ಕಳೆದ 15-20 ದಿನಗಳಿಂದ ಎಲ್ಲೆಡೆ ಅಫ್ಘಾನಿಸ್ತಾನದ್ದೇ ಸುದ್ಧಿ. ಆಗಸ್ಟ್ 11 ರಿಂದ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಹುಚ್ಚಾಟ ಶುರುವಾಯಿತು. ಮೂರೇ ದಿನಗಳಲ್ಲಿ ಅಂದರೆ ಆಗಸ್ಟ್ 15 ರಂದು ರಾಜಧಾನಿ ಕಾಬೂಲ್ ನಗರವನ್ನು ವಶಪಡಿಸಿಕೊಳ್ಳುತ್ತಾರೆ. ಇದರೊಂದಿಗೆ ಅಫ್ಘಾನಿಸ್ತಾನ ಮತ್ತೆ ತಾಲಿಬಾನಿಗಳ ತೆಕ್ಕೆಗೆ ಬಿತ್ತು. ರಷ್ಯಾ, ಚೀನಾ, ಪಾಕೀಸ್ತಾನ, ಇರಾನ್ ದೇಶಗಳ ರಾಯಭಾರ ಕಚೇರಿಗಳು ಅಫ್ಘಾನಿಸ್ತಾನದಲ್ಲಿ ಇನ್ನೂ ಕಾರ್ಯ ಮಾಡುತ್ತಿವೆ. ತನ್ನ ನಾಗರೀಕರನ್ನು ವಾಪಸ್ಸು ಕರೆದೊಯ್ಯಲು ತಾಲಿಬಾನಿಗಳು ಆಗಸ್ಟ್ 31 ತನಕ ಅಮೇರಿಕಾಕ್ಕೆ ಗಡುವು ನೀಡಿದೆ. ಇದರ ಬೆನ್ನಲ್ಲೇ ಆಗಸ್ಟ್ 27 ಮತ್ತು 29 ರಂದು ಐಸಿಸ್ ಕಾಬುಲ್ ವಿಮಾನ ನಿಲ್ದಾಣ ಸೇರಿದಂತೆ ಕೆಲವು ಕಡೆ ಬಾಂಬ್ ದಾಳಿ ಮಾಡಿದೆ. ಅದಕ್ಕೆ ಪ್ರತಿಯಾಗಿ ಅಮೇರಿಕಾ ಡ್ರೋನ್ ದಾಳಿ ನಡೆಸಿ ಐಸಿಸ್ನ ಇಬ್ಬರು ಪ್ರಮುಖ ಉಗ್ರರನ್ನು ಕೊಂದಿದ್ದೇವೆ ಎಂದಿದೆ. ಅಚ್ಚರಿ ಎಂದರೆ ಐಸಿಸ್ನ ಈ ದಾಳಿಯನ್ನು ತಾಲಿಬಾನಿಗಳು ಸಹ ಖಂಡಿಸಿದ್ದಾರೆ! ಅಧ್ಯಕ್ಷ ಬೈಡನ್ ಐಸಿಸ್ ವಿರುದ್ಧ ಮಾತಾಡಿದ್ದಾರೆ ಹೊರತು ತಾಲಿಬಾನಿಗಳ ವಿರುದ್ಧ ಅಲ್ಲ. ತಾಲಿಬಾನಿಗಳ ಕುರಿತು ಅಮೇರಿಕಾಕ್ಕೆ ಮೃದು ಧೋರಣೆ ಯಾಕೆ? ರಷ್ಯಾ, ಚೀನಾ, ಇರಾನ್ ತಾಲಿಬಾನಿಗಳ ಜೊತೆಗೆ ಮಾತುಕತೆಗೆ ತಾವು ತಯಾರು ಎಂದು ಹೇಳಲು ಕಾರಣವೇನು?
ಹತ್ತೊಂಬತ್ತನೆ ಶತಮಾನದ ದ್ವಿತಿಯಾರ್ಧದಲ್ಲಿ ರಷ್ಯಾ ಮತ್ತು ಆಂಗ್ಲರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಕ್ರಮವಾಗಿ ಉತ್ತರ ಮತ್ತು ದಕ್ಷಿಣದಿಂದ ಈಗಿರುವ ಅಫ್ಘನ್ ಭಾಗವನ್ನು ತಲುಪುತ್ತಾರೆ. ಖೋಕಂಡ್ ಖಾನೇಟ್, ಬುಖಾರಾ ಎಮಿರೇಟ್ ಮತ್ತು ಖಿವಾ ಖಾನೇಟ್ ಪ್ರಾಂತ್ಯಗಳನ್ನು ರಷ್ಯಾ ವಶಪಡಿಸಿಕೊಳ್ಳುತ್ತದೆ. ರಷ್ಯಾದ ಈ ಕ್ರಮ ಭಾರತವನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಆಡ್ಡಿಯಾಗಬಹುದು ಎಂದು ಆಂಗ್ಲರ ಚಿಂತೆಯಾಗುತ್ತದೆ ಮತ್ತು ರಷ್ಯನ್ನರನ್ನು ತಡೆಯುವುದು ಆಂಗ್ಲರಿಗೆ ಅತೀ ಮುಖ್ಯವಾಗುತ್ತದೆ. ಯುದ್ಧ ಮತ್ತು ಒಪ್ಪಂದದ ಪರಿಣಾಮವಾಗಿ ರಷ್ಯಾ ಮತ್ತು ಆಂಗ್ಲರ ಭಾರತದ ಮಧ್ಯೆ ಒಂದು ಬಫರ್ ದೇಶವನ್ನಾಗಿ ಅಫ್ಘಾನಿಸ್ತಾನವನ್ನು ಸ್ಥಾಪಿಸಲಾಯಿತು. ಇದರ ಮೂಲಕ ಆಂಗ್ಲರು ರಷ್ಯಾವನ್ನು ತಮ್ಮ ಸಾಮ್ರಾಜ್ಯದತ್ತ ಬರುವುದನ್ನು ತಡೆಯುತ್ತಾರೆ. ನಂತರ ಜಗತ್ತಿನಲ್ಲಿ ಎರಡು ಮಹಾಯುದ್ಧಗಳು ನಡೆದು, ಇಪ್ಪತ್ತನೇ ಶತಮಾನದ ಕೊನೆಯಲ್ಲಿ ಉಕ್ರೇನ್, ಜಾರ್ಜಿಯಾ, ಬೆಲಾರಸ್, ಅರ್ಮೇನಿಯಾ, ಅಜರ್ಬೈಜಾನ್, ಕಿರ್ಗಿಸ್ತಾನ, ಖಜಕಿಸ್ತಾನ, ಮೊಲ್ಡೊವಾ, ತುರ್ಕ್ಮೇನಿಸ್ತಾನ, ತಜಕಿಸ್ತಾನ ಮತ್ತು ಉಜ್ಬೇಕಿಸ್ತಾನ ದೇಶಗಳು ಸೋವಿಯಟ್ ಒಕ್ಕೂಟದ ಭಾಗದಿಂದ ಹೊರಬರುವುದಾಗಿ ಘೋಷಿಸಿತ್ತು. ಇದರೊಂದಿಗೆ ಸೋವಿಯಟ್ ರಷ್ಯಾ ಒಡೆದು ಹೋಯಿತು. ಆದರೆ, ತೈಲ ನಿಕ್ಷೇಪದ ಮೇಲೆ ತೇಲುತ್ತಿರುವ ಈ ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸಲು ಇತರ ರಾಷ್ಟ್ರಗಳು ಕಾಯುತ್ತಿದ್ದವು.
![]()  | 
| Central Asian Khanates and Tribes | 
ಸೋವಿಯಟ್ ಒಕ್ಕೂಟವನ್ನು ಒಡೆಯಲು ಮತ್ತು ಮಧ್ಯ ಏಷ್ಯಾ ಪ್ರಾಂತ್ಯವನ್ನು ತೆಕ್ಕೆಗೆ ಪಡೆದುಕೊಳ್ಳಲು ಅಮೇರಿಕಾ ಮುಂದಾಯಿತು. ಆಗ ಹುಟ್ಟಿಕೊಂಡದ್ದೇ ಒಸಾಮ ನೇತೃತ್ವದ ಸುನ್ನಿ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಅಲ್-ಕೈದಾ! ರಷ್ಯಾ ವಿರುದ್ದ ಯುದ್ಧ ಮಾಡಲು ಇದೇ ಅಲ್-ಕೈದಾಕ್ಕೆ ಪಾಕಿಸ್ತಾನದ ಐ.ಎಸ್.ಐ ಮೂಲಕ ಹಣ, ಶಸ್ತ್ರಾಸ್ತ್ರ ಮತ್ತು ತರಬೇತಿಯನ್ನು ನೀಡಿತು. ಪಾಕಿಸ್ತಾನದ ಐ.ಎಸ್.ಐ ಅಲ್-ಕೈದಾವನ್ನು ಬೆಳೆಸುವದರ ಜೊತೆಗೆ ವಿದ್ಯಾರ್ಥಿಗಳ ಸಂಘಟನೆ ಎನ್ನಿಸಿಕೊಂಡ ತಾಲಿಬಾನಿಗಳನ್ನು ಬೆಳೆಸಿದರು! ತನ್ನ ಕೆಲಸವಾದ ನಂತರ ಮೂಲೆಗುಂಪು ಮಾಡುವುದು ಅಮೇರಿಕಾದ ಬುದ್ಧಿ. ಅದರಂತೆ, ರಷ್ಯಾ ಒಡೆದ ನಂತರ ಅಮೇರಿಕಾ ಅಲ್-ಕೈದಾವನ್ನು ಕಡೆಗಾಣಿಸಿತು. ರಕ್ತದ ರುಚಿಕಂಡ ಹುಲಿಯಂತ್ತಿದ್ದ ಮತಾಂಧ ಉಗ್ರಗುಂಪು ಪಾಕಿಸ್ತಾನ, ತನ್ಮೂಲಕ ಕಾಶ್ಮೀರಕ್ಕೆ ನುಸುಳಿತು. ಇಸ್ಲಾಂ ವಿಚಾರಕ್ಕೆ ವಿರುದ್ಧ ಇದ್ದ ಅಮೇರಿಕಾ ವಿರುದ್ಧ ಒಸಾಮಾ 2001 ರಲ್ಲಿ ತಿರುಗಿಬಿದ್ದ. ಅಮೇರಿಕಾದ ಆಕ್ರಮಣದಿಂದಾಗಿ ಅಲ್-ಕೈದಾ ಇಂದ ಹೊರಬಂದ ಮತಾಂಧ ಉಗ್ರ ಗುಂಪು ಐಸಿಸ್ ಅನ್ನು ಕಟ್ಟಿಕೊಂಡಿತು!
ಅಮೇರಿಕಾ ತನ್ನ ವಿರುದ್ಧ ಯಾರೇ ಎಗರಾಡಿದರೂ ಪಾಠ ಕಲಿಸುತ್ತಾ ಬಂದಿದೆ. ಲಾಡೆನ್ ಅನ್ನು ಕೊಂದಿತು, ಅನೇಕರನ್ನು ಗ್ವಾಂಟನಾಮೊ ಬೇ ಅಲ್ಲಿ ಬಂಧಿಸಿ ಶಿಕ್ಷಿಸುತ್ತಿದೆ. ಆದರೆ, ತಾಲಿಬಾನಿನ ಮುಲ್ಲಾ ಓಮರ್ ನಾಗಲಿ ಅಥವಾ ಅಬ್ದುಲ್ ಬರಾದರ್ ನಾಗಲಿ ಅಮೇರಿಕಾಗೆ ಒಯ್ಯಲಿಲ್ಲ. ಓಮರ್ ಅಫ್ಘಾನ್ ಅಲ್ಲೇ ಸತ್ತರೇ, ಬರಾದರನ್ನು ಪಾಕಿಸ್ತಾಸನದಲ್ಲಿ ಬಂಧನದಲ್ಲಿಟ್ಟು, 2018 ರಲ್ಲಿ ಅಮೇರಿಕಾ ಬಿಡುಗಡೆ ಮಾಡಿತು. ಅಮೇರಿಕಾ ತಾಲಿಬಾನ್ ಬದಲಾಗಿದೆ ಎಂಬ ಭ್ರಮೆಯಲ್ಲಿದೆ. ರಷ್ಯಾ ಮತ್ತು ಚೀನಾವನ್ನು ತಡೆಯಲು ತಾಲಿಬಾನಿಗಳ ಜೊತೆ ಸಂಬಂಧ ಸರಿಯಿರಬೇಕು ಎಂಬ ಯೋಚನೆ ಇರಬಹುದು. ಅಮೇರಿಕಾ ಬಿಟ್ಟುಹೋದ ನಂತರ ಅಫ್ಘಾನಿಸ್ತಾನದ ಮೇಲೆ ತನ್ನ ಹಿಡಿತ ಸಾಧಿಸಲು ರಷ್ಯಾ ತಾಲಿಬಾನಿಗಳ ಜೊತೆ ಮಾತಿಗಿಳಿದಿದೆ. ಪಂಜಶೀರ್ನಲ್ಲಿ ಮಸೂದ್ ಅಜರ್ ನೇತೃತ್ವದ ತಂಡ ತಾಲಿಬಾನಿಗಳನ್ನು ತಡೆಯುವ ಪ್ರಯತ್ನ ಮಾಡಿತು. ಇವರಿಗೆ ತಜಕಿಸ್ತಾನದಿಂದ ಶಸ್ತ್ರಾಸ್ತ್ರದ ಬೆಂಬಲ ದೊರಕಿದೆ ಎಂಬ ಸುದ್ಧಿ ಅಫ್ಘಾನಿಸ್ತಾನದ ಮಾಧ್ಯಮ ಬಿತ್ತರಿಸಿತು ಆದರೆ, ತಜಕಿಸ್ತಾನದ ಸರ್ಕಾರ ಈ ಸುದ್ದಿಯನ್ನು ಅಲ್ಲಗೆಳದಿದೆ. ಅಕಸ್ಮಾತ್ ತಜಕಿಸ್ತಾನ ಬೆಂಬಲ ಕೊಟ್ಟಿದೆ ಎಂದಾದರೆ ಅದರಲ್ಲಿ ರಷ್ಯಾದ ಕೈವಾಡವಿದೆ ಎಂಬುದರಲ್ಲಿ ಅನುಮಾನವಿಲ್ಲ.
![]()  | 
| Datei Camp Delta, Guantanamo Bay | 
ಮಧ್ಯಪ್ರಾಚ್ಯದಲ್ಲಿ ಚೀನಾ ಸಹ ಅತ್ಯಾಸಕ್ತಿ ಹೊಂದಿದೆ. ಚೀನಾದ ಅಗ್ರ ಹತ್ತು ತೈಲ ಮೂಲಗಳಿಗೆ ಈ ಪ್ರದೇಶವು ನೆಲೆಯಾಗಿದೆ. ಇದು ಚೀನಾದ ಆರ್ಥಿಕ ಬೆಳವಣಿಗೆಗೆ ನಿರ್ಣಾಯಕ ಸಂಪನ್ಮೂಲವಾಗಿದೆ. ಜೊತೆಗೆ ತನ್ನ ಬೆಲ್ಟ್ ರೋಡ್ ಯೋಜನೆಯನ್ನು ಭದ್ರಪಡಿಸಿಕೊಳ್ಳಲು ತಾಲಿಬಾನಿಗಳ ಜೊತೆ ನಿಕಟವಾದ ಸಂಬಂಧ ಹೊಂದುವ ಅಗತ್ಯ ಚೀನಾಕ್ಕೆ ಇದೆ. ಅಫ್ಘಾನಿಸ್ತಾನ ಬಹುಶಃ ವಿಶ್ವದ ಅತಿದೊಡ್ಡ ಲೀಥಿಯಂ ನಿಕ್ಷೇಪ ಹೊಂದಿರುವ ನೆಲೆಯಾಗಿದೆ. ವಿಧ್ಯುತ್ಛಾಲಿತ ವಾಹನಗಳಿಗೆ ಬಳಸುವ ಬ್ಯಾಟರಿ ಹಾಗೂ ನವೀಕರಿಸಬಹುದಾದ ಇಂಧನ ಉದ್ಯಮದಲ್ಲಿ ಉಪಯೋಗವಾಗುವ ಪ್ರಮುಖ ವಸ್ತು ಲೀಥಿಯಂ ಅದಿರು. ಪ್ರಪಂಚದಾದ್ಯಂತ ಲಿಥಿಯಂ-ಅಯಾನ್ ಬ್ಯಾಟರಿ ಉತ್ಪಾದನೆಯಲ್ಲಿ ಚೀನಾ ಪ್ರಾಬಲ್ಯ ಹೊಂದಿದೆ, ಗಣಿಗಾರಿಕೆ ಹಕ್ಕುಗಳು ಮತ್ತು ಮಾಲಿಕತ್ವದ ವ್ಯವಸ್ಥೆಗಳಿಗೆ ಪ್ರತಿಯಾಗಿ ತಾಲಿಬಾನ್‌ನೊಂದಿಗೆ ದೀರ್ಘಾವಧಿಯ ಒಪ್ಪಂದವನ್ನು ಮಾಡಿಕೊಳ್ಳಲು ಚೀನಾ ಮುಂದಾಗಿದೆ. ಅಫ್ಘಾನಿಸ್ತಾನವು ಚಿನ್ನ, ತೈಲ, ಬಾಕ್ಸೈಟ್, ಕ್ರೋಮಿಯಂ, ತಾಮ್ರ, ನೈಸರ್ಗಿಕ ಅನಿಲ, ಯುರೇನಿಯಂ, ಕಲ್ಲಿದ್ದಲು, ಕಬ್ಬಿಣದ ಅದಿರು, ಸೀಸ, ರತ್ನದ ಕಲ್ಲುಗಳು, ಟಾಲ್ಕ್, ಗಂಧಕ, ಟ್ರಾವರ್ಟೈನ್, ಜಿಪ್ಸಮ್ ಮತ್ತು ಅಮೃತಶಿಲೆಯಂತಹ ಇತರ ಸಂಪನ್ಮೂಲಗಳಿಂದ ಕೂಡಿದೆ. ಇದೆಲ್ಲದರ ಮೌಲ್ಯ ಸುಮಾರು 1 ಟ್ರಿಲಿಯನ್ ಡಾಲರ್ ಗಿಂತಲೂ ಹೆಚ್ಚು! ಇದರ ಮೇಲೆ ಚೀನಾ ಕಣ್ಣಿಟ್ಟಿರುವುದು ಅಕ್ಷರಶಃ ನಿಜ.
 
![]()  | 
| Abdul Ghani Baradar; the Taliban co-founder and the chinese foreign minister; Wang Yi meeting in tianjin, china | 
ತಾಲಿಬಾನಿಗಳು ಬದಲಾಗಿದ್ದಾರೆ ಎಂದು ಈ ಮೂರೂ ದೇಶಗಳು ಹೇಳುತ್ತಿರುವ ಕಾರಣ ಈಗ ಊಹಿಸಿಕೊಳ್ಳಿ. ಅಫ್ಘಾನ್ ತಾಲಿಬಾನಿಗಳಿಗೂ ಮತ್ತು ಪಾಕಿಸ್ತಾನದ ತಾಲಿಬಾನಿಗಳಿಗೂ ತಿಕ್ಕಾಟವಿದೆ. ಅಮೇರಿಕಾ ಹೇಳುವಂತೆ ಐಸಿಸ್ ತಾಲಿಬಾನಿಗಳಿಗಿಂತ ಹೆಚ್ಚು ಉಗ್ರ ಮೂಲಭೂತವಾದಿಗಳು. ಅಕಸ್ಮಾತ್, ಅಫ್ಘಾನಿಸ್ತಾನದ ತಾಲಿಬಾನಿಗಳು ಇಸ್ಲಾಂ ವಿಚಾರಧಾರೆಯನ್ನು ಮುಂದಿಟ್ಟುಕೊಂಡು ಐಸಿಸ್ ಜೊತೆಯಾದರೆ ಏನಾಗುತ್ತದೆ ಎಂಬುದು ಭೀಕರವಾದ ಪ್ರಶ್ನೆ.
ಈ ಎಲ್ಲಾ ಘಟನೆಗಳು ಭಾರತದ ಮೇಲೆ ಖಂಡಿತ ಪ್ರಭಾವ ಬೀರುತ್ತದೆ. ಯುದ್ಧ ನಡೆದಾಗಲೆಲ್ಲ ನಿರಾಶ್ರಿತರು ಇದ್ದೆ ಇರುತ್ತಾರೆ. ಅಂತಹವರೆಲ್ಲರಿಗೂ ಅನೇಕ ಬಾರಿ ಆಶ್ರಯ ನೀಡಿದೆ ಭಾರತ. ಇದು ನಮ್ಮ ಶಕ್ತಿಯೇ ಹೌದು. ಚಿಕಾಗೋದ ಭಾಷಣದಲ್ಲಿ ಕ್ರಿಶ್ಚಿಯನ್ನರನ್ನು ಕುರಿತು 'ನಿಮ್ಮವರನ್ನು ನೀವೇ ಓಡಿಸಿದಾಗ ಯಾರು ಜಾಗ ಕೊಡಲಿಲ್ಲ. ಅಂತಹವರಿಗೂ ಆಶ್ರಯ ನೀಡಿದ ದೇಶ ಭಾರತ' ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಮೊಘಲರ ಬಹಾಉದ್ದಿನ್ಗೆ ಆಶ್ರಯ ನೀಡಿ ಕುತುಬುದ್ದೀನ್ ಐಬಕ್ನ ವಿರೋಧ ಕಟ್ಟಿಕೊಂಡ ಕರ್ನಾಟಕದ ಗುಮ್ಮಟದ ಗಂಡುಗಲಿ ಕುಮಾರರಾಮ ಇಲ್ಲಿ ನೆನಪಾಗುತ್ತಾನೆ. ಎರಡನೆ ವಿಶ್ವಯುದ್ಧ ಸಮಯದಲ್ಲಿ ಪೋಲಾಂಡನ್ನು ಹಿಟ್ಲರ್ ಆಕ್ರಮಿಸಿಕೊಂಡಾಗ 500 ಮಹಿಳೆಯರು, 200 ಮಕ್ಕಳು ನಿರಾಶ್ರಿತರಾಗುತ್ತಾರೆ. ಯೂರೋಪಾಗಲಿ, ಇರಾನಾಗಲಿ ಅವರನ್ನು ಸೇರಿಸಿಕೊಳ್ಳುವುದಿಲ್ಲ. ಬಾಂಬೆಗೆ ಬಂದ ಅವರನ್ನು ಆಂಗ್ಲರು ಕೂಡ ಸೇರಿಸುವುದಿಲ್ಲ. ಆದರೆ, ಗುಜರಾತಿನ ರಾಜ ಜಾಮ್ ಸಾಹೇಬ್ ಅವರೆಲ್ಲರಿಗೂ ಆಶ್ರಯ ನೀಡಿ, ಯುದ್ಧವಾದ ನಂತರ ತಮ್ಮ ದೇಶಕ್ಕೆ ಮರಳಲು ಸಹಾಯ ಮಾಡುತ್ತಾನೆ. ಪೋಲಾಂಡಿನಲ್ಲಿ ಆ ರಾಜನ ಹೆಸರಿನಲ್ಲಿ ಇಂದಿಗೂ ಅನೇಕ ಯೋಜನೆಗಳು ಜಾರಿಯಲ್ಲಿವೆ. ಈಗಲೂ ಸಹ ಅಫ್ಘಾನ್ನರಿಗೆ ಪಾಕಿಸ್ತಾನವಾಗಲಿ, ಇರಾನಾಗಲಿ, ಉಜ್ಬೇಕಿಸ್ತಾನವಾಗಲಿ, ಅರಬ್ ದೇಶಗಳಾಗಲಿ ಆಶ್ರಯ ನೀಡುತ್ತಿಲ್ಲ. ಭಾರತ ಮಾತ್ರ ತುರ್ತು ವೀಸಾ ನೀಡಿ ಆಶ್ರಯ ನೀಡುತ್ತಿದೆ. ಯಾರಿಗೆ ಆಶ್ರಯ ನೀಡಬೇಕು ಎಂಬುದನ್ನು ಇತಿಹಾಸದ ಪುಟಗಳಿಂದ ನಾವು ಕಲಿಯಬೇಕು.
![]()  | 
| School Name and Pole raised in Poland as a tribute to Maharaja Jam Saheb | 






















