ಕರ್ನಾಟಕದ ಚುನಾವಣೆ ಮುಗಿದ ದಿನ ಅಂದರೆ ಎಕ್ಸಿಟ್ ಪೋಲ್ ದಿನ ಇಂಡಿಯಾ ಟುಡೆ ಒಂದು ವರದಿ ಬಿತ್ತರಿಸಿತ್ತು. ಶಾಲೆಗೆ ಹೋಗದಿರುವವರಲ್ಲಿ 52%, 12ನೇ ತರಗತಿ ಉತ್ತೀರ್ಣ ಆದವರಲ್ಲಿ 37%, ಪದವಿ ಹೊಂದಿದವರಲ್ಲಿ ಸರಾಸರಿ 34% ಹಾಗೂ ವೃತ್ತಿಪರ ಪದವಿ ಹೊಂದಿದವರಲ್ಲಿ ಕೇವಲ 29% ಅಷ್ಟು ಜನ ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ ಎಂದು. ಅದರ ಸಾರಾಂಶ ಇಷ್ಟು. ಸಮಾಜದಲ್ಲಿ ವಿದ್ಯಾವಂತರು ಹೆಚ್ಚಾದಷ್ಟು ಕಾಂಗ್ರೆಸ್ಸಿಗೆ ಬೀಳುವ ಮತಗಳು ಕಡಿಮೆ! ವಿದ್ಯೆ ಜೊತೆಗೆ ಪ್ರಜ್ಞೆ ಹೆಚ್ಚಾದಷ್ಟು ಅವರ ಮತಗಳಿಕೆಯ ಪ್ರಮಾಣ ಇನ್ನೂ ಕಮ್ಮಿಯಾಗುತ್ತದೆ. ಇದು ಹೌದಾದರೆ ಕರ್ನಾಟಕದ ಮತದಾರರಲ್ಲಿ ಅವಿದ್ಯಾವಂತರು ಹಾಗೂ ಪ್ರಜ್ಞೆ ಇಲ್ಲದವರು ಹೆಚ್ಚು ಎಂದಾಗುತ್ತದೆ. ಹೌದ? ನೋಡೋಣ.
ಕೇಂದ್ರದಲ್ಲಿ ಕಾಂಗ್ರೆಸ್ ದುರ್ಬಲವಾಗಿರಬಹುದು ಆದರೆ ದೃಢವಾದ ನಾಯಕತ್ವದ ಕಾರಣದಿಂದಾಗಿಯೇ ಕರ್ನಾಟಕದಲ್ಲಿ ಗಟ್ಟಿಯಾಗಿದೆ. ಭಾರತ್ ಜೋಡೋ ಯಾತ್ರೆ, ಮೇಕೆದಾಟು ಪಾದಯಾತ್ರೆ ಮೂಲಕ ಕಾಂಗ್ರೆಸ್ ತನ್ನ ಸಂಘಟನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿತು. ಪೇ ಸಿಎಂ ಹಾಗೂ ಸಾಕ್ಷ್ಯ ಇಲ್ಲದಿದ್ದರೂ 40% ಕಮಿಷನ್ ಸರ್ಕಾರ ಎಂದು ಪದೇ ಪದೇ ಹೇಳುತ್ತಾ, ಜಾಹಿರಾತುಗಳ ಮೂಲಕ ಜನರ ಮನಸ್ಸಿನಲ್ಲಿ ಭಾಜಪಾ ಆಡಳಿತದ ಸರ್ಕಾರ ಭ್ರಷ್ಟ ಎಂಬ ಭಾವನೆ ಮೂಡುವಂತೆ ಮಾಡಿದರು. ಉಚಿತ ಗ್ಯಾರಂಟಿಗಳ ಮೂಲಕ, ಹಳ್ಳಿಗಳಲ್ಲಿ ಗ್ಯಾರಂಟಿ ಕಾರ್ಡ್ಗಗಳಿಗೆ ಸಹಿ ಹಾಕಿಸಿಕೊಳ್ಳುವ ಮೂಲಕ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ತಿಂಗಳಿಗೆ ಮುಂಚಿತವಾಗಿಯೇ ಬಿಡುಗಡೆ ಮಾಡಿ ಜನರ ಮನಸ್ಸನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡಿತು. ಜಾತಿ ಸಮೀಕರಣ ಮಾಡುವಲ್ಲಿ ಈ ಬಾರಿ ಕಾಂಗ್ರೆಸ್ ಯಶಸ್ವಿಯಾಗಿದೆ. ಇಂಡಿಯಾ ಟುಡೇ ಅವರ ವರದಿಯನ್ನೇ ನಂಬುವುದಾದರೆ ಮುಸಲ್ಮಾನರು ಸಾರಸಗಟಾಗಿ ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ.
![]()  | 
| Caste wise vote share as per exit polls | 
ಇತ್ತ ಭಾಜಪದ ಪರಿಸ್ಥಿತಿ ತದ್ವಿರುದ್ಧ. ಕೇಂದ್ರದ ನಾಯಕತ್ವ ಗಟ್ಟಿಯಾಗಿದೆ, ಆದರೆ ರಾಜ್ಯದಲ್ಲಿ ಯಡಿಯೂರಪ್ಪ ಹೊರತು ಪಡಿಸಿ ಬಹುತೇಕರನ್ನು ಸೆಳೆಯಬಹುದಾದ ಮಾಸ್ ಲೀಡರ್ ಇಲ್ಲ ಹಾಗೂ ಅವರನ್ನು ಅವಧಿಗೂ ಮುನ್ನ ಕುರ್ಚಿಯಿಂದ ಇಳಿಸಿದ್ದು ದುಬಾರಿಯಾಯಿತು. ಸ್ಥಳೀಯ ನಾಯಕರು ಮೋದಿ ವರ್ಚಸ್ಸಿನ ಮೇಲೆ ಸಂಪೂರ್ಣ ಅವಲಂಬಿತರಾಗಿದ್ದಾರೆ. ಕಾಂಗ್ರೆಸ್ ಅವರ 40% ಕಮಿಷನ್ ಆರೋಪಕ್ಕೆ ಇಲ್ಲಿನ ನಾಯಕರ ಬಳಿ ಸಮರ್ಥ ಉತ್ತರ ಇರಲಿಲ್ಲ. ಚುನಾವಣೆಗೆ ಒಂದು ವಾರದ ಮುನ್ನ ಟಿಕೆಟ್ ಹಂಚಿಕೆ ಗದ್ದಲ ಮಧ್ಯೆ ನಾಮಕಾವಸ್ಥೆ ಎಂಬಂತೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು. ಇದು ಸಾಮಾಜಿಕ ಜಾಲತಾಣದಲ್ಲಿ ಓಡಾಡಿತೇ ಹೊರತು ಸಾಮಾನ್ಯ ಜನರಿಗೆ ಹೋಗಲಿ ಭಾಜಪಾದ ತಳಮಟ್ಟದ ಕಾರ್ಯಕರ್ತರಿಗೆ ಮನದಟ್ಟಾಗಿರುವುದು ಅನುಮಾನ! ಅಂತಿಮ ಹಂತದಲ್ಲಿ ಮುಸಲ್ಮಾನರ ಮತಗಳನ್ನು ಕ್ರೋಡಿಕರಿಸಲು ಬಜರಂಗ ದಳ ನಿಷೇಧವೆಂಬ ಖೆಡ್ಡವನ್ನು ಕಾಂಗ್ರೆಸ್ ತೋಡಿತು. ಆ ಖೆಡ್ಡಾಕ್ಕೆ ಭಾಜಪಾದ ನಾಯಕರು ಬಿದ್ದರು. ಮುಸಲ್ಮಾನರಿಗೆ ಏನೇ ಸೌಕರ್ಯ, ಸೌಲಭ್ಯ ಕೊಟ್ಟರೂ ಅವರಿಗೆ ಅಂತಿಮವಾಗಿ ಮುಖ್ಯ ಅನ್ನಿಸುವುದು ಅವರ ಮತ ಮಾತ್ರ. ರಾಜ್ಯ ಸರ್ಕಾರಕ್ಕೆ ಇಂತಹ ಸಂಘಟನೆಯನ್ನು ನಿಷೇಧ ಮಾಡುವ ಹಕ್ಕಿಲ್ಲ, ಅದು ಮಾಡಬೇಕಾಗಿರುವುದು ಕೇಂದ್ರ ಸರ್ಕಾರ ಎಂಬುದನ್ನು ಸಹ ಯೋಚಿಸದೆ ಮುಸಲ್ಮಾನರು ಕಾಂಗ್ರೆಸ್ ಪರ ವಾಲಿದರು.
ರಾಹುಲ್ ಗಾಂಧಿಯ ಸಂಸತ್ ಸದಸ್ಯತ್ವ ನಿಷೇಧ, ದಲಿತ ಮುಖಂಡ ಅಖಂಡ ಶ್ರೀನಿವಾಸ ಮೂರ್ತಿಯವರಿಗಾದ ಅನ್ಯಾಯಗಳನ್ನು ಭಾಜಪಾ ಚುನಾವಣ ವಿಷಯವಾಗಿ ತೆಗೆದುಕೊಳ್ಳಲೇ ಇಲ್ಲ. ರಾಜ್ಯದಿಂದ 25 ಸಂಸದರು ಅಯ್ಕೆಯಾಗಿದ್ದಾರಾದರೂ ಚುನಾವಣ ಪ್ರಚಾರದಲ್ಲಿ ಬಹುತೇಕರು ತೊಡಿಗಿಸಿಕೊಳ್ಳಲೇ ಇಲ್ಲ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸ್ಥಳಿಯ ನಾಯಕರ ಅಹಂಕಾರ, ಕಾರ್ಯಕರ್ತರೆಡೆಗಿನ ನಿರ್ಲಕ್ಷ್ಯತನವನ್ನು ಹೊರಗೆಡೆವಿತು. ಮೂರು ವರ್ಷಗಳ ತಥಾಕತಿತ 'ಕಠಿಣ ಕ್ರಮ' ಮಾನ್ಯ ಗೃಹ ಸಚಿವರನ್ನು ಜನಸಾಮಾನ್ಯರ ದೃಷ್ಠಿಯಲ್ಲಿ ಜೋಕರ್ ಆಗಿಸಿತು. ಪಠ್ಯಪುಸ್ತಕ ಪರೀಷ್ಕರಣೆ ವಿಚಾರವನ್ನು ಸರ್ಕಾರ ನಿರ್ವಹಣೆ ಮಾಡಿದ ರೀತಿ ಯಾರಿಗೂ ಸಮಾಧಾನ ತರುವಂತಹುದಾಗಿರಲೇ ಇಲ್ಲ. ಬೆಲೆ ಏರಿಕೆ ಆಗಿರುವುದಂತೂ ಸತ್ಯ. ಆದರೆ ಅದರ ಹಿಂದಿನ ಕಾರಣ ಹಾಗೂ ಅನಿವಾರ್ಯತೆಯನ್ನು ಭಾಜಪಾದ ಯಾವ ನಾಯಕನೂ ಜನಸಾಮಾನ್ಯರಿಗೆ ಅರ್ಥ ಮಾಡಿಸುವ ಪ್ರಯತ್ನ ಸಹ ಮಾಡಲಿಲ್ಲ!
ಇನ್ನು ಜನ ಸಾಮಾನ್ಯರ ವಿಚಾರಕ್ಕೆ ಬರೋಣ. ಸಿದ್ಧಾಂತ, ಧರ್ಮ, ಅಭಿವೃದ್ಧಿ, ರಾಜ್ಯದ ಆರ್ಥಿಕ ಸ್ಥಿರತೆ ಅನ್ನುವುದೆಲ್ಲವನ್ನು ಬದಿಗೆ ಸರಿಸಿ ಸ್ವಾರ್ಥಪರವಾದ ಜಾತಿ, ಮಿಸಲಾತಿ, ಹಣ ಹಾಗೂ ಬಿಟ್ಟಿ ಭಾಗ್ಯಗಳನ್ನು ಜನ ಆಯ್ಕೆ ಮಾಡಿದರು; ಅದ್ಭುತ! ಜಾತ್ಯಾತೀಯತೆ, ಸರ್ವಜನಾಂಗದ ಶಾಂತಿಯ ತೋಟ ಅಂತ ಏನೇ ಹೇಳಿದರೂ ಕಾಂಗ್ರೆಸ್ ನವರ ಪರಮ ಪವಿತ್ರ ಅಜೆಂಡಾ 'ಮುಸಲ್ಮಾನರ ಓಲೈಕೆ'! ಹಿಂದೂಗಳು ಅವರಿಗೆ ಮತ ಹಾಕಲಿ, ಬಿಡಲಿ ಅವರು ಓಲೈಕೆ ರಾಜಕಾರಣ ಮಾಡಿಯೇ ಮಾಡುತ್ತಾರೆ. ಇದನ್ನು ಅರ್ಥೈಸಿಕೊಳ್ಳದ ಹಿಂದೂಗಳು ಭಾಜಪಾದ ನಾಯರಿಗೆ ಪಾಠ ಕಲಿಸುತ್ತೇವೆ ಎಂದು ಮುಂದಾದರು. ಭಾಜಪಾದ ನಾಯಕರು ಹಿಂದೂಗಳನ್ನು 'ಟೇಕನ್ ಫಾರ್ ಗ್ರಾಂಟೆಡ್' ಅಂದುಕೊಂಡರು. ಇಬ್ಬರ ನಡುವೆ ಕಾಂಗ್ರೆಸ್ ಗೆಲುವು ಸಾಧಿಸಿತು. ಕೊಲೆ ಆಪಾದನೆ ಮೇಲೆ ಧಾರವಾಡಕ್ಕೆ ಹೋಗಬಾರದೆಂದು ಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡ ವಿನಯ್ ಕುಲಕರ್ಣಿಯನ್ನು, ಹಿಂದೂ ಪದದ ಬಗ್ಗೆ ಕೆಟ್ಟದಾಗಿ ಮಾತಾಡಿದ ಸತೀಶ್ ಜಾರಕೀಹೊಳಿಯನ್ನು ಗೆಲ್ಲಿಸಿದ, ಕರೋನಾ ಸಮಯದಲ್ಲಿ ಕೆಲಸ ಮಾಡಿದ ರೇಣುಕಾಚಾರ್ಯ ಅವರನ್ನು ಸೋಲಿಸಿದ ಜನತೆಗೆ ಧನ್ಯವಾದ ಹೇಳದೆ ಬೇರೆ ವಿಧಿಯಿಲ್ಲ. ನಮ್ಮ ಸಮುದಾಯಕ್ಕೆ ಸೇರಿದ ಒಬ್ಬರನ್ನು ಮಂತ್ರಿಯೋ ಮುಖ್ಯಮಂತ್ರಿಯೋ ಮಾಡಿದರೆ ನಾವು ಉದ್ದಾರವಾಗುತ್ತೇವೆ ಅನ್ನುವ ಜನರ ಬುದ್ಧಿವಂತಿಕೆಗೆ ಶರಣು.
ಅಮಿತ್ ಷಾ ರನ್ನು ಚಾಣಕ್ಯ ಅನ್ನುತ್ತಿದ್ದರು. ಆದರೆ ಡಿಕೆಶಿ ಹಾಗೂ ಸ್ಟ್ರಾಟಜಿಸ್ಟ್ ಸುನಿಲ್ ಕನುಗೋಲು ಅವರುಗಳ ಮುಂದೆ ಅಮಿತ್ ಷಾ ರ ಆಟ ಕರ್ನಾಟಕದಲ್ಲಿ ನಡೆಯಲಿಲ್ಲ. ಈತ ಸಧ್ಯ ಕಾಂಗ್ರೆಸ್ ಪಾಲಿನ ಕಣ್ಮಣಿ. ವಿಚಾರ ಸುಳ್ಳಾದರೂ ಜನಾಭಿಪ್ರಾಯ ಮೂಡಿಸುವ ನಿಪುಣ ಈತ. ಕಳೆದ ಒಂದೆರಡು ತಿಂಗಳಿಂದ ಪುಲ್ವಾಮಾ ಘಟನೆಯನ್ನು ಕೇಂದ್ರ ಸರ್ಕಾರವೇ ಮಾಡಿಸಿದ್ದು ಎಂಬ ಅಭಿಪ್ರಾಯ ಮೂಡಿಸುವ ಪ್ರಯತ್ನ ಪ್ರಾರಂಭವಾಗಿದೆ. ಇದನ್ನು ಎಚ್ಚರಿಕೆಯಿಂದ ನಿಭಾಯಿಸದಿದ್ದರೆ ಅಪಾಯ ಖಂಡಿತ!
ಕರ್ನಾಟಕದ ಈ ಚುನಾವಣೆ ಭಾಜಪಾದ ಕೇಂದ್ರ ಹಾಗೂ ರಾಜ್ಯ ನಾಯಕರಿಗೆ ಸ್ಥಳೀಯ ಸಮಸ್ಯೆ ಹಾಗೂ ನಾಯಕತ್ವದ ಮಹತ್ವದ ಕುರಿತು ಒಂದು ಪಾಠ. ವಿರೋಧ ಪಕ್ಷಗಳಿಗೆ ಒಂದು ಲೈಫ್ ಲೈನ್. ಒಟ್ಟಾರೆ ಜನರ ತೀರ್ಪನ್ನು ಗಮನಿಸದರೆ ಮಾ ಹಿರಣ್ಣಯ್ಯನವರ ನಾಟಕದ ಒಂದು ಸಂಭಾಷಣೆ ನೆನಪಾಗುತ್ತಿದೆ - 'ದುಡ್ಡು ದುಗ್ಗಾಣಿ ಅಂದರೆ ನಾ ಮುದುಕ, ನನ್ನ ಮಗ ಹುಡುಗ ಅಂತಾರೆ. ಅದೇ ಪುಗ್ಸಟ್ಟೆ ಅಂದರೆ ನಂಗೂ ಇರಲಿ ನನ್ನ ಮಗಂಗೂ ಇರಲಿ ಅಂತಾರೆ'. ಈ ಸಂಭಾಷಣೆ ಬರೆದು 50 ವರ್ಷದ ಮೇಲಾಗಿದೆ ಆದರೆ ಸಮಾಜ ಈಗಲೂ ಅಂತಹುದೇ ಪರಿಸ್ಥಿತಿಯಲ್ಲಿದೆ ಎಂಬುದು ವಿಷಾಧನೀಯ.
