June 23, 2020

ದೂಷಿಸುವ ಮುನ್ನ ತಮ್ಮ ಇತಿಹಾಸವನ್ನು ತಿಳಿದುಕೊಳ್ಳುವುದು ಮೇಲು

ಅದೊಂದು ದುರ್ಗಮವಾದ ಪರ್ವತ ಶ್ರೇಣಿ. ಹಿಮದಿಂದಲೇ ಆವೃತವಾದ ಬೆಟ್ಟಗಳು. ಹಿಮ ಕರಗಿ ಬೆಟ್ಟದ ಮೇಲಿಂದ ನೀರು ಹರಿದು ನದಿಯಾಗಿ ಮಾರ್ಪಾಟಾದ ಪ್ರದೇಶ. ಪ್ರತಿಯೊಂದು ಬೆಟ್ಟವೂ ಸರಿಸುಮಾರು 10000-16000 ಅಡಿ ಎತ್ತರ. ಆ ಎತ್ತರದಲ್ಲಿ ಆಮ್ಲಜನಕ ಕಡಿಮೆ ಇರುವುದರಿಂದ ಉಸಿರಾಟವೂ ಸಹ ಕಷ್ಟ. ಈ ಎಲ್ಲಾ ಪರ್ವತ ಶ್ರೇಣಿಗಳನ್ನು ನಡೆದೆ ಕ್ರಮಿಸಬೇಕು. ಬುಡದಿಂದ ಪರ್ವತದ ತುದಿಯನ್ನು ತಲುಪಲು ಬರೋಬ್ಬರಿ 21 ದಿನಗಳು ಬೇಕು. ಇಲ್ಲಿನ ದೂರವನ್ನು ಮೈಲಿಗಳಲ್ಲಿ ಅಳೆಯುವುದಿಲ್ಲ, ದಿನಗಳಲ್ಲಿ ಆಳೆಯುತ್ತಾರೆ! ಮೊದಲು ಸಿಕ್ಕುವ ಬೆಟ್ಟ ಸುಮಾರು 7000 ಅಡಿ. ಅದನ್ನು ಹತ್ತಿ ಆ ಇಳಿಜಾರಿನಲ್ಲಿ ಕ್ರಮಿಸಿದರೆ ನಮ್ಮೆದುರಿಗೆ ಸಿಗುವುದು ಮತ್ತೊಂದು ದೈತ್ಯ. ಆ ಬೆಟ್ಟ ಸುಮಾರು 14000 ಅಡಿ ಎತ್ತರ. ದಾರಿಯುದ್ದಕ್ಕೂ ಒಂದೆಡೆ ಹಿಮಾಚ್ಚಾದಿತ ಬೆಟ್ಟ, ಮಳೆ ಮತ್ತು ಹಿಮದಿಂದ ಒದ್ದೆಯಾಗಿ ಪಾಚಿ ಕಟ್ಟಿರುವ ಇಳಿಜಾರು. ಮತ್ತೊಂದು ಕಡೆ ಬೃಹತ್ ಪ್ರಪಾತ. ಬಿದ್ದರೆ ಹೆಣ ಸಿಗುವುದು ಅಸಾಧ್ಯ ಎನ್ನುವಷ್ಟು ದುರ್ಗಮ. ಮಧ್ಯಾಹ್ನ 3 ಘಂಟೆಗೆ ಕತ್ತಲಾಗುವಂತಹ ಪ್ರದೇಶವದು. ಕಾಲ್ನಡಿಗೆ ಬಿಟ್ಟು ಜೀಪಲ್ಲಿ ಹೋದರೆ ದಾರಿ ಮಧ್ಯೆ ಗಾಡಿ ಹೂತು ಹೋಗುವ ಸಂಭವವೇ ಹೆಚ್ಚು. ಅದನ್ನು ರಿಪೇರಿ ಮಾಡಿ ಮತ್ತೆ ಮುಂದುವರೆಯುವುದು ಯಮಸಾಹಸವೇ ಸರಿ. ಇಷ್ಟೆಲ್ಲಾ ಕಷ್ಟಪಟ್ಟು ಪರ್ವತದ ತುದಿ ತಲುಪಿದಾಗ ಸಿಗುವುದೇ ನಮ್ಮ ಪಕ್ಕದ ಎರಡು ರಾಷ್ಟ್ರಗಳು!

ಹೌದು, ಖಂಡಿತವಾಗಿಯೂ ಈ ವಿವರಣೆ ಭಾರತದ ಈಶಾನ್ಯ ರಾಜ್ಯದ ಕಣಿವೆಯದ್ದೇ. ಅದನ್ನು NFEA (North East Frontier Agency - ನೇಫ಼ಾ) ಎಂದು ಕರೆಯುತ್ತಾರೆ. ಥಾಗ್ಲಾ ಪರ್ವತ ಶ್ರೇಣಿ ನಿಜಕ್ಕೂ ದುರ್ಗಮ. ಮಿಸಾಮಾರಿ ಎಂಬ ತಪ್ಪಲು ಪ್ರದೇಶದಿಂದ ಭಾರತದ ತುತ್ತ ತುದಿಯ ಗಡಿಯಲ್ಲಿರುವ ಸೈನಿಕ ನೆಲೆ; ತವಾಂಗ್ ಸುಮಾರು ಹತ್ತೂವರೆ ಸಾವಿರದಷ್ಟು ಅಡಿಗಳ ಎತ್ತರದಲ್ಲಿದೆ. ತಪ್ಪಲು ಮತ್ತು ತುದಿಯ ಮಧ್ಯೆ ಸಿಗುವುದೆ ಹದಿನಾಲ್ಕು ಸಾವಿರ ಅಡಿಯಿರುವ 'ಸೇಲಾ ಪಾಸ್', ಏಳು ಸಾವಿರ ಅಡಿ ಇರುವ 'ಚಾಕೋ' ಎಂಬ ಪ್ರದೇಶ. ಇದನೆಲ್ಲಾ ದಾಟಿದರೆ ಸಿಗುವುದು ನಮ್ಕಾ ಚು ನದಿ. ಅದರ ಆಚೆ ಇರುವ ತವಾಂಗ್ ತಲುಪಿದರೆ ಸಿಗುವುದೇ ಭಾರತದ ಪಾಲಿನ ದುರಾದೃಷ್ಟ ಫ಼ಾರ್ವರ್ಡ್ ಪೋಸ್ಟ್ - 'ಧೋಲಾ ಪೊಸ್ಟ್'! ಅದು ಭಾರತ, ಭೂತಾನ್ ಮತ್ತು ಚೀನಾ (ಟಿಬೆಟ್) ಸೇರುವ ಗಡಿ ಪ್ರದೇಶ. ಒಂದು ಸಣ್ಣ ಹುಲ್ಲು ಕಡ್ಡಿ ಅಲ್ಲಾಡಿದರೂ ಸಹ ಬೆಂಕಿ ಹತ್ತಿಕೊಳ್ಳುವಂತಹ ಜಾಗವದು. ಅಂತಹ ಜಾಗದಲ್ಲಿ ಭಾರತದ ಒಂದು ಸೇನಾ ನೆಲೆಯನ್ನು ಸ್ಥಾಪಿಸಿ, ಅದರ ರಕ್ಷಣೆಯ ಹೊಣೆಯನ್ನು ಸೈನ್ಯಕ್ಕೆ ಒಪ್ಪಿಸಿ, ಸೈನ್ಯಕ್ಕೆ ಮದ್ದು ಗುಂಡುಗಳನ್ನು ಬಿಡಿ, ಆ ವಾತಾವರಣಕ್ಕೆ ಹೊಂದಿಕೊಳ್ಳುವ ಉಣ್ಣೆಯ ಬಟ್ಟೆ ಅಥವಾ ಶೂಗಳನ್ನು ಕೊಟ್ಟಿರಲಿಲ್ಲ ದಿಲ್ಲಿಯ ಏ.ಸಿ. ಕೋಣೆಯಲ್ಲಿ ಕೂತಿದ್ದ ಭಾರತದ ಅಂದಿನ ಪ್ರಧಾನಿಯಾದ ಜವಾಹರಲಾಲ್ ನೆಹರೂ, ರಕ್ಷಣಾ ಮಂತ್ರಿ ಕೃಷ್ಣ ಮೇನನ್ ಮತ್ತು ಲೆಫ಼್ಟಿನೆಂಟ್ ಜನರಲ್ ಬಿ.ಎನ್. ಕೌಲ್. 


ಚೀನಾ 1950ರಲ್ಲಿ ಟಿಬೆಟ್ ಮೇಲೆ ಆಕ್ರಮಣ ಮಾಡಿತು. ಚೀನಾದ ದಾಳಿಗೆ ತತ್ತರಿಸಿದ ಟಿಬೇಟ್, ತಮ್ಮನ್ನು ರಕ್ಷಿಸಿ ಎಂದು ಭಾರತವನ್ನು ಅಂಗಲಾಚಿ ಬೇಡಿಕೊಂಡರು. ಆದರೆ, ನೆಹರೂ ಅದಕ್ಕೆ ಬೆಲೆಕೊಡಲಿಲ್ಲ. ನೆನೆಪಿಡಿ, ಟಿಬೆಟ್ ಭಾರತ ಮತ್ತು ಚೀನಾ ನಡುವೆ ಒಂದು ತಡೆಗೋಡೆಯಾಗಿತ್ತು (buffer country). ಚೀನಾ ಟಿಬೆಟ್ ಅನ್ನು ಆಕ್ರಮಿಸಿಕೊಳ್ಳುವುದೆಂದರೆ ಮುಂದೆ ಭಾರತಕ್ಕೆ ತೊಂದರೆ ಎಂದರ್ಥ. ಟಿಬೆಟ್ ನೆಲದಲ್ಲಿ ನಿಂತು ಭಾರತದೆಡೆಗೆ ಫ಼ಿರಂಗಿ ಇಟ್ಟು ಉಡಾಯಿಸುತ್ತಾರೆಂದು ರಾಜತಾಂತ್ರಿಕತೆ ತಿಳಿದಿರುವ ಪ್ರತಿಯೊಬ್ಬರೂ ಉಹಿಸಬಹುದಾದದ್ದೇ. ಈ ವಿಚಾರ ತಿಳಿದಿದ್ದ ಬ್ರಿಟೀಷರು ಟಿಬೆಟ್ ಅನ್ನು ತುಂಬ ಜಾಗರೂಕರಾಗಿ ಕಾಯ್ದುಕೊಂಡು ಬಂದಿದ್ದರು. ಟಿಬೆಟ್ ಆಕ್ರಮಣದ ಕುರಿತು ಭಾರತ ತಕ್ಕಮಟಿಗೆ ಪ್ರತಿಕ್ರಿಯಿಸಲಿಲ್ಲ. 1950, ಸೆಪ್ಟೆಂಬರ್ ಅಲ್ಲಿ ನಡೆದ ಸಂಯುಕ್ತ ರಾಷ್ಟ್ರ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದಾಗ 'ಅದರ ಚರ್ಚೆಯೇ ಬೇಡ, ಅದು ಚೀನಾದ ಆಂತರಿಕ ವಿಚಾರ. ಅವರವರೇ ಶಾಂತಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುತ್ತಾರೆ' ಎಂದಿತ್ತು ಭಾರತ! ನೆರೆ ರಾಷ್ಟ್ರವಾದ ಭಾರತವೇ ಇದರ ಬಗೆಗೆ ಆಸಕ್ತಿ ತೋರದಿದ್ದಾಗ ಇನ್ಯಾವ ದೇಶ ತಾನೆ ಇದರ ಕುರಿತು ವಿಚಾರ ಮಾಡೀತು? ಅಲ್ಲಿಗೆ ಟಿಬೇಟ್ ನಿರಾತಂಕವಾಗಿ ಚೀನಿಯರ ವಶವಾಗಿತ್ತು. ಶತ್ರುವೊಬ್ಬ ನಮ್ಮ ಪಕ್ಕದಲ್ಲೇ ಬಂದು ಕೂತಿದ್ದ! ನಂತರ, ನಿಧಾನವಾಗಿ ಚೀನಾ ಭಾರತದ ಗಡಿ ಹತ್ತಿರ ರಸ್ತೆ ಹಾಕುವ, ಯುದ್ಧ ವಿಮಾನ ನೆಲೆಗಳನ್ನು ನಿರ್ಮಿಸುವ, ದೂರವಾಣಿ ಸಂಪರ್ಕ ಕಲ್ಪಿಸುವ ಕೆಲಸಗಳನ್ನು ಸಮರ್ಪಕವಾಗಿ ಮುಂದುವರೆಸಿತು. ಹೆದ್ದಾರಿಯನ್ನು ನಿರ್ಮಿಸಲು ತೊಡಗಿದ ಚೀನಾ ಅಕ್ಸಾಯ್ ಚಿನ್ ಪ್ರದೇಶದ ಗಡಿ ಭಾಗವನ್ನು ಸದ್ದಿಲ್ಲದೇ ಕಬಳಿಸಿತು. ಕೆಲವೇ ವರ್ಷಗಳಲ್ಲಿ ಭಾರತ ಟಿಬೆಟ್ ಗಡಿಯಲ್ಲಿ ಮೂರು ಟನ್ ತೂಕದ ವಾಹನಗಳು ಸಂಚಾರ ಮಾಡಬಹುದಾದಂತಹ ಹೆದ್ದಾರಿಯನ್ನು ನಿರ್ಮಿಸಿಬಿಟ್ಟಿತು. ಇದೆಲ್ಲವನ್ನು ತಿಳಿದಿದ್ದ ನೆಹರೂ, ಸಂಸತ್ತಿನ ಮುಂದೆ ಈ ವಿಚಾರ ಪ್ರಸ್ತಾಪಿಸಲೇ ಇಲ್ಲ. ಭಾರತ ಅನ್ನುವುದಕ್ಕಿಂತಲೂ ನೆಹರೂ ಈ ವಿದ್ಯಮಾನಗಳಿಗೆ ಕುರುಡಾಗಿದ್ದರು! ಟಿಬೇಟ್ ವಶಪಡಿಸಿಕೊಂಡ 12 ವರ್ಷಕ್ಕೆ ಭಾರತದ ನೇಫ಼ಾ ಗಡಿಯೊಳಕ್ಕೆ ನುಗ್ಗಿತ್ತು ಚೀನಾ.

ಅತ್ತ ಚೀನಾ ಯುದ್ಧಕ್ಕೆ ವ್ಯವಸ್ಥಿತವಾಗಿ ತಯಾರಾಗುತ್ತಿದ್ದರೆ ಇತ್ತ ನೆಹರೂ ಗಡಿ ತಂಟೆ ತೆಗೆಯಲೇ ಇಲ್ಲ. 'ಹಿಂದೀ ಚೀನಿ ಭಾಯಿ ಭಾಯಿ' ಎಂಬ ಚೀನಾದ ತಾಳಕ್ಕೆ ನೆಹರೂ ಮುಂದಾಳತ್ವದ ಭಾರತ ಕುಣಿಯುತ್ತಿತ್ತು. ಕಾಂಗ್ರೇಸಿನ ಶಶಿ ತರೂರ್ ಅವರೇ ಹೇಳಿದಂತೆ ಯುನೈಟೆಡ್ ನೇಷನ್ಸ್ನ ಶಾಶ್ವತ ಸದಸ್ಯತ್ವವನ್ನು ಚೀನಾಕ್ಕೆ ಬಿಟ್ಟೂಕೊಟ್ಟಿದ್ದು ಇದೇ ನೆಹರೂ. ಚೀನಾ ಬರೆದು ಕೊಟ್ಟದ್ದನ್ನೆಲ್ಲಾ ನೆಹರೂ ನಂಬಿದ್ದರು. ಟಿಬೆಟ್ ಮೇಲಿದ್ದ ಮಿಲಿಟರಿ, ಪೋಸ್ಟಲ್ ಮತ್ತು ಟೆಲಿಗ್ರಾಫ಼ಿಕ್ ಹಕ್ಕನ್ನು ತಕರಾರಿಲ್ಲದೆ ಚೀನಾಕ್ಕೆ ಬಿಟ್ಟುಕೊಟ್ಟರು ನೆಹರೂ. ನೆಹರೂ ಅವರ ಜೀವಿತಾವದಿಯಲ್ಲಿ ಭಾರತ ಮತ್ತು ಚೀನಿಯರ ನಡುವೆ ಯುದ್ಧವಿಲ್ಲ ಎಂಬುದು ದೇಶದಾತ್ಯಂತ ಘೋಷವಾಕ್ಯವಾಗಿತ್ತು. 'ಚೀನಾದೊಂದಿಗೆ ಯುದ್ಧವಿಲ್ಲ' ಎಂಬುದನ್ನು ನೆಹರೂ ತಮಗೆ ತಾವೆ ತೀರ್ಮಾನಿಸಿಕೊಂಡು ಅದನ್ನೇ ಭಾರತದ ರಾಷ್ಟ್ರೀಯ ನೀತಿ ಎಂಬಂತೆ ಮಾಡಿದರು. 1955 ರಲ್ಲಿ ಚೀನಾ 'ನಮ್ಮ ಗಡಿ ಇನ್ನೂ ಇತ್ಯರ್ಥವಾಗಿಲ್ಲ' ಎಂದು ಅಪಸ್ವರವೆತ್ತಿತು. ಆಗಲೂ ಎಚ್ಚೆತ್ತುಕೊಳ್ಳದ ನೆಹರೂ 'ಹಿಂದೀ ಚೀನಿ ಭಾಯಿ ಭಾಯಿ' ಎಂಬ ಮಂತ್ರವನ್ನೇ ಹೇಳುತ್ತಾ ಹೋದರು. ಯುದ್ಧವಿಲ್ಲದಿದ್ದರೂ ಭಾರತದ ಗಡಿ ಭಾಗದಲ್ಲಿ ಒಂದು ರಸ್ತೆ ಮಾಡುವ ಯೋಜನೆ ಸಹ ತಯಾರಿಸಲಿಲ್ಲ ನೆಹರೂ! ಆಕ್ಸಾಯ್ ಚಿನ್ ಭಾಗ ಮಂಜಿನಿಂದ ಆವೃತವಾಗಿದೆ ಅಲ್ಲೊಂದು ಹುಲ್ಲು ಕಡ್ಡಿ ಸಹ ಬೆಳೆಯುವುದಿಲ್ಲ, ಅದನ್ನು ಕಳೆದುಕೊಂಡರೆ ಭಾರತಕ್ಕೆ ನಷ್ಟವಿಲ್ಲ, ಚೀನಿಯರಿಗೆ ಲಾಭವಿಲ್ಲ ಎಂಬಂತಹ ಬೇಜವಾಬ್ದಾರಿ ಹೇಳಿಕೆಯನ್ನು ಸಂಸತ್ತಿನಲ್ಲೇ ಕೊಟ್ಟಿದ್ದರು ನೆಹರೂ. ಸ್ವಾತಂತ್ರ್ಯದ ಹೊಸತರಲ್ಲಿ ಪಾಕೀಸ್ತಾನ ದಾಳಿ ಮಾಡಿದಾಗ ಭಾರತದ ಸೇನೆ ಅವರನ್ನು ಹಿಮ್ಮೆಟ್ಟಿತು. 'ಯುದ್ಧ ನಿಲ್ಲಿಸಿ, ಈ ವಿಷಯವನ್ನು ನಾನು ಸಂಯುಕ್ತ ರಾಷ್ಟ್ರ ಸಂಸ್ಥೆಯ ಮುಂದಿಟ್ಟು ಬಗೆಹರಿಸಿಕೊಳ್ಳುತ್ತೇನೆ' ಎಂದು ಪಾಕ್ ಆಕ್ರಮಿತ ಕಾಶ್ಮೀರ ಎಂಬ ವಿವಾದಿತ ಪ್ರದೇಶವನ್ನು ಸೃಷ್ಟಿ ಮಾಡಿದ್ದೇ ನೆಹರೂ. ಜಗತ್ತಿನೆದುರಿಗೆ ತಾವು ಶಾಂತಿ ಪ್ರಿಯರು ಎಂದು ಮೆರೆಯಲು ನೆಹರೂ ಅಲಿಪ್ತ ನೀತಿಯನ್ನು ಅನುಸರಿಸಿದರು. ಯಾವ ರಾಷ್ಟ್ರದೊಂದಿಗೂ ಶಸ್ತ್ರಾಸ್ತ್ರದ ಒಪ್ಪಂದಗಳಿಗೆ ಮುಂದಾಗಲಿಲ್ಲ. ಪದೇ ಪದೇ ಸೈನ್ಯಾಧಿಕಾರಿಗಳು ಒತ್ತಾಯ ಮಾಡಿದ ಪರಿಣಾಮವಾಗಿ 'ಭಾರತ ಒಂದಷ್ಟು ಯುದ್ಧ ಸಾಮಗ್ರಿ ಖರಿದಿಸಬಹುದು. ಪಾಕೀಸ್ತಾನದೊಂದಿಗೆ ನಾವು ಶಸ್ತ್ರಾಸ್ತ್ರ ಸಂಗ್ರಹಣೆಯ ಪೈಪೋಟಿ ನಡೆಸಬೇಕಿಲ್ಲ' ಎಂದರು ನೆಹರೂ.

1962ರ ಹೊತ್ತಿಗೆ ಗಡಿ ತಂಟೆ ತೆಗೆದ ಚೀನಾ ದೊಡ್ಡ ಯುದ್ಧಕ್ಕೆ ಸಿದ್ಧವಾಗಿದೆ ಎಂದು ಭಾರತಕ್ಕೆ ಮನವರಿಕೆಯಾಯಿತು. ತಕ್ಷಣ ಸೇನೆಯ ಪರಿಸ್ಥಿತಿಯನ್ನು ಪರಿಗಣಿಸದೆ ನೇಫ಼ಾ ಗಡಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ಸೈನ್ಯಕ್ಕೆ ಕೊಟ್ಟಿದ್ದೇವೆ ಎಂದು ಘೋಷಿಸಿ ಎಲ್ಲಕ್ಕೂ ಮುಂಚೆಯೆ ಯುದ್ಧಕ್ಕೆ ಸಿದ್ಧ ಎಂದು ಜಗತ್ತಿಗೆ ಸಾರಿತು ಭಾರತ ಸರ್ಕಾರ. ನೆನಪಿಡಿ, ನೇಫ಼ಾ ಗಡಿ ಹತ್ತಿರ ಬಲಿಷ್ಟವಾದ ಸೈನ್ಯ ಜಮಾವಣೆ ಮಾಡಿದ ಚೀನಾ 'ಅಲ್ಲಿ ನಮ್ಮ ಗಡಿ ರಕ್ಷಣಾ ಪಡೆ ಮಾತ್ರ ಇದೆ' ಎಂದು ಸುಳ್ಳು ಹೇಳಿಕೆ ಕೊಡುತ್ತಿತ್ತು. ಚೀನಾದ ಯುದ್ಧ ಸಿದ್ಧತೆ ಕಂಡು ಗಾಬರಿಗೊಂಡ ಭಾರತದ ಸೇನಾ ಮುಖ್ಯಸ್ಥ ಜನರಲ್ ತಿಮ್ಮಯ್ಯ - 'ನೇಫ಼ಾ ಗಡಿಯನ್ನು ಕಾಯಲು ಹೆಚ್ಚಿನ ಸೈನ್ಯಕೊಡಿ, ಮದ್ದುಗೊಂಡು ಕೊಡಿ, ಅಲ್ಲಿನ ವ್ಯವಸ್ಥೆ ಸರಿ ಮಾಡಿ' ಎಂದು ಕೇಳುತ್ತಲೇ ಬಂದರು. ಅವರ ಮಾತನ್ನು ಕಡೆಗಣಿಸಿ, ಅವರನ್ನೇ ಅವಮಾನಿಸಿ, ಅನಾಮಧೇಯರಾಗಿ ನಿವೃತ್ತಿ ಹೊಂದುವಂತೆ ಮಾಡಿದರು ನೆಹರೂ, ಮೆನನ್! ಅವರ ಜಾಗಕ್ಕೆ 1959ರಲ್ಲಿ ಮೇಜರ್ ಜನರಲ್ ಬಿ.ಎಂ.ಕೌಲ್ ಎಂಬ ಅಧಿಕಾರಿಗೆ ಲೆಫ಼್ಟಿನೆಂಟ್ ಜನರಲ್ ಹುದ್ದೆಗೆ ಬಡ್ತಿ ನೀಡಿ ಭಾರತ ಸೈನ್ಯದ ಮುಖ್ಯಸ್ಥನನ್ನಾಗಿ ಮಾಡಿದರು. ನೇಫ಼ಾ ಗಡಿಯಲ್ಲಿ ಚೀನಾ 600 ಸೈನಿಕರೊಂದಿಗೆ ಯುದ್ಧ ಮಾಡುತ್ತದೆ ಎಂದು ತಮಗೆ ತಾವೆ ಊಹಿಸಿಕೊಂಡು ಬಿಸಿಲು ನಾಡಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಂಜಾಬ್ ಮತ್ತು ರಜಪೂತ ದಳಕ್ಕೆ ಯಾವುದೇ ಪೂರ್ವ ತಯಾರಿ ಇಲ್ಲದೆ ಹಿಮಾಚ್ಚಾಧಿತ ನೇಫ಼ಾ ಗಡಿಯ ಜವಾಬ್ದಾರಿಯನ್ನು ಭಾರತ ಸರ್ಕಾರ ನೀಡಿತು. 1962ರ ಹೊತ್ತಿಗೆ ಭಾರತ ಚೀನಾ ಯುದ್ಧ ಥಾಗ್ಲಾ ಪರ್ವತ ಶ್ರೇಣಿಯಲ್ಲಿ ಶುರುವಾಗುತ್ತದೆ. ಯುದ್ಧದಲ್ಲಿ ಭಾರತದ ಕಡೆ ಇದ್ದ ಸೈನಿಕರ ಸಂಖ್ಯೆ ಸುಮಾರು 1000, ಒಂದಷ್ಟು ಕಾಡತೂಸು ಮತ್ತು ಗ್ರೆನೇಡ್ಗಳು ಮತ್ತು ಪಾಕಿಸ್ತಾನದ ಗಡಿಯಲ್ಲಿ ಬಳಸಬಹುದಾದಂತಹ ಬಟ್ಟೆಗಳು. ಇಷ್ಟು ಸಂಖ್ಯೆ ಬಳಸಿಕೊಂಡು ಚೀನಿಯರ 600 ಸೈನಿಕರನ್ನು ಸೋಲಿಸಬಹುದು ಎಂಬ ಅರ್ಥವಿಲ್ಲದ ಲೆಕ್ಕಾಚಾರ ನೆಹರೂ, ಮೆನನ್ ಮತ್ತು ಕೌಲ್ರದ್ದು. ಆದರೆ, ಯುದ್ಧಕ್ಕೆಂದು ನೇಫ಼ಾ ಗಡಿಯಲ್ಲಿ 20000 ಚೀನಿ ಸೈನಿಕರು ಜಮಾಯಿಸಿದ್ದರು! 

ಸೆಪ್ಟಂಬರ್ ತಿಂಗಳಲ್ಲಿ ಯುದ್ಧ ಶುರುವಾದಾಗ ನೆಹರೂ ಲಂಡನ್ನಿನ ಕಾಮನ್ವೆಲ್ತ್ ದೇಶಗಳ ಪ್ರಧಾನಮಂತ್ರಿಗಳ ಸಮಾವೇಶದಲ್ಲಿದ್ದರು. ನಂತರ ನೈಜೀರಿಯಾದ ಲಾಗೋಸ್ ನಗರಕ್ಕೆ ಹೋಗಿ ಭಾರತಕ್ಕೆ ವಾಪಸ್ಸಾದದ್ದು ಅಕ್ಟೋಬರ್ 2 ರಂದು! ಅದೇ ತಿಂಗಳು ಸಂಯುಕ್ತ ರಾಷ್ಟ್ರ ಸಂಸ್ಥೆಯ ವಾರ್ಷಿಕ ಸಭೆ ನಡೆಯುವುದಿತ್ತು. ರಕ್ಷಣಾ ಮಂತ್ರಿ ಮೇನನ್ ಅದರಲ್ಲಿ ತಾವು ಮಾಡಬೇಕಿದ್ದ ಭಾಷಣಕ್ಕೆ ಅಣಿಯಾಗುತ್ತಿದ್ದರು. ವಿದೇಶದ ಮೋಜು ಅವರ ನೆತ್ತಿಗೇರಿತ್ತು. ಹಣಕಾಸು ಸಚಿವ ಮೊರಾಜಿ ದೇಸಾಯಿ ಕೂಡ ನೆಹರೂರೊಂದಿಗೆ ಲಂಡನ್ನಿಗೆ ಹೋದವರು ಯುದ್ಧದ ಸುದ್ದಿ ತಿಳಿದ ಮೇಲೂ ವಿಶ್ವ ಬ್ಯಾಂಕ್ ಮೀಟಿಂಗ್ ಎಂದು ಅಮೇರಿಕಾಕ್ಕೆ ತೆರಳಿದರು. ರಾಜಕಾರಣಿಗಳು ಹೀಗಾದರೆ ಭಾರತದ ಸೈನ್ಯದ ಮುಖ್ಯಸ್ಥ ಕೌಲ್ ಅಕ್ಟೋಬರ್ 2ರ ತನಕ ಅಂದರೇ, ನೆಹರೂ ಹಿಂತಿರುಗುವ ತನಕ ಕಾಶ್ಮೀರದಲ್ಲಿ ರಜೆಯೆಂದು ಕಾಲಕಳೆಯುತ್ತಿದ್ದರು! ಥಗ್ಲಾ ಎಂಬ ಹಿಮಾಲಯದಲ್ಲಿ ಜ್ವಾಲಾಮುಖಿ ಸ್ಪೋಟಗೊಳ್ಳುವುದರಲ್ಲಿತ್ತು, ಭಾರತದ ಸರ್ಕಾರ ವಿದೇಶದಲ್ಲಿ ಮತ್ತು ಸೈನಿಕ ಮುಖ್ಯಸ್ಥ ರಜೆಯಲ್ಲಿದ್ದರು! ಚೀನಾಕ್ಕೆ ಭಾರತದ ಸೈನಿಕರು ಬಲಿಯಾದರು. ಸೈನಿಕ ಬಲಿಷ್ಟನಾದರೂ ರಾಜಕಾರಣಿಗಳು ಭಾರತವನ್ನು ಸೋಲಿಸಿದರು.


ಲದಾಖ್ ಗಡಿ ಭಾಗದಲ್ಲಿ ತಂಟೆ ಮಾಡುತ್ತಿರುವ ಚೀನಾವನ್ನು ಭಾರತದ ಸೈನ್ಯವಿಂದು ಹಿಮ್ಮೆಟ್ಟಿದೆ. ಹಿಂದೆಂದಿಗಿಂತಲೂ ಭಾರತ ಮತ್ತು ಅದರ ಸೈನ್ಯ ಬಲಿಷ್ಟವಾಗಿದೆ. ಭಾರತ ಸರ್ಕಾರ ಸುಮಾರು 500 ಕೋಟಿಯಷ್ಟು ಮೊತ್ತವನ್ನು ಸೈನ್ಯಕ್ಕೆ ಕೊಟ್ಟು ಯುದ್ಧ ತಂತ್ರ ರೂಪಿಸಲು ಪೂರ್ಣ ಸ್ವಾತಂತ್ರ ಕೊಟ್ಟಿದೆ. ಯುದ್ಧದಲ್ಲಿ ಸೈನಿಕರ ಹೋರಟ ಎಷ್ಟು ಮುಖ್ಯವೋ ಅದರ ಪೂರ್ವ ತಯಾರಿಯೂ ಅಷ್ಟೇ ಮುಖ್ಯ. #BoycottChina ಮೂಲಕ ಭಾರತೀಯರ ರಾಷ್ಟ್ರೀಯತೆಯ ಭಾವ ಚೀನಾಕ್ಕೆ ತಲೆ ಬಿಸಿ ಮಾಡಿದಂತಿದೆ. ತನ್ನ ಮುಖವಾಣಿಯದ ಗ್ಲೋಬಲ್ ಟೈಮ್ಸ್ ಪತ್ರಿಕೆಯಲ್ಲಿ ಭಾರತ ಚೀನಾ ಸಂಬಂಧದ ಕುರಿತು ದಿನಕ್ಕೆ 2-3 ಲೇಖನಗಳನ್ನು ಪ್ರಕಟಿಸುತ್ತಲೇ ಇದೆ. ನಾವು ಶಾಂತಿಯನ್ನು ಬಯಸುತ್ತೇವೆ ಎಂದು ಹೇಳಿದರೂ ಗಲ್ವಾನ್ ವ್ಯಾಲಿ ತನ್ನದು ಎಂದು ಚೀನಾ ತನ್ನ ಗೋಮುಖ ವ್ಯಾಘ್ರತ್ವವನ್ನು ತೋರಿಸುತ್ತಿದೆ. ಭಾರತ ಸರ್ಕಾರ ಚೀನಾದ ಮಾತನ್ನು ಎಂದೂ ನಂಬಬಾರದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

 
ಈ ಸಂಕಷ್ಟದ ಸಮಯದಲ್ಲಿ ಎಲ್ಲರೂ ಒಟ್ಟಾಗಿ ನಿಲ್ಲಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಕಾಂಗ್ರೇಸ್ ಪಕ್ಷವು ವಿರೋಧ ಪಕ್ಷದ ಕರ್ತವ್ಯಕ್ಕಿಂತಲೂ ಹೆಚ್ಚಾಗಿ ಪ್ರಧಾನಿ ಮೋದಿಯವರನ್ನು ಧೂಷಿಸುವುದರಲ್ಲೇ ಕಾಲಹರಣ ಮಾಡುತ್ತಿದೆ. ಇಷ್ಟಕ್ಕೂ, ಕಾಂಗ್ರೇಸಿಗೆ ಈ ರೀತಿ ಮಾತಾಡುವ ನೈತಿಕ ಯೋಗ್ಯತೆ ಇದೆಯೆ ಎಂಬುದು ಪ್ರಶ್ನಾರ್ಹ. ನೆಹರೂ ಮಾಡಿದ ಪ್ರಮಾದಗಳ ಸರಮಾಲೆ 'ಹಿಮಾಲಯನ್ ಬ್ಲಂಡರ್' ನಮ್ಮ ಕಣ್ಣೆದುರಿಗೆ ಇದೆ. ಅವರು ಇತರರನ್ನು ಧೂಷಿಸುವ ಮುನ್ನ ತಮ್ಮ ಇತಿಹಾಸವನ್ನು ತಿಳಿದುಕೊಳ್ಳುವುದು ಮೇಲು.

June 14, 2020

ಜಗತ್ತು ಮೈಮರೆಯಿತು, ಚೀನಾ ಸದ್ದಿಲ್ಲದೇ ಆವರಿಸಿಕೊಂಡಿತು!

ಕ್ರಿಶ್ಟಿಯನ್ನರ ಆಕ್ರಮಣದ ಹೊತ್ತಲ್ಲಿ ಜಗತ್ತಿನ ಸುಮಾರು 33% ರಷ್ಟು GDP ಭಾರತದ್ದೇ ಆಗಿತ್ತು. ನಮ್ಮಲ್ಲಿ ಉತ್ಪನ್ನವಾಗುತ್ತಿದ್ದ ವಸ್ತುಗಳು ಜಗತ್ತಿನ ಮೂಲೆ ಮೂಲೆಗೆ ರಫ಼್ತಾಗುತ್ತಿತ್ತು. 200 ವರ್ಷಗಳ ಬ್ರಿಟೀಷ್ ಆಳ್ವಿಕೆಯ ನಂತರ ಅಂದರೆ 1947ರ ಹೊತ್ತಿಗೆ ಜಗತ್ತಿನ GDP ಅಲ್ಲಿ 2% ರಷ್ಟು ಮಾತ್ರ ಭಾರತದ ಪಾಲಿತ್ತು. ಸ್ವತಂತ್ರ್ಯ ಬಂದ ಮೊದಲು 15 ವರ್ಷಗಳ ಕಾಲ ಟೀ, ಹಗ್ಗ (Jute) ಮತ್ತು ಹತ್ತಿಯನ್ನು ಮಾತ್ರ ಭಾರತ ರಫ಼್ತು ಮಾಡುತ್ತಿತ್ತು. ಅದೇ ಸಮಯದಲ್ಲಿ, ಕಚ್ಚಾ ವಸ್ತುಗಳು ಮತ್ತು ಯಂತ್ರೋಪಕರಣಗಳ ಆಮದು ಹೆಚ್ಚಾಯಿತು. ನಂತರದ ದಿನಗಳಲ್ಲಿ ಭಾರತ ಪಾಕೀಸ್ತಾನದೊಂದಿಗೆ 1948, 1965, 1971 ರಲ್ಲಿ 3 ಸಲ ಮತ್ತು ಚೀನಾದೊಂದಿಗೆ 1962ರಲ್ಲಿ ಯುದ್ಧ ಮಾಡಿತು. 1975-77 ರಲ್ಲಿ 21 ತಿಂಗಳುಗಳ ಕಾಲ ಭಾರತ ತುರ್ತು ಪರಿಸ್ಠಿತಿಗೆ ತನ್ನನ್ನು ತಾನು ಒಡ್ಡುಕೊಂಡಿತು. ಈ ಎಲ್ಲಾ ಕಾರಣದಿಂದಾಗಿ ನಮ್ಮ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಸುಮಾರು 90ರ ದಶಕದ ಹೊತ್ತಿಗೆ ಜಗತ್ತಿನ ವ್ಯವಹಾರದ ಸ್ವರೂಪ ಬದಲಾಯಿತು. ಭಾರತ ಜಗತ್ತಿನ ಮಾರುಕಟ್ಟೆಗೆ ತೆರೆದು ಕೊಂಡಿತು. 2016-17ರ ಹೊತ್ತಿಗೆ ಭಾರತ ಜಗತ್ತಿನ 3.4% ರಷ್ಟು ಮಾರುಕಟ್ಟೆ ಹೊಂದುವಷ್ಟು ಶಕ್ತವಾಯಿತು.

20ನೇ ಶತಮಾನದ ಆಧುನಿಕ ಜಗತ್ತಿನಲ್ಲಿ 1949ರ ತನಕ ಚೀನಾ ತನ್ನ ಮೇಲಾಗುತ್ತಿದ್ದ ಅನ್ಯ ದೇಶಿಯ ಆಕ್ರಮಣವನ್ನು ತಡೆಯುವುದರಲ್ಲಿ ಮಗ್ನವಾಗಿತ್ತು. People's Republic of China ಎಂದು 1949ರಲ್ಲಿ ಸ್ಥಾಪಿತವಾದ ಮೇಲೆ, ಚೀನಾ ತನ್ನನ್ನು ತಾನು ಗಟ್ಟಿ ಮಾಡಿಕೊಳ್ಳುವತ್ತ ಗಮನ ಹರಿಸಿತು. 1950ರ ನಂತರ ತನ್ನ ಸುತ್ತ ಇರುವ ದೇಶಗಳ ಮೇಲೆ ಆಕ್ರಮಣಕಾರಿ ಧೋರಣೆ ತೋರಲು ಶುರುಮಾಡಿತು. 1950ರಲ್ಲಿ ಟಿಬೇಟ್, ದಕ್ಷಿಣ ಕೊರಿಯಾ, 1962ರಲ್ಲಿ ಭಾರತದ ಮೇಲೆ, 1974, 76, 79, 88 ರಲ್ಲಿ ನಾಲ್ಕು ಬಾರಿ ವಿಯಟ್ನಾಂ ಮೇಲೆ ದಾಳಿ ಮಾಡಿತು. 1995ರಲ್ಲಿ 'ವಿಶ್ವ ವಾಣಿಜ್ಯ ಸಂಸ್ಥೆ' ಸ್ಥಾಪಿತವಾದ ಮೇಲೆ ತನ್ನ ಧೋರಣೆಯನ್ನು ಬದಲಾಯಿಸಿಕೊಂಡು, ತನ್ನನ್ನು ತಾನು ಪ್ರತ್ಯೇಕಿಸಿಕೊಂಡು ಗಟ್ಟಿಯಾಗುವತ್ತ ಸಾಗಿತು. 1989ರಲ್ಲಿ ಜಗತ್ತಿನ 9ನೇ 1 ಭಾಗದಷ್ಟು GDP ಹೊಂದಿದ್ದ ಚೀನಾ 2015 ಹೊತ್ತಿಗೆ ಅಮೇರಿಕಾದ ನಂತರ ಜಗತ್ತಿನ ಅತ್ಯಂತ ದೊಡ್ಡ ಶಕ್ತಿಯಾಗಿ ಬೆಳೆದಿದೆ.

ಚೀನಾ ಜಗತ್ತಿನ 'ಉತ್ಪಾದನ ಫ಼ಾಕ್ಟರಿ' ಎಂದರೆ ಅತಿಶಯೋಕ್ತಿ ಅಲ್ಲ. ತನ್ನ ರಾಷ್ಟ್ರದ 30% ರಷ್ಟು ಕೆಲಸಗಾರರನ್ನು ಉತ್ಪಾದನಾ ಕೆಲಸಕ್ಕೆ ಬಳಸಿಕೊಳ್ಳುತ್ತದೆ. ರಾಸಾಯನಿಕ ಗೊಬ್ಬರ, ಸಿಮಿಂಟ್ ಮತ್ತು ಉಕ್ಕಿನ ತಯಾರಿಕೆಯಲ್ಲಿ ಚೀನಾ ಜಗತ್ತಿನ ಪ್ರಮುಖ ಅಥವಾ ನಂ 1 ರಾಷ್ಟ್ರವಾಗಿದೆ. ಕೈಗಾರಿಕಾ ಉತ್ಪಾದನೆಯಲ್ಲೂ ಸಹ ಚೀನಾ ವಿಶ್ವದಾದ್ಯಂತ ಮೊದಲ ಸ್ಥಾನದಲ್ಲಿದೆ. ಗಣಿಗಾರಿಕೆ ಮತ್ತು ಅದಿರು ಸಂಸ್ಕರಣೆ, ಕಬ್ಬಿಣ ಮತ್ತು ಉಕ್ಕು, ಅಲ್ಯೂಮಿನಿಯಂ, ಕಲ್ಲಿದ್ದಲು, ಯಂತ್ರೋಪಕರಣ, ಶಸ್ತ್ರಾಸ್ತ್ರಗಳು, ಜವಳಿ ಮತ್ತು ಊಡುಪು, ಪೆಟ್ರೋಲಿಯಂ ಸಿಮೆಂಟ್, ಆಹಾರ ಸಂಸ್ಕರಣೆ, ರೈಲು, ಕಾರು ಮತ್ತದರ ಇಂಜಿನ್ಗಳು, ಹಡಗುಗಳು, ವಿಮಾನ ಸೇರಿದಂತೆ ವಾಹನಗಳು ಮತ್ತು ಇತರ ಸಾರಿಗೆ ಉಪಕರಣಗಳು, ಪಾದರಕ್ಷೆ, ಆಟಿಕೆ, ಎಲೆಕ್ಟ್ರಾಸಿಕ್ಸ್ ಮತ್ತು ಗ್ರಾಹಕ ಉತ್ಪನ್ನಗಳು, ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಇಷ್ಟರಲ್ಲೂ ಚೀನಾ ಸಾರ್ವಭೌಮತ್ವ ಸಾಧಿಸಿದೆ. ಅಮೇರಿಕಾ ಕೃಷಿ ಉತ್ಪನ್ನ, ಹಣ್ಣು, ತರಕಾರಿ, ಮಸಾಲೆ ಪದಾರ್ಥಗಳು, ಆಟಿಕೆ, ಹಾಸಿಕೆ, ಪೀಟೋಪಕರಣ ಮತ್ತು ವಿದ್ಯುತ್ ಯಂತ್ರೋಪಕರಣಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ. ತನಗೆ ಬೇಕಾಗಿರುವ ಅಂಟಿಬಯೋಟಿಕ್ಸ್ ಔಷಧಿಗಾಗಿ ಅಮೇರಿಕಾ ಶೇ 92ರಷ್ಟು ಚೀನಾದ ಮೇಲೆ ಅವಲಂಬಿತವಾಗಿದೆ! ಇತ್ತ ಭಾರತ ಕೂಡ ಚೀನಾದ ಪ್ರಮುಖ ಮಾರುಕಟ್ಟೆಯಾಗಿದೆ. ಚೀನಾದಿಂದ ಎಲೆಕ್ಟ್ರಾನಿಕ್ ಉಪಕರಣಗಳು, ಸ್ಮಾರ್ಟ್ ಫ಼ೋನ್ಗಳು, ಯಂತ್ರಗಳು, ಎಂಜಿನ್ಗಳು, ಪಂಪ್ಗಳು, ಸಾವಯವ ರಸಗೊಬ್ಬರ, ಕಬ್ಬಿಣ ಮತ್ತು ಉಕ್ಕು, ಪ್ಲಾಸ್ಟಿಕ್, ವೈದ್ಯಕೀಯ ಮತ್ತು ತಾಂತ್ರಿಕ ಉಪಕರಣಗಳು, ಆಟಿಕೆಗಳು, ಆಂಟಿಬಯೋಟಿಕ್ಸ್ ಔಷಧಿಗಳು ಭಾರತವೂ ಸಹ ಆಮದು ಮಾಡಿಕೊಳ್ಳುತ್ತದೆ. ನಾವು ಆಮದು ಮಾಡಿಕೊಳ್ಳುವ ಅನೇಕ ವಸ್ತುಗಳು ಅತ್ಯಂತ ಅಗತ್ಯ ವಸ್ತುಗಳೇ ಆಗಿವೆ. ಅದಕ್ಕಾಗಿ ಚೀನಾ ಮೇಲೆ ಅವಲಂಬಿತವಾಗಿರುವುದು ನಮ್ಮ ದುರಾದೃಷ್ಟ. ಭಾರತ ಅಮೇರಿಕಾ ಅಲ್ಲದೆ ಯೂರೋಪಿನ ದೇಶಗಳು, ಹಾಂಗ್ಕಾಂಗ್, ಜಪಾನ್, ದಕ್ಷಿಣ ಕೊರಿಯಾ, ವಿಯಟ್ನಾಂ, ಜರ್ಮನಿ, ನೆದರ್ಲಾಂಡ್ಸ್, ಯು.ಕೆ, ಸಿಂಗಾಪುರ, ರಷ್ಯಾ, ಆಸ್ಟ್ರೇಲಿಯಾ, ಮಲೇಷ್ಯಾ, ಮೆಕ್ಸಿಕೊ, ಇಂಡೋನೇಷ್ಯಾ, ಥೈಲಾಂಡ್, ಕೆನಡಾ, ಫಿಲಿಫೈನ್ಸ್, ಬ್ರಜ಼ಿಲ್, ಇಟಾಲಿ, ಫ಼್ರಾನ್ಸ್, ಪೋಲಾಂಡ್, ಟರ್ಕಿ, ಸ್ಪೇನ್ ದೇಶಗಳು ಚೀನಾದಿಂದ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ.

Made in PRC!

ಟೆಲಿಕಾಂ ಸಾಧನಗಳ ಮೂಲಕ ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳ ಮೇಲೆ ಚೀನಾ ಪ್ರಭುತ್ವವನ್ನು ಸಾಧಿಸಿದೆ. 2019ರಲ್ಲಿ ಸುಮಾರು 125 ಬಿಲಿಯನ್ ಡಾಲರ್ ಅಷ್ಟು ಮೊಬೈಲ್ ಫ಼ೋನ್ಗಳನ್ನು ಚೀನಾ ಮಾರಾಟ ಮಾಡಿದೆ. ಅದರಲ್ಲಿ ಶೇ 46.9ರಷ್ಟು ಜಗತ್ತಿನ ಇತರೆ ರಾಷ್ಟ್ರಗಳಿಗೆ ರಫ಼್ತಾಗಿವೆ. ಹುವಾಯ್ ಮತ್ತು ZTE ಕ್ರಮವಾಗಿ ಜಗತ್ತಿನ ಎರಡನೇ ಮತ್ತು ನಾಲ್ಕನೇ ದೊಡ್ಡ ದೂರಸಂಪರ್ಕ ಪೂರೈಕೆ ಮಾಡುವ ಕಂಪನಿಗಳಾಗಿವೆ. ಇವುಗಳ ಆದಾಯದ ಶೇ 70ರಷ್ಟು ಹೊರದೇಶದ್ದಾಗಿದೆ. ಈ ಎರಡೂ ಕಂಪನಿಗಳು ಚೀನಾದ ಸರ್ಕಾರ ಮತ್ತು People Liberation Army (PLA) ಜೊತೆಗೆ ನಿಕಟ ಸಂಪರ್ಕ ಹೊಂದಿದೆ. ಇದು ಜಗತ್ತಿನ ಅನೇಕ ದೇಶಗಳಿಗೆ ಭದ್ರತಾ ತೊಡಕಾಗಿ ಪರಿಣಮಿಸಿದೆ. ಭಾರತದಲ್ಲಿ ಈ ಎರಡೂ ಕಂಪನಿಗಳು 1998-99 ರಲ್ಲಿ ಹೂಡಿಕೆ ಮಾಡಿದವು. 2005 ಹೊತ್ತಿಗೆ ಕಡಿಮೆ ಬೆಲೆ ಮತ್ತು ಗ್ರಾಹಕರನ್ನು ಸೆಳೆಯುವ ಇತರ ತಂತ್ರಗಳನ್ನು ಬಳಸಿಕೊಂಡು ಐ.ಟಿ.ಐ, ಬಿ.ಎಸ್.ಎನ್.ಎಲ್, ಎಮ್.ಟಿ.ಎನ್.ಲ್ ಸಂಸ್ಥೆಗಳಿಗಿಂತಲೂ ಹೆಚ್ಚು ಲಾಭವನ್ನು ಭಾರತದಲ್ಲಿ ಮಾಡಿದರು. ಹುವಾಯ್ ಸಂಸ್ಥೆ ಭಾರತದ ಪ್ರಮುಖ ಸರ್ಕಾರಿ ಸಂಸ್ಥೆಗಳಿಗೂ ತನ್ನ ಬಾಹುವನ್ನು ವಿಸ್ತರಿಸಿತು. ನೋಕಿಯಾ ತನ್ನ ಮಾರುಕಟ್ಟೆ ಕಳೆದುಕೊಂಡ ಮೇಲೆ ಮೈಕ್ರೋಮಾಕ್ಸ್, ಲಾವ, ಕಾರ್ಬನ್ ಕಂಪನಿಗಳು ಬಂದವು. ಆದರೆ, ಕಾಲಕ್ರಮೇಣ ಚೀನಾದ ಒಪ್ಪೋ, ವಿವೋ, ಕ್ಸಿಯೊಮೀ, ರೀಯಲ್ ಮೀ ಜೊತೆಗೆ ಸ್ಪರ್ಧಿಸಲಾಗದೆ ಸೋಲಬೇಕಾಯಿತು.

Huwaei; the silent killer

ಐದೇ ವರ್ಷಗಳಲ್ಲಿ ಟಿಕ್ ಟಾಕ್ ಎಂಬ ಆಪ್ ಸುಮಾರು 200 ಮಿಲಿಯನ್ ಬಳಕೆದಾರದನ್ನು ಹೊಂದಿದೆ. ಇತ್ತೀಚೆಗೆ ಟಿಕ್ ಟಾಕ್ ಆಪ್ ವಿರುದ್ಧ ಬಹುತೇಕ ಭಾರತೀಯರು ಕಳಪೆ (1 star) ಎಂದು ರೇಟ್ ಮಾಡಿದ್ದರು. ಜಗತ್ತಿನಾದ್ಯಂತ ಅದರ ರೇಟಿಂಗ್ 4.5 ರಿಂದ 1.3ಗೆ ಇಳಿದಿತ್ತು. ಚೀನಾದ ಆಪ್ಗಳು ನಮ್ಮ ಫ಼ೋನ್ಗಳಲ್ಲಿ ಇರಬಾರದು ಎಂದು 'Remove China Apps' ಎಂಬ ಆಪ್ ಹೊರತಂದರು. ಇದು ಕೇವಲ 2-3 ದಿನಗಳಲ್ಲಿ 50 ಲಕ್ಷಕ್ಕೂ ಮೀರಿದ ಡೌನ್ಲೋಡ್ ಕಂಡಿತ್ತು.  ಆದರೇ, ಚೀನಾ ತನ್ನ ಪ್ರಭಾವವನ್ನು ಬಳಸಿ 1 ಸ್ಟಾರ್ ರೇಟಿಂಗಳನ್ನು ಮತ್ತು 'Remove China Apps' ಅನ್ನು ತೆಗೆದು ಹಾಕಿಸಿತು. ಜಗತ್ತಿಗೆ ಕರೋನಾ ಕೊಟ್ಟ ಚೀನಾದ ವಿರುದ್ಧ ಇಡೀ ಜಗತ್ತು ಒಟ್ಟಾಗುವ ಸಮಯ ಹತ್ತಿರವಾಗುತ್ತಿದೆ. ಚೀನಾದ ಪ್ರಭಾವದಿಂದ ಹೊರಬರಲು ಅನೇಕ ರಾಷ್ಟ್ರಗಳು ತಯಾರಿ ನಡೆಸಿವೆ. ಜಗತ್ತಿನಲ್ಲಿ ಜನಸಂಖ್ಯೆಯ ಲೆಕ್ಕದಲ್ಲಿ 2ನೇ ಸ್ಥಾನದಲ್ಲಿರುವ ಭಾರತ ವ್ಯಾವಹಾರಿಕವಾಗಿ ಬೆಳೆದು ನಿಲ್ಲಲು ಇದು ಒಳ್ಳೆಯ ಅವಕಾಶ. ಚೀನಾ ನಮ್ಮ ಅಗತ್ಯ ವಸ್ತುಗಳ ಮೂಲಕ ನಮ್ಮ ಮನೆಗಳನ್ನು ಹೊಕ್ಕಿದೆ. ಬೆಂಗಳೂರನ್ನು ಸಾಫ಼್ಟ್ವೇರ್ ಹಬ್ ಎಂದು ಕರೆಯುತ್ತಾರೆ. ಆದರೆ, ಚೀನಾದಂತೆ ಹಾರ್‍ಡ್ವೇರ್‍ ತಯಾರಿಸುವಂತಹ ಕಂಪನಿಗಳು ಇಲ್ಲ. ಜಗತ್ತಿನ ಅನೇಕ ಬಡ ರಾಷ್ಟ್ರಗಳಿಗೆ ಸಾಲವನ್ನು ಕೊಟ್ಟು ಚೀನಾ ಆ ದೇಶಗಳ ದಿವಾಳಿಗೂ ಕಾರಣವಾಗುತ್ತಿದೆ. ಅಂತಹ ಬಡ ರಾಷ್ಟ್ರಗಳಿಗೆ ಮತ್ತು ಶ್ರೀಮಂತ ರಾಷ್ಟ್ರಗಳಿಗೆ ಒಳಿತಾಗಿ ನಿಲ್ಲಬಹುದಾದ ರಾಷ್ಟ್ರ ಭಾರತ.

India vs china

ಜಾಗತೀಕರಣದ ನಂತರ ಕಡಿಮೆ ವೆಚ್ಚದ ಕಾರ್ಯ ಮತ್ತು ವ್ಯವಹಾರದ ಸರಳತೆಯ ಕಾರಣದಿಂದಾಗಿ ಜಗತ್ತಿನ ಅನೇಕ ರಾಷ್ಟ್ರಗಳು ಚೀನಾದಲ್ಲಿ ಹೂಡಿಕೆ ಮಾಡಿದವು. ಇದರ ಫ಼ಲವಾಗಿ ಅಗತ್ಯವಸ್ತುಗಳ ತಯಾರಿಕ ಘಟಕವಾಗಿ ಚೀನಾ ಬೆಳೆಯಿತು. ಭಾರತವಾಗಲಿ ಮತ್ತಿತರ ದೇಶವಾಗಲಿ ಅಗತ್ಯವಸ್ತುಗಳನ್ನು ತಯಾರಿಸುವ ಯೋಜನೆಯನ್ನು ಮಾಡದೆ ಚೀನಾದ ಮೇಲೆ ಅವಲಂಬಿತವಾದವು. ಅತ್ತ, ಚೀನಾ ತನ್ನ ಉತ್ಪಾದನ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುತ್ತಾ ಮುಂದುವರೆಯಿತು. ಅನೇಕ ರಾಷ್ಟ್ರಗಳಿಗೆ ತನ್ನ ಅಗತ್ಯತೆಯನ್ನು ಸೃಷ್ಟಿಸಿ ಎಲ್ಲರನ್ನು ಆಳಲು ಹೊರಟಿದೆ ಚೀನಾ! ಜಾಗತೀಕರಣದ ಸೋಗಿನಲ್ಲಿ ಮೈಮರೆತದ್ದು ನಾವು, ಸದ್ದಿಲ್ಲದೆ ನಮ್ಮನ್ನು ಆಕ್ರಮಿಸಿಕೊಂಡದ್ದು ಚೀನಾ! ಕೊರೋನಾ ಸಮಯದಲ್ಲಿ ಯೂರೋಪ್, ಭಾರತ, ಪಾಕೀಸ್ತಾನಕ್ಕೆ ಕಳಪೆ ಗುಣಮಟ್ಟದ ವಸ್ತುಗಳನ್ನು ಕೊಟ್ಟ ಮೇಲೆ ಜಗತ್ತು ಸ್ವಾವಲಂಬಿ ಆಗುವ ಅಗತ್ಯತೆಯನ್ನು ಕಂಡಿದೆ.