ಮನೆಗೆ ಬರುತ್ತಾರೆ. ಆಗ ಇಲ್ಲ ಅನ್ನಲಾಗದೆ ಅವರ ಜೊತೆ ಮಾತಾಡಲು ಕೂರುತ್ತೇನೆ. ನನ್ನ ಹೆಸರು ದೀಪಕ್ ಆರಾಧ್ಯ - ಮನೋವೈದ್ಯ. ಯಾರಾದರೂ ತೊಂದರೆ ಎಂದು ಬಂದಾಗ ನಾಳೆ ಅಥವಾ ಮತ್ತೊಂದು ದಿನ ಬನ್ನಿ ಎಂದು ಹೇಳಲು ಆಗುವುದಿಲ್ಲ. ಮಾನಸಿಕ ಸಮಸ್ಯೆ ಇಟ್ಟುಕೊಂಡು ನನ್ನ ಬಳಿ ಬರುತ್ತಾರೆ ಹಾಗಾಗಿ ಅವರನ್ನು ಕಾಯಿಸುವುದು ನನಗೆ ಸರಿ ಕಾಣುವುದಿಲ್ಲ. ಅದೊಂದು ಭಾನುವಾರ ರಮೇಶ್ ಎಂಬ ಹುಡುಗ, ಮತ್ತವನ ತಂದೆ ತಾಯಿ ಇಬ್ಬರೂ ಮನೆಗೆ ಬಂದರು. ಹುಡುಗನ ಮುಖದಲ್ಲಿ ನಿರ್ಲಿಪ್ತತೆ ಇತ್ತು ಆದರೆ ಅವನ ತಂದೆ ತಾಯಿ ಉದ್ವೇಗದಲ್ಲಿದ್ದರು. ಅವರನ್ನು ನನ್ನ consultation room ಗೆ ಕರೆದು ಕೊಂಡು ಹೋದೆ. ಅವರ ಸಮಸ್ಯೆ ಏನೆಂದು ಕೇಳಿ, ಅವರನ್ನು ಮಾತಾಡಲು ಹೇಳಿದೆ.
ರಮೇಶನ ತಂದೆ ಮಾತಾಡುತ್ತಾ ಇವನು ನಮ್ಮ ಮಗ ರಮೇಶ, ಕಳೆದ ಕೆಲವು ತಿಂಗಳಿಂದ ಯಾರೊಂದಿಗೂ ಮಾತಾಡುತ್ತಿಲ್ಲ, ತಾನಾಯಿತು ತನ್ನ ಕೆಲಸವಾಯಿತು ಅಂತ ಇರುತ್ತಾನೆ. ಆಫೀಸಿನ ಸಮಯದಲ್ಲಿ ಕೆಲಸದ ವಿಚಾರ ಮಾತ್ರ ಮಾತಾಡುತ್ತಾನೆ, ಅದು ಹೊರತಾಗಿ ಏನೊಂದು ಮಾತಿಲ್ಲ. ನಮಗಂತೂ ಏನು ಮಾಡುವುದು ಅಂತ ತಿಳಿಯುತ್ತಿಲ್ಲ. 3-4 ತಿಂಗಳ ಹಿಂದೆ ಚೆನ್ನಾಗೆ ಇದ್ದ ಡಾಕ್ಟ್ರೇ, ನಂತರ ಆಫೀಸಿನ ಹೊರತಾಗಿ ಮಾತಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾನೆ. ದಯವಿಟ್ಟು ನಮ್ಮ ಮಗನಿಗೆ ಏನಾಗಿದೆ ಎಂದು ಹೇಳಿ, ಸರಿ ಮಾಡಿ ಎಂದು ಬೇಡಿಕೊಂಡರು. ಇವರ ಮಾತನ್ನು ಕೇಳುತ್ತಾ ನಾನು ರಮೇಶನನ್ನು ಗಮನಿಸುತ್ತಿದ್ದೆ. ಆತ ನಿರ್ಲಿಪ್ತವಾಗಿಯೇ ಇದ್ದ. ಆತ ಮಾತಾಡುವುದನ್ನು ನಿಲ್ಲಿಸುವ ಮುನ್ನ ಮನಸ್ಸಿಗೆ ಘಾಸಿ ಆಗುವಂತಹ ಯಾವುದಾದರೂ ಘಟನೆಯ ಬಗ್ಗೆ ತಿಳಿಯುವ ಪ್ರಯತ್ನ ಮಾಡಿದೆ. ರಮೇಶನ ಮದುವೆಗೆಂದು ಹುಡುಗಿ ಹುಡುಕುವ ಪ್ರಯತ್ನ ಶುರುವಾದ ಮೇಲೆ ಆತ ಅಕ್ಷರಶಃ ಮೌನಿಯಾಗಿದ್ದ! ಇಲ್ಲೇನೋ ಸಮಸ್ಯೆ ಇದೆ ಎಂದು ರಮೇಶನ ಜೀವನದ ಬಗ್ಗೆ ತಿಳಿಯುವ ಪ್ರಯತ್ನ ಮಾಡಿದೆ. ಆಗ, ಅವರ ತಾಯಿ ಮಾತಾಡಲು ಶುರುಮಾಡಿದರು.
ರಮೇಶ ಚಿಕ್ಕವಯಸ್ಸಿನಲ್ಲಿದ್ದಾಗ ಅವರ ಮನೆಯಲ್ಲಿ ಬಡತನವಿತ್ತು. ಹೊಟ್ಟೆ ಬಟ್ಟೆಗೆ ಇರಲಿಲ್ಲ ಎನ್ನುವಷ್ಟು ಬಡತನವಿರಲ್ಲಿಲ್ಲ, ತಿಂಗಳ ಕೊನೆಗೆ ಮನೆಯ ಖರ್ಚನ್ನು ನಿಭಾಯಿಸಲು ಕಷ್ಟಪಡುವಂತಹ ಅರ್ಥಿಕ ಪರಿಸ್ಥಿತಿ ಅವರ ಸಂಸಾರ. ತಾಯಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅವರ ತಂದೆಗೆ ಕೆಲಸವಿರಲಿಲ್ಲ ಮತ್ತು ಕುಡಿತದ ಅಭ್ಯಾಸ ಕೂಡ ಇತ್ತು. ಗಂಡ ಹಂಡತಿಯರ ನಡುವೆ ಹೊಂದಾಣಿಕೆ ಇರಲಿಲ್ಲ. ರಮೇಶ ಈ ಪರಿಸ್ಥಿತಿಯಲ್ಲಿ ಮನೆಯ ಕಷ್ಟಗಳನ್ನೇ ನೋಡುತ್ತ ಬೆಳೆದ. ತಂದೆ ಅಥವಾ ತಾಯಂದರೊಂದಿಗೆ ಮನಸ್ಸು ಬಿಚ್ಚಿ ಮಾತಾಡುವ ಅವಕಾಶ ತೀರ ಕಮ್ಮಿ. ಆತನ ತಾಯಿ ಕೂಡ ತಮ್ಮ ಕಷ್ಟದ ದಿನಗಳ ಬಗ್ಗೆ ಮಾತಾಡಿದರು. ಈ ಕಷ್ಟಗಳ ನಡುವೆ ಮಗನನ್ನು ಉನ್ನತ ಮತ್ತು ವೃತ್ತಿಪರ ಡಿಗ್ರಿಯನ್ನು ಓದಿಸಿದರು ಎಂಬುದನ್ನು ಹೆಚ್ಚು ಪ್ರತಿಪಾದಿಸಿದರು. ರಮೇಶ ಕಾಲೇಜಿಗೆ ಬರುವ ಹೊತ್ತಿಗೆ ಅವನ ತಂದೆಗೆ ಕೆಲಸ ಸಿಕ್ಕಿ ಮನೆಯ ಆರ್ಥಿಕ ಸ್ಥಿತಿ ಸುಧಾರಿಸಿತು. ಇದರ ಜೊತೆಗೆ ಅವರ ಕುಡಿತ ಹೆಚ್ಚಿ, ಮನೆಯಲ್ಲಿ ಜಗಳವೂ ಹೆಚ್ಚಾಯಿತು. ಗಂಡ ಹೆಂಡತಿಯರ ನಡುವೆ ಅನ್ಯೋನ್ಯತೆ ಎಂಬುದು ಎಂದೂ ಕಾಣಲೇ ಇಲ್ಲ. ಈಗ, ಮಗನ ವಿಚಾರದಲ್ಲಿ ಇಬ್ಬರೂ ಒಂದೇ ರೀತಿ ನಿರ್ಧಾರಕ್ಕೆ ಬಂದಿರುವುದು ಆಶ್ಚರ್ಯಕರವಾಗಿತ್ತು.
ರಮೇಶನ ಸ್ನೇಹಿತರ ಬಗ್ಗೆ ಮತ್ತು ಸಂಬಂಧಿಕರ ಬಗ್ಗೆ ತಿಳಿಯುವ ಪ್ರಯತ್ನ ಮಾಡಿದೆ. ರಮೇಶ ಒಬ್ಬನೇ ಮಗನಾಗಿದ್ದ. ಅವನ ತಾಯಿಯೇ ಹೇಳಿದಂತೆ ಆತನಿಗೆ ಹತ್ತಿರದ ಸ್ನೇಹಿತರಾರು ಇರಲಿಲ್ಲ. ಮನೆಗೆ ಇದುವರೆಗೂ ಯಾವ ಸ್ನೇಹಿತನನ್ನು ಕರೆದುಕೊಂಡು ಬಂದಿಲ್ಲ. ರಜೆ ಇದ್ದಾಗ ತಾಯಿಯ ತವರು ಮನೆಗೆ cousin ಗಳ ಜೊತೆ ಹೋಗುತ್ತಿದ್ದ. ಕೆಲಸದ ಅನಿವಾರ್ಯತೆಯಿಂದ ತಾಯಿ ಆತನ ಜೊತೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ರಮೇಶನ ತಂದೆಯ ಕಡೆ ಅಜ್ಜಿ ಮತ್ತು ಅಜ್ಜಂದಿರು ಆತ ಹುಟ್ಟುವ ಮುನ್ನವೇ ಸ್ವರ್ಗಸ್ತರಾಗಿದ್ದರು. ತಾಯಿಯ ತಂದೆ ಕೂಡ ಇರಲಿಲ್ಲ, ಅಜ್ಜಿಯೊಬ್ಬರು ಮಾತ್ರ ಇದ್ದರು. ಗಂಡು ಮಕ್ಕಳ ಮನೆಗೆ ಕೆಲವು ಸಲ ಬರುತ್ತಿದ್ದ ಅಜ್ಜಿ ಮಗಳ ಮನೆಗೆ ಬರುತ್ತಿರಲಿಲ್ಲ. ಆದ್ದರಿಂದ, ರಮೇಶನಿಗೆ ಅಜ್ಜಿಯ ಜೊತೆಯೂ ಅಷ್ಟಾಗಿ ಒಡನಾಟವಿರಲಿಲ್ಲ. ಆಫೀಸಿನಲ್ಲಿ ಕೂಡ ತಾನಾಯಿತು ತನ್ನ ಕೆಲಸವಾಯಿತು ಎಂದಿರುತ್ತಿದ್ದ. ಒಳ್ಳೆಯ ಕೆಲಸಗಾರ ಎಂಬ ಹೆಸರು ಪಡೆದಿದ್ದಾನೆ. ಆದರೆ, ಅದಾವುದರ ಬಗ್ಗೆಯೂ ತಂದೆ ತಾಯಂದರೊಂದಿಗೆ ಹೆಚ್ಚು ಮಾತಾಡಿದ್ದಿಲ್ಲ.
ಅವರ ತಾಯಿ ಮಾತು ಮುಂದುವರೆಸುತ್ತಾ 2 ವರ್ಷದ ಹಿಂದೆ ರಮೇಶ ಒಂದು ಹುಡುಗಿಯನ್ನು ಪ್ರೀತಿಸಿದ್ದ. ಆ ಹುಡುಗಿಯನ್ನು ಅವರ ತಂದೆ ತಾಯಿಯರೊಂದಿಗೆ ಕರೆದುಕೊಂಡು ಬಂದಿದ್ದ. ಆಗ ಇವನಿಗೆ 26 ವರ್ಷ. ಇನ್ನೆರಡು ವರ್ಷ ಬಿಟ್ಟು ಮದುವೆ ಮಾಡುವುದು ನಮ್ಮ ತೀರ್ಮಾನವಾಗಿತ್ತು. ಹುಡುಗಿಗೆ ಕೂಡ 26 ಆಗಿದ್ದ ಕಾರಣ ಮದುವೆ ಮಾಡುವ ಹಂತದಲ್ಲಿದ್ದರು. ಅವರು ಕಾಯಲಿಲ್ಲ, ಬದಲಾಗಿ ಬೇರೆ ಹುಡುಗನೊಟ್ಟಿಗೆ ಮದುವೆ ಮಾಡಿದರು. ಈ ಘಟನೆ ನಂತರ ರಮೇಶ ಮಾತಾಡುವುದನ್ನು ಕಮ್ಮಿ ಮಾಡಿದ್ದ. ನಾವು ಹೇಳಿದ್ದನ್ನೆಲ್ಲಾ ಚಾಚೂ ತಪ್ಪದೆ ಮಾಡುತ್ತಾನೆ. ಯಾವುದನ್ನು ವಿರೋಧ ಮಾಡಿವುದಿಲ್ಲ, ನಾವು ಏನು ಹೇಳುತ್ತೀವೋ ಅಷ್ಟನ್ನು ಮಾತ್ರ ಮಾಡತ್ತಾನೆ. ಈಗ, ಮದುವೆ ಮಾಡೋಣ ಎಂದುಕೊಂಡರೆ ಹೀಗೆ ಮಾತಾಡುವುದನ್ನೇ ನಿಲ್ಲಿಸಿದ್ದಾನೆ. ತಾಯಿ ಮುಖದಲ್ಲಿ ಮಗ ತಮ್ಮನ್ನು ಪ್ರೀತಿಸುತ್ತಿಲ್ಲ, ಹೇಳಿದ್ದನ್ನು ಮಾತ್ರ ಕೇಳುತ್ತಾನೆ, ಈಗ ಪೂರ ಮೌನಿಯಾಗಿದ್ದಾನೆ ಎಂಬ ಚಿಂತೆ ಮತ್ತು ಆತ ಸ್ವಾರ್ಥಿ, ಬೇಜವಾಬ್ದಾರಿ ಎಂಬ ಕೋಪದ ಭಾವ ಕಾಣಿಸುತ್ತಿತ್ತು.
ನಂತರ ರಮೇಶನನ್ನು ಮಾತಾಡಿಸುವ ಪ್ರಯತ್ನ ಮಾಡಿದೆ. ಇಲ್ಲ, ಆತ ಮಾತ್ರ ಅದೇ ನಿರ್ಲಿಪ್ತತ್ರೆಯ ಭಾವದಲ್ಲಿ ಮೌನಿಯಾಗೆ ಇದ್ದ. ಆತನ ಹವ್ಯಾಸ ಟೇಬಲ್ ಟೆನಿಸ್, ಓದು ಮತ್ತು ಬರವಣಿಗೆ ಎಂದು ತಿಳಿದುಕೊಂಡೆ. ಆತನ ಈ ಹವ್ಯಾಸದ ಬಗ್ಗೆ ತಂದೆ ತಾಯಂದರಲ್ಲಿ ಹೆಚ್ಚು ಆಸಕ್ತಿ ಇಲ್ಲದಿರುವುದನ್ನು ಗಮನಿಸಿದೆ. ಆತ ಅಪರೂಪಕ್ಕೆ ದಿನಚರಿ ಬರೆಯುತ್ತಿದ್ದ ಮತ್ತು ಕೆಲವು ತಿಂಗಳಿಂದ ಅದನ್ನು ಬರೆಯುವುದನ್ನು ನಿಲ್ಲಿಸಿದ್ದ ಎಂದು ಅರ್ಥೈಸಿಕೊಂಡೆ. ದಿನಚರಿ ಪುಸ್ತಕಗಳನ್ನು ನಾನು ತೆಗೆದುಕೊಂಡು 2 ದಿನ ಬಿಟ್ಟು ನಾನು ಕೆಲಸ ಮಾಡುವ ಆಸ್ಪತ್ರೆಗೆ ತಂದೆ ತಾಯಿ ಇಬ್ಬರಿಗೆ ಬರಲು ಹೇಳಿದೆ.
2 ದಿನದಲ್ಲಿ ರಮೇಶನ ದಿನಚರಿ ಪುಸ್ತಕಗಳನ್ನು ಓದಿದೆ. ತಾನು ಪ್ರೀತಿಸಿದ ಹುಡುಗಿ ಬಗ್ಗೆ ಭಾವುಕನಾಗಿ ಕೆಲವು ಕವಿತೆಯ ಸಾಲುಗಳನ್ನು ಬರೆದಿದ್ದ. ಕೊನೆಯಲ್ಲಿ ತನ್ನ ತಾಯಿ ಮದುವೆಯ ಕಾರಣ ದಿನಚರಿ ಬರೆಯುವುದನ್ನು ನಿಲ್ಲಿಸು ಎಂದು ಹೇಳಿದ್ದಾರೆಂದು 5 ತಿಂಗಳಿಂದ ಬರೆಯುವುದನ್ನು ನಿಲ್ಲಿಸಿದ್ದ.
ಆಸ್ಪತ್ರೆಗೆ ಬಂದ ರಮೇಶನ ತಂದೆ ತಾಯರನ್ನು ಕೂರಿಸಿ ಹೇಳಿದೆ. ರಮೇಶ ಚಿಕ್ಕ ವಯಸ್ಸಿನಿಂದಲೂ ಒಬ್ಬಂಟಿಗನಾಗೆ ಬೆಳೆದಿದ್ದಾನೆ. ನಿಮ್ಮ ಬದುಕಿನ ಕಷ್ಟದ ಪರಿಚಯ ಅವನಿಗಿದೆ. ಹಾಗಾಗಿ ತನ್ನ ಆಸೆ, ಆಕಾಂಕ್ಷೆ, ಭಯ, ದುಗುಡ ಎಲ್ಲವನ್ನು ಯಾರಂದಿಗೂ ಹೇಳಿಕೊಳ್ಳಲು ಆಗಲೇ ಇಲ್ಲ ಮತ್ತು ತನ್ನ ಭಾವನೆಗಳನ್ನು suppress ಮಾಡುತ್ತಲೇ ಬೆಳೆದ. ನೀವಿಬ್ಬರು ಅನ್ಯೋನ್ಯವಾಗಿ ಇರದ ಕಾರಣ ನಿಮ್ಮ ಹತ್ತಿರ ತನ್ನ ಭಾವನೆಗಳಿಗೆ ಪ್ರತಿಸ್ಪಂದನೆ ಸಿಗಬಹುದು ಎಂಬ ನಂಬಿಕೆ ಆತನಲ್ಲಿ ಹುಟ್ಟಲೇ ಇಲ್ಲ. ಅವನಿಗೆ ಸ್ನೇಹಿತರಾರು ಇಲ್ಲ, ಅಜ್ಜಿ ತಾತಂದಿರ ಪ್ರೀತಿ ಕೂಡ ಸರಿಯಾಗಿ ಸಿಗಲಿಲ್ಲ. ಎಲ್ಲರೊಂದಿಗೆ ಬೆರೆಯಲು ಬೇಕಿರುವ ಆತ್ಮವಿಶ್ವಾಸ, ಮನೆಗೆ ಸ್ನೇಹಿತರನ್ನು ಕರೆದುಕೊಂಡು ಬರುವ ಮತ್ತು ಅವರೊಂದಿಗೆ ಬೆರೆಯುವ ವಾತಾವರಣ ಅಥವಾ ಪ್ರೀತಿ ನಿಮ್ಮಲ್ಲಿ ಇರಲೇ ಇಲ್ಲ. ಆತ ರಜೆಗೆ ತಾತನ ಮನೆಗೆ ಹೋದರೂ ಅಲ್ಲಿ ಎಲ್ಲರ ನಡುವೆ ಒಂಟಿಯಾಗೇ ಇದ್ದ. ಕಾರಣ ನೀವು ಆತನ ಜೊತೆ ಇರಲಿಲ್ಲ. ನಿಮ್ಮ ಕುಡಿತದ ಕಾರಣ ಆತನಿಗೆ ತಂದೆ ಪ್ರೀತಿ ಎಂದರೆ ಏನು ಅಂತಾನೆ ಅರ್ಥವಾಗಿಲ್ಲ. ನೀವು ಕೆಲಸ ಮಾಡಿಕೊಂಡು ಕರ್ತವ್ಯವೆಂಬಂತೆ ಆತನನ್ನು ಓದಿಸಿದ್ದೀರಿ. ಡಿಗ್ರಿ ಮಾಡಿರುವುದು ತನ್ನ ಹೆಸರಿನಲ್ಲಿ ಸಾಲಮಾಡಿ ಮತ್ತು ಆ ಸಾಲವನ್ನು ಆತನೇ ತೀರಿಸಿದ್ದಾನೆ. ಇದು ಆತನ ದೃಷ್ಟಿಯಲ್ಲಿ ನೀವು ಆತನ ತಾಯಿಯಾಗಿ ನಿಮ್ಮ ಕರ್ತವ್ಯವನ್ನಷ್ಟೇ ಮಾಡಿದ್ದೀರ ಆದ್ದರಿಂದ ಆತ ನಿಮ್ಮೊಟ್ಟಿಗಿನ ಬದುಕನ್ನು ಕರ್ತವ್ಯ ಎಂದುಕೊಂಡಿದ್ದಾನೆ. ತಾಯಿಯ ಪ್ರೀತಿ ಎಂಬುದು ಕೂಡ ಆತನ ಮನಸ್ಸಿಗೆ ಅರ್ಥವಾಗಿಲ್ಲ.
ಮೊದಲ ಬಾರಿ ಆತ ಪ್ರೀತಿ ಎಂಬುದನ್ನು ಹೊಸ ಭಾವವೆಂಬಂತೆ ತಾನು ಪ್ರೀತಿಸಿದ ಹುಡುಗಿಯಲ್ಲಿ ಕಂಡುಕೊಂಡಿದ್ದಾನೆ. ಆ ಹುಡುಗಿಯ ಮೇಲಿರುವ ಪ್ರೀತಿಗೆ ಅವನು ಬರೆದಿರುವ ಸಾಲುಗಳೇ ಸಾಕ್ಷಿ. ಆ ಹುಡುಗಿಯ ಹತ್ತಿರ ಮಾತ್ರ ಮನಸ್ಸು ಬಿಚ್ಚಿ ಮಾತಾಡಿದ್ದಾನೆ. ಮೊದಲ ಬಾರಿ ಆತ ನಿಮ್ಮ ಬಳಿ ಮನಸಾರೆ ಮಾತಾಡಿದ್ದು ಮತ್ತು ತನ್ನ ಆಸೆಯನ್ನು ಹೇಳಿಕೊಂಡದ್ದು ಆ ಹುಡುಗಿಯೊಂದಿಗಿನ ಮದುವೆ ವಿಚಾರವನ್ನು. ನೀವು ಯಾಕೆ ಒಪ್ಪಲಿಲ್ಲ ಅಥವಾ ಆ ಹುಡುಗಿಯ ಮನೆಯವರು ಒಪ್ಪಲಿಲ್ಲವೋ ರಮೇಶನಿಗೆ ಬೇಡ. ಆದರೆ, ಅವನ ದೃಷ್ಟಿಯಲ್ಲಿ ನೀವು ಆತನಲ್ಲಿ ಹುಟ್ಟಿದ ಒಂದೇ ಒಂದು ಆಸೆಯನ್ನು ಕೊಂದಿದ್ದೀರಾ! ನನ್ನ ದೃಷ್ಟಿಯಲ್ಲಿ ಅವನು ಮನಸ್ಸು ತೆರೆದುಕೊಳ್ಳುವುದಕ್ಕೆ ನೀವೇ ತಡೆಗೋಡೆ! ಮದುವೆ ವಿಚಾರದಲ್ಲಿ ಆತನಿಗೆ ದಿನಚರಿ ಬರೆಯುವುದನ್ನು ನಿಲ್ಲಿಸಲು ಮತ್ತು ಅವುಗಳನ್ನು ಸುಟ್ಟುಹಾಕಲು ಹೇಳಿದ್ದಿರ. ನಿಮ್ಮ ದೃಷ್ಟಿಯಲ್ಲಿ ಅದು ಸರಿ ಆದರೆ, ಆತನಿಗೆ ತನ್ನ ಮನಸ್ಸಿನ ಮಾತುಗಳನ್ನಾಡಬಹುದಾದ ಏಕೈಕ ಮಾರ್ಗ. ನಿಮ್ಮ ಮಾತಿಗೆ ಕರ್ತವ್ಯವೆಂಬಂತೆ ಬರವಣಿಗೆ ನಿಲ್ಲಿಸಿದ್ದಾನೆ. ತನ್ನ ಯಾವುದೇ ಮಾತಿಗೆ ನಿಮ್ಮ ಹತ್ತಿರ ಬೆಲೆ ಇಲ್ಲ ಎಂಬುದು ಆತನ ಮನಸಲ್ಲಿ ಗಾಢವಾಗಿ ಉಳಿದಿದೆ. ಮದುವೆಯನ್ನು ಸಹ ನಿಮ್ಮ ಜವಾಬ್ದಾರಿ ಕಳೆದುಕೊಳ್ಳಲು ಮಾಡುತ್ತಿರುವ ಕರ್ತವ್ಯ ಎಂದು ಆತನ ಮನಸ್ಸಿನಲ್ಲಿದೆ. ಹಾಗಾಗಿ ನಿಮ್ಮ ಮಾತುಗಳಿಗೆ ಪ್ರತಿಕ್ರಯಿಸಬಾರದು ಎಂದು ಸಂಪೂರ್ಣ ಮೌನಿಯಾಗಿದ್ದಾನೆ. ಕರ್ತವ್ಯವೆಂದು ಆಫೀಸಿನ ವಿಚಾರ ಮಾತಾಡುತ್ತಿದ್ದಾನೆ ಅಷ್ಟೇ. ಆತನಿಗೆ ಬೇಕಾಗಿರುವುದು ಪ್ರೀತಿ, ಕರ್ತವ್ಯದ ಪಾಠವಲ್ಲ ಎಂದು ನನ್ನ ಮಾತುಗಳನ್ನು ಹೇಳಿದೆ.
ನನ್ನ ಮಾತನ್ನು ಕೇಳಿದ ರಮೇಶನ ತಂದೆ ಮತ್ತು ತಾಯಿ ನನ್ನನ್ನು ವಿಚಿತ್ರವಾಗಿ, ವ್ಯಂಗ್ಯವಾಗಿ ನೋಡುತ್ತಾ ದಿನಚರಿ ಪುಸ್ತಕಗಳನ್ನು ಹಿಂಪಡೆದರು. ರಮೇಶನ ತಾಯಿ "ನಮ್ಮ ಮಗನ ತೊಂದರೆ ಸರಿಮಾಡಿ ಎಂದರೇ ನೀವು ನಮ್ಮದೇ ಸಮಸ್ಯೆ ಅನ್ನುತ್ತೀರಲ್ಲ. ಅಲ್ಲ ಡಾಕ್ಟ್ರೇ... ನಿಮಗೆ ಇದು ಏನು ಅಂತ ತಿಳಿಯುತ್ತಾ? ನಾವು ಬೇರೆ ವೈದ್ಯರ ಬಳಿ ಚಿಕಿತ್ಸೆ ಕೊಡಿಸುತ್ತೇವೆ" ಎಂದು ಹೊರಟೇ ಬಿಟ್ಟರು.
