ನನ್ನ ದೇಶವನ್ನು ನಾನು ಪೂಜಿಸುತ್ತೇನೆ, ಅದಕ್ಕಾಗಿ ನನ್ನ ಸರ್ವಸ್ವವನ್ನೂ ಧಾರೆ ಎರೆಯುತ್ತೇನೆ ಎನ್ನುವವರಿಗೆ ಜಾತಿ, ಮತ, ಪಂಥ, ಶ್ರೀಮಂತ, ಬಡವ ಎಂಬ ಯಾವ ಕಟ್ಟುಪಾಡಾಗಲಿ, ಬೇಲಿಯಾಗಲಿ ಇರುವುದಿಲ್ಲ. ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ತಮ್ಮ ಧರ್ಮಗಳನ್ನು ಮೀರಿ, ದೇಶದ ಸ್ವಾತಂತ್ರ್ಯಕ್ಕಾಗಿ ಒಟ್ಟಾಗಿ ಹೋರಾಡಿ, ಒಟ್ಟಾಗಿ ಪ್ರಾಣಾರ್ಪಣೆ ಮಾಡಿದ ವೀರರು ರಾಂ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಪಾಕ್ ಉಲ್ಲಾ ಖಾನ್. ಉತ್ತರಪ್ರದೇಶದ ಶಹಜಹಾನ್ ಪುರದಲ್ಲಿ ಮೂರು ವರ್ಷದ ಅಂತರದಲ್ಲಿ ಇಬ್ಬರ ಜನನ. ಶಾಲಾ ದಿನಗಳಿಂದಲೇ ಇಬ್ಬರೂ ಸಹ ಒಟ್ಟಾಗಿ ಇದ್ದವರು. ಸಮಾನ ಮನಸ್ಕರಾಗಿದ್ದರಿಂದ ಇಬ್ಬರಲ್ಲೂ ಸ್ನೇಹ ಹೆಮ್ಮರವಾಗಿ ಬೆಳೆಯಿತು. ಬ್ರಿಟೀಷರ ವಿರುದ್ಧ ಒಟ್ಟಿಗೆ ಹೋರಾಡಲು ಈ ಸಖ್ಯವೇ ಮುಖ್ಯ ಅಡಿಪಾಯವಾಯಿತು. ಎಲ್ಲರಿಗೂ ಆಶ್ಚರ್ಯದ ಸಂಗತಿ ಎಂದರೆ ಒರ್ವ ಕಟ್ಟಾ ಆರ್ಯಸಮಾಜಿ, ಮತ್ತೋರ್ವ ಮುಸಲ್ಮಾನ. ಇವರಿಬ್ಬರ ಜೋಡಿ ಹೇಗೆ? ಅದಕ್ಕೆ ಉತ್ತರ ದೇಶಭಕ್ತಿ ಎಂಬ ಮಂತ್ರ.
ಬಾಲ್ಯದಲ್ಲಿ ರಾಂ ಕೆಟ್ಟ ಹುಡುಗರ ಸಹವಾಸಕ್ಕೆ ಬಿದ್ದ ಕಾರಣ ಅವನಲ್ಲಿ ದುರ್ಗುಣಗಳು ಮನೆಮಾಡಿದವು. ಯಾವ ಅಮೃತ ಘಳಿಗೆಯಲ್ಲೋ ರಾಂ ದೇವಸ್ಥಾನಕ್ಕೆ ಹೋಗಲು ಪ್ರಾರಂಭಿಸಿದ. ಆ ಘಳಿಗೆಯಿಂದ ಆವನ ಜೀವನದ ದಿಕ್ಕು ಬದಲಾಯಿತು. ದುಶ್ಚಟಗಳು ದೂರವಾದವು. "ದಯಾನಂದ ಸರಸ್ವತಿಯವರ 'ಸತ್ಯಾರ್ಥ ಪ್ರಕಾಶ'ವನ್ನು ಓದಿ ನನ್ನ ಜೀವನದ ಒಂದು ಹೊಸಪುಟ ತೆರೆಯಿತು" ಎಂದು ರಾಂ ತನ್ನ ಆತ್ಮಕಥೆಯಲ್ಲಿ ಬರೆದ್ದಿದ್ದಾನೆ. ಅಂದಿನಿಂದ ಸಾಧು, ಸಂತರೊಂದಿಗಿನ ಓಡನಾಟ, ಆರ್ಯಸಮಾಜದ ನಿಷ್ಠಾವಂತ ಅನುಯಾಯಿಯಾದ ರಾಂ. ನಂತರದ ದಿನಗಳಲ್ಲಿ ರಾಂ ರಾಜಕೀಯ ಪ್ರವೇಶ ಮಾಡುತ್ತಾನೆ, ದೇಶಭಕ್ತಿ ಪೂರಿತ, ಅಧ್ಯಾತ್ಮದ ಕುರಿತ ಪುಸ್ತಕಗಳನ್ನು ಓದುತ್ತಾನೆ. ಲಕ್ನೋವಿನಲ್ಲಿ ನಡೆದ ಕಾಂಗ್ರೇಸ್ ಅಧಿವೇಶನದಲ್ಲಿ ಭಾಗಿಯಾಗಿ, ಲೋಕಮಾನ್ಯ ತಿಲಕರ ಮಾತಿನಿಂದ ಪ್ರೇರೆಪಿತನಾಗಿ, ಸ್ವಾತಂತ್ರ್ಯ ಹೋರಾಟದ ಹಾದಿ ಹಿಡಿಯುತ್ತಾನೆ.
![]()  | 
| ರಾಂ ಪ್ರಸಾದ್ ಬಿಸ್ಮಿಲ್ | 
ರಾಂ ಹುಟ್ಟಿದ ಊರಿನಲ್ಲೇ ಶ್ರೀಮಂತ ಜಮೀನ್ದಾರ, ಮುಸಲ್ಮಾನ್ ಕುಟುಂಬದಲ್ಲಿ ಅಶ್ಪಾಕನ ಜನನವಾಗುತ್ತದೆ. ಕನೈಲಾಲ್ ದತ್ತಾ ಮತ್ತು ಖುದಿರಾಂ ಬೋಸರ ಕ್ರಾಂತಿಕಾರಿ ಜೀವನ ಅಶ್ಪಾಕನನ್ನು ಕ್ರಾಂತಿಕಾರ್ಯ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರೇಪಿಸುತ್ತದೆ. ಗೆಂಡಲಾಲ್ ದೀಕ್ಷಿತ್ ನೇತೃತ್ವದಲ್ಲಿ ಮೈನ್‌ಪುರಿ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ರಾಜರಾಮ್ ಭಾರ್ತಿಯಾ ಎಂಬ ವಿದ್ಯಾರ್ಥಿಯನ್ನು ಬಂಧಿಸುವ ಸಲುವಾಗಿ ಅಶ್ಪಾಕನ ಶಾಲೆಯ ಮೇಲೆ ಪೊಲೀಸ್ ದಾಳಿ ನಡೆಯುತ್ತದೆ. ಈ ಘಟನೆಯ ನಂತರ ಆಶ್ಪಾಕ್ ಕ್ರಾಂತಿಕಾರ್ಯಕ್ಕೆ ಧುಮುಕುತ್ತಾನೆ. ಉತ್ತರ ಭಾರತದ ಕ್ರಾಂತಿಕಾರಿ ಗುಂಪನ್ನು ಸೇರಿಕೊಳ್ಳಲು ಹುಡುಕಾಟ ಆರಂಭಿಸಿ, ಬನಾರ್ಸಿಲಾಲ್ ಎಂಬ ಸ್ನೇಹಿತನ ಮೂಲಕ ರಾಂ ಪ್ರಸಾದ್ ಬಿಸ್ಮಿಲ್ ನ ಪರಿಚಯವಾಗುತ್ತದೆ. ಇವರಿಬ್ಬರ ಮಿಲನ ಗದರ್ ಪಾರ್ಟಿಯ ನಂತರ ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟದ ಮತ್ತೊಂದು ಘಟ್ಟ ಪ್ರಾರಂಭವಾಗುತ್ತದೆ.
![]()  | 
| ಅಶ್ಪಾಕ್ ಉಲ್ಲಾ ಖಾನ್ | 
ಮುಂದಿನ 7 ವರ್ಷಗಳಲ್ಲಿ ರಾಂ ಮತ್ತು ಅಶ್ಪಾಕ್ ನಡುವೆ ಅತ್ಯಂತ ಆತ್ಮೀಯ ಬಾಂಧವ್ಯ ಬೆಳೆಯುತ್ತದೆ. ಇಬ್ಬರೂ ಗಾಂಧೀಜೀ ಕರೆಕೊಟ್ಟ ಅಸಹಕಾರ ಚಳುವಳಿಯಲ್ಲಿ ಭಾಗವಹಿಸುತ್ತಾರೆ, ಚಿತ್ತರಂಜನ್ ದಾಸ್ ಮತ್ತು ಮೋತಿಲಾಲ್ ನೆಹರೂರವರ ಸ್ವರಾಜಿಸ್ಟ್ ಪಾರ್ಟಿಯ ಪರವಾಗಿ ಒಟ್ಟಿಗೆ ಪ್ರಚಾರ ಮಾಡುತ್ತಾರೆ. ಇಬ್ಬರಲ್ಲೂ ಸಮಾನವಾಗಿದ್ದ ಸಂಗತಿಗಳೆಂದರೆ - ದೇಶಭಕ್ತಿ ಮತ್ತು ಇಬ್ಬರೂ ಸಹ ಬರಹಗಾರರಾಗಿದ್ದರು. 'ಬೋಲ್ಶೆವಿಕೋಂ ಕೀ ಕರ್ತೂತ್' ಎಂಬ ಬಂಗಾಲಿ ಕೃತಿ, ಅರವಿಂದರ 'ಯೋಗಿಕ್ ಸಾಧನ್' ಎಂಬ ಕೃತಿಗಳ ಅನುವಾದ, 'ಮನ್ ಕೀ ಲಹಾರ್' ಮತ್ತು 'ಸ್ವದೇಶಿ ರಂಗ್' ಎಂಬ ಕವನ ಸಂಕಲನಗಳನ್ನು ರಾಂ ತನ್ನ ಕ್ರಾಂತಿಕಾರಿ ಜೀವನದಲ್ಲಿ ಬರೆಯುತ್ತಾನೆ. ಗೋರಖ್ಪುರ ಬಂದಿಖಾನೆಯಲ್ಲಿ ತನ್ನ ಆತ್ಮಕಥೆಯನ್ನೂ ಸಹ ಬರೆಯುತ್ತಾನೆ. ಬ್ರಿಟೀಷರ ವಿರುದ್ಧ ಯುದ್ಧ ಘೋಷಣೆಯಾಗಿ 'ಸರ್ಫ಼ರೋಶಿ ಕೀ ತಮನ್ನಾ' ಎಂಬ ಪ್ರಸಿದ್ಧ ಕವನವನ್ನು ರಾಂ ರಚಿಸಿದ್ದಾರೆ. ಆಶ್ಪಾಕ್ ಕೂಡ ಉರ್ದು ಕವಿಯಾಗಿದ್ದರು. ವಾರ್ಸಿ ಮತ್ತು ಹಸರತ್ ಎಂಬ ಕಾವ್ಯನಾಮದಲ್ಲಿ ಘಜ಼ಲ್ ಮತ್ತು ಕವನಗಳನ್ನು ಬರೆದಿದ್ದಾರೆ.
ರಾಂ ಮತ್ತು ಅಶ್ಪಾಕ್ 'ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್' ಎಂಬ ಕ್ರಾಂತಿಕಾರಿ ಸಂಸ್ಥೆಯ ಪ್ರಮುಖ ನಾಯಕರಾಗಿದ್ದರು. 1924 ರಲ್ಲಿ ಕೈಹೊತ್ತಿಗೆಯನ್ನು ಮುದ್ರಿಸಿ, ಅದನ್ನು ರಂಗೂನಿನಿಂದ ಪೇಶಾವರ್ ವರೆಗೂ ಹಂಚಿ, ಜನ ಜಾಗೃತಿ ಮೂಡಿಸಲು ಸಂಸ್ಥೆ ಮುಂದಾಗುತ್ತದೆ. ಗದರ್ ಪಾರ್ಟಿಯ ಅಧ್ಯಾಯ ಮುಗಿದ ನಂತರ ಕ್ರಾಂತಿಯ ಕಾಟ ಇಲ್ಲ ಎಂದು ತಿಳಿದಿದ್ದ ಬ್ರಿಟೀಷ್ ಸರ್ಕಾರಕ್ಕೆ ಈ ಕೈಹೊತ್ತಿಗೆಗಳನ್ನು ನೋಡಿ ಛಡಿ ಏಟು ಬಿದ್ದಂತಾಯಿತು. ಅದರಲ್ಲಿದ್ದ ಮಾತುಗಳ ಕಸುವು ಕಂಡು ಬೆಚ್ಚಿಬೀಳುವಂತಾಯಿತು. ಕೈಹೊತ್ತಿಗೆಯ ವಿಷಯ ಸಿದ್ದಪಡಿಸಿದ್ದು ರಾಂ ಮತ್ತು ಅಶ್ಪಾಕ್. ಸಂಸ್ಥೆಗೆ ಹಣದ ಅವಶ್ಯಕತೆ ಹೆಚ್ಚು ಬೀಳುತ್ತದೆ ಅದಕ್ಕಾಗಿ ಸರ್ಕಾರಿ ಹಣವನ್ನು ದರೋಡೆ ಮಾಡಲು ನಿಶ್ಚಯ ಮಾಡುತ್ತಾರೆ. ರಾಂ ನ ಈ ನಿಶ್ಚಯವೇ ನಂತರ ನಡೆದ ಕಾಕೋರಿ ರೈಲು ದರೋಡೆ ಎಂಬ ಪ್ರಮುಖ ಘಟನೆಗೆ ನಾಂದಿಯಾಗುತ್ತದೆ. ಯೋಜನೆ ಸಿದ್ಧಪಡಿಸಿ ಎಲ್ಲರೂ ಉತ್ಸಾಹದಲ್ಲಿ ಮುಂದುವರೆಯಬೇಕಾದರೆ ಅಶ್ಪಾಕ್ - "ನಾವು ಮಾಡಹೊರಟಿರುವ ಈ ಕಾರ್ಯ ಮುಂದೆ ಬಹಳ ಅನರ್ಥಕ್ಕೆ ದಾರಿ ಮಾಡಿಕೊಡುತ್ತದೆ. ಇಡೀ ಆಂಗ್ಲ ಸಮಾಜಕ್ಕೆ ಸೆಡ್ಡು ಹೊಡೆದು, ಅಪಾಯವನ್ನು ಮೈ ಮೇಲೆ ಎಳೆದುಕೊಂಡಂತಾಗುತ್ತದೆ. ನಮ್ಮ ಗುರಿ ಮುಟ್ಟುವ ಮುನ್ನವೇ ಸಿಕ್ಕಿಬೀಳಬೇಕಾಗುತ್ತದೆ" ಎಂದು ಶಾಂತನಾಗಿ ಎಚ್ಚರಿಸಿಸುತ್ತಾನೆ. ಆತನ ಮಾತಲ್ಲಿ ಸತ್ಯವಿತ್ತು ಆದರೆ ಸಭೆ ದರೋಡೆ ಮಾಡಲು ನಿರ್ಧರಿಸಿತು. ಅದಕ್ಕೆ ಅನುಗುಣವಾಗಿ ಅಶ್ಪಾಕ್ ದರೋಡೆಗೆ ನಿಲ್ಲುತ್ತಾನೆ. ಸಂಸ್ಥೆಯ ನಿರ್ಧಾರ ಮತ್ತು ರಾಂ ನ ಮಾತು ಆತನಿಗೆ ಕೊನೆಯ ಮಾತು, ತನ್ನ ವಯ್ಯಕ್ತಿಕ ಭಾವನೆಗಿಂತ ರಾಂ, ಸಂಸ್ಥೆ ಮತ್ತು ದೇಶ ದೊಡ್ಡದಾಗಿತ್ತು. ಕಾಕೋರಿ ದರೋಡೆಯಲ್ಲಿ ರಾಂ ಮತ್ತು ಅಶ್ಪಾಕ್ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಕಾಕೋರಿಯಲ್ಲಿ ರೈಲನ್ನು ನಿಲ್ಲಿಸಿ ಹಣವನ್ನು ಇಟ್ಟಿದ್ದ ಸಂದೂಕನ್ನು ಒಡೆದು ಪರಾರಿ ಆಗುವುದಾಗಿತ್ತು ಇವರ ಯೋಜನೆ. ಅಶ್ಪಾಕ್ ಮತ್ತು ರಾಂ ದರೋಡೆ ಮಾಡುವ ಕ್ರಿಯೆಯಲ್ಲಿ ಭಾಗವಹಿಸುವ ಎಲ್ಲರನ್ನೂ ಕಾಯುವ ಜವಾಬ್ದಾರಿ ಹೊತ್ತಿದ್ದರು. ಸಂದೂಕನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದರು ಆದರೆ, ಅದು ಒಡೆಯುವ ಸೂಚನೆ ಕಾಣಲಿಲ್ಲ. ಸಂದರ್ಭವನ್ನರಿತ ಅಶ್ಪಾಕ್ ತನ್ನ ಕೈಯ್ಯಲ್ಲಿದ್ದ ಪಿಸ್ತೂಲನ್ನು ರಾಂ ಗೆ ಕೊಟ್ಟು ಸಂದೂಕನ್ನು ಒಡೆಯಲು ಮುಂದಾಗುತ್ತಾನೆ. ಕೆಲವೇ ಪೆಟ್ಟುಗಳ ನಂತರ ಸಂದೂಕು ಒಡೆಯುತ್ತದೆ. ಅಶ್ಪಾಕ್ ಅದನ್ನು ಸಾಧಿಸಿದ್ದ. ಆರಂಭದಲ್ಲಿ ಯಾರು ಬಲವಾಗಿ ವಿರೋಧಿಸಿದ್ದನೋ ಅವನೇ ತನ್ನ ಕೈಯಾರ ಶಿಶ್ತಿನ ಸಿಪಾಯಿಯಂತೆ, ಅಣ್ಣ ರಾಂ ನ ಆಜ್ಞೆಯಂತೆ ಸಂದೂಕನ್ನು ಒಡೆದಿದ್ದ. ನಂತರ ಅದರಲ್ಲಿದ್ದ ಹಣವನ್ನು ದೋಚಿ ಪರಾರಿಯಾಗುತ್ತಾರೆ.
ಕಾಕೋರಿ ದರೋಡೆ ಆಂಗ್ಲ ಸರ್ಕಾರ ತನ್ನ ಪ್ರತಿಷ್ಠೆಗೆ ಎಸೆದ ಸವಾಲು ಎಂದು ಸ್ವೀಕರಿಸಿ ತ್ವರಿತವಾಗಿ ಗುಪ್ತಚರ ಜಾಲವನ್ನು ವಿಶಾಲವಾಗಿ ಹರಡುತ್ತದೆ. ಬಿಸ್ಮಿಲ್ ಶಹಜಹಾನ್ ಪುರದಲ್ಲೇ ತಲೆಮರೆಸಿಕೊಂಡಿದ್ದ ಮತ್ತು ಅಶ್ಪಾಕ್ ಬನಾರಸ್ ನಲ್ಲಿ ತಲೆಮರೆಸಿಕೊಂಡಿದ್ದ. ಕೆಲವೇ ದಿನಗಳಲ್ಲಿ ಆಂಗ್ಲರು ರಾಂಪ್ರಸಾದ್ ಬಿಸ್ಮಿಲ್ ರನ್ನು ಬಂಧಿಸುತ್ತಾರೆ. ಆದರೆ, ಅಶ್ಪಾಕ್ ಬನಾರಸಿನಿಂದ ಬಿಹಾರ್ ಮತ್ತು ಅಲ್ಲಿಂದ ದೆಹಲಿಗೆ ತೆರಳುತ್ತಾನೆ. ಲಂಡನ್ನಿನಲ್ಲಿದ್ದ ಲಾಲ ಹರದಯಾಳ್ ರನ್ನು ಕ್ರಾಂತಿಕಾರ್ಯದ ಸಲುವಾಗಿ ಭೇಟಿಯಾಗಲು ವಿದೇಶಕ್ಕೆ ತೆರಳಲು ತಯಾರಿ ನಡೆಸುತ್ತಿದ್ದ ಅಶ್ಪಾಕ್. ದೆಹಲಿಯಲ್ಲಿ ಪಠಾನ್ ಸ್ನೇಹಿತ ಅನ್ನಿಸಿಕೊಂಡವನು ದ್ರೋಹ ಮಾಡಿದ ಕಾರಣ ಅಶ್ಪಾಕ್ ಪೋಲಿಸರಿಗೆ ಸಿಕ್ಕಿ ಬೀಳುತ್ತಾನೆ. ತಸಾದುಖ್ ಹುಸೇನ್ ಎಂಬ ಪೋಲೀಸ್ ಅಧಿಕಾರಿ ರಾಂ ಮತ್ತು ಅಶ್ಪಾಕ್ ಮಧ್ಯೆ ಹಿಂದೂ ಮತ್ತು ಮುಸಲ್ಮಾನ್ ಬೇಧವನ್ನು ಬಿತ್ತಲು ಪ್ರಯತ್ನಿಸುತ್ತಾನೆ. "ಬ್ರಿಟೀಷರ ನೌಕರಿ ಮಾಡುತ್ತಿರುವ ನಿಮ್ಮಂತಹವರು ಖಾಫ಼ಿರ್ ಹೊರತು ಭಾರತಕ್ಕಾಗಿ ಹೋರಾಡುವ ನನ್ನ ರಾಂ ಅಲ್ಲ" ಎಂದು ಉತೃಷ್ಟವಾಗಿ ಪ್ರತಿಕ್ರಿಯಿಸುತ್ತಾನೆ ಅಶ್ಪಾಕ್. ರಾಂ ಕೂಡ ಅಶ್ಪಾಕನ ಬಗ್ಗೆ ಅತೀ ಉನ್ನತ ಭಾವನೆಯನ್ನು ತನ್ನ ಅತ್ಮಕಥೆಯಲ್ಲಿ ವಿವರಿಸಿದ್ದಾನೆ.
ಕಾಕೋರಿ ಮತ್ತು ಇತರ ಕ್ರಾಂತಿಕಾರಿ ಚಟುವಟಿಕೆ ಕಾರಣದಿಂದಾಗಿ ರಾಂ ಮತ್ತು ಅಶ್ಪಾಕನಿಗೆ ಮರಣದಂಡನೆ ವಿಧಿಸುತ್ತದೆ ಬ್ರಿಟೀಷ್ ಸರ್ಕಾರ. ಡಿಸೆಂಬರ್ 11, 1927 ರಂದು ಗೋರಖ್ಪುರದಲ್ಲಿ ರಾಂ ಮತ್ತು ಲಕ್ನೋವಿನ ಫ಼ಸಿಯಾಬಾದಿನಲ್ಲಿ ಅಶ್ಪಾಕರನ್ನು ಒಂದೇ ದಿನ ನೇಣಿಗೇರಿಸುತ್ತಾರೆ. ರಾಂ ಯಾವಾಗಲೂ ಆಶ್ಪಾಕನನ್ನು ತಮ್ಮನಂತೆ ಕಂಡರೆ, ಅಶ್ಪಾಕ್ ರಾಂ ನನ್ನು ಅಣ್ಣ ಮತ್ತು ತನ್ನ ನಾಯಕನನ್ನಾಗಿ ಗೌರವಿಸುತ್ತಿದ್ದ. ಅವರಿಬ್ಬರ ಸ್ನೇಹವನ್ನು ಪರಮಾತ್ಮನಿಂದಲೂ ಬೇರ್ಪಡಿಸಲು ಆಗುತ್ತಿರಲಿಲ್ಲ. ಅದಕ್ಕೆ ಕಾರಣ ಅವರಿಬ್ಬರಲ್ಲಿ ಸಮಾನವಾಗಿ ಉರಿಯುತ್ತಿದ್ದ ಭಾರತದ ಸ್ವಾತಂತ್ರ್ಯದ ಸಂಕಲ್ಪ. ಇಬ್ಬರಲ್ಲೂ ಒಂದೇ ಧ್ಯೇಯ ಮತ್ತು ಆರಾಧ್ಯ ದೈವ - ಭಾರತಮಾತೆ, ಹೃದಯದಲ್ಲಿದ್ದದ್ದು ದೇಶಭಕ್ತಿ. ಅಶ್ಪಾಕ್ ಮತ್ತು ರಾಂ ಪ್ರಸಾದನ ಜೀವನ ಭಾರತೀಯರಿಗೆ ಒಂದು ಪಾಠ. ದೇಶಭಕ್ತಿಯ ಮುಂದೆ ಜಾತಿ, ಮತ, ಧರ್ಮಗಳು ನಗಣ್ಯ.



