April 30, 2018

ಸ್ವೀಡನ್ - ಇದು ಒಂದು ವಾರದ ಕಥೆ

ಈ ಸಲ ನನ್ನ ಸಾಗರದಾಚೆಗಿನ ಪ್ರಯಾಣ ಯೂರೋಪಿನ ಮತ್ತೊಂದು ರಾಷ್ಟ್ರವಾದ ಸ್ವೀಡನ್ ಕಡೆಗಿತ್ತು. ಇಲ್ಲಿಂದ ಆಮ್ಸ್ಟರ್ಡಾಮ್ ಮತ್ತು ಅಲ್ಲಿಂದ ಸ್ವೀಡನ್ ಗೆ ಹೋಗಬೇಕಿತ್ತು. ನಾನು ಸರಿಯಾದ ಸಮಯಕ್ಕೆ ವಿಮಾನವನ್ನು ಹಿಡಿದು ಸ್ವೀಡನ್ ತಲುಪಿದೆ, ಆದರೆ ನನ್ನ ಲಗೇಜ್ ಬರುವುದು ತಡವಾಯಿತು. ಸ್ವೀಡನ್ ಅಲ್ಲಿ ನಾನು ಇಳಿಯುತ್ತಿದ್ದಂತೆ ನನ್ನ ಲಗೇಜ್ ತಡವಾಗಿರುವ ಕುರಿತು ನನಗೆ ಸಂದೇಶ ತಲುಪಿತು. ವಿಮಾನ ನಿಲ್ದಾಣದಲ್ಲೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿ ನಾನು ಹೋಟೆಲಿಗೆ ಬಂದೆ. ನನ್ನ ಲಗೇಜ್ ರಾತ್ರಿ ಬಂದು ತಲುಪಿತು.

ಈ ದೇಶದಲ್ಲಿ ನನ್ನ ಗಮನಕ್ಕೆ ಬಂದ ಕೆಲವು ವಿಚಾರಗಳನ್ನು ತಿಳಿಸಲು ಇಚ್ಚಿಸುತ್ತೇನೆ.

೧. ಹೋದ ದಿವಸದ ಸಂಜೆ ನಾನು ನನ್ನ ಸಹೋದ್ಯೋಗಿ ಹೊರಗೆ ತಿರುಗಾಡಲು ಹೋದೆವು. ಅಲ್ಲಿನ ತಾಪಮಾನ ೭-೮ ಡಿ.ಸೇ ಅಷ್ಟು ಇತ್ತು. ನನ್ನ ಸಹೋದ್ಯೋಗಿ ಟೋಪಿ, ಜರ್ಕಿನ್ ಮುಂತಾದ ಉಣ್ಣೆಯ ಬಟ್ಟೆಯನ್ನು ತೊಟ್ಟಿದ್ದರು. ನನ್ನ ಲಗೇಜ್ ಬಂದಿಲ್ಲದ ಕಾರಣ, ನಾನು ಯಾವುದೇ ಉಣ್ಣೆ ಬಟ್ಟೆ ಇಲ್ಲದೆ ಹೋದೆ. ಆ ಚಳಿಗೆ ಹೊಂದಿಕೊಳ್ಳಬೇಕಿತ್ತು, ಹೊಂದಿಕೊಂಡೆ. ಉಣ್ಣೆ ಬಟ್ಟೆ ಧರಿಸಿದ್ದ ನನ್ನ ಸಹೊದ್ಯೋಗಿ ನನ್ನನ್ನು ನೋಡಿಯೇ ಚಳಿ ಅನ್ನುತ್ತಿದ್ದರು. ಆಗ ನನಗೆ ಅನ್ನಿಸಿತು, ನಮಗೆ ಅವಕಾಶ ಇದ್ದಲ್ಲಿ ನಾವು ಕಷ್ಟಗಳನ್ನು ಬರದಂತೆ ತಡೆಯುತ್ತೇವೆ. ಆದರೆ ಏನು ಮಾಡಲಾಗದೆ ಕಷ್ಟಗಳು ಬಂದಾಗ ನಮ್ಮನ್ನು ನಾವು ಗಟ್ಟಿ ಮಾಡಿಕೊಂಡು ಅದನ್ನು ಎದುರಿಸಿ ನಿಲ್ಲಬೇಕು. ಅಲ್ಲಿ ನನ್ನ ಸಹೋದ್ಯೋಗಿ ನನಗೆ ಹೇಳಿದ ಮಾತು ಇನ್ನು ನೆನಪಿದೆ - 'You should respect the bad whether'. ಆದರೆ, ನನ್ನ ಮನಸ್ಥಿತಿ ಬೇರೆನೇ ಇತ್ತು. ಚಳಿಯನ್ನು ನಾನು ಎದುರಿಸಿ ನಿಲ್ಲುತ್ತೇನೆ ಹೊರತು ಅದಕ್ಕೆ ನಾನು ಬಗ್ಗುವುದಿಲ್ಲ ಎಂದು. ಈ ರೀತಿಯ ಮನಸ್ಥಿತಿಗೆ ಕಾರಣ ನನಗನ್ನಿಸಿದ್ದು 'ಭಗವದ್ಗೀತೆ' ಮತ್ತು ಸುಭಾಷ್ ಬೋಸರ ಮಾತು - 'ನಾವು ಪ್ರಕೃತಿಯನ್ನು ಗೆಲ್ಲಬೇಕಾದರೆ ಅದರ ವಿರುದ್ಧ ಹೋರಾಡುವುದನ್ನು ಕಲಿಯಬೇಕು'.




೨. ನಾನು ಉಳಿದುಕೊಂಡಿದ್ದ ಹೋಟೆಲಿನ ರೂಮಿನ ಕಪಾಟೊಂದರಲ್ಲಿ Bible - New Testament ನ ಒಂದು ಪ್ರತಿ ಇಟ್ಟಿದ್ದರು. ನನ್ನ ಸಹೊದ್ಯೋಗಿ ಕೋಣೆಯಲ್ಲೂ ಸಹ ಅದರ ಪ್ರತಿಯನ್ನು ಕಂಡೆ. ಜರ್ಮನಿಯಿಂದ ಮತ್ತೋರ್ವ ಸಹೋದ್ಯೋಗಿ ಮತ್ತೊಂದು ಹೋಟೆಲಿನಲ್ಲಿ ಉಳಿದುಕೊಂಡಿದ್ದ. ಅವನನ್ನು ವಿಚಾರಿಸಿದಾಗ ಅವನ ಕೋಣೆಯಲ್ಲೂ ಬೈಬಲ್ಲಿನ ಪ್ರತಿ ಇದ್ದದ್ದು ಸ್ಪಷ್ಟವಾಯಿತು. ಇದು ಅಲ್ಲಿನ ಜನ ತಮ್ಮ ಮತ ಪ್ರಚಾರ ಮಾಡುವ ಒಂದು ಪ್ರಕ್ರಿಯೆ. ತಮ್ಮ ದೇಶಕ್ಕೆ ಬರುವವರು ಯಾರೇ ಆಗಿರಲಿ, ತಮ್ಮ ಮತದ ಪ್ರಚಾರ ಆಗಬೇಕು ಎಂಬ ಉದ್ದೇಶದಿಂದ ಮಾಡುವ ಪ್ರಕ್ರಿಯೆ ಇದು. ಅಲ್ಲಿನ ಜನ, ಸಾಮಾಜಿಕ ವ್ಯವಸ್ಥೆ ತಮ್ಮ ಮತ ಪ್ರಚಾರಕ್ಕೆ ಅಂತಾನೆ ತಮ್ಮ ಸಂಪಾದನೆಯ ಒಂದು ಭಾಗವನ್ನು ಮೀಸಲಿಡುತ್ತದೆ. ಇದನ್ನು ನಾವು (ಭಾರತೀಯರು, ಹಿಂದುಗಳು) ಹೇರಿಕೆ ದೃಷ್ಟಿಯಿಂದ ನೋಡುವುದರ ಬದಲು ನಮ್ಮಲ್ಲಿ ಈ ರೀತಿಯ ಪದ್ಧತಿ ಯಾಕೆ ಅಳವಡಿಸಿಕೊಳ್ಳಬಾದರು ಎಂಬ ಪ್ರಶ್ನೆ ನನ್ನನ್ನು ನಾನೆ ಕೇಳಿಕೊಂಡೆ. ತಕ್ಷಣ ಮನಸ್ಸಿಗೆ ಹೀಗನ್ನಿಸಿತು - 'ನಮ್ಮ ಮಕ್ಕಳಿಗೆ ನಮ್ಮ ಧರ್ಮವನ್ನೇ ಸರಿಯಾಗಿ ಕಲಿಸುತ್ತಿಲ್ಲ. ಇನ್ನು ಈ ರೀತಿ ಹಿಂದುಗಳು ಮಾಡಿದ್ದೆ ಆದರೆ, ಅಸಹಿಷ್ಣುತೆ ಮತ್ತು ಮಾಡುವುವರನ್ನು ಮೂರ್ಖರೆಂದು ಜರಿದು ಕೂರಿಸುತ್ತೇವೆ. ಇದು ನಮ್ಮ ದೌರ್ಭಾಗ್ಯ'.


೩. ಮತ್ತೊಂದು ಒಳ್ಳೆಯ ಸಾಮಾಜಿಕ ವ್ಯವಸ್ಥೆ ನಾನು ಗಮನಿಸಿದ್ದು ಎಂದರೆ 'ನಗದು ರಹಿತ ವ್ಯವಹಾರ (Cashless transaction)'. ನಾನು ಓಡಾಡಿದ ಅಷ್ಟೂ ಕಡೆ ಬಹುತೇಕ ಎಲ್ಲರೂ ಕಾರ್ಡ್ಗಳನ್ನು ಬಳಸುತ್ತಾರೆ. ಹಾಗೆಂದು ನಗದು ವ್ಯವಹಾರ ಇಲ್ಲ ಎಂದಲ್ಲ, ಆದರೆ ತೀರ ಕಡಿಮೆ. ಜರ್ಮನಿಯಲ್ಲೂ ಕಾರ್ಡ್ ವ್ಯವಹಾರವಿದೆ ಆದರೆ, ನಗದು ವ್ಯವಹಾರ ಸಹ ಅಷ್ಟೇ ಪ್ರಮಾಣದಲ್ಲಿ ಇದೆ. ಆದರಿಲ್ಲಿ ಶೇ ೯೯ರಷ್ಟು ನಗದು ರಹಿತ ವ್ಯವಹಾರ. ಅದೊಂದು ಸಂಜೆ ಆಫ಼ೀಸಿನ ಕೆಲಸ ಮುಗಿಸಿ, ರಾತ್ರಿ ಊಟಕ್ಕೆಂದು 'Vapiano' ಎಂಬ ರೆಸ್ಟುರಾಗೆ ಹೋದೆವು. ಸಾಮಾನ್ಯವಾಗಿ ಭಾರತದಲ್ಲಿ ನಾನು ಪಿಜ಼ಾ ತಿನ್ನುವುದಿಲ್ಲ, ಆದರೆ, ಅಲ್ಲಿ ನನಗೆ ಬೇರೆ ವಿಧಿ ಇರಲಿಲ್ಲ, ಆದ್ದರಿಂದ ತಿಂದೆ. ಅಲ್ಲಿನ ವಿಶೇಷ ಅಂದರೆ, ನಾವು ಆರ್ಡರ್ ಕೊಟ್ಟ ಮೇಲೆ ಒಂದು ಡಿಜಿಟಲ್ ದೀಪ ಕೊಡುತ್ತಾರೆ. ನಮ್ಮ ಆರ್ಡರ್ ತಯಾರಾದ ಮೇಲೆ ಆ ದೀಪ ಬೆಳಗುತ್ತದೆ, ನಾವು ಹೋಗಿ ಅದನ್ನು ಕೊಟ್ಟು ನಮ್ಮ ತಿಂಡಿಯನ್ನು ತರಬೇಕು. ಈ ವ್ಯವಸ್ಥೆ ಕೂಡ ಚೆನ್ನಾಗಿದೆ ಅನ್ನಿಸಿತು. ವಾಪಸ್ಸು ಹೊರಡುವ ಮುನ್ನ ಹಣದ ಪಾವತಿ ಮತ್ತೆ ಕಾರ್ಡ್ ಮುಖಾಂತರವೇ ಆಯಿತು.



೪. ಜರ್ಮನಿಯಲ್ಲಿ ರೈಲು ಪ್ರಮುಖ ಸಂಚಾರ ವ್ಯವಸ್ಥೆ ಮತ್ತು ಪ್ರತಿ ನಿಲ್ದಾಣದಲ್ಲೂ ಟಿಕೇಟ್ ಪಡೆಯುವ ಯಂತ್ರ ಇದೆ. ಇಲ್ಲಿ ಸಂಪೂರ್ಣ ಬಿನ್ನ. ಇಲ್ಲಿ ರೈಲು ಮತ್ತು ಬಸ್ಸು ಎರಡೂ ಪ್ರಮುಖ ಸಂಚಾರ ವ್ಯವಸ್ಥೆ. ಆದರೆ, ಟಿಕೇಟ್ ಪಡೆಯಲು ಮಾತ್ರ ಕೇಂದ್ರ ನಿಲ್ದಾಣಕ್ಕೆ (Central Station) ಹೋಗಬೇಕು. ಬಸ್ಸಿನಲ್ಲಾಗಲಿ, ರೈಲಿನಲ್ಲಾಗಲಿ ಟಿಕೇಟ್ ಕೊಳ್ಳಲು ಸಾಧ್ಯವಿಲ್ಲ. ಬಹುತೇಕ ಜನ ಬಸ್ ಹಾಗು ರೈಲಿನ ತಿಂಗಳ ಅಥವಾ ವಾರ್ಷಿಕ ಪಾಸ್ ಮಾಡಿಸಿರುತ್ತಾರೆ. ಈ ವಿಚಾರದಲ್ಲಿ ಜರ್ಮನಿ ಹೆಚ್ಚು ಅನುಕೂಲಕರವಾಗಿದೆ. ಇಲ್ಲಿನ ಟ್ಯಾಕ್ಸಿ ಚಾಲಕರು ಬಹುತೇಕ ಆಫ಼್ರಿಕದ ಉತ್ತರ ಭಾಗ ಮತ್ತು middle east ಪ್ರಾಂತ್ಯದವರಾಗಿದ್ದಾರೆ. ವಾಹನ ಚಲಿಸುವ ಪ್ರಕ್ರಿಯೆ ಬಗೆಗೆ ಹೇಳೋದಾದರೆ ಜರ್ಮನಿಯವರಷ್ಟು ಶಿಸ್ತು ಇವರಲ್ಲಿ ಇಲ್ಲ. ಟ್ಯಾಕ್ಸಿ ಚಾಲಕರು ಕೆಲವರು ನಿಯಮವನ್ನು ಮುರಿದದ್ದನ್ನು ಗಮನಿಸಿದೆ. ಶಿಸ್ತು ಎಂಬುದಕ್ಕೆ ಜರ್ಮನಿ ತಕ್ಕವಾದದ್ದು ಎಂಬುದಕ್ಕೆ ಸ್ವೀಡನ್ನಿನ ಪ್ರವಾಸದಿಂದ ಮತ್ತಷ್ಟು ಖಾತರಿಯಾಯಿತು.

೫. ಕೊನೆ ದಿವಸ ಕೆಲಸ ಮುಗಿದ ಮೇಲೆ ಮಧ್ಯಾಹ್ನ ಹೊರಗೆ ಸುತ್ತಾಡಿದೆವು. ವಾತಾವರಣವೂ ಆಹ್ಲಾದಕರವಾಗಿತ್ತು. ಅಲ್ಲಿದ್ದ ಉದ್ಯಾನಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಸುತ್ತಲು ಹಸಿರು, ನದಿ, ಆ ಜನಜಂಗುಳಿ ನಡುವೆ ಆ ಪ್ರಶಾಂತ ವಾತಾವರಣ ನನಗೆ ಬಹಳ ಹಿಡಿಸಿತು. ನಾನು ವಸಂತ ಋತುವಿನಲ್ಲಿ ಹೋಗಿದ್ದರೆ ಮರಗಳಲೆಲ್ಲ ಹೂ ಬಿಟ್ಟಿರುತ್ತಿತ್ತು. ಆದರೆ, ಈಗ ಮರಗಳೆಲ್ಲ ಬೋಳಾಗಿತ್ತು. ನಮ್ಮ ಕಾವೇರಿ ನದಿಯನ್ನು ನಾವು ಗಲೀಜು ಮಾಡಿದ್ದರೂ ತಿಳಿಯಾಗಿ ಕಾಣಿಸುತ್ತದೆ. ಅದರ ಸೌಂದರ್ಯ ನೋಡಿದವನೇ ಬಲ್ಲ. ಅದರೆ, ಸ್ವೀಡನ್ನಿನ ಜನ ಅದನ್ನು ಸ್ವಚ್ಚವಾಗಿ ಇಟ್ಟರೂ ನೀರು ತಿಳಿಯಾಗಿ ಮಾತ್ರ ಇರಲಿಲ್ಲ. ಏನಾದರು ಬರೆಯಬೇಕು ಅಂತ ಅನ್ನಿಸಿದರೂ ಬರೆಯಲು ಸ್ಪೂರ್ತಿ ಸಿಗಲಿಲ್ಲ. ಸೌಂದರ್ಯ ಎಂಬುದು ನೋಡುವ ಕಣ್ಣಲ್ಲಿ ಇದೆ, ಅದರ ಆಧಾರದ ಮೇಲೆ ಹೇಳುತ್ತಿದ್ದೇನೆ. ಲಕ್ಷಣದ ವಿಚಾರಕ್ಕೆ ಬಂದಾಗ ಭಾರತೀಯ ಹೆಣ್ಣು ಮಕ್ಕಳೇ ಸುಂದರಿಯರು, ಅಲ್ಲಿನ ಹೆಣ್ಣು ಮಕ್ಕಳಲ್ಲಿ ಅಂತಹ ಲಕ್ಷಣ, ಸೌಂದರ್ಯ ನನ್ನ ಕಣ್ಣಿಗೆ ಕಾಣಕಿಲ್ಲ. ನನ್ನ ಅನಿಸಿಕೆ ತಪ್ಪೂ ಇರಬಹುದು. ಬರೆಯಲು ಕೂತಾಗ ಪದಗಳು ಹೊರಹೊಮ್ಮದಿರಲು ಇದು ಒಂದು ಕಾರಣವಿರಬಹುದು.
 












 
 
 
 
 
 
 
 
 
 
 
 
 
 
 
 
 
 
ಹೀಗೆ ನನ್ನ ಒಂದು ವಾರದ ಸ್ವೀಡನ್ನಿನ ಪ್ರವಾಸ ಮುಗಿದಿತ್ತು. ಭಾರತಕ್ಕೆ ಬರುವಾಗ ಮನಸ್ಸು ತಿಳಿಯಾಗಿತ್ತು. ರಾಮಕೃಷ್ಣ ಆಶ್ರಮಕ್ಕೆ ಹೋಗಿ ಬಂದ ಮೇಲೆ ಖುಷಿಯಾಯಿತು.

April 4, 2018

ನಾವ್ಯಾಕೆ ಹೀಗೆ...? - ಅರೇಂಜ್ ಮ್ಯಾರೇಜ್ ಎಂಬ ಕಮ್ಯೂನಿಸ್ಟ್ ಸಿದ್ಧಾಂತ

ಭಾರತೀಯ ಸಮಾಜದಲ್ಲಿ ಮದುವೆಯಲ್ಲಿ ಎರಡು ವಿಧವಿದೆ. ಒಂದು ಪ್ರೇಮ ವಿವಾಹ ಮತ್ತೊಂದು ಅರೇಂಜ್ ವಿವಾಹ. ನೇರವಾಗಿ ಹೇಳೋದಾದರೆ, ಪ್ರೇಮ ವಿವಾಹವೆಂದರೆ ನಮಗೆ ಮೊದಲು ಪ್ರೇಮಾಂಕುರವಾಗುತ್ತದೆ, ನಂತರ ಅದು ಬಲಿತು ಒಬ್ಬರನ್ನೊಬ್ಬರು ಅರ್ಥೈಸಿಕೊಂಡು, ನಮ್ಮ ನಮ್ಮ ತಂದೆ, ತಾಯಿಯರನ್ನು ಒಪ್ಪಿಸಿ ಮದುವೆಯಾಗುವುದು. ಅರೇಂಜ್ ವಿವಾಹವೆಂದರೆ ನಮ್ಮ ತಂದೆ ತಾಯಿಯರು ನಮಗೆ ಸಂಗಾತಿಯನ್ನು ಹುಡುಕಿ, ನಮ್ಮ ಒಪ್ಪಿಗೆಯ ನಂತರ ಮದುವೆ ಮಾಡುವುದು.

ಎರಡರಲ್ಲೂ ಮೂಲಭೂತವಾಗಿ ಒಂದು ವ್ಯತ್ಯಾಸವಿದೆ. ಪ್ರೇಮ ವಿವಾಹದಲ್ಲಿ ನಮಗೆ ಮೊದಲು ಪ್ರೀತಿ ಹುಟ್ಟುತ್ತದೆ, ಪ್ರೇಮ ಸಹಜವಾಗಿ ಮೂಡುತ್ತದೆ, ಭಾವನೆ ತನ್ನಷ್ಟಕ್ಕೆ ತಾನೇ ಚಿಗುರೊಡೆಯುತ್ತದೆ, ಇಲ್ಲಿ ಬದ್ಧತೆ ಎಂಬುದು ತನಗೆ ತಾನೆ ಮೈಗೂಡುತ್ತದೆ. ಅದೇ ಅರೇಂಜ್ ವಿವಾಹವೆಂದರೆ ಪ್ರೀತಿ, ಪ್ರೇಮದ ಭಾವನೆಗಳು, ಬದ್ಧತೆ ಎಂಬುದೆಲ್ಲವೂ ನಮಗೆ ಬೇಕೋ ಬೇಡವೋ ಆದರೆ, ಮೈಗೂಡಿಸಿಕೊಳ್ಳಬೇಕಾಗುತ್ತದೆ. ಎಲ್ಲವೂ ಕರ್ತವ್ಯವಾಗಿ ಮಾರ್ಪಾಡಾಗುತ್ತದೆ. ನನ್ನ ಅನಿಸಿಕೆ ಪ್ರಕಾರ ಪ್ರೀತಿ ಪ್ರೇಮ ಎಂಬುದು ಸಹಜವಾಗಿರಬೇಕೇ ಪರಂತು ಹೇರಿಕೆಯಂತಾಗಬಾರದು.

Love Marriage vs Arranged Marriage

ಸಂತ ರಾಮತೀರ್ಥರ ಬದುಕಿನಲ್ಲಿ ಒಂದು ಘಟನೆಯ ಉಲ್ಲೇಖವಿದೆ. ರಾಮತೀರ್ಥರು ತಮ್ಮ ಆಧ್ಯಾತ್ಮಿಕ ಸಾಧನೆಗಾಗಿ ತಮ್ಮ ಕುಟುಂಬ, ಸ್ನೇಹಿತರು, ಶಿಷ್ಯಂದಿರನ್ನೆಲ್ಲ ಬಿಟ್ಟು ಹಿಮಾಲಯಕ್ಕೆ ಹೋಗುತ್ತಾರೆ. ತಮ್ಮ ಸಾಧನೆಯ ನಂತರ ಮರಳಿ ಬಂದಾಗ ಅವರ ಪತ್ನಿ - 'ನಿಮಗೆ ಇಷ್ಟು ದಿವಸ ನನ್ನ ಮತ್ತು ಮಕ್ಕಳ ನೆನಪಾಗಲಿಲ್ಲವೇ?' ಎಂಬ ಪ್ರಶ್ನೆ ಕೇಳುತ್ತಾರೆ. ಇದಕ್ಕೆ ರಾಮತೀರ್ಥರು ಅದ್ಭುತವಾಗಿ ಉತ್ತರಿಸುತ್ತಾರೆ - 'ನಿಮ್ಮನ್ನು ಮರೆತಿದ್ದರೆ ತಾನೆ ನೆನಪಿಸಿಕೊಳ್ಳೋದು. ನಿಮ್ಮ ಮೇಲಿನ ಪ್ರೀತಿ ಎಂಬುದು ಉಸಿರಾಟದ ಹಾಗೆ. ಅದು ಸಹಜವಾದ ಪ್ರಕ್ರಿಯೆ. ನಾನು ಉಸಿರಾಡುವುದನ್ನು, ಪ್ರೀತಿಸುವುದನ್ನು ಹೇಳಿಕೊಳ್ಳಬೇಕಿಲ್ಲ'. ಈ ಮಾತೇ ಪ್ರೇಮ ವಿವಾಹಕ್ಕೂ ಮತ್ತು ಅರೇಂಜ್ ವಿವಾಹಕ್ಕೂ ಇರುವ ವ್ಯತ್ಯಾಸವನ್ನು ಗುರುತಿಸಲು ನನಗೆ ಪ್ರೇರಣೆ. ಇಂದಿನ ಸಮಾಜದಲ್ಲಿ ನೈಜವಾದ ಪ್ರೀತಿ, ಪ್ರೇಮ ಇದೆಯಾ? ಎಂಬುದು ಪ್ರಶ್ನೆ. ಅದಿರಲಿ. ನಾನು ಹೇಳ ಹೊರಟಿರುವುದು ಈಗಿನ ಸಮಾಜದಲ್ಲಿ ಅರೇಂಜ್ ವಿವಾಹ ಎಂಬ ತತ್ವದ ಬಗ್ಗೆ. ಈ ತತ್ವದ ಕುರಿತು ಈಗಿನ ತಂದೆ ತಾಯಂದಿರ ನಡವಳಿಕೆಯ ಕುರಿತು ಹಲವು ಪ್ರಶ್ನೆಗಳು ಕಾಡುತ್ತಿದೆ, ಅದನ್ನು ಮುಂದಿಡುತ್ತಿದ್ದೇನೆ ಅಷ್ಟೇ. ಇದು ಯಾರ ವಿರುದ್ಧವೂ ಅಲ್ಲ, ಪರವೂ ಅಲ್ಲ.

ನಾನು ಗಮನಿಸಿದ ಹಾಗೆ ತಂದೆ, ತಾಯಂದಿರು ವಧು ವರರನ್ನು ಹುಡುಕುವ ಬಗೆಯನ್ನು ತಿಳಿಯ ಬಯಸುತ್ತೇನೆ. ಮೊದಲು ತಮ್ಮ ಸಂಬಂಧಿಕರು, ಸ್ನೇಹಿತರು ಮತ್ತು ಪರಿಚಯದವರಿಗೆ ವಿಚಾರವನ್ನು ತಿಳಿಸುತ್ತಾರೆ. ಅವರುಗಳ ನಡುವೆ ಯಾರಾದರು ತಮ್ಮ ಮಕ್ಕಳಿಗೆ ಹೊಂದುವವರು ಇದ್ದಾರ ಎಂದು ಹುಡುಕುತ್ತಾರೆ. ಇದು ಒಂದು ಹಂತ. ನಂತರದ ಹಂತವೇ ಅಂತರ್ಜಾಲದಲ್ಲಿ ಹುಡುಕಾಟ. ಮ್ಯಾಟ್ರಿಮೋನಿಯಲ್ ವೆಬ್ ಸೈಟ್ಗಳಲ್ಲಿ ತಮ್ಮ ಮಕ್ಕಳ ವಿವರಗಳೊಂದಿಗೆ ನೊಂದಾಯಿಸಿಕೊಳ್ಳೋದು. ಅವರವರ ಬೇಡಿಕೆಗೆ ತಕ್ಕಂತೆ ಕರೆಗಳು ಬರಲು ಶುರುವಾಗುತ್ತದೆ ತದನಂತರ ಮುಂದಿನ ಮಾತುಕಥೆ. ನನಗೆ ಇಲ್ಲಿ ಕಾಡುವ ಕೆಲವು ಪ್ರಶ್ನೆಗಳಿದೆ -

೧. ಮಕ್ಕಳು ಪ್ರೀತಿ ಮಾಡುತ್ತಿದ್ದೇನೆ ಎಂದ ತಕ್ಷಣ ತಂದೆ ತಾಯಂದಿರು ಸಹಜವಾಗಿ ಗಾಬರಿ ಬೀಳುತ್ತಾರೆ. ಕಾರಣವಿಷ್ಟೆ, ತಮ್ಮ ಮಗ (ಮಗಳು) ಪ್ರೀತಿಸಿದವರ ಮೇಲೆ ನಂಬಿಕೆಯ ಕೊರತೆ ಇರುತ್ತದೆ. ತಮ್ಮ ಮಕ್ಕಳ ಬಾಳು ಹಾಳಾಗಬಾರದು ಎಂಬ ಕಾಳಜಿ ಇರುತ್ತದೆ. ಆದರೆ, ಮ್ಯಾಟ್ರಿಮೋನಿಯಲ್ ಗಳನ್ನು ಅದ್ಯಾವ ಆಧಾರದ ಮೇಲೆ ನಂಬುತ್ತಾರೆ ? ೨೫-೩೦ ವರ್ಷಗಳು ಜೊತೆಗಿರುವ ಮಕ್ಕಳ ಮೇಲೆ, ಅವರ ಪ್ರೀತಿಯ ಮೇಲೆ ಸಂದೇಹ ಪಟ್ಟು ಗೊತ್ತಿಲ್ಲದ ಅಂತರ್ಜಾಲದ ಮಾಹಿತಿಯನ್ನು ನಂಬುತ್ತಾರಲ್ಲ ಯಾಕೆ ಹೀಗೆ ?

Matrimonial Sites
 
೨. ಹಲವು ಕುಟುಂಬದಲ್ಲಿ ತಂದೆ ತಾಯಂದಿರು ನಾವು ಆಧುನಿಕರು, 21ನೇ ಶತಮಾನದವರು ಹಾಗಾಗಿ ಜಾತಕ, ಮಹೂರ್ತ ಎಂಬುವುದನ್ನೆಲ್ಲ ನೋಡುವುದಿಲ್ಲ ಎನ್ನುತ್ತಾರೆ. ಇರಲಿ, ಅವರ ನಂಬಿಕೆಯ ಬಗ್ಗೆ ನನ್ನ ಪ್ರಶ್ನೆ ಇಲ್ಲ. ಆಶ್ಲೇಷ ನಕ್ಷತ್ರ ಇದ್ದರೆ ಅತ್ತೆ ಇರಬಾರದು, ಮತ್ಯಾವುದೊ ನಕ್ಷತ್ರ ಇದ್ದರೆ ಮಕ್ಕಳಾಗುವುದಿಲ್ಲ ಎಂದು ತಿಳಿದರೆ ಮಕ್ಕಳ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಕಾರಣಕೊಟ್ಟು ಬಂದಿರುವ ಸಂಬಂಧದ ಮಾತನ್ನೇ ನಿಲ್ಲಿಸಿಬಿಡುತ್ತಾರೆ. ಜಾತಕ ಸರಿ ಹೊಂದದೆ ಗಂಡು (ಹೆಣ್ಣು) ಸಿಗೋದು ಕಷ್ಟ ಎಂದಾದರೆ ಮಕ್ಕಳು ಹುಟ್ಟಿದ ಸಮಯವನ್ನೇ ಬದಲು ಮಾಡಿ ಜಾತಕವನ್ನು ಹೊಸದಾಗಿ ಬರೆಸುತ್ತಾರೆ. ಜಾತಕ, ಮಹೂರ್ತದಲ್ಲಿ ನಂಬಿಕೆ ಇಲ್ಲ ಎಂದ ಮೇಲೆ ಈ ರೀತಿ ಮಾಡುವುದಾದರೂ ಏಕೆ ? ಅದರ ಮೇಲೆ ನಂಬಿಕೆ ಇದೆ ಎಂದು ಹೇಳಿಕೊಂಡು ನಂತರ ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವುದು ಯಾಕೆ ? ಅದೇ ಪ್ರೇಮ ವಿವಾಹದಲ್ಲಿ ಇಂತಹ ಅನಿಷ್ಟಕ್ಕೆ ಆಸ್ಪದ ಇರುವುದಿಲ್ಲ. ಅಲ್ಲಿ ಎಲ್ಲಕ್ಕಿಂತ ಮುಖ್ಯವಾದುದು ಪ್ರೀತಿ. ಅದು ಮನುಷ್ಯನ ಸಹಜವಾದ ಗುಣ.

೩. ಮಕ್ಕಳು ಮಾಡುವ ಕೆಲಸದಿಂದ (ಸಾಮಾಜಿಕ ಕೆಲಸವೂ ಸೇರಿ), ಅವರ ಹವ್ಯಾಸದಿಂದ ಅನೇಕರಿಗೆ ಅವರ ಮೇಲೆ ಒಂದಷ್ಟು ಒಳ್ಳೆ ಅಭಿಪ್ರಾಯ ಮೂಡಿರುತ್ತದೆ. ಆ ಮಕ್ಕಳ ತಂದೆ ತಾಯಂದಿರು ಗೊತ್ತಿಲ್ಲದಿದ್ದರೂ ಈ ರೀತಿ ಭಾವನೆ ಮೂಡುವುದು ಸಹಜ. ಪರಿಚಯದ ಕೆಲವರು ಅಂತಹ ಮಕ್ಕಳನ್ನು ನೇರವಾಗಿ ಎಲ್ಲರ ಮುಂದೆ ಹೊಗಳಿರುತ್ತಾರೆ - 'ಬಹಳ ಒಳ್ಳೆ ಕೆಲಸ ಮಾಡುತ್ತಿದ್ದೀಯ. ನಿಮ್ಮಂತಹ ಯುವಕರು (ಯುವಕಿಯರು) ಸಮಾಜಕ್ಕೆ ಅಗತ್ಯ' ಎಂದು. ಆದರೆ, ಅದೇ ಹುಡುಗ (ಹುಡುಗಿ) ಹಾಗೆ ಹೊಗಳಿದವರ ಅಕ್ಕನನ್ನೋ (ಅಣ್ಣ)/ ತಂಗಿಯನ್ನೋ (ತಮ್ಮ)/ ಮಗಳನ್ನೋ (ಮಗ) ಪ್ರೀತಿಸುತ್ತಿದ್ದೇನೆ, ಮದುವೆಗೆ ಒಪ್ಪಿಗೆ ಕೊಡಿ ಎಂದು ಕೇಳಿದರೆ, ಅದೇ ಹುಡುಗ (ಹುಡುಗಿ) ಮರು ಕ್ಷಣದಲ್ಲಿ ಕೆಟ್ಟವನಾಗುತ್ತಾನೆ(ಳೆ). ಎಲ್ಲರೂ ತಮ್ಮ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ಒಳ್ಳೆಯ ಹುಡುಗನನ್ನು (ಹುಡುಗಿ) ಕೊಟ್ಟು ಮದುವೆ ಮಾಡಬೇಕು ಎಂಬ ಆಸೆ ಇರುತ್ತದೆ. ಆದರೆ, ಪ್ರೀತಿ ವಿಚಾರ ಬಂದಾಗ ಮಾತ್ರ ತಾವೇ ಹೊಗಳಿದ ಮಕ್ಕಳ ಗುಣಗಳನ್ನು ಮರೆಯುತ್ತಾರೆ. ಹಾಗಿದ್ದಲ್ಲಿ ಅವರ ಹೊಗಳಿಕೆಗೆ ಅರ್ಥವಾದರೂ ಏನು ? ಬರೀ ಬಾಯಿ ಮಾತು ಆಷ್ಟೇನ ?

೪. ತಮ್ಮ ಮಕ್ಕಳಿಗೆ ಹುಡುಗ (ಹುಡುಗಿ) ಹುಡುಕಬೇಕಾದರೆ ಕೇಳುವ ಕೆಲವು ಪ್ರಶ್ನೆಗಳನ್ನು ಮುಂದಿಡುತ್ತೇನೆ. ಹೆಸರು, ವಯಸ್ಸು, ಕೆಲಸಗಳನ್ನು ಕೇಳೋದು ಸಹಜ. ಅದರ ಜೊತೆಗೆ ವಿದ್ಯಾಭ್ಯಾಸ, ವಿದೇಶ ಪ್ರವಾಸ, ಸ್ವಂತ ಮನೆ, ಅಪ್ಪ ಅಮ್ಮ ಜೊತೆಗೆ ಇದ್ದಾರ, ಹಣಕಾಸಿನ ವ್ಯವಹಾರ. ಬರೀ ಹಣದ ಕುರಿತ ಪ್ರಶ್ನೆಗಳೆ ಅಲ್ಲಿರುತ್ತದೆ. ಕೆಲಸಕ್ಕೆ (ವಿಷೇಶವಾಗಿ MNC) ಹೋಗದ ಹುಡುಗಿಯರನ್ನು ಒಪ್ಪುವುದೇ ಇಲ್ಲ. ಯಾಕೆ ಹೀಗೆ ಎಂದು ಕೇಳಿದರೆ 'ಜೀವನವನ್ನು ಪ್ರಾಕ್ಟಿಕಲ್ ಆಗಿ ನೋಡಬೇಕು' ಎಂಬ ಉತ್ತರ ಸಿದ್ಧವಾಗಿರುತ್ತದೆ. ಇರಲಿ, ತಮ್ಮ ಮಕ್ಕಳು ಸುಖವಾಗಿರಲೆಂದು ಇವೆಲ್ಲ ಕೇಳುತ್ತಾರೆ ಎಂದುಕೊಳ್ಳೋಣ. ಆದರೆ, ಬದುಕೆಂದರೆ ದುಡ್ಡು ಮಾತ್ರನಾ ? ಈ ಪ್ರಶ್ನೆ ಪ್ರೇಮ ವಿವಾಹಕ್ಕೂ ಅನ್ವಯಿಸುತ್ತದೆ. ಹಲವು ಪ್ರಕರಣದಲ್ಲಿ ಹಣಕ್ಕಾಗಿ ಪ್ರೀತಿಸಿವವರನ್ನು ಗಮನಿಸುತ್ತೇವೆ. ಹಣಕ್ಕೆ ಸಂಬಂಧ ಪಟ್ಟ ವಿಚಾರವನ್ನು ಬಿಟ್ಟು ಹುಡುಗನ (ಹುಡುಗಿಯ) ಗುಣ, ಸ್ವಭಾವ, ಹವ್ಯಾಸಗಳ ಬಗೆಗಿನ ಪ್ರಶ್ನೆಗಳು ಇಲ್ಲಿ ನಗಣ್ಯ. ಹಣವಿದ್ದರೆ ತಮ್ಮ ಮಕ್ಕಳು ಸುಖವಾಗಿರುತ್ತಾರೆ ಎಂದು ಹೇಗೆ ತೀರ್ಮಾನಿಸುತ್ತಾರೋ ?

Love or Money?

ಈಗಿನ ಸಮಾಜವನ್ನು ನೋಡಿ ಈ ರೀತಿಯ ಹಲವು ಪ್ರಶ್ನೆಗಳು ನನ್ನಲ್ಲಿ ಮೂಡುತ್ತಿವೆ. ಕೆಲವು ೩-೪ ಪ್ರಶ್ನೆಗಳನ್ನು ಮಾತ್ರ ಮುಂದಿಟ್ಟಿದ್ದೇನೆ. ಸತ್ಯ ಹೇಳುತ್ತೇನೆ, ಈ ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಗಳನ್ನು ನೋಡಿದರೆ ವಧುವರಾನ್ವೇಷಣೆ ಅನ್ನಿಸುವುದರ ಬದಲು ಯಾವುದೋ ಬ್ಯಾಂಕಿನಲ್ಲಿ ಸಾಲ ಕೇಳುತ್ತಿದ್ದೇನೆ ಅಥವಾ ಕೆಲಸ ಹುಡುಕುತ್ತಿದ್ದೇನೆ ಅನ್ನಿಸುತ್ತದೆ. ಈ ತಂದೆ ತಾಯಂದಿರು ಆಡುವ ರೀತಿ, ಕೇಳುವ ಪ್ರಶ್ನೆ ನೋಡಿದರೆ ತಮ್ಮ ಮಕ್ಕಳಿಗೆ ಸಂಗಾತಿ ಬದಲು ವ್ಯಾವಹಾರಿಕ ಪಾಲುದಾರರನ್ನು (business partners) ಹುಡುಕುತ್ತಿದ್ದಾರೆ ಅನ್ನಿಸುತ್ತದೆ. ಇದಲ್ಲದೆ ಮತ್ತೊಂದಿದೆ. ನನ್ನಮ್ಮ ಹೇಳುತ್ತಾಳೆ, ಅವಳ ತಂದೆಯ ಕಾಲದಲ್ಲಿ ಸಂತೆಗೆ ಹೋಗಿ ಎತ್ತನ್ನೋ, ಎಮ್ಮೆಯನ್ನೋ ಮಾರಿ ಅಥವಾ ಕೊಂಡು ತರುತ್ತಿದ್ದರು ಎಂದು. ಆಗಿನ ಕಾಲದಲ್ಲಿ ಅದನ್ನು ಸಂತೆ ಅನ್ನುತ್ತಿದ್ದರು. ಈಗ ಅಂತಹ ಸಂತೆಯನ್ನು ವಧುವರಾನ್ವೇಷಣ ಕೇಂದ್ರ ಎಂದು ಕರೆಯುತ್ತಾರೆ. ಪಶುಗಳು ಇರುವ ಜಾಗಾದಲ್ಲಿ ತಮ್ಮ ಮಕ್ಕಳಿರುತ್ತಾರೆ. ವ್ಯತ್ಯಾಸವಿಷ್ಟೆ, ಪಶುಗಳನ್ನು ಒಂದೊ ಎರಡೊ ವರ್ಷಗಳಿಗೊಮ್ಮೆ ಬದಲಾಯಿಸುತ್ತಿದ್ದರು, ಕಾನೂನಿನ ಅಪ್ಪಣೆ ಬೇಕಿರಲಿಲ್ಲ. ಇಲ್ಲಿ ಬದಲಾಯಿಸಲು ಅಷ್ಟಾಗಿ ಅವಕಾಶ ಇರುವುದಿಲ್ಲ. ಆದರೂ ಸೊಸೆಯನ್ನು (ಅಳಿಯ) ಬದಲಾಯಿಸಬಹುದು, ವಿಚ್ಛೇದನ ಎಂಬ ಕಾನೂನು ಪ್ರಕ್ರಿಯೆ ಮೂಲಕ.

ಭಾರತದ ಸ್ವಾತಂತ್ರ್ಯ ನಂತರದ ಇತಿಹಾಸವನ್ನು ಗಮನಿಸಿದರೆ ಕಮ್ಯೂನಿಷ್ಟರು ಮಾಡಿದ್ದು ಹೀಗೆಯೆ. ತಮ್ಮದು ಶ್ರೇಷ್ಠ ಸಿದ್ಧಾಂತ ಎಂದು ಹೇಳಿಕೊಂಡರು ಪ್ರೇಮ ವಿವಾಹಕ್ಕಿಂತ ಅರೇಂಜ್ ಮ್ಯಾರೇಜ್ ಸರಿ ಅನ್ನುವ ರೀತಿಯಲ್ಲಿ. ತಮಗೆ ಬೇಕಾದ ಹಾಗೆ ಇತಿಹಾಸವನ್ನು ತಿರುಚಿದರು ಹುಟ್ಟಿನ ಸಮಯವನ್ನು ಬದಲಾಯಿಸಿ ಹೊಸ ಜಾತಕ ಬರೆಸಿದಂತೆ. ನಾವು ವಿಶ್ವಮಾನವತ ವಾದವನ್ನು ಪ್ರತಿಪಾದಿಸುತ್ತೇವೆ ಎಂದು ಹೇಳಿಕೊಂಡರು ಹಣದಿಂದ ವ್ಯಕ್ತಿತ್ವವನ್ನು ಅಳೆಯುತ್ತ ಒಳ್ಳೆಯ ಹುಡುಗ (ಹುಡುಗಿ) ಹುಡುಕುತ್ತೇವೆ ಎಂಬಂತೆ. ಹಾಗಂತ ಪ್ರೇಮ ವಿವಾಹ ಮಾಡಿಕೊಳ್ಳುವವರೆಲ್ಲರೂ ಸರಿ ಎನ್ನುತ್ತಿಲ್ಲ. ಅವರಲ್ಲೂ ಹಣ, ಕಾಮದ ಹಿಂದೆ ಬಿದ್ದವರೇ ಹೆಚ್ಚು. ಆದರೆ, ಇವೆಲ್ಲವನ್ನು ಮೀರಿ ನಮ್ಮ ಬದುಕನ್ನು ಪ್ರೀತಿ ಪ್ರೇಮದ ತಳಹದಿಯಲ್ಲಿ ಕಟ್ಟುವಂತಾಗಲಿ.

ಪ್ರೀತಿಯ ಪಿಸುಮಾತು ಇರಲಿ ನಮ್ಮಲ್ಲಿ
ಅದರ ಗಂಧ ಎಲ್ಲೆಲ್ಲು ಪಸರಿಸಲಿ
ಒಲವಿಂದ ಬದುಕು ಹಸನಾಗಲಿ
ಪ್ರೀತಿ ಪ್ರೇಮ ಪ್ರಣಯ ಬದುಕಾಗಲಿ


Listen to your Heart

ಇಂತಹುದನೆಲ್ಲ ನೋಡಿಯೇ ನಾನು ಹೇಳಿದ್ದು 'ಅರೇಂಜ್ ಮ್ಯಾರೇಜ್ ಎಂಬ ಕಮ್ಯೂನಿಸ್ಟ್ ಸಿದ್ಧಾಂತ' ಎಂದು.