ಕೆಲದಿನಗಳ ಹಿಂದೆ ಪರಿಚಯಸ್ಥರೊಬ್ಬರ ಹತ್ತಿರ ನಮ್ಮ ಬದುಕಿನ ಶೈಲಿ, ನಾವು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಮಾತಾಡುತ್ತಿದ್ದೆ. ನಾವು ನಮ್ಮ ಇಷ್ಟದಂತೆ ಬದುಕು ನಡೆಸುವುದು ಸರಿಯಾ ಅಥವಾ ನಮ್ಮ ಪಾಲಿಗೆ ಬಂದದ್ದು ಪಂಚಾಮೃತ ಎಂದು ಮಂದುವರೆಯಬೇಕ ಎಂಬುದರ ಬಗೆಗೆ ಜೋರಾಗೆ ಮಾತು ನಡೆಯುತ್ತಿತ್ತು. ನನ್ನ ವಾದ; ನಮ್ಮ ಇಷ್ಟದಂತೆ, ನಮ್ಮ ಮನಸ್ಸು ಹೇಳಿದಂತೆ ಬದುಕು ನಡೆಸುವುದು ಎಂದಿತ್ತು. ಆದರೆ ಅವರ ವಾದ ಬದುಕಿನಲ್ಲಿ ಹಳೆಯದನ್ನೆಲ್ಲಾ ಮರೆಯಬೇಕು, ನಾವು ಅಂದುಕೊಂಡದ್ದೆಲ್ಲಾ ನಡೆಯುವುದಿಲ್ಲ ಆದ್ದರಿಂದ ಬಂದದ್ದನ್ನು ಒಪ್ಪಿಕೊಂಡು ನಾವು ಮಂದುವರೆಯಬೇಕು ಎಂದಿತ್ತು. ಈ ಮಾತು ಮುಂದುವರೆಯುತ್ತ ಒಂದು ರೀತಿ ವಾಗ್ವಾದವೇ ಆಯ್ತು. ಎಂದಿನಂತೆ ನನಗೆ ನನ್ನ ವಾದವೇ ದೊಡ್ಡದಾಯಿತು. ಮನಸ್ಸು ಅವರ ವಾದವನ್ನು ಒಪ್ಪುತ್ತಿದ್ದರೂ ಬುದ್ಧಿ ಅದನ್ನು ತಿರಸ್ಕರಿಸುತ್ತಿತ್ತು. ಕಾರಣ ಸ್ವಾಭಿಮಾನ ಅಡ್ಡಬರುತ್ತಿತ್ತು. ಇದು ಸಹಜ ಬಿಡಿ, ಚಿಕ್ಕವಯಸ್ಸಿನಿಂದಲೂ ಯಾರಿಂದಲೂ ಬೇಡದ ನಾನು, ನನ್ನ ಆಲೋಚನೆಗೆ ವಿರುದ್ಧವಾಗಿ ಯಾರಾದರೂ ಮಾತಾಡಿದಾಗ ತಿರುಗಿ ವಾದಿಸುವುದು ನನ್ನ ಗುಣವಾಗಿದೆ. ನೋಡುಗರಿಗೆ ಅದು ಅಹಂಕಾರ ನನ್ನ ಮಟ್ಟಿಗೆ ಅದು ಸ್ವಾಭಿಮಾನ. 
ನಾನು ಒಂಟಿಯಾಗಿ ಕುಳಿತಾಗ ಈ ಮಾತುಕಥೆ ಕುರಿತು ನನ್ನ ಯೋಚನ ಲಹರಿ ಮುಂದುವರಿಯಿತು. ಜೀವನದಲ್ಲಿ ನಾವು ಅಂದುಕೊಂಡದ್ದೆಲ್ಲಾ ನಡೆಯುವುದಿಲ್ಲ ಎನ್ನುವುದು ಕಹಿಯಾದ ಸತ್ಯ. ಹಾಗೆಂದು ನಾವು ಬದುಕನ್ನು ಹೀಗೆ ನಡೆಸಬೇಕು ಎಂದುಕೊಳ್ಳುವುದು ತಪ್ಪ? ಎಂಬ ಪ್ರಶ್ನೆ ಕಾಡಿತು. ಇಂತಹ ಪ್ರಶ್ನೆಗಳಿಗೆ ಉತ್ತರ ದೊರಕುವುದು ನಮ್ಮ ಜೀವನಾನುಭವದಿಂದ ಅಥವಾ ಇತಿಹಾಸದ ಪುಟದಿಂದ. ಜೀವನಾನುಭವ ತಾನಾಗೆ ಪಾಠ ಹೇಳುತ್ತದೆ. ಇತಿಹಾಸದ ಪುಟಗಳಿಂದ ನಾವು ಕಲಿಯಬೇಕು ಅಷ್ಟೇ. ಇದು ನಾನು ಕಂಡುಕೊಂಡಿರುವ ವಿಧಾನ.
ಇತಿಹಾಸವನ್ನೇ ಗಮನಿಸುವುದಾದರೇ ಇಂತಹ ಪ್ರಶ್ನೆಗಳಿಗೆ ಸ್ವಾಮೀ ವಿವೇಕಾನಂದ ಮತ್ತು ಅಕ್ಕ ನಿವೇದಿತೆಯರ ಜೀವನ ನಮಗೆ ಉತ್ತರವಾಗುತ್ತದೆ.
ಸ್ವಾಮೀಜೀ ತಮ್ಮ ತರುಣಾವಸ್ಥೆಯಲ್ಲಿದ್ದಾಗ ದೇವರಿದ್ದಾನ ಎಂಬ ಪ್ರಶ್ನೆಯನ್ನು ತನಗೆ ಗೊತ್ತಿದ್ದವರನ್ನೆಲ್ಲಾ ಕೇಳುತ್ತಾರೆ. ದೇವರನ್ನು ಕಾಣಲೇ ಬೇಕು ಎಂಬ ದೃಢ ವಿಶ್ವಾಸದಿಂದ ತನ್ನ ಪ್ರಯತ್ನ ಮುಂದುವರೆಸುತ್ತಾರೆ. ಒಂದು ಹಂತದಲ್ಲಿ ಸ್ವಾಮೀಜೀ ಗುರುದೇವ ರವೀಂದ್ರನಾಥ ಟ್ಯಾಗೋರರನ್ನು ಭೇಟಿಯಾಗಿ ದೇವರ ಕುರಿತು ಕೇಳುತ್ತಾರೆ. ಟ್ಯಾಗೋರರು 'ನಿನ್ನದು ಯೋಗಿಯ ಕಣ್ಣು, ನೀನು ಬಯಸಿದರೆ ದೇವರನ್ನು ಕಾಣಬಹುದು' ಎಂದು ಉತ್ತರಿಸುತ್ತಾರೆ. ಕೇಳಿದವರೆಲ್ಲರೂ ಇಂತಹ ಉತ್ತರ ಕೊಡುತ್ತಿದ್ದರು. ಇದರಿಂದ ಸ್ವಾಮೀಜೀಗೆ ಸಮಾಧಾನ ಅಥವಾ ತೃಪ್ತಿ ಸಿಗಲಿಲ್ಲ. ನಮ್ಮ ನಂಬಿಕೆಯಲ್ಲಿ ದೃಢವಾದ ವಿಶ್ವಾಸವಿದ್ದಲ್ಲಿ ಯಾವುದೋ Cosmic Energy ನಮಗೆ ಸಹಾಯ ಮಾಡುತ್ತದೆ. ದೇವರ ಕುರಿತಂತೆ ಹಲವರನ್ನು ವಿಚಾರಿಸುತ್ತಿರಬೇಕಾದರೆ ವ್ಯಕ್ತಿಯೊಬ್ಬರು ದಕ್ಷಿಣೇಶ್ವರಕ್ಕೆ ಹೋಗಿ ಶ್ರೀ ರಾಮಕೃಷ್ಣರನ್ನು ಭೇಟಿಯಾಗು ಎಂಬ ಸಲಹೆ ಕೊಡುತ್ತಾರೆ. ಅದರಂತೆ, ಸ್ವಾಮೀಜೀ ದಕ್ಷಿಣೇಶ್ವರಕ್ಕೆ ಹೋಗುತ್ತಾರೆ. ಮುಂದೆ ನಡೆದದ್ದೆಲ್ಲ ಇತಿಹಾಸ.
ಅದೇ ರೀತಿ, ಅಕ್ಕ ನಿವೇದಿತೆಯ ಬದುಕು. ತಾನೊಬ್ಬ ಧರ್ಮ ಜಿಜ್ಞಾಸುವಾಗಿ ತಾನು ನಂಬಿದ್ದ ಸಿದ್ಧಾಂತಗಳ ಮೇಲೆ ಅನೇಕ ಸಂದೇಹಗಳಿರುತ್ತದೆ. ತನ್ನ ಸಂದೇಹಗಳನ್ನು ಪರಿಹಾರ ಮಾಡಿಕೊಳ್ಳಲು ಚರ್ಚಿನ ಪಾದ್ರಿ, ತನ್ನ ತಂದೆ, ತಾಯಿ, ಸ್ನೇಹಿತರು, ಶಿಕ್ಷಕರು ಮತ್ತು ತತ್ವಜ್ಞಾನಿ ಎನ್ನಿಸಿಕೊಂಡ ಅನೇಕರನ್ನು ಪ್ರಶ್ನಿಸುತ್ತಾಳೆ. ಆದರೆ ಪ್ರಯತ್ನ ಮಾತ್ರ ವ್ಯರ್ಥ. ತನಗೆ ಸಮಾಧಾನವಾಗುವ ರೀತಿಯಲ್ಲಿ ಯಾರೂ ಸಹ ಉತ್ತರಿಸುವುದಿಲ್ಲ. ಒಂದು ಹಂತದಲ್ಲಿ ಚರ್ಚಿಗೆ ಹೋಗುವುದನ್ನು ಅಕ್ಕ ನಿಲ್ಲಿಸುತ್ತಾಳೆ. ತನ್ನ ಪಾಡಿಗೆ ಮಕ್ಕಳಿಗೆ ಪಾಠ ಹೇಳುತ್ತಾ ಜೀವನ ಮುಂದುವರೆಸುತ್ತಾಳೆ. ಸ್ವಾಮೀ ವಿವೇಕಾನಂದರು ಯೂರೋಪಿಗೆ ಬಂದಾಗ ನಿವೇದಿತೆಯ ಸ್ನೇಹಿತೆಯೊಬ್ಬರು ಸ್ವಾಮೀಜೀಯನ್ನು ಭೇಟಿಯಾಗಲು ಹೇಳುತ್ತಾರೆ. ಸ್ನೇಹಿತೆಯ ಬಲವಂತದ ಕಾರಣ ತನ್ನ ಸಂದೇಹಗಳಿಗೆ ಉತ್ತರ ಸಿಗಬಹುದು ಎಂಬ ನಂಬಿಕೆ ಇಲ್ಲದಿದ್ದರೂ ಹೋಗುತ್ತಾಳೆ ಅಕ್ಕ. ಅಂದು ಸ್ವಾಮೀಜೀಯನ್ನು ಭೇಟಿಯಾಗಲು ಬಂದವರಲ್ಲಿ ಅಕ್ಕನೇ ಕೊನೆಯವಳು! ಬಂದದ್ದು ಕೊನೆಯಾದರೂ ಅಕ್ಕನ ಸಂದೇಹಗಳೆಲ್ಲಾ ಪರಿಹಾರವಾಗುತ್ತದೆ ಮತ್ತು ಭಾರತಕ್ಕಾಗಿ ಅಕ್ಕ ನಿವೇದಿತೆಯಾಗಿ ನಿವೇದನಗೊಳ್ಳುತ್ತಾಳೆ. ಇತಿಹಾಸದಲ್ಲಿ ಅಕ್ಕನ ಹೆಸರು ಅಜರಾಮರವಾಗುತ್ತದೆ.
ನನ್ನ ಬದುಕಿನಲ್ಲಿ ಸಹ ಇಂತಹ ಕೆಲವು ಘಟನೆಗಳನ್ನು ಅನುಭವಿಸಿದ್ದೇನೆ.
ನನ್ನ ಜೀವನದಲ್ಲಿ ತುಂಬ ಹತ್ತಿರ ಎನ್ನಬಹುದಾದಂತಹ ಸ್ನೇಹಿತರೇನು ಇಲ್ಲ, ಹಾಗಾಗಿ ಪುಸ್ತಕವನ್ನು ಓದುವುದು ಅಭ್ಯಾಸವಾಯಿತು. ಬಹುಶಃ ನಾನು 07 ನೇ ತರಗತಿಯಲ್ಲಿದ್ದಾಗ ಅಮ್ಮ 'ಅಜೇಯ' ಎಂಬ ಪುಸ್ತಕ ನನ್ನ ಕೈಲಿಟ್ಟರು. ಭಾರತದ ಸ್ವಾತಂತ್ರ್ಯ ಇತಿಹಾಸದ ಒಂದು ಆಯಾಮ ಪರಿಚಯವಾಯಿತು. ಪಠ್ಯ ಪುಸ್ತಕದಲ್ಲಿ ಗಾಂಧೀ, ನೆಹರು ಬಗೆಗೆ ಮಾತ್ರ ಕೇಳಿದ್ದ ನನಗೆ ಅಜೇಯ ಬೇರೆನೇ ದಿಕ್ಕು ತೋರಿಸಿತು. ಹತ್ತನೇ ತರಗತಿಯಲ್ಲಿ ಸ್ವಾತಂತ್ರ್ಯದ ಇತಿಹಾಸ ಓದಬೇಕಾದರೆ ಕ್ರಾಂತಿಕಾರಿಗಳ ಬಗ್ಗೆ 1-2 ಸಾಲುಗಳು ಮಾತ್ರ ಇದ್ದದ್ದು ಗಮನಿಸಿದೆ. ಚಂದ್ರಶೇಖರ ಆಜಾದರ ಬದುಕು ಎಷ್ಟು ದೊಡ್ಡದು ಆದರೆ, ನಮ್ಮ ಪಠ್ಯ ಪುಸ್ತಕ ಅವರ ಸಾಧನೆಯನ್ನು ವರ್ಣಿಸಲೇ ಇಲ್ಲ. ಇದರ ಕುರಿತು ನಮ್ಮ ಶಿಕ್ಷಕರು, ಅಮ್ಮನನ್ನು ಕೇಳಿದೆ. ಆದರೆ ಸಮಂಜಸವಾದ ಉತ್ತರ ಮಾತ್ರ ಸಿಗಲಿಲ್ಲ. ಸಂದೇಹ ಮನಸ್ಸಿನಲ್ಲಿ ಹಾಗೆ ಉಳಿಯಿತು. ಒಂದು ದಿನ ಅಚಾನಕ್ಕಾಗಿ ನಮ್ಮ ಶಿಕ್ಷಕರೊಬ್ಬರು 'ಸ್ವಾತಂತ್ರ್ಯ ವೀರ ಸಾವರ್ಕರ್' ಎಂಬ ಪುಸ್ತಕ ಕೈಯಲ್ಲಿಟ್ಟರು. ಆ ಪುಸ್ತಕದಿಂದ ಕ್ರಾಂತಿಕಾರ್ಯದ ಮತ್ತೊಂದು ಆಯಾಮವನ್ನು ತಿಳಿದುಕೊಂಡೆ. ಆ ಪುಸ್ತಕ ಸ್ವಾತಂತ್ರ್ಯ ಇತಿಹಾಸ ಮಾತ್ರ ತಿಳಿಸದೆ ನನ್ನ ಗುರು ಯಾರೆಂಬುದನ್ನು ತೋರಿಸಿಕೊಟ್ಟಿತು. ಅವರೇ, ಆ ಪುಸ್ತಕದ ಕರ್ತೃ 'ಚಕ್ರವರ್ತಿ ಸೂಲಿಬೆಲೆ'. ಸ್ವಾತಂತ್ರ್ಯದ ಇತಿಹಾಸದ ಬಗ್ಗೆ ನನಗಿದ್ದ ಎಲ್ಲಾ ರೀತಿಯ ಸಂದೇಹಗಳನ್ನೂ ಬಗೆಹರಿಸಿದವರು ಅಣ್ಣ ಚಕ್ರವರ್ತಿ. ಅವರು ನನ್ನ ಮೇಲೆ ಬೀರಿರುವ ಪ್ರಭಾವ ಏನು ಎಂಬುದು ನನ್ನನ್ನು ತಿಳಿದವರಿಗೆ ಗೊತ್ತಿದೆ.
ಕಾಲೇಜಿನ ಕೊನೆ ದಿನಗಳಲ್ಲಿ campus selection ಅಲ್ಲಿ ಕೆಲಸ ಸಿಗಬೇಕೆಂದು ಅಂದುಕೊಂಡಿದ್ದೆ. ಅದರಂತೆ ಒಂದು ಖಾಸಗಿ ಕಂಪನಿಗೆ ಆಯ್ಕೆಯಾದೆ. ಒಂದು ಕಂಪನಿಗೆ ಆಯ್ಕೆಯಾದ ನಂತರ ನಿರಾಳನಾದೆ, ಮತ್ತೊಂದಕ್ಕೆ ಪ್ರಯತ್ನ ಪಡಬೇಕು ಅಥವಾ ಇಂತಹುದೇ ಕಂಪನಿಗೆ ಸೇರಬೇಕೆಂಬ ಯೋಚನೆ ಮಾಡಿದವನೇ ಅಲ್ಲ. ಒಂದು ಸಂಜೆ ಕಾಲೇಜಿನ ಸ್ನೇಹಿತರು ಮಾರನೆ ದಿವಸ Bosch campus interview ಇದೆ, ನೀನು ಸಹ ಬಾ ಎಂದು ವಿಷಯ ತಿಳಿಸಿದರು. ಹೇಗಿದ್ದರೂ ಒಂದು ಕಂಪನಿಯಲ್ಲಿ ಕೆಲಸ ಆಗಿದೆ, ಇನ್ನು ಮತ್ತೊಂದಕ್ಕೆ ಯಾಕೆ ಎಂಬ ಉಡಾಫ಼ೆ ಭಾವನೆ ನನ್ನಲಿತ್ತು. ಆದದ್ದಾಗಲಿ ಒಂದು ಪ್ರಯತ್ನ ಮಾಡೋಣ ಎಂದು ಹೋದೆ. ಎಲ್ಲರಿಗಿಂತ ಕಡೆಯಲ್ಲಿ ಹೋದವನು ನಾನು. ವಿಚಿತ್ರ ಎಂದರೆ ನಮ್ಮ ಕಾಲೇಜಿನಿಂದ ಆಯ್ಕೆ ಆದದ್ದು 03 ಜನ, ಅದರಲ್ಲಿ ನಾನು ಒಬ್ಬ. ಇಂದಿಗೂ ನಾನು Bosch ಅಲ್ಲೇ ಕೆಲಸ ಮಾಡುತ್ತಿರುವುದು. ನಾನು ಪ್ರಯತ್ನ ಪಟ್ಟು ಆಯ್ಕೆಯಾದ ಮೊದಲ ಕಂಪನಿಗೆ ನಾನು ಹೋಗಲೇ ಇಲ್ಲ.
ಬದುಕಿನಲ್ಲಿ ಎಲ್ಲ ಕಾರ್ಯದಲ್ಲೂ ನಮ್ಮ ಪ್ರಯತ್ನವಿರಬೇಕು ನಿಜ ಆದರೆ, ನಮ್ಮ ಪಾಲಿಗೆ ಬಂದದನ್ನು ಅನುಭವಿಸುತ್ತಾ ಮುಂದುವರೆಯಬೇಕು ಎಂದು ನನಗೆ ಅನ್ನಿಸಿತು. ಈ ತತ್ವ ನಮ್ಮ ಜೀವನದ ಪ್ರತಿಯೊಂದು ಘಟನೆಗೂ ಅನ್ವಯಿಸಬಹುದು. ಮದುವೆ ವಿಚಾರದಲ್ಲಂತೂ ಇದು ಹೆಚ್ಚು ಸಮಂಜಸ ಎಂದನ್ನಿಸುತ್ತದೆ. ಪ್ರಕೃತಿ ಅಥವಾ ದೈವದ ಮುಂದೆ ನಮ್ಮ ದೃಷ್ಟಿಕೋನ ತೀರ ಸಂಕುಚಿತ. ನಮಗೆ ಏನು ಬೇಕು ಎಂಬುದನ್ನು ನಾವು ಅಂದಾಜಿಸುವುದಕ್ಕಿಂತ ಆ ದೈವಕ್ಕೆ ಬಿಟ್ಟರೆ ಒಳಿತು ಎಂದು ನನಗೆ ತೋರುತ್ತದೆ. ಇದೇ ವಿಚಾರವನ್ನು ಕೆ.ವಿ.ಅಯ್ಯರ್ ರವರು ತಮ್ಮ 'ಶಾಂತಲ' ಕಾದಂಬರಿಯಲ್ಲಿ ತಮ್ಮದೇ ರೀತಿಯಲ್ಲಿ ಮುಂದಿಡುತ್ತಾರೆ. ಆ ಸಾಲುಗಳು ಹೀಗಿವೆ - 'ಜಗನ್ನಿಯಾಮಕನು ಯಾವ ಪುರುಷನಿಗೆ ಯಾವ ಸ್ತ್ರೀ ಎಂದು ವಿಧಾಯಕ ಮಾಡಿರುವನೋ, ಪ್ರಾಪ್ತ ಸಮಯದಲ್ಲಿ ಆ ಜಗನ್ನಿಯಾಮಕನೇ ಆ ಸ್ತ್ರೀಗೂ ಆ ಪುರುಷನಿಗೂ ಒಬ್ಬರನ್ನೊಬ್ಬರು ಕಣ್ಮನಗಳಿಂದ ಆಕರ್ಷಿಸುವ, ಅಪೇಕ್ಷಿಸುವ, ತನ್ನ ಧರ್ಮ ಪತ್ನಿ(ಪತಿ) ಎಂದು ಅರಿಯುವ ಶಕ್ತಿಯನ್ನೂ ಕರುಣಿಸುತ್ತಾನೆ''.
ಇದನ್ನೆಲ್ಲಾ ಗಮನಿಸಿದಾಗ ಆ ಪರಿಚಯಸ್ಥರು ಮಾಡಿದ ವಾದ ಸರಿ ಎಂದು ತೋರಿತು. ಇದರೊಟ್ಟಿಗೆ ಮತ್ತೊಂದು ತತ್ವ ಅರಿವಿಗೆ ಬಂತು. 'ಪ್ರಯತ್ನ ಪೂರ್ವಕವಾಗಿ ಮಾಡುವ ಪ್ರಕ್ರಿಯೆಗಿಂತ ಸಹಜತೆಯ ಪ್ರಕ್ರಿಯೆ ಶ್ರೇಷ್ಠ' ಎಂದು. ಎಲ್ಲರ ಬದುಕು ಒತ್ತಾಯ ಪೂರ್ವಕವೋ, ಪ್ರಯತ್ನ ಪೂರ್ವಕವೋ ಆಗುವುದಕ್ಕಿಂತ ಸಹಜವಾಗಿರಲಿ ಎಂಬುದು ನನ್ನ ಆಶಯ. ಅಂದಹಾಗೆ ಒಂದು ವಿಚಾರ ಮರೆತಿದ್ದೆ. ನನ್ನ ಜೊತೆ ವಾದ ಮಾಡಿ ನನ್ನನ್ನು ಈ ಚಿಂತನೆಯೆಡೆಗೆ ನಡೆಸಿದವರು ಹುಬ್ಬಳ್ಳಿಯ ನಮ್ಮ SNP ಸಹೋದರಿ; ರಮ್ಯ.
