August 20, 2012

ನಾವೇಕೆ ಹೀಗೆ ... ? - 2

ಕೆಲವು ದಿನಗಳ ಹಿಂದೆ ನನ್ನ ಸ್ನೇಹಿತ, ಅವರ ಊರಲ್ಲಿ function ಮುಗಿಸಿಕೊಂಡು ಬಂದಿದ್ದ. ಹೇಗಿತ್ತು ಎಂದು ಕೇಳಿದೆ. "ಚೆನ್ನಾಗಿತ್ತು ಮಗ, ನಾವೆಲ್ಲ ತುಂಬಾನೇ enjoy ಮಾಡಿದ್ವಿ" ಎಂದ. ಹಾಗೆ ನಮ್ಮ ಹರಟೆ ಮುಂದುವರೆದಿತ್ತು ಮಾತಿನ ಮಧ್ಯೆ ಅವನು ಈ ಹಳ್ಳಿಗರನ್ನು ಕುರಿತು ಹೇಳಿದ; "ತುಂಬಾ ಅತೀ ಮಾತಾಡುತ್ತಾರೆ ಮಗ, ಅತೀಯಾದ ಪ್ರೀತಿ ತೋರ್ಸುವಂತೆ ಮಾತಾಡುತ್ತಾರೆ, ನಾಲ್ಕು ಜನ ಸೇರಿದಾಗ ಹೇಗೆ ನಡೆದುಕೊಳ್ಳಬೇಕು ಎನ್ನುವುದೇ ತಿಳಿದಿಲ್ಲ. ಅದೇ ನಗರದ ಜನಗಳಿಗೂ, ಹಳ್ಳಿಯ ಜನಗಳಿಗೂ ಇರುವ ವ್ಯತ್ಯಾಸ. ಅವರ ಜೊತೆ ಹೊರಗಡೆ ಹೋದರೆ ನಮಗೇನೋ ಒಂದು ತರಹ ಮುಜುಗರವಾಗುತ್ತದೆ" ಎಂದು. ಅವನಿಗನ್ನಿಸಿದ್ದನ್ನು ಹೇಳಿದ. ನಂತರ ಅವನ ಹತ್ತಿರ ನಾನಿದರ ಬಗ್ಗೆ ಚರ್ಚೆ ಮಾಡಲು ಹೋಗಲಿಲ್ಲ. ಈ ವಿಚಾರವಾಗಿ ನನ್ನ ಮನಸ್ಸಿನಲ್ಲಿ ಬಂದ ಆಲೋಚನೆಯನ್ನು ಇಲ್ಲಿ ಹೇಳಲು ಇಚ್ಚಿಸುತ್ತೇನೆ.

ನನ್ನ ಸ್ನೇಹಿತ ಹೇಳುವುದನ್ನು ಒಪ್ಪುವುದೇ ಆದರೆ; ನಾವು ನಗರದ ಜನಗಳು ಯೋಗ್ಯರ ? ಎಂಬ ಪ್ರಶ್ನೆ ಮೂಡುತ್ತದೆ..!! ನಾವುಗಳು ಹೇಳುವ Common Sense (ಜನಗಳೊಂದಿಗೆ ನಡೆದುಕೊಳ್ಳಬೇಕಾದ ರೀತಿ) ಇಲ್ಲದಿರಬಹುದು. ಆದರೆ ನಾಲ್ಕು ಜನಗಳೊಂದಿಗೆ ಒಂದು ರೀತಿ, ಅವರವರ ಮನೆಗಳಲ್ಲೇ ಒಂದು ರೀತಿ ನಡೆದುಕೊಳ್ಳುವ ನಾಟಕ ಅವರಿಗೆ ತಿಳಿದಿಲ್ಲ. ಅವರದು ಎಲ್ಲಾ ಕಡೆ ಒಂದೇ ರೀತಿಯ ನಡವಳಿಕೆ. ನಮ್ಮ ಹಾಗೆ ಬೂಟಾಟಿಕೆ ಜೀವನ ಅವರಿಗೆ ತಿಳಿಯದು.

ಹತ್ತಿರದ ಸಂಬಂಧಿಕರೊಂದಿಗೆ ಬಹಳ ಪ್ರಿಯರಂತೆ ವರ್ತಿಸಿ, ನಾಲ್ಕು ಮಂದಿಯ ಮುಂದೆ ಮಹಾ ಸಭ್ಯರ ಹಾಗೆ ವರ್ತಿಸಿ, ಮತ್ತೆ ಮನೆಗೆ ಹಿಂತುರಿಗಿದ ಮೇಲೆ ಅವರಿವರ ನಡವಳಿಕೆಯನ್ನು ಆಡಿಕೊಳ್ಳುವ ಸ್ವಭಾವ ಹಳ್ಳಿಯವರಲ್ಲಿ ಕಾಣಲಾಗುವುದಿಲ್ಲ.

ಅವರ ಜೊತೆ ಹೊರಗಡೆ ಹೋಗಲು ಮುಜುಗರವಂತೆ. ನಮ್ಮದು City Culture ಎಂದು ಹೇಳುತ್ತಾರಲ್ಲ, ದಿನಾಗಲೂ ಪಾನಮತ್ತರಾಗಿ, ಮಹಾವಿದ್ಯಾವಂತರಿನಿಸಿಕೊಂಡರೂ ಲಂಚ ಸ್ವೀಕಾರ ಮಾಡುತ್ತ ಬದುಕುತ್ತಿದ್ದಾರಲ್ಲ ಇಂತವರು ಸಮಾಜದಲ್ಲಿ ಗೌರವಸ್ಥರು, ಜನರ ನಡುವೆ ನಟಿಸುವವರನ್ನು ನಾವು ಸಭ್ಯರು ಎಂದು ಕರೆಯಬೇಕು...!!!

ವಿಧ್ಯೆ, ವಿನಯತೆ ಮತ್ತು ವಿಧೇಯತೆ ತರಬೇಕು ಯಾವುದೋ ದೊಡ್ಡ ಪರೀಕ್ಷೆಗಳನ್ನು ಕಟ್ಟಿ, ಸರ್ಕಾರಿ ಕೆಲಸಗಿಟ್ಟಿಸಿಕೊಂಡು ಲಂಚವನ್ನು ಸ್ವೀಕರಿಸಿ, ಶ್ರೀಮಂತರೆನಿಸಿಕೊಂಡವರಿಗೆ ಸಮಾಜದಲ್ಲಿ ಗೌರವ; ಇಂತವರನ್ನು ನಾವು ಸಭ್ಯರು ಎಂದು ಒಪ್ಪಿಕೊಳ್ಳಬೇಕು. ಇದು ವಿನಯತೆನಾ ? ಇತರರನ್ನು ಅವರ ಬೆನ್ನ ಹಿಂದೆ ಆಡಿಕೊಳ್ಳುವುದು ವಿಧೇಯತೆನಾ ? ಎಂಬ ಪ್ರಶ್ನೆ ಅವರು ಕೇಳಿಕೊಳ್ಳಬಾರದೇಕೆ ?

ಇಂತಹ ಕೆಲವು ಗುಣಗಳು, ಕೆಲವರಿಗೆ ಹುಟ್ಟಿನಿಂದ, ಅವರು ಬೆಳೆದ ಪರಿಸರದಿಂದ, ತಂದೆ ತಾಯಿಯ ಸಂಸ್ಕಾರದಿಂದ ಬಂದಿರುತ್ತದೆ, ಅದನ್ನು ನಾವು ಬದಲಾಯಿಸುವುದು ಅಸಾಧ್ಯ. ಎಷ್ಟೇ ವಿಧ್ಯೆ, ಹಣ ಸಂಪಾದಿಸಿದರೂ, ಎಂತಹ ದೊಡ್ಡ ನೌಕರಿಯಲ್ಲಿದ್ದರೂ ತಮ್ಮ ಅಲ್ಪ ಬುದ್ದಿ ತೋರಿಸುತ್ತಿರುತ್ತಾರೆ. ಇದಕ್ಕೆ ಉತ್ತಮ ಹೋಲಿಕೆ ಎಂದರೆ 'ನಾಯಿಯನ್ನು ಸಿಂಹಾಸನದ ಮೇಲೆ ಕೂರಿಸುವ ಹಾಗೆ'. ನನ್ನ ಸ್ನೇಹಿತ ಹೇಳಿದ ಹಾಗೆ ಹಳ್ಳಿಯವರದು ಅತೀಯಾದ ಪ್ರೀತಿಯೆ ಇರಬಹುದು, ಆದರೆ ಅವರ ಪ್ರೀತಿಯಲ್ಲಿ ಕಲ್ಮಷವಿರುವುದಿಲ್ಲ, ಅವರ ನಡತೆಯಲ್ಲಿ ನಾಟಕವಿರುವುದಿಲ್ಲ, ಬೂಟಟಿಕೆಯಿರುವುದಿಲ್ಲ.

ಇದನ್ನೆಲ್ಲಾ ಯೋಚಿಸಿದ ಮೇಲೆ ನನಗೆ ಹೊಳೆದ್ದಿದ್ದು ಒಂದು ಪ್ರಶ್ನೆ; ಸಮಾಜ ಎನ್ನುವುದಕ್ಕಿಂತ ಈ ದಿನದ ಸಮಾಜ ಗೌರವಿಸುವುದು ವ್ಯಕ್ತಿಯ ವ್ಯಕ್ತಿತ್ವವನ್ನೋ ಅಥವಾ ಅವರ ಬಳಿಯಿರುವ ಹಣವನ್ನೋ ?

August 4, 2012

ನಾವೇಕೆ ಹೀಗೆ ...? - ಎಲ್ಲರೊಳಗೊಂದಾಗು ಮಂಕುತಿಮ್ಮ

ಮನುಷ್ಯನ ಮನಸ್ಸು ಎಂಬುದು ಅತೀ ಸೂಕ್ಷ್ಮ. ನಾವು ಮಾನಸಿಕವಾಗಿ ಸದೃಢವಾಗಿದ್ದೇವೆ ಎಂದು ಏನೇ ಹೇಳಿಕೊಂಡು ಓಡಾಡಬಹುದು. ಆದರೆ, ಜೀವನದಲ್ಲಿ ಬರುವ ಘಟನೆಗಳು, ವ್ಯಕ್ತಿಗಳು, ಸಂದರ್ಭಗಳು ನಮ್ಮ ಮನೋಸ್ಥೈರ್ಯವನ್ನು ನಿರ್ಧರಿಸುತ್ತದೆ. ಅದಾವುದೋ ಒಂದು ಸಂದರ್ಭದಲ್ಲಿ ಮಾನಸಿಕವಾಗಿ ನಾವು ಕುಗ್ಗಬಹುದು ಅಥವಾ ಹಿಗ್ಗಿ ಮಹತ್ವವಾದದ್ದನ್ನು ಸಾಧಿಸಬಹುದು. ನಾನಿಲ್ಲಿ ಹೇಳಲು ಹೊರಟಿರುವ ವಸ್ತುವೆಂದರೇ ನಮ್ಮ ಈ ಎರಡು ರೀತಿಯ ಬದಲಾವಣೆ ಜೊತೆಗೆ ಬದಲಾಗುವ ಸಮಾಜದ ಪ್ರತಿಕ್ರಿಯೆ.

ವ್ಯಕ್ತಿಯೊಬ್ಬ ಮಹತ್ವವಾದದನ್ನು ಸಾಧಿಸಿ ಪ್ರಸಿದ್ದಿಹೊಂದಿದಾಗ ಸಮಾಜ ಆ ವ್ಯಕ್ತಿಯೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುತ್ತದೆ. ವ್ಯಕ್ತಿಯ ಹೆಸರನ್ನು ಉಪಯೋಗಿಸಿಕೊಂಡು ಲಾಭಹೊಂದುವವರೂ ಇದ್ದಾರೆ. ಅದೇ ಅಮಲಿನಲ್ಲಿ ತನ್ನ ಹಿನ್ನಲೆಯಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಗಮನಿಸದಿದ್ದರೆ ಅವನು ಮತ್ತೆ ಅಧಃಪತನಕ್ಕೆ ಇಳಿಯುತ್ತಾನೆ. ಆ ಸಂದರ್ಭದಲ್ಲಿ ಇದೇ ಸಮಾಜ ಆ ವ್ಯಕ್ತಿಯನ್ನು ಧೂಷಿಸುತ್ತದೆ.

ಅದೇ ವ್ಯಕ್ತಿ ಮಾನಸಿಕವಾಗಿ ಕುಗ್ಗಿದಾಗ, ಅವನೊಂದಿಗೆ ಯಾರು ಬರುವುದಿಲ್ಲ, ಅವನಾಗೆ ತಿಳಿದುಕೊಂಡು ಮನಸ್ಸನ್ನು ಕಲ್ಲಾಗಿಸಿಕೊಂಡು ಒಬಂಟಿಗನಾಗಿ ಹೊರಬಂದರೆ ಅವನಿಗೆ ಸಮಾಜದಲ್ಲಿ ಗೌರವ. ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು, ಪರಸ್ಪರ ಸಹಾಯಕವಾಗಿ ಮುಂದೆಬರಲು ನಾವೇಕೆ ಒಪ್ಪಿಕೊಳ್ಳುವುದಿಲ್ಲ? ನಮ್ಮ ಮನಸ್ಸು ಬಯಸುವಂತೆ, ನಾವು ಯರನ್ನಾದರೂ ಅರ್ಥ ಮಾಡಿಕೊಳ್ಳುವುದರಲ್ಲಾಗಲಿ, ನಮ್ಮನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬಯಸುವುದರಲ್ಲಿ ಏನು ತಪ್ಪಿದೆ ? ನಾನು, ನನ್ನಿಂದ ಅನ್ನುವುದಕ್ಕಿಂತ ನಾವು, ನಮ್ಮಿಂದ, ನಮ್ಮೊಟ್ಟಿಗೆ ಎಂದು ಹೇಳಿಕೊಳ್ಳುವುದರಲ್ಲಿರುವ ಸುಖ ನಮಗೆ ಯಾಕೆ ಅರ್ಥವಾಗುತ್ತಿಲ್ಲ ?

ಮನೋರೋಗಿಯ ಸ್ಥಿತಿ ಸಹಜವಾಗಲು ಹಲವು ಕಾರಣವಿರುತ್ತದೆ. ಅವರು ಇರುವ ಪರಿಸರ, ಅವರನ್ನು ನೋಡಿಕೊಳ್ಳುವ ರೀತಿ, ಅವರ ಸುತ್ತ ನಡೆಯುವ ಘಟನೆಗಳು, ಹೀಗೆ ವಿವರಿಸಬಹುದು. ಹುಷಾರಾಗಿ ಬಂದ ವ್ಯಕ್ತಿಗೆ ತಾನು ಹುಷಾರಾಗಲು ಪ್ರಭಾವ ಬೀರಿದ ಕೊನೆಯ ವ್ಯಕ್ತಿ ಅಥವಾ ಘಟನೆ ಮಾತ್ರವೇ ಮನಸ್ಸಿನಲ್ಲಿ ನಿಲ್ಲುತ್ತದೆ. ಆ ವ್ಯಕ್ತಿ / ಘಟನೆಯನ್ನು ಪದೇ, ಪದೇ ಮೆಲಕುಹಾಕಬಹುದು. ಅದರ ಬಗ್ಗೆಯೇ ಹೆಚ್ಚು ಮಾತಾಡಲೂಬಹುದು. ಅದು ತಪ್ಪಾ? ಆದರೆ, ಯಾವುದಾದರು ಕಾರಣದಿಂದ ಆತ ಸರಿಹೋದ ಎಂದು ಯೋಚಿಸಿ ಸಂತೋಷಪಡುವ ಬದಲು, ನನ್ನ ಕಾರಣದಿಂದ ಯಾಕೆ ಸರಿ ಹೋಗಲಿಲ್ಲ ಎಂದು ಯೋಚಿಸುತ್ತಾರಲ್ಲ ಯಾಕೆ? ಸಮಾಜಕ್ಕೆ ವ್ಯಕ್ತಿಯೊಬ್ಬ ಸರಿಹೋಗುವುದು ಮುಖ್ಯವೋ ಅಥವಾ ತಮ್ಮ ದೆಸೆಯಿಂದ ಎಂಬ ಪ್ರತಿಷ್ಟೆ ಮುಖ್ಯವೋ ತಿಳಿಯುತ್ತಿಲ್ಲ. ನಾನು, ನನ್ನಿಂದ ಎಂಬುದು ಸ್ವಾರ್ಥ ಭಾವ ಎಂದು ಈ ಸಮಾಜಕ್ಕೆ ಯಾಕೆ ಅರ್ಥವಾಗುತ್ತಿಲ್ಲ?

ಇಂತಹ ಸ್ವಾರ್ಥ ಭಾವ ನನ್ನಲ್ಲಿ ಬೆಳೆಯಕೂಡದು ಎಂದೆನ್ನಿಸಿ "ಎಲ್ಲರೊಳಗೊಂದಾಗು ಮಂಕುತಿಮ್ಮ" ಅಂತಲ್ಲದಿದ್ದರೂ ಕಡೇ ಪಕ್ಷ ಯಾರಾದರು ಒಬ್ಬರಿಗೆ ನನನ್ನು ನಾನು ಅರ್ಪಿಸಿಕೊಳ್ಳೋಣವೆಂದರೇ ಸಮಾಜ ನನ್ನನ್ನು ಯಾಕೆ ಒಪ್ಪಿಕೊಳ್ಳುತ್ತಿಲ್ಲ? ಬಹುದಿನಗಳಿಂದ ನನ್ನನ್ನು ಕಾಡುತ್ತಿರುವ ಪ್ರಶ್ನೆ ನಾವ್ಯಾಕೆ ಹೀಗೆ ?

July 7, 2012

ವೇಗದ ಬದುಕು

ಕೆಲ ದಿನಗಳ ಹಿಂದೆ ಆಕಾಶವಾಣಿಯಲ್ಲಿ - "Laproscopy ಎಂಬ ಶಸ್ತ್ರಚಿಕಿತ್ಸೆ ಮೂಲಕ ಕೆಲವೇ ನಿಮಿಷಗಳಲ್ಲಿ ಮಕ್ಕಳಾಗದಿರುವ ರೀತಿ ಮಾಡುತ್ತೇವೆ, 1-2 ದಿನಗಳಲ್ಲಿ ಎಂದಿನಂತೆ ತಮ್ಮ ನಿತ್ಯ ಕೆಲಸಗಳಲ್ಲಿ ತೊಡಗಬಹುದು, ಮನೆಗೊಂದು ಮಗು ಸಾಕು" ಎಂದು ಪ್ರಸಾರವಾಗುತ್ತಿತ್ತು. ವೈಜ್ಞಾನಿಕವಾಗಿ ಅದನ್ನು ನಾನು ವಿಮರ್ಶಿಸಲು ಅನರ್ಹ, ಆದ್ದರಿಂದ ಆ ಮಾತು ಇಲ್ಲಿ ಬೇಡ. ಆದರೆ ಇಲ್ಲಿ ನಾವು ಗಮನಿಸಬೆಕಾದ ಅಂಶ ಒಂದಿದೆ. ಮೇಲಿನ ಹೇಳಿಕೆಯಂತೆ ನಮ್ಮ ಸಮಾಜ ನಡೆದುಕೊಂಡ್ಡಿದ್ದೇ ಆದರೆ ನಾವು ಮತ್ತು ನಮ್ಮ ಮುಂದಿನ ಪೀಳಿಗೆ ಸಾಂಸ್ಕೃತಿಕವಾಗಿಯೂ ಮತ್ತು ಮಾನಸಿಕವಾಗಿಯೂ ಕುಗ್ಗಿ ಹೋಗುತ್ತೇವೆ. ಇದನ್ನು ನೆನೆದಾಗಲ್ಲೆಲ್ಲ ನನಗೆ ನೆನಪಾಗುವುದು 'ಜಾಗೋ ಭಾರತ್' ಕಾರ್ಯಕ್ರಮದ ಜನಕ "ಚಕ್ರವರ್ತಿ ಸೂಲಿಬೆಲೆ" ರವರ ಮಾತುಗಳು - "ಮನೆಗೆ 1 ಮಗು ಎಂತಾದರೇ ನಾವು ಬಿಡಿ, ನಮ್ಮ ಮುಂದಿನ ಪೀಳಿಗೆಯವರಿಗೆ ಅಕ್ಕ, ಅಣ್ಣ, ತಮ್ಮ, ತಂಗಿ, ಅತ್ತೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮ, ಅತ್ತಿಗೆ, ನದಿನಿ, ಮೈದುನ, ಭಾವ ಎಂಬ ಸಂಭಂದದ ಅರ್ಥವೇ ತಿಳಿದಿರುವುದಿಲ್ಲ. ಅಪ್ಪ, ಅಮ್ಮ ಬಿಟ್ಟು ಮಿಕ್ಕವರೆಲ್ಲರೂ Aunty, Uncle. ನಮ್ಮ ಹಿಂದು ಸಂಸ್ಕೃತಿಯಲ್ಲಿರುವುದು ಒಟ್ಟು 52 ಸಂಭಂದಗಳು, ಅದರಲ್ಲಿ ನಮ್ಮ ಪೇಳೀಗೆಗೆ ಹಲವು ಗೊತ್ತಿಲ್ಲ, ಹೀಗೆ ಮುಂದುವರೆದರೆ ಮಿಕ್ಕ ಸಂಭಂದಗಳನ್ನು ಕಳೆದುಕೊಳ್ಳುತ್ತೇವೆ."

ಇದರ ಪರಿಣಾಮವಾಗಿ ಮಕ್ಕಳಿಗೆ ಪ್ರೀತಿ ಅರ್ಥ, ತಾಯಿಯ ಮಮತೆಯ ಸುಖವನ್ನು ಕಳೆದುಕೊಳ್ಳುವಂತಾಗುತ್ತದೆ. ಅಂತಹ ಮಕ್ಕಳು ಮಾನಸಿಕವಾಗಿ ಸದೃಡವಾಗಿರುವುದಿಲ್ಲ. ಮನೆಯಲ್ಲಿ ಸಿಗದಿರುವ ಪ್ರೀತಿ, ಮಮತೆ ಹೊರಗೆ ಪಡೆಯಲು ಪ್ರಯತ್ನಿಸುತ್ತಾರೆ. ಅಂತಹ ಮಕ್ಕಳು ಬಹು ಬೇಗ ಮಾದಕ ವ್ಯಸನಿಗಳಾಗುತ್ತಾರೆ, ಕುರುಡು ಪ್ರೇಮಕ್ಕೆ ಬಲಿಯಾಗಿ ತಮ್ಮ ಜೀವನವನ್ನೇ ಹಾಳುಮಾಡಿಕೊಳ್ಳುತ್ತಾರೆ. ಇಂತ ಉದಾಹರಣೆಗಳನ್ನು ನಾವು ನಮ್ಮ ಸಮಾಜದಲ್ಲಿ ಅನೇಕವನ್ನು ನೋಡಬಹುದು. ಇದೆಲ್ಲದರ ಪರಿಣಾಮವಾಗಿ ದೇಶ ಸಾಂಸ್ಕೃತಿಕವಾಗಿ ನಶಿಸಿಹೊಗುತ್ತದೆ! ಮೇಲಿನ ಹೇಳಿಕೆಯನ್ನು ಕೇಳಿದ ಮೇಲೆ ನನ್ನ ಮನಸ್ಸಿನಲ್ಲಿ ಇವೆಲ್ಲ ಯಾಕೆ?, ಇದರ ಮೂಲ ಕಾರಣ ಏನು? ಎಂದು.

ಮಕ್ಕಳು ತಂದೆ, ತಾಯಿ, ಅಜ್ಜಿ, ತಾತರ ಪ್ರೀತಿಯಿಂದ ವಂಚಿತರಾಗಿರುವುದು ಎಂಬುದು ಮೇಲು ನೋಟಕ್ಕೆ ಕಾಣುವ ಕಾರಣ. ಅಂದರೆ ತಂದೆ, ತಾಯಿಯರಿಗೆ ಮಕ್ಕಳ ಬಗ್ಗೆ ಕಾಳಜಿ ಇಲ್ಲವೆಂದಲ್ಲ, ಅದರ ಬೆಳವಣಿಗೆಗಾಗಿ ಅವರು ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ, ಆದರೆ ಪೂರ್ಣ ಪ್ರಮಾಣದಲ್ಲಿ ಗಮನಿಸಲು ಅವರಿಗೆ ಸಮಯ ಸಿಗುತ್ತಿಲ್ಲ ಎಂಬುದು ಸತ್ಯ. ಅದಕ್ಕೆ ಕಾರಣವೆಂದರೆ ನಮ್ಮ ಬದುಕಿನ ಶೈಲಿ ಎಂಬುದೇ ಸತ್ಯ. ಅಂದರೆ ವೇಗದ ಬದುಕು...
 

ಇದರ ಪರಿಣಾಮವಾಗಿ ಮಾನವ ಸಂಭಂದಗಳ ನಡುವೆ ಭಾವನೆಗಳನ್ನು ಮರೆಯುತ್ತಿದ್ದೇವೆ. ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ ಎಂಬಂದೆ ನಮ್ಮಗಳ ನಡುವೆ ಇರುವ ಸ್ನೇಹ ಸಂಭಂದಗಳನ್ನು ಬಿಟ್ಟು ಜೀವರಹಿತ ವಸ್ತುಗಳ ಜೊತೆಗೆ ನಮ್ಮ ಭಾಂದವ್ಯ ಬೆಳೆಸುಕೊಳ್ಳುತ್ತೆದ್ದೇವೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಯೋಚಿಸಬೇಕಾದ ಸಂಗತಿ. ಮನುಜರನ್ನು ಪ್ರೀತಿಸಿ, ವಸ್ತುಗಳನ್ನು ಉಪಯೋಗಿಸಬೇಕೆಂಬ ದಾರಿಯಲ್ಲಿ ನಡೆಯುದರ ಬದಲು, ನಾವಿಂದು ವಸ್ತುಗಳನ್ನು ಪ್ರೀತಿಸಿ, ಮನುಜರನ್ನು ಉಪಯೋಗಿಸಿಕೊಳ್ಳುತ್ತಿದ್ದೇವೆ ಎಂಬುದು ಕಹಿ ಎಂದೆನ್ನಿಸಿದರೂ ಒಪ್ಪಿಕೊಳ್ಳಲೇಬೇಕಾದ ಸತ್ಯ.

ವಸ್ತುವನ್ನು ಪ್ರೀತಿಸುತ್ತಾ ಹೋದಂತೆಲ್ಲಾ ಮನುಷ್ಯ ತನ್ನ ಭಾವನೆಗಳನ್ನು ಕಳೆದುಕೊಳ್ಳುತ್ತಾ ಹೋದ. ಭಾವನೆಗಳು ಕಳೆದುಕೊಳ್ಳುತ್ತ ಹೊದಂತೆಲ್ಲಾ ಸ್ವಾರ್ಥಿಯಾದ, ಪರಸ್ಪರ ಹೊಂದಾಣಿಕೆ ಕಮ್ಮಿಯಾಯಿತು. ಹೊಂದಾಣಿಕೆಯ ಬದಲಾಗಿ ಸ್ಪರ್ಧಾತ್ಮಕ ಭಾವನೆ ಹೆಚ್ಚುತ್ತಾ ಹೋಯಿತು. ನಾವು ಕೊಡ ದೈಹಿಕವಾಗಿ ಅದಕ್ಕೆ ಹೊಂದಿಕೊಂಡೆವು. ಆದರೆ ನಮ್ಮೆಲ್ಲ ಹಲವರು ಇಷ್ಟವಿಲ್ಲದಿದ್ದರೂ ಮಾನಸಿಕವಾಗಿ ಹೊಂದಿಕೊಂಡ್ಡಿದ್ದಾರೆ.

ಹೀಗೆ ಮುಂದುವರೆಯುತ್ತಾ ಹೋದರೆ ನಮ್ಮ ಬದುಕು ಎಲ್ಲಿಗೆ ಹೋಗಬಹುದು? ಮಾನಸಿಕವಾಗಿ ನಾವು ಹೇಗಾಗಬಹುದು? ನಮ್ಮ ಸಂಸ್ಕೃತಿ ಎಂತ ಅದಃ ಪತನಕ್ಕೆ ಹೋಗಬಹುದು? ಎಂಬುದನ್ನೆಲ್ಲಾ ನಾವು ಯೋಚಿಸಬೇಕಾದ ಸಂಗತಿ. ಕಡೆಯದಾಗಿ ನನ್ನ ಮನದಲ್ಲಿ ಮೂಡುವ ಪ್ರಶ್ನೆ ಎಂದರೇ ಇಂತಹ ವೇಗದ ಬದುಕು ನಮಗೆ ಬೇಕಾ?

May 5, 2012

ಭೈರಪ್ಪನವರ ಕೃತಿಗಳ ಪ್ರಭಾವ ಮತ್ತು ನನ್ನ ಅನಿಸಿಕೆ

ಈ ಲೇಖನದ ಮೂಲಕ ನನ್ನ ಅಭಿಪ್ರಾಯವನ್ನು ತಿಳಿಸಲು ಎಷ್ಟರ ಮಟ್ಟಿಗೆ ಅರ್ಹನೋ ತಿಳಿಯದು. ಕನ್ನಡಕ್ಕೆ ಮೊದಲ 'ಸರಸ್ವತಿ ಸಮ್ಮಾ ನ್' ಪ್ರಶಸ್ತಿ ತಂದುಕೊಟ್ಟ ಡಾ|| ಎಸ್.ಎಲ್.ಭೈರಪ್ಪನವರ ಬಗ್ಗೆ ನನ್ನ ಅನಿಸಿಕೆಯನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರು ಬರೆದಿರುವ ಹಲವು ಕೃತಿಗಳಲ್ಲಿ ನಾನು ಓದಿರುವುದು ಬಹಳ ಕಮ್ಮಿ ಅಂದರೆ ೪; ದಾಟು, ವಂಶವೃಕ್ಷ, ಮಂದ್ರ, ಆವರಣ. ಈ ನಾಲ್ಕರಲ್ಲೂ ವ್ಯಕ್ತವಗಿರುವ ಅವರ ವಿಚಾರಧಾರೆ ನನಗೆ ಎಷ್ಟರ ಮಟ್ಟಿಗೆ ಅರ್ಥವಾಗಿದೆ ಎಂದು ಹೇಳಲಾರೆ . ಆದರೆ ಮುಖ್ಯವಾಗಿ ಮಂದ್ರ ಮತ್ತು ಆವರಣ ಕಾದಂಬರಿಗಳಿಂದ ಪ್ರಭಾವಿತನಾಗಿರುವುದಂತು ನಿಜ.

ಮಂದ್ರವನ್ನು ಓದುತ್ತಾ ಹೋದಂತ್ತೆಲ್ಲ ನನ್ನಲ್ಲಿ ಹುದುಗಿದ್ದ ಸಂಗೀತಾಸಕ್ತಿ ಎಚ್ಚರಗೊಂಡಿತು, ಮೊದಲಿಗಿಂತ ಹೆಚ್ಚಾಯಿತು. ಒಬ್ಬ ವ್ಯಕ್ತಿಯ ಭಾವನೆಗಳನ್ನು ವರ್ಣಿಸಿರುವ ಶೈಲಿ, ಸಂಗೀತದ ವಿವಿಧ ರಾಗಗಳೊಂದಿಗಿನ ಹೋಲಿಕೆ, ನನಗೆ ಮತ್ತಷ್ಟು ಹಿಡಿಸಿದವು. ಆವರಣ; ಅದೊಂದು ಅದ್ಭುತ ಕೃತಿ ಎಂದೇ ಹೇಳಬಹುದು. ರಾಷ್ಟ್ರೀಯ ಭಾವೈಕ್ಯತೆಯ ಬಗ್ಗೆ ಹಿಂದು ಮತ್ತು ಮುಸಲ್ಮಾನರಿಗಿರುವ ಅವರದೇ ಆದಂತಹ ಅಭಿಪ್ರಾಯಗಳನ್ನು ತಿಳಿದಂತಾಯಿತು. ದೇವನೊಬ್ಬ, ನಾಮ ಹಲವು ಎಂಬ ಹಿಂದುಗಳ ಪರಿಕಲ್ಪನೆ ಮತ್ತು ಗಂಡು, ಹೆಣ್ಣುಗಳ ಸಮಾನತೆಯೇ ಗೊತ್ತಿಲ್ಲದ, ಎಕದೇವೋಪಾಸನೆಯನ್ನು ನಂಬಿರುವ ಮುಸಲ್ಮಾನ ಸಮಾಜದಲ್ಲಿರುವ ವಿಭಿನ್ನತೆಯನ್ನು ಚೆನ್ನಾಗಿ ಚಿತ್ರಿಸಿದ್ದಾರೆ. ಓದುತ್ತಾ ಹೋದಂತ್ತೆಲ್ಲಾ ಹಿಂದು ಮತ್ತು ಮುಸಲ್ಮಾನ ಧರ್ಮದ ವಿಭಿನ್ನತೆ ಜೊತೆಗೆ ಕಾಲಗರ್ಭದಲ್ಲಿ ಹುದುಗಿರುವ ಸತ್ಯಾಸತ್ಯತೆಗಳ ಪರಿಚಯವೂ ಆಗುತ್ತದೆ. ದಾಟುವಿನಲ್ಲಿ ವ್ಯಕ್ತವಾಗಿರುವ ಜಾತಿ ವತ್ಯಾಸ, ಇದರಿಂದ ಪ್ರೇಮಿಗಳ ನಡುವೆ ಉಂಟಾಗುವ ವೈಮನಸ್ಯ, ರಾಜಕಾರಣಿಗಳ ಅವಕಾಶವಾದಿತನ ಪರಿಪೂರ್ಣವಾಗಿ ವ್ಯಕ್ತವಾಗಿದೆ.

ವಂಶವೃಕ್ಷ ಮತ್ತು ಆವರಣದಲ್ಲಿ ಸಂಶೋಧನಕಾರ ಅಥವ ಕಾದಂಬರಿಕಾರ ಎಂಬ ಸಾಮ್ಯತೆ ನಮಗೆ ಕಾಣಿಸುತ್ತದೆ. ಒಂದು ಕಾದಂಬರಿ (ಐತಿಹಾಸಿಕವಾಗಲಿ, ಸಾಮಾಜಿಕವಾಗಲಿ) ಬರೆಯುವ ಮುನ್ನ ನಾವು ಮಾಡಿಕೊಳ್ಳಬೇಕಾದ ತಯಾರಿ ಎಂತಹದು ಎಂಬುದು ಈ ಎರಡು ಕಾದಂಬರಿಯಲ್ಲಿ ವ್ಯಕ್ತವಾಗಿದೆ.

ಸ್ವತಃ ಕಥೆಗಾರನಲ್ಲದಿದ್ದರೂ ಕಥೆ ಬರೆಯುತ್ತೇನೆ ಎಂಬ ಕಾರಣಕ್ಕೆ ನನಗೆ ಈ ಎರಡು ಕಾದಂಬರಿಗಳು ಮಾರ್ಗದರ್ಶಿಯಂತೆ. ೧-೨ ಕಥೆಗಳನ್ನು ಬರೆದಿರುವ ನಾನು ಮುಂದಿನ ಕಥೆ ಬರೆಯಬೇಕಾದರೆ ಪ್ರಸ್ತುತ ಕಾದಂಬರಿಗಳ ಪ್ರಭಾವವಿರುತ್ತದೆ ಎಂಬುದು ಅಕ್ಷರಶ: ನಿಜ. ವ್ಯಕ್ತಿ , ಭಾವನೆಗಳು, ಸಂಭಂದಗಳು, ಸನ್ನಿವೇಶಗಳ ನಿರೂಪಣೆ ನನ್ನಲ್ಲಿ ಹೊಸದೊಂದು ಉತ್ಸಾಹ ತಂದಿದೆ. ಈ ಕಾದಂಬರಿಗಲನ್ನು ಓದಿ ಎಷ್ಟರ ಮಟ್ಟಿಗೆ ನನ್ನ ಭಾಷ ಮತ್ತು ರಚನಾ ಕೌಶಲ್ಯ ಸುಧಾರಿಸಿದೆ ಎಂಬುದು ನನಗೂ ತಿಳಿದಿಲ್ಲ. ಮುಂದಿನ ಕಥೆಗಳನ್ನು ಬರೆಯುವಾಗ ಈ ಕೌಶಲ್ಯಗಳನ್ನು ಒರೆ ಹಚ್ಚಲು ಹೆಚ್ಚು ಉತ್ಸುಕನಾಗಿದ್ದೇನೆ. ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತೇನೆಂಬುದು ನನಗೆ ತಿಳಿದಿಲ್ಲ.

April 13, 2012

ಮಾಂಸಾಹಾರ ಬೇಕೆ...? ಬೇಡವೆ...?

ಸರ್ಕಾರ ಹೊರಡಿಸಿದ ಆದೇಶ ಅಂಬೇಡ್ಕರ್ ಜಯಂತಿಯಂದು ಮಾಂಸಾಹಾರ ನಿಷೇಧಿಸಿದೆ ಎಂದು. ಇದನ್ನು ಹಲವಾರು ಜನರು ತಮ್ಮ ರಾಜಕೀಯ ಲಾಭಕ್ಕಾಗಿ ಉಪಯೋಗಿಸಿಕೊಳ್ಳಬಹುದು, ಆದರೆ ನನಗನ್ನಿಸುವ ಪ್ರಕಾರ ಮಾಂಸಾಹಾರವೆಂಬುದು ಮೂಲಭೂತವಾಗಿ ಇರಬೇಕೆ ಬೇಡವೆ ಎಂದು.

ನಾನು ಇದನ್ನು ಒಂದು ಮಾನವೀಯತೆಯ ದೃಷ್ಟಿಯಿಂದ ನೋಡಲು ಇಚ್ಚಿಸುತ್ತೇನೆ. ನಾನೊಬ್ಬ ಸಸ್ಯಹಾರಿಯಾಗಿ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸುವುದು ಸಹಜ ಆದರೂ ಇದರಲ್ಲಿ ಸತ್ಯವಿದೆ ಎಂದು ನನ್ನ ಅನಿಸಿಕೆ. ನಮ್ಮ ಬಾಯಿಚಪಲಕ್ಕೊಸ್ಕರ ಒಂದು ಮೂಕಪ್ರಾಣಿಯನ್ನು ಕೊಲ್ಲುವುದು ಸರಿತೋರುವುದಿಲ್ಲ. ಅದರಲ್ಲಿನ ಸತ್ವ, ಪೌಷ್ಟಿಕತೆಯ ಬಗ್ಗೆ ಬೇರೆಯವರು ಏನೇ ಹೇಳಬಹುದು ಆದರೂ ಇವೆಲ್ಲವೂ ಮಾನವೀಯತೆಯನ್ನು ಮೀರುವುದಿಲ್ಲ.

ವೈಜ್ಞಾನಿಕವಾಗಿ ಮಾಂಸದಲ್ಲಿನ ರುಚಿಯಿರುವುದು ಅದರಿಂದ ಉತ್ಪತ್ತಿಯಾಗುವ ಹಾರ್ಮೋನಿನಿಂದ ಎಂದು ಧೃಡಪಟ್ಟಿದೆ. ಈ ವಿಚಾರ ದೃಷ್ಟಿಯಿಂದ ಹೊರ ದೇಶಗಳಲ್ಲಿ ಪ್ರಾಣಿಗಳನ್ನು ಕೊಲ್ಲುವ ಮುನ್ನ ಅದರ ಮಾಂಸದ ರುಚಿಯನ್ನು ಮತ್ತಷ್ಟು ಹೆಚ್ಚಿಸಲು ಶಾಕ್ ಕೊಟ್ಟು ಹಾರ್ಮೋನನ್ನ ಉತ್ಪತ್ತಿಯಾಗುವಂತೆ ಮಾಡುತ್ತಾರೆ. ಇದು ತೀರ ಅಮಾನವೀಯ ಮತ್ತು ಹಸುವಲ್ಲಿ ಮುಕ್ಕೋಟಿ ದೇವತೆಯನ್ನು ಕಾಣುವ ಭಾರತದಲ್ಲೂ. ಇತ್ತಿಚೆಗೆ ಈ ಪ್ರಕ್ರಿಯೆ ಜಾರಿಯಲ್ಲಿದೆ ಎಂಬುದು ವಿಷಾದದ ಸಂಗತಿ.

ಆರೋಗ್ಯದ ದೃಷ್ಟಿಯಿಂದಲೂ ಮಾಂಸಹಾರ ಅಷ್ಟು ಒಳ್ಳೆಯದಲ್ಲ ಎಂಬುದು ಬಹುತೇಕ ಜನಕ್ಕೆ ಗೊತ್ತಿರಬಹುದು. ವಯಸ್ಸಾದಂತೆಲ್ಲ ಮಾಂಸ ಅರಗುವುದು ಕಷ್ಟಸಾದ್ಯ ಎಂಬುದು ಎಲ್ಲರೂ ಒಪ್ಪಬೇಕಾದ ಸತ್ಯ. ಈ ಎಲ್ಲಾ ಕಾರಣದಿಂದಾಗಿ ಮಾಂಸಹಾರ ನಿಷೇಧ ಮಾಡುವುದಕ್ಕಿಂತ ಜನಗಳೇ ತ್ಯಜಿಸುವುದು ಒಳ್ಳೆಯದು... ಅಲ್ಲವೇ...?

April 7, 2012

ಕವಿತೆ...

ಕನಸಲ್ಲೂ ಕಲ್ಪನೆಗೆ ನಿಲುಕದಂತಹ ಚೆಲುವು ನಿನ್ನದು
ನೀನೊಂದು ಸುಮಧುರವಾದ ಹೂ
ನಾನಾಗುವೆ ನಿನ್ನೊಲುಮೆಯ ದುಂಬಿ
ಬಾ, ಸೇರಿ ಅರ್ಪಿಸೋಣ ಪ್ರಕೃತಿಗೆ ಮಧುವನ್ನು ತುಂಬಿ.

ಬಣ್ಣಿಸಲಾರೆ ನಿನ್ನ ಚೆಲುವನ್ನು, ರೂಪರಾಶಿಯನ್ನು
ಸೌಂದರ್ಯದ ರಸಮಂಜರಿಯನ್ನು
ಸೌಂದರ್ಯದ ಕಡಲಲ್ಲಿ ಮಿಂದೆದ್ದು ಬಂದಿರುವ
ಓ... ಕರುನಾಡ ಚಿಲುಮೆ
ಬಂದು ಬೆಳಗೆನ್ನ ಮನವನ್ನು.

ನಿನಗಾಗಿ ಕಾದಿರುವೆ..... ಇನ್ನೆಷ್ಟು ಕಾಯಿಸುವೆ...?
ವಿರಹದ ಬೇಗೆಯಲಿ ಬೇಯುತಿರುವೆ
ಪ್ರೇಮಾಗ್ನಿಯ ಧಗೆಯಲಿ ಬೆಂದಿರುವೆ
ಬಂದು ದರ್ಶನವನ್ನು ನೀಡು,
ಹಸನಾಗಿ, ತಂಪಾಗಿ ನಿನ್ನ ಮಡಿಲನ್ನು ಸೇರುವೆ.

ನನ್ನೊಳಗಿನ ಕವಿಯನ್ನು ಬಡಿದೆಬ್ಬಿಸಿದರೂ
ಬಣ್ಣಿಸಲಾರೆ... ನಿನ್ನ ಚೆಲುವನ್ನು
ಭಾಸ್ಕರನೂ ನಾಚುವಂತಹ ನಿನ್ನ ಮೊಗವನ್ನು
ಜೋಗದಂತೆ ದುಮ್ಮಿಕ್ಕುವ ನಿನ್ನ ಮುಡಿಯನ್ನು
ಪ್ರೀತಿಯ ಪರಾಕಾಷ್ಟೆಯನ್ನು ತಲುಪಿಸುವ ನಿನ್ನ  ಹೃದಯವನ್ನು
ಬಣ್ಣಿಸಲಾರೆ... ಬಣ್ಣಿಸಿ... ಸೋಲಲಾರೆ.

ಮಂಜು ಮುಸುಕಿದ ಹಾದಿಯಂತಾಗಿದೆ ನನ್ನ ಪ್ರೀತಿ
ಕಾಣುತಿದೆ ದೂರದಲ್ಲೊಂದು ಆಶಾಕಿರಣ
ತಲುಪಬಲ್ಲನೇ ಪ್ರೀತಿಯ ತೀರವನೆಂಬ ಭೀತಿ
ಮನಸ್ಸು ಮುದುಡಲು ಇದೇ ಕಾರಣ
ಬರಬಾರದೇ ನನ್ನ ಬಾಳನ್ನು ಬೆಳಗುವ ಮೂಡಣ.

ಹೂವಿನಲ್ಲಿ ಮಧು ತುಂಬಿರುವಂತೆ
ವೀಣೆಯಲ್ಲಿ ನಾದ ಹರಿಯುವಂತೆ
ದೇಗುಲಕೆ ಗರ್ಭಗುಡಿಯಂತೆ
ಇಅರಬೇಕು ನಾ, ನಿನ್ನಲ್ಲಿ ಅರ್ಧನಾರೀಶ್ವರನಂತೆ.

ಪ್ರಣಯೋದಯಕ್ಕೆ ಕಾರಣ ಗೊತ್ತಿಲ್ಲ
ಪ್ರಣಯಾಸ್ತಮಾನಕ್ಕೂ ಕಾರಣ ಗೊತ್ತಿಲ್ಲ
ಮಾತು ಗೊತ್ತಿಲ್ಲ, ಮೌನ ಗೊತ್ತಿಲ್ಲ
ಅವಳ ಮನಸ್ಸಿನ ಮಾತು ಗೊತ್ತಿಲ್ಲ
ಗೊತ್ತಿರುವುದೊಂದೆ ಅವಳ ನಗುವಿನ್ನಲ್ಲಿರುವ ಸಿಹಿ ಉತ್ತರ... ಗೊತ್ತಿಲ್ಲ.

April 2, 2012

ಮೂಕ ಮರ್ಮರ

"ಭಾವನೆಗಳೇ ಬದುಕು" ಎನ್ನುವುದಕ್ಕಿಂತ ಯಾರು ತನ್ನ ಜೀವನದಲ್ಲಿ ಭಾವನೆಗಳಿಗೆ ಪ್ರಮುಖ ಸ್ಥಾನ ಕೊಡುತ್ತಾನೋ ಅವನು ಭಾವಜೀವಿ ಎನ್ನುವುದು ನನ್ನ ಅಭಿಪ್ರಾಯ.

ಭಾವಜೀವಿಯಾದ ಯುವಕನೊಬ್ಬನು ತನ್ನ ಭಾವನೆಗಳನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸಿದಾಗ ಸಮಾಜದ ಪ್ರತಿಕ್ರಿಯೆ, ಅದರ ಪರಿಣಾಮವಾಗಿ ಆತನ ಮನಸ್ಸಿನಲ್ಲಾಗುವ ತೊಳಲಾಟಗಳು, ಭಾವನೆಗಳ ಸಂಘರ್ಷಗಳನ್ನು ಪ್ರೀತಿಯತಳಹದಿಯಲ್ಲಿ ಚಿತ್ರಿಸಲು ಪ್ರಯತ್ನಿಸಿದ್ದೇನೆ.

ಈ ಕಥೆಯನ್ನು ಬರೆಯಲು ಪ್ರತ್ಯಕ್ಷವಾಗಲ್ಲದಿದ್ದರೂ ಪರೋಕ್ಷವಾಗಿ ಸಹಾಯ ಮಾಡಿದ ನನ್ನ ಬಂಧುವರ್ಗ ಮತ್ತು ಮಿತ್ರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮಿತ್ರವರ್ಗದಲ್ಲಿ ವಿಶೇಷವಾಗಿ ಅಮೃತ, ರಶ್ಮಿ, ರಘು ರಂಗನಾಥ ಮತ್ತಿತರಿಗೂ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಕಾರ್ತಿಕ್ ಎಸ್ ಕಶ್ಯಪ್