December 23, 2024

ಕಣ್ಮರೆ

ಅರುಣಾಚಲದ ಈ ಕೊರೆಯುವ ಚಳಿಯಲ್ಲಿ ಬೆಂಕಿ ಹಾಕಿ ಮೈ ಕಾಯಿಸಿಕೊಳ್ಳುವುದು ಅತ್ಯಂತ ಹಿತಕರ. ಪ್ರವಾಸಕ್ಕೆ ಬಂದ ಯವ್ವನದ ಬಿಸಿ ರಕ್ತದ ಹುಡುಗರು ಬೆಂಕಿಯ ಸುತ್ತ ಸುತ್ತುತ್ತಾ, ಕೈಯಲ್ಲಿ ಒಂದು ಬಾಟಲಿ ಹಿಡಿದು ಆಗಾಗ ವೈನ್ ಹೀರುತ್ತಿದ್ದರು. ಆ ಚಳಿಗೆ ವೈನ್ ಕುಡಿಯುವುದು ಸೂಕ್ತ; ಆದರೆ ನನಗದು ಯಾಕೋ ಸರಿ ಬರುತ್ತಿರಲಿಲ್ಲ. ಹದಿನಾಲ್ಕು ವರ್ಷಗಳ ಹಿಂದೆ ಇಲ್ಲಿಗೆ ಸ್ನೇಹಿತರ ಜೊತೆ ಬಂದಾಗ ಒಂದು ಗುಟುಕು ಹೀರಿದ್ದೆ. ಗಂಟಲು, ಎದೆ ಎಲ್ಲ ಬಿಸಿಯಾಯ್ತು ಆದರೆ ನನಗೆ ಅದರ ರುಚಿ ಸಹ್ಯವಾಗಲಿಲ್ಲ. ಅದೇ ಮೊದಲು, ಅದೇ ಕೊನೆ ಮತ್ತೆಂದಿಗೂ ವೈನ್ ಮುಟ್ಟಲಿಲ್ಲ. ಆದರೆ ಅರುಣಾಚಲಕ್ಕೆ ಬರುವಾಗ ಮಾತ್ರ ಊರಿಂದಲೇ ಒಂದೆರಡು ಕ್ರೇಟ್ ಬೀಯರ್ ತೆಗೆದುಕೊಂಡು ಬರುತ್ತೇನೆ. ಅದು ನಿರ್ಧಿಷ್ಟವಾಗಿ ಒಂದೇ ಬ್ರಾಂಡ್; Heineken. ಅದನ್ನು ಹೀರುತ್ತಾ ನಾನೇ ಬರೆದ ಪತ್ರವನ್ನು ನೋಡುವುದು ಒಂದು ದುರಭ್ಯಾಸ ಅಥವಾ ನಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಅನ್ನಬಹುದು. ಅದು ಗಮ್ಯಳಿಗೆ ಬರೆದ, ಅವಳಿಗೆ ತಲುಪಿಸದೆ ನನ್ನಲೇ ಉಳಿದ ನಿವೇದನಾ ಪತ್ರ.

ನಿವೇದನಾ!

ಪ್ರತಿ ಬಾರಿ ಈ ಪತ್ರ ನೋಡಿದಾಗಲೆಲ್ಲಾ ಗಮ್ಯಳನ್ನು ನಾನು ಆರಾಧಿಸಿದ್ದು, ಅವಳ ಜೊತೆಗಿನ ಜೀವನವನ್ನು ಕಲ್ಪಿಸಿಕೊಂಡಿದ್ದು, ಅವಳ ಮೇಲಿನ ಪ್ರೀತಿಯನ್ನು ಹೇಳುವ ಸಲುವಾಗಿ ಮಾನಸಿಕವಾಗಿ ಅಣಿಯಾದದ್ದು, ಈ ಪತ್ರವನ್ನು ಬರೆಯಲು ಪಟ್ಟ ಪಾಡು.. ಎಲ್ಲವೂ ನೆನಪಿನ ಪುಟಗಳಿಂದ ಎದ್ದು ಬಂದು ನನ್ನನ್ನು ಬಾಧಿಸುತ್ತದೆ. ಈಗಿನ ಪೀಳಿಗೆಯ ಅನೇಕರಿಗೆ ಪ್ರೀತಿಸಿದವರೊಟ್ಟಿಗೆ ಮದುವೆ ಆಗಬೇಕೆಂದೇನಿಲ್ಲ. ಪ್ರೀತಿ ಮಾಡುವ ಸಂದರ್ಭದಲ್ಲಿ long term ಜೀವನದ ಬಗ್ಗೆ ಚಿಂತನೆಯಿಲ್ಲ, ಮನೆಯಲ್ಲಿ ತಂದೆ ತಾಯಂದಿರ ಒತ್ತಡ ನಿಭಾಯಿಸಲಾಗುವುದಿಲ್ಲ, ಇತರ ಯಾವುದೋ ಪರಿಸ್ಥಿತಿಯ ಕಾರಣದಿಂದಾಗಿ ಪ್ರೀತಿಸಿದವರನ್ನು ಹೊರತು ಪಡಿಸಿ ಇನ್ನೊಬ್ಬರನ್ನು ಮದುವೆಯಾಗುವುದು ಸಾಮಾನ್ಯ. ದುರಾದೃಷ್ಟವಶಾತ್ ಸರ್ವಮಾನ್ಯವೂ ಆಗಿದೆ! ಅವರ ಪ್ರಕಾರ ಅದು practical, go with the flow, ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಸಮಾಧಾನಕರ ಸಿದ್ಧಾಂತ. ಅವರ ನಂಬಿಕೆಯ ತಪ್ಪು ಒಪ್ಪುಗಳ ವಿಮರ್ಶೆಯ ಅವಶ್ಯಕತೆ ನನಗಿಲ್ಲ, ವಿಮರ್ಶೆ ಮಾಡುವಷ್ಟು ಶಕ್ತನು ನಾನಲ್ಲ. ಆದರೆ ನನಗೆ ಇಷ್ಟು ವರ್ಷಗಳಾದರೂ ಗಮ್ಯಳ ಮೇಲಿನ ಪ್ರೀತಿ, ಅವಳ ನೆನಪು ಒಂದಿನಿತು ಮಾಸಿಲ್ಲ. ಅವಳ ನೆನಪಿಗಾಗಿಯೇ ಈ ಪತ್ರ ಇಂದಿಗೂ ನನ್ನ ಬಳಿ ಜೋಪಾನವಾಗಿದೆ. 

ಅರಳಿದ ಹೂವು ಗರ್ಭಗುಡಿಯನ್ನು ತಲುಪಿ, ದೇವರಿಗೆ ಅರ್ಪಣೆಯಾದಾಗ ಮಾತ್ರ ಅದರ ಸಾರ್ಥಕತೆ. ಅದೇ ರೀತಿ ಮನಸಲ್ಲಿ ಮೂಡಿದ ಪ್ರೀತಿ ನಿವೇದನೆಯಾಗಿ, ಮನಸ್ಸುಗಳು ಒಂದಾದಾಗ ಮಾತ್ರ ಜೀವನ ಸಾರ್ಥಕ. ಇಲ್ಲವಾದಲ್ಲಿ ಅದು ಮಸಣದ ಹೂವಂತೆ. ಆ ಮಸಣದ ಹೂವಿನ ಕುರುಹೇ ಈ ಪತ್ರ! ಗಮ್ಯಳ ಮೇಲಿನ ಪ್ರೀತಿ ಯಾವಾಗ, ಹೇಗೆ ಅಂಕುರವಾಯ್ತು ಎಂಬುದಕ್ಕೆ ನನ್ನ ಬಳಿ ಉತ್ತರವಿಲ್ಲ. ಆದರೆ ಅವಳಿಗೆ ನನ್ನ ಭಾವನೆ ಹೇಳಬೇಕು ಅನ್ನುವ ತುಡಿತ, ಒತ್ತಡ ಮಾತ್ರ ಇಂದಿಗೂ ನನ್ನಲ್ಲಿ ಜೀವಂತವಾಗಿದೆ.
 
ಗಮ್ಯಳ ಮೇಲೆ ಪ್ರೀತಿಯಾದಾಗ ನನ್ನದು ಅವಳದು ಒಂದುವರೆಯಿಂದ ಎರಡು ವರ್ಷಗಳ ಪರಿಚಯ. ಆ ವರ್ಷ ಕಾಲೇಜಿಗೆ ಹೊಸ ಬ್ಯಾಚ್ ಇನ್ನೂ ಬಂದಿರಲಿಲ್ಲ. ವಿದ್ಯಾರ್ಥಿಗಳಿಲ್ಲದ ಸಮಯದಲ್ಲಿ ಕಾಲೇಜಿನಲ್ಲಿ ಸಾಮಾನ್ಯವಾಗಿ ಲೈಬ್ರರಿಯಲ್ಲಿ ಇರುತ್ತಿದ್ದ ನಾನು ಅಂದು ವಿಜ್ಞಾನ ವಿಭಾಗದ ಕಡೆಗೆ ಹೋದೆ. ಕಾಲೇಜಿನ ಸಾಂಸ್ಕೃತಿಕ ಪ್ರತಿನಿಧಿಯಾದ ನಾನು ಎಲ್ಲಾ ವಿಭಾಗಗಳಿಗೆ ಹೋಗುವ ಮತ್ತು ಅಲ್ಲಿನ ಉಪನ್ಯಾಸಕರನ್ನು, ವಿದ್ಯಾರ್ಥಿಗಳನ್ನು ಸಂಪರ್ಕ ಮಾಡುವ ಸ್ವಾತಂತ್ರ್ಯವಿತ್ತು. ಗಮ್ಯ ನಮ್ಮ ಕಾಲೇಜಿನ ಸಾಂಸ್ಕೃತಿಕ ತಂಡದಲ್ಲಿದ್ದಳು. ಆ ವರ್ಷ ನಡೆಯಬೇಕಿದ್ದ ಕಾರ್ಯಕ್ರಮಗಳು ಹಾಗೂ ನಾಟಕದ ಬಗ್ಗೆ ಚರ್ಚಿಸಿ ನಂತರ ನನ್ನ ಪ್ರೀತಿಯನ್ನು ಹೇಳುವ ಯೋಚನೆ ನನ್ನದು. ಆ ವರ್ಷ ಕಾಲೇಜಿನಲ್ಲಿ ನಾನೇ ಬರೆದಿದ್ದ 'ಮುನ್ನೆಲೆ' ನಾಟಕವನ್ನು ಪ್ರದರ್ಶಿಸುವುದು ಎಂದಾಗಿತ್ತು. ಮುನ್ನೆಲೆ ಒಂದು ಪ್ರೇಮಕತೆಯಾಗಿತ್ತು. ಅಂದು ಮುನ್ನೆಲೆ ನಾಟಕದ ಕುರಿತು ಗಮ್ಯಳೊಂದಿಗೆ ಮಾತಾಡಿದೆ. ನಾಟಕ ತಂಡದ ನಿರ್ವಹಣೆ ಹಾಗೂ ಸಂಭಾಷಣೆ ಗಮ್ಯ ಮಾಡಬೇಕಿತ್ತು. ಇತರರಿಗೆ ಹೇಳುವಂತೆ ಗಮ್ಯಳಿಗೆ ಕತೆ ಹೇಳಲು ನನಗೆ ಸಾಧ್ಯವಾಗಲಿಲ್ಲ. ಅವಳಿಗೆ ಕತೆಯಷ್ಟೇ ಅಲ್ಲದೇ ಕೆಲವು ಸಂಭಾಷಣೆಯನ್ನೂ ಸಹ ಹೇಳುತ್ತಿದ್ದೆ. ಆದರೆ ಆ ವಾಕ್ಯಗಳು ಗಮ್ಯಳ ಮೇಲಿನ ನನ್ನ ಸ್ವಂತ ಭಾವನೆಯಾಗಿತ್ತು. ಹಾಗೆಂದು ನಾನೆಂದು ಅವಳಿಗೆ ಹೇಳಲಾಗಲಿಲ್ಲ, ಅವಳಿಗೂ ಅರ್ಥವಾಗಲಿಲ್ಲ. ಗಮ್ಯ ನನ್ನ ಮಾತುಗಳನ್ನು ಸಂಭಾಷಣೆ ಎಂದೇ ಭಾವಿಸಿದಳು ಹಾಗೂ ನಾಟಕದಲ್ಲೂ ಪ್ರಯೋಗಿಸಿದಳು. 

ನಾಟಕದ ಚರ್ಚೆಯ ನಂತರ ನಾನು ಹೇಳಬೇಕೆಂದಿದ್ದ ವಿಷಯವನ್ನಂದು ಪ್ರಸ್ತಾಪಿಸಲೇ ಇಲ್ಲ. ನಾಟಕದ ಮಾತು ಕೊನೆಗೆ ಬರುತ್ತಿದ್ದಂತೆ ನನ್ನ ಉಸಿರಿನ ಏರಿಳಿತದಲ್ಲಿ ವ್ಯತ್ಯಾಸವಾಗುತ್ತಿತ್ತು. ಅದನ್ನು ತೋರಿಸಿಕೊಳ್ಳಬಾರದೆಂದು ಆಗಾಗ ನೀರು ಕುಡಿಯುತ್ತಿದ್ದೆ. ಎದುರು ಶಾಂತವಾಗಿ ಕಂಡರೂ ಹೃದಯದ ಬಡಿತ ಹೆಚ್ಚಿತ್ತು. ಜೊತೆಗೆ ಭಯವೂ ಆಗುತ್ತಿತ್ತು. ನನ್ನಲ್ಲಿನ ಭಯ ಈಗಿನ ಪೀಳಿಗೆಯವರಿಗೆ ಅಸಹಜ. ಕಾರಣವಿಷ್ಟೇ; ಗಮ್ಯಳನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಗಮ್ಯ ನನಗೆ ಆಯ್ಕೆಯಾಗಿರಲಿಲ್ಲ, ನನ್ನ ಮನಸ್ಸನ್ನು ಸಂಪೂರ್ಣ ಆವರಿಸಿದ್ದಳು. ಹಾಗಾಗಿ ನನ್ನ ಪ್ರೀತಿಯನ್ನು ಹೇಳದೆ ಬೇರೆ ಮಾರ್ಗವಿರಲಿಲ್ಲ, ಆದರೆ ಹೇಳುವ ಧೈರ್ಯವೂ ಇರಲಿಲ್ಲ! ಅದಕ್ಕೆಂದೇ ನನ್ನದೇ ಆದ ಒಂದು ಉಪಾಯ ಮಾಡಿದೆ. ನಾಟಕದಲ್ಲಿ ಕಥಾನಾಯಕ ತನ್ನ ಪ್ರೇಯಸಿಗೆ ಪತ್ರ ನೀಡುವ ಪ್ರಸಂಗವನ್ನು ತಂದೆ. ಆ ಪತ್ರದ ಸ್ಕ್ರಿಪ್ಟ್ ಜೊತೆಗೆ ನನ್ನ ನಿವೇದನಾ ಪತ್ರವನ್ನು ಗಮ್ಯಳಿಗೆ ನೀಡುವ ಯೋಚನೆ ನನ್ನದು. ಇಂದು ಆ ಉಪಾಯ ಬಾಲಿಷವಾಗಿ ಕಂಡೀತು ಆದರೆ, ಅಂದು ಅದೇ ಸರಿ ಎಂಬ ಭಾವವಿತ್ತು. ಅದರಂತೆ ಕತೆಯನ್ನು ಬದಲಾಯಿಸಿ, ದೀರ್ಘವಾದ ಪತ್ರವನ್ನು ಅರ್ಧ ಗಂಟೆಯಲ್ಲಿ ಬರೆದೆ. ನಂತರ ನೈಜವಾದ ಪತ್ರವನ್ನು ಬರೆಯಲು ಮುಂದಾದೆ. ಅವಳ ಮೇಲಿದ್ದ ಭಾವವನ್ನೆಲ್ಲಾ ಬರೆಯುವ ಯೋಚನೆ ಒಂದೆಡೆ, ಅವಳು ಏನಂದುಕೊಂಡಾಳೋ ಎಂಬ ಒತ್ತಡ ಮತ್ತೊಂದೆಡೆ. ಇದೇ ಕಾರಣದಿಂದ ಪತ್ರ ಬರೆದು ಮುಗಿಸಲು ತೆಗೆದುಕೊಂಡ ಅವಧಿ ಬರೋಬ್ಬರಿ ಎರಡುವರೆ ಗಂಟೆ!

ಮಾರನೇ ದಿವಸ ಕತೆಯ ಸ್ವರೂಪದ ಬದಲಾವಣೆ ಹಾಗೂ ಪತ್ರದ ವಿಷಯ ಹೇಳಿದಾಗ ಎಲ್ಲರೂ ಖುಷಿಪಟ್ಟರು. ನನ್ನ ಗಮನ ಮಾತ್ರ ಗಮ್ಯಳ ಕಡೆಯಿತ್ತು. ಅವಳು ಸಹ ಖುಷಿಪಟ್ಟಳು. ನಾಟಕದ ಭಾಗವೇನೋ ಮುಗಿಯಿತು ಆದರೆ ನೈಜವಾದ ಪತ್ರ ಹೊರತರಲೇ ಇಲ್ಲ. ಗಮ್ಯ ನಟನಾ ತಂಡವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಳು. ನಾಟಕದ ಕರ್ತೃ ನಾನಾದರೂ ನನ್ನ ಗಮನವೆಲ್ಲಾ ಗಮ್ಯಳೆಡೆಗೆ! ನಾಟಕದ ಅಭ್ಯಾಸ ನಡೆಯುವಾಗಲೂ ನಾಯಕನ ಸಂಭಾಷಣೆಯಲ್ಲಿ ಅನೇಕ ಸುಧಾರಣೆಗಳನ್ನು ತಂದೆ. ಆ ಮಾತುಗಳು ಸಹ ಗಮ್ಯಳಿಗೇ ಆಗಿತ್ತು ಆದರದು ಅವಳಿಗೆ ಎಂದು ತಿಳಿಯಲಿಲ್ಲ, ನಾನು ತಿಳಿಸುವಷ್ಟು ಶಕ್ತನೂ ಆಗಿರಲಿಲ್ಲ.

ಮೂರು ತಿಂಗಳ ನಂತರ ಕಾಲೇಜಿನಲ್ಲಿ ನಾಟಕದ ಪ್ರದರ್ಶನ ಅದ್ಭುತವಾಗಿ ಮೂಡಿಬಂತು. ಅತಿಥಿಗಳು, ಪ್ರಾಂಶುಪಾಲರು ನಾಟಕದ ಕತೆ ಹಾಗೂ ಸಂಭಾಷಣೆಯನ್ನು ಬಹಳವಾಗಿ ಪ್ರಶಂಶಿಸಿದರು. ನಾಯಕನ ಸಂಭಾಷಣೆ ಬಹುತೇಕ ನನ್ನದು ಮತ್ತು ಇತರ ಪಾತ್ರಗಳ ಸಂಭಾಷಣೆ ಗಮ್ಯಳದ್ದು. ಅದರ ವಿಚಾರವಾಗಿ ನನಗೆ ಬಹಳಷ್ಟು ಸಂಭ್ರಮವಿತ್ತು. ಇದೇ ಸಂಭ್ರಮದಲ್ಲಿ ಪತ್ರವನ್ನು ಕೊಡಬಹುದಿದ್ದು ಆದರೆ ಸಭಾ ಮರ್ಯಾದೆ ನನ್ನನ್ನು ಕಟ್ಟಿಹಾಕಿತ್ತು. ಸಭಾ ಮರ್ಯಾದೆ ಒಂದೆಡೆಯಾದರೆ ನನ್ನಲ್ಲಿ ಧೈರ್ಯವೂ ಇರಲಿಲ್ಲ!

ಇದಾದ ಕೆಲವು ದಿನಗಳ ನಂತರ ಗಮ್ಯ ನನ್ನನ್ನೇ ಹುಡುಕಿ ಬಂದಳು. ನಾಟಕ, ಅದಕ್ಕೆ ದೊರೆತ ಪ್ರಶಂಸೆ ಕುರಿತ ಮಾತುಗಳು ಮೊದಲ್ಗೊಂಡು ನಂತರ ನಮ್ಮ ಮಾತು ವಯ್ಯಕ್ತಿಕವಾಯ್ತು. 'ಏನಿರಬಹುದು?' ಎಂಬ ಕುತೂಹಲವಿತ್ತು ಆದರೆ ಅವಳ ಮಾತುಗಳಿಗೆ ನನ್ನ ಪ್ರತಿಕ್ರಿಯೆ ಉತ್ಸಾಹದಾಯಕವಾಗಿರಲಿಲ್ಲ. ನಾನು ಗಮನಿಸಿದಂತೆ ಅವಳ ಮುಖದ ಮೇಲೆ ಎಂದಿಗಿಂತ ಹೆಚ್ಚಿನ ಉತ್ಸಾಹ ಕಾಣಿಸುತ್ತಿತ್ತು. ಅವಳ ಆ ಸಂಭ್ರಮ ಹಾಗೂ ಉತ್ಸಾಹ ನನ್ನ ಆಸೆ ಹಾಗೂ ಜೀವದ ಗೆಳೆತನಕ್ಕೆ ಕೊಳ್ಳಿಯಾಗಿತ್ತು. ಗಮ್ಯ ತನ್ನ ಮದುವೆಗೆ ನನ್ನನ್ನು ಆಮಂತ್ರಿಸಲು ಬಂದಿದ್ದಳು! ಅವಳ ವಿನಯತೆ, ಮದುವೆಗೆ ಬರಲೇಬೇಕೆಂಬ ಭಾವ ತುಂಬಿದ ಮಾತುಗಳು ನನ್ನನ್ನು ಇರಿಯುತ್ತಿತ್ತು. ಮುಖ ಹಾರೈಕೆಯ ಮುಖವಾಡ ಧರಿಸಿದರೆ ಮನಸ್ಸಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿತ್ತು. ಮುಖ ಮನಸ್ಸಿನ ಕನ್ನಡಿ; ನನ್ನ ಭಾವನೆಯಲ್ಲಾದ ಬದಲಾವಣೆಯನ್ನು ಗಮ್ಯ ಗಮನಿಸಿದಳು. ನಾನು ಎಚ್ಚೆತ್ತು ನನ್ನನ್ನು ಆ ಕ್ಷಣದಲ್ಲಿ ಸ್ಥಿಮಿತಕ್ಕೆ ತಂದುಕೊಂಡೆ. ನಾಟಕೀಯವಾಗಿ ಖುಷಿಪಟ್ಟು, ಮನಸಾರೆ ಹಾರೈಸಿದೆ. ಅವಳು ಮದುವೆ ದಿನಾಂಕ, ಮಹೂರ್ತದ ಸಮಯ, ಸ್ಥಳ ಎಲ್ಲವೂ ಹೇಳಿ ಬೀಳ್ಕೊಟ್ಟಳು. ಅದಾವುದರ ಪರಿವೇ ಇಲ್ಲದೆ ಗಮ್ಯ ತಲುಪದ, ಎದೆಯ ಜೇಬಲ್ಲಿದ್ದ ಪತ್ರವನ್ನು ಸವರುತ್ತಿದ್ದೆ! ನಂತರ ಅವಳ ಮದುವೆ ಸಂದರ್ಭದಲ್ಲಿಯೇ ನಾನು ಆ ಕಾಲೇಜನ್ನು ಬಿಟ್ಟು ಹೊರಟೆ. ಮತ್ತೆಂದು ನನ್ನ ಗಮ್ಯಳ ಭೇಟಿಯಾಗಲೇ ಇಲ್ಲ.
 
ಇಷ್ಟು ವರ್ಷಗಳಾದರೂ ಪತ್ರವನ್ನು ಓದಿದಾಗ ಗಮ್ಯಳ ಬಗೆಗಿನ ಅನೇಕ ನೆನಪುಗಳು ನನ್ನನ್ನು ಬಾಧಿಸುತ್ತಲೇ ಇದೆ. ಅವಳ ನೆನಪಿನ ಎದುರು ಬಿಯರ್ ಏನು ಕೆಲಸ ಮಾಡುತ್ತಿರಲಿಲ್ಲ. ಅಂದು ಪತ್ರ ಬರೆಯುವಾಗ ನನ್ನೊಳಗೆ ಉಕ್ಕಿದ ಭಾವ, ಒತ್ತಡಗಳೆಲ್ಲವೂ ಆ ಸಾಲುಗಳನ್ನು ಓದುವಾಗ ಇಂದು ಸಹ ಪುನರಾವರ್ತನೆಯಾಗುತ್ತದೆ. ನನ್ನ ಪ್ರೀತಿಯನ್ನು ಹೇಳಿಕೊಳ್ಳಲಿಲ್ಲವೆಂಬ ಖೇದ ಇಂದಿಗೂ ನನ್ನಲ್ಲಿದೆ.

ಅಂದು ಅಷ್ಟೆಲ್ಲಾ ಭಾವೋದ್ವೇಗ, ಒತ್ತಡದ ನಡುವೆ ನಾನು ಬರೆದದ್ದು ಎರಡೇ ಸಾಲುಗಳು. ಆದರೆ ಅದರಲ್ಲಿ ಅವ್ಯಕ್ತವಾದ ಭಾವ ಮಾತ್ರ ಅನಂತವಾಗಿತ್ತು. ಹೇಳಬೇಕಿತ್ತು, ಹೇಳಬಯಸಿದ್ದು..
 
"ನಿನ್ನ ಬಾಳಿನ ಬೆಳಕಾಗುವೆ ನಾ..
ನನ್ನ ಮನಸ್ಸಿನ ಶಾಂತಿ ನೀನಾಗು ಬಾ.."

November 30, 2024

ಸೂರ್ಯಾಸ್ತ

ನಾನಾಯ್ತು ನನ್ನ ಕೆಲಸವಾಯ್ತು ಅನ್ನುವುದು ನನ್ನ ಸ್ವಭಾವ. ಅಂದು; ಅಂದರೆ ಕೆಲವು ವರ್ಷಗಳ ಹಿಂದಿನ ಮಾತು; ಆಫೀಸಲ್ಲಿ ನನ್ನ ಪಾಡಿಗೆ ನಾನು ಕೆಲಸದಲ್ಲಿ ನಿರತನಾಗಿದ್ದೆ. ವಾಡಿಕೆಯಂತೆ ಅಂದು ಸಹ ನನ್ನ ಜಾಗಕ್ಕೆ ಟೀ ತೆಗೆದುಕೊಂಡು ಬಂದು ಕೆಲಸ ಮುಂದುವರೆಸಿದೆ. ಬಿಸಿ ಬಿಸಿ ಚಹಾ ಗಂಟಲಿಗೆ ಹಿತವಾಗಿತ್ತು ಆದರೆ ಕೆಲಸದ ಕಾರಣ ಮನಸ್ಸಿಗೆ ಕಸಿವಿಸಿ ಆಗುತ್ತಿತ್ತು. ಲಂಡನ್ನಿನ ಸಹೋದ್ಯೋಗಗಳು ಬರೆದಿದ್ದ ಸಾಫ್ಟವೇರ್ ಡಿಸೈನ್ ಮತ್ತು ಕೋಡ್ ನೋಡುತ್ತಿದ್ದೆ. ಹೇಳೋದು ವೇದಾಂತ, ತಿನ್ನೋದು ಬದನೇಕಾಯಿ - ಅನ್ನುವಂತೆ ಜಗತ್ತಿಗೆ ಪಾಠ ಹೇಳುವವರು ಮಾಡಿರುವ ಡಿಸೈನ್ ಹಾಗೂ ಕೋಡ್ ಸಾಕ್ಷಾತ್ ಅಯೋಗ್ಯವಾಗಿತ್ತು. ಥತ್..! ನಾನ್ಸೆನ್ಸ್ ಎಂದು ಅವರ ಹಾಗೂ ಅವರನ್ನೇ ಬುದ್ದಿವಂತರು ಅಂದುಕೊಂಡಿರುವ ನಮ್ಮ ಸಹೋದ್ಯೋಗಿಗಳ ಯೋಗ್ಯತೆಯನ್ನು ಮನಸ್ಸಲ್ಲೇ ಮೂದಲಿಸುತ್ತಿದ್ದೆ. ಅದೇ ಸಮಯಕ್ಕೆ ಅವಳು ಬಂದಳು!

ಅವಳು

ಅದೇನೋ ತಿಳಿಯದು; ಇಂದಿಗೂ ಸಹ ನನ್ನಲ್ಲಿ ಅಂದು ಮೂಡಿದ ಭಾವನೆಗಳಿಗೆ ಕಾರಣ ನಿಗೂಢ. ಅಂದು ನನ್ನ ದೃಷ್ಠಿಯಲ್ಲಿ ಆಕೆ ಅಪ್ಸರೆಯಾಗಿದ್ದಳು. ಹಾಗೆಂದ ಮಾತ್ರಕ್ಕೆ ಅವಳೇನು ಸುರಸುಂದರಿ ಅಲ್ಲ ಆದರೆ ಗುಣ ಹಾಗೂ ರೂಪದಲ್ಲಿ ಲಕ್ಷಣ ಹಾಗೂ ಸ್ಫುರದ್ರೂಪಿ. ಆಫೀಸಲ್ಲಿ ಪ್ರತಿ ದಿನವೂ ನೋಡುತ್ತಿದ್ದೆ, ಮಾತಾಡುತ್ತಿದ್ದೆ; ಇಷ್ಟವಾಗುತ್ತಿದ್ದದ್ದು ಮಾತ್ರ ಅವಳು ನನ್ನ ಹೆಸರು ಕರೆಯುವ ರೀತಿ, ಮಿತ ಹಾಗೂ ಸರಳವಾದ ಮಾತು. ಇಷ್ಟ ಎಂದ ಮಾತ್ರಕ್ಕೆ ಅದು ಪ್ರೀತಿ ಅಲ್ಲ. ಇಷ್ಟವಾಗಿದ್ದಳು ಅಷ್ಟೇ. ಸಂಜೆಯ ತಂಪಲ್ಲಿ, ಸೂರ್ಯಾಸ್ತದ ಸಮಯದಲ್ಲಿ ಅವಳ ಜೊತೆಗಿನ ಮಾತು ದಿನದ ಆಯಾಸವನ್ನು ಮರೆಸುತ್ತಿತ್ತು. ಬೆಳಗ್ಗೆ, ಮಧ್ಯಾಹ್ನಕ್ಕಿಂತಲೂ ಸಂಜೆ ಹೊತ್ತಲ್ಲಿ ಅವಳ ಜೊತೆಗಿನ ಮಾತು ವಿಶೇಷ ಅನ್ನಿಸುತ್ತಿತ್ತು. ಆದರೆ ಸಂಜೆ ಹೊತ್ತಲ್ಲಿ ಆಕೆ ಸಿಗುತ್ತಿದದ್ದೇ ಅಪರೂಪ! ಏನಾದರೊಂದು ಕಾರಣ ಅಥವಾ ಪರಿಸ್ಥಿತಿ ಅನ್ನಬಹುದು ನನ್ನ ಅವಳ ಭೇಟಿ, ಮಾತು ಸಂಜೆ ಹೊತ್ತಲ್ಲಿ ತೀರ ವಿರಳವಾಗಿತ್ತು. ವಿಶೇಷವೆಂದರೇ; ಅಂದು ಮಾತ್ರ ಅವಳು ಬೆಳಗಿನ ಹೊತ್ತಲ್ಲೇ ನನಗೆ ಸರಳ ಸುಂದರಿಯಾಗಿ ಕಂಡಳು. 

ಅವಳು ನನ್ನ ಮುಂದೆ ಹಾದು ಹೋಗಿದ್ದು ಒಂದರಿಂದ ಎರಡು ಕ್ಷಣ ಅಷ್ಟೇ. ಅವಳು ನನ್ನನ್ನು ನೋಡಲಿಲ್ಲ ಅಥವಾ ನಾನು ನೋಡಿದ್ದನ್ನು ಗಮನಿಸಲೂ ಇಲ್ಲ. ಅಲ್ಲಿಂದಾಚೆಗೆ ಮನಸ್ಸು ನನ್ನ ಹಿಡಿತದಲ್ಲಿರಲಿಲ್ಲ. ನಿಮಿಷಕ್ಕೊಮ್ಮೆ ಅವಳನ್ನು ನೋಡಿ ಕಣ್ತುಂಬಿಕೊಳ್ಳುವ ಬಯಕೆ ಆಗುತ್ತಿತ್ತು. ಎರಡು ಬಾರಿ ತಿರುಗಿ ನೋಡಿದೆ, ನೋಡುವ ಸಲುವಾಗೇ ಅವಳ ಪಕ್ಕದಲ್ಲಿದ್ದವರನ್ನು ಮಾತನಾಡಿಸಿದೆ. ಮಾತನಾಡಿದ್ದು ಇತರರ ಜೊತೆಗೆ ಹೌದಾದರೂ; ದೃಷ್ಟಿ ಹಾಗೂ ಮನಸ್ಸು ಅವಳನ್ನೇ ಅರಸುತ್ತಿತ್ತು. ಪ್ರತಿ ಬಾರಿ ತಿರುಗಿ ನೋಡಿದಾಗ ಉಸಿರಿನ ಏರಿಳಿತ ವ್ಯತ್ಯಾಸವಾಗುತ್ತಿತ್ತು. ಪದೇ ಪದೇ ನೋಡಿದರೆ ಅಭಾಸವಾಗಬಹುದೆಂದು ಸುಮ್ಮನಾಗುತ್ತಿದ್ದೆ. ಐದು ನಿಮಿಷ ಅಬ್ಬಬ್ಬ ಎಂದರೆ ಹತ್ತು ನಿಮಿಷ ಅಷ್ಟೇ ಮತ್ತೆ ನೋಡಬೇಕೆಂಬ ತುಡಿತ! ಭಾವನೆಗಳನ್ನು ತಡೆಹಿಡಿಯಲು ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದೆ. ಒಂದೆಡೆ ಕೋಪ, ಅದೇ ಸಮಯಕ್ಕೆ ಮನಸ್ಸು ಅವಳ ಮಾತು, ಅವಳ ರೂಪ ನೆನೆಸಿಕೊಂಡು ತನ್ನದೇ ಲೋಕದಲ್ಲಿ ವಿಹರಿಸುತ್ತಿತ್ತು. ಇನ್ನು ಕೆಲಸ; ಅದರ ಪರಿವೇ ಇರಲಿಲ್ಲ.

ಅಂದಿನ ಮಧ್ಯಾಹ್ನದ ಊಟವನ್ನು ಅವಳ ನೆನಪು ಮರೆಸಿತ್ತು. ಅವಳೇ ಬಂದು ಊಟದ ಬಗ್ಗೆ ಕೇಳಿದಾಗ ತಬ್ಬಿಬ್ಬಾಗಿ ಕೆಲಸ ಇತ್ತು ಎಂದು ಹಾರಿಕೆ ಉತ್ತರ ಕೊಟ್ಟೆ. ನನ್ನ ಉತ್ತರ ಕೇಳಿ ಸಣ್ಣದೊಂದು ನಗು ಮುಖದೊಂದಿಗೆ ಹೋದಳು. ಅಷ್ಟು ಸಾಕಿತ್ತು ನನಗೆ; ಎರಡು ಕ್ಷಣ ಹೃದಯ ನಿಂತಂತೆ ಭಾಸವಾಯ್ತು. ನಂತರದ ಮೂರು ನಿಮಿಷ ಉಸಿರುಗಟ್ಟಿದ್ದಂತಾಯಿತು. ಅವಳ ಆ ಒಂದು ನಗು ನನ್ನ ಯೋಚನಾ ಲಹರಿ ಸೌರ ಮಂಡಲವನ್ನು ದಾಟಿ ಹೋಗುವಂತೆ ಮಾಡಿತು. ನಮ್ಮ ಮದುವೆಯಾಗಿ ಹಲವು ವರ್ಷಗಳಾಗಿ, ನಮಗೆ ವಯಸ್ಸಾಗಿ ಬೆಳೆಗ್ಗೆ ಎದ್ದು ಇಬ್ಬರು ಕೈ-ಕೈ ಹಿಡಿದು ವಾಕಿಂಗ್ ಹೋಗುವ ಮಟ್ಟಿಗೆ ನನ್ನ ಯೋಚನೆ ಹೋಗಿತ್ತು. ಆ ಕ್ಷಣ ಈ ಬದುಕಿಗೆ ಅವಳು ಸಾಕು ಅನ್ನುವ ಭಾವ, ಅವಳೊಟ್ಟಿಗಿನ ಬದುಕು ಹಬ್ಬ ಅನ್ನುವ ಕಲ್ಪನೆ ನನ್ನನ್ನು ಸಂಪೂರ್ಣ ಆವರಿಸಿತ್ತು.

ಬಹುಶಃ ಒಂದಷ್ಟು ಹೊತ್ತು ಅದೇ ಭಾವದಲ್ಲಿ ತೇಲಾಡುತ್ತಿದ್ದೆ. ಕುರ್ಚಿ ಮೇಲೆ ಹಾಯಾಗಿ ಕುಳಿತು ನಾನು ಸಂಭ್ರಮಿಸುತ್ತಿದ್ದೆ. ಯಾರಾದರು ನನ್ನನ್ನು ನೋಡಿ ಏನು ತಿಳಿದಿರಬಹುದು ಅನ್ನುವ ಪ್ರಜ್ಞೆಯನ್ನು ಸಹ ಕಳೆದುಕೊಂಡಿದ್ದೆ. ಆ ಭಾವದ ನಡುವೆ ಮನಸ್ಸಿಗೆ ಒಂದು ಒತ್ತಡ ಉಂಟಾಗುತ್ತಿತ್ತು. ಕಾರಣ ಇಷ್ಟೇ; ಅವಳ ಸೌಂದರ್ಯ ಎಷ್ಟು ಸ್ವಚ್ಛವಾಗಿತ್ತೋ ಅವಳ ಗಾಂಭೀರ್ಯವೂ ಅಷ್ಟೇ. ನನ್ನ ಭಾವನೆ ಅಥವಾ ಪ್ರೀತಿ ಹೇಳಿಕೊಂಡರೆ ಅವಳು ಒಪ್ಪುವ ಖಾಚಿತ್ಯ ಇರಲಿಲ್ಲ. ಅದಕ್ಕಿಂತಲೂ ಮಿಗಿಲಾಗಿ 'ಒಪ್ಪದಿದ್ದರೇ?' ಅನ್ನುವ ಭಯ ಒತ್ತಡಕ್ಕೆ ಕಾರಣವಾಗಿತ್ತು.
 
ಆ ಸಂಜೆ ಸಹ ಅವಳು ನನಗೆ ಸಿಗಲಿಲ್ಲ. ಅವಳ ಜೊತೆ ಮಾತಾಡಬೇಕು ಅಂದುಕೊಂಡಿದ್ದೆ ಆದರೇ ಆಗಲೇ ಇಲ್ಲ. ನನ್ನವಳು ಅಂದುಕೊಳ್ಳುವಷ್ಟರಲ್ಲಿ ನನ್ನ ಅವಳ ಭೇಟಿ ಕೊನೆಯಾಗಿತ್ತು. ಮಾರನೇ ದಿವಸ ನಾನು ಆಫೀಸಿಗೆ ಹೋಗಲಿಲ್ಲ ಹಾಗೂ ನಮ್ಮ ಆಫೀಸಿನಲ್ಲಿ ಅವಳದು ಅದು ಕಡೆಯ ದಿನವಾಗಿತ್ತು. ನಂತರ ಎಂದೂ ಅವಳೊಂದಿಗೆ ಮಾತಾಡುವ ಅಥವಾ ಭೇಟಿ ಮಾಡುವ ಪ್ರಯತ್ನ ಮಾಡಲೇ ಇಲ್ಲ. ಕಡೆಯವರೆಗೂ ಅವಳು ನಕ್ಕ ನಗು ಮನಸ್ಸಲ್ಲಿ ಹಸಿರಾಗೆ ಉಳಿಯಿತು. ಮನೆ ಹೊರಗೆ ಕುಳಿತು ಸೂರ್ಯಾಸ್ತ ನೋಡುವಾಗಲೆಲ್ಲ ಅವಳ ಸೌಂದರ್ಯವೇ ನನ್ನ ಕಣ್ಣ ಮುಂದೆ. 
 
Inspired By Stories of  'Haruki Murakami'

October 19, 2024

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ


ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ರಾಮ ರಾಮ ರಾಮ ರಾಮ

ನೀನಿಷ್ಟದಂತೆನ್ನ ಇಟ್ಟಿರುವೆ ರಾಮ|
ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|
ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ|
ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ|
ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ|
ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ|

ರಘುರಾಮ ರಘುರಾಮ ರಘುರಾಮ ರಘುರಾಮ|
ನಗುರಾಮ ನಗರಾಮ ಜಗರಾಮ ರಾಮ|

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ರಾಮ ರಾಮ ರಾಮ ರಾಮ

ಒಳತಿನೆಡೆ ಮುನ್ನೆಡೆವ ಮನವ ಕೊಡು ರಾಮ|
ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ|
ನೆನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|
ನಾಳೆಗಳು ಪುಣ್ಯಗಳ ಹದಿಯಾಗಲಿ ರಾಮ|
ನನ್ನ ಬಾಳಿಗೆ ನಿನ್ನ ಹಸಿವ ಕೊಡು ರಾಮ|
ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|
ಕಣ್ಣು ಕಳೆದರು ನಿನ್ನ ಕನಸ ಕೊಡು ರಾಮ|
ನನ್ನ ಹರಣಕೆ ನಿನ್ನ ಚರಣ ಕೊಡು ರಾಮ|

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| *2 
ರಾಮ ರಾಮ ರಾಮ ರಾಮ

ಕೌಸಲ್ಯೆಯಾಗುವೆನು ಮಾಡಿಲಲಿರು ರಾಮ|
ವೈದೇಹಿಯಾಗುವೆನು ಒಡನಾಡು ರಾಮ|
ಪಾದುಕೆಯ ತಲೆಯಲಿಡು ಭರತನಾಗುವೆ ರಾಮ|
ಸಹವಾಸ ಕೊಡು ನನಗೆ ಸೌಮಿತ್ರಿ ರಾಮ|
ಸುಗ್ರೀವನಾಗುವೆನು ಸ್ನೇಹ ಕೊಡು ರಾಮ|
ಹನುಮನಾಗುವೆ ನಿನ್ನ ಸೇವೆ ಕೊಡು ರಾಮ| *2 
ಶಬರಿಯಾಗುವೆ ನಿನ್ನ ಭಾವ ಕೊಡು ರಾಮ|

ರಘುರಾಮ ರಘುರಾಮ ರಘುರಾಮ ರಘುರಾಮ|

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| *2 
ರಾಮ ರಾಮ ರಾಮ ರಾಮ

ಋತ ನೀನೆ ಋತು ನೀನೆ ಶೃತಿ ನೀನೆ ರಾಮ|
ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ|
ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ|
ಪೂರ್ಣ ನೀ ಪ್ರಕಟ ನೀ ಆನಂದ ರಾಮ|
ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ| * 2 
ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
ಗುರಿ ನೀನೆ ಗುರು ನೀನೆ ಅರಿವು ನೀ ರಾಮ|

ರಘುರಾಮ ರಘುರಾಮ ರಘುರಾಮ ರಘುರಾಮ|
ನಗುರಾಮ ನಗರಾಮ ಜಗರಾಮ ರಾಮ|

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| * 2
ರಾಮ ರಾಮ ರಾಮ ರಾಮ

ಸಾಹಿತ್ಯ: ಶ್ರೀ ಗಜನಾನ ಶರ್ಮ