August 26, 2020

ಕಮ್ಯುನಿಸ್ಟ್ ಡ್ರಾಗನ್ ಅನ್ನು ಭೇಟೆಯಾಡುವ ಕಾಲಬಂದಿದೆ

ಚೀನಾದ ಅಧ್ಯಕ್ಷ ಇತ್ತಿಚಿನ ತನ್ನ ಭಾಷಣದಲ್ಲಿ 2020 ಇಸವಿ ಒಂದು ಮೈಲಿಗಲ್ಲು ಎಂದು ಹೇಳಿದ್ದ. ದುರಾದೃಷ್ಟವಶಾತ್, ಜೀಪಿಂಗ್ ಅಂದುಕೊಂಡಂತೆ 2020 ಅವರ ಪರವಾಗಿನ ಮೈಲಿಗಲಾಗುತ್ತಿಲ್ಲ. ಬದಲಾಗಿ, ಚೀನಾ ಕೊರೋನಾ ಮತ್ತು ತನ್ನ ಆಕ್ರಮಣಕಾರಿ ಧೋರಣೆ ಇಂದಾಗಿ ಜಗತ್ತಿನಲ್ಲಿ ತನ್ನ ಖ್ಯಾತಿಯನ್ನು ಕಳೆದುಕೊಳ್ಳುತ್ತಿದೆ. ಕೊರೋನಾದ ಕಾರಣದಿಂದಾಗಿ ಅನೇಕ ದೇಶಗಳು ಚೀನಾ ಅವಲಂಬಿತ ಬಗ್ಗೆ ಕಠಿಣ ಪಾಠಗಳನ್ನು ಕಲಿತವು ಮತ್ತು ಚೀನಾದ ಕಮ್ಯೂನಿಸ್ಟ್ ಆಡಳಿತದ ಬಗೆಗಿನ ಅಂತಾರಾಷ್ಟ್ರೀಯ ಧೋರಣೆಗಳು ಬದಲಾದವು. ಚೀನಾ, ವೂಹಾನ್ ನಲ್ಲಿ ಮೊದಲು ಕಾಣಿಸಿಕೊಂಡ ಕೊರೋನಾ ಬಗೆಗಿನ ಪ್ರಮುಖ ಮಾಹಿತಿಯನ್ನು ಜಗತ್ತಿನೆದುರಿಗೆ ಬಿಚ್ಚಿಡಲೇ ಇಲ್ಲ. ಇಂದಿಗೂ ಸಹ, ತನ್ನ ದೇಶದಲ್ಲಿ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ 4634 ಎಂದೇ ಪ್ರತಿಪಾದಿಸುತ್ತಿದೆ. ಇದಲ್ಲದೇ, ಈ ಸಾಂಕ್ರಾಮಿಕವನ್ನೇ ಬಂಡವಾಳ ಮಾಡಿಕೊಂಡು ಇತರೆ ದೇಶಗಳಿಗೆ ಕಳಪೆ ಗುಣಮಟ್ಟದ ಕಿಟ್ಗಳನ್ನು ರಫ಼್ತು ಮಾಡಿತು ಮತ್ತು ಆಕ್ರಮಣಕಾರಿಯಾಗಿ ಇಂಡೋ ಪೆಸಿಫ಼ಿಕ್ ಪ್ರದೇಶದಲ್ಲಿ ವಿಸ್ತರಣೆಯನ್ನು ತೀವ್ರಗೊಳಿಸಿತು. ತೈವಾನ್, ಹಂಕಾಂಗ್ ಮತ್ತು ಭಾರತದ ಗಲ್ವಾನಲ್ಲಿ ನಡೆದ ಘಟನೆಗಳೇ ಇವಕ್ಕೆ ಸಾಕ್ಷಿಯಾಗಿವೆ. ಹತ್ತು ಸಾವಿರಕ್ಕೂ ಹೆಚ್ಚು ಸೈನಿಕರನ್ನು ಲದಾಕ್ ಪ್ರಾಂತ್ಯದಲ್ಲಿ ಜಮಾಯಿಸಿ, ಭಾರತದ ನಿಯಂತ್ರಣದಲ್ಲಿರುವ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಯಿತು. ಈ ಎಲ್ಲಾ ಕಾರಣದಿಂದಾಗಿಯೇ ಏಷ್ಯಾ ಮತ್ತು ಆಸ್ಟ್ರೇಲಿಯಾ ಖಂಡದ ಕೆಲವು ಪ್ರಮುಖ ದೇಶಗಳು ಚೀನಾವನ್ನು ಎದುರಿಸಲು ಸಿದ್ಧವಾಗಿವೆ.

ಜಪಾನ್, ಆಸ್ಟೇಲಿಯಾ, ಭಾರತ ಮತ್ತು ಅಮೇರಿಕಾ (ಕ್ವಾಡ್-4) ತಮ್ಮ ನಡುವಿನ ರಾಜತಾಂತ್ರಿಕ ಸಹಯೋಗವನ್ನು ಮತ್ತಷ್ಟು ಬಲಪಡಿಸಿಕೊಳ್ಳುವತ್ತ ಗಮನಹರಿಸಿದೆ. ಜಗತ್ತಿನ ದೊಡ್ಡ ಮಾರುಕಟ್ಟೆಯಾಗಿರುವ ಭಾರತದ ಪರವಾದ ಗಮನಾರ್ಹ ಬದಲಾವಣೆ ಇದಾಗಿದೆ. ಚೀನಾವನ್ನು ಹತ್ತಿಕ್ಕಲು ಪ್ರಯತ್ನಿಸುವೆಡೆಗೆ ಇದು ಮೊದಲ ಹೆಜ್ಜೆ ಅನ್ನುವಂತಿದೆ. ಅಮೇರಿಕಾ ಕೂಡ - ''ಚೀನೀಯರು ಭಾರತದದೊಂದಿಗೆ ಬಹಳ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದಾರೆ, ಪೀಪಲ್ಸ್ ಲಿಬರೇಷನ್ ಆರ್ಮಿಯು ಲದಾಖ್ ನ ಅನೇಕ ಪ್ರದೇಶಗಳನ್ನು ಆಕ್ರಮಿಸಿಕೊಂಡಿದೆ. ಇದು ದೀರ್ಘಕಾಲದ ಗಡಿ ಸಂಘರ್ಷದ ಕಾವನ್ನು ಏರಿಸುತ್ತಿದೆ" ಎಂಬ ಎಚ್ಚರಿಕೆಯ ಹೇಳಿಕೆ ಕೊಟ್ಟಿದೆ. ಈ ವಷಾಂತ್ಯದಲ್ಲಿ ಜಪಾನ್, ಅಮೇರಿಕಾ ಮತ್ತು ಭಾರತೀಯ ಪಡೆಯೊಂಡಿಗೆ ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾವನ್ನು ಆಹ್ವಾನಿಸಲು ಪ್ರಧಾನಿ ಮೋದಿಯವರು ಆಲೋಚಿಸಿದ್ದಾರೆ. 2015 ರಲ್ಲಿ ಜಪಾನಿನ ಪಾಲ್ಗೊಳ್ಳುವಿಕೆಯನ್ನು ನಿಯತಗೊಳಿಸಲಾಗಿದ್ದರೂ ಚೀನಾವನ್ನು ಪ್ರಚೋದಿಸಬಾರದು ಎಂಬ ಕಾರಣದಿಂದಾಗಿ ಆಸ್ಟ್ರೇಲಿಯಾವನ್ನು ಆಹ್ವಾನಿಸಿರಲಿಲ್ಲ. ಜೂನಿನಲ್ಲಿ ಭಾರತ ಆಸ್ಟ್ರೇಲಿಯಾದೊಂದಿಗೆ ಮಿಲಿಟರಿ ಚಟುವಟಿಕೆಯನ್ನು ಹೆಚ್ಚಿಸಲು ಕೆಲವು ಒಪ್ಪಂದಗಳನ್ನು ಮಾಡಿಕೊಂಡಿತು. ಅಮೇರಿಕಾದೊಂದಿಗೆ ಅದಾಗಲೆ ಕೆಲವು ಒಪ್ಪಂದಗಳು ಚಾಲ್ತಿಯಲ್ಲಿವೆ. ಇನ್ನು ಕೆಲವು ದಿನಗಳಲ್ಲಿ ಜಪಾನಿನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಭಾರತ ತಯಾರಿ ನಡೆಸುತ್ತಿದೆ.


ಅತ್ತ ಜಪಾನ್ ಕೂಡ ಬ್ರಿಟನ್, ಆಸ್ಟ್ರೇಲಿಯಾ ಮತ್ತು ಭಾರತವನ್ನು ತನ್ನ ಗುಪ್ತಚರ ಮಾಹಿತಿ ಹಂಚಿಕೊಳ್ಳುವ ಪಾಲುದಾರರಾಗಿ ಸೇರಿಸಿಕೊಂಡಿದೆ. ಈ ಹಿಂದೆ ಜಪಾನ್ ಇಂತಹ ಒಪ್ಪಂದ ಅಮೇರಿಕಾದೊಂದಿಗೆ ಮಾತ್ರ ಮಾಡಿಕೊಂಡಿತ್ತು ಎಂಬುದು ಗಮನಿಸಬೇಕಾದ ಅಂಶ. ಈ ಒಪ್ಪಂದ ಜಪಾನಿನ ಗುಪ್ತಚರ ಮತ್ತು ಭದ್ರತಾ ಇಲಾಖೆ ಮತ್ತಷ್ಟು ಬಲಗೊಳ್ಳುತ್ತದೆ. ಇದರೊಟ್ಟಿಗೆ ಜಪಾನ್ ಆಕ್ರಮಣಕ್ಕೊಳಗಾಗುವ ಮಿತ್ರ ರಾಷ್ಟ್ರಗಳಿಗೆ ತನ್ನ ಸಹಾಯ ಹಸ್ತವನ್ನು ಚಾಚಬಹುದು. ಈಗ, ಚೀನಾ ವಿರುದ್ಧ ಈ ಕ್ವಾಡ್-4 ಅಂತೂ ಸ್ಪಷ್ಟವಾದ ದಾರಿಯಲ್ಲಿ ಕ್ರಮಿಸುತ್ತಿದೆ. ಮುಂದಿನ ಹೆಜ್ಜೆಯಾಗಿ ಈ ನಾಲ್ಕೂ ದೇಶಗಳು ಭದ್ರತೆ ಹೆಚ್ಚಿಸಿಕೊಳ್ಳುವಲ್ಲಿ ಸಂಘಟಿತ ಕಾರ್ಯಗಳಿಗೆ ಮುಂದಾಗಬೇಕಾಗಿದೆ.

ಈಗಿರುವ ಸಮಸ್ಯೆ ಅಂದರೇ - ನಾಲ್ಕೂ ದೇಶಗಳ ಭದ್ರತಾ ಹಿತಾಸಕ್ತಿಗಳು ಸಂಪೂರ್ಣವಾಗಿ ಹೊಂದಾಣಿಕೆಯಾಗಿಲ್ಲ! ಭಾರತ ಮತ್ತು ಜಪಾನ್ ಚೀನಾದೊಂದಿಗೆ ನೇರವಾಗಿ ಗಡಿಯನ್ನು ಹಂಚಿಕೊಳ್ಳುತ್ತದೆ. ಆದ ಕಾರಣ, ಈ ಎರಡೂ ದೇಶಗಳು ಗಡಿ ಭದ್ರತಾ ದೃಷ್ಟಿಯಿಂದ ಹೆಚ್ಚು ಅಪಾಯದಲ್ಲಿದೆ. ಜಪಾನ್ ಜಲಪ್ರದೇಶಗಳಲ್ಲಿ ಚೀನಾದ ಆಕ್ರಮಣ ಎದುರಿಸಬೇಕಾಗುತ್ತದೆ. ಆದರೇ, ಭಾರತ ಮಾತ್ರ ಭೂ ಪ್ರದೇಶಗಳಲ್ಲಿ ಚೀನಾದ ಆಕ್ರಮಣವನ್ನು ಎದುರಿಸಬೇಕಾಗುತ್ತದೆ. ಹಿಮಾಲಯದ ಗಡಿಯಲ್ಲಿ ಚೀನಾದೊಂದಿಗೆ ಗಂಭೀರ ಸಂಘರ್ಷದ ನೈಜ ಸಾಧ್ಯತೆಯನ್ನು ಭಾರತ ಎದುರಿಸಬೇಕಾಗಿದೆ. ಅಮೇರಿಕಾಕ್ಕೆ ಚೀನಾದ ವಿರುದ್ಧ ಭೂ ಯುದ್ಧವನ್ನು ಮಾಡುವ ಯಾವುದೇ ಅನಿವಾರ್ಯತೆ ಇಲ್ಲ. ಚೀನಾದ ಭೌಗೋಳಿಕ, ರಾಜಕೀಯ, ಸೈದ್ಧಾಂತಿಕ ಮತ್ತು ಆರ್ಥಿಕ ಸವಾಲುಗಳನ್ನು ಜಾಗತಿಕ ಮಟ್ಟದಲ್ಲಿ ಎದುರಿಸುವುದು ಅಮೇರಿಕಾದ ಮುಖ್ಯ ಉದ್ದೇಶವಾಗಿದೆ. ಅತ್ತ ಆಸ್ಟ್ರೇಲಿಯಾ ಆರ್ಥಿಕವಾಗಿ ಚೀನಾದ ಮೇಲೆ ಅವಲಂಬಿತವಾಗಿದೆ. ತನ್ನ ರಫ಼್ತಿನ ಮೂರನೆ ಒಂದು ಭಾಗ ಚೀನಾದೊಂದಿಗೆ ಇದೆ. ಕ್ವಾಡ್-4 ನ ಇತರ ದೇಶದೊಂದಿಗಿನ ಒಪ್ಪಂದಗಳಾಗಿದ್ದರೂ ಸಹ, "ಚೀನಾದೊಂದಿಗೆ ಸಂಬಂಧವನ್ನು ಹಾಳು ಮಾಡಿಕೊಳ್ಳುವ ಉದ್ದೇಶವಿಲ್ಲ" ಎಂದು ಹೇಳಿದೆ.

ಭಾರತ ಈಗಾಗಲೇ ಚೀನಾದ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮೊದಲನೇ ಹೆಜ್ಜೆಯಾಗಿ ಚೀನಾದ 59 ಆಪ್ಗಳನ್ನು ಬ್ಯಾನ್ ಮಾಡಿದೆ. ಬಿ.ಸಿ.ಸಿ.ಐ ನ ಪ್ರತಿಷ್ಟಿತ ಐ.ಪಿ.ಎಲ್ ಪಂದ್ಯಾವಳಿಯಿಂದ ಚೀನಾದ ವಿವೋದ 2200 ಕೋಟಿ ಮೊತ್ತದ ಪ್ರಾಯೊಜಿಕತ್ವವನ್ನು ಈ ವರ್ಷದ ಮಟ್ಟಿಗೆ ಹಿಂಪಡೆದುಕೊಂಡಿದೆ. ಭಾರತ ಸರ್ಕಾರ ಚೀನಾದಿಂದ ಆಮದಾಗುವ ಲಾಪ್ಟಾಪ್, ಕ್ಯಾಮೆರಾ, ಜವಳಿ ಮತ್ತು ಅಲ್ಯೂಮಿನಿಯಂ ಮತ್ತಿತರ 30 ಸರಕುಗಳ ಮೇಲೆ ಸುಂಕವನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳುವ ತಯಾರಿಯಲ್ಲಿದೆ. ಚೀನಾ ವಿರೋಧ ಭಾವನೆ ಹೆಚ್ಚುತ್ತಿದೆ ಮತ್ತು ಸ್ವದೇಶಿ ಉತ್ಪನ್ನಗಳನ್ನು ಉಪಯೋಗಿಸುವತ್ತ ಜನರ ಮನಸ್ಸು ವಾಲುತ್ತಿರುವುದು ಚೀನೀ ಬಂಡವಾಳ ಹೂಡಿಕೆ ಕುಸಿತಕ್ಕೆ ಕಾರಣವಾಗುತ್ತದೆ. ಹುವಾಯಿ ಮತ್ತು ಅದರ ಮಿತ್ರ ಸಂಸ್ಥೆಗಳ ವಿರುದ್ಧ ಅಮೇರಿಕಾ ಕ್ರಮ ಕೈಗೊಂಡಿದ್ದು, ಚೀನಾದ ವಿದ್ಯುತ್ ಮತ್ತು ಕಮ್ಯುನಿಕೇಷನ್ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡದಂತೆ ಭಾರತ ಕ್ರಮ ತೆಗೆದುಕೊಂಡಿದೆ. ತೈಲ ಮತ್ತು ಅನಿಲ ಕಂಪನಿಗಳು ಕಚ್ಚಾ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಸರಬರಾಜು ಮಾಡಲು ಚೀನಾ ಟ್ಯಾಂಕರ್ ಗಳನ್ನು ಬುಕ್ಕಿಂಗ್ ಮಾಡುವುದನ್ನು ನಿಷೇಧಿಸಲು ನಿರ್ಧರಿಸಿವೆ.

ಕೊರೋನಾ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಎಲೆಕ್ಟ್ರಾನಿಕ್ಸ್ ವಿಭಾಗದ ಸ್ಯಾಂಸಂಗ್, ಅಪಲ್, ಫ಼ಾಕ್ಸ್ಕಾನ್, ಕಂಪನಿಗಳು ಕೂಡ ತಮ್ಮ ಉತ್ಪಾದನ ಘಟಕಗಳನ್ನು ಚೀನಾದಿಂದ ಹೊರತರಲು ತಯಾರಾಗಿವೆ. ಈ ಕಂಪನಿಗಳು ಸುಮಾರು 1.5 ಬಿಲಿಯನ್ ಡಾಲರ್ ಅಷ್ಟು ಹೂಡಿಕೆ ಮಾಡಿ ಭಾರತದಲ್ಲಿ ಮೊಬೈಲ್ ಫ಼ೋನ್ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಗಳಿವೆ ಎಂಬ ಸುದ್ದಿಯೂ ಇದೆ. ಕಳೆದ ಮೂರು ದಿನಗಳ ಸುದ್ದಿಯ ಪ್ರಕಾರ ಸ್ಯಾಂಸಂಗ್ ತನ್ನ ಉತ್ಪಾದನಾ ಘಟಕದ ಬಹುಭಾಗವನ್ನು ವಿಯೆಟ್ನಾಂ ಮತ್ತು ಇತರ ದೇಶಗಳಿಂದ ಭಾರತಕ್ಕೆ ಸ್ಥಳಾಂತರಿಸಲು ತೀರ್ಮಾನಿಸಿದೆ. ಭಾರತ ಸರ್ಕಾರ ಘೋಷಿಸಿರುವ Production Linked Incentive (PIL) ಯೋಜನೆ ಆಡಿಯಲ್ಲಿ ಸುಮಾರು 3 ಲಕ್ಷ ಕೋಟಿ ಅಷ್ಟು ಮೊಬೈಲ್ ಅನ್ನು ಮುಂದಿನ 5 ವರ್ಷಗಳಲ್ಲಿ ತಯಾರಿಸುವ ಅಂದಾಜು ಮಾಡಲಾಗಿದೆ. ಇದೇ ಯೋಜನೆ ಅಡಿಯಲ್ಲಿ ಸ್ಥಳೀಯ ಉತ್ಪಾದನಾ ಘಟಕಗಳಿಗೆ ಉತ್ಪಾದನಾ ಪ್ರೋತ್ಸಾಹಕಗಳನ್ನು ನೀಡಲಾಗುತ್ತಿದೆ ಮತ್ತು ಅದೇ ಸಮಯದಲ್ಲಿ ಉತ್ಪನ್ನಗಳ ಜೋಡಣೆ, ಪರೀಕ್ಷೆ, ಗುರುತು ಮತ್ತು ಪ್ಯಾಕೇಜಿಂಗ್ ಗಾಗಿ ವಿದೇಶಿ ಉತ್ಪಾದಕರನ್ನು ಆಕರ್ಷಿಸುತ್ತದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಘೋಷಣೆ ಮಾಡಿದೆ.

ಜಪಾನ್, ಕೊರಿಯಾ ಮತ್ತು ಭಾರತದ ಈ ಕ್ರಮಗಳು ಚೀನಾಕ್ಕೆ ಸ್ವಲ್ಪ ಮಟ್ಟಿಗಾದರೂ ಬಿಸಿ ಮುಟ್ಟಿಸಿದೆ ಎಂಬುದು ಸತ್ಯ. ಚೀನಾದ್ದೆ ಮುಖವಾಣಿಯಾಗಿರುವ 'ಗ್ಲೋಬಲ್ ಟೈಮ್ಸ್' ಪತ್ರಿಕೆ ಇತರೆ ದೇಶಗಳಿಗೆ ಉಪದೇಶ ನೀಡುವಂತಹ, ಸೌಹಾರ್ದತೆ ಇಂದ ಮುಂದುವರೆಯಬೇಕು ಎಂಬಂತಹ ಲೇಖನಗಳನ್ನು ದಿನಕ್ಕೊಂದರಂತೆ ಪ್ರಕಟ ಮಾಡುತ್ತಿದೆ. ಇದನ್ನೆಲ್ಲ ಬದಿಗಿಟ್ಟು ನೋಡಿದರೂ ಚೀನಾ ತನ್ನ ಆಕ್ರಮಣಕಾರಿ ಧೋರಣೆಯನ್ನು ಈಗಲೂ ಮುಂದುವರೆಸಿದೆ. ಭಾರತದ ಕ್ರಮಗಳು ಚೀನಾ ವಿರುದ್ಧ ಇನ್ನೂ ಬಿಗಿಯಾಗಬೇಗಾಗಿದೆ.




ಅಮೇರಿಕಾದ ವಾಷಿಂಗ್ಟನ್ ಅಲ್ಲಿ, ಕೆಲವು ಭಾರತ ಮತ್ತು ಅಮೇರಿಕನ್ನರು ಚೀನಾದ ಆಕ್ರಮಣಕಾರಿ ಧೋರಣೆ ಮತ್ತು ಕ್ಸಿನ್ ಜಿಯಾಂಗ್ ಪ್ರದೇಶದಲ್ಲಿ ಉಯ್ಗುರ್ ಮುಸಲ್ಮಾನರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವ ಕುರಿತು ಪ್ರತಿಭಟನೆ ಮಾಡಿದರು. ಇತ್ತೀಚಿನ ಸುದ್ಧಿ ಪ್ರಕಾರ ಕ್ಸಿನ್ ಜಿಯಾಂಗ್ ಪ್ರಾಂತ್ಯದಲ್ಲಿ ಚೀನಿ ಅಧಿಕಾರಿಗಳು ಮಸೀದಿಯನ್ನು ಧ್ವಂಸ ಮಾಡಿ ಅಲ್ಲೊಂದು ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿದ್ದಾರೆ. ಕಳೆದ 2-3 ವರ್ಷಗಳಲ್ಲಿ 70% ರಷ್ಟು ಮಸೀದಿಗಳನ್ನು ಧ್ವಂಸ ಮಾಡಿದ್ದಾರೆ. 2015 ರಲ್ಲಿ ಅಜ಼್ನ ಮಸೀದಿಯನ್ನು ಧ್ವಂಸ ಮಾಡಿ ಸಿಗರೇಟ್ ಮತ್ತು ಮದ್ಯ ಮಾರಟ ಮಾಡುವ ಕೇಂದ್ರವನ್ನಾಗಿ ಪರಿವರ್ತಿಸಿದೆ. ಹೊರ್ಟನ್ ಎಂಬ ಪ್ರದೇಶದಲ್ಲಿ ಮಸೀದಿ ಇದ್ದ ಜಾಗದಲ್ಲಿ ಒಳ ಉಡುಪನ್ನು ತಯಾರಿಸುವ ಘಟಕವನ್ನು ಚೀನಿ ಅಧಿಕಾರಿಗಳು ಪ್ರಾರಂಭಿಸಿದ್ದಾರೆ. ಚೀನಾದ ಅಧಿಕಾರಿಗಳು 1.8 ಮಿಲಿಯನ್ ಉಯ್ಗುರ್ ಗಳನ್ನು ಜೈಲಿಗೆ ತಳ್ಳಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಪುರುಷರಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸಲಾಗುತ್ತಿದೆ. ಚೀನಾದ ಬಹುಸಂಖ್ಯಾತ ಜನಾಂಗವಾದ ಹಾನ್ ಸಮಾಜದೊಂದಿಗೆ ಉಯ್ಗುರ್ ಮುಸಲ್ಮಾನರನ್ನು ಬೆಸೆಯಬೇಕೆಂದು ಚೀನಾ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಿದೆ. ಸೌದಿ ಅರೇಬಿಯಾ, ಟರ್ಕಿ ಅಥವಾ ಪಾಕಿಸ್ತಾನ ಇದರ ವಿರುದ್ದ ದನಿ ಎತ್ತುತ್ತಿಲ್ಲ ಎಂಬುದು ದುರಾದೃಷ್ಟಕರ ಸಂಗತಿ. ಮಾನವೀಯತೆ ದೃಷ್ಟಿಯಿಂದ ನೋಡುವುದಾದರೆ ಚೀನಾದ ಈ ಕ್ರಮ ಅತ್ಯಂತ ಅಮಾನವೀಯ ಮತ್ತು ಖಂಡನೀಯ.


ಇತ್ತೀಚಿನ ಕೆಲವು ವರ್ಷಗಳಲ್ಲಿ ಅನೇಕ ರಾಷ್ಟ್ರಗಳಿಗೆ ಆರ್ಥಿಕವಾಗಿ ಸಹಾಯದ ರೂಪದಲ್ಲಿ ಶತಕೋಟ್ಯಾಂತರ ಡಾಲರ್ಗಳನ್ನು ಚೀನಾ ಹೂಡಿಕೆ ಮಾಡಿದೆ. ಈ ಕ್ರಮದ ಮೂಲಕ ದಕ್ಷಿಣ ಆಫ಼್ರಿಕಾ, ನೈಜೀರಿಯಾ, ಶ್ರೀಲಂಕಾ, ಮಲೇಷ್ಯಾ ಮತ್ತಿತರ ದೇಶಗಳನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದೆ. ಇತ್ತೀಚೆಗೆ ಚೀನಾ ಪಾಕಿಸ್ತಾನಕ್ಕೆ 14 ಬಿಲಿಯನ್ ಡಾಲರ್ ರಷ್ಟು ಮೊತ್ತವನ್ನು ಗಿಲ್ಗಿಟ್-ಬಾಲ್ಟಿಸ್ತಾನ ಪ್ರಾಂತ್ಯದಲ್ಲಿ ಡೈಮರ್-ಭಾಷಾ ಅಣೆಕಟ್ಟಿನ ಹೆಸರಿನಲ್ಲಿ ಹೂಡಿಕೆ ಮಾಡಿದೆ. ಮೇಲುನೋಟಕ್ಕೆ ಇದು ಅಭಿವೃದ್ಧಿಯ ಸಂಕೇತವಾದರೂ ಪಾಕೀಸ್ತಾನವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ ಕಬ್ಜಾ ಮಾಡುವ ಹುನ್ನಾರವಾಗಿದೆ. ವಾಸ್ತವವಾಗಿ ಡೈಮರ್-ಭಾಷಾ ಅಣೆಕಟ್ಟು ಚೀನಾದ ಅಣೆಕಟ್ಟು! 70% ರಷ್ಟು ಆಣೆಕಟ್ಟಿನ ಷೇರನ್ನು ಚೀನಾ ಹೊಂದಿದೆ. ಭಾರತ ಇದನ್ನು ಪ್ರತಿಭಟಿಸಿದೆ. ಗಿಲ್ಗಿಟ್ ಮತ್ತು ಬಾಳ್ಟಿಸ್ತಾನ ಪಾಕೀಸ್ತಾನ ಆಕ್ರಮಿತ ಕಾಶ್ಮೀರದ ಭಾಗದಲ್ಲಿರುವ ಪ್ರದೇಶಗಳು, ಅವು ಭಾರತಕ್ಕೆ ಸೇರಬೇಕಾದದ್ದು. ಸಾಲದ ಸುಳಿಯಲ್ಲಿ ಸಿಲುಕಿಸುವ ಈ ಹುನ್ನಾರವನ್ನು ಅಲ್ಲಿನ ಸ್ಥಳಿಯರು ಮತ್ತು ಭಾರತ ಕಠಿಣವಾಗಿ ವಿರೋಧಿಸುತ್ತಿದ್ದಾರೆ. ಕೆಲವು ದಿನಗಳ ಹಿಂದಿನ ಸುದ್ದಿಗಳ ಪ್ರಕಾರ ತೀಸ್ತಾ ನದಿ ನಿರ್ವಹಣಾ ಯೋಜನೆಗೆ ಚೀನಾ ಢಾಕಾಗೆ 1 ಶತಕೋಟಿ ಡಾಲರ್ ಸಾಲ ನೀಡುತ್ತಿದೆ. ಸುಮಾರು 2 ಕೋಟಿಯಷ್ಟು ಬಾಂಗ್ಲಾದ ಜನ ತೀಸ್ತಾ ನದಿಯ ಮೇಲೆ ಅವಲಂಬಿತವಾಗಿದ್ದಾರೆ. ಈ ವರ್ಷದ ಡಿಸೆಂಬರ್ ಹೊತ್ತಿಗೆ ಅಲ್ಲಿ ಕೆಲಸವನ್ನು ಶುರುಮಾಡುವ ತಯಾರಿ ಮಾಡಿಕೊಳ್ಳುತ್ತಿದೆ ಚೀನಾ. ಈ ನದಿಯಿಂದ ಚೀನಾಕ್ಕೆ ನೈಸರ್ಗಿಕವಾಗಿ ಯಾವುದೇ ಉಪಯೋಗವಿಲ್ಲವಾದರೂ ಬಾಂಗ್ಲಾವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ, ಭಾರತದ ವಿರುದ್ಧ ಎತ್ತಿಕಟ್ಟುವ ಹುನ್ನಾರ ಇದರಲ್ಲಿ ಅಡಗಿದೆ.

ತನ್ನ ಆಕ್ರಮಣಕಾರಿ ಧೋರಣೆ, ವಿಸ್ತರಣಾವಾದ, ಸಾಲದ ಬಲೆಗಳ ಮೂಲಕ ಇಡೀ ಜಗತ್ತನ್ನು ಆಕ್ರಮಿಸಿಕೊಳ್ಳುತ್ತಿದೆ ಚೀನಾ. ಕೊರೋನಾ ಎಂಬ ಮಹಾಮಾರಿಯನ್ನು ಹರಡಿಸುವುದರ ಮೂಲಕ ಜಗತ್ತಿನ ಆರ್ಥಿಕತೆಯನ್ನು ಬುಡಮೇಲು ಮಾಡುವ ಷಡ್ಯಂತ್ರದ ಅನುಮಾನ ಈಗ ದಟ್ಟವಾಗುತ್ತಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಚೀನಾದ ಮೇಲೆ ಅವಲಂಭಿತವಾಗಿರುವುದು ಆತಂಕಕಾರಿ ಸಂಗತಿ. ಈಗಾಗಲೇ ಭಾರತ, ಅಮೇರಿಕಾ, ಜಪಾನ್, ಆಸ್ಟ್ರೇಲಿಯಾ ಚೀನಾ ವಿರುದ್ಧ ಗಟ್ಟಿಯಾಗಿ ನಿಲ್ಲುವತ್ತ ಕೆಲಸ ಮಾಡುತ್ತಿವೆ. ಜಗತ್ತು ಈ ನಾಲ್ಕು ರಾಷ್ಟ್ರಗಳೊಂದಿಗೆ ಕೈಜೋಡಿಸಬೇಕು. ಚೀನಾವನ್ನು ಒಬ್ಬಂಟ್ಟಿಯಾಗಿ ನಿಲ್ಲಿಸಿ ಬೇಟೆಯಾಡಬೇಕು. ಕಮ್ಯುನಿಸ್ಟ್ ಡ್ರಾಗನ್ ಅನ್ನು ಮಣಿಸಲೇಬೇಕು.