March 25, 2023

ಪ್ರಜಾಪ್ರಭುತ್ವದಲ್ಲಿ ಮೌಲ್ಯವೇ ಮಾಪನ

ಕರ್ನಾಟಕದಲ್ಲಿ ಚುಣಾವಣೆಯ ಕಾವು ಜೋರಾಗಿದೆ. ಭಾಜಪಾ, ಕಾಂಗ್ರೇಸ್, ದಳ ರಥಯಾತ್ರೆ ನಡೆಸುತ್ತಿವೆ. ಮೂರು ಪಕ್ಷಗಳು ತಮ್ಮ ಪ್ರಣಾಳಿಕೆ, ಘೋಷಣೆಗಳನ್ನು ಮಾಡುತ್ತಿವೆ. ದೆಹಲಿ ಹಾಗೂ ಪಂಜಾಬ್ ಅಲ್ಲಿ ಹೆಚ್ಚು ಸದ್ದು ಮಾಡಿದ ಏಏಪಿ ಇಲ್ಲಿ ಸುಳಿವೇ ಇಲ್ಲ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಜಾಕೀಯದ ಹೆಸರು ಓಡಾಡುತ್ತಿದೆ. 2024 ರಲ್ಲಿ ಕೇಂದ್ರ ಚುಣಾವಣೆ ನಡೆಯಬೇಕಿದೆ. ಮೋದಿಯವರನ್ನು ಅಧಿಕಾರದಿಂದ ಇಳಿಸಲು ಪ್ರಾದೇಶಿಕ ಪಕ್ಷಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೊರೋಸ್ ಅಂತಹವರಿಂದ ಷಢ್ಯಂತ್ರ ನಡೆಯುತ್ತಿದೆ. ಇದೆಲ್ಲ ಗದ್ದಲಗಳ ನಡುವೆ ಜನರ ಆಯ್ಕಯೇ ಅಂತಿಮ. ನಮ್ಮ ರಾಜ್ಯವನ್ನು, ದೇಶವನ್ನು ಯಾರು ಮುನ್ನಡೆಸಬೇಕು ಎಂಬುದರ ತೀರ್ಮಾನ ಶ್ರೀಸಾಮಾನ್ಯರದ್ದು. ಅದನ್ನೇ ಪ್ರಜಾಪ್ರಭುತ್ವ ಅನ್ನುವುದು. ಎಲ್ಲರಿಗೂ ಒಂದೇ ಮೌಲ್ಯದ ಮತ ಅಂತ ಇರುವ ಪ್ರಜಾಪ್ರಭುತ್ವದಲ್ಲಿ ಜನರು ಸರಿಯಾದದ್ದನ್ನು, ದೇಶದ ಆರೋಗ್ಯಕ್ಕೆ ಪೂರಕವಾದದ್ದನ್ನು ಆಯ್ಕೆ ಮಾಡಿದರೆ ಒಳಿತು ಆದರೆ ತಪ್ಪಾದರೆ ಎಂಬುದೇ ಪ್ರಶ್ನೆ. 

ಕಾಂಗ್ರೇಸ್ಸಿನವರು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಗ್ಯಾರಂಟಿ ಇದೆಯೋ ಇಲ್ಲವೋ ಆದರೆ ಮನಸೋ ಇಚ್ಛೆ ಬಿಟ್ಟಿ ಗ್ಯಾರಂಟಿಗಳನ್ನು ಘೋಷಣೆ ಮಾಡುತ್ತಿದ್ದಾರೆ. ತಿಂಗಳಿಗೆ 200 ಯೂನಿಟ್ ವಿದ್ಯುತ್, ಪ್ರತಿ ಯಜಮಾನಿಗೆ ತಿಂಗಳಿಗೆ 2000 ರೂ, ಅನ್ನಭಾಗ್ಯದ ಹೆಸರಲ್ಲಿ ಪ್ರತಿಯೊಬ್ಬರಿಗೂ ಉಚಿತ ಅಕ್ಕಿ, ಯುವನಿಧಿ ಹೆಸರಿನಲ್ಲಿ 3000 ರೂ! ಈ ಘೋಷಣೆಗಳು ಹೇಗಿದೆ ಎಂದರೆ; ಡಿಗ್ರಿ ಓದಿದ ತರುಣ ಕೆಲಸ ಮಾಡದೆ ಮನೆಯಲ್ಲಿ ಕೂತರೆ ಅವನಿಗೆ ಹಾಗೂ ಮನೆಯ ಯಜಮಾನಿಗೆ ಸೇರಿ 5000 ರೂ  ಬರುತ್ತದೆ. ಆ ಹಣದಲ್ಲಿ ಸಾರಾಯಿ ಕೊಂಡು, ಕುಡಿದು ಬಡವರಾದರೆ 10 ಕೆಜಿ ಅಕ್ಕಿ ಸಿಗುತ್ತದೆ. ಅದನ್ನು ಮಾರಿ ಅಥವಾ ತಿಂದು ಜೀವನವನ್ನು ಸಾರ್ಥಕ ಮಾಡುಕೊಳ್ಳಬಹುದು. ಜನತಾದಳದವರು ಪಂಚಾಯಿತಿಗೊಂದು ಹೈಟೆಕ್ ಆಸ್ಪತ್ರೆ ಹಾಗೂ ಶಾಲೆ, ಸಾಲ ಮನ್ನ, ರೈತರಿಗೆ ಎಕರೆಗೆ 10000 ರೂ ಎಂಬಂತಹ ಘೋಷಣೆಗಳನ್ನು ಮಾಡಿದ್ದಾರೆ. ಇದಕ್ಕೆಲ್ಲಾ ಹಣ ಎಲ್ಲಿಂದ ತರುತ್ತೀರ ಹಾಗೂ ಹೇಗೆ ಕಾರ್ಯರೂಪಕ್ಕೆ ತರುತ್ತೀರ ಎಂಬ ಪ್ರಶ್ನೆಗೆ ಅವರಿಂದ ಸಮರ್ಪಕ ಉತ್ತರ ಇಲ್ಲ. ದುರಾದೃಷ್ಟವಶಾತ್ ಸಮ್ಮಿಶ್ರ ಸರ್ಕಾರ ಬಂದರೇ 'ಪೂರ್ಣ ಬಹುಮತ ಇದ್ದಿದ್ದರೆ ನಮ್ಮ ಘೋಷಣೆಗಳನ್ನು ಕಾರ್ಯರೂಪಕ್ಕೆ ತರಬಹುದಿತ್ತು' ಎಂಬ ಉತ್ತರ ಸಿದ್ದವಾಗಿರುತ್ತದೆ. ಪೂರ್ಣ ಬಹುಮತ ಬರುವ ಖಾತ್ರಿ ಇಲ್ಲದ ಮೇಲೆ ಈ ರೀತಿಯ ಪ್ರಣಾಳಿಕೆ ಹೊರಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ರಾಜಕೀಯ ಪಕ್ಷಗಳು ಯೋಚಿಸಬೇಕು. ಇಂತಹ ಪಕ್ಷಗಳಿಗೆ ಮತ ಹಾಕುವ ಮುನ್ನ ಮತದಾರರೂ ಸಹ ಯೋಚಿಸಬೇಕು.

Congress Guarantee

ಈ ಬಿಟ್ಟಿ ಯೋಜನೆಗಳು ರಾಜ್ಯದ, ದೇಶದ ಭವಿಷ್ಯಕ್ಕೆ ಮಾರಕ ಎಂಬುದು ಸೂಕ್ಷವಾಗಿ ಗಮನಿಸಿದರೆ ಅರ್ಥವಾಗುವಂತಹುದು. ಇಂತಹ ಯೋಚನೆಗಳನ್ನು ಜಾರಿಗೆ ತಂದ ವೆನೇಜುಲಾ ದೇಶ ಆರ್ಥಿಕವಾಗಿ ದಿವಾಳಿಯಾಗಿರುವುದು ನಮ್ಮ ಕಣ್ಣೆದುರಿಗಿದೆ. ಜಾತಿ, ಧರ್ಮಾಧಾರಿತ, ಸ್ವಾರ್ಥಯುತವಾದ ಆರ್ಥಿಕ ನೀತಿ ಜಾರಿಗೆ ತಂದರೆ ಏನಾಗುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಪಕ್ಕದ ಪಾಕೀಸ್ತಾನ ಹಾಗೂ ಶ್ರೀಲಂಕಾ! ಜಾತ್ಯಾಧಾರಿತ ಮೀಸಲಾತಿಗೆ ಒತ್ತುಕೊಟ್ಟರೆ ಆ ಜನಾಂಗವನ್ನು ಶಾಶ್ವತವಾಗಿ ಹಿಂದುಳಿಸಿದಂತೆ. ಬದಲಾಗಿ ಹಿಂದುಳಿದವರನ್ನು ಸದೃಢರನ್ನಾಗಿ ಮಾಡುವುದು ಹೇಗೆ ಎಂಬುದು ರಾಜಕೀಯವಾಗಿ, ಸಾಮಾಜಿಕವಾಗಿ ಯೋಚಿಸಬೇಕಾದ ಸಂಗತಿ.

ಭಾರತ್ ಜೋಡೋ ಯಾತ್ರೆ ನಂತರ ಲಂಡನ್ ಪ್ರವಾಸಕ್ಕೆ ತೆರಳಿದ ರಾಹುಲ್ ನರೇಂದ್ರ ಮೋದಿ ಹಾಗೂ ಭಾಜಾಪ ನೇತೃತ್ವದ ಸರ್ಕಾರವನ್ನು ಟೀಕಿಸುವ ಭರದಲ್ಲಿ ಭಾರತದ ವ್ಯವಸ್ಥೆ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದರು. 2019ರಲ್ಲಿ ಚುಣಾವಣೆ ಪ್ರಚಾರ ಭಾಷಣದಲ್ಲಿ ಮೋದಿ ಎಂದು ಹೆಸರಿರುವವರೆಲ್ಲ ಕಳ್ಳರು ಎಂಬ ಮಾತಿಗಾಗಿ ರಾಹುಲ್ ವಿರುದ್ಧ ಮಾನನಷ್ಟ ಪ್ರಕರಣ ದಾಖಲಾಗಿತ್ತು. 24ನೇ ತಾರೀಖು ರಾಹುಲ್ ಗಾಂಧಿ ತಪ್ಪಿತಸ್ಥ ಎಂದು ಅವರ ಸಂಸತ್ ಸದಸ್ಯತ್ವವನ್ನು ಅಸಿಂಧುಗೊಳಿಸಿ ಅವರನ್ನು ಅನರ್ಹಗೊಳಿಸುವಂತ ತೀರ್ಪು ಸೂರತ್ ನ್ಯಾಯಾಲಯ ಕೊಟ್ಟಿದೆ. ರಾಹುಲ್ ಆಗಲಿ ಅಥವಾ ಪಕ್ಷದ ವತಿಯಿಂದಾಗಲಿ ಈವರೆಗೆ ತೀರ್ಪಿಗೆ ತಡೆತರುವ ಸೂಚನೆ ಕಾಣಿಸುತ್ತಿಲ್ಲ. ಕಾಂಗ್ರೇಸ್ ಇದನ್ನು ಕರ್ನಾಟಕ ಚುಣಾವಣೆಗೆ ರಾಜಕೀಯ ದಾಳವಾಗಿ ಬಳಸಿಕೊಳ್ಳುವ ಯೋಚನೆ ಮಾಡುತ್ತಿರಬಹುದು. ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುವುದೇ ಇವರ ಧ್ಯೇಯವಾಗಿರುವುದರಿಂದ ಭಾರತದಲ್ಲಿ 'ಪ್ರಜಾಪ್ರಭುತ್ವ ಅಪಾಯದಲ್ಲಿದೆ' ಎಂಬ ಸುಳ್ಳಿಗೆ ಹೆಚ್ಚು ಪ್ರಚಾರ ಕೊಡಬಹುದು. ಸಾಧ್ಯವಾದಲ್ಲಿ ಜನರ ಸಹಾನುಭೂತಿ ಗಿಟ್ಟಿಸಿ ಪ್ರಿಯಾಂಕಳನ್ನು ಅದಿನಾಯಕಿ ಎಂದು ಬಿಂಬಿಸುವ ಪ್ರಯತ್ನವನ್ನೂ ಮಾಡಬಹುದು. 1975 ರಲ್ಲಿ ರಾಹುಲನ ಅಜ್ಜಿ ಇಂದಿರಾ ವಿರುದ್ಧ ಅಲ್ಲಹಾಬಾದ್ ಕೋರ್ಟು ತೀರ್ಪಿತ್ತಾಗ ದೇಶವನ್ನು ತುರ್ತು ಪರಿಸ್ಥಿತಿ ಎಂಬ ನರಕಕ್ಕೆ ತಳ್ಳಿದರು. ಸಂವಿದಾನದ ವಿಧಿಗಳಿಗೆ ತಿದ್ದುಪಡಿ ತರಲಾಯಿತು, ನಿಯಮಗಳನ್ನು ಗಾಳಿಗೆ ತೂರಿ, ಮೂಲ ಪ್ರಸ್ತಾವನೆಯನ್ನು ಬದಲು ಮಾಡಿ ಸೋಸಿಯಲಿಸ್ಟ್ (ಸಮಾಜವಾದ) ಹಾಗೂ ಸೆಕ್ಯುಲರ್ (ಜಾತ್ಯಾತೀತ) ಎಂಬ ಪದಗಳನ್ನು ಸೇರಿಸಲಾಯಿತು. ಇಗಲೂ ಕಾಂಗ್ರೇಸ್ ಪಕ್ಷವೇ ಅಧಿಕಾರದಲ್ಲಿದ್ದರೆ ಏನಾಗುತ್ತಿತ್ತು ಎಂದು ಊಹಿಸಿ! ಇಂತಹವರ ಜೊತೆ ನಿಲ್ಲುವ ಮುನ್ನ, ಅವರ ಪಕ್ಷಕ್ಕೆ ಮತ ಹಾಕುವ ಮುನ್ನ ಯೋಚಿಸಬೇಕು ಮತ್ತೂ ಎಚ್ಚರವಹಿಸಬೇಕು.

Disqualification notice

ಸಾರ್ವಜನಿಕ ಜೀವನದಲ್ಲಿ ನಾವು ಬಳಸುವ ಪದಗಳ ಮೌಲ್ಯವನ್ನರಿಯಬೇಕು. ಜನಸಾಮಾನ್ಯರು ತಮ್ಮ ಮತವನ್ನು ಹಾಕುವ ಮುನ್ನ ಅದರ ಮೌಲ್ಯವನ್ನರಿಯಬೇಕು. ಎಲ್ಲರ ಮತಕ್ಕೂ ಒಂದೇ ಮೌಲ್ಯ ಎಂಬುದು ಸಂವಿಧಾನ ನಮಗೆ ಕೊಟ್ಟಿರುವ ವರ. ಇದನ್ನು ದೇಶದ ಒಳಿತಿಗಾಗಿ ಸದುಪಯೋಗ ಪಡಿಸಿಕೊಳ್ಳುವುದು ನಮ್ಮ ಕರ್ತವ್ಯ. ಇರುವ ಹತ್ತು ಜನರಲ್ಲಿ ಕತ್ತೆಯೊಂದನ್ನು ಕುದುರೆ ಎಂದು ಎಂಟು ಜನ ಹೇಳಿ; ಇಬ್ಬರು ಸತ್ಯವನ್ನು ಕೂಗಿದರೂ ಈಗಿನ ಪ್ರಜಾಪ್ರಭುತ್ವ ಬಹುಜನರ ಅಭಿಪ್ರಾಯವನ್ನು ತಪ್ಪಿದ್ದರೂ ಒಪ್ಪುತ್ತದೆ. ಮತವನ್ನು ನೋಟಿಗಾಗಿ, ಕುಕ್ಕರ್ ಗಾಗಿ, ಜಾತಿಗಾಗಿ ಮಾರಿಕೊಂಡು ಅದರ ಮೌಲ್ಯ ಹಾಗೂ ಸುತ್ತಲಿನ ವಿದ್ಯಮಾನವನ್ನು ಅರಿಯದೆ ಅಯ್ಕೆ ಮಾಡುವುದು ಮಾರಕ. ಸಮಾಜ ತಪ್ಪು ದಾರಿ ಹಿಡಿಯಬಾರದು ಎಂಬುದಷ್ಟೇ ನನ್ನ ಆಶಯ.

***********************************************************

References

March 6, 2023

ಭಾರತದ ಏಳಿಗೆ ಅವರಿಗೆ ಸಹನೀಯವಲ್ಲ!

ಕಳೆದ ತಿಂಗಳ 16ನೇ ತಾರೀಖು ಅಮೇರಿಕಾದ ಜಾರ್ಜ್ ಸೊರೋಸ್ ಮ್ಯೂನಿಕ್ ಸೆಕ್ಯೂರಿಟಿ ಕಾನ್ಫರೆನ್ಸ್ ಅಲ್ಲಿ ಭಾರತದ ಪ್ರಜಾಪ್ರಭುತ್ವದ ವಿರುದ್ಧ, ಪ್ರಧಾನಿ ಮೋದಿ ವಿರುದ್ಧ ಮನಬಂದಂತೆ ಹರಟಿದ್ದಾನೆ. ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಇಲ್ಲಿನ ಸರ್ಕಾರವನ್ನು ಬದಲಿಸಬಲ್ಲೆ ಎಂಬಂತಹ ಕೊಬ್ಬಿನ ಮಾತುಗಳನ್ನಾಡಿದ್ದಾನೆ. ಅಮೇರಿಕಾದಲ್ಲಿ ಡೋನಾಲ್ಡ್ ಟ್ರಂಪ್ ಅನ್ನು ಇಳಿಸಿದ ಆತ್ಮವಿಶ್ವಾಸ ಹಾಗೂ ಭಾರತದಲ್ಲಿ ತನ್ನ ಬೇಳೆಕಾಳು ಬೇಯುತ್ತಿಲ್ಲ ಎಂಬ ಹತಾಶೆಯಿಂದ ಹೀಗೆಲ್ಲಾ ಬಡಬಡಿಸಿದ್ದಾನೆ. ಇದಕ್ಕು ಮುನ್ನ ನಡೆದ ಕೆಲವು ಘಟನೆಗಳನ್ನು ಸ್ವಲ್ಪ ಗಮನಿಸಿ ನೋಡಿ. ಗೌತಮ್ ಅದಾನಿ ಹಾಗೂ ಮೋದಿಯನ್ನು ತಳುಕು ಹಾಕುಲು ಹಿಂಡೆನ್ಬರ್ಗ್ ವರದಿ ಬಂತು, ಅದಕ್ಕು ಮುನ್ನ ಭಾರತದ ಸುಪ್ರೀಂ ಕೋರ್ಟ್ ಅಲ್ಲಿ ಇತ್ಯರ್ಥವಾಗಿರುವಂತಹ ಗುಜರಾತ್ ಹಿಂಸಾಚಾರದ ಕುರಿತು ಸಾಕ್ಷ್ಯಚಿತ್ರವೊಂದನ್ನು ಲಂಡನ್ನಿನ ಬಿಬಿಸಿ ವರದಿ ಮಾಡಿತ್ತು. ಇದಕ್ಕೂ ಮುನ್ನ ಕಾಂಗ್ರೇಸ್ 145 ದಿನಗಳ ಭಾರತ್ ಜೋಡೋ ಯಾತ್ರೆ ನಡಿಸಿತ್ತು!

Anti Indian George Soros

ಈ ಎಲ್ಲಾ ಘಟನೆಗಳಿಗೂ ಒಂದು ಮೂಲಭೂತ ಕಾರಣವಿದೆ. ನರೇಂದ್ರ ಮೋದಿ ಅನ್ನುವುದು ಮೇಲುನೋಟಕ್ಕೆ ಕಾಣುವ ರಾಜಕೀಯದ ಕಾರಣ ಆದರೆ, ನಿಜವಾದ ಕಾರಣ ಭಾರತದ ಬೆಳವಣಿಗೆ. 2014 ಕ್ಕೂ ಮುನ್ನ ಜಾಗತಿಕ ಮಟ್ಟದಲ್ಲಿ ಭಾರತ ಫ್ರಜೈಲ್ 05 ಪಟ್ಟಿಯಲ್ಲಿತ್ತು. ಒಂಬತ್ತು ವರ್ಷಗಳ ನಂತರ; ಅಂದರೆ 2023 ರಲ್ಲಿ ಭಾರತ ಪ್ರಪಂಚದ ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಕರೋನಾ ಮಹಾಮಾರಿಗೆ ಲಸಿಕೆ ಕಂಡುಹಿಡಿದ 05 ರಾಷ್ಟ್ರಗಳಲ್ಲಿ ಭಾರತವೂ ಒಂದು. ಎರಡು ಲಸಿಕೆಗಳನ್ನು ಕಂಡುಹಿಡಿದು ಜಗತ್ತಿನ ಅನೇಕ ರಾಷ್ಟ್ರಗಳಿಗೆ ಕಡಿಮೆ ದರದಲ್ಲಿ ಲಸಿಕೆಗಳನ್ನು ಕಳಿಸಿಕೊಟ್ಟ ಏಕೈಕ ರಾಷ್ಟ್ರ ಭಾರತ! ಕರೋನಾ ನಂತರ; ಜಗತ್ತಿನಲ್ಲಿ ಸಮರ್ಥವಾಗಿ ಚೇತರಿಸಿಕೊಂಡು, ಆರ್ಥಿಕವಾಗಿ ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿರುವ ರಾಷ್ಟ್ರ ಭಾರತ. ತನ್ನ ಸಾಲದ ಸುಳಿಯಲ್ಲಿ ಸಿಕ್ಕಿಸಿ ಅನೇಕ ದೇಶಗಳನ್ನು ಆಳುತ್ತಿರುವ ಚೀನಾಕ್ಕೆ ಸೆಡ್ಡು ಹೊಡೆಯಲು ಸಾಮರ್ಥ್ಯವಿರುವ ರಾಷ್ಟ್ರ ಭಾರತ. ಕಳೆದ ತಿಂಗಳು ಟರ್ಕಿಯಲ್ಲಾದ ಭೂಕಂಪಕ್ಕೆ ಅಲ್ಲಿನ ಜನರ ಸಹಾಯಕ್ಕೆ ಧಾವಿಸಿದ್ದು ಭಾರತ. ಜಗತ್ತಿನ ಹಿತ ಬಯಸುವ ಭಾರತದ ಏಳಿಗೆ ಸ್ವಾರ್ಥಪರವಾಗಿರುವ ರಾಷ್ಟ್ರಗಳಿಗೆ ಸಹನೀಯವಲ್ಲ! ನೆನಪಿಸಿಕೊಳ್ಳಿ, ಇಸ್ರೋ ಪ್ರವರ್ಧಮಾನಕ್ಕೆ ಬಂದರೆ ಅನೇಕ ರಾಷ್ಟ್ರಗಳ ಸ್ಯಾಟೆಲೈಟ್ಗಳನ್ನು ಕಡೆಮೆ ಖರ್ಚಿನಲ್ಲಿ ಬಾಹ್ಯಾಕಾಶಕ್ಕೆ ಕಳಿಸುತ್ತದೆ ಎಂದೇ ವಿದೇಶಿ ಶಕ್ತಿಗಳು ಷಢ್ಯಂತ್ರ ನಡೆಸಿ, ಇಸ್ರೋ ವಿಜ್ಞಾನಿಗಳ ಮೇಲೆ ಸುಳ್ಳು ಕೇಸ್ ಆಗುವಂತೆ ನೋಡಿಕೊಂಡವು. ಈಗಲೂ ಅಷ್ಟೇ ಕಾಂಗ್ರೇಸ್ ಪಕ್ಷ ಆಡಳಿತದಲ್ಲಿದ್ದು ಲಸಿಕೆ ಕಂಡುಹಿಡಿಯದಿದ್ದರೆ ಭಾರತ ಅಮೇರಿಕಾ, ರಷ್ಯಾ, ಯೂರೋಪ್ ಅಥವಾ ಚೀನಾ ದೇಶಗಳನ್ನು ಬೇಡಿಕೊಳ್ಳಬೇಕಿತ್ತು, ಲಸಿಕೆಗಾಗಿ ಆ ರಾಷ್ಟ್ರಗಳ ಎಲ್ಲಾ ಷರತ್ತುಗಳನ್ನು ಒಪ್ಪಿ, ಅವರ ಗುಲಾಮರಾಗುವ ಸಾಧ್ಯತೆಯೂ ಇತ್ತು. ಆದರೆ ಅಂತಹ ವ್ಯಾಪಾರ ಮನೋಭಾವದ ಸ್ವಾರ್ಥಿಗಳ ಆಸೆಗಳೆಲ್ಲಕ್ಕೂ ಅಡ್ಡಿಯಾದದ್ದೇ ಭಾರತ!

ಪಶ್ಚಿಮ ಜಗತ್ತಿಗೆ ತನ್ನ ವ್ಯಾಪಾರದ ಮಾರ್ಗದ ದೂರವನ್ನು ಕಡಿತಗೊಳಿಸಲು ಚೀನಾ 'ಸೀಪೆಕ್ - ಚೀನಾ ಪಾಕಿಸ್ತಾನ್ ಎಕೊನಾಮಿಕ್ ಕಾರಿಡಾರ್' ಯೋಜನೆ ತೆಗೆದುಕೊಂಡು ಬಂತು. $46 ಶತಕೋಟಿ ಮೌಲ್ಯದ ಈ ಯೋಜನೆ ಪ್ರಾರಂಭವಾದದ್ದು 2013ರಲ್ಲಿ. 2022 ಹೊತ್ತಿಗೆ ಅದರ ಖರ್ಚು $65 ಶತಕೋಟಿ ಆಗಿದೆ. ಕಳೆದ ವರ್ಷದ ವರದಿಯ ಪ್ರಕಾರ 21ರಲ್ಲಿ 03 ಪ್ರಾಜೆಕ್ಟ್ಗಳು ಮಾತ್ರ ಈ ಯೋಜನೆಯಡಿ ಮುಗಿದಿದೆ. ಈ ಯೋಜನೆ ಪೂರ್ಣಗೊಳ್ಳದಿರಲು ಕಾರಣ ಪಾಕಿಸ್ತಾನದ ಅಸ್ಥಿರತೆ. ಪಾಕಿಸ್ತಾನದ ಈ ಪರಿಸ್ಥಿತಿಗೆ ಒಂದು ವಿಧದಲ್ಲಿ ಭಾರತ ಕಾರಣ ಎಂದರೆ ತಪ್ಪಾಗಲಾರದು.  

ಪಠಾಣ್ ಖೋಟ್ ಹಾಗೂ ಪುಲ್ವಾಮಾ ದಾಳಿಗಳ ನಂತರ ಭಾರತ ಅವಕಾಶವಿದ್ದ ಎಲ್ಲಾ ಜಾಗತಿಕ ವೇದಿಕೆಗಳಲ್ಲೂ ಪಾಕಿಸ್ತಾನವನ್ನು 'ಭಯೋತ್ಪಾದಕರ ಸ್ವರ್ಗ' ಎಂದು ಬಿಂಬಿಸುತ್ತಾ ಬಂದಿದೆ. ಸುಷ್ಮಾ ಸ್ವರಾಜ್ ಆ ಪರಂಪರೆಯನ್ನು ಪ್ರಾರಂಭಿಸಿದರೆ ಪ್ರಸ್ತುತ ವಿದೇಶಾಂಗ ಸಚಿವ ಜಯಶಂಕರ್ ಅದನ್ನು ಯಶಸ್ವಿಯಾಗಿ ಮುಂದುವರೆಸಿದ್ದಾರೆ. ಅವರು ಇನ್ನೂ ಒಂದು ಹೆಜ್ಜೆ ಮುಂದುವರೆದು ಜಗತ್ತು ವಿಸ್ತರಣವಾದದ ವಿರುದ್ಧ ಒಂದಾಗಬೇಕಿದೆ ಎಂದು ಹೇಳಲು ಪ್ರಾರಂಭಿಸಿದ್ದಾರೆ. ಇದು ಚೀನಾಕ್ಕೆ ತೋಡುತ್ತಿರುವ ಖೆಡ್ಡಾ! ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿಯನ್ನು ಅವರ ದೇವರೇ ಕಾಪಾಡಬೇಕು ಇಲ್ಲವೇ ಆ ದೇಶ ಮತ್ತೊಮ್ಮೆ ಚೀನಾದ ಸುಳಿದಲ್ಲಿ ಸಿಲುಕಬೇಕು. ಅಮೇರಿಕಾ ಅಫ್ಘಾನಿಸ್ತಾನವನ್ನು ಬಿಟ್ಟು ಹೋದ ಮೇಲೆ ಪಾಕಿಸ್ತಾನ ತನ್ಮೂಲಕ ಚೀನಾ ಆ ದೇಶದ ಮೇಲೆ ಹತೋಟಿ ಸಾಧಿಸಬಹುದು ಎಂದುಕೊಂಡಿತ್ತು. ಆದರೆ, ಭಾರತದ ವಿದೇಶಾಂಗ ನೀತಿ ಅದಕ್ಕೆ ಅವಕಾಶ ನೀಡಲಿಲ್ಲ. ತಾಲಿಬಾನ್ ಸರ್ಕಾರ ಭಾರತದ ಪರವಾಯಿತು. ತೆಹರೀಕ್ ತಾಲಿಬಾನ್ ಪಾಕಿಸ್ತಾನದ ಒಳಗಿದ್ದುಕೊಂಡೇ ಅದರ ರಕ್ತ ಹೀರುತ್ತಿದೆ. ಕಳೆದ ಎರಡು ವಾರಗಳಿಂದ ಭಾರತಕ್ಕೆ ಬೇಕಾಗಿರುವ ಅನೇಕ ಭಯೋತ್ಪಾದಕರು ಪಾಕಿಸ್ತಾನದಲ್ಲಿ ಅನುಮಾನಾಸ್ಪದವಾಗಿ ಕೊಲೆಯಾಗುತ್ತಿದ್ದಾರೆ. ಹಿಜ್ಬುಲ್ ಮುಜಾಹಿದ್ದೀನಿನ ಬಷೀರ್ ಅಹಮದ್ ಕೊಲೆಯಾದವರಲ್ಲಿ ಪ್ರಮುಖ. ಕಾಶ್ಮೀರದಲ್ಲಿನ ಅವನ ಆಸ್ತಿಯನ್ನು ಭಾರತದ ಎನ್.ಐ.ಏ ವಶಪಡಿಸಿಕೊಂಡಿದೆ. ಭಾರತದ ಬೇಹುರಾರಿಕೆ ಮತ್ತು ಗೂಢಚಾರರು ಇಸ್ರೇಲಿನ ಮೊಸಾದ್ ರೀತಿ ಈ ಕಾರ್ಯಾಚರಣೆಗಳ ಹಿಂದಿದ್ದು, ಮುಂದೊಂದು ದಿನ ಇದರ ಕುರಿತು ಪುಸ್ತಕ ಅಥವಾ ಚಲನಚಿತ್ರ ಬಂದರೇ ಆಚ್ಚರಿಪಡಬೇಕಿಲ್ಲ. 

ಜಾಗತಿಕ ಮಟ್ಟದಲ್ಲಿ ತನ್ನ ವರ್ಚಸ್ಸನ್ನು ಭಾರತ ಹೀಗೆ ವೃದ್ಧಿಸಿಕೊಳ್ಳುತ್ತಿದ್ದರೆ ಆಂತರಿಕ ಸ್ವಾರ್ಥಿಗಳು ವಿದೇಶಿ ಶಕ್ತಿಗಳೊಡನೆ ಕೈ ಜೋಡಿಸುತ್ತಿದ್ದಾರೆ. ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮಗಳು ಭಾರತದಲ್ಲಿರುವ ಸೊರೋಸಿನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾಳೆ, ಸೊರೋಸಿನ ಜೊತೆ ಕೆಲಸ ಮಾಡುತ್ತಿರುವ ಹರ್ಷ್ ಮಂದಾರ್ ಸೋನಿಯಾಳ ಆಪ್ತ! ಅವನ ಸಂಸ್ಥೆಯ ಜಾಗತಿಕ ಉಪಾಧ್ಯಕ್ಷ ಕಾಂಗ್ರೇಸಿನ ಯಾತ್ರೆಯಲ್ಲಿ ರಾಹುಲ್ ಜೊತೆಯಾಗುತ್ತಾನೆ. ಲಂಡನ್ನಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ರಾಹುಲ್ ಭಾರತ ಹಾಗೂ ನಮ್ಮ ದೇಶದ ಸರ್ಕಾರದ ವಿರುದ್ಧ ಮಾತಾಡುತ್ತಾನೆ.  ಮುತ್ತಾತ ನೆಹರೂ 'ಹಿಂದೀ ಚೀನಿ ಭಾಯಿ ಭಾಯಿ' ಅಂದಂತೆ 'ಜಯಶಂಕರ್ ಅವರಿಗೆ ಚೀನಾದ ಬೆದರಿಕೆ ಅರ್ಥವಾಗುವುದಿಲ್ಲ' ಎಂಬಂತಹ ಅಪ್ರಬುದ್ಧ ಹೇಳಿಕೆಯನ್ನು ಅಲ್ಲಿನ ಪತ್ರಕರ್ತರ ಮುಂದೆ ನೀಡುತ್ತಾನೆ. ಅಮ್ರಿತ್ ಪಾಲ್ ಅನ್ನುವ ಖಲಿಸ್ತಾನಿ ಪೋಲಿಸರ ವಿರುದ್ಧ ದೊಂಬಿ ಎಬ್ಬಿಸಿ ಪಂಜಾಬಿನಲ್ಲಿ ಅಶಾಂತಿಗೆ ಕಾರಣವಾಗುತ್ತಾನೆ. ಉಚಿತ ಘೋಷಣೆಗಳನ್ನು ಮಾಡುವಲ್ಲಿ ನಿಸ್ಸಿಮವಾಗಿರುವ ಆಮ್ ಆದ್ಮಿ ಸರ್ಕಾರ ಪಂಜಾಬಿನಲ್ಲಿ ಇರುವುದೇ ಅನುಮಾನವಾಗಿದೆ. ಪಂಜಾಬ್ ಭಾರತದ ಗಡಿನಾಡು ಎಂಬುದು ಇಲ್ಲಿ ಸೂಕ್ಷ್ಮವಾಗಿ ನೆನಪಿಡಬೇಕಾದ ಅಂಶ. 

ಆರ್ಟಿಕಲ್ 370 ಅನ್ನು ಯಾವುದೇ ಗಲಭೆ ಅಥವಾ ಗಲಾಟೆಗೆ ಅವಕಾಶವಿಲ್ಲದೆ ರದ್ದುಗೊಳಿಸಿದ ನರೇಂದ್ರ ಮೋದಿ ಸರ್ಕಾರ ಈ ಖಲಿಸ್ತಾನಿ ಪ್ರತ್ಯೇಕತಾವಾದವನ್ನು ಹೇಗೆ ಮಟ್ಟ ಹಾಕುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಸರ್ಜಿಕಲ್ ಸ್ಟ್ರೈಕ್ ಹಾಗೂ ಏರ್ಸ್ಟ್ರೈಕ್ ಬಗ್ಗೆ ಸಾಕ್ಷಿ ಕೇಳಿದವರೆಲ್ಲಾ ಒಟ್ಟಾಗಿ 2019ರಲ್ಲಿ ಭಾರತದ ವಿರುದ್ಧ ಹಾಗೂ ಮೋದಿ ವಿರುದ್ಧ ನಿಂತ್ತಿದ್ದರು. 2024ರಲ್ಲಿ ಮೋದಿ ಹಾಗೂ ಭಾರತಕ್ಕೆ ಆಂತರಿಕವಾಗಲ್ಲದೇ ವಿದೇಶಿ ಶಕ್ತಿಗಳು 'ಕೈ' ಜೋಡಿಸುತ್ತವೆ. ಹಾಗಾಗಿ, ನಾವೆಲ್ಲರೂ ಮತ್ತೂಮ್ಮೆ ಒಟ್ಟಾಗಿ, ಮತ್ತಷ್ಟು ಗಟ್ಟಿಯಾಗಿ ನಿಲ್ಲುವ ಕಾಲ ಸನ್ನಿಹಿತವಾಗಿದೆ. 

***********************************************************

References