ಈ ಕಾಂಗ್ರೇಸಿಗರಿಗೆ ಒಳ್ಳೆಯದನ್ನು ಕಂಡರೆ ಸಹಿಸಲಸಾಧ್ಯ ತುರಿಕೆಯಾಗಿತ್ತದೆ ಎಂದನಿಸುತ್ತದೆ. ಅದರಲ್ಲೂ ಧರ್ಮ ಹಾಗೂ ರಾಷ್ಟ್ರೀಯತೆ ವಿಚಾರ ಬಂದಾಗ ಭಾರತೀಯವಾದದನ್ನು ತೆಗಳುವುದೇ ತಮ್ಮ ಜನ್ಮ ಸಿದ್ಧ ಹಕ್ಕು ಎನ್ನುವಂತೆ ಬೊಬ್ಬೆ ಹೊಡೆದುಕೊಳ್ಳುತ್ತಾರೆ. ಮೊನ್ನೆ ಆದದ್ದು ಇದೇ. ಕಾಂಗ್ರೇಸಿನ ಸತೀಶ್ ಜಾರಕಿಹೊಳಿ ಹಿಂದೂ ಎಂಬ ಪದವೇ ಅಶ್ಲೀಲ ಎಂದು ತಮ್ಮದೇ ಆದ ವಿತಂಡವಾದವನ್ನು ಮುಂದಿಟ್ಟು ಸಾರ್ವಜನಿಕವಾಗಿ ಮಾತಾಡಿದ್ದಾರೆ. ರಾಜ್ಯದಲ್ಲಷ್ಟೇ ಅಲ್ಲದೇ ದೇಶದಾದ್ಯಂತ ಹೇಳಿಕೆಯ ವಿರುದ್ಧ ಖಂಡನೆ ವ್ಯಕ್ತವಾಯಿತು. ರಾಜಕೀಯವಾಗಿ ದಿವಾಳಿಯ ಅಂಚಿನಲ್ಲಿರುವ ಕಾಂಗ್ರೇಸ್ ಪಕ್ಷ ಕೂಡ ಜಾರಕಿಹೊಳಿ ಅವರ ಹೇಳಿಕೆಗೆ ತಮ್ಮ ಬೆಂಬಲವಿಲ್ಲ ಅನ್ನುವ ರೀತಿಯಲ್ಲಿ ಮಾತಾಡಿತೇ ಹೊರತು ಅವರ ಮಾತು ತಪ್ಪು ಎನ್ನುವ ಒಮ್ಮತಾಭಿಪ್ರಾಯ ಜನರ ಮುಂದಿಡಲಿಲ್ಲ. ಹಿಂದೂಗಳು ಒಟ್ಟಾಗಿರುವ ಕಾರಣ ಜಾರಕಿಹೊಳಿ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ. ನೆನಪಿಡಿ, ಹೇಳಿಕೆ ಹಿಂಪಡೆದಿದ್ದಾರೆ ಪರಂತು ತಾನು ಹೇಳಿದ್ದು ತಪ್ಪು ಎಂದಾಗಲಿ, ಕ್ಷಮೆಯಾಗಲಿ ಕೇಳಲಿಲ್ಲ!
ಹಿಂದೂ ಪದ ಹುಟ್ಟಿದ ಅಥವಾ ಅದರ ಮೂಲ ಯಾವುದು ಎಂಬುದರ ಕುರಿತು ಸ್ವಲ್ಪ ಹುಡುಕಾಟ ನಡೆಸುವ ಪ್ರಯತ್ನ ಮಾಡೋಣ. ಹೌದು, ಹಿಂದೂ ಅನ್ನುವ ಪದ ಪರ್ಶಿಯನ್ ಮೂಲದ್ದೇ ಭಾರತೀಯ ಪದ ಅಲ್ಲವೇ ಅಲ್ಲ. ಇರಾನ್ ಮೂಲದ ಜೆಂದ್ ಅವೆಸ್ತಾ ಗ್ರಂಥದಲ್ಲಿ ಹಪ್ತ ಹಿಂದೂ ಎಂಬ ಪದ ಬಳಕೆಯಲ್ಲಿದ್ದೂ ಅಲ್ಲಿಂದ ಹಿಂದೂ ಅನ್ನುವ ಪದ ಬಳಕೆಗೆ ಬಂದಿದೆ ಎಂಬುದು ವಾಸ್ತವ. ಹಾಗಿದ್ದಲ್ಲಿ ಭಾರತವನ್ನು ಪರ್ಶಿಯನ್ನರು ಹಪ್ತ ಹಿಂದೂ ಎಂದೇಕೆ ಕರೆದರು ಎಂಬುದು ಕೇಳಿಕೊಳ್ಳಬೇಕಾದ ಪ್ರಶ್ನೆ. ಸಾವರ್ಕರ್ ತಮ್ಮ ಭಾರತದ ಇತಿಹಾಸದ ಕೃತಿಯಲ್ಲಿ ಈ ಪದದ ಮೂಲದ ಬಗ್ಗೆ ವಿವರಿಸಿದ್ದಾರೆ. ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧೂ, ಕಾವೇರಿ ಎಂಬ ಏಳು ನದಿಗಳಿರುವ ಭೂಪ್ರದೇಶವನ್ನು 'ಸಪ್ತ ಸಿಂಧೂ ರಾಷ್ಟ' ಅರ್ಥಾತ್ ಭಾರತ ಎಂದು ವೇದಗಳಲ್ಲಿ ವರ್ಣಿಸಿದ್ದಾರೆ. ನಾವು ಪ್ರತಿದಿನ ಪಠಿಸುವ 'ಗಂಗೆ ಚ ಯಮುನೇ ಚೈವಾ ಗೋದಾವರಿ ಸರಸ್ವತಿ...' ಎಂಬ ಮಂತ್ರ ಈ ಪದದ ಮೂಲ ಎಂಬುದು ಅರ್ಥೈಸಿಕೊಳ್ಳಬೇಕು. ಪ್ರಾಕೃತ ಭಾಷೆಯಲ್ಲಿ ಅನೇಕ ವೈದಿಕ ಪದಗಳು 'ಸ'ಕಾರದಿಂದ 'ಹ'ಕಾರವಾಗಿ ಬದಲಾದವು. ಅದೇ ರೀತಿ 'ಸಪ್ತ ಸಿಂಧೂ' ಅನ್ನುವ ಪದ 'ಹಪ್ತ ಹಿಂದೂ' ಎಂದಾಗಿದೆ. ಈ ರೀತಿ ಭಾರತೀಯವಾದ 'ಸಿಂಧೂ' ಎಂಬ ಪದ 'ಹಿಂದೂ' ಎಂದು ರೂಪಾಂತರವಾಗಿ ಭಾರತಕ್ಕೆ ಬಂತು! ಹಾಗಾಗಿಯೇ ಪರ್ಶಿಯನ್ ಭಾಷೆ ಬೆಳೆದ ನಂತರವಷ್ಟೇ ಹಿಂದೂ ಎಂಬ ಪದ ವ್ಯಾಪಕವಾಗಿ ಬಳಕೆಗೆ ಬಂತು ಎಂದು ಸಾವರ್ಕರ್ ಸ್ಪಷ್ಟಪಡಿಸುತ್ತಾರೆ. ನಂತರ 07-08ನೇ ಶತಮಾನದಿಂದ ಹಿಂದೂ ಎಂಬ ಪದ ಮತ್ತಷ್ಟು ವ್ಯಾಪಕವಾಯಿತು. ಸಿಂಧೂ ನದಿಯಿಂದ ಪೂರ್ವಕ್ಕೆ ನೆಲೆಸಿರುವವರನ್ನು ಹಿಂದೂ ಎಂದು ಹಿಮಾಲಯದಿಂದ ಸಾಗರದ ಈ ಭೂಪ್ರದೇಶವನ್ನು ಹಿಂದೂಸ್ತಾನ ಎಂದು ಕರೆಯಲ್ಪಡುತ್ತದೆ ಎಂಬ ಉಲ್ಲೇಖಗಳಿವೆ.
ಹಿಂದೂ ಎಂಬ ಪದಕ್ಕೆ ಸಂಸ್ಕೃತದ ಸಾಹಿತ್ಯದ ಆಧಾರವೂ ಸಿಗುತ್ತದೆ. ಭಾರತ ಅಥವಾ ಹಿಂದೂರಾಷ್ಟ್ರವನ್ನು ವ್ಯಖ್ಯಾನಿಸುವ ಶ್ಲೋಕವೇ ನಮ್ಮಲ್ಲಿದೆ.
ಆಸಿಂಧು ಸಿಂಧು ಪರ್ಯಂತಾ ಯಸ್ಯ ಭಾರತ ಭೂಮಿಕಾ
ಪಿತೃಭೂಃ ಪುಣ್ಯಭೂಶ್ಚೈವ ಸವೈ ಹಿಂದೂರಿತಿ ಸ್ಮೃತಃ||
![]()  | 
| The Actual Indian History | 
ಕಾಂಗ್ರೇಸ್ ಪಕ್ಷ ಹಿಂದೂಗಳನ್ನು ಹಾಗೂ ಅವರ ಭಾವನೆಗಳನ್ನು ತುಚ್ಛವಾಗಿ ಕಾಣುತ್ತಿರುವುದು ಇದೇನು ಮೊದಲಲ್ಲ. ಮೀನು ತಿಂದು ಮಂಜುನಾಥನ ದರ್ಶನಕ್ಕೆ ಹೋಗಿದ್ದು, ತಿಲಕವನ್ನು ಕಂಡರೆ ಭಯ ಎಂದದ್ದು, ಪೇಟವನ್ನು ಕೇಸರಿ ಬಣ್ಣ ಎಂಬ ಕಾರಣಕ್ಕೆ ತಿರಸ್ಕರಿಸಿದ್ದು, ಅಹಿಂದ ಸಮಾವೇಶ ನಡೆಸಿದ್ದು ರಾಮ ಎಂದು ಹೆಸರಿಟ್ಟುಕೊಂಡಿರುವ ಸಿದ್ಧರಾಮಯ್ಯ. ಕನಕಪುರದಲ್ಲಿ ಏಸುವಿನ ಪ್ರತಿಮೆ ನಿಲ್ಲಿಸಲು ಹೊರಟದ್ದು ಶಿವಕುಮಾರ್! ಮನುಷ್ಯನ ಸರ್ವತೋಮುಖ ಏಳಿಗೆಗೆ ಅತ್ಯಂತ ಶ್ರೇಷ್ಠ ಕೊಡುಗೆ ಎಂದು ಜಗತ್ತು ಗೌರವಿಸುತ್ತಿರುವ ಭಗವದ್ಗೀತೆ ಬೋಧಿಸುವುದು ಜೇಹಾದ್ ಎಂದವರು ಇದೇ ಕಾಂಗ್ರೇಸಿನ ಶಿವರಾಜ್ ಪಾಟೀಲ್! 'ಕಾಂಗ್ರೆಸ್ ಮೂಲಭೂತವಾಗಿ ಹಿಂದೂ ವಿರೋಧಿ ಮತ್ತು ಮುಸ್ಲಿಂ ಪರವಾದ ಪಕ್ಷವಾಗಿದೆ. ನನ್ನನ್ನು ಪೂಜೆ ಮಾಡದಂತೆ ಪಕ್ಷದ ಸಿದ್ಧಾಂತ ತಡೆಯುತ್ತದೆ' ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಶಾಸಕ ರಾಕೇಶ್ ಸಿಂಗ್ ಅಭಿಪ್ರಾಯ ಪಡುತ್ತಾರೆ! ಒಂದೆಡೆ ಭಾರತ್ ಜೋಡೋ ಅನ್ನುತ್ತಾರೆ ಆದರೆ, ಮಾಡುವುದೆಲ್ಲಾ ತುಂಡರಿಸುವ ಕೆಲಸಗಳು.
ಒಂದು ಪದಕ್ಕೆ ಅನೇಕ ಅರ್ಥಗಳಿರುತ್ತದೆ. ಪ್ರಾಂತ್ಯಕ್ಕನುಗುಣವಾಗಿ, ಧರ್ಮಕ್ಕನುಗುಣವಾಗಿ, ದೇಶಕ್ಕನುಗುಣವಾಗಿ ಅರ್ಥ ವ್ಯತ್ಯಾಸ ಇದ್ದೇ ಇರುತ್ತದೆ. ಯಾವುದನ್ನು ಬಳಸಬೇಕು ಅಥವಾ ಇಲ್ಲ ಅನ್ನುವುದು ನಮ್ಮ ವಿವೇಚನೆಗೆ ಹಾಗೂ ಸಂಸ್ಕಾರಕ್ಕೆ ಬಿಟ್ಟದ್ದು. ನಮ್ಮೆದುಗಿರುವ ಬದುಕನ್ನು ಬಿಟ್ಟು ನಿಘಂಟಿನಲ್ಲಿರುವ ಅರ್ಥವನ್ನಾಧರಿಸಿ ಮಾತಾಡಿದರೆ ಭಾವನೆಗಳನ್ನು Google Translate ಮಾಡುವಷ್ಟೇ ಮೂರ್ಖತನ! ಕೆಟ್ಟವರಲ್ಲೂ ಒಳ್ಳೆತನ ಕಾಣುವ ಧರ್ಮರಾಯರಾಗಲು ಸಾಧ್ಯವಾಗದಿದ್ದರೂ ಎಲ್ಲರಲ್ಲೂ ಕೆಟ್ಟದ್ದನ್ನು ಕಾಣುವ ದುರ್ಯೋಧನನಂತೂ ಆಗುವುದು ಬೇಡ ಎಂದು ಆಶಿಸೋಣ. ಏನೇ ಹೇಳಿ ಶ್ರಾದ್ಧದ ಸೂತಕದ ಕಣ್ಣಿಗೆ ಹಾಡುವ ಕೋಗಿಲೆಗಿಂತ ಕಾಗೆಯೇ ಶ್ರೇಷ್ಠ!
