ಕಳೆದ ವಾರ ಅಂದರೆ ಸೆಪ್ಟಂಬರ್ 08 ರಂದು ದೆಹಲಿಯ ಇಂಡಿಯಾ ಗೇಟಲ್ಲಿ ಸುಭಾಷರ ಪ್ರತಿಮೆ ಅನಾವರಣ ಹಾಗೂ ರಾಜಪಥವನ್ನು 'ಕರ್ತವ್ಯ ಪಥ' ಎಂದು ಮರುನಾಮಕರಣದ ಪ್ರಕ್ರಿಯೆ ಪ್ರಧಾನಿ ಮೋದಿ ನೆರೆವೇರಿಸಿದರು. ಈ ಪ್ರಕ್ರಿಯೆಗೆ ದೇಶದಾದ್ಯಂತ ವ್ಯಾಪಕ ಮೆಚ್ಚುಗೆ ದೊರೆತಿದೆ. ಆದರೆ, ಸುಭಾಷರನ್ನು ಗಾಂಧೀ ಹಾಗೂ ನೆಹರೂ ಅವರನ್ನು ಮರೆಮಾಚಲು ಮೋದಿ ನೇತೃತ್ವದ ಭಾಜಪಾ ಉಪಯೋಗಿಸಿಕೊಳ್ಳುತ್ತಿದೆ ಎಂದು ಕೆಲವರು ಅಪಸ್ವರ ಎತ್ತಿದ್ದಾರೆ. ಕರ್ಮ ಎಂದರೆ ಈ ವಿಚಾರದ ಕುರಿತು ಇದೇ ತಿಂಗಳ 10 ರಂದು ಪತ್ರಿಕೆಯೊಂದರಲ್ಲಿ ಲೇಖನವೂ ಪ್ರಕಟಗೊಂಡಿತು! ಐ.ಎನ್.ಎ ಅಲ್ಲಿದ್ದ ಎರಡು ಸೈನ್ಯ ದಳಕ್ಕೆ ನೆಹರೂ, ಗಾಂಧೀ ಹೆಸರಿತ್ತು, ಮುಸ್ಲಿಂ ಲೀಗ್ ಮತ್ತು ಹಿಂದೂ ಮಹಾಸಭಾವನ್ನು ಸುಭಾಷರು ವಿರೋಧಿಸಿದರು, ಸುಭಾಷರಾಗಿದ್ದರೆ ತನ್ನನ್ನು ಗಾಂಧೀ ಹಾಗೂ ನೆಹರೂ ಅವರ ಪರ್ಯಾಯದಂತೆ ತೋರಿಸುವ ಮೋದಿಯವರ ಈ ಪ್ರಕ್ರಿಯೆಯನ್ನು ವಿರೋಧಿಸುತ್ತಿದ್ದರು ಎಂದೆಲ್ಲಾ ಲೇಖಕರು ಬರೆದಿದ್ದಾರೆ. ನಮ್ಮಲ್ಲಿ ಇತಿಹಾಸವನ್ನು ವೈಭವಿಕರಿಸುವ ಪ್ರಕ್ರಿಯೆ ಹಿಂದಿನಿಂದಲೂ ನಡೆದೇ ಇದೆ. ಹಾಗಾಗಿ, ಗಾಂಧಿಜೀ ಹಾಗೂ ಸುಭಾಷರ ಸಂಬಂಧಗಳ ಕುರಿತು ಒಂದಷ್ಟು ವಿಚಾರಗಳನ್ನು ತಿಳಿಸುವುದಕ್ಕಾಗಿಯೆ ಈ ಲೇಖನ.
![]()  | 
| PM Modi Unveils Grand Statue of Netaji Subhas Chandra Bose at India Gate | 
ಸ್ವಾತಂತ್ರ್ಯ ಹೋರಾಟದ ಪ್ರತಿ ಹೆಜ್ಜೆಯಲ್ಲೂ ಸುಭಾಷರು ಹಾಗೂ ಗಾಂಧಿಜೀ ವೈಚಾರಿಕವಾಗಿ ವಿರೋಧಿಗಳಾಗಿದ್ದರು. ಐ.ಸಿ.ಎಸ್ ಹುದ್ದೆಯನ್ನು ಧಿಕ್ಕರಿಸಿ ಬಂದ 24ರ ಸುಭಾಷರು ಗಾಂಧಿಜೀಯವರ ಮೊದಲ ಭೇಟಿಯಲ್ಲೇ 'ಒಂದು ವರ್ಷದಲ್ಲಿ ಸ್ವಾತಂತ್ರ್ಯ ಕೊಡಿಸುತ್ತೇನೆ ಎನ್ನುತ್ತೀರ ಇದಕ್ಕೆ ನಿಮ್ಮ ಯೋಜನೆ ಏನು?' ಎಂಬ ಪ್ರಶ್ನೆ ಎತ್ತುತ್ತಾರೆ. ಆದರೆ, ಇದಕ್ಕೆ ಸಮರ್ಪಕ ಉತ್ತರ ದೊರೆಯದ ಸುಭಾಷರು ಚಿತ್ತರಂಜನ್ ದಾಸರನ್ನು ಅರಸಿ ಹೋಗುತ್ತಾರೆ. ಅಸಹಕಾರ ಚಳವಳಿಯ ತೀವ್ರತೆಯಿಂದಾಗಿ ರಾಜಕೀಯ ಖೈದಿಗಳನ್ನು ಬಿಡುಗಡೆ ಮಾಡುವುದಾಗಿ ಬ್ರಿಟೀಷರು ಒಪ್ಪಂದಕ್ಕೆ ಮುಂದಾಗುತ್ತಾರೆ. ಚಿತ್ತರಂಜನ್ ದಾಸ್ ಹಾಗೂ ಸುಭಾಷರು ಒಪ್ಪಂದ ಮಾಡಿಕೊಂಡು ರಾಜಕೀಯ ನೇತಾರರು ಬಿಡುಗಡೆಯಾಗಿ ನಂತರ ಸಂಘಟಿತ ಹೋರಾಟ ಮಾಡುವ ಮಾತಾಡಿದರೇ, ಗಾಂಧಿಜೀ ಒಪ್ಪುವುದಿಲ್ಲ. ಚುಣಾವಣೆಗಳಲ್ಲಿ ಸ್ಪರ್ಧಿಸಿ ಸರ್ಕಾರವನ್ನು ಪ್ರಭಾವಿಸೋಣ ಎಂಬುದು ಸುಭಾಷರ ಲೆಕ್ಕಾಚಾರವಾಗಿತ್ತು ಆದರೆ, ಗಾಂಧಿಜೀ ಅದಕ್ಕೊಪ್ಪಲಿಲ್ಲ. ಆದರೆ, 7 ವರ್ಷದ ನಂತರ ಅದೇ ಗಾಂಧಿಜೀ ಚುಣಾವಣೆಗೆ ಒಪ್ಪಿ, ಬಹುತೇಕ ಪ್ರಾವಿನ್ಸ್ ಗಳನ್ನು ಕಾಂಗ್ರೇಸ್ ಗೆದ್ದುಕೊಂಡಿತು. ಶಾಲಾ, ಕಾಲೇಜು ಬಿಟ್ಟು ಬಂದ ಮಕ್ಕಳ ಬಗ್ಗೆ, ವ್ಯವಸಾಯ ಬಿಟ್ಟು ಹೋರಾಟಕ್ಕೆ ಬೀದಿಗಿಳಿದಿದ್ದ ರೈತರ ಬಗ್ಗೆ, ಸರ್ಕಾರಿ ಕೆಲಸ ತೊರೆದ ಜನರ ಬಗ್ಗೆ ಯೋಚಿಸದೆ ಚೌರಿ-ಚೌರಾ ಎಂಬ ಚಿಕ್ಕ ಹಳ್ಳಿಯಲ್ಲಿ ಪೋಲೀಸ್ ಠಾಣೆಯನ್ನು ಸುಟ್ಟರು ಎಂಬ ಕಾರಣಕ್ಕೆ ಗಾಂಧಿಜೀ ಏಕಾಯಕಿ ಅಸಹಕಾರ ಚಳವಳಿಯನ್ನು ಹಿಂಪಡೆಯುತ್ತಾರೆ. ನೇತಾರರಾಗಿದ್ದ ಸುಭಾಷರು ಈ ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸುತ್ತಾರೆ.
1933ರಲ್ಲಿ ಯೂರೋಪಿಗೆ ತೆರಳಿದಾಗ ಕಾಂಗ್ರೇಸ್ ಹಾಗೂ ಗಾಂಧಿಜೀಯವರ ನಿಲುವುಗಳ ಕುರಿತು ಸುಭಾಷರ ವಿರೋಧ ತೀವ್ರವಾಗುತ್ತದೆ. ಸರ್ದಾರ್ ಪಟೇಲರ ಅಣ್ಣ ವಿಠ್ಠಲ್ ಭಾಯಿ ಪಟೇಲ್ ಜೊತೆಗೆ ಒಂದು ಜಂಟಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡುತ್ತಾರೆ. ಚೌರಿ-ಚೌರಾ ಹಾಗೂ ಇತರ ರಾಜಕೀಯ ಘಟನೆಗಳನ್ನು ವಿಶ್ಲೇಶಿಸುತ್ತಾ 'ಗಾಂಧೀಜೀ ರಾಜಕೀಯವಾಗಿ ಅಸಮರ್ಥತೆ ತೋರುತ್ತಿದ್ದಾರೆ. ಹಾಗಾಗಿ, ಕಾಂಗ್ರೇಸ್ ಅವರಿಗೆ ವಿರಮಿಸಲು ಅವಕಾಶ ನೀಡಬೇಕು. ಕಾಂಗ್ರೇಸ್ ಯುವಾ ಸಮೂಹವನ್ನು ಸೇರಿಸಿ, ಒಂದಷ್ಟು ಪಾಲಿಸಿಗಳನ್ನು ಮಾಡಿಕೊಂಡು, ದೇಶದೆಲ್ಲೆಡೆ ಏಕತೆ ಮೂಡಿಸಿ ನಂತರ ಸ್ವಾತಂತ್ರ್ಯ ಹೋರಾಟ ಮಾಡಬೇಕು' ಎಂದು ಕಾಂಗ್ರೇಸ್ ಮತ್ತು ಗಾಂಧಿಜೀಯವರ ನಡೆಯ ಬಗ್ಗೆ ಸುಭಾಷರು ಮಾತಾಡುತ್ತಾರೆ. 1939ರಲ್ಲಿ ಕಾಂಗ್ರೇಸಿನ ಅಧ್ಯಕ್ಷರಾಗಿ ಸುಭಾಷರು ಆಯ್ಕೆಯಾಗಿ ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡಲು ಮುಂದಾಗುತ್ತಾರೆ. ಕಾಂಗ್ರೇಸ್ ವರ್ಕಿಂಗ್ ಕಮಿಟಿಯಲ್ಲಿ ಯುವಕರನ್ನು ತಂದು ಕೆಲಸಕ್ಕೆ ವೇಗ ತರುವ ಯೋಚನೆ ಅವರದ್ದಾಗಿತ್ತು. ದ್ವಿತೀಯ ವಿಶ್ವಯುದ್ಧದ ಪ್ರಾರಂಭದ ಹೊತ್ತಿನಲ್ಲಿ ದೇಶದಾದ್ಯಂತ ಬ್ರಿಟೀಷ್ ವಿರೋಧಿ ಆಂದೋಲನ ರೂಪಿಸಬೇಕೆಂಬುದು ಸುಭಾಷರ ಯೋಜನೆ. ಅದರೆ, ಗಾಂಧಿಜೀಗೆ ಸುಭಾಷರ ಕಾರ್ಯದ ಮೇಲೆ ವಿಶ್ವಾಸವಿದ್ದಂತೆ ತೋರಲಿಲ್ಲ. ಪಟೇಲರಿಗೆ ಪತ್ರವನ್ನು ಬರೆಯುತ್ತಾ 'ಸುಭಾಷನ ಮೇಲೆ ನಮ್ಮ ಹೋರಾಟ ಅವಲಂಬಿತವಾಗುವುದು ಸಾಧ್ಯವಿಲ್ಲ. ಅವನು ತನ್ನದ್ದೇ ಆದ ದಾರಿಯಲ್ಲಿ ಹೋಗುತ್ತಿದ್ದಾನೆ' ಎಂದು ಹೇಳಿದ್ದರು. ತನ್ನ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗದಿದ್ದಾಗ ಸುಭಾಷರು ರಾಜಿನಾಮೆ ನೀಡುತ್ತಾರೆ. ನಂತರದ ಬೆಳವಣಿಗೆಯಲ್ಲಿ ಗಾಂಧಿಜೀ ಸುಭಾಷರನ್ನು ಬಂಗಾಳ ಪ್ರದೇಶ ಕಾಂಗ್ರೇಸ್ ಸಮಿತಿಯಿಂದಲೂ ಹೋರಹಾಕುತ್ತಾರೆ ಎಂಬುದು ವಿಲಕ್ಷಣವಾದರೂ ನಂಬಲೇಬೇಕಾದ ಸಂಗತಿಯೇ!
![]()  | 
| Mahatma Gandhi and Netaji Subash Bose | 
ಹೌದು, ಹಿಂದೂ ಮಹಾಸಭಾ ಹಾಗೂ ಮುಸ್ಲಿಂ ಲೀಗಿಗೆ ತಮ್ಮ ಧರ್ಮಾಧಾರಿತ ದೃಷ್ಟಿಯನ್ನು ಬಿಡುವಂತೆ ಅನೇಕ ಬಾರಿ ಸುಭಾಷರು ಮನವಿ ಮಾಡಿದ್ದಾರೆ. ಆದೇ ಸಮಯದಲ್ಲಿ ಗಾಂಧಿಜೀಯ ಮುಸಲ್ಮಾನರ ತುಷ್ಟೀಕರಣವನ್ನು ಖಂಡಿಸಿದ್ದಾರೆ ಹಾಗೂ ಗಾಂಧಿಜೀ ಪೂರ್ಣ ಸ್ವರಾಜ್ಯದ ಬದಲು ಬ್ರಿಟೀಷರ ಡೋಮೀನಿಯನ್ ಸ್ಟೇಟಸ್ ಗೆ ಒಪ್ಪಿಕೊಳ್ಳುವ ಸಾಧ್ಯತೆಯ ಕುರಿತು ಪದೇ ಪದೇ ಎಚ್ಚರಿಸಿದ್ದಾರೆ. ಬ್ರಿಟೀಷರ ಒಡೆದು ಆಳುವ ನೀತಿಯ ಬಗ್ಗೆ ಹೇಳುತ್ತಾ ಭಾರತವನ್ನು ತುಂಡು ಮಾಡುವ ಬಗ್ಗೆ ಸುಭಾಷರು ಸ್ವಾತಂತ್ರ್ಯ ಬರುವ 2 ದಶಕಗಳ ಮುಂಚೆಯೇ ಎಚ್ಚರಿಸಿದ್ದರು. ಸುಭಾಷರು ಈ ವಿಚಾರವನ್ನು ಮಂಡಿಸಿದಾಗ ಗಾಂಧಿಜೀಗೆ ಬಿಡಿ ಸ್ವತಃ ಜಿನ್ನಾಗೂ ಪಾಕಿಸ್ತಾನದ ಕಲ್ಪನೆ ಇರಲಿಲ್ಲ. ಸ್ವಾತಂತ್ರ್ಯ ಹೋರಾಟವಷ್ಟೇ ಅಲ್ಲದೇ ಸ್ವಾತಂತ್ರ್ಯ ನಂತರ ಭಾರತದ ಕಲ್ಪನೆಯಲ್ಲೂ ಸಹ ಸುಭಾಷರಿಗೆ ಹಾಗೂ ಕಾಂಗ್ರೇಸ್ ನಾಯಕರ ಅಥವಾ ಗಾಂಧಿಜೀ ನಡುವೆ ಭಿನ್ನ ಅಭಿಪ್ರಾಯಗಳಿದ್ದವು. 1940ರಲ್ಲಿ ಸುಭಾಷರು ತಮ್ಮ ಅಣ್ಣ ಶರತ್ ಬೋಸರಿಗೆ ಪತ್ರ ಬರೆಯುತ್ತಾ 'ಕಾಂಗ್ರೇಸ್ ಪಕ್ಷದಲ್ಲಿರುವ ರಾಜಕೀಯವನ್ನು ಗಮನಿಸಿದರೆ ಮುಂದೆ ದೇಶಕ್ಕಾಗಿ ಅಲ್ಲ ಪಕ್ಷದ ಹೈ ಕಮಾಂಡ್ ನೊಂದಿಗೆ ಹೋರಾಡುವ ಪರಿಸ್ಥಿತಿ ಬರುತ್ತದೆ. ಇಂತಹವರು ಸ್ವತಂತ್ರ್ಯದ ಹೊಸ್ತಿಲಲ್ಲಿ ಅಧಿಕಾರದಲ್ಲಿದ್ದರೆ ಏನೇನು ಅನಾಹುತವಾಗಬಹುದು ಎಂಬುದನ್ನು ನೆನೆಸಿಕೊಂಡರೆ ಗಾಬರಿಯಾಗುತ್ತದೆ' ಎಂದು ಹೇಳುತ್ತಾರೆ. ಅವರ ಊಹೆ ನಿಜವಾದದನ್ನು ನಂತರದ ದಿನಗಳಲ್ಲಿ ಇಡೀ ದೇಶವೇ ನೋಡಿತು!
ಐ.ಎನ್.ಎ ಅಲ್ಲಿದ್ದ ಸೈನಿಕ ದಳಗಳಿಗೆ ಗಾಂಧಿಜೀ ಹಾಗೂ ನೆಹರೂ ಹೆಸರು ಇತ್ತು ಎಂಬುದು ನಿಜವಾದರೂ ಆ ಹೆಸರು ಸುಭಾಷರು ಜರ್ಮನಿಯಿಂದ ಪೂರ್ವ ಏಷ್ಯಾಕ್ಕೆ ಬರುವ ಮುನ್ನವೇ ಇದ್ದ ಹೆಸರುಗಳು. ಕಾಂಗ್ರೇಸಿನ ಅಧ್ಯಕ್ಷರಾಗುವುದಕ್ಕೆ ಮುನ್ನ ಸುಭಾಷ್ ಮತ್ತು ನೆಹರೂ ಅವರ ಸಂಬಂಧ ಚೆನ್ನಾಗಿಯೇ ಇತ್ತು. ಸುಭಾಷರಿಗೂ ಮುನ್ನ ಅಧ್ಯಕ್ಷಗಾದಿಯನ್ನು ಎರಡು ವರ್ಷ ಅನುಭವಿಸಿದ್ದ ನೆಹರೂ ನಂತರದ ದಿನಗಳಲ್ಲಿ ಗಾಂಧಿಜೀ ಪರವಾಗಿದ್ದುಕೊಂಡು ಸುಭಾಷರ ವಿರೋಧಿಯಾಗುತ್ತಾರೆ. ಭಾರತದಲ್ಲಿದ್ದ ಬ್ರಿಟೀಷರ ವಿರುದ್ಧ ಐ.ಎನ್.ಎ ಸೈನ್ಯ ತೆಗೆದುಕೊಂಡು ಬಂದಾಗ ನೆಹರೂ 'ಸುಭಾಷರ ಸೈನಿಕರ ವಿರುದ್ಧ ನಾನು ತಲ್ವಾರ್ ಹಿಡಿದು ಹೋರಾಟ ಮಾಡುತ್ತೇನೆ' ಎಂದು ಉಗ್ರ ಹೇಳಿಕೆಯನ್ನು ಕೊಡುತ್ತಾರೆ. ಅಣ್ಣನಿಗೆ ಪತ್ರ ಬರೆಯುತ್ತಾ 'ಆತ ನನಗೆ ವಯ್ಯಕ್ತಿಕವಾಗಿ ಹಾಗೂ ನಮ್ಮ ಸಿದ್ಧಾಂತಕ್ಕೆ ಬಹಳಷ್ಟು ಹಾನಿ ಮಾಡಿದ್ದಾನೆ' ಎಂದು ನೆಹರೂ ಬಗ್ಗೆ ಸುಭಾಷರು ಬೇಸರ ವ್ಯಕ್ತಪಡಿಸುತ್ತಾರೆ. ಮುಂದೆ ಸ್ವತಃ ನೆಹರೂ ಟಾಯಾ ಜಿನ್ಕಿನ್ ಎಂಬ ಪತ್ರಕರ್ತೆಗೆ ವಿವರಿಸುತ್ತಾ 'ಅಂದು ನಾನು ಗಾಂಧಿಜೀಯ ವಿಚಾರವನ್ನು ಒಪ್ಪದಿದ್ದರೂ ಅವರೊಂದಿಗೆ ನಿಲ್ಲಬೇಕಾಯಿತು. ಅನಿವಾರ್ಯ ಕಾರಣದಿಂದಾಗಿ ಸುಭಾಷರನ್ನು ವಿರೋಧಿಸಬೇಕಾಯಿತು' ಹೇಳಿದ್ದಾರೆ. ಆ ಅನಿವಾರ್ಯ ಕಾರಣ ಅಧಿಕಾರ ಎಂಬುದು ನೆಹರೂ ವಿಚಾರದಲ್ಲಿ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.
ಇಷ್ಟೆಲ್ಲಾ ಆದರೂ ಸುಭಾಷರು ಗಾಂಧಿಜೀಯವರನ್ನು 'ರಾಷ್ಟ್ರಪಿತ' ಎಂದೇ ಗೌರವಿಸಿದ್ದರು ಹಾಗೂ ಗಾಂಧಿಜೀ ಸುಭಾಷರನ್ನು 'ದೇಶಭಕ್ತರಲ್ಲಿ ದೇಶಭಕ್ತ' ಎಂದೇ ಕೊಂಡಾಡಿದ್ದರು. ಅಖಂಡ ಭಾರತದ ಮೊದಲ ಪ್ರಧಾನಿ ಸುಭಾಷರು ಎಂದು ಮೋದಿ ಹೇಳಿದ್ದರಲ್ಲಿ ತಪ್ಪಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದದ್ದೇ ಐ.ಎನ್.ಎ ಮೂಲಕ ನಡೆದ ನೌಕಾ ಬಂಡಾಯ ಎಂಬುದು ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಗೋಚರಿಸುವ ಸಂಗತಿ. ದೇಶದಾದ್ಯಂತ ಬ್ರಿಟೀಷರ ಪ್ರತಿಮೆಗಳನ್ನು ಒಡೆಸಬೇಕು ಎಂದು ಹೊರಟಿದ್ದ ಸುಭಾಷರ ಮೂರ್ತಿಯನ್ನು ಇಂಡಿಯಾ ಗೇಟಿನ ಮಂಟಪದಲ್ಲಿ ನಿಲ್ಲಿಸಿದ್ದು ನಿಜಕ್ಕೂ ಸುಭಾಷರಿಗೆ ಕೊಟ್ಟ ಗೌರವ ಹಾಗೂ ಭಾರತದ ಸ್ವಾಭಿಮಾನದ ಸಂಕೇತ. ಇಲ್ಲಿ ಯಾರಿಗೂ ಯಾರು ಪರ್ಯಾಯರಲ್ಲ. ಇತಿಹಾಸವನ್ನು ಯಾರದೋ ವಿರೋಧ ಅಥವಾ ಪರ ನೋಡುವ ಬದಲು ಇತಿಹಾಸವನ್ನು ಇತಿಹಾಸವಾಗಿ, ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಭಾರತೀಯ ದೃಷ್ಟಿಕೋನದಲ್ಲಿ ನೋಡುವ ಅಗತ್ಯವಿದೆ. ಸ್ವತಂತ್ರ್ಯ ಬಂದು 75 ವರ್ಷ ನಂತರವಾದರೂ ಇತಿಹಾಸದ ಗರ್ಭದಲ್ಲಿ ಹುದುಗಿರುವ ಸತ್ಯ ಸಂಗತಿಗಳು ಹೊರಬರಲಿ.

