April 13, 2012

ಮಾಂಸಾಹಾರ ಬೇಕೆ...? ಬೇಡವೆ...?

ಸರ್ಕಾರ ಹೊರಡಿಸಿದ ಆದೇಶ ಅಂಬೇಡ್ಕರ್ ಜಯಂತಿಯಂದು ಮಾಂಸಾಹಾರ ನಿಷೇಧಿಸಿದೆ ಎಂದು. ಇದನ್ನು ಹಲವಾರು ಜನರು ತಮ್ಮ ರಾಜಕೀಯ ಲಾಭಕ್ಕಾಗಿ ಉಪಯೋಗಿಸಿಕೊಳ್ಳಬಹುದು, ಆದರೆ ನನಗನ್ನಿಸುವ ಪ್ರಕಾರ ಮಾಂಸಾಹಾರವೆಂಬುದು ಮೂಲಭೂತವಾಗಿ ಇರಬೇಕೆ ಬೇಡವೆ ಎಂದು.

ನಾನು ಇದನ್ನು ಒಂದು ಮಾನವೀಯತೆಯ ದೃಷ್ಟಿಯಿಂದ ನೋಡಲು ಇಚ್ಚಿಸುತ್ತೇನೆ. ನಾನೊಬ್ಬ ಸಸ್ಯಹಾರಿಯಾಗಿ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸುವುದು ಸಹಜ ಆದರೂ ಇದರಲ್ಲಿ ಸತ್ಯವಿದೆ ಎಂದು ನನ್ನ ಅನಿಸಿಕೆ. ನಮ್ಮ ಬಾಯಿಚಪಲಕ್ಕೊಸ್ಕರ ಒಂದು ಮೂಕಪ್ರಾಣಿಯನ್ನು ಕೊಲ್ಲುವುದು ಸರಿತೋರುವುದಿಲ್ಲ. ಅದರಲ್ಲಿನ ಸತ್ವ, ಪೌಷ್ಟಿಕತೆಯ ಬಗ್ಗೆ ಬೇರೆಯವರು ಏನೇ ಹೇಳಬಹುದು ಆದರೂ ಇವೆಲ್ಲವೂ ಮಾನವೀಯತೆಯನ್ನು ಮೀರುವುದಿಲ್ಲ.

ವೈಜ್ಞಾನಿಕವಾಗಿ ಮಾಂಸದಲ್ಲಿನ ರುಚಿಯಿರುವುದು ಅದರಿಂದ ಉತ್ಪತ್ತಿಯಾಗುವ ಹಾರ್ಮೋನಿನಿಂದ ಎಂದು ಧೃಡಪಟ್ಟಿದೆ. ಈ ವಿಚಾರ ದೃಷ್ಟಿಯಿಂದ ಹೊರ ದೇಶಗಳಲ್ಲಿ ಪ್ರಾಣಿಗಳನ್ನು ಕೊಲ್ಲುವ ಮುನ್ನ ಅದರ ಮಾಂಸದ ರುಚಿಯನ್ನು ಮತ್ತಷ್ಟು ಹೆಚ್ಚಿಸಲು ಶಾಕ್ ಕೊಟ್ಟು ಹಾರ್ಮೋನನ್ನ ಉತ್ಪತ್ತಿಯಾಗುವಂತೆ ಮಾಡುತ್ತಾರೆ. ಇದು ತೀರ ಅಮಾನವೀಯ ಮತ್ತು ಹಸುವಲ್ಲಿ ಮುಕ್ಕೋಟಿ ದೇವತೆಯನ್ನು ಕಾಣುವ ಭಾರತದಲ್ಲೂ. ಇತ್ತಿಚೆಗೆ ಈ ಪ್ರಕ್ರಿಯೆ ಜಾರಿಯಲ್ಲಿದೆ ಎಂಬುದು ವಿಷಾದದ ಸಂಗತಿ.

ಆರೋಗ್ಯದ ದೃಷ್ಟಿಯಿಂದಲೂ ಮಾಂಸಹಾರ ಅಷ್ಟು ಒಳ್ಳೆಯದಲ್ಲ ಎಂಬುದು ಬಹುತೇಕ ಜನಕ್ಕೆ ಗೊತ್ತಿರಬಹುದು. ವಯಸ್ಸಾದಂತೆಲ್ಲ ಮಾಂಸ ಅರಗುವುದು ಕಷ್ಟಸಾದ್ಯ ಎಂಬುದು ಎಲ್ಲರೂ ಒಪ್ಪಬೇಕಾದ ಸತ್ಯ. ಈ ಎಲ್ಲಾ ಕಾರಣದಿಂದಾಗಿ ಮಾಂಸಹಾರ ನಿಷೇಧ ಮಾಡುವುದಕ್ಕಿಂತ ಜನಗಳೇ ತ್ಯಜಿಸುವುದು ಒಳ್ಳೆಯದು... ಅಲ್ಲವೇ...?

April 7, 2012

ಕವಿತೆ...

ಕನಸಲ್ಲೂ ಕಲ್ಪನೆಗೆ ನಿಲುಕದಂತಹ ಚೆಲುವು ನಿನ್ನದು
ನೀನೊಂದು ಸುಮಧುರವಾದ ಹೂ
ನಾನಾಗುವೆ ನಿನ್ನೊಲುಮೆಯ ದುಂಬಿ
ಬಾ, ಸೇರಿ ಅರ್ಪಿಸೋಣ ಪ್ರಕೃತಿಗೆ ಮಧುವನ್ನು ತುಂಬಿ.

ಬಣ್ಣಿಸಲಾರೆ ನಿನ್ನ ಚೆಲುವನ್ನು, ರೂಪರಾಶಿಯನ್ನು
ಸೌಂದರ್ಯದ ರಸಮಂಜರಿಯನ್ನು
ಸೌಂದರ್ಯದ ಕಡಲಲ್ಲಿ ಮಿಂದೆದ್ದು ಬಂದಿರುವ
ಓ... ಕರುನಾಡ ಚಿಲುಮೆ
ಬಂದು ಬೆಳಗೆನ್ನ ಮನವನ್ನು.

ನಿನಗಾಗಿ ಕಾದಿರುವೆ..... ಇನ್ನೆಷ್ಟು ಕಾಯಿಸುವೆ...?
ವಿರಹದ ಬೇಗೆಯಲಿ ಬೇಯುತಿರುವೆ
ಪ್ರೇಮಾಗ್ನಿಯ ಧಗೆಯಲಿ ಬೆಂದಿರುವೆ
ಬಂದು ದರ್ಶನವನ್ನು ನೀಡು,
ಹಸನಾಗಿ, ತಂಪಾಗಿ ನಿನ್ನ ಮಡಿಲನ್ನು ಸೇರುವೆ.

ನನ್ನೊಳಗಿನ ಕವಿಯನ್ನು ಬಡಿದೆಬ್ಬಿಸಿದರೂ
ಬಣ್ಣಿಸಲಾರೆ... ನಿನ್ನ ಚೆಲುವನ್ನು
ಭಾಸ್ಕರನೂ ನಾಚುವಂತಹ ನಿನ್ನ ಮೊಗವನ್ನು
ಜೋಗದಂತೆ ದುಮ್ಮಿಕ್ಕುವ ನಿನ್ನ ಮುಡಿಯನ್ನು
ಪ್ರೀತಿಯ ಪರಾಕಾಷ್ಟೆಯನ್ನು ತಲುಪಿಸುವ ನಿನ್ನ  ಹೃದಯವನ್ನು
ಬಣ್ಣಿಸಲಾರೆ... ಬಣ್ಣಿಸಿ... ಸೋಲಲಾರೆ.

ಮಂಜು ಮುಸುಕಿದ ಹಾದಿಯಂತಾಗಿದೆ ನನ್ನ ಪ್ರೀತಿ
ಕಾಣುತಿದೆ ದೂರದಲ್ಲೊಂದು ಆಶಾಕಿರಣ
ತಲುಪಬಲ್ಲನೇ ಪ್ರೀತಿಯ ತೀರವನೆಂಬ ಭೀತಿ
ಮನಸ್ಸು ಮುದುಡಲು ಇದೇ ಕಾರಣ
ಬರಬಾರದೇ ನನ್ನ ಬಾಳನ್ನು ಬೆಳಗುವ ಮೂಡಣ.

ಹೂವಿನಲ್ಲಿ ಮಧು ತುಂಬಿರುವಂತೆ
ವೀಣೆಯಲ್ಲಿ ನಾದ ಹರಿಯುವಂತೆ
ದೇಗುಲಕೆ ಗರ್ಭಗುಡಿಯಂತೆ
ಇಅರಬೇಕು ನಾ, ನಿನ್ನಲ್ಲಿ ಅರ್ಧನಾರೀಶ್ವರನಂತೆ.

ಪ್ರಣಯೋದಯಕ್ಕೆ ಕಾರಣ ಗೊತ್ತಿಲ್ಲ
ಪ್ರಣಯಾಸ್ತಮಾನಕ್ಕೂ ಕಾರಣ ಗೊತ್ತಿಲ್ಲ
ಮಾತು ಗೊತ್ತಿಲ್ಲ, ಮೌನ ಗೊತ್ತಿಲ್ಲ
ಅವಳ ಮನಸ್ಸಿನ ಮಾತು ಗೊತ್ತಿಲ್ಲ
ಗೊತ್ತಿರುವುದೊಂದೆ ಅವಳ ನಗುವಿನ್ನಲ್ಲಿರುವ ಸಿಹಿ ಉತ್ತರ... ಗೊತ್ತಿಲ್ಲ.

April 2, 2012

ಮೂಕ ಮರ್ಮರ

"ಭಾವನೆಗಳೇ ಬದುಕು" ಎನ್ನುವುದಕ್ಕಿಂತ ಯಾರು ತನ್ನ ಜೀವನದಲ್ಲಿ ಭಾವನೆಗಳಿಗೆ ಪ್ರಮುಖ ಸ್ಥಾನ ಕೊಡುತ್ತಾನೋ ಅವನು ಭಾವಜೀವಿ ಎನ್ನುವುದು ನನ್ನ ಅಭಿಪ್ರಾಯ.

ಭಾವಜೀವಿಯಾದ ಯುವಕನೊಬ್ಬನು ತನ್ನ ಭಾವನೆಗಳನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸಿದಾಗ ಸಮಾಜದ ಪ್ರತಿಕ್ರಿಯೆ, ಅದರ ಪರಿಣಾಮವಾಗಿ ಆತನ ಮನಸ್ಸಿನಲ್ಲಾಗುವ ತೊಳಲಾಟಗಳು, ಭಾವನೆಗಳ ಸಂಘರ್ಷಗಳನ್ನು ಪ್ರೀತಿಯತಳಹದಿಯಲ್ಲಿ ಚಿತ್ರಿಸಲು ಪ್ರಯತ್ನಿಸಿದ್ದೇನೆ.

ಈ ಕಥೆಯನ್ನು ಬರೆಯಲು ಪ್ರತ್ಯಕ್ಷವಾಗಲ್ಲದಿದ್ದರೂ ಪರೋಕ್ಷವಾಗಿ ಸಹಾಯ ಮಾಡಿದ ನನ್ನ ಬಂಧುವರ್ಗ ಮತ್ತು ಮಿತ್ರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮಿತ್ರವರ್ಗದಲ್ಲಿ ವಿಶೇಷವಾಗಿ ಅಮೃತ, ರಶ್ಮಿ, ರಘು ರಂಗನಾಥ ಮತ್ತಿತರಿಗೂ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಕಾರ್ತಿಕ್ ಎಸ್ ಕಶ್ಯಪ್