ಮೆಕಾಲೆ 1835 ರಲ್ಲಿ ಆಂಗ್ಲ ಶಿಕ್ಷಣವನ್ನು ಭಾರತಕ್ಕೆ ಪರಿಚಯಿಸುತ್ತಾನೆ. ಅದಕ್ಕೂ ಮುನ್ನ ಆತನೇ, 1835, ಫ಼ೆಬ್ರವರಿ 2 ರಂದು, ಬ್ರಿಟೀಷ್ ಸಂಸತ್ತಿನಲ್ಲಿ ಮಾತನಾಡುತ್ತ - "ನಾನು ಭಾರತದ ಉದ್ದಗಲಕ್ಕೂ ಸಂಚರಿಸಿದ್ದೇನೆ. ಅಲ್ಲಿ ಭಿಕ್ಷುಕನಾಗಲಿ, ಕಳ್ಳನಾಗಲಿ ಇಲ್ಲ. ಅಲ್ಲಿನ ಜನರ ನೈತಿಕ ಮೌಲ್ಯಗಳು ತುಂಬ ಉತ್ಕೃಷ್ಟವಾದದ್ದು. ಆ ಜನಗಳಿಗೆ ತಮ್ಮ ಪೂರ್ವಜರ ನೆನಪಿದೆ. ಆದ್ದರಿಂದ ಅವರ ಸಮಾಜ ಬಲಿಷ್ಠವಾಗಿದೆ. ಅವರನ್ನು ಒಡೆದು ಆಳಬೇಕೆಂದರೆ, ಅವರ ಸಂಸ್ಕೃತಿಯನ್ನು ನಾಶಮಾಡಬೇಕು. ಅದಕ್ಕಾಗಿ ನಾವು ಅವರ ಗುರುಕುಲ ಪದ್ಧತಿಯ ಬದಲಾಗಿ ನಮ್ಮ ಆಂಗ್ಲ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರಬೇಕು. ಅವರು ತಮ್ಮ ತನವನ್ನು ಮರೆತು ವಿದೇಶಿ ಮತ್ತು ಆಂಗ್ಲ ಪದ್ದತಿ ಶ್ರೇಷ್ಠ ಎಂದು ಒಪ್ಪಿಕೊಳ್ಳುವಂತಾಗುತ್ತದೆ. ಈ ಶಿಕ್ಷಣ ಪದ್ಧತಿ ಮೂಲಕ ಹಾದು ಹೋಗುವವರು ನಮ್ಮ ರೀತಿ ಬಟ್ಟೆ ಹಾಕಲು ಇಚ್ಚಿಸುತ್ತಾರೆ, ಪಾರ್ಟಿಗಳಿಗೆ ಹಣ ಖರ್ಚು ಮಾಡುತ್ತಾರೆ. ಓಟ್ಟಾರೆ ಹೇಳೋದಾದರೆ ಕಪ್ಪು ಚರ್ಮದ ಆಂಗ್ಲರು ಸೃಷ್ಟಿಯಾಗುತ್ತಾರೆ" ಎಂಬ ವಿಚಾರವನ್ನು ಮಂಡಿಸುತ್ತಾನೆ. ಅದರಂತೆ ಭಾರತಕ್ಕೆ ಆಂಗ್ಲ ಶಿಕ್ಷಣ ಬರುತ್ತದೆ, ನಂತರದ್ದು, ಕರಾಳ ಅದ್ಯಾಯ. 71 ನೇ ಸ್ವಾತಂತ್ರೋತ್ಸವದ ಹೊಸ್ತಿಲಲ್ಲಿ ಇರುವ ನಮಗೆ ಈ ಮಾತನ್ನು ನೆನಪಿಸಿ ಕೊಳ್ಳಲು ಕಾರಣವಿದೆ. ಸ್ವಾತಂತ್ರ್ಯ ಬಂದು 71 ವರ್ಷವಾದರೂ ಹೆಚ್ಚು ಕಡಿಮೆ ನಾವಿನ್ನೂ ಮೆಕಾಲೆ ಹಾಕಿಕೊಟ್ಟ ಆಂಗ್ಲ ಶಿಕ್ಷಣ ಪದ್ಧತಿಯಲ್ಲೇ ಓದುತ್ತಿದ್ದೇವೆ. ಸ್ವಾತಂತ್ರ್ಯ ಬಂದ ಹೊಸತರಲ್ಲಿ ಭಾರತದ ಶಿಕ್ಷಣ ಪದ್ಧತಿಯನ್ನು ಭಾರತೀಯ ರೀತಿಗೆ ಅಳವಡಿಸಿಕೊಳ್ಳುವ ಅವಕಾಶವಿತ್ತು. ಆದರೆ, ನಮ್ಮವರು ಆ ಸಾಹಸ ಮಾಡಲಿಲ್ಲ. ಅದರ ಪರಿಣಾಮವೇ ಹೊಸ ಪೀಳಿಗೆ 'ಸ್ವಾತಂತ್ರ್ಯ ನಂತರದ ಪೀಳಿಗೆ - ಕಪ್ಪು ಚರ್ಮದ ಆಂಗ್ಲರು'.
ಸ್ವಾತಂತ್ರ್ಯ ನಂತರ ಇಲ್ಲಿಯವರೆಗೆ 2-3 ಪೀಳಿಗೆಗಳು ಬಂದಿವೆ. 30 ವರ್ಷಕ್ಕೆ ಒಂದು ಪೀಳಿಗೆ ಎಂದು ಹೇಳುವುದಾದರೆ ಇಲ್ಲಿಯವರೆಗೆ 2 ಪೀಳಿಗೆಗಳು ಬಂದೆವೆ. ಈ ಎರಡೂ ಪೀಳಿಗೆಗಳು ಕಲಿತಿದ್ದು ಮೆಕಾಲೆಯ ಆಂಗ್ಲ ಶಿಕ್ಷಣ ಪದ್ದತಿಯಲ್ಲೇ. 1948 ರಿಂದ 1977 ವರೆಗಿನ ಪೀಳಿಗೆ ಮತ್ತು 1978 ರಿಂದ 2007 ವರೆಗಿನ ಪೀಳಿಗೆಯವರ ಯೋಚನೆಗಳಲ್ಲಿ ಸಾಮ್ಯತೆಗಳು ಇವೆ ಹಾಗೆ, ವ್ಯತ್ಯಾಸಗಳೂ ಇವೆ. ಇದು ಸಹಜ ಬಿಡಿ, ಇದರಲ್ಲೇನು ವಿಶೇಷತೆ ಇಲ್ಲ. ಆದರೆ, ಈ ಎರಡೂ ಪೀಳಿಗೆಯವರ ಕೊಡುಗೆ ಏನು? ಮುಂದಿನ ಪೀಳಿಗೆಯವರ ಮೇಲೆ ಇವರುಗಳ ಪ್ರಭಾವವೇನು? ಎಂಬುದು ನನ್ನ ಪ್ರಶ್ನೆ. ಮೊದಲು ಈ ಎರಡೂ ಪೀಳಿಗೆಯ ನಡುವಿನ ಸಾಮ್ಯತೆಗಳನ್ನು ಮುಂದಿಡುತ್ತೇನೆ (ಬಹುತೇಕ ಜನರ ಮನಸ್ಥಿತಿಯನ್ನು ಪ್ರಸ್ತುತ ಪಡಿಸುತ್ತಿದ್ದೇನೆ, ಎಲ್ಲರೂ ಹೀಗೆ ಎಂಬುದಲ್ಲ).
- ಭಾರತದಿಂದ ಎಲ್ಲವನ್ನು ಪಡೆದುಕೊಂಡು, ಭಾರತಕ್ಕಾಗಿ ಏನು ಮಾಡದೆ, ವಿದೇಶದಲ್ಲಿ ಜೀವನ ಮಾಡುವುದನ್ನು 'ಸಾಧನೆ' ಅನ್ನುತ್ತಾರೆ.
 - ರೂಪಾಯಿ ವಿರುದ್ಧ ಡಾಲರ್ ಬೆಲೆ ಹೆಚ್ಚು ಅನ್ನುವುದು ಇವರಿಗೆ 'ಖುಷಿ'ಯ ಸಂಗತಿ.
 - ತಾವು, ತಮ್ಮ ಬಂಧು ಹಾಗು ಸ್ನೇಹ ವರ್ಗದವರಿಗಿಂತ ಆರ್ಥಿಕವಾಗಿ ಹೆಚ್ಚು ಸಬಲರಾಗಿರಬೇಕು. ಇದನ್ನು ಇವರು 'ಯಶಸ್ಸು' ಅನ್ನುತ್ತಾರೆ.
 - ಸರ್ಕಾರಕ್ಕೆ ತೆರಿಗೆ ಕಟ್ಟುವುದಷ್ಟೇ ತಮ್ಮ 'ಸಾಮಾಜಿಕ ಜವಾಬ್ದಾರಿ' ಎಂದು ಇವರ ನಂಬಿಕೆ.
 - ಕಲಿತ ವಿದ್ಯೆಗಿಂತ ಗಳಿಸಿದ ಅಂಕ ಮುಖ್ಯ. ಇದನ್ನು ಇವರುಗಳು 'ಬುದ್ಧಿವಂತೆಕೆ' ಅನ್ನುತ್ತಾರೆ.
 - ಸತ್ಯ ಮಾತಾಡಿದರೆ 'ಆಧಿಕ ಪ್ರಸಂಗಿ'. ಪ್ರಶ್ನೆ ಕೇಳಿದರೆ 'ತಲೆಹರಟೆ' ಅನ್ನುತ್ತಾರೆ.
 - ಸಿನಿಮಾದಲ್ಲಿ ಆದ್ರೆ ಚಪ್ಪಾಳೆ ತಟ್ಟುತ್ತಾರೆ. ಜೀವನದಲ್ಲಿ ಆದ್ರೆ ತಲೆ ಮೇಲೆ ತಟ್ಟುತ್ತಾರೆ.
 - ನಾವು ಹೇಳಿದ್ದಷ್ಟನ್ನೇ ಮಕ್ಕಳು ಮಾಡಬೇಕು. ಮಕ್ಕಳಿಗೆ ಇಷ್ಟವಿರಲಿ ಬಿಡಲಿ. ಇವರ ಪ್ರಕಾರ ಇದು 'ವಿಧೇಯತೆ'.
 - ಮಾಡುವ ಎಲ್ಲ ಒಳ್ಳೆ ಕೆಲಸಗಳನ್ನು ಅವರು ಪ್ರೋತ್ಸಾಹಿಸುತ್ತಾರೆ ಎನ್ನುವುದು ಬರೀ 'ಭ್ರಮೆ'.
 
ಈ ಸಂಗತಿಗಳು ನಮ್ಮ ಮನೆಗಳಲ್ಲೇ ಢಾಳಾಢಾಳಾಗಿ ಕಾಣಿಸುತ್ತದೆ.
- ಮಕ್ಕಳು ವಿದೇಶದಿಂದ ಡಾಲರ್ ಕಳಿಸುತ್ತಿದ್ದು, ರೂಪಾಯಿ ವಿರುದ್ಧ ಡಾಲರ್ ಬೆಲೆ ಹೆಚ್ಚಾದಷ್ಟು ತಮ್ಮ ಮನೆಯ ಖಜಾನೆ ತುಂಬುತ್ತದೆ. ಆದರೆ, ದೇಶಕ್ಕೆ ಇದರಿಂದಾಗುವ ನಷ್ಟದ ಬಗೆಗೆ ಯೋಚಿಸುವುದಿಲ್ಲ.
 - ತಮ್ಮ ಮಕ್ಕಳು ವಿದೇಶದಲ್ಲಿ ಇರುತ್ತಾರೆ, ಅವರ ಖರ್ಚಿನಲ್ಲಿ ತಂದೆ ತಾಯಂದಿರು ವಿದೇಶಕ್ಕೆ ಹೋಗಿ ಬರುತ್ತಾರೆ. ಅಲ್ಲಿಯದನ್ನು ಹೊಗಳುತ್ತ, ತಮ್ಮ ಮಕ್ಕಳ ಹೆಗ್ಗಳಿಗೆ ಬಗ್ಗೆ ಹೇಳಿಕೊಳ್ಳುತ್ತಾರೆ. ಆದರೆ, ಭಾರತವನ್ನು ಹೊರದೇಶದವರು ಹೊಗಳುವಂತೆ ಮಾಡಬೇಕು ಎಂದು ಯೋಚಿಸುವುದೇ ಇಲ್ಲ.
 - ಪ್ರತಿ ವರ್ಷ ತೆರಿಗೆ ಕಟ್ಟುತ್ತಾರೆ. ತೆರಿಗೆ ಹಣ ಸರಿಯಾಗಿ ವಿನಿಯೋಗ ಆಗದಿದ್ದರೆ ದೂರು ದಾಖಲಿಸುತ್ತಾರೆ. ಆದರೆ, ಆದಕ್ಕೆ ಪರಿಹಾರ ಮಾತ್ರ ಎಂದಿಗೂ ಯೋಚಿಸುವುದಿಲ್ಲ.
 - ದಾಯಾದಿ ಮತ್ಸರವಂತೂ ಭಾರತದಲ್ಲಿ ದ್ವಾಪರ ಯುಗದಿಂದಲೂ ಇದ್ದದ್ದೆ. ನನ್ನ ಆರ್ಥಿಕ ಮಟ್ಟ ನನ್ನ ದಾಯಾದಿಗಿಂತ ಹೆಚ್ಚಿರಬೇಕು. ಆದರೆ, ದೇಶದ ಆರ್ಥಿಕತೆ ಬಗೆಗೆ ಯೋಚನೆ ಮಾಡುವುದೇ ಇಲ್ಲ.
 - ಸಿನಿಮಾ ಒಂದರಲ್ಲಿ ನಾಯಕ ತ್ಯಾಗವೋ, ಪ್ರೀತಿಯೋ, ಸಾಧನೆಯೋ ಮಾಡಿದರೆ ಚಪ್ಪಾಳೆಯ ಸುರಿಮಳೆ. ಅದೇ ರೀತಿಯ ಸಾಧನೆ ಅಥವಾ ತ್ಯಾಗ ತಮ್ಮ ಮನೆಯಲ್ಲಿ ಆಗುವುದನ್ನು ಅರಗಿಸಿಕೊಳ್ಳುವುದಿಲ್ಲ. ದೇಶದ ಏಳಿಗೆಗಾಗಿ ಮನೆ ಮನೆಯಲ್ಲಿ ಭಗತ್ ಸಿಂಗ್ ತರಹದವರು ಹುಟ್ಟಿ ಬರಲಿ. ಆದರೆ, ನಮ್ಮ ಮನೆಯಲ್ಲಲ್ಲ, ಪಕ್ಕದ ಮನೆಯಲ್ಲಿ ಎಂಬ ಧೋರಣೆ.
 - ಸತ್ಯಮೇವ ಜಯತೆ ಅನ್ನುತ್ತಾರೆ. ಅದರೊಟ್ಟಿಗೆ 'ಸಾವಿರ ಸುಳ್ಳು ಹೇಳಿ ಮದುವೆ ಮಾಡು' ಅಂತಲೂ ಹೇಳುತ್ತಾರೆ. ಯಾಕೆ ಹೀಗೆ? ಎಂದು ಕೇಳಿದರೆ ಆತ, 'ತಲೆಹರಟೆ'.
 - ಅಪ್ಪ ಅಮ್ಮ ಹೇಳಿದ್ದನ್ನು ಮಕ್ಕಳು ಪಾಲಿಸಬೇಕು. ಹೌದು, ಮಕ್ಕಳ ಒಳಿತಿಗಾಗಿ ತಂದೆ ತಾಯಿ ಹೇಳಿದ್ದನ್ನು ಮಕ್ಕಳು ಕೇಳಬೇಕು. ಅದೇ ಮಕ್ಕಳು, ತಂದೆ ತಾಯಿ ಹೇಳದ, ಸಮಾಜದ ಕೆಲಸವನ್ನು ಮಾಡಿದರೆ, ಅವರನ್ನು 'ಅಧಿಕ ಪ್ರಸಂಗಿ' ಎನ್ನುತ್ತಾರೆ.
 - ಶಿಕ್ಷಣ ಪದ್ಧತಿಯಂತೂ ಆಂಗ್ಲರನ್ನೇ ಪಾಲಿಸುತ್ತಿದ್ದೇವೆ. ಯೂರೋಪಿನಲ್ಲಿ ವರ್ಷದಲ್ಲಿ 9 ತಿಂಗಳು ಚಳಿ. ಅದಕ್ಕಾಗಿ ಅಲ್ಲಿ ಬ್ಲೇಜ಼ರ್, ಟೈ ಕಟ್ಟಿರುತ್ತಾರೆ. ನಮ್ಮಲ್ಲಿ ಬೇಸಿಗೆ 40 ಡಿಗ್ರಿ ತನಕ ತಲುಪುತ್ತದೆ. ಆದರೂ ಎಂ.ಬಿ.ಎ ವಿದ್ಯಾರ್ಥಿಗಳು ಬ್ಲೇಜ಼ರ್ ಹಾಕಬೇಕು, ಟೈ ಕಟ್ಟಬೇಕು.
 - ಯಾರಾದರು ಕೆಟ್ಟದಾಗಿ ಮಾತಾಡಿದರೆ, ನಮ್ಮಲ್ಲಿ 'ಸಂಸ್ಕೃತ' ಮಾತಾಡುತ್ತಿದ್ದೀಯ ಎನ್ನುವವರನ್ನು ನೋಡಿದ್ದೇವೆ. ಸಂಸ್ಕೃತ; ದೇವಭಾಷೆ, ಭಾರತದ ಸಂಸ್ಕೃತಿಯ ಪ್ರತೀಕ ಎಂಬುದನ್ನು ಮರೆತೆ ಹೋದಂತಿದೆ.
 - ಇಂಗ್ಲೀಷ್ ಮಾತಾಡುವುದು ಎಂದರೆ ಹೆಮ್ಮೆಯ ಸಂಗತಿ. ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಮಕ್ಕಳ ಬಾಯಲ್ಲಿ ಕನ್ನಡ ಕೇಳುವುದೇ ಅಪರೂಪವಾಗಿದೆ. ಹ್ಯಾರಿ ಪಾಟರ್ ನ ಕರ್ತೃ ಜೇ.ಕೆ. ರೌಲಿಂಗ್ ಗೊತ್ತು, ಕುಮಾರವ್ಯಾಸ, ಪಂಪ, ರನ್ನ, ಲಕ್ಷ್ಮೀಶ ಗೊತ್ತಿಲ್ಲ.
 - ತಮ್ಮ ಮಕ್ಕಳು, ಸ್ನೇಹಿತರೊಂದಿಗೆ ಸಿನಿಮಾಗೆ ಹೋಗುವುದನ್ನು ಒಪ್ಪುತ್ತಾರೆ. ಆದರೆ, ಅದೇ ಮಗು ಆಶ್ರಮಕ್ಕೆ (ರಾಮಕೃಷ್ಣ ಆಶ್ರಮ, ಆರ್ಟ್ ಆಫ಼್ ಲಿವಿಂಗ್) ಹೋಗುವುದನ್ನು ಸಹಿಸುವುದಿಲ್ಲ.
 - ಲಂಡನಿನಲ್ಲಿ ಶೇಕ್ಸ್ಪಿಯರ್ ನ ಸಮಾಧಿಯನ್ನು ಪ್ರವಾಸದ ಒಂದು ಭಾಗವಾಗಿ ಹೆಮ್ಮೆಯಿಂದ ತೋರಿಸುತ್ತಾರೆ. ಆದರೆ, ನಮ್ಮಲ್ಲಿ, ಕುಮಾರವ್ಯಾಸ 'ಕರ್ನಾಟ ಭಾರತ ಕಥಾಮಂಜರಿ' ಯನ್ನು ಕೂತು ಬರೆದ ಗದಗಿನ ವೀರನಾರಾಯಣ ದೇವಾಲಯವನ್ನು ಹಲವರು ನೋಡಿಯೇ ಇಲ್ಲ ಎಂಬುದು ಬೇಸರದ ಸಂಗತಿ.
 
- ಮೊದಲನೇ ತಲೆಮಾರಿನವರು ತಂದೆ ತಾಯಿಯರ ಬಗ್ಗೆ ಭಯ ಭಕ್ತಿ ಇಟ್ಟು ಕೊಂಡಿದ್ದರು. ಎರಡನೇ ತಲೆಮಾರಿನವರಿಗೆ ಭಕ್ತಿ ಇದೆ. ಆದರೆ, ಭಯ ಬಹುತೇಕ ಕಮ್ಮಿಯಾಗಿದೆ.
 - ಸ್ವಂತಕ್ಕಿಂತಲೂ ಹೆಚ್ಚಾಗಿ ಸಮಾಜಕ್ಕಾಗಿ ಕೆಲಸ ಮಾಡುವ ಮನಸ್ಥಿತಿ ಎರಡನೇ ಪೀಳಿಗೆಯವರಲ್ಲಿ ಹೆಚ್ಚಾಗಿದೆ.
 - ವಿದೇಶಿ ವ್ಯಾಮೋಹದ ಕಾರಣ ಈ ದಿನಗಳಲ್ಲಿ ವೃದ್ಧಾಶ್ರಮಗಳು ಹೆಚ್ಚಾಗಿವೆ.
 - ಎರಡನೇ ಪೀಳಿಗೆಯವರು ಅಂತರ್ಜಾಲದ ಮೂಲಕ ಜಗತ್ತಿನೊಂದಿಗೆ ಸಂಪರ್ಕ ಹೊಂದಿರುತ್ತಾರೆ. ಮೊದಲಿನ ಪೀಳಿಗೆಯವರು ಮನಸ್ಸಿನ ಮೂಲಕ ಸಂಬಂಧಿಕರು, ಸ್ನೇಹಿತರೊಂದಿಗೆ ಸಂಬಂಧ ಗಟ್ಟಿಯಾಗಿಸಿಕೊಂಡ್ಡಿದ್ದರು.
 
ಈ ವ್ಯತ್ಯಾಸ ಮತ್ತು ಸಾಮ್ಯತೆಗಳನ್ನು ಗಮನಿಸಿದರೆ ನಾವಿನ್ನು ಆಂಗ್ಲರ ಪ್ರಭಾವದಿಂದ ಸಂಪೂರ್ಣ ಹೊರಬಂದಿಲ್ಲ ಎಂದೇ ತೋರುತ್ತದೆ. ಇಂದಿಗೂ ನಾವು, ಪ್ರತಿಯೊಂದು ಸಮಸ್ಯೆಗೂ ಸರ್ಕಾರ ಪರಿಹಾರ ಕೊಡಬೇಕು ಎಂದು ನಿರೀಕ್ಷಿಸುತ್ತೇವೆ ಹೊರತು, ನಾವೇನಾದರೂ ಮಾಡಬಹುದ? ಎಂಬ ಯೋಚನೆ ಮಾಡುವುದಿಲ್ಲ. ನಮ್ಮ ಬಗ್ಗೆ, ನಮ್ಮ ಮನೆಯ ಬಗ್ಗೆ ಯೋಚಿಸಿದಷ್ಟು ಮುಖ್ಯವಾಗಿ, ಮುಕ್ತವಾಗಿ ನಮ್ಮ ಸಮಾಜದ ಬಗೆಗೆ ಚಿಂತಿಸುತ್ತಿಲ್ಲ. ಇವೆಲ್ಲವೂ ಮೆಕಾಲೆ ಅರ್ಥಾತ್ ಆಂಗ್ಲರು ತಂದ ಶಿಕ್ಷಣ ಪದ್ದತಿಯ ಪ್ರಭಾವ. ಆತನೇ ಹೇಳಿಕೊಂಡಂತೆ ನಾವು ನಮ್ಮ ತನವನ್ನು ಮರೆತು ಆಂಗ್ಲರನ್ನು ಅನುಸರಿಸುತ್ತಿದ್ದೇವೆ. ನಮ್ಮ ಶಿಕ್ಷಣ ಪದ್ಧತಿ, ಭಾರತೀಯ ಪದ್ಧತಿಯಲ್ಲಿ ನಡೆಯುವಂತಾಗಬೇಕು. ಜಗತ್ತನ್ನು ಅರಿಯುವ ಮೊದಲು ನಮ್ಮ ದೇಶವನ್ನು ನಾವು ಅರಿಯುವಂತಾಗಬೇಕು. ನನಗಾಗಿ ಬದುಕುತ್ತೇನೆ ಎನ್ನುವುದಕ್ಕಿಂತ ದೇಶಕ್ಕಾಗಿ ಬದುಕಬೇಕು ಎಂಬ ಭಾವನೆ ಮೂಡಬೇಕು. ಇಲ್ಲದಿದ್ದಲ್ಲಿ, ಸ್ವಾತಂತ್ರ್ಯ ನಂತರದ 3 ನೇ ಪೀಳಿಗೆ ಕೂಡ ಆಂಗ್ಲರನ್ನೇ ಅನುಕರಣೆ ಮಾಡುತ್ತಾ 'ಕಪ್ಪು ಚರ್ಮದ ಆಂಗ್ಲ'ರಾಗೇ ಮುಂದುವರೆಯುತ್ತೇವೆ. 
