September 20, 2018

ಸಹಜವಾದ ಬದುಕು

ಕೆಲದಿನಗಳ ಹಿಂದೆ ಪರಿಚಯಸ್ಥರೊಬ್ಬರ ಹತ್ತಿರ ನಮ್ಮ ಬದುಕಿನ ಶೈಲಿ, ನಾವು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಮಾತಾಡುತ್ತಿದ್ದೆ. ನಾವು ನಮ್ಮ ಇಷ್ಟದಂತೆ ಬದುಕು ನಡೆಸುವುದು ಸರಿಯಾ ಅಥವಾ ನಮ್ಮ ಪಾಲಿಗೆ ಬಂದದ್ದು ಪಂಚಾಮೃತ ಎಂದು ಮಂದುವರೆಯಬೇಕ ಎಂಬುದರ ಬಗೆಗೆ ಜೋರಾಗೆ ಮಾತು ನಡೆಯುತ್ತಿತ್ತು. ನನ್ನ ವಾದ; ನಮ್ಮ ಇಷ್ಟದಂತೆ, ನಮ್ಮ ಮನಸ್ಸು ಹೇಳಿದಂತೆ ಬದುಕು ನಡೆಸುವುದು ಎಂದಿತ್ತು. ಆದರೆ ಅವರ ವಾದ ಬದುಕಿನಲ್ಲಿ ಹಳೆಯದನ್ನೆಲ್ಲಾ ಮರೆಯಬೇಕು, ನಾವು ಅಂದುಕೊಂಡದ್ದೆಲ್ಲಾ ನಡೆಯುವುದಿಲ್ಲ ಆದ್ದರಿಂದ ಬಂದದ್ದನ್ನು ಒಪ್ಪಿಕೊಂಡು ನಾವು ಮಂದುವರೆಯಬೇಕು ಎಂದಿತ್ತು. ಈ ಮಾತು ಮುಂದುವರೆಯುತ್ತ ಒಂದು ರೀತಿ ವಾಗ್ವಾದವೇ ಆಯ್ತು. ಎಂದಿನಂತೆ ನನಗೆ ನನ್ನ ವಾದವೇ ದೊಡ್ಡದಾಯಿತು. ಮನಸ್ಸು ಅವರ ವಾದವನ್ನು ಒಪ್ಪುತ್ತಿದ್ದರೂ ಬುದ್ಧಿ ಅದನ್ನು ತಿರಸ್ಕರಿಸುತ್ತಿತ್ತು. ಕಾರಣ ಸ್ವಾಭಿಮಾನ ಅಡ್ಡಬರುತ್ತಿತ್ತು. ಇದು ಸಹಜ ಬಿಡಿ, ಚಿಕ್ಕವಯಸ್ಸಿನಿಂದಲೂ ಯಾರಿಂದಲೂ ಬೇಡದ ನಾನು, ನನ್ನ ಆಲೋಚನೆಗೆ ವಿರುದ್ಧವಾಗಿ ಯಾರಾದರೂ ಮಾತಾಡಿದಾಗ ತಿರುಗಿ ವಾದಿಸುವುದು ನನ್ನ ಗುಣವಾಗಿದೆ. ನೋಡುಗರಿಗೆ ಅದು ಅಹಂಕಾರ ನನ್ನ ಮಟ್ಟಿಗೆ ಅದು ಸ್ವಾಭಿಮಾನ.
 

 
ನಾನು ಒಂಟಿಯಾಗಿ ಕುಳಿತಾಗ ಈ ಮಾತುಕಥೆ ಕುರಿತು ನನ್ನ ಯೋಚನ ಲಹರಿ ಮುಂದುವರಿಯಿತು. ಜೀವನದಲ್ಲಿ ನಾವು ಅಂದುಕೊಂಡದ್ದೆಲ್ಲಾ ನಡೆಯುವುದಿಲ್ಲ ಎನ್ನುವುದು ಕಹಿಯಾದ ಸತ್ಯ. ಹಾಗೆಂದು ನಾವು ಬದುಕನ್ನು ಹೀಗೆ ನಡೆಸಬೇಕು ಎಂದುಕೊಳ್ಳುವುದು ತಪ್ಪ? ಎಂಬ ಪ್ರಶ್ನೆ ಕಾಡಿತು. ಇಂತಹ ಪ್ರಶ್ನೆಗಳಿಗೆ ಉತ್ತರ ದೊರಕುವುದು ನಮ್ಮ ಜೀವನಾನುಭವದಿಂದ ಅಥವಾ ಇತಿಹಾಸದ ಪುಟದಿಂದ. ಜೀವನಾನುಭವ ತಾನಾಗೆ ಪಾಠ ಹೇಳುತ್ತದೆ. ಇತಿಹಾಸದ ಪುಟಗಳಿಂದ ನಾವು ಕಲಿಯಬೇಕು ಅಷ್ಟೇ. ಇದು ನಾನು ಕಂಡುಕೊಂಡಿರುವ ವಿಧಾನ.

ಇತಿಹಾಸವನ್ನೇ ಗಮನಿಸುವುದಾದರೇ ಇಂತಹ ಪ್ರಶ್ನೆಗಳಿಗೆ ಸ್ವಾಮೀ ವಿವೇಕಾನಂದ ಮತ್ತು ಅಕ್ಕ ನಿವೇದಿತೆಯರ ಜೀವನ ನಮಗೆ ಉತ್ತರವಾಗುತ್ತದೆ.

ಸ್ವಾಮೀಜೀ ತಮ್ಮ ತರುಣಾವಸ್ಥೆಯಲ್ಲಿದ್ದಾಗ ದೇವರಿದ್ದಾನ ಎಂಬ ಪ್ರಶ್ನೆಯನ್ನು ತನಗೆ ಗೊತ್ತಿದ್ದವರನ್ನೆಲ್ಲಾ ಕೇಳುತ್ತಾರೆ. ದೇವರನ್ನು ಕಾಣಲೇ ಬೇಕು ಎಂಬ ದೃಢ ವಿಶ್ವಾಸದಿಂದ ತನ್ನ ಪ್ರಯತ್ನ ಮುಂದುವರೆಸುತ್ತಾರೆ. ಒಂದು ಹಂತದಲ್ಲಿ ಸ್ವಾಮೀಜೀ ಗುರುದೇವ ರವೀಂದ್ರನಾಥ ಟ್ಯಾಗೋರರನ್ನು ಭೇಟಿಯಾಗಿ ದೇವರ ಕುರಿತು ಕೇಳುತ್ತಾರೆ. ಟ್ಯಾಗೋರರು 'ನಿನ್ನದು ಯೋಗಿಯ ಕಣ್ಣು, ನೀನು ಬಯಸಿದರೆ ದೇವರನ್ನು ಕಾಣಬಹುದು' ಎಂದು ಉತ್ತರಿಸುತ್ತಾರೆ. ಕೇಳಿದವರೆಲ್ಲರೂ ಇಂತಹ ಉತ್ತರ ಕೊಡುತ್ತಿದ್ದರು. ಇದರಿಂದ ಸ್ವಾಮೀಜೀಗೆ ಸಮಾಧಾನ ಅಥವಾ ತೃಪ್ತಿ ಸಿಗಲಿಲ್ಲ. ನಮ್ಮ ನಂಬಿಕೆಯಲ್ಲಿ ದೃಢವಾದ ವಿಶ್ವಾಸವಿದ್ದಲ್ಲಿ ಯಾವುದೋ Cosmic Energy ನಮಗೆ ಸಹಾಯ ಮಾಡುತ್ತದೆ. ದೇವರ ಕುರಿತಂತೆ ಹಲವರನ್ನು ವಿಚಾರಿಸುತ್ತಿರಬೇಕಾದರೆ ವ್ಯಕ್ತಿಯೊಬ್ಬರು ದಕ್ಷಿಣೇಶ್ವರಕ್ಕೆ ಹೋಗಿ ಶ್ರೀ ರಾಮಕೃಷ್ಣರನ್ನು ಭೇಟಿಯಾಗು ಎಂಬ ಸಲಹೆ ಕೊಡುತ್ತಾರೆ. ಅದರಂತೆ, ಸ್ವಾಮೀಜೀ ದಕ್ಷಿಣೇಶ್ವರಕ್ಕೆ ಹೋಗುತ್ತಾರೆ. ಮುಂದೆ ನಡೆದದ್ದೆಲ್ಲ ಇತಿಹಾಸ.

ಅದೇ ರೀತಿ, ಅಕ್ಕ ನಿವೇದಿತೆಯ ಬದುಕು. ತಾನೊಬ್ಬ ಧರ್ಮ ಜಿಜ್ಞಾಸುವಾಗಿ ತಾನು ನಂಬಿದ್ದ ಸಿದ್ಧಾಂತಗಳ ಮೇಲೆ ಅನೇಕ ಸಂದೇಹಗಳಿರುತ್ತದೆ. ತನ್ನ ಸಂದೇಹಗಳನ್ನು ಪರಿಹಾರ ಮಾಡಿಕೊಳ್ಳಲು ಚರ್ಚಿನ ಪಾದ್ರಿ, ತನ್ನ ತಂದೆ, ತಾಯಿ, ಸ್ನೇಹಿತರು, ಶಿಕ್ಷಕರು ಮತ್ತು ತತ್ವಜ್ಞಾನಿ ಎನ್ನಿಸಿಕೊಂಡ ಅನೇಕರನ್ನು ಪ್ರಶ್ನಿಸುತ್ತಾಳೆ. ಆದರೆ ಪ್ರಯತ್ನ ಮಾತ್ರ ವ್ಯರ್ಥ. ತನಗೆ ಸಮಾಧಾನವಾಗುವ ರೀತಿಯಲ್ಲಿ ಯಾರೂ ಸಹ ಉತ್ತರಿಸುವುದಿಲ್ಲ. ಒಂದು ಹಂತದಲ್ಲಿ ಚರ್ಚಿಗೆ ಹೋಗುವುದನ್ನು ಅಕ್ಕ ನಿಲ್ಲಿಸುತ್ತಾಳೆ. ತನ್ನ ಪಾಡಿಗೆ ಮಕ್ಕಳಿಗೆ ಪಾಠ ಹೇಳುತ್ತಾ ಜೀವನ ಮುಂದುವರೆಸುತ್ತಾಳೆ. ಸ್ವಾಮೀ ವಿವೇಕಾನಂದರು ಯೂರೋಪಿಗೆ ಬಂದಾಗ ನಿವೇದಿತೆಯ ಸ್ನೇಹಿತೆಯೊಬ್ಬರು ಸ್ವಾಮೀಜೀಯನ್ನು ಭೇಟಿಯಾಗಲು ಹೇಳುತ್ತಾರೆ. ಸ್ನೇಹಿತೆಯ ಬಲವಂತದ ಕಾರಣ ತನ್ನ ಸಂದೇಹಗಳಿಗೆ ಉತ್ತರ ಸಿಗಬಹುದು ಎಂಬ ನಂಬಿಕೆ ಇಲ್ಲದಿದ್ದರೂ ಹೋಗುತ್ತಾಳೆ ಅಕ್ಕ. ಅಂದು ಸ್ವಾಮೀಜೀಯನ್ನು ಭೇಟಿಯಾಗಲು ಬಂದವರಲ್ಲಿ ಅಕ್ಕನೇ ಕೊನೆಯವಳು! ಬಂದದ್ದು ಕೊನೆಯಾದರೂ ಅಕ್ಕನ ಸಂದೇಹಗಳೆಲ್ಲಾ ಪರಿಹಾರವಾಗುತ್ತದೆ ಮತ್ತು ಭಾರತಕ್ಕಾಗಿ ಅಕ್ಕ ನಿವೇದಿತೆಯಾಗಿ ನಿವೇದನಗೊಳ್ಳುತ್ತಾಳೆ. ಇತಿಹಾಸದಲ್ಲಿ ಅಕ್ಕನ ಹೆಸರು ಅಜರಾಮರವಾಗುತ್ತದೆ.

ನನ್ನ ಬದುಕಿನಲ್ಲಿ ಸಹ ಇಂತಹ ಕೆಲವು ಘಟನೆಗಳನ್ನು ಅನುಭವಿಸಿದ್ದೇನೆ.

ನನ್ನ ಜೀವನದಲ್ಲಿ ತುಂಬ ಹತ್ತಿರ ಎನ್ನಬಹುದಾದಂತಹ ಸ್ನೇಹಿತರೇನು ಇಲ್ಲ, ಹಾಗಾಗಿ ಪುಸ್ತಕವನ್ನು ಓದುವುದು ಅಭ್ಯಾಸವಾಯಿತು. ಬಹುಶಃ ನಾನು 07 ನೇ ತರಗತಿಯಲ್ಲಿದ್ದಾಗ ಅಮ್ಮ 'ಅಜೇಯ' ಎಂಬ ಪುಸ್ತಕ ನನ್ನ ಕೈಲಿಟ್ಟರು. ಭಾರತದ ಸ್ವಾತಂತ್ರ್ಯ ಇತಿಹಾಸದ ಒಂದು ಆಯಾಮ ಪರಿಚಯವಾಯಿತು. ಪಠ್ಯ ಪುಸ್ತಕದಲ್ಲಿ ಗಾಂಧೀ, ನೆಹರು ಬಗೆಗೆ ಮಾತ್ರ ಕೇಳಿದ್ದ ನನಗೆ ಅಜೇಯ ಬೇರೆನೇ ದಿಕ್ಕು ತೋರಿಸಿತು. ಹತ್ತನೇ ತರಗತಿಯಲ್ಲಿ ಸ್ವಾತಂತ್ರ್ಯದ ಇತಿಹಾಸ ಓದಬೇಕಾದರೆ ಕ್ರಾಂತಿಕಾರಿಗಳ ಬಗ್ಗೆ 1-2 ಸಾಲುಗಳು ಮಾತ್ರ ಇದ್ದದ್ದು ಗಮನಿಸಿದೆ. ಚಂದ್ರಶೇಖರ ಆಜಾದರ ಬದುಕು ಎಷ್ಟು ದೊಡ್ಡದು ಆದರೆ, ನಮ್ಮ ಪಠ್ಯ ಪುಸ್ತಕ ಅವರ ಸಾಧನೆಯನ್ನು ವರ್ಣಿಸಲೇ ಇಲ್ಲ. ಇದರ ಕುರಿತು ನಮ್ಮ ಶಿಕ್ಷಕರು, ಅಮ್ಮನನ್ನು ಕೇಳಿದೆ. ಆದರೆ ಸಮಂಜಸವಾದ ಉತ್ತರ ಮಾತ್ರ ಸಿಗಲಿಲ್ಲ. ಸಂದೇಹ ಮನಸ್ಸಿನಲ್ಲಿ ಹಾಗೆ ಉಳಿಯಿತು. ಒಂದು ದಿನ ಅಚಾನಕ್ಕಾಗಿ ನಮ್ಮ ಶಿಕ್ಷಕರೊಬ್ಬರು 'ಸ್ವಾತಂತ್ರ್ಯ ವೀರ ಸಾವರ್ಕರ್' ಎಂಬ ಪುಸ್ತಕ ಕೈಯಲ್ಲಿಟ್ಟರು. ಆ ಪುಸ್ತಕದಿಂದ ಕ್ರಾಂತಿಕಾರ್ಯದ ಮತ್ತೊಂದು ಆಯಾಮವನ್ನು ತಿಳಿದುಕೊಂಡೆ. ಆ ಪುಸ್ತಕ ಸ್ವಾತಂತ್ರ್ಯ ಇತಿಹಾಸ ಮಾತ್ರ ತಿಳಿಸದೆ ನನ್ನ ಗುರು ಯಾರೆಂಬುದನ್ನು ತೋರಿಸಿಕೊಟ್ಟಿತು. ಅವರೇ, ಆ ಪುಸ್ತಕದ ಕರ್ತೃ 'ಚಕ್ರವರ್ತಿ ಸೂಲಿಬೆಲೆ'. ಸ್ವಾತಂತ್ರ್ಯದ ಇತಿಹಾಸದ ಬಗ್ಗೆ ನನಗಿದ್ದ ಎಲ್ಲಾ ರೀತಿಯ ಸಂದೇಹಗಳನ್ನೂ ಬಗೆಹರಿಸಿದವರು ಅಣ್ಣ ಚಕ್ರವರ್ತಿ. ಅವರು ನನ್ನ ಮೇಲೆ ಬೀರಿರುವ ಪ್ರಭಾವ ಏನು ಎಂಬುದು ನನ್ನನ್ನು ತಿಳಿದವರಿಗೆ ಗೊತ್ತಿದೆ.

ಕಾಲೇಜಿನ ಕೊನೆ ದಿನಗಳಲ್ಲಿ campus selection ಅಲ್ಲಿ ಕೆಲಸ ಸಿಗಬೇಕೆಂದು ಅಂದುಕೊಂಡಿದ್ದೆ. ಅದರಂತೆ ಒಂದು ಖಾಸಗಿ ಕಂಪನಿಗೆ ಆಯ್ಕೆಯಾದೆ. ಒಂದು ಕಂಪನಿಗೆ ಆಯ್ಕೆಯಾದ ನಂತರ ನಿರಾಳನಾದೆ, ಮತ್ತೊಂದಕ್ಕೆ ಪ್ರಯತ್ನ ಪಡಬೇಕು ಅಥವಾ ಇಂತಹುದೇ ಕಂಪನಿಗೆ ಸೇರಬೇಕೆಂಬ ಯೋಚನೆ ಮಾಡಿದವನೇ ಅಲ್ಲ. ಒಂದು ಸಂಜೆ ಕಾಲೇಜಿನ ಸ್ನೇಹಿತರು ಮಾರನೆ ದಿವಸ Bosch campus interview ಇದೆ, ನೀನು ಸಹ ಬಾ ಎಂದು ವಿಷಯ ತಿಳಿಸಿದರು. ಹೇಗಿದ್ದರೂ ಒಂದು ಕಂಪನಿಯಲ್ಲಿ ಕೆಲಸ ಆಗಿದೆ, ಇನ್ನು ಮತ್ತೊಂದಕ್ಕೆ ಯಾಕೆ ಎಂಬ ಉಡಾಫ಼ೆ ಭಾವನೆ ನನ್ನಲಿತ್ತು. ಆದದ್ದಾಗಲಿ ಒಂದು ಪ್ರಯತ್ನ ಮಾಡೋಣ ಎಂದು ಹೋದೆ. ಎಲ್ಲರಿಗಿಂತ ಕಡೆಯಲ್ಲಿ ಹೋದವನು ನಾನು. ವಿಚಿತ್ರ ಎಂದರೆ ನಮ್ಮ ಕಾಲೇಜಿನಿಂದ ಆಯ್ಕೆ ಆದದ್ದು 03 ಜನ, ಅದರಲ್ಲಿ ನಾನು ಒಬ್ಬ. ಇಂದಿಗೂ ನಾನು Bosch ಅಲ್ಲೇ ಕೆಲಸ ಮಾಡುತ್ತಿರುವುದು. ನಾನು ಪ್ರಯತ್ನ ಪಟ್ಟು ಆಯ್ಕೆಯಾದ ಮೊದಲ ಕಂಪನಿಗೆ ನಾನು ಹೋಗಲೇ ಇಲ್ಲ.

ಬದುಕಿನಲ್ಲಿ ಎಲ್ಲ ಕಾರ್ಯದಲ್ಲೂ ನಮ್ಮ ಪ್ರಯತ್ನವಿರಬೇಕು ನಿಜ ಆದರೆ, ನಮ್ಮ ಪಾಲಿಗೆ ಬಂದದನ್ನು ಅನುಭವಿಸುತ್ತಾ ಮುಂದುವರೆಯಬೇಕು ಎಂದು ನನಗೆ ಅನ್ನಿಸಿತು. ಈ ತತ್ವ ನಮ್ಮ ಜೀವನದ ಪ್ರತಿಯೊಂದು ಘಟನೆಗೂ ಅನ್ವಯಿಸಬಹುದು. ಮದುವೆ ವಿಚಾರದಲ್ಲಂತೂ ಇದು ಹೆಚ್ಚು ಸಮಂಜಸ ಎಂದನ್ನಿಸುತ್ತದೆ. ಪ್ರಕೃತಿ ಅಥವಾ ದೈವದ ಮುಂದೆ ನಮ್ಮ ದೃಷ್ಟಿಕೋನ ತೀರ ಸಂಕುಚಿತ. ನಮಗೆ ಏನು ಬೇಕು ಎಂಬುದನ್ನು ನಾವು ಅಂದಾಜಿಸುವುದಕ್ಕಿಂತ ಆ ದೈವಕ್ಕೆ ಬಿಟ್ಟರೆ ಒಳಿತು ಎಂದು ನನಗೆ ತೋರುತ್ತದೆ. ಇದೇ ವಿಚಾರವನ್ನು ಕೆ.ವಿ.ಅಯ್ಯರ್ ರವರು ತಮ್ಮ 'ಶಾಂತಲ' ಕಾದಂಬರಿಯಲ್ಲಿ ತಮ್ಮದೇ ರೀತಿಯಲ್ಲಿ ಮುಂದಿಡುತ್ತಾರೆ. ಆ ಸಾಲುಗಳು ಹೀಗಿವೆ - 'ಜಗನ್ನಿಯಾಮಕನು ಯಾವ ಪುರುಷನಿಗೆ ಯಾವ ಸ್ತ್ರೀ ಎಂದು ವಿಧಾಯಕ ಮಾಡಿರುವನೋ, ಪ್ರಾಪ್ತ ಸಮಯದಲ್ಲಿ ಆ ಜಗನ್ನಿಯಾಮಕನೇ ಆ ಸ್ತ್ರೀಗೂ ಆ ಪುರುಷನಿಗೂ ಒಬ್ಬರನ್ನೊಬ್ಬರು ಕಣ್ಮನಗಳಿಂದ ಆಕರ್ಷಿಸುವ, ಅಪೇಕ್ಷಿಸುವ, ತನ್ನ ಧರ್ಮ ಪತ್ನಿ(ಪತಿ) ಎಂದು ಅರಿಯುವ ಶಕ್ತಿಯನ್ನೂ ಕರುಣಿಸುತ್ತಾನೆ''.

ಇದನ್ನೆಲ್ಲಾ ಗಮನಿಸಿದಾಗ ಆ ಪರಿಚಯಸ್ಥರು ಮಾಡಿದ ವಾದ ಸರಿ ಎಂದು ತೋರಿತು. ಇದರೊಟ್ಟಿಗೆ ಮತ್ತೊಂದು ತತ್ವ ಅರಿವಿಗೆ ಬಂತು. 'ಪ್ರಯತ್ನ ಪೂರ್ವಕವಾಗಿ ಮಾಡುವ ಪ್ರಕ್ರಿಯೆಗಿಂತ ಸಹಜತೆಯ ಪ್ರಕ್ರಿಯೆ ಶ್ರೇಷ್ಠ' ಎಂದು. ಎಲ್ಲರ ಬದುಕು ಒತ್ತಾಯ ಪೂರ್ವಕವೋ, ಪ್ರಯತ್ನ ಪೂರ್ವಕವೋ ಆಗುವುದಕ್ಕಿಂತ ಸಹಜವಾಗಿರಲಿ ಎಂಬುದು ನನ್ನ ಆಶಯ. ಅಂದಹಾಗೆ ಒಂದು ವಿಚಾರ ಮರೆತಿದ್ದೆ. ನನ್ನ ಜೊತೆ ವಾದ ಮಾಡಿ ನನ್ನನ್ನು ಈ ಚಿಂತನೆಯೆಡೆಗೆ ನಡೆಸಿದವರು ಹುಬ್ಬಳ್ಳಿಯ ನಮ್ಮ SNP ಸಹೋದರಿ; ರಮ್ಯ.

August 8, 2018

ನಾವ್ಯಾಕೆ ಹೀಗೆ...? - ಸ್ವಾತಂತ್ರ್ಯ ನಂತರದ ಪೀಳಿಗೆ

ಮೆಕಾಲೆ 1835 ರಲ್ಲಿ ಆಂಗ್ಲ ಶಿಕ್ಷಣವನ್ನು ಭಾರತಕ್ಕೆ ಪರಿಚಯಿಸುತ್ತಾನೆ. ಅದಕ್ಕೂ ಮುನ್ನ ಆತನೇ, 1835, ಫ಼ೆಬ್ರವರಿ 2 ರಂದು, ಬ್ರಿಟೀಷ್ ಸಂಸತ್ತಿನಲ್ಲಿ ಮಾತನಾಡುತ್ತ - "ನಾನು ಭಾರತದ ಉದ್ದಗಲಕ್ಕೂ ಸಂಚರಿಸಿದ್ದೇನೆ. ಅಲ್ಲಿ ಭಿಕ್ಷುಕನಾಗಲಿ, ಕಳ್ಳನಾಗಲಿ ಇಲ್ಲ. ಅಲ್ಲಿನ ಜನರ ನೈತಿಕ ಮೌಲ್ಯಗಳು ತುಂಬ ಉತ್ಕೃಷ್ಟವಾದದ್ದು. ಆ ಜನಗಳಿಗೆ ತಮ್ಮ ಪೂರ್ವಜರ ನೆನಪಿದೆ. ಆದ್ದರಿಂದ ಅವರ ಸಮಾಜ ಬಲಿಷ್ಠವಾಗಿದೆ. ಅವರನ್ನು ಒಡೆದು ಆಳಬೇಕೆಂದರೆ, ಅವರ ಸಂಸ್ಕೃತಿಯನ್ನು ನಾಶಮಾಡಬೇಕು. ಅದಕ್ಕಾಗಿ ನಾವು ಅವರ ಗುರುಕುಲ ಪದ್ಧತಿಯ ಬದಲಾಗಿ ನಮ್ಮ ಆಂಗ್ಲ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರಬೇಕು. ಅವರು ತಮ್ಮ ತನವನ್ನು ಮರೆತು ವಿದೇಶಿ ಮತ್ತು ಆಂಗ್ಲ ಪದ್ದತಿ ಶ್ರೇಷ್ಠ ಎಂದು ಒಪ್ಪಿಕೊಳ್ಳುವಂತಾಗುತ್ತದೆ. ಈ ಶಿಕ್ಷಣ ಪದ್ಧತಿ ಮೂಲಕ ಹಾದು ಹೋಗುವವರು ನಮ್ಮ ರೀತಿ ಬಟ್ಟೆ ಹಾಕಲು ಇಚ್ಚಿಸುತ್ತಾರೆ, ಪಾರ್ಟಿಗಳಿಗೆ ಹಣ ಖರ್ಚು ಮಾಡುತ್ತಾರೆ. ಓಟ್ಟಾರೆ ಹೇಳೋದಾದರೆ ಕಪ್ಪು ಚರ್ಮದ ಆಂಗ್ಲರು ಸೃಷ್ಟಿಯಾಗುತ್ತಾರೆ" ಎಂಬ ವಿಚಾರವನ್ನು ಮಂಡಿಸುತ್ತಾನೆ. ಅದರಂತೆ ಭಾರತಕ್ಕೆ ಆಂಗ್ಲ ಶಿಕ್ಷಣ ಬರುತ್ತದೆ, ನಂತರದ್ದು, ಕರಾಳ ಅದ್ಯಾಯ. 71 ನೇ ಸ್ವಾತಂತ್ರೋತ್ಸವದ ಹೊಸ್ತಿಲಲ್ಲಿ ಇರುವ ನಮಗೆ ಈ ಮಾತನ್ನು ನೆನಪಿಸಿ ಕೊಳ್ಳಲು ಕಾರಣವಿದೆ. ಸ್ವಾತಂತ್ರ್ಯ ಬಂದು 71 ವರ್ಷವಾದರೂ ಹೆಚ್ಚು ಕಡಿಮೆ ನಾವಿನ್ನೂ ಮೆಕಾಲೆ ಹಾಕಿಕೊಟ್ಟ ಆಂಗ್ಲ ಶಿಕ್ಷಣ ಪದ್ಧತಿಯಲ್ಲೇ ಓದುತ್ತಿದ್ದೇವೆ. ಸ್ವಾತಂತ್ರ್ಯ ಬಂದ ಹೊಸತರಲ್ಲಿ ಭಾರತದ ಶಿಕ್ಷಣ ಪದ್ಧತಿಯನ್ನು ಭಾರತೀಯ ರೀತಿಗೆ ಅಳವಡಿಸಿಕೊಳ್ಳುವ ಅವಕಾಶವಿತ್ತು. ಆದರೆ, ನಮ್ಮವರು ಆ ಸಾಹಸ ಮಾಡಲಿಲ್ಲ. ಅದರ ಪರಿಣಾಮವೇ ಹೊಸ ಪೀಳಿಗೆ 'ಸ್ವಾತಂತ್ರ್ಯ ನಂತರದ ಪೀಳಿಗೆ - ಕಪ್ಪು ಚರ್ಮದ ಆಂಗ್ಲರು'.
 

ಸ್ವಾತಂತ್ರ್ಯ ನಂತರ ಇಲ್ಲಿಯವರೆಗೆ 2-3 ಪೀಳಿಗೆಗಳು ಬಂದಿವೆ. 30 ವರ್ಷಕ್ಕೆ ಒಂದು ಪೀಳಿಗೆ ಎಂದು ಹೇಳುವುದಾದರೆ ಇಲ್ಲಿಯವರೆಗೆ 2 ಪೀಳಿಗೆಗಳು ಬಂದೆವೆ. ಈ ಎರಡೂ ಪೀಳಿಗೆಗಳು ಕಲಿತಿದ್ದು ಮೆಕಾಲೆಯ ಆಂಗ್ಲ ಶಿಕ್ಷಣ ಪದ್ದತಿಯಲ್ಲೇ. 1948 ರಿಂದ 1977 ವರೆಗಿನ ಪೀಳಿಗೆ ಮತ್ತು 1978 ರಿಂದ 2007 ವರೆಗಿನ ಪೀಳಿಗೆಯವರ ಯೋಚನೆಗಳಲ್ಲಿ ಸಾಮ್ಯತೆಗಳು ಇವೆ ಹಾಗೆ, ವ್ಯತ್ಯಾಸಗಳೂ ಇವೆ. ಇದು ಸಹಜ ಬಿಡಿ, ಇದರಲ್ಲೇನು ವಿಶೇಷತೆ ಇಲ್ಲ. ಆದರೆ, ಈ ಎರಡೂ ಪೀಳಿಗೆಯವರ ಕೊಡುಗೆ ಏನು? ಮುಂದಿನ ಪೀಳಿಗೆಯವರ ಮೇಲೆ ಇವರುಗಳ ಪ್ರಭಾವವೇನು? ಎಂಬುದು ನನ್ನ ಪ್ರಶ್ನೆ. ಮೊದಲು ಈ ಎರಡೂ ಪೀಳಿಗೆಯ ನಡುವಿನ ಸಾಮ್ಯತೆಗಳನ್ನು ಮುಂದಿಡುತ್ತೇನೆ (ಬಹುತೇಕ ಜನರ ಮನಸ್ಥಿತಿಯನ್ನು ಪ್ರಸ್ತುತ ಪಡಿಸುತ್ತಿದ್ದೇನೆ, ಎಲ್ಲರೂ ಹೀಗೆ ಎಂಬುದಲ್ಲ).
  • ಭಾರತದಿಂದ ಎಲ್ಲವನ್ನು ಪಡೆದುಕೊಂಡು, ಭಾರತಕ್ಕಾಗಿ ಏನು ಮಾಡದೆ, ವಿದೇಶದಲ್ಲಿ ಜೀವನ ಮಾಡುವುದನ್ನು 'ಸಾಧನೆ' ಅನ್ನುತ್ತಾರೆ.
  • ರೂಪಾಯಿ ವಿರುದ್ಧ ಡಾಲರ್ ಬೆಲೆ ಹೆಚ್ಚು ಅನ್ನುವುದು ಇವರಿಗೆ 'ಖುಷಿ'ಯ ಸಂಗತಿ.
  • ತಾವು, ತಮ್ಮ ಬಂಧು ಹಾಗು ಸ್ನೇಹ ವರ್ಗದವರಿಗಿಂತ ಆರ್ಥಿಕವಾಗಿ ಹೆಚ್ಚು ಸಬಲರಾಗಿರಬೇಕು. ಇದನ್ನು ಇವರು 'ಯಶಸ್ಸು' ಅನ್ನುತ್ತಾರೆ.
  • ಸರ್ಕಾರಕ್ಕೆ ತೆರಿಗೆ ಕಟ್ಟುವುದಷ್ಟೇ ತಮ್ಮ 'ಸಾಮಾಜಿಕ ಜವಾಬ್ದಾರಿ' ಎಂದು ಇವರ ನಂಬಿಕೆ.
  • ಕಲಿತ ವಿದ್ಯೆಗಿಂತ ಗಳಿಸಿದ ಅಂಕ ಮುಖ್ಯ. ಇದನ್ನು ಇವರುಗಳು 'ಬುದ್ಧಿವಂತೆಕೆ' ಅನ್ನುತ್ತಾರೆ.
  • ಸತ್ಯ ಮಾತಾಡಿದರೆ 'ಆಧಿಕ ಪ್ರಸಂಗಿ'. ಪ್ರಶ್ನೆ ಕೇಳಿದರೆ 'ತಲೆಹರಟೆ' ಅನ್ನುತ್ತಾರೆ.
  • ಸಿನಿಮಾದಲ್ಲಿ ಆದ್ರೆ ಚಪ್ಪಾಳೆ ತಟ್ಟುತ್ತಾರೆ. ಜೀವನದಲ್ಲಿ ಆದ್ರೆ ತಲೆ ಮೇಲೆ ತಟ್ಟುತ್ತಾರೆ.
  • ನಾವು ಹೇಳಿದ್ದಷ್ಟನ್ನೇ ಮಕ್ಕಳು ಮಾಡಬೇಕು. ಮಕ್ಕಳಿಗೆ ಇಷ್ಟವಿರಲಿ ಬಿಡಲಿ. ಇವರ ಪ್ರಕಾರ ಇದು 'ವಿಧೇಯತೆ'.
  • ಮಾಡುವ ಎಲ್ಲ ಒಳ್ಳೆ ಕೆಲಸಗಳನ್ನು ಅವರು ಪ್ರೋತ್ಸಾಹಿಸುತ್ತಾರೆ ಎನ್ನುವುದು ಬರೀ 'ಭ್ರಮೆ'.
ಈ ಸಂಗತಿಗಳು ನಮ್ಮ ಮನೆಗಳಲ್ಲೇ ಢಾಳಾಢಾಳಾಗಿ ಕಾಣಿಸುತ್ತದೆ.
  • ಮಕ್ಕಳು ವಿದೇಶದಿಂದ ಡಾಲರ್ ಕಳಿಸುತ್ತಿದ್ದು, ರೂಪಾಯಿ ವಿರುದ್ಧ ಡಾಲರ್ ಬೆಲೆ ಹೆಚ್ಚಾದಷ್ಟು ತಮ್ಮ ಮನೆಯ ಖಜಾನೆ ತುಂಬುತ್ತದೆ. ಆದರೆ, ದೇಶಕ್ಕೆ ಇದರಿಂದಾಗುವ ನಷ್ಟದ ಬಗೆಗೆ ಯೋಚಿಸುವುದಿಲ್ಲ.
  • ತಮ್ಮ ಮಕ್ಕಳು ವಿದೇಶದಲ್ಲಿ ಇರುತ್ತಾರೆ, ಅವರ ಖರ್ಚಿನಲ್ಲಿ ತಂದೆ ತಾಯಂದಿರು ವಿದೇಶಕ್ಕೆ ಹೋಗಿ ಬರುತ್ತಾರೆ. ಅಲ್ಲಿಯದನ್ನು ಹೊಗಳುತ್ತ, ತಮ್ಮ ಮಕ್ಕಳ ಹೆಗ್ಗಳಿಗೆ ಬಗ್ಗೆ ಹೇಳಿಕೊಳ್ಳುತ್ತಾರೆ. ಆದರೆ, ಭಾರತವನ್ನು ಹೊರದೇಶದವರು ಹೊಗಳುವಂತೆ ಮಾಡಬೇಕು ಎಂದು ಯೋಚಿಸುವುದೇ ಇಲ್ಲ.
  • ಪ್ರತಿ ವರ್ಷ ತೆರಿಗೆ ಕಟ್ಟುತ್ತಾರೆ. ತೆರಿಗೆ ಹಣ ಸರಿಯಾಗಿ ವಿನಿಯೋಗ ಆಗದಿದ್ದರೆ ದೂರು ದಾಖಲಿಸುತ್ತಾರೆ. ಆದರೆ, ಆದಕ್ಕೆ ಪರಿಹಾರ ಮಾತ್ರ ಎಂದಿಗೂ ಯೋಚಿಸುವುದಿಲ್ಲ.
  • ದಾಯಾದಿ ಮತ್ಸರವಂತೂ ಭಾರತದಲ್ಲಿ ದ್ವಾಪರ ಯುಗದಿಂದಲೂ ಇದ್ದದ್ದೆ. ನನ್ನ ಆರ್ಥಿಕ ಮಟ್ಟ ನನ್ನ ದಾಯಾದಿಗಿಂತ ಹೆಚ್ಚಿರಬೇಕು. ಆದರೆ, ದೇಶದ ಆರ್ಥಿಕತೆ ಬಗೆಗೆ ಯೋಚನೆ ಮಾಡುವುದೇ ಇಲ್ಲ.
  • ಸಿನಿಮಾ ಒಂದರಲ್ಲಿ ನಾಯಕ ತ್ಯಾಗವೋ, ಪ್ರೀತಿಯೋ, ಸಾಧನೆಯೋ ಮಾಡಿದರೆ ಚಪ್ಪಾಳೆಯ ಸುರಿಮಳೆ. ಅದೇ ರೀತಿಯ ಸಾಧನೆ ಅಥವಾ ತ್ಯಾಗ ತಮ್ಮ ಮನೆಯಲ್ಲಿ ಆಗುವುದನ್ನು ಅರಗಿಸಿಕೊಳ್ಳುವುದಿಲ್ಲ. ದೇಶದ ಏಳಿಗೆಗಾಗಿ ಮನೆ ಮನೆಯಲ್ಲಿ ಭಗತ್ ಸಿಂಗ್ ತರಹದವರು ಹುಟ್ಟಿ ಬರಲಿ. ಆದರೆ, ನಮ್ಮ ಮನೆಯಲ್ಲಲ್ಲ, ಪಕ್ಕದ ಮನೆಯಲ್ಲಿ ಎಂಬ ಧೋರಣೆ.
  • ಸತ್ಯಮೇವ ಜಯತೆ ಅನ್ನುತ್ತಾರೆ. ಅದರೊಟ್ಟಿಗೆ 'ಸಾವಿರ ಸುಳ್ಳು ಹೇಳಿ ಮದುವೆ ಮಾಡು' ಅಂತಲೂ ಹೇಳುತ್ತಾರೆ. ಯಾಕೆ ಹೀಗೆ? ಎಂದು ಕೇಳಿದರೆ ಆತ, 'ತಲೆಹರಟೆ'.
  • ಅಪ್ಪ ಅಮ್ಮ ಹೇಳಿದ್ದನ್ನು ಮಕ್ಕಳು ಪಾಲಿಸಬೇಕು. ಹೌದು, ಮಕ್ಕಳ ಒಳಿತಿಗಾಗಿ ತಂದೆ ತಾಯಿ ಹೇಳಿದ್ದನ್ನು ಮಕ್ಕಳು ಕೇಳಬೇಕು. ಅದೇ ಮಕ್ಕಳು, ತಂದೆ ತಾಯಿ ಹೇಳದ, ಸಮಾಜದ ಕೆಲಸವನ್ನು ಮಾಡಿದರೆ, ಅವರನ್ನು 'ಅಧಿಕ ಪ್ರಸಂಗಿ' ಎನ್ನುತ್ತಾರೆ.
  • ಶಿಕ್ಷಣ ಪದ್ಧತಿಯಂತೂ ಆಂಗ್ಲರನ್ನೇ ಪಾಲಿಸುತ್ತಿದ್ದೇವೆ. ಯೂರೋಪಿನಲ್ಲಿ ವರ್ಷದಲ್ಲಿ 9 ತಿಂಗಳು ಚಳಿ. ಅದಕ್ಕಾಗಿ ಅಲ್ಲಿ ಬ್ಲೇಜ಼ರ್, ಟೈ ಕಟ್ಟಿರುತ್ತಾರೆ. ನಮ್ಮಲ್ಲಿ ಬೇಸಿಗೆ 40 ಡಿಗ್ರಿ ತನಕ ತಲುಪುತ್ತದೆ. ಆದರೂ ಎಂ.ಬಿ.ಎ ವಿದ್ಯಾರ್ಥಿಗಳು ಬ್ಲೇಜ಼ರ್ ಹಾಕಬೇಕು, ಟೈ ಕಟ್ಟಬೇಕು.
  • ಯಾರಾದರು ಕೆಟ್ಟದಾಗಿ ಮಾತಾಡಿದರೆ, ನಮ್ಮಲ್ಲಿ 'ಸಂಸ್ಕೃತ' ಮಾತಾಡುತ್ತಿದ್ದೀಯ ಎನ್ನುವವರನ್ನು ನೋಡಿದ್ದೇವೆ. ಸಂಸ್ಕೃತ; ದೇವಭಾಷೆ, ಭಾರತದ ಸಂಸ್ಕೃತಿಯ ಪ್ರತೀಕ ಎಂಬುದನ್ನು ಮರೆತೆ ಹೋದಂತಿದೆ.
  • ಇಂಗ್ಲೀಷ್ ಮಾತಾಡುವುದು ಎಂದರೆ ಹೆಮ್ಮೆಯ ಸಂಗತಿ. ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಮಕ್ಕಳ ಬಾಯಲ್ಲಿ ಕನ್ನಡ ಕೇಳುವುದೇ ಅಪರೂಪವಾಗಿದೆ. ಹ್ಯಾರಿ ಪಾಟರ್ ನ ಕರ್ತೃ ಜೇ.ಕೆ. ರೌಲಿಂಗ್ ಗೊತ್ತು, ಕುಮಾರವ್ಯಾಸ, ಪಂಪ, ರನ್ನ, ಲಕ್ಷ್ಮೀಶ ಗೊತ್ತಿಲ್ಲ.
  • ತಮ್ಮ ಮಕ್ಕಳು, ಸ್ನೇಹಿತರೊಂದಿಗೆ ಸಿನಿಮಾಗೆ ಹೋಗುವುದನ್ನು ಒಪ್ಪುತ್ತಾರೆ. ಆದರೆ, ಅದೇ ಮಗು ಆಶ್ರಮಕ್ಕೆ (ರಾಮಕೃಷ್ಣ ಆಶ್ರಮ, ಆರ್ಟ್ ಆಫ಼್ ಲಿವಿಂಗ್) ಹೋಗುವುದನ್ನು ಸಹಿಸುವುದಿಲ್ಲ.
  • ಲಂಡನಿನಲ್ಲಿ ಶೇಕ್ಸ್ಪಿಯರ್ ನ ಸಮಾಧಿಯನ್ನು ಪ್ರವಾಸದ ಒಂದು ಭಾಗವಾಗಿ ಹೆಮ್ಮೆಯಿಂದ ತೋರಿಸುತ್ತಾರೆ. ಆದರೆ, ನಮ್ಮಲ್ಲಿ, ಕುಮಾರವ್ಯಾಸ 'ಕರ್ನಾಟ ಭಾರತ ಕಥಾಮಂಜರಿ' ಯನ್ನು ಕೂತು ಬರೆದ ಗದಗಿನ ವೀರನಾರಾಯಣ ದೇವಾಲಯವನ್ನು ಹಲವರು ನೋಡಿಯೇ ಇಲ್ಲ ಎಂಬುದು ಬೇಸರದ ಸಂಗತಿ.
ಈ ಎರಡೂ ತಲೆಮಾರು ನಡುವಿನ ವ್ಯತ್ಯಾಸಗಳು ಇಂತಿವೆ:
  • ಮೊದಲನೇ ತಲೆಮಾರಿನವರು ತಂದೆ ತಾಯಿಯರ ಬಗ್ಗೆ ಭಯ ಭಕ್ತಿ ಇಟ್ಟು ಕೊಂಡಿದ್ದರು. ಎರಡನೇ ತಲೆಮಾರಿನವರಿಗೆ ಭಕ್ತಿ ಇದೆ. ಆದರೆ, ಭಯ ಬಹುತೇಕ ಕಮ್ಮಿಯಾಗಿದೆ.
  • ಸ್ವಂತಕ್ಕಿಂತಲೂ ಹೆಚ್ಚಾಗಿ ಸಮಾಜಕ್ಕಾಗಿ ಕೆಲಸ ಮಾಡುವ ಮನಸ್ಥಿತಿ ಎರಡನೇ ಪೀಳಿಗೆಯವರಲ್ಲಿ ಹೆಚ್ಚಾಗಿದೆ.
  • ವಿದೇಶಿ ವ್ಯಾಮೋಹದ ಕಾರಣ ಈ ದಿನಗಳಲ್ಲಿ ವೃದ್ಧಾಶ್ರಮಗಳು ಹೆಚ್ಚಾಗಿವೆ.
  • ಎರಡನೇ ಪೀಳಿಗೆಯವರು ಅಂತರ್ಜಾಲದ ಮೂಲಕ ಜಗತ್ತಿನೊಂದಿಗೆ ಸಂಪರ್ಕ ಹೊಂದಿರುತ್ತಾರೆ. ಮೊದಲಿನ ಪೀಳಿಗೆಯವರು ಮನಸ್ಸಿನ ಮೂಲಕ ಸಂಬಂಧಿಕರು, ಸ್ನೇಹಿತರೊಂದಿಗೆ ಸಂಬಂಧ ಗಟ್ಟಿಯಾಗಿಸಿಕೊಂಡ್ಡಿದ್ದರು.
ಈ ವ್ಯತ್ಯಾಸ ಮತ್ತು ಸಾಮ್ಯತೆಗಳನ್ನು ಗಮನಿಸಿದರೆ ನಾವಿನ್ನು ಆಂಗ್ಲರ ಪ್ರಭಾವದಿಂದ ಸಂಪೂರ್ಣ ಹೊರಬಂದಿಲ್ಲ ಎಂದೇ ತೋರುತ್ತದೆ. ಇಂದಿಗೂ ನಾವು, ಪ್ರತಿಯೊಂದು ಸಮಸ್ಯೆಗೂ ಸರ್ಕಾರ ಪರಿಹಾರ ಕೊಡಬೇಕು ಎಂದು ನಿರೀಕ್ಷಿಸುತ್ತೇವೆ ಹೊರತು, ನಾವೇನಾದರೂ ಮಾಡಬಹುದ? ಎಂಬ ಯೋಚನೆ ಮಾಡುವುದಿಲ್ಲ. ನಮ್ಮ ಬಗ್ಗೆ, ನಮ್ಮ ಮನೆಯ ಬಗ್ಗೆ ಯೋಚಿಸಿದಷ್ಟು ಮುಖ್ಯವಾಗಿ, ಮುಕ್ತವಾಗಿ ನಮ್ಮ ಸಮಾಜದ ಬಗೆಗೆ ಚಿಂತಿಸುತ್ತಿಲ್ಲ. ಇವೆಲ್ಲವೂ ಮೆಕಾಲೆ ಅರ್ಥಾತ್ ಆಂಗ್ಲರು ತಂದ ಶಿಕ್ಷಣ ಪದ್ದತಿಯ ಪ್ರಭಾವ. ಆತನೇ ಹೇಳಿಕೊಂಡಂತೆ ನಾವು ನಮ್ಮ ತನವನ್ನು ಮರೆತು ಆಂಗ್ಲರನ್ನು ಅನುಸರಿಸುತ್ತಿದ್ದೇವೆ. ನಮ್ಮ ಶಿಕ್ಷಣ ಪದ್ಧತಿ, ಭಾರತೀಯ ಪದ್ಧತಿಯಲ್ಲಿ ನಡೆಯುವಂತಾಗಬೇಕು. ಜಗತ್ತನ್ನು ಅರಿಯುವ ಮೊದಲು ನಮ್ಮ ದೇಶವನ್ನು ನಾವು ಅರಿಯುವಂತಾಗಬೇಕು. ನನಗಾಗಿ ಬದುಕುತ್ತೇನೆ ಎನ್ನುವುದಕ್ಕಿಂತ ದೇಶಕ್ಕಾಗಿ ಬದುಕಬೇಕು ಎಂಬ ಭಾವನೆ ಮೂಡಬೇಕು. ಇಲ್ಲದಿದ್ದಲ್ಲಿ, ಸ್ವಾತಂತ್ರ್ಯ ನಂತರದ 3 ನೇ ಪೀಳಿಗೆ ಕೂಡ ಆಂಗ್ಲರನ್ನೇ ಅನುಕರಣೆ ಮಾಡುತ್ತಾ 'ಕಪ್ಪು ಚರ್ಮದ ಆಂಗ್ಲ'ರಾಗೇ ಮುಂದುವರೆಯುತ್ತೇವೆ. 

May 27, 2018

ನಾವ್ಯಾಕೆ ಹೀಗೆ...? - ಸಂಬಂಧಗಳು; ಬದುಕಿನ ಬಂಧನವೋ ? ಬೆಸುಗೆಯೋ ?

ಅದೊಂದು ಸಂಜೆ ಮನೆಯಲ್ಲಿ ಕೂತಿದ್ದೆ, ಆಗಸದಲ್ಲಿ ಕಪ್ಪನೆ ಮೋಡ ಕವಿದಿತ್ತು ಜೊತೆಗೆ ಜಿಟಿ ಜಿಟಿ ಮಳೆ. ಮನೆಯೊಳಗೆ ಕತ್ತೆಲೆ ಆವರಿಸುತ್ತಿತ್ತು ಆದರೂ, ಮಳೆಯಿಂದ ಮನಸ್ಸು ತಿಳಿಯಾಗಿತ್ತು. ಏನೇ ಹೇಳಿ ಆ ಮನಸ್ಸು ಎಂಬುದು ಮರ್ಕಟವೇ ಸರಿ. ಬೇಡವಾದದ್ದು, ಬೇಕಾದದ್ದು, ಕೆಲಸಕ್ಕೆ ಬಾರದಿದ್ದು, ಮತ್ತೊಂದು ಮಗದೊಂದು ಯೋಚನೆಗಳು ಬರುತ್ತಲೇ ಹೋದವು. ಕೊನೆಗೆ, ನಮ್ಮ ಸುತ್ತ ಮುತ್ತ ಇರುವ ವ್ಯಕ್ತಿತ್ವಗಳ ಸಂಬಂಧಗಳ ಬಗೆಗೆ ನನ್ನ ಯೋಚನ ಲಹರಿ ಹರಿಯಿತು. ಅಮ್ಮ, ಅಜ್ಜಿ, ಮಾವ, ಅತ್ತೆ, ಚಿಕ್ಕಪ್ಪ, ದೊಡ್ಡಪ್ಪ, ಅಣ್ಣ ತಮ್ಮಂದಿರು, ಅಕ್ಕ ತಂಗಿಯರು, ಅತ್ತಿಗೆ, ಭಾವ, ಬಾಳ ಸಂಗಾತಿ, ಸೋದರ ಸೋದರಿಯಂತಿರುವ ಸ್ನೇಹಿತರು ಮತ್ತು ಸ್ನೇಹಿತರು. ಅಬ್ಬ...!!! ಎಷ್ಟು ಸಂಬಂಧಗಳು, ಎಷ್ಟು ಭಾವನೆಗಳು. ಇವೆಲ್ಲ ಎಷ್ಟು ಗಟ್ಟಿಯಾಗಿ ಉಳಿಯತ್ತೆ ಅಥವಾ ಇಲ್ಲ ? ಯಾಕೆ, ಈ ದಿನಗಳಲ್ಲಿ ವಿಚ್ಚೇದನಗಳು ಜಾಸ್ತಿ? ಸ್ನೇಹಿತರ ನಡುವೆ ಮನಸ್ತಾಪ ಯಾಕೆ ? ಅನ್ನುವಲ್ಲಿಗೆ ನನ್ನ ಯೋಚನೆ ಹರಿಯಿತು. ನನಗೆ ತೋಚಿದ್ದು, ನಾನು ಕಂಡುಕೊಂಡಿದ್ದನ್ನು ಮುಂದಿಡುತ್ತಿದ್ದೇನೆ.
 
ಈ ವಿಚಾರವನ್ನು ಎರಡು ಸಂಬಂಧಗಳ ಉದಾಹರಣೆಯೊಂದಿಗೆ ವಿವರಿಸಲು ಪ್ರಯತ್ನಿಸುತ್ತೇನೆ.

೧. ಸ್ನೇಹ ಸಂಬಂಧ:
ನಮ್ಮ ಸಮಾಜದಲ್ಲಿ ಸಂಬಂಧಿಕರನ್ನು ಬಿಟ್ಟು ಮಿಕ್ಕ ಪರಿಚಯಸ್ತರನ್ನು ಸ್ನೇಹಿತರು ಎಂದು ಕರೆಯುವುದು ವಾಡಿಕೆ. ಕೆಲವರಿಗೆ ನಾವು ಹತ್ತಿರವಾಗುತ್ತೇವೆ್. ಈ ಹತ್ತಿರ ಆಗೋದಾದರೂ ಹೇಗೆ ಅನ್ನೋದು ನನ್ನ ಪ್ರಶ್ನೆ. ನಾನು ನೋಡಿರುವ ಮಟ್ಟಿಗೆ ನಮ್ಮ ಯೋಚನ ಲಹರಿ ಹೊಂದಾಣಿಕೆಯಾದರೆ, ಅವರಿಂದ ನಮಗೆ ಸಹಾಯವಾಗಿ ಕೃತಜ್ಞತೆ ಎಂದು, ಹೀಗೆ ಮತ್ಯಾವುದೋ ಸದುದ್ದೇಶದಿಂದಲೋ, ದುರುದ್ದೇಶದಿಂದಲೋ ನಮ್ಮಲ್ಲಿ ಸ್ನೇಹ ಸಂಬಂಧ ಬೆಳೆಯುತ್ತದೆ. ದುರುದ್ದೇಶವಿದ್ದಲ್ಲಿ ತಪ್ಪು ಎನ್ನುವುದು ಎಲ್ಲರಿಗೂ ತಿಳಿದಿರುವುದೇ ಮತ್ತು ಅಂತಹ ಸಂಬಂಧಗಳು ಅನೇಕ ದಿನಗಳು ಉಳಿಯುವುದಿಲ್ಲ ಅನ್ನುವುದು ಸತ್ಯ. ನನ್ನ ಚಿಂತನೆ ಇದರ ಕುರಿತಲ್ಲ. ಸ್ನೇಹದ ಮೂಲ ವ್ಯಾಖ್ಯಾನದ ಕುರಿತು.

 "A friend is one who accepts as you are" - "ನಮ್ಮನ್ನು ನಾವಿರುವ ಹಾಗೆ ಒಪ್ಪಿಕೊಳ್ಳುವವರೇ ಸ್ನೇಹಿತರು". ಈ ವ್ಯಾಖ್ಯಾನ ನನಗೆ ತುಂಬ ಹಿಡಿಸಿತು. ಈ ರೀತಿ ಸ್ನೇಹ ಸಂಬಂಧ ಬೆಳೆಯುವುದು ಸಾಧ್ಯವಾ ? ಇದಕ್ಕೆ ಉತ್ತರ ಹುಡುಕೋದು ಸ್ವಲ್ಪ ಕಷ್ಟವೇ ಆಯಿತು. ನನಗೆ ತಿಳಿದಿರುವ ಪುರಾಣದ ಕಥೆಯ ಮೂಲಕ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನ ಪಟ್ಟೆ.
  • ದುರ್ಯೋಧನನಿಗೆ ಅರ್ಜುನನ್ನು ಎದುರಿಸುವ ಒಂದು ಶಕ್ತಿ ಬೇಕಿತ್ತು. ಅದ್ದರಿಂದ, ಕರ್ಣನಿಗೆ ಆಶ್ರಯ ಕೊಟ್ಟ. ಇನ್ನು ಕರ್ಣ ಕೃತಜ್ಞತ ಭಾವದಿಂದ ಅವನೊಟ್ಟಿಗೆ ಇದ್ದ ಅನ್ನೋದು ಸತ್ಯ. ದುರ್ಯೋಧನ ಆಶ್ರಯ ಕೊಡದೆ ಇದ್ದಿದ್ದರೆ ಅವರಿಬ್ಬರಲ್ಲಿ ಅಂತಹ ಒಂದು ಬಾಂಧವ್ಯ ಇರುತ್ತಿತ್ತು ಎಂದು ನನಗಂತು ಅನ್ನಿಸುವುದಿಲ್ಲ.
  • ಅದೇ ರೀತಿ ದ್ರೋಣ ಮತ್ತು ದೃಪದನ ಸ್ನೇಹ. ದೃಪದ ಅರ್ಧ ರಾಜ್ಯ ಕೊಡುತ್ತಾನೆ ಎಂಬ ಕಾರಣಕ್ಕೆ ದ್ರೋಣ ಅವನ ಸ್ನೇಹ ಉಳಿಸಿಕೊಂಡಿದ್ದ. ಯಾವಾಗ ದೃಪದ, ರಾಜ್ಯ ಕೊಡಲ್ಲ ಅನ್ನುತ್ತಾನೊ ಆಗ ಅವರ ಸ್ನೇಹ ಶಾಶ್ವತವಾಗಿ ಮುರಿದು ಬೀಳುತ್ತದೆ. ವೈರಿಗಳು ಆಗಿಬಿಡುತ್ತಾರೆ. ಇದು ದುರುದ್ದೇಶದ ಸ್ನೇಹ ಸಂಬಂಧಕ್ಕೆ ಒಂದು ಉದಾಹರಣೆ.
  • ಹಾಗೆ ನೋಡಿದರೆ, ಅದೇ ಮಹಾಭಾರತದಲ್ಲಿ ಕೃಷ್ಣ ಮತ್ತು ಸುಧಾಮನ ಸ್ನೇಹ ಆದರ್ಶಪ್ರಾಯವಾದದ್ದು ಅನ್ನಿಸುತ್ತದೆ. ಇಬ್ಬರೂ ಒಟ್ಟಿಗೆ ಓದುತ್ತಿದ್ದವರು ಹೌದು. ಆದರೆ ಇಬ್ಬರಲ್ಲೂ ಪರಸ್ಪರ ಯಾವ ನಿರೀಕ್ಷಣೆ ಇರಲಿಲ್ಲ. ಸುಧಾಮನ ಬಡತನ ಕೃಷ್ಣನ ಸ್ನೇಹಕ್ಕೆ ತಡೆಗೋಡೆ ಅನ್ನಿಸಲಿಲ್ಲ. ಕೃಷ್ಣ ಶ್ರೀಮಂತ, ಅವನಿಂದ ಏನಾದರು ಸಿಗುತ್ತದೆ ಎಂಬ ಉದ್ದೇಶ ಸುಧಾಮನಿಗೆ ಇತ್ತು ಅಂತ ನನಗನ್ನಿಸುವುದಿಲ್ಲ.
ಆದರೆ, ನಮ್ಮ ಸಮಾಜ ಸ್ನೇಹ ಎಂದರೆ ಕರ್ಣ, ದುರ್ಯೋಧನ ಆದರ್ಶ ಎನ್ನುವುದುಂಟು. ಹಾಗಾದರೆ ಅದರರ್ಥ ಏನು ? ನಾವು ಸ್ನೇಹವನ್ನು ಲಾಭ, ಸಹಾಯ ಮತ್ತು ಕೃತಜ್ಞತೆಯ ತಳಹದಿ ಮೇಲೆ ಕಟ್ಟುತ್ತೇವೆ ಮತ್ತು ಅದಕ್ಕೆ ಬೆಲೆ ಕೊಡುತ್ತೇವೆ ಅಂತಾಗುತ್ತದೆ. ಅದು ಸರಿಯೋ ತಪ್ಪೋ ಅನ್ನುವುದಕ್ಕಿಂತ ಅಂತಹ ಸ್ನೇಹ ಸಂಬಂಧ ಎಷ್ಟು ದಿವಸ ಜೀವಂತವಾಗಿರುತ್ತದೆ ಎಂಬುದು ನನ್ನ ಕಾಳಜಿ.

೨. ಪ್ರೇಮ, ಪ್ರೀತಿ, ಜೀವನ ಸಂಗಾತಿ:
ನಮ್ಮ ಬಾಳಲ್ಲಿ ಜೀವನ ಸಂಗಾತಿ ಸಿಗಬೇಕು ಅನ್ನೋ ಕಾರಣಕ್ಕೆ ನಾವುಗಳು ನಾನಾ ರೀತಿ ಪ್ರಯತ್ನಗಳನ್ನು ಮಾಡುತ್ತೇವೆ. ಅರೇಂಜ್ ಮದುವೆ ಅಥವಾ ಪ್ರೇಮ ವಿವಾಹ ಎಂಬ ಪದ್ಧತಿಗಳ ಮೂಲಕ. ಇವೆರಡರ ಪದ್ಧತಿಗಳನ್ನು ತುಲನೆ ಮಾಡುವ ಉದ್ದೇಶ ಈಗಿಲ್ಲ.

"ಅವರೊಂದಿಗಿನ ಹೊಂದಾಣಿಕೆ ಇದೆಯಾ ಇಲ್ಲವ ? ನನ್ನ ಜೀವನ ಶೈಲಿಗೆ ಅವರು ಹೊಂದಿಕೊಂಡು ಹೋಗುತ್ತಾರ ? ಅವರ ಅಭ್ಯಾಸ, ಹವ್ಯಾಸಗಳು ನನ್ನ ಅಭಿರುಚಿಗೆ ತಕ್ಕಂತೆ ಇದೆಯಾ ? ಅವರ ಸಂಪಾದನೆ ಚೆನ್ನಾಗಿದ್ದಿಯ ? ಒಳ್ಳೆ ಕಡೆ ಕೆಲಸ ಇದಿಯಾ? ಹುಡುಗನಿಗೆ ಅಪ್ಪ ಅಮ್ಮ ಇದ್ದಾರ ? ಹುಡುಗಿಗೆ ಅಣ್ಣ ತಮ್ಮ ಇಲ್ಲವಾದರೆ ಅವರ ತಂದೆ ತಾಯಿಯ ಜವಾಬ್ದಾರಿ ನಮ್ಮ ಮೇಲೆ ಬರುತ್ತದೆ ಎಂಬ ದೂರಾಲೋಚನೆ". ಯಾರನ್ನಾದರೂ ಸಂಗಾತಿ ಎಂದು ಒಪ್ಪಿಕೊಳ್ಳಬೇಕಾದರೆ ಈ ರೀತಿಯ ಪ್ರಶ್ನೆಗಳು, ಆಲೋಚನೆಗಳು ಬರುವುದು ಸಹಜ. ಅರೇಂಜ್ ಮದುವೆಗಳಲ್ಲಿ ಅಪ್ಪ ಅಮ್ಮಂದಿರು ಈ ರೀತಿ ಯೋಚಿಸುತ್ತಾರೆ, ಪ್ರೇಮ ವಿವಾಹದಲ್ಲಿ ನಮ್ಮ ಮನಸ್ಸಿನಲ್ಲಿ ಈ ರೀತಿ ಯೋಚನೆ ಬರುತ್ತದೆ. ಇದು ನನ್ನ ಜ್ಞಾನದ ಮಿತಿಯಲ್ಲಿ ಸಮಾಜವನ್ನು ಅರಿತುಕೊಂಡಿರುವ ರೀತಿ. ಇದು ತಪ್ಪು ಇರಬಹುದು ಮತ್ತೂ ಎಲ್ಲರೂ ಹೀಗೆ ಅಂತಲೂ ನನ್ನ ಅಭಿಪ್ರಾಯವಲ್ಲ.

"ನಾನಿನಗೋಸ್ಕರ" ಅನ್ನುವ ತ್ಯಾಗದ ಕಲ್ಪನೆ ಬದಲು "ನೀನನಗೋಸ್ಕರ" ಎಂಬ ಸ್ವಾರ್ಥ ನಮ್ಮ ಸಮಾಜದ ಒಳಹೊಕ್ಕಿದೆ. ಮದುವೆಗಾಗಿ ಹೆಣ್ಣು ಅಥವಾ ಗಂಡನ್ನು ನೋಡುವುದು ಅನ್ನುವುದೇ ಒಂದು ರೀತಿ ಸಹ್ಯವಾಗುವುದಿಲ್ಲ. ಯಾರೊಬ್ಬರನ್ನು ಏನಾದರೊಂದು ಕಾರಾಣದೊಂದಿಗೆ "ನೀವು ನನಗೆ ಒಪ್ಪಿಗೆ ಆಗಿಲ್ಲ" ಅನ್ನುವುದಾದರೂ ಹೇಗೆ ? ಯಾರನ್ನಾದರು ಒಪ್ಪಲು ಅಥವಾ ತಿರಸ್ಕರಿಸಲು ನಾವ್ಯಾರು ? ನಮಗೇನಿದೆ ಹಕ್ಕು ? ಒಬ್ಬರನ್ನು ಒಪ್ಪಲಿಲ್ಲ ಎಂಬ ಕಾರಣಕ್ಕೆ ಮತ್ತೊಬ್ಬರನ್ನು ನೋಡುವುದು ಹೇಗೆ ಸಹ್ಯವಾಗುತ್ತದೆ ಈ ಸಮಾಜಕ್ಕೆ ? ನಾವು ಬಟ್ಟೆ ಖರೀದಿ ಮಾಡಲಿಕ್ಕೆ ಒಂದು ಅಂಗಡಿಗೆ ಹೋಗುತ್ತೇವೆ. ಅಲ್ಲಿ ನಮಗೆ ಬಟ್ಟೆಗಳು ಹಿಡಿಸಲಿಲ್ಲವೆಂದರೆ ಮತ್ತೊಂದು ಅಂಗಡಿಗೆ ಹೋಗುತ್ತೇವೆ. ಎರಡಕ್ಕೂ ಏನು ವ್ಯತ್ಯಾಸವೇ ಕಾಣಿಸುತ್ತಿಲ್ಲ ಮತ್ತು ಸಹ್ಯವೂ ಆಗಿತ್ತಿಲ್ಲ ನನ್ನ ಅಲ್ಪ ಮತಿಗೆ.

ಸಂಗಾತಿಯೇ ಆಗಲಿ, ಸ್ನೇಹಿತರೇ ಆಗಲಿ, ಮತ್ಯಾವುದೇ ಸಂಭಂದವಾಗಲಿ, ಯಾವುದರ ತಳಹದಿಯ ಮೇಲೂ ನಿಲ್ಲಬಾರದು. ಬದಲಾಗಿ ಪ್ರೀತಿ, ಸ್ನೇಹವೇ ನಮ್ಮ ಬದುಕಿನ ತಳಹದಿಯಾಗಬೇಕು. ಪ್ರೀತಿ, ಪ್ರೇಮ, ಮಮತೆ, ಸ್ನೇಹ ತನ್ನಷ್ಟಕ್ಕೆ ತಾನೆ ಆಗಬೇಕು. ನಾವು ಪ್ರಯತ್ನ ಪೂರಕವಾಗಿ ಮಾಡುವಂತಾಗಬಾರದು. ಮಾಡುವುದನ್ನು ಕೆಲಸ ಅನ್ನುತ್ತಾರೆ, ತನ್ನಷ್ಟಕ್ಕೆ ತಾನೆ ಸಹಜವಾಗಿ ಆಗುವುದನ್ನು ಭಾವನೆ ಅನ್ನುತ್ತಾರೆ. ಬದುಕಿನ ಸಂಬಂಧಗಳು ಸಹಜತೆಯಿಂದ ಕೂಡಿರಬೇಕು. ಸ್ವಾರ್ಥದ ನಿರೀಕ್ಷಣೆಯ ತಳಹದಿಯ ಮೇಲೆ ಬೆಳೆಸಬಾರದು. "ಅಮ್ಮ" ಎಂದರೆ ಪ್ರೀತಿ, ಮಮತೆ, ಕರುಣೆ, ವಾತ್ಸಲ್ಯ, ಕೋಪ, ದುಃಖ, ಅಳು, ನಗು ಸಹಜವಾಗಿ ವ್ಯಕ್ತವಾಗುತ್ತದೆ, ಯಾರು ಕೂಡ ಪ್ರಯತ್ನ ಪೂರಕವಾಗಿ ಪ್ರೀತಿ ತೋರುವುದಿಲ್ಲ. ಹೀಗೆ ಪ್ರತಿಯೊಂದು ಸಂಬಂಧದಲ್ಲೂ ಭಾವನೆಗಳು ಸಹಜವಾಗಿ ವ್ಯಕ್ತವಾಗಬೇಕು. ಪ್ರಯತ್ನಪೂರಕವಾಗಿ, ಸ್ವಾರ್ಥದ ನಿರೀಕ್ಷಣೆಗಳೊಂದಿಗೆ ತೋರ್ಪಡಿಕೆಯಾಗಬಾರದು. ಸಂಬಂಧಗಳು ಬದುಕಿನ ಬಂಧನ ಆಗಬಾರದು ಅದು ಬದುಕಿನ ಬೆಸುಗೆ ಆಗಬೇಕು. ಬದುಕಿನ ಸಾರ್ಥಕತೆ ಅಡಗಿರುವುದೇ ಸಹಜತೆಯಲ್ಲಿ.

April 30, 2018

ಸ್ವೀಡನ್ - ಇದು ಒಂದು ವಾರದ ಕಥೆ

ಈ ಸಲ ನನ್ನ ಸಾಗರದಾಚೆಗಿನ ಪ್ರಯಾಣ ಯೂರೋಪಿನ ಮತ್ತೊಂದು ರಾಷ್ಟ್ರವಾದ ಸ್ವೀಡನ್ ಕಡೆಗಿತ್ತು. ಇಲ್ಲಿಂದ ಆಮ್ಸ್ಟರ್ಡಾಮ್ ಮತ್ತು ಅಲ್ಲಿಂದ ಸ್ವೀಡನ್ ಗೆ ಹೋಗಬೇಕಿತ್ತು. ನಾನು ಸರಿಯಾದ ಸಮಯಕ್ಕೆ ವಿಮಾನವನ್ನು ಹಿಡಿದು ಸ್ವೀಡನ್ ತಲುಪಿದೆ, ಆದರೆ ನನ್ನ ಲಗೇಜ್ ಬರುವುದು ತಡವಾಯಿತು. ಸ್ವೀಡನ್ ಅಲ್ಲಿ ನಾನು ಇಳಿಯುತ್ತಿದ್ದಂತೆ ನನ್ನ ಲಗೇಜ್ ತಡವಾಗಿರುವ ಕುರಿತು ನನಗೆ ಸಂದೇಶ ತಲುಪಿತು. ವಿಮಾನ ನಿಲ್ದಾಣದಲ್ಲೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿ ನಾನು ಹೋಟೆಲಿಗೆ ಬಂದೆ. ನನ್ನ ಲಗೇಜ್ ರಾತ್ರಿ ಬಂದು ತಲುಪಿತು.

ಈ ದೇಶದಲ್ಲಿ ನನ್ನ ಗಮನಕ್ಕೆ ಬಂದ ಕೆಲವು ವಿಚಾರಗಳನ್ನು ತಿಳಿಸಲು ಇಚ್ಚಿಸುತ್ತೇನೆ.

೧. ಹೋದ ದಿವಸದ ಸಂಜೆ ನಾನು ನನ್ನ ಸಹೋದ್ಯೋಗಿ ಹೊರಗೆ ತಿರುಗಾಡಲು ಹೋದೆವು. ಅಲ್ಲಿನ ತಾಪಮಾನ ೭-೮ ಡಿ.ಸೇ ಅಷ್ಟು ಇತ್ತು. ನನ್ನ ಸಹೋದ್ಯೋಗಿ ಟೋಪಿ, ಜರ್ಕಿನ್ ಮುಂತಾದ ಉಣ್ಣೆಯ ಬಟ್ಟೆಯನ್ನು ತೊಟ್ಟಿದ್ದರು. ನನ್ನ ಲಗೇಜ್ ಬಂದಿಲ್ಲದ ಕಾರಣ, ನಾನು ಯಾವುದೇ ಉಣ್ಣೆ ಬಟ್ಟೆ ಇಲ್ಲದೆ ಹೋದೆ. ಆ ಚಳಿಗೆ ಹೊಂದಿಕೊಳ್ಳಬೇಕಿತ್ತು, ಹೊಂದಿಕೊಂಡೆ. ಉಣ್ಣೆ ಬಟ್ಟೆ ಧರಿಸಿದ್ದ ನನ್ನ ಸಹೊದ್ಯೋಗಿ ನನ್ನನ್ನು ನೋಡಿಯೇ ಚಳಿ ಅನ್ನುತ್ತಿದ್ದರು. ಆಗ ನನಗೆ ಅನ್ನಿಸಿತು, ನಮಗೆ ಅವಕಾಶ ಇದ್ದಲ್ಲಿ ನಾವು ಕಷ್ಟಗಳನ್ನು ಬರದಂತೆ ತಡೆಯುತ್ತೇವೆ. ಆದರೆ ಏನು ಮಾಡಲಾಗದೆ ಕಷ್ಟಗಳು ಬಂದಾಗ ನಮ್ಮನ್ನು ನಾವು ಗಟ್ಟಿ ಮಾಡಿಕೊಂಡು ಅದನ್ನು ಎದುರಿಸಿ ನಿಲ್ಲಬೇಕು. ಅಲ್ಲಿ ನನ್ನ ಸಹೋದ್ಯೋಗಿ ನನಗೆ ಹೇಳಿದ ಮಾತು ಇನ್ನು ನೆನಪಿದೆ - 'You should respect the bad whether'. ಆದರೆ, ನನ್ನ ಮನಸ್ಥಿತಿ ಬೇರೆನೇ ಇತ್ತು. ಚಳಿಯನ್ನು ನಾನು ಎದುರಿಸಿ ನಿಲ್ಲುತ್ತೇನೆ ಹೊರತು ಅದಕ್ಕೆ ನಾನು ಬಗ್ಗುವುದಿಲ್ಲ ಎಂದು. ಈ ರೀತಿಯ ಮನಸ್ಥಿತಿಗೆ ಕಾರಣ ನನಗನ್ನಿಸಿದ್ದು 'ಭಗವದ್ಗೀತೆ' ಮತ್ತು ಸುಭಾಷ್ ಬೋಸರ ಮಾತು - 'ನಾವು ಪ್ರಕೃತಿಯನ್ನು ಗೆಲ್ಲಬೇಕಾದರೆ ಅದರ ವಿರುದ್ಧ ಹೋರಾಡುವುದನ್ನು ಕಲಿಯಬೇಕು'.




೨. ನಾನು ಉಳಿದುಕೊಂಡಿದ್ದ ಹೋಟೆಲಿನ ರೂಮಿನ ಕಪಾಟೊಂದರಲ್ಲಿ Bible - New Testament ನ ಒಂದು ಪ್ರತಿ ಇಟ್ಟಿದ್ದರು. ನನ್ನ ಸಹೊದ್ಯೋಗಿ ಕೋಣೆಯಲ್ಲೂ ಸಹ ಅದರ ಪ್ರತಿಯನ್ನು ಕಂಡೆ. ಜರ್ಮನಿಯಿಂದ ಮತ್ತೋರ್ವ ಸಹೋದ್ಯೋಗಿ ಮತ್ತೊಂದು ಹೋಟೆಲಿನಲ್ಲಿ ಉಳಿದುಕೊಂಡಿದ್ದ. ಅವನನ್ನು ವಿಚಾರಿಸಿದಾಗ ಅವನ ಕೋಣೆಯಲ್ಲೂ ಬೈಬಲ್ಲಿನ ಪ್ರತಿ ಇದ್ದದ್ದು ಸ್ಪಷ್ಟವಾಯಿತು. ಇದು ಅಲ್ಲಿನ ಜನ ತಮ್ಮ ಮತ ಪ್ರಚಾರ ಮಾಡುವ ಒಂದು ಪ್ರಕ್ರಿಯೆ. ತಮ್ಮ ದೇಶಕ್ಕೆ ಬರುವವರು ಯಾರೇ ಆಗಿರಲಿ, ತಮ್ಮ ಮತದ ಪ್ರಚಾರ ಆಗಬೇಕು ಎಂಬ ಉದ್ದೇಶದಿಂದ ಮಾಡುವ ಪ್ರಕ್ರಿಯೆ ಇದು. ಅಲ್ಲಿನ ಜನ, ಸಾಮಾಜಿಕ ವ್ಯವಸ್ಥೆ ತಮ್ಮ ಮತ ಪ್ರಚಾರಕ್ಕೆ ಅಂತಾನೆ ತಮ್ಮ ಸಂಪಾದನೆಯ ಒಂದು ಭಾಗವನ್ನು ಮೀಸಲಿಡುತ್ತದೆ. ಇದನ್ನು ನಾವು (ಭಾರತೀಯರು, ಹಿಂದುಗಳು) ಹೇರಿಕೆ ದೃಷ್ಟಿಯಿಂದ ನೋಡುವುದರ ಬದಲು ನಮ್ಮಲ್ಲಿ ಈ ರೀತಿಯ ಪದ್ಧತಿ ಯಾಕೆ ಅಳವಡಿಸಿಕೊಳ್ಳಬಾದರು ಎಂಬ ಪ್ರಶ್ನೆ ನನ್ನನ್ನು ನಾನೆ ಕೇಳಿಕೊಂಡೆ. ತಕ್ಷಣ ಮನಸ್ಸಿಗೆ ಹೀಗನ್ನಿಸಿತು - 'ನಮ್ಮ ಮಕ್ಕಳಿಗೆ ನಮ್ಮ ಧರ್ಮವನ್ನೇ ಸರಿಯಾಗಿ ಕಲಿಸುತ್ತಿಲ್ಲ. ಇನ್ನು ಈ ರೀತಿ ಹಿಂದುಗಳು ಮಾಡಿದ್ದೆ ಆದರೆ, ಅಸಹಿಷ್ಣುತೆ ಮತ್ತು ಮಾಡುವುವರನ್ನು ಮೂರ್ಖರೆಂದು ಜರಿದು ಕೂರಿಸುತ್ತೇವೆ. ಇದು ನಮ್ಮ ದೌರ್ಭಾಗ್ಯ'.


೩. ಮತ್ತೊಂದು ಒಳ್ಳೆಯ ಸಾಮಾಜಿಕ ವ್ಯವಸ್ಥೆ ನಾನು ಗಮನಿಸಿದ್ದು ಎಂದರೆ 'ನಗದು ರಹಿತ ವ್ಯವಹಾರ (Cashless transaction)'. ನಾನು ಓಡಾಡಿದ ಅಷ್ಟೂ ಕಡೆ ಬಹುತೇಕ ಎಲ್ಲರೂ ಕಾರ್ಡ್ಗಳನ್ನು ಬಳಸುತ್ತಾರೆ. ಹಾಗೆಂದು ನಗದು ವ್ಯವಹಾರ ಇಲ್ಲ ಎಂದಲ್ಲ, ಆದರೆ ತೀರ ಕಡಿಮೆ. ಜರ್ಮನಿಯಲ್ಲೂ ಕಾರ್ಡ್ ವ್ಯವಹಾರವಿದೆ ಆದರೆ, ನಗದು ವ್ಯವಹಾರ ಸಹ ಅಷ್ಟೇ ಪ್ರಮಾಣದಲ್ಲಿ ಇದೆ. ಆದರಿಲ್ಲಿ ಶೇ ೯೯ರಷ್ಟು ನಗದು ರಹಿತ ವ್ಯವಹಾರ. ಅದೊಂದು ಸಂಜೆ ಆಫ಼ೀಸಿನ ಕೆಲಸ ಮುಗಿಸಿ, ರಾತ್ರಿ ಊಟಕ್ಕೆಂದು 'Vapiano' ಎಂಬ ರೆಸ್ಟುರಾಗೆ ಹೋದೆವು. ಸಾಮಾನ್ಯವಾಗಿ ಭಾರತದಲ್ಲಿ ನಾನು ಪಿಜ಼ಾ ತಿನ್ನುವುದಿಲ್ಲ, ಆದರೆ, ಅಲ್ಲಿ ನನಗೆ ಬೇರೆ ವಿಧಿ ಇರಲಿಲ್ಲ, ಆದ್ದರಿಂದ ತಿಂದೆ. ಅಲ್ಲಿನ ವಿಶೇಷ ಅಂದರೆ, ನಾವು ಆರ್ಡರ್ ಕೊಟ್ಟ ಮೇಲೆ ಒಂದು ಡಿಜಿಟಲ್ ದೀಪ ಕೊಡುತ್ತಾರೆ. ನಮ್ಮ ಆರ್ಡರ್ ತಯಾರಾದ ಮೇಲೆ ಆ ದೀಪ ಬೆಳಗುತ್ತದೆ, ನಾವು ಹೋಗಿ ಅದನ್ನು ಕೊಟ್ಟು ನಮ್ಮ ತಿಂಡಿಯನ್ನು ತರಬೇಕು. ಈ ವ್ಯವಸ್ಥೆ ಕೂಡ ಚೆನ್ನಾಗಿದೆ ಅನ್ನಿಸಿತು. ವಾಪಸ್ಸು ಹೊರಡುವ ಮುನ್ನ ಹಣದ ಪಾವತಿ ಮತ್ತೆ ಕಾರ್ಡ್ ಮುಖಾಂತರವೇ ಆಯಿತು.



೪. ಜರ್ಮನಿಯಲ್ಲಿ ರೈಲು ಪ್ರಮುಖ ಸಂಚಾರ ವ್ಯವಸ್ಥೆ ಮತ್ತು ಪ್ರತಿ ನಿಲ್ದಾಣದಲ್ಲೂ ಟಿಕೇಟ್ ಪಡೆಯುವ ಯಂತ್ರ ಇದೆ. ಇಲ್ಲಿ ಸಂಪೂರ್ಣ ಬಿನ್ನ. ಇಲ್ಲಿ ರೈಲು ಮತ್ತು ಬಸ್ಸು ಎರಡೂ ಪ್ರಮುಖ ಸಂಚಾರ ವ್ಯವಸ್ಥೆ. ಆದರೆ, ಟಿಕೇಟ್ ಪಡೆಯಲು ಮಾತ್ರ ಕೇಂದ್ರ ನಿಲ್ದಾಣಕ್ಕೆ (Central Station) ಹೋಗಬೇಕು. ಬಸ್ಸಿನಲ್ಲಾಗಲಿ, ರೈಲಿನಲ್ಲಾಗಲಿ ಟಿಕೇಟ್ ಕೊಳ್ಳಲು ಸಾಧ್ಯವಿಲ್ಲ. ಬಹುತೇಕ ಜನ ಬಸ್ ಹಾಗು ರೈಲಿನ ತಿಂಗಳ ಅಥವಾ ವಾರ್ಷಿಕ ಪಾಸ್ ಮಾಡಿಸಿರುತ್ತಾರೆ. ಈ ವಿಚಾರದಲ್ಲಿ ಜರ್ಮನಿ ಹೆಚ್ಚು ಅನುಕೂಲಕರವಾಗಿದೆ. ಇಲ್ಲಿನ ಟ್ಯಾಕ್ಸಿ ಚಾಲಕರು ಬಹುತೇಕ ಆಫ಼್ರಿಕದ ಉತ್ತರ ಭಾಗ ಮತ್ತು middle east ಪ್ರಾಂತ್ಯದವರಾಗಿದ್ದಾರೆ. ವಾಹನ ಚಲಿಸುವ ಪ್ರಕ್ರಿಯೆ ಬಗೆಗೆ ಹೇಳೋದಾದರೆ ಜರ್ಮನಿಯವರಷ್ಟು ಶಿಸ್ತು ಇವರಲ್ಲಿ ಇಲ್ಲ. ಟ್ಯಾಕ್ಸಿ ಚಾಲಕರು ಕೆಲವರು ನಿಯಮವನ್ನು ಮುರಿದದ್ದನ್ನು ಗಮನಿಸಿದೆ. ಶಿಸ್ತು ಎಂಬುದಕ್ಕೆ ಜರ್ಮನಿ ತಕ್ಕವಾದದ್ದು ಎಂಬುದಕ್ಕೆ ಸ್ವೀಡನ್ನಿನ ಪ್ರವಾಸದಿಂದ ಮತ್ತಷ್ಟು ಖಾತರಿಯಾಯಿತು.

೫. ಕೊನೆ ದಿವಸ ಕೆಲಸ ಮುಗಿದ ಮೇಲೆ ಮಧ್ಯಾಹ್ನ ಹೊರಗೆ ಸುತ್ತಾಡಿದೆವು. ವಾತಾವರಣವೂ ಆಹ್ಲಾದಕರವಾಗಿತ್ತು. ಅಲ್ಲಿದ್ದ ಉದ್ಯಾನಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಸುತ್ತಲು ಹಸಿರು, ನದಿ, ಆ ಜನಜಂಗುಳಿ ನಡುವೆ ಆ ಪ್ರಶಾಂತ ವಾತಾವರಣ ನನಗೆ ಬಹಳ ಹಿಡಿಸಿತು. ನಾನು ವಸಂತ ಋತುವಿನಲ್ಲಿ ಹೋಗಿದ್ದರೆ ಮರಗಳಲೆಲ್ಲ ಹೂ ಬಿಟ್ಟಿರುತ್ತಿತ್ತು. ಆದರೆ, ಈಗ ಮರಗಳೆಲ್ಲ ಬೋಳಾಗಿತ್ತು. ನಮ್ಮ ಕಾವೇರಿ ನದಿಯನ್ನು ನಾವು ಗಲೀಜು ಮಾಡಿದ್ದರೂ ತಿಳಿಯಾಗಿ ಕಾಣಿಸುತ್ತದೆ. ಅದರ ಸೌಂದರ್ಯ ನೋಡಿದವನೇ ಬಲ್ಲ. ಅದರೆ, ಸ್ವೀಡನ್ನಿನ ಜನ ಅದನ್ನು ಸ್ವಚ್ಚವಾಗಿ ಇಟ್ಟರೂ ನೀರು ತಿಳಿಯಾಗಿ ಮಾತ್ರ ಇರಲಿಲ್ಲ. ಏನಾದರು ಬರೆಯಬೇಕು ಅಂತ ಅನ್ನಿಸಿದರೂ ಬರೆಯಲು ಸ್ಪೂರ್ತಿ ಸಿಗಲಿಲ್ಲ. ಸೌಂದರ್ಯ ಎಂಬುದು ನೋಡುವ ಕಣ್ಣಲ್ಲಿ ಇದೆ, ಅದರ ಆಧಾರದ ಮೇಲೆ ಹೇಳುತ್ತಿದ್ದೇನೆ. ಲಕ್ಷಣದ ವಿಚಾರಕ್ಕೆ ಬಂದಾಗ ಭಾರತೀಯ ಹೆಣ್ಣು ಮಕ್ಕಳೇ ಸುಂದರಿಯರು, ಅಲ್ಲಿನ ಹೆಣ್ಣು ಮಕ್ಕಳಲ್ಲಿ ಅಂತಹ ಲಕ್ಷಣ, ಸೌಂದರ್ಯ ನನ್ನ ಕಣ್ಣಿಗೆ ಕಾಣಕಿಲ್ಲ. ನನ್ನ ಅನಿಸಿಕೆ ತಪ್ಪೂ ಇರಬಹುದು. ಬರೆಯಲು ಕೂತಾಗ ಪದಗಳು ಹೊರಹೊಮ್ಮದಿರಲು ಇದು ಒಂದು ಕಾರಣವಿರಬಹುದು.
 












 
 
 
 
 
 
 
 
 
 
 
 
 
 
 
 
 
 
ಹೀಗೆ ನನ್ನ ಒಂದು ವಾರದ ಸ್ವೀಡನ್ನಿನ ಪ್ರವಾಸ ಮುಗಿದಿತ್ತು. ಭಾರತಕ್ಕೆ ಬರುವಾಗ ಮನಸ್ಸು ತಿಳಿಯಾಗಿತ್ತು. ರಾಮಕೃಷ್ಣ ಆಶ್ರಮಕ್ಕೆ ಹೋಗಿ ಬಂದ ಮೇಲೆ ಖುಷಿಯಾಯಿತು.

April 4, 2018

ನಾವ್ಯಾಕೆ ಹೀಗೆ...? - ಅರೇಂಜ್ ಮ್ಯಾರೇಜ್ ಎಂಬ ಕಮ್ಯೂನಿಸ್ಟ್ ಸಿದ್ಧಾಂತ

ಭಾರತೀಯ ಸಮಾಜದಲ್ಲಿ ಮದುವೆಯಲ್ಲಿ ಎರಡು ವಿಧವಿದೆ. ಒಂದು ಪ್ರೇಮ ವಿವಾಹ ಮತ್ತೊಂದು ಅರೇಂಜ್ ವಿವಾಹ. ನೇರವಾಗಿ ಹೇಳೋದಾದರೆ, ಪ್ರೇಮ ವಿವಾಹವೆಂದರೆ ನಮಗೆ ಮೊದಲು ಪ್ರೇಮಾಂಕುರವಾಗುತ್ತದೆ, ನಂತರ ಅದು ಬಲಿತು ಒಬ್ಬರನ್ನೊಬ್ಬರು ಅರ್ಥೈಸಿಕೊಂಡು, ನಮ್ಮ ನಮ್ಮ ತಂದೆ, ತಾಯಿಯರನ್ನು ಒಪ್ಪಿಸಿ ಮದುವೆಯಾಗುವುದು. ಅರೇಂಜ್ ವಿವಾಹವೆಂದರೆ ನಮ್ಮ ತಂದೆ ತಾಯಿಯರು ನಮಗೆ ಸಂಗಾತಿಯನ್ನು ಹುಡುಕಿ, ನಮ್ಮ ಒಪ್ಪಿಗೆಯ ನಂತರ ಮದುವೆ ಮಾಡುವುದು.

ಎರಡರಲ್ಲೂ ಮೂಲಭೂತವಾಗಿ ಒಂದು ವ್ಯತ್ಯಾಸವಿದೆ. ಪ್ರೇಮ ವಿವಾಹದಲ್ಲಿ ನಮಗೆ ಮೊದಲು ಪ್ರೀತಿ ಹುಟ್ಟುತ್ತದೆ, ಪ್ರೇಮ ಸಹಜವಾಗಿ ಮೂಡುತ್ತದೆ, ಭಾವನೆ ತನ್ನಷ್ಟಕ್ಕೆ ತಾನೇ ಚಿಗುರೊಡೆಯುತ್ತದೆ, ಇಲ್ಲಿ ಬದ್ಧತೆ ಎಂಬುದು ತನಗೆ ತಾನೆ ಮೈಗೂಡುತ್ತದೆ. ಅದೇ ಅರೇಂಜ್ ವಿವಾಹವೆಂದರೆ ಪ್ರೀತಿ, ಪ್ರೇಮದ ಭಾವನೆಗಳು, ಬದ್ಧತೆ ಎಂಬುದೆಲ್ಲವೂ ನಮಗೆ ಬೇಕೋ ಬೇಡವೋ ಆದರೆ, ಮೈಗೂಡಿಸಿಕೊಳ್ಳಬೇಕಾಗುತ್ತದೆ. ಎಲ್ಲವೂ ಕರ್ತವ್ಯವಾಗಿ ಮಾರ್ಪಾಡಾಗುತ್ತದೆ. ನನ್ನ ಅನಿಸಿಕೆ ಪ್ರಕಾರ ಪ್ರೀತಿ ಪ್ರೇಮ ಎಂಬುದು ಸಹಜವಾಗಿರಬೇಕೇ ಪರಂತು ಹೇರಿಕೆಯಂತಾಗಬಾರದು.

Love Marriage vs Arranged Marriage

ಸಂತ ರಾಮತೀರ್ಥರ ಬದುಕಿನಲ್ಲಿ ಒಂದು ಘಟನೆಯ ಉಲ್ಲೇಖವಿದೆ. ರಾಮತೀರ್ಥರು ತಮ್ಮ ಆಧ್ಯಾತ್ಮಿಕ ಸಾಧನೆಗಾಗಿ ತಮ್ಮ ಕುಟುಂಬ, ಸ್ನೇಹಿತರು, ಶಿಷ್ಯಂದಿರನ್ನೆಲ್ಲ ಬಿಟ್ಟು ಹಿಮಾಲಯಕ್ಕೆ ಹೋಗುತ್ತಾರೆ. ತಮ್ಮ ಸಾಧನೆಯ ನಂತರ ಮರಳಿ ಬಂದಾಗ ಅವರ ಪತ್ನಿ - 'ನಿಮಗೆ ಇಷ್ಟು ದಿವಸ ನನ್ನ ಮತ್ತು ಮಕ್ಕಳ ನೆನಪಾಗಲಿಲ್ಲವೇ?' ಎಂಬ ಪ್ರಶ್ನೆ ಕೇಳುತ್ತಾರೆ. ಇದಕ್ಕೆ ರಾಮತೀರ್ಥರು ಅದ್ಭುತವಾಗಿ ಉತ್ತರಿಸುತ್ತಾರೆ - 'ನಿಮ್ಮನ್ನು ಮರೆತಿದ್ದರೆ ತಾನೆ ನೆನಪಿಸಿಕೊಳ್ಳೋದು. ನಿಮ್ಮ ಮೇಲಿನ ಪ್ರೀತಿ ಎಂಬುದು ಉಸಿರಾಟದ ಹಾಗೆ. ಅದು ಸಹಜವಾದ ಪ್ರಕ್ರಿಯೆ. ನಾನು ಉಸಿರಾಡುವುದನ್ನು, ಪ್ರೀತಿಸುವುದನ್ನು ಹೇಳಿಕೊಳ್ಳಬೇಕಿಲ್ಲ'. ಈ ಮಾತೇ ಪ್ರೇಮ ವಿವಾಹಕ್ಕೂ ಮತ್ತು ಅರೇಂಜ್ ವಿವಾಹಕ್ಕೂ ಇರುವ ವ್ಯತ್ಯಾಸವನ್ನು ಗುರುತಿಸಲು ನನಗೆ ಪ್ರೇರಣೆ. ಇಂದಿನ ಸಮಾಜದಲ್ಲಿ ನೈಜವಾದ ಪ್ರೀತಿ, ಪ್ರೇಮ ಇದೆಯಾ? ಎಂಬುದು ಪ್ರಶ್ನೆ. ಅದಿರಲಿ. ನಾನು ಹೇಳ ಹೊರಟಿರುವುದು ಈಗಿನ ಸಮಾಜದಲ್ಲಿ ಅರೇಂಜ್ ವಿವಾಹ ಎಂಬ ತತ್ವದ ಬಗ್ಗೆ. ಈ ತತ್ವದ ಕುರಿತು ಈಗಿನ ತಂದೆ ತಾಯಂದಿರ ನಡವಳಿಕೆಯ ಕುರಿತು ಹಲವು ಪ್ರಶ್ನೆಗಳು ಕಾಡುತ್ತಿದೆ, ಅದನ್ನು ಮುಂದಿಡುತ್ತಿದ್ದೇನೆ ಅಷ್ಟೇ. ಇದು ಯಾರ ವಿರುದ್ಧವೂ ಅಲ್ಲ, ಪರವೂ ಅಲ್ಲ.

ನಾನು ಗಮನಿಸಿದ ಹಾಗೆ ತಂದೆ, ತಾಯಂದಿರು ವಧು ವರರನ್ನು ಹುಡುಕುವ ಬಗೆಯನ್ನು ತಿಳಿಯ ಬಯಸುತ್ತೇನೆ. ಮೊದಲು ತಮ್ಮ ಸಂಬಂಧಿಕರು, ಸ್ನೇಹಿತರು ಮತ್ತು ಪರಿಚಯದವರಿಗೆ ವಿಚಾರವನ್ನು ತಿಳಿಸುತ್ತಾರೆ. ಅವರುಗಳ ನಡುವೆ ಯಾರಾದರು ತಮ್ಮ ಮಕ್ಕಳಿಗೆ ಹೊಂದುವವರು ಇದ್ದಾರ ಎಂದು ಹುಡುಕುತ್ತಾರೆ. ಇದು ಒಂದು ಹಂತ. ನಂತರದ ಹಂತವೇ ಅಂತರ್ಜಾಲದಲ್ಲಿ ಹುಡುಕಾಟ. ಮ್ಯಾಟ್ರಿಮೋನಿಯಲ್ ವೆಬ್ ಸೈಟ್ಗಳಲ್ಲಿ ತಮ್ಮ ಮಕ್ಕಳ ವಿವರಗಳೊಂದಿಗೆ ನೊಂದಾಯಿಸಿಕೊಳ್ಳೋದು. ಅವರವರ ಬೇಡಿಕೆಗೆ ತಕ್ಕಂತೆ ಕರೆಗಳು ಬರಲು ಶುರುವಾಗುತ್ತದೆ ತದನಂತರ ಮುಂದಿನ ಮಾತುಕಥೆ. ನನಗೆ ಇಲ್ಲಿ ಕಾಡುವ ಕೆಲವು ಪ್ರಶ್ನೆಗಳಿದೆ -

೧. ಮಕ್ಕಳು ಪ್ರೀತಿ ಮಾಡುತ್ತಿದ್ದೇನೆ ಎಂದ ತಕ್ಷಣ ತಂದೆ ತಾಯಂದಿರು ಸಹಜವಾಗಿ ಗಾಬರಿ ಬೀಳುತ್ತಾರೆ. ಕಾರಣವಿಷ್ಟೆ, ತಮ್ಮ ಮಗ (ಮಗಳು) ಪ್ರೀತಿಸಿದವರ ಮೇಲೆ ನಂಬಿಕೆಯ ಕೊರತೆ ಇರುತ್ತದೆ. ತಮ್ಮ ಮಕ್ಕಳ ಬಾಳು ಹಾಳಾಗಬಾರದು ಎಂಬ ಕಾಳಜಿ ಇರುತ್ತದೆ. ಆದರೆ, ಮ್ಯಾಟ್ರಿಮೋನಿಯಲ್ ಗಳನ್ನು ಅದ್ಯಾವ ಆಧಾರದ ಮೇಲೆ ನಂಬುತ್ತಾರೆ ? ೨೫-೩೦ ವರ್ಷಗಳು ಜೊತೆಗಿರುವ ಮಕ್ಕಳ ಮೇಲೆ, ಅವರ ಪ್ರೀತಿಯ ಮೇಲೆ ಸಂದೇಹ ಪಟ್ಟು ಗೊತ್ತಿಲ್ಲದ ಅಂತರ್ಜಾಲದ ಮಾಹಿತಿಯನ್ನು ನಂಬುತ್ತಾರಲ್ಲ ಯಾಕೆ ಹೀಗೆ ?

Matrimonial Sites
 
೨. ಹಲವು ಕುಟುಂಬದಲ್ಲಿ ತಂದೆ ತಾಯಂದಿರು ನಾವು ಆಧುನಿಕರು, 21ನೇ ಶತಮಾನದವರು ಹಾಗಾಗಿ ಜಾತಕ, ಮಹೂರ್ತ ಎಂಬುವುದನ್ನೆಲ್ಲ ನೋಡುವುದಿಲ್ಲ ಎನ್ನುತ್ತಾರೆ. ಇರಲಿ, ಅವರ ನಂಬಿಕೆಯ ಬಗ್ಗೆ ನನ್ನ ಪ್ರಶ್ನೆ ಇಲ್ಲ. ಆಶ್ಲೇಷ ನಕ್ಷತ್ರ ಇದ್ದರೆ ಅತ್ತೆ ಇರಬಾರದು, ಮತ್ಯಾವುದೊ ನಕ್ಷತ್ರ ಇದ್ದರೆ ಮಕ್ಕಳಾಗುವುದಿಲ್ಲ ಎಂದು ತಿಳಿದರೆ ಮಕ್ಕಳ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಕಾರಣಕೊಟ್ಟು ಬಂದಿರುವ ಸಂಬಂಧದ ಮಾತನ್ನೇ ನಿಲ್ಲಿಸಿಬಿಡುತ್ತಾರೆ. ಜಾತಕ ಸರಿ ಹೊಂದದೆ ಗಂಡು (ಹೆಣ್ಣು) ಸಿಗೋದು ಕಷ್ಟ ಎಂದಾದರೆ ಮಕ್ಕಳು ಹುಟ್ಟಿದ ಸಮಯವನ್ನೇ ಬದಲು ಮಾಡಿ ಜಾತಕವನ್ನು ಹೊಸದಾಗಿ ಬರೆಸುತ್ತಾರೆ. ಜಾತಕ, ಮಹೂರ್ತದಲ್ಲಿ ನಂಬಿಕೆ ಇಲ್ಲ ಎಂದ ಮೇಲೆ ಈ ರೀತಿ ಮಾಡುವುದಾದರೂ ಏಕೆ ? ಅದರ ಮೇಲೆ ನಂಬಿಕೆ ಇದೆ ಎಂದು ಹೇಳಿಕೊಂಡು ನಂತರ ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವುದು ಯಾಕೆ ? ಅದೇ ಪ್ರೇಮ ವಿವಾಹದಲ್ಲಿ ಇಂತಹ ಅನಿಷ್ಟಕ್ಕೆ ಆಸ್ಪದ ಇರುವುದಿಲ್ಲ. ಅಲ್ಲಿ ಎಲ್ಲಕ್ಕಿಂತ ಮುಖ್ಯವಾದುದು ಪ್ರೀತಿ. ಅದು ಮನುಷ್ಯನ ಸಹಜವಾದ ಗುಣ.

೩. ಮಕ್ಕಳು ಮಾಡುವ ಕೆಲಸದಿಂದ (ಸಾಮಾಜಿಕ ಕೆಲಸವೂ ಸೇರಿ), ಅವರ ಹವ್ಯಾಸದಿಂದ ಅನೇಕರಿಗೆ ಅವರ ಮೇಲೆ ಒಂದಷ್ಟು ಒಳ್ಳೆ ಅಭಿಪ್ರಾಯ ಮೂಡಿರುತ್ತದೆ. ಆ ಮಕ್ಕಳ ತಂದೆ ತಾಯಂದಿರು ಗೊತ್ತಿಲ್ಲದಿದ್ದರೂ ಈ ರೀತಿ ಭಾವನೆ ಮೂಡುವುದು ಸಹಜ. ಪರಿಚಯದ ಕೆಲವರು ಅಂತಹ ಮಕ್ಕಳನ್ನು ನೇರವಾಗಿ ಎಲ್ಲರ ಮುಂದೆ ಹೊಗಳಿರುತ್ತಾರೆ - 'ಬಹಳ ಒಳ್ಳೆ ಕೆಲಸ ಮಾಡುತ್ತಿದ್ದೀಯ. ನಿಮ್ಮಂತಹ ಯುವಕರು (ಯುವಕಿಯರು) ಸಮಾಜಕ್ಕೆ ಅಗತ್ಯ' ಎಂದು. ಆದರೆ, ಅದೇ ಹುಡುಗ (ಹುಡುಗಿ) ಹಾಗೆ ಹೊಗಳಿದವರ ಅಕ್ಕನನ್ನೋ (ಅಣ್ಣ)/ ತಂಗಿಯನ್ನೋ (ತಮ್ಮ)/ ಮಗಳನ್ನೋ (ಮಗ) ಪ್ರೀತಿಸುತ್ತಿದ್ದೇನೆ, ಮದುವೆಗೆ ಒಪ್ಪಿಗೆ ಕೊಡಿ ಎಂದು ಕೇಳಿದರೆ, ಅದೇ ಹುಡುಗ (ಹುಡುಗಿ) ಮರು ಕ್ಷಣದಲ್ಲಿ ಕೆಟ್ಟವನಾಗುತ್ತಾನೆ(ಳೆ). ಎಲ್ಲರೂ ತಮ್ಮ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ಒಳ್ಳೆಯ ಹುಡುಗನನ್ನು (ಹುಡುಗಿ) ಕೊಟ್ಟು ಮದುವೆ ಮಾಡಬೇಕು ಎಂಬ ಆಸೆ ಇರುತ್ತದೆ. ಆದರೆ, ಪ್ರೀತಿ ವಿಚಾರ ಬಂದಾಗ ಮಾತ್ರ ತಾವೇ ಹೊಗಳಿದ ಮಕ್ಕಳ ಗುಣಗಳನ್ನು ಮರೆಯುತ್ತಾರೆ. ಹಾಗಿದ್ದಲ್ಲಿ ಅವರ ಹೊಗಳಿಕೆಗೆ ಅರ್ಥವಾದರೂ ಏನು ? ಬರೀ ಬಾಯಿ ಮಾತು ಆಷ್ಟೇನ ?

೪. ತಮ್ಮ ಮಕ್ಕಳಿಗೆ ಹುಡುಗ (ಹುಡುಗಿ) ಹುಡುಕಬೇಕಾದರೆ ಕೇಳುವ ಕೆಲವು ಪ್ರಶ್ನೆಗಳನ್ನು ಮುಂದಿಡುತ್ತೇನೆ. ಹೆಸರು, ವಯಸ್ಸು, ಕೆಲಸಗಳನ್ನು ಕೇಳೋದು ಸಹಜ. ಅದರ ಜೊತೆಗೆ ವಿದ್ಯಾಭ್ಯಾಸ, ವಿದೇಶ ಪ್ರವಾಸ, ಸ್ವಂತ ಮನೆ, ಅಪ್ಪ ಅಮ್ಮ ಜೊತೆಗೆ ಇದ್ದಾರ, ಹಣಕಾಸಿನ ವ್ಯವಹಾರ. ಬರೀ ಹಣದ ಕುರಿತ ಪ್ರಶ್ನೆಗಳೆ ಅಲ್ಲಿರುತ್ತದೆ. ಕೆಲಸಕ್ಕೆ (ವಿಷೇಶವಾಗಿ MNC) ಹೋಗದ ಹುಡುಗಿಯರನ್ನು ಒಪ್ಪುವುದೇ ಇಲ್ಲ. ಯಾಕೆ ಹೀಗೆ ಎಂದು ಕೇಳಿದರೆ 'ಜೀವನವನ್ನು ಪ್ರಾಕ್ಟಿಕಲ್ ಆಗಿ ನೋಡಬೇಕು' ಎಂಬ ಉತ್ತರ ಸಿದ್ಧವಾಗಿರುತ್ತದೆ. ಇರಲಿ, ತಮ್ಮ ಮಕ್ಕಳು ಸುಖವಾಗಿರಲೆಂದು ಇವೆಲ್ಲ ಕೇಳುತ್ತಾರೆ ಎಂದುಕೊಳ್ಳೋಣ. ಆದರೆ, ಬದುಕೆಂದರೆ ದುಡ್ಡು ಮಾತ್ರನಾ ? ಈ ಪ್ರಶ್ನೆ ಪ್ರೇಮ ವಿವಾಹಕ್ಕೂ ಅನ್ವಯಿಸುತ್ತದೆ. ಹಲವು ಪ್ರಕರಣದಲ್ಲಿ ಹಣಕ್ಕಾಗಿ ಪ್ರೀತಿಸಿವವರನ್ನು ಗಮನಿಸುತ್ತೇವೆ. ಹಣಕ್ಕೆ ಸಂಬಂಧ ಪಟ್ಟ ವಿಚಾರವನ್ನು ಬಿಟ್ಟು ಹುಡುಗನ (ಹುಡುಗಿಯ) ಗುಣ, ಸ್ವಭಾವ, ಹವ್ಯಾಸಗಳ ಬಗೆಗಿನ ಪ್ರಶ್ನೆಗಳು ಇಲ್ಲಿ ನಗಣ್ಯ. ಹಣವಿದ್ದರೆ ತಮ್ಮ ಮಕ್ಕಳು ಸುಖವಾಗಿರುತ್ತಾರೆ ಎಂದು ಹೇಗೆ ತೀರ್ಮಾನಿಸುತ್ತಾರೋ ?

Love or Money?

ಈಗಿನ ಸಮಾಜವನ್ನು ನೋಡಿ ಈ ರೀತಿಯ ಹಲವು ಪ್ರಶ್ನೆಗಳು ನನ್ನಲ್ಲಿ ಮೂಡುತ್ತಿವೆ. ಕೆಲವು ೩-೪ ಪ್ರಶ್ನೆಗಳನ್ನು ಮಾತ್ರ ಮುಂದಿಟ್ಟಿದ್ದೇನೆ. ಸತ್ಯ ಹೇಳುತ್ತೇನೆ, ಈ ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಗಳನ್ನು ನೋಡಿದರೆ ವಧುವರಾನ್ವೇಷಣೆ ಅನ್ನಿಸುವುದರ ಬದಲು ಯಾವುದೋ ಬ್ಯಾಂಕಿನಲ್ಲಿ ಸಾಲ ಕೇಳುತ್ತಿದ್ದೇನೆ ಅಥವಾ ಕೆಲಸ ಹುಡುಕುತ್ತಿದ್ದೇನೆ ಅನ್ನಿಸುತ್ತದೆ. ಈ ತಂದೆ ತಾಯಂದಿರು ಆಡುವ ರೀತಿ, ಕೇಳುವ ಪ್ರಶ್ನೆ ನೋಡಿದರೆ ತಮ್ಮ ಮಕ್ಕಳಿಗೆ ಸಂಗಾತಿ ಬದಲು ವ್ಯಾವಹಾರಿಕ ಪಾಲುದಾರರನ್ನು (business partners) ಹುಡುಕುತ್ತಿದ್ದಾರೆ ಅನ್ನಿಸುತ್ತದೆ. ಇದಲ್ಲದೆ ಮತ್ತೊಂದಿದೆ. ನನ್ನಮ್ಮ ಹೇಳುತ್ತಾಳೆ, ಅವಳ ತಂದೆಯ ಕಾಲದಲ್ಲಿ ಸಂತೆಗೆ ಹೋಗಿ ಎತ್ತನ್ನೋ, ಎಮ್ಮೆಯನ್ನೋ ಮಾರಿ ಅಥವಾ ಕೊಂಡು ತರುತ್ತಿದ್ದರು ಎಂದು. ಆಗಿನ ಕಾಲದಲ್ಲಿ ಅದನ್ನು ಸಂತೆ ಅನ್ನುತ್ತಿದ್ದರು. ಈಗ ಅಂತಹ ಸಂತೆಯನ್ನು ವಧುವರಾನ್ವೇಷಣ ಕೇಂದ್ರ ಎಂದು ಕರೆಯುತ್ತಾರೆ. ಪಶುಗಳು ಇರುವ ಜಾಗಾದಲ್ಲಿ ತಮ್ಮ ಮಕ್ಕಳಿರುತ್ತಾರೆ. ವ್ಯತ್ಯಾಸವಿಷ್ಟೆ, ಪಶುಗಳನ್ನು ಒಂದೊ ಎರಡೊ ವರ್ಷಗಳಿಗೊಮ್ಮೆ ಬದಲಾಯಿಸುತ್ತಿದ್ದರು, ಕಾನೂನಿನ ಅಪ್ಪಣೆ ಬೇಕಿರಲಿಲ್ಲ. ಇಲ್ಲಿ ಬದಲಾಯಿಸಲು ಅಷ್ಟಾಗಿ ಅವಕಾಶ ಇರುವುದಿಲ್ಲ. ಆದರೂ ಸೊಸೆಯನ್ನು (ಅಳಿಯ) ಬದಲಾಯಿಸಬಹುದು, ವಿಚ್ಛೇದನ ಎಂಬ ಕಾನೂನು ಪ್ರಕ್ರಿಯೆ ಮೂಲಕ.

ಭಾರತದ ಸ್ವಾತಂತ್ರ್ಯ ನಂತರದ ಇತಿಹಾಸವನ್ನು ಗಮನಿಸಿದರೆ ಕಮ್ಯೂನಿಷ್ಟರು ಮಾಡಿದ್ದು ಹೀಗೆಯೆ. ತಮ್ಮದು ಶ್ರೇಷ್ಠ ಸಿದ್ಧಾಂತ ಎಂದು ಹೇಳಿಕೊಂಡರು ಪ್ರೇಮ ವಿವಾಹಕ್ಕಿಂತ ಅರೇಂಜ್ ಮ್ಯಾರೇಜ್ ಸರಿ ಅನ್ನುವ ರೀತಿಯಲ್ಲಿ. ತಮಗೆ ಬೇಕಾದ ಹಾಗೆ ಇತಿಹಾಸವನ್ನು ತಿರುಚಿದರು ಹುಟ್ಟಿನ ಸಮಯವನ್ನು ಬದಲಾಯಿಸಿ ಹೊಸ ಜಾತಕ ಬರೆಸಿದಂತೆ. ನಾವು ವಿಶ್ವಮಾನವತ ವಾದವನ್ನು ಪ್ರತಿಪಾದಿಸುತ್ತೇವೆ ಎಂದು ಹೇಳಿಕೊಂಡರು ಹಣದಿಂದ ವ್ಯಕ್ತಿತ್ವವನ್ನು ಅಳೆಯುತ್ತ ಒಳ್ಳೆಯ ಹುಡುಗ (ಹುಡುಗಿ) ಹುಡುಕುತ್ತೇವೆ ಎಂಬಂತೆ. ಹಾಗಂತ ಪ್ರೇಮ ವಿವಾಹ ಮಾಡಿಕೊಳ್ಳುವವರೆಲ್ಲರೂ ಸರಿ ಎನ್ನುತ್ತಿಲ್ಲ. ಅವರಲ್ಲೂ ಹಣ, ಕಾಮದ ಹಿಂದೆ ಬಿದ್ದವರೇ ಹೆಚ್ಚು. ಆದರೆ, ಇವೆಲ್ಲವನ್ನು ಮೀರಿ ನಮ್ಮ ಬದುಕನ್ನು ಪ್ರೀತಿ ಪ್ರೇಮದ ತಳಹದಿಯಲ್ಲಿ ಕಟ್ಟುವಂತಾಗಲಿ.

ಪ್ರೀತಿಯ ಪಿಸುಮಾತು ಇರಲಿ ನಮ್ಮಲ್ಲಿ
ಅದರ ಗಂಧ ಎಲ್ಲೆಲ್ಲು ಪಸರಿಸಲಿ
ಒಲವಿಂದ ಬದುಕು ಹಸನಾಗಲಿ
ಪ್ರೀತಿ ಪ್ರೇಮ ಪ್ರಣಯ ಬದುಕಾಗಲಿ


Listen to your Heart

ಇಂತಹುದನೆಲ್ಲ ನೋಡಿಯೇ ನಾನು ಹೇಳಿದ್ದು 'ಅರೇಂಜ್ ಮ್ಯಾರೇಜ್ ಎಂಬ ಕಮ್ಯೂನಿಸ್ಟ್ ಸಿದ್ಧಾಂತ' ಎಂದು.