August 26, 2022

ಸಾವರ್ಕರ್ ಅಂದರೆ ಕಾಂಗ್ರೇಸಿಗರಿಗೆ ಯಾಕೆ ಉರಿ?

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಏಕಮೇಕಾದ್ವಿತೀಯ ವೀರನೆಂದರೆ ಅದುವೇ ವಿನಾಯಕ ದಾಮೋದರ್ ಸಾವರ್ಕರ್. ಆದರೇ ನಮ್ಮ ಪಠ್ಯ ಪುಸ್ತಕಗಳಲ್ಲಿ ಕಾಂಗ್ರೇಸ್ ನಾಯಕರಿಗೆ ಕೊಟ್ಟಿರುವ ಒಂದು ಪರ್ಸೆಂಟ್ ಸ್ಥಾನ ಕೂಡ ಸಾವರ್ಕರ್ ರವರಿಗೆ ಸಿಗಲಿಲ್ಲ. ಹಾಗೆಂದು ಸಾವರ್ಕರ್ ಜನಮಾನಸದಿಂದ ದೂರೆವೇನು ಉಳಿದಿಲ್ಲ. ಸತ್ಯವನ್ನು ಹೂತಿಡಲು ಎಷ್ಟೇ ಪ್ರಯತ್ನ ಪಟ್ಟರೂ ಸಹ ಅದು ತಡವಾಗಿ ಆದರೂ ಹೊರಬರುತ್ತದೆ. ಹತ್ತೊಂಬತ್ತು ವರ್ಷಗಳ ಹಿಂದೆ ಮಾಜಿ ಇಂಧನ ಸಜಿವ ಮಣಿಶಂಕರ್ ಅಯ್ಯರ್ ಅಂಡಮಾನಿನಲ್ಲಿರುವ ಸಾವರ್ಕರ್ ಹೇಳಿಕೆಯ ಫಲಕವನ್ನು ತೆಗೆದು ಕಾಂಗ್ರೇಸ್ ನಾಯಕರೊಬ್ಬರ ಹೇಳಿಕೆಯನ್ನು ತುರುಕಲು ಪ್ರಯತ್ನಿಸಿದರು. ಆಗಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಾವರ್ಕರ್ ಕುರಿತು ಪುಸ್ತಕಗಳನ್ನು ಹೊರತಂದಿತು. ಕರ್ನಾಟಕದಲ್ಲಿ ಶ್ರೀ ಚಕ್ರವರ್ತಿ ಸೂಲಿಬೆಲೆ ರವರ ಮೂಲಕ 'ಅಪ್ರತಿಮ ದೇಶಭಕ್ತ, ಸ್ಬಾತಂತ್ರ್ಯವೀರ ಸಾವರ್ಕರ್' ಎಂಬ ಪುಸ್ತಕ ಹೊರತಂದಿತು. ನನ್ನ ಪೀಳಿಗೆಯ ಅನೇಕ ತರುಣರಿಗೆ ಸಾವರ್ಕರ್ ರವರನ್ನು ಪರಿಚಯಿಸಿದ ಕೃತಿ ಇದು. ಈಗ ಮತ್ತೊಮ್ಮೆ ಕಾಂಗ್ರೇಸ್ ನಾಯಕ ಸಿದ್ಧರಾಮಯ್ಯ ಸಾವರ್ಕರ್ ಬಗ್ಗೆ ಲಘುವಾಗಿ ಮಾತಾಡಿದ್ದಾರೆ. ಅವರ ನಾಲಿಗೆ ಗಲೀಜಾಯಿತೇ ಹೊರತು ಸಾವರ್ಕರ್ ಅವರ ಘನತೆಗೆ ಕಿಂಚಿತ್ತು ಧಕ್ಕೆಯಾಗಲಿಲ್ಲ. ಇದೇ ಸಂದರ್ಭವನ್ನು ಬಳಸಿಕೊಂಡು ಹಿಂದೂ ಪರ ಸಂಘಟನೆಗಳು ಸಮಾಜಕ್ಕೆ ಮತ್ತೊಮ್ಮೆ ಸಾವರ್ಕರ್ ರವರನ್ನು ಮುಟ್ಟಿಸುವ ಕಾರ್ಯಕ್ಕೆ ಮುಂದಾಗಿದೆ. ಇಂತಹ ಉತ್ತಮ ಕಾರ್ಯಕ್ಕೆ ಪರೋಕ್ಷವಾಗಿ ಕಾರಣರಾದ ಸಿದ್ಧರಾಮಯ್ಯನವರಿಗೆ ನಿಜಕ್ಕೂ ಧನ್ಯವಾದಗಳು.

Svatantra Veer Savarkar

ಇಷ್ಟಕ್ಕೂ ಈ ಕಾಂಗ್ರೇಸ್ ನವರಿಗೆ ಸಾವರ್ಕರ್ ಅಂದರೆ ಯಾಕಿಷ್ಟು ಉರಿ? ಹಾಗೆ ನೋಡಿದರೆ, ನೆಹರೂ ಕುಟುಂಬಕ್ಕೆ ನಿಷ್ಟರಲ್ಲದವರನ್ನು ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೇಸ್ ಮೂಲೆಗುಂಪು ಮಾಡುತ್ತಾ, ಜನಮಾನಸದಿಂದ ದೂರ ಉಳಿಸುವ ಪ್ರಯತ್ನ ಮಾಡುತ್ತಲೇ ಬಂದಿದೆ. ಗಾಂಧೀಜಿಯ ಅಹಿಂಸಾತ್ಮಕ ನೀತಿಯನ್ನು ಒಪ್ಪದ ಸುಭಾಷರನ್ನು ಕಾಂಗ್ರೇಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಪ್ರದೇಶ ಕಾಂಗ್ರೇಸ್ ಸಮಿತಿಯಿಂದಲೂ ಹೊರಗಿಟ್ಟರು. ಐ.ಎನ್.ಏ ಕಟ್ಟಿ ಬ್ರಿಟೀಷರ ವಿರುದ್ಧ ಯುದ್ಧಕ್ಕೆ ಬಂದ ಸುಭಾಷರ ವಿರುದ್ಧ ಮಾತಾಡಿದ್ದು ನೆಹರೂ. ಸರ್ದಾರ್ ವಲ್ಲಭಬಾಯಿ ಪಟೇಲರನ್ನು ಪಕ್ಕಕ್ಕೆ ಸರಿಸಿ ಪ್ರಧಾನಿಪಟ್ಟವನ್ನು ಅಲಂಕರಿಸಿದ್ದು ನೆಹರೂ. ಚೀನಾ ವಿರುದ್ಧ ನಮ್ಮ ಸೈನ್ಯವನ್ನು ಬಲಪಡಿಸಲು ಸರ್ಕಾರದ ನೀತಿಯನ್ನು ವಿರೋಧಿಸಿದ ಜನರಲ್ ಕಾರಿಯಪ್ಪನವರನ್ನು ಅವಮಾನ ಮಾಡಿ, ರಾಜಿನಾಮೆ ಕೊಡುವಂತೆ ಮಾಡಿದ್ದು ನೆಹರೂ. ಚುಣಾವಣೆಯಲ್ಲಿ ಅಕ್ರಮ ನಡೆದಿರುವ ಮೊಕದ್ದಮೆಯ ಕಾರಣ ಇಡೀ ದೇಶವನ್ನು ತುರ್ತು ಪರಿಸ್ಥಿತಿಗೆ ತಳ್ಳಿದ್ದು ಇಂದಿರಾ. ವೀರೆಂದ್ರ ಪಾಟೀಲರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಿದ್ದು ರಾಜೀವ್. ಸಂಸತ್ತಿನಲ್ಲಿ ಸಾವರ್ಕರ್ ಅವರ ಭಾವಚಿತ್ರ ಅನಾವರಣ ಮಾಡುವ ಸಭೆಗೆ ಸೋನಿಯಾ ಗೈರಾಗಿದ್ದರು. ಪಠ್ಯಪುಸ್ತಕಗಳಿಂದ ಕ್ರಾಂತಿಕಾರಿಗಳನ್ನು ದೂರವಿಟ್ಟು ಗಾಂಧೀ ಮತ್ತು ನೆಹರೂ ಮಾತ್ರ ಸ್ವಾತಂತ್ರ್ಯ ಹೋರಾಟಗಾರರು ಎಂಬಂತೆ ಮಾಡಿದ್ದು ಕಾಂಗ್ರೇಸ್ ಹಾಗೂ ಕಮ್ಯೂನಿಸ್ಟ್ ಪ್ರೇರಿತ ಶಿಕ್ಷಣ ಸಮಿತಿ. ತಮ್ಮ ಪಕ್ಷದಲ್ಲಿದ್ದವರನ್ನೇ ಬಿಡದ ಸ್ವಾರ್ಥಿಗಳು ಇನ್ನು ಸಾವರ್ಕರ್ ರಂತಹ ದೇಶಭಕ್ತರನ್ನು ಬಿಟ್ಟಾರೆ? 

ಇತಿಹಾಸದ ಬಗ್ಗೆ ಅರೆ ಬರೆ ಜ್ಞಾನವಿರುವ, ನೆಹರೂ ಬರೆದದ್ದೇ ಇತಿಹಾಸವೆಂಬ ಭ್ರಮೆಯಲ್ಲಿರುವ ನಾಯಕರು ಮತ್ತವರ ಬಾಲಂಗೋಚಿಗಳು ಸಾವರ್ಕರ್ ಕುರಿತು ಮಾಡುವ ಆರೋಪಗಳೆಲ್ಲವೂ ಬಾಲಿಷವಾದದ್ದು. ಇವರ ಮೊದಲ ಆರೋಪ ಸಾವರ್ಕರ್ ಬ್ರಿಟೀಷರಿಗೆ ಕ್ಷಮಾಪಣ ಪತ್ರ ಬರೆದರು ಹಾಗಾಗಿ ಇವರು ಹೇಡಿ ಎಂದು. ಹೌದು, ಸಾವರ್ಕರ್ ಬ್ರಿಟೀಷರಿಗೆ ಕ್ಷಮಾಪಣ ಪತ್ರ ಬರೆದದ್ದು ನಿಜ. ಅಂಡಾಮಾನಿನ ದ್ವೀಪದಲ್ಲಿ ಯಾರ ಸಂಪರ್ಕವೂ ಇಲ್ಲದೇ, ಎರಡೆರಡು ಜೀವಾವಧಿ ಕರಿನೀರಿನ ಶಿಕ್ಷೆ ಅನುಭವಿಸುತ್ತಾ, ಗಾಣವನ್ನು ಸುತ್ತಿ ಎಣ್ಣೆ ತೆಗೆಯುತ್ತಾ, ಗೆದ್ದಲು ಮಿಶ್ರಿತ ಊಟವನ್ನು ಮಾಡುತ್ತಾ, ತೆಂಗಿನ ನಾರನ್ನು ಹೊಸೆದು ಹಗ್ಗವನ್ನು ಮಾಡುತ್ತಿದ್ದವನ ಮಾನಸಿಕ ಸ್ಥಿತಿ ಎಂದಾದರೂ ಈ ವಿರೋಧಿಗಳು ಊಹಿಸಿಕೊಳ್ಳಬಹುದ? ಬ್ರಿಟೀಷರ ನಿಯಮಕ್ಕನುಸಾರವಾಗಿ ಕ್ಷಮಾಪಣೆ ಪತ್ರವನ್ನು ಬಹುತೇಕ ಖೈದಿಗಳಿಂದ ಬರೆಸಿದರು. ಇದರ ಆಧಾರದ ಮೇಲೆ ಅನೇಕರು ಬಿಡುಗಡೆಯಾದರೆ ಹೊರತು ಸಾವರ್ಕರ್ ಮಾತ್ರ ಹೊರಬರಲಿಲ್ಲ. ಇತರ ಖೈದಿಗಳಿಗೆ ಐದು ವರ್ಷಗಳ ನಂತರ ಮನೆಯವರನ್ನು ನೋಡಬಹುದಾದ ಅವಕಾಶವಿತ್ತು ಆದರೆ, ಸಾವರ್ಕರ್ ರಿಗೆ ಅವಕಾಶ ದೊರೆತಿದ್ದು ಎಂಟು ವರ್ಷಗಳ ನಂತರ! ಆ ಹೊತ್ತಿಗೆ ಸಾವರ್ಕರ್ ತಮ್ಮ ಮಗ ಮತ್ತು ಅತ್ತಿಗೆಯನ್ನು ಕಳೆದುಕೊಂಡಿದ್ದರು. ಸಾವರ್ಕರ್ ಕ್ಷಮಾಪಣ ಪತ್ರ ಬರೆದದ್ದು ರಾಜತಾಂತ್ರಿಕವಾಗಿ ಚಾಣಾಕ್ಷ ನಡೆಯೇ ಸರಿ. ಅಂಡಮಾನ್ ಜೈಲಿನಲ್ಲಿ ಕೊಳೆಯುವುದಕ್ಕಿಂತ ಕ್ಷಮಾಪಣೆ ಕೇಳಿದರು ಸರಿ ಭಾರತಕ್ಕೆ ಮರಳಿ ಪ್ರತ್ಯಕ್ಷ ಹೋರಾಟಕ್ಕೆ ಧುಮುಕುವ ಸಾಧ್ಯತೆ ಇದ್ದೇ ಇತ್ತು. ಶಿವಾಜಿ ಔರಂಗಜೇಬನಿಗೆ ಪತ್ರ ಬರೆಯಲಿಲ್ಲವೇ? ಭಗತ್ ಸಿಂಗ್ ಹಾಗೂ ಆಜಾದರ ಗುರುವಾದ ರಾಂಪ್ರಸಾದ್ ಬಿಸ್ಮಿಲ್ ಬ್ರಿಟೀಷರಿಗೆ ಪತ್ರ ಬರೆದಿಲ್ಲವೇ? ಸುಖದ ಲೋಲುಪ್ತತೆಯಲ್ಲಿ ಮುಳುಗಿ, ಅಧಿಕಾರಕ್ಕಾಗಿ ಕುತಂತ್ರವನ್ನೇ ಸದಾ ಯೋಚಿಸುವ ನಾ(ಲಾ)ಯಕರಿಗೆ ದೇಶಕ್ಕಾಗಿ ಹೋರಾಡುವ ರಾಜತಾಂತ್ರಿಕತೆ ಹೇಗೆ ತಾನೆ ಅರ್ಥವಾದೀತು? 

ಎರಡನೆಯದಾಗಿ ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ರವರ ಪಾತ್ರವಿದೆ ಎಂದು ಈಗಲೂ ಆರೋಪಿಸುತ್ತಾರೆ. ಸಾವರ್ಕರ್ ಬಗ್ಗೆ ಈ ಆರೋಪ ಮಾಡುವವರು ನಿಜಕ್ಕೂ ಸಂವಿದಾನದ ವಿರೋಧಿ. ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ರವರ ಪಾತ್ರವಿಲ್ಲ ಎಂಬ ತೀರ್ಪನ್ನು ಕೋರ್ಟ್ ಕೊಟ್ಟಿದೆ. ನೆಹರೂ ಸರ್ಕಾರ ಉಚ್ಚನ್ಯಾಯಾಲಯಕ್ಕೆ ಮೇಲ್ಮನವಿ ಸಹ ಸಲ್ಲಿಸದೇ ಈ ತೀರ್ಪನ್ನು ಕಾನೂನಿನ ಚೌಕಟ್ಟಿನಲ್ಲಿ ಒಪ್ಪಿಕೊಂಡಿತು. ಆದರೆ, ಹೊರಗೆ ಮಾತ್ರ ಸಾವರ್ಕರ್ ಅವರನ್ನು ಆರೋಪಿ ಎಂದು ಬಿಂಬಿಸುತ್ತಾ ಸುಳ್ಳನ್ನೇ ಊಳಿಡುತ್ತಿದೆ ಕಾಂಗ್ರೇಸ್. ಹಿಂದೂ ಧರ್ಮದಲ್ಲಿನ ಕೆಡುಕುಗಳನ್ನು, ಮೂಢನಂಬಿಕೆಗಳನ್ನು ಸರಿಪಡಿಸಿ ಎಲ್ಲರನ್ನೂ ಒಟ್ಟಾಗಿಸುವ ಪ್ರಯತ್ನ ಸಾವರ್ಕರ್ ಮಾಡಿದ್ದರು. ದಲಿತರು ಪೂಜೆ ಮಾಡಿ, ಪ್ರಸಾದ ಹಂಚಿ ಬ್ರಾಹ್ಮಣರು ಪ್ರಸಾದ ಸ್ವೀಕರಿಸುವಂತಹ 'ಪತಿತ ಪಾವನ' ಮಂದಿರವನ್ನು ನಿರ್ಮಿಸಿದರು. ಎಲ್ಲರೂ ಸೇರಿ ಸಾಮೂಹಿಕ ಭೋಜನವನ್ನು ಆಯೋಜಿಸಿ ಸಾಮಾಜಿಕ ಕ್ರಾಂತಿ ಮಾಡಿದವರು ಸಾವರ್ಕರ್. ಪ್ರಾಜ್ಞರು, ವಿದ್ಯಾವಂತರು ಹೆಚ್ಚಾಗಿ, ಹಿಂದೂಗಳು ಒಂದಾದರೆ ಕಾಂಗ್ರೇಸಿಗೆ ಉಳಿಗಾಲವಿಲ್ಲ ಎಂಬುದನ್ನು ತಿಳಿದೇ ಸಾವರ್ಕರ್ ರವರನ್ನು ಹಿಂದೂ ಮೂಲಭೂತವಾದಿ ಎಂದು ಬಿಂಬಿಸಿ ರಾಜಕೀಯವಾಗಿ ಮೂಲೆಗುಂಪು ಮಾಡುವ ಪ್ರಯತ್ನ ಮಾಡಿದರು. ಪರಿಣಾಮವಾಗಿ ಹಿಂದೂ ಮಹಾಸಭಾ ಅನೇಕ ನಾಯಕರನ್ನು ಕಳೆದುಕೊಂಡು ಚುಣಾವಣೆಯಲ್ಲಿ ಸೋಲುಂಡಿತು. ಈಗಲೂ ಅಷ್ಟೇ, ಸಾವರ್ಕರ್ ಚಿಂತನೆ ವ್ಯಾಪಕವಾದಷ್ಟು ಹಿಂದೂಗಳಲ್ಲಿ ಒಗ್ಗಟ್ಟು ಮೂಡುತ್ತದೆ. ಇದು ಕಾಂಗ್ರೇಸ್ಸಿಗೆ ಮಾರಕ!

ಸಾವರ್ಕರ್ ಅವರ ಬಗ್ಗೆ ಮತಾಡುವ ಕಾಂಗ್ರೇಸ್ ಮೊದಲು ತಮ್ಮ ನಾಯಕರ ಬಗ್ಗೆ ತಿಳಿಯಬೇಕು. ನೆಹರೂ ತಮ್ಮ ಜೀವಮಾನದಲ್ಲಿ ಕಠಿಣ ಶಿಕ್ಷೆ ಎಂದು ಜೈಲುವಾಸ ಅನುಭವಿಸಿದ್ದು ಮೂರು ದಿನ ನಭಾ ಸೆರೆಮನೆಯಲ್ಲಿ ಮಾತ್ರ. ಅಷ್ಟಕ್ಕೆ ತಮ್ಮ ತಂದೆ ಮೋತಿಲಾಲ್ ನೆಹರೂ ಮೂಲಕ ಕ್ಷಮೆ ಕೋರಿ, ಪತ್ರ ಬರೆದದನ್ನು ಬೇಕೆಂತಲೇ ಮರೆತವರು ಕಾಂಗ್ರೇಸ್ ನಾಯಕರು. ಜವಹರಲಾಲ್ ತಂಗಿ ಕೃಷ್ಣ ಹತಿಸಿಂಗರ 'ನೆನಪು ಕಹಿಯಲ್ಲ' ಪ್ರಕಾರ ನೆಹರೂ ಜೈಲಿನಲಿದ್ದದ್ದು ಎರಡೇ ಸೋಫಾಗಳು, ಒಂದೇ ಮಂಚ, ನಾಲ್ಕೇ ಕುರ್ಚಿಗಳು ಇತ್ಯಾದಿ! ಇಂತಹವರು ಕರಿನೀರು ಶಿಕ್ಷೆ ಅನುಭವಿಸಿದ ಸಾವರ್ಕರ್ ಬಗ್ಗೆ ಮಾತನಾಡುವುದು ದುರಾದೃಷ್ಟ. 23 ಡಿಸೆಂಬರ್ 1960 ಸಾವರ್ಕರ್ ಕರಿನೀರಿನ ಶಿಕ್ಷೆಯಿಂದ ಬಿಡುಗಡೆಯಾಗಬೇಕಾಗಿದ್ದ ದಿವಸ. ಅದನ್ನು 'ಮೃತ್ಯಂಜಯ ದಿವಸ' ಎಂದು ಆಚರಿಸಲಾಯ್ತು. ಆ ಕಾರ್ಯಕ್ರಮ ಆಕಾಶವಾಣಿಯಲ್ಲಿ ಪ್ರಸಾರವಾಗದಂತೆ ತಮ್ಮ ಯೋಗ್ಯತೆಗೆ ತಕ್ಕ ನಿರ್ಧಾರ ಮಾಡಿದ್ದು ನೆಹರೂ.

Savarkar's Cell at Cellular Jail in the Andaman and Nicobar Islands

ದೇವಸ್ಥಾನಕ್ಕೆ ಮಾಂಸವನ್ನು ತಿಂದೇ ಹೋಗುತ್ತೇನೆ ಅನ್ನುವ ನಾಯಕರಿಗೆ ನೆಹರೂ ಅಲ್ಲದೇ ಸಾವರ್ಕರ್ ಆದರ್ಶವಾಗಬಲ್ಲರೇ? ಎಂತಹ ದೇಶವಿರೋಧಿ ಕೃತ್ಯ ಮಾಡಿದರೂ ಸರಿ ಮುಸಲ್ಮಾನರು ಎಂಬ ಕಾರಣಕ್ಕೆ ಅವರ ಬೆಂಬಲಕ್ಕೆ ನಿಲ್ಲುವವರು, ಕಾಲೇಜಿನಲ್ಲಿ ಅಭ್ಯಾಸ ಮಾಡುವ ಸಂದರ್ಭದಲ್ಲಿ ಪುಡಿ ರೌಡಿಯಾಗಿ, ಕೊತ್ವಾಲ್ ರಾಮಚಂದ್ರ ಧಮ್ಕಿ ಹಾಕಿದ ಕಾರಣಕ್ಕೆ ರಾಜಕೀಯಕ್ಕೆ ಬಂದ ನಾಯಕರ ಬಾಯಲ್ಲಿ ಸಾವರ್ಕರ್ ರವರ ಹೆಸರು ಕೇಳುವುದು ನಿಜಕ್ಕೂ ದುಃಖಕರ. ತಮಗೆ ತಾವೇ ಭಾರತ ರತ್ನ ಪ್ರಶಸ್ತಿ ಕೊಟ್ಟುಕೊಂಡ, ತಮಗೆ ತಾವೇ 'ಚಾಚ' ಎಂಬ ಬಿರುದು ಇಟ್ಟುಕೊಂಡವರ ವಾರಸುದಾರರಿಗೆ, ಪಕ್ಷ ಉದಯಿಸಿದ ಕಾರಣವನ್ನು ತಿಳಿಯದೆ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಕಾಂಗ್ರೇಸ್ ಪಕ್ಷವೆಂದು ತಮಗೆ ತಾವೇ ಸರ್ಟಿಫಿಕೇಟ್ ಕೊಟ್ಟುಕೊಳ್ಳುವ ನಾಯಕರಿಗೆ ಹಾಗೂ ಸಾವರ್ಕರ್ ವಿರೋಧಿಗಳಿಗೆ ನನ್ನದೊಂದು ಸರಳ ಪ್ರಶ್ನೆ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸನ್ಮಾನ್ಯ ಜವಹರಲಾಲ್ ನೆಹರೂ ಅವರ ಕೊಡುಗೆ ಏನು?

***********************************************************

References: