December 28, 2017

ರೂಪಸಿ

 
 
ರೂಪಸಿ ಕಂಡಳು ಕನಸಿನಲಿ
ಮನಸಿನ ಆಳದ ಪುಟಗಳಲಿ
ಅವಳು ಆಡಿದ ಮಾತುಗಳು
ಕಳಚಿತು ಹೃದಯದ ಬೇನೆಯನು

ಮೊಗದಲ್ಲಿನ ನುಸು ನಾಚಿಕೆ ಕಾಡಿತೆನ್ನನೂ
ಪ್ರತಿ ನೋಟವು ಹೊಂಗನಸಿನ ಕದವ ತೆರೆಯಿತೂ

ಸ್ವರ್ಗವ ಕಂಡೆನು ಸ್ಪರ್ಶದಲಿ
ಆಕೆಯ ಮಡಿಲಿನ ತೊಟ್ಟಿಲಲಿ
ಸವಿದೆನು ಜೇನಿನ ಸಿಹಿಯನ್ನು
ಪ್ರೇಮದ ಮಾತಿನ ಸವಿಯನ್ನು

ಪ್ರತಿ ಜನ್ಮಕೂ ಉಸಿರಾಗುವೆ ಪ್ರೇಮ ಪಯಣದಿ
ಜಗ ಮರೆವೆನು ನೀನಿದ್ದರೆ ನನ್ನ ಜೊತೆಯಲಿ

December 27, 2017

ಕ್ರಿಸ್ಮಸ್ ಹಾಗು ಹೊಸ ವರ್ಷ ಹತ್ತಿರ ಬಂತು

ಬಹುರಾಷ್ಟೀಯ ಕಂಪನಿಗಳಲ್ಲಿ ಸೀಕ್ರೇಟ್ ಸಾಂತಾ ಆಡೋದು, ಅನೇಕರು ಹುಟ್ಟಿದ ಹಬ್ಬ ಎಂದು ಕೇಕ್ ತಿನ್ನೋದು, ವೈನ್ ಕುಡಿಯೋದು ಇತ್ತೀಚಿನ ದಿನಗಳಲ್ಲಿ ಸಹಜವಾಗಿದೆ. ಪಿಜ್ಜಾ ಅಂಗಡಿಗಳು ಹಲವು ಕೊಡುಗೆಗಳನ್ನು ಕೊಡುತ್ತವೆ. ಕೆಲವರು ಮೊಟ್ಟೆ ಇಲ್ಲದ ಕೇಕ್ ಮಾಡುತ್ತೇವೆ ಅಂತಾನು ಗ್ರಾಹಕರನ್ನು ಆಕರ್ಷಿಸುತ್ತಾರೆ. ಇಸ್ಕಾನ್ ದೇವಾಲಯವೂ ಸಹ ಇದಕ್ಕೆ ಹೊರತಾಗಿಲ್ಲ. ದೇವರ ಪ್ರಸಾದವೆಂದು ಕೇಕ್ ಕೊಡೋ ಪದ್ಧತಿ ಅಲ್ಲಿದೆ.

ಮಕ್ಕಳು, ಯುವಕ ಯುವಕಿಯರು ಮುಗಿಬಿದ್ದು ಹಬ್ಬದಲ್ಲಿ ಸಂಭ್ರಮಿಸುತ್ತಾರೆ. ಹಾಂ ಇವೆಲ್ಲ ತಪ್ಪು ಎಂದು ನಾನೇನು ಪ್ರತಿಪಾದಿಸುತಿಲ್ಲ ಬದಲಾಗಿ ಹೀಗೆ ಆಚಾರಿಸುವ ಮೊದಲು ಆ ಆಚರಣೆ ಹಿಂದಿನ ಅರ್ಥವನ್ನು ತಿಳಿದುಕೊಂಡು ಮುಂದುವರೆಯಿರಿ. ಯಾವುದೇ ವಿಚಾರವನ್ನು ಅರ್ಥ ಮಾಡಿಕೊಂಡು ಆಚರಿಸಿದರೆ ಒಳಿತು ಎಂಬುದಷ್ಟೇ ನನ್ನ ಉದ್ದೇಶ.

 
ಕ್ರಿಶ್ಟಿಯನ್ ಪಂಥದಲ್ಲಿ 3 ದೈವದ ಕಲ್ಪನೆ ಇದೆ.

1. ಗಾಡ್; ದಿ ಹೋಲಿ ಫಾದರ್
2. ಗಾಡ್; ದಿ ಹೋಲಿ ಸನ್
3. ಗಾಡ್; ದಿ ಹೋಲಿ ಘೋಸ್ಟ್

ಈ ಮೂರು ದೇವರಲ್ಲಿ ಕ್ರಿಸ್ತನನ್ನು ದಿ ಹೋಲಿ ಸನ್ ಎನ್ನುತ್ತಾರೆ. ಕ್ರಿಸ್ತನಿಗೂ ಕೇಕಿಗು, ವೈನಿಗೂ ಏನು ಸಂಬಂಧ ಎಂದು ಕೇಳಬಹುದು. ಸಂಬಂಧ ಖಂಡಿತ ಇದೆ. ಕ್ರಿಸ್ತನನ್ನು ಶಿಲುಬೆಗೆರಿಸಿ ಕೊಂದರು. ಮೂರು ದಿನಗಳ ನಂತರ ಆತ ಹುಟ್ಟಿ ಬಂದ ಎಂಬ ಕಲ್ಪನೆ ಇದೆ. ಅದೇ ರೀತಿ ಕ್ರಿಸ್ತ ತನ್ನ ದೇಹವನ್ನು ತನ್ನ ಜನರಿಗಾಗಿ ಬಿಟ್ಟು ಕೊಟ್ಟಿದ್ದೇನೆ ಎಂಬ ತ್ಯಾಗದ ಕಲ್ಪನೆ ಕೂಡ ಇದೆ. ಆ ಕಲ್ಪನೆಗೆ ಅನುಸಾರವಾಗಿ ಕ್ರಿಶ್ಟಿಯನ್ನರು ಕೇಕ್ ಅನ್ನೋದನ್ನು ಆತನ ದೇಹದ ಮಾಂಸ ಮತ್ತು ವೈನನ್ನು ಆತನ ದೇಹದ ರಕ್ತ ಎಂದು ಸೇವಿಸುತ್ತಾರೆ. ಇದನ್ನು ಕ್ರೌರ್ಯಾ ಅನ್ನೋದೋ ಅಥವಾ ಅಪರಿಮಿತವಾದ ಭಕ್ತಿ ಅನ್ನೋದು ತಿಳಿಯದು.

ಇದೇ ಕಲ್ಪನೆಯೊಂದಿಗೆ ಪೋರ್ಚುಗೀಸಿನ ಪಾದ್ರಿ ಫ್ರಾನ್ಸಿಸ್ ಕ್ಸೇವಿಯರ್ ಸ್ವಾತಂತ್ರ್ಯ ಪೂರ್ವದಲ್ಲಿ (1542) ಕುಡಿಯುವ ನೀರಿನ ಭಾವಿಯಲ್ಲಿ ವೈನಿನಲ್ಲಿ ಅದ್ದಿದ ಬ್ರೇಡ್ ತುಂಡನ್ನು ಹಾಕಿ ಮತಾಂತರ ಮಾಡಿದ ಉದಾಹರಣೆ ಇದೆ. ಈ ರೀತಿ ಮತಾಂತರ ಮಾಡಿಯೇ ಪೋರ್ಚುಗೀಸರು ಗೋವೆಯನ್ನು ಆಕ್ರಮಿಸಿಕೊಂಡರು. ನಂತರ ಯೂರೋಪಿಯನ್ನರು (ಕ್ರಿಶ್ಟಿಯನ್ನರು) ಭಾರತವನ್ನು ಆಳಿದರು. ಮುಂದೆ ಮೇಕಾಲೆ ತಂದಂತಹ ಆಂಗ್ಲ ಶಿಕ್ಷಣ ಪದ್ಧತಿಯಿಂದ ಭಾರತೀಯರು ಬೌದ್ಧಿಕವಾಗಿ ಯೂರೋಪಿಯನ್ನರಿಗೆ ಗುಲಾಮರಾದರು. ನಾಗಾಲಾಂಡ್, ಮಿಜೋರಾಮ್ ಪ್ರಾಂತ್ಯಗಳಲ್ಲಿ 1902ರಲ್ಲಿ 98% ರಷ್ಟು ಬುಡಕಟ್ಟಿನವರಿದ್ದರು 2% ಕ್ರಿಶ್ಟಿಯನ್ನರಿದ್ದರು. ಕೇವಲ 100 ವರ್ಷದಲ್ಲಿ ಪರಿಸ್ಥಿತಿ ಬದಲಾಗಿದೆ. ಈಗ 98% ಕ್ರಿಶ್ಟಿಯನ್ನರು 2% ರಷ್ಟು ಬುಡಕಟ್ಟು ಜನಾಂಗ ಅಲ್ಲಿದೆ.

ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ನಾವಿನ್ನು ಮಾನಸಿಕವಾಗಿ ಯೂರೋಪಿಯನ್ನರಿಗೆ (ಕ್ರಿಶ್ಟಿಯನ್ನರಿಗೆ) ಗುಲಾಮರಾಗೆ ಉಳಿದಿದ್ದೇವೆ. 'ತಮಸೋಮ ಜ್ಯೋತಿರ್ಗಮಯ' ಅನ್ನುವ ನಾವು ದೀಪವನ್ನು ಆರಿಸಿ ಕೇಕ್ ತಿಂದು ಹಬ್ಬವನ್ನು ಆಚರಿಸೋದು ಎಷ್ಟರ ಮಟ್ಟಿಗೆ ಸರಿ ಎಂಬುದು ನನ್ನ ಕಾಡುತ್ತಿರುವ ಪ್ರಶ್ನೆ. ಕ್ರಿಸ್ಮಸ್ ಹಾಗು ಹೊಸ ವರ್ಷ ಬಂತು ಆದ್ದರಿಂದ ಕೇಕ್ ತಿನ್ನುವ ಮತ್ತು ವೈನ್ ಕುಡುಯುವ ಮುನ್ನ ಒಮ್ಮೆ ಯೋಚಿಸಿ.

October 23, 2017

ಪ್ರೀತಿ - ವಿಷವೂ ಹೌದು, ಅಮೃತವೂ ಹೌದು

ಮನುಷ್ಯನ ಮನಸ್ಸು ಅನ್ನೋದು ಭಾವನೆಗಳ ಕಡಲು. ಈ ಭಾವನೆಗಳು ವಿವಿಧ ರೂಪಗಳಲ್ಲಿ ಹೊರ ಹೊಮ್ಮುತ್ತದೆ. ಕೋಪ, ದ್ವೇಷ, ಪ್ರೀತಿ, ಮಮತೆ, ವ್ಯಂಗ್ಯ, ಸಂತೋಷ, ದುಃಖ ಹೀಗೆ ಹತ್ತು ಹಲವು. ಕೋಪ ಹೇಗೆ ದ್ವೇಷದ ಮೂಲವೋ ಹಾಗೆ ಪ್ರೀತಿ ಮಮತೆಯ ಮೂಲ. ಇವೆಲ್ಲ ಒಂದಕ್ಕೊಂದು ಪೂರಕವೂ ಹೌದು.  ಕೆಲವು ಸಲ ಎಲ್ಲ ಒಂದೆ ಅನ್ನಿಸಿದರು ಅವೆಲ್ಲ ವಿವಿಧ ಹಂತಗಳಲ್ಲಿ ಬೇರೆ ಬೇರೆಯಾಗಿ ಕಾಣುತ್ತದೆ.

ಈ ಭಾವನೆಗಳಲ್ಲಿ ಪ್ರೀತಿ ಎಂಬುದು ನನಗೆ ಎಲ್ಲಕ್ಕಿಂತ ವಿಶಿಷ್ಟವಾಗಿ ಕಾಣುತ್ತದೆ. ಈ ಭಾವನೆಗೆ ವಿವಿಧ ಹಂತಗಳು ಮತ್ತು ವಿವಿಧ ರೂಪಗಳಿರುವುದು ನನ್ನ ಅನುಭವಕ್ಕೆ ಬಂದಿದೆ. ತಾಯಿ ಮಕ್ಕಳ ಮೇಲಿನ ಭಾವವಾದ ಮಮತೆ, ಸೋದರ, ಸೋದರಿಯರ ನಡುವಿನ ಬ್ರಾತೃತ್ವ, ಮಿತ್ರರೊಡಗಿನ ಸ್ನೇಹ, ಸಂಗಾತಿಯೊಡಗಿನ ಪ್ರೇಮ ಮತ್ತು ಇವೆಲ್ಲಕ್ಕೂ ಮಿಗಿಲಾಗಿ ನಿಲ್ಲುವುದು ನಾವು ದೇಶದ ಅಥವಾ ಪರಮಾತ್ಮನ ಮೇಲೆ ಹೊಂದಿರುವ ಭಕ್ತಿಭಾವ.
  • ತಾಯಿಯ ಮಮತೆ ಸ್ವಾರ್ಥ ರಹಿತವಾದದ್ದು.
  • ಜಗತ್ತನ್ನು ಬ್ರಾತೃತ್ವದ ಹಾಗು ಮಿತ್ರತ್ವದ ನೆಲೆಗಟ್ಟಿನಲ್ಲಿ ನೋಡುವವನಿಗೆ ಅನೇಕ ಸೋದರ, ಸೋದರಿಯರು, ಸ್ನೇಹಿತರು ಸಿಗುತ್ತಾರೆ.
  • ಪರಮಾತ್ಮ ಅಥವಾ ದೇಶದ ಮೇಲಿನ ಭಕ್ತಿ ವ್ಯಕ್ತಿಗತವಾದದ್ದು, 
ಭಕ್ತಿ ಎನ್ನುವುದು ನಾವು ಪಡೆದುಕೊಂಡಿರುವ ಸಂಸ್ಕಾರದ ಮೇಲೆ ನಿರ್ಧಾರವಾಗುತ್ತದೆ ಮತ್ತು ಎಲ್ಲಕ್ಕಿಂತ ಮೇಲ್ಮಟ್ಟದ್ದು. ಸುಲಭವಾಗಿ ಎಲ್ಲರಿಗೂ ದಕ್ಕುವುದಲ್ಲ. ಕೆಲವು ಅಸಮಾನ್ಯರು; ಶ್ರೀ ರಾಮಕೃಷ್ಣ, ವಿವೇಕಾನಂದರಿಗೆ ಇಂತಹುದಕ್ಕಾಗಿ ಹಾತೊರೆಯುತ್ತಾರೆ. ಇವೆಲ್ಲಕ್ಕಿಂತ ನನಗೆ ವಿಭಿನ್ನ ಅನ್ನಿಸುವುದು, ಸಮಾನ್ಯ ಜನತೆ ಹಾತೊರೆಯುವುದು; ಸಂಗಾತಿಯೊಂದಿಗಿನ ಪ್ರೇಮಕ್ಕಾಗಿ. ಹೌದು, ಜನ ಸಾಮಾನ್ಯರಲ್ಲಿ ಸಮಾನ್ಯನಾದ ನನ್ನ ಪ್ರೇಮವೆಂಬ ಭಾವನೆ.


ವ್ಯಕ್ತವಾದರೆ ಪ್ರೇಮ ಇಲ್ಲವಾದರೆ ಅದೊಂದು ಅರ್ಥವಿಲ್ಲದ ಸಂಗತಿಯಾಗುತ್ತದೆ. ಪ್ರೇಮಕ್ಕೆ ಎರಡು ಮುಖ. ಇದು ಬದುಕಲ್ಲಿ ಸಂತೋಷ ಮತ್ತು ದುಃಖ ಎರಡನ್ನೂ ಗರಿಷ್ಟ ಮಟ್ಟದಲ್ಲಿ ಉಂಟು ಮಾಡುತ್ತದೆ ಎಂಬುದು ನನ್ನ ಅನಿಸಿಕೆ. ಸಾಯುವವರನ್ನು ಬದುಕಿಸುತ್ತದೆ ಮತ್ತು ಬದುಕಿರುವವರನ್ನು ಪ್ರತಿದಿನವೂ ಕೊಲ್ಲುತ್ತದೆ. ಸಂಗಾತಿ ಇಲ್ಲವೇ ಇದ್ದರೆ ಒಂದು ರೀತಿ ನೆಮ್ಮದಿ. ಸಂಗಾತಿಯೊಂದಿಗಿನ ಪ್ರೇಮ ಪಡೆದಾಗ ಬದುಕು, ಸುಖದ ಸೋಪಾನವೆನ್ನಬಹುದಾದ ಸ್ವರ್ಗವಾಗುತ್ತದೆ. ಸಂಗಾತಿಯ ಪ್ರೇಮ ಸಿಕ್ಕಿ ಕಳೆದುಕೊಂಡರೆ ಅದೇ ಬದುಕು ನರಕವಾಗುತ್ತದೆ. ಇದೇ ಪ್ರೇಮದ ವೈಶಿಷ್ಯ. ಏಕಕಾಲಕ್ಕೆ ನಗು ಮತ್ತು ಅಳು ಬರಿಸುವ ತಾಕತ್ತು ಪ್ರೇಮಕ್ಕಿದೆ. ಮನಸ್ಸಿನ್ನಲ್ಲಿ ಬೆಟ್ಟದಷ್ಟು ದುಃಖವಿದ್ದರೂ ಮುಖದ ಮೇಲೆ ನಗು ತರಿಸುವ ಶಕ್ತಿ ಪ್ರೇಮಕ್ಕಿದೆ.

ಭಾವನೆಗಳೇ ಬದುಕು
ಬದುಕಿನಲ್ಲಿ ನೋವು ನಲಿವು ಸಹಜ
ಏನೇ ಹೇಳಿ...
ಮೊಗದಲ್ಲಿನ ನಗು ನಕಲಾಗಬಹುದು
ದುಃಖದ ಅಳು ಎಂದೆಂದಿಗೂ ಸತ್ಯ


ಪ್ರೇಮ ಸತ್ಯದ ಸಂಕೇತ, ಅದು ಎಂದಿಗೂ ಸುಳ್ಳಾಗದು. ಪ್ರೇಮಕ್ಕೆ ಜನ ಮೋಸ ಮಾಡಬಹುದೇ ಹೊರತು ಪ್ರೇಮ ಎಂದಿಗೂ ಮೋಸ ಮಾಡುವುದಿಲ್ಲ. ಅದು ಕಷ್ಟ ಕೊಡಬಹುದು, ದಿಕ್ಕು ತೋಚದಂತೆ ಮಾಡಬಹುದು. ಅದರೆ ಅದಕ್ಕೆ ನಾವು ಕುಗ್ಗಬಾರದು. ಪ್ರೇಮದ ಮೇಲೆ ನಂಬಿಕೆ ಇಟ್ಟು, ತಾಳ್ಮೆಯಿಂದ ವರ್ತಿಸಿದರೆ ಅದೇ ಪ್ರೇಮ ನಮ್ಮ ಕೈ ಹಿಡಿಯುತ್ತದೆ ಮತ್ತು ಕಾಪಾಡುತ್ತದೆ. ಜೀವನ ಸರಾಗವಾಗುತ್ತದೆ.

ಪ್ರೀತಿಯ ಪಿಸುಮಾತು ಇರಲಿ ನಮ್ಮಲ್ಲಿ
ಅದರ ಗಂಧ ಎಲ್ಲೆಲ್ಲು ಪಸರಿಸಲಿ
ಒಲವಿಂದ ಬದುಕು ಹಸನಾಗಲಿ
ಪ್ರೀತಿ, ಪ್ರೇಮ, ಪ್ರಣಯ ಬದುಕಾಗಲಿ

ಪ್ರೇಮ ಎಂಬುದನ್ನು ವರ್ಣಿಸೋದಾದರೆ ಅದು ಬದುಕು ಮತ್ತು ಸಾವನ್ನು ಪರಿಚಯಿಸುವ ಅಮೃತವೂ ಹೌದು, ವಿಷವೂ ಹೌದು. ಆದ್ದರಿಂದಲೇ ಪ್ರೀತಿಯೆಂಬುದು ವಿಷಾಮೃತ!

June 5, 2017

ನಾವ್ಯಾಕೆ ಹೀಗೆ...? - ಭಾರತೀಯರು ಏಕೆ ತಾಂತ್ರಿಕತೆ ವಿಚಾರದಲ್ಲಿ ಬಲಾಢ್ಯರಲ್ಲ

ಕೆಲ ದಿನಗಳಿಂದ ನಾನು ಜಗತ್ತಿನಲ್ಲಿ ನಡೆದಿರುವ ಮತ್ತು ನಡೆಯುತ್ತಿರುವ ಆವಿಷ್ಕಾರಗಳ ಕುರಿತು ಹುಡುಕಾಟ ನಡೆಸುತ್ತಿದ್ದೆ. ವಿದ್ಯುತ್, ಗಣಕಯಂತ್ರ, ದೂರವಾಣಿ, ಟೀವಿ, ರೇಡಿಯೋ, ಬುಲೆಟ್ ರೈಲು ಹೀಗೆ ಮುಂತಾದ ವಸ್ತುಗಳ ಪಟ್ಟಿ ಮಾಡಿದೆ. ಕೆಲ ದಿನಗಳ ಹಿಂದೆ ಒಂದು ಸುದ್ದಿ ಓದಿದೆ - 'ಸ್ವಯಂಚಾಲಿತ ಬಸ್ ಚಾಲನೆಗೆ ಸಿದ್ಧ, ಮುಂದಿನ ವರ್ಷದಿಂದ ಸೇವೆ ಆರಂಭ'. ಹೀಗೆ ಪಟ್ಟಿ ಮಾಡಿದ ನಂತರ ಈ ವಸ್ತುಗಳ, ಸ್ವಯಂಚಾಲಿತ ವಾಹನದ ಪರಿಕಲ್ಪನೆ ಹುಟ್ಟಿದ್ದು ಮತ್ತು ಕಾರ್ಯರೂಪಕ್ಕೆ ತರುತ್ತಿರುವ ದೇಶಗಳು ಯಾವುವು ಎಂದು ಗಮನಿಸಿದೆ. ಜರ್ಮನಿ, ಅಮೇರಿಕ, ಜಪಾನ್, ಕೊರಿಯಾ, ಚೀನಾ, ರಷ್ಯಾ ಎಂದು ತಿಳಿಯಿತು. ಈ ಪಟ್ಟಿಯನ್ನು ನೋಡಿ ನನಗೆ ಆಶ್ಚರ್ಯ ಮತ್ತು ಬೇಸರ ಒಮ್ಮೆಲೆ ಆಯಿತು. ಕಾರಣವೆಂದರೆ, ಈ ಪಟ್ಟಿಯಲ್ಲಿ ಭಾರತ ಇರಲಿಲ್ಲ...!!! ಭಾರತದಲ್ಲಿ 23 ಐ.ಐ.ಟಿ ಗಳು, 2016 ವರ್ಷಾನುಸಾರ 7080 ಇಂಜಿನೀರಿಂಗ್ ಕಾಲೇಜುಗಳಿವೆ. ಆದರೂ ನಮ್ಮಲ್ಲಿ ಆವಿಷ್ಕಾರಗಳು ಆಗುತ್ತಿಲ್ಲ. ಹಾಗೆ ನೋಡಿದರೆ ಇಸ್ರೋ ಮತ್ತು ಡಿ.ಆರ್.ಡಿ.ಓ ಈ ವಿಚಾರದಲ್ಲಿ ಭಾರತದ ಹಿರಿಮೆಯನ್ನು ಜಗತ್ತಿನೆದುರಿಗೆ ಎತ್ತಿ ಹಿಡಿದಿದೆ. ಅದಕ್ಕಾಗಿ ನಾವು ನಿಜಕ್ಕೂ ಹೆಮ್ಮೆ ಪಡಬೇಕು. ಆದರೂ ನನಗೊಂದು ಪ್ರಶ್ನೆ ಕಾಡುತ್ತಿದೆ. ಭಾರತ ಏಕೆ ತಾಂತ್ರಿಕತೆ ವಿಚಾರದಲ್ಲಿ ಬಲಾಢ್ಯ ದೇಶ ಅಲ್ಲ?
ಈ ಪ್ರಶ್ನೆಗೆ ಉತ್ತರದ ಹುಡುಕಾಟದಲ್ಲಿದ್ದಾಗ ನನಗೆ 2 ವಿಚಾರಗಳು ಗಮನಕ್ಕೆ ಬಂದವು. ಮೊದಲನೆಯದಾಗಿ ಶಿಕ್ಷಣ ಮಾಧ್ಯಮ ಮತ್ತು ಎರಡನೆಯದಾಗಿ ಕಾರ್ಯ ವೈಖರಿ.
1. ಶಿಕ್ಷಣ ಮಾಧ್ಯಮ:
ಭಾರತದಲ್ಲಿ ವೃತ್ತಿ ಪರ ಶಿಕ್ಷಣ, ಶುದ್ಧ ವಿಜ್ಞಾನ (Pure Science), ತಂತ್ರಜ್ಞಾನ, ವೈದ್ಯಕೀಯ, ಈ ಎಲ್ಲ ಕ್ರಮವನ್ನು ನಾವು ಓದಬೇಕಾಗಿರುವುದು ಆಂಗ್ಲ ಮಾಧ್ಯಮದಲ್ಲಿ (English medium). ಇಂಗ್ಲೀಷ್ ಈ ದೇಶದ ಭಾಷೆ ಅಲ್ಲ, ಬ್ರಿಟೀಷರಿಂದ ಬಳುವಳಿಯಾಗಿ ಬಂದದ್ದು. ಹೌದು ಸಮಸ್ಯೆ ಇರುವುದೇ ಇಲ್ಲಿ. ನಮ್ಮದಲ್ಲದ ಒಂದು ಭಾಷೆಯನ್ನು ಓದಿ ಅರಗಿಸಿಕೊಂಡು ಅದರ ಆಧಾರದ ಮೇಲೆ ತತ್ವಗಳನ್ನು ಅರ್ಥೈಸಿಕೊಳ್ಳಬೇಕು. ಇದು ನಿಜಕ್ಕೂ ಕಷ್ಟವೇ ಸರಿ. ಭಾಷೆ ಅನ್ನುವುದು ಶಾಲೆಗಳಲ್ಲಿ ಕಲಿಸುವುದಲ್ಲ ಬದಲಾಗಿ ಮನೆಯಿಂದಲೇ ಅದನ್ನು ಅನುಭವಿಸಿ ಅರ್ಥೈಸಿಕೊಳ್ಳುವಂತಹುದು. ಶಾಲೆಯಲ್ಲಿ ಕಲಿಸುವುದು ಆ ಭಾಷೆಯ ವಿವಿಧ ಆಯಾಮಗಳ ಬಗ್ಗೆ ಅಷ್ಟೆ. ವಿಜ್ಞಾನವನ್ನು ನಾವು ಕಲಿಯುವುದು ಶಾಲೆಯಲ್ಲಿ, ಕಲಿಯುವ ಮಾಧ್ಯಮ ಆಂಗ್ಲವಾಗಿರುವುದರಿಂದ ಅದೊಂದು ಹೊರೆಯಾಗುತ್ತದೆ. ಮೊದಲು ನಮ್ಮದಲ್ಲದ ಭಾಷೆ ಕಲಿತು ಅರ್ಥೈಸಿಕೊಳ್ಳಬೇಕು ಅದರ ಮೇಲೆ ವಿಜ್ಞಾನವನ್ನು ಕಲಿಯಬೇಕು. ಈ ದೃಷ್ಟಿಯಲ್ಲಿ ಜರ್ಮನಿ, ಜಪಾನ್, ಕೊರಿಯಾ ದೇಶದ ಶಿಕ್ಷಣ ಪದ್ಧತಿ ಮೆಚ್ಚತಕ್ಕದ್ದೆ. ಅಲ್ಲಿ ಮೊದಲಿನಿಂದಲೂ ಕಲಿಯುವುದು ತಮ್ಮ ಮಾತೃಭಾಷೆಯಲ್ಲೇ. ಆದ್ದರಿಂದ ವಿಚಾರಗಳನ್ನು ಅವರು ಬೇಗ ಅರ್ಥೈಸಿಕೊಳ್ಳುತ್ತಾರೆ. ಜರ್ಮನಿಯವರು ಸಹ ಇಂಗ್ಲೀಷ್ ಭಾಷೆ ಕಲಿಯುತ್ತಾರೆ, ಅದು ವ್ಯವಹರಕ್ಕಾಗಿ ಹೊರತು ಶಿಕ್ಷಣದ ಮಾಧ್ಯಮವಾಗಲ್ಲ.
ಆ ದೇಶದಲ್ಲಿ ಸಾಂಸ್ಕೃತಿಕ ಅಥವಾ ಭಾಷೆ ವಿಚಾರಗಳಲ್ಲಿ ಭಿನ್ನತೆ ಅಷ್ಟಾಗಿ ಕಂಡುಬರುವುದಿಲ್ಲ. ಇಡೀ ದೇಶದಲ್ಲಿ ಇರುವುದು ಒಂದೇ ಭಾಷೆ. ಅದರೆ ನಮ್ಮಲ್ಲಿ ಹಲವಾರು ಭಾಷೆ, ಸಂಸೃತಿ. ಕರ್ನಾಟಕದಲ್ಲೇ 25 ಕೀ.ಮೀ ಗಳಿಗೆ ಕನ್ನಡ ಮಾತಾಡುವ ಶೈಲಿ ಬದಲಾಗುತ್ತದೆ. ಇನ್ನೂ ಇಡೀ ದೇಶಕ್ಕೆ ಒಂದೇ ಭಾಷೆಯನ್ನು ಮಾಧ್ಯಮವನ್ನಾಗಿಸುವುದು ಕಷ್ಟವೇ ಸರಿ. ಆದರೇ ಬ್ರಿಟೀಷರು ಅದನ್ನು ತಮ್ಮ ಅಧಿಕಾರದ ಬಲದಿಂದ ಸಾಧ್ಯವಾಗಿಸಿದರು. ಅವರೇನೋ ನಮ್ಮ ದೇಶವನ್ನು ಹಾಳು ಮಾಡಲೆಂದೇ ಈ ರೀತಿ ಮಾಡಿದರು. ಆದರೆ ಸ್ವಾತಂತ್ಯ್ರ ನಂತರ ನಮ್ಮದೇ ರೀತಿಯಾದ ಶಿಕ್ಷಣ ಪದ್ಧತಿಯನ್ನು ಅನುಷ್ಟಾನಗೊಳಿಸುವಲ್ಲಿ ನಾವು ಸೋತೆವು. ನಾವುಗಳು ವೇದ ಕಾಲದ ಗತ ವೈಭವಗಳನ್ನು, ಭಾಸ್ಕರಾಚಾರ್ಯ, ಆರ್ಯಭಟ, ಚಾಣಾಕ್ಯ ಎಂದೆಲ್ಲ ಹೇಳಿಕೊಂಡಿದ್ದೇವೆ ಪರಂತು ನಾವು ಏನು ಮಾಡಬೇಕು ಎಂಬುದನ್ನು ಮರೆತ್ತಿದ್ದೇವೆ.
ಹಾಗಾದರೆ ಯಾವ ಭಾಷೆಯಲ್ಲಿ ನಾವು ಕಲಿಯಬೇಕು? ಇದಕ್ಕೆ ಉತ್ತರ ಹುಡುಕೋದು ಕಷ್ಟವೇ ಸರಿ. ಭಾರತದಲ್ಲೆ ಹುಟ್ಟಿದ ಭಾಷೆಯೊಂದನ್ನು (ಉದಾ: ಸಂಸೃತ/ಕನ್ನಡ/ತಮಿಳು) ಮಾಧ್ಯಮವನ್ನಾಗಿ ಮಾಡಿದರೆ? ಇಷ್ಟು ಹೇಳಿದರೆ ಸಾಕು ಹೊರಾಟ, ಜಗಳಗಳು, ಪ್ರತಿಭಟನೆಗಳು ಪ್ರಾರಂಭವಾಗುತ್ತದೆ. ಮೇಲಾಗಿ ಇದು ಸಮಸ್ಯೆಗೆ ಪರಿಹಾರವೇ ಅಲ್ಲ. ಇಂಗ್ಲೀಷ್ ಬದಲಾಗಿ ಮತ್ತೊಂದು ಭಾಷೆ ಬರುತ್ತದೆ ಮತ್ತು ಸಮಸ್ಯೆ ಹಾಗೆ ಉಳಿಯುತ್ತದೆ. ಇದಕ್ಕೆ ಪರಿಹಾರವೆಂದರೆ ಭಾರತದ ಶಿಕ್ಷಣ ಮಾಧ್ಯಮ ನಮ್ಮ ನಮ್ಮ ಮಾತೃ ಭಾಷೆಯಾಗಿರಬೇಕು. ಶಿಕ್ಷಣದ ಉದ್ದೇಶ ವಿಚಾರ ಮತ್ತು ತತ್ವಗಳನ್ನು ಅರ್ಥೈಸಿಕೊಡುವುದು. ಯಾವ ಭಾಷೆಯಲ್ಲಾದರೆ ಏನು ?
ಇದನ್ನು ಅನುಷ್ಟಾನ ಮಾಡುವುದು ಹೇಗೆ ?
ಇದಕ್ಕೆ ಪ್ರಾಥಮಿಕ ಹಂತದ ಸಿದ್ಧತೆ ಬಹಳಷ್ಟು ಆಗಬೇಕು. ಪ್ರತಿಯೊಂದು ರಾಜ್ಯದಲ್ಲೂ ಆಯ ಭಾಷ, ವಿಜ್ಞಾನ, ಗಣಿತ ಮತ್ತು ಇತರ ವಿಷಯ ತಜ್ಞರು ಒಂದು ಸಮಿತಿ ಮಾಡಿಕೊಳ್ಳಬೇಕು. ಪ್ರತಿಯೊಂದು ತತ್ವದ, ಸಿದ್ದಾಂತದ ಬೆಗೆಗಿನ ಪಠ್ಯಪುಸ್ತಕಗಳು ಆಯಾ ಪ್ರಾದೇಶಿಕ ಭಾಷೆಯಲ್ಲಿ ಮುದ್ರಣವಾಗಬೇಕು. ಶಿಕ್ಷಕರಿಗೆ ಪ್ರಾದೇಶಿಕ ಭಾಷೆಯಲ್ಲಿ ಪಾಠ ಮಾಡಲು ತರಬೇತಿ ಕೊಡಬೇಕು. ಈ ವಿಚಾರದಲ್ಲಿ ಪ್ರಸ್ತುತ ಸರ್ಕಾರಿ ಶಾಲೆಯ ಶಿಕ್ಷಕರ ಸಹಾಯ ಪಡೆಯಬಹುದು. ಹಂತ ಹಂತವಾಗಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಮಾಧ್ಯಮವನ್ನು ಪ್ರಾದೇಶಿಕ ಭಾಷಗೆ ಅಳವಡಿಸಿಕೊಳ್ಳಬೇಕು. ಪ್ರಸ್ತುತ ಐದನೇ ತರಗತಿ ಮೇಲ್ಪಟ್ಟ ವಿಧ್ಯಾರ್ಥಿಗಳಿಗೆ ಇದು ಅನ್ವಯಿಸುವುದಿಲ್ಲ. ಆದರೆ ಐದನೇ ತರಗತಿಗಿಂತ ಕೆಳ ಹಂತದವರಿಂದ ಈ ಪದ್ಧತಿ ಕಡ್ಡಾಯ ಮಾಡಬೇಕು. ಕಾಲೇಜಿನ ಅಧ್ಯಾಪಕರುಗಳು ಈ ಪದ್ಧತಿಗೆ ಹೊಂದಿಕೊಳ್ಳಲು ಕನಿಷ್ಠ 5-6 ವರ್ಷಗಳ ಸಮಯವಿರುತ್ತದೆ. ಅದೇ ವೃತ್ತಿಪರ ಕೋರ್‍ಸುಗಳ ಪ್ರಾಧ್ಯಾಪಕರಿಕೆ 7-10 ವರ್ಷ ಸಮಯವಿರುತ್ತದೆ. ರಾಷ್ಟ್ರೀಯ ಶಿಕ್ಷಣ ಸಮಿತಿ ಈ ಎಲ್ಲ ಪ್ರಾದೇಶಿಕ ಸಮಿತಿಗಳೊಂದಿಗೆ ಕಲೆತು ಒಂದು ನಿದ್ರಿಷ್ಟವಾದ ಪಠ್ಯಕ್ರಮವನ್ನು ಅಳವಡಿಸಬೇಕು.
ಹಾಗಾದರೆ ಇಂಗ್ಲೀಷ್ ಕಲಿಕೆ ಬೇಡವೇ? ಖಂಡಿತವಾಗಿಯೂ ಬೇಕು. ಇಡೀ ದೇಶದಲ್ಲಿ ಇಂಗ್ಲೀಷನ್ನು ಒಂದು ಭಾಷೆಯನ್ನಾಗಿ ಕಲಿಯಲಿ. ವ್ಯವಹಾರಕ್ಕಾಗಿ ಬಳಸಲಿ. ಆದರೆ, ಅದನ್ನು ಮಾಧ್ಯಮವನ್ನಾಗಿ ಪಠಿಸುವುದು ಬೇಡ.
2. ಕಾರ್ಯ ವೈಖರಿ:
ಕೆಲ ದಿನಗಳ ಹಿಂದೆ ಹಾರ್ಟ್ಮನ್ ಶುಮಾಕರ್ ಎಂಬ ಜರ್ಮನಿ ವ್ಯಕ್ತಿಯ ಸಂದರ್ಶನವೊಂದನ್ನು ಓದಿದೆ. ಅವರು 34 ವರ್ಷಗಳಿಂದ ಒಂದೇ ಕಂಪನಿಯಲ್ಲಿ, ಒಂದು ಹಾರ್ಡ್ವೇರ್ ವಿಷಯದ ಮೇಲೆ ಕೆಲಸ ಮಾಡುತ್ತಿದ್ದಾರೆ...!!! ಅಬ್ಬ ಒಂದೇ ಕಡೆ ಅದೂ ಒಂದೇ ವಿಷಯದ ಮೇಲೆ ಇಷ್ಟು ಧೀರ್ಘ ಕಾಲ ಕೆಲಸ ಮಾಡುತ್ತಿದ್ದಾರೆ ಎಂಬುದು ಭಾರತೀಯರಾದ ನಮಗೆ ಆಶ್ಚರ್ಯವೇ ಸರಿ. ಆದರೆ, ವಿಷಯ ಅಡಗಿರುವುದೇ ಇಲ್ಲಿ. ಯಾರೇ ಆಗಲಿ, ಒಂದು ವಿಚಾರದ ಮೇಲೆ ಧೀರ್ಘಕಾಲ ಕೆಲಸ ಮಾಡಿದ್ದೇ ಆದರೆ ಆ ವಿಷಯ ಮೇಲೆ ಆತ ಸಾಧಿಸುವ ಪರಿಣಿತಿ ಎಷ್ಟಿರಬಹುದು ಯೋಚಿಸಿ. ಅಂತಹ ಒಂದಷ್ಟು ಪರಿಣಿತರು ಒಂದು ಕಡೆ ಕಲೆತಾಗ ಹೊಸದೊಂದು ಆವಿಷ್ಕಾರ ಆಗುವುದು ಸುಲಭವಾಗುತ್ತದೆ.
ಕೆಲವು ಸಾಧಕರ ಹಾದಿಯನ್ನು ಗಮನಿಸೋಣ.
  1. ಸಂಗೀತಗಾರ ಶ್ರೀ ಏಸುದಾಸ್ ರವರು ತಮ್ಮ 5ನೇ ವಯಸ್ಸಿನಿಂದಲೇ ಸಂಗೀತ ಅಭ್ಯಾಸ ಶುರು ಮಾಡಿದ್ದರು.
  2. ವಿಶ್ವ ವಿಖ್ಯಾತ ಕ್ರಿಕೇಟಿಗ ಸಚಿನ್ ರವರು ಅಭ್ಯಾಸ ಶುರುಮಾಡಿದ್ದು ತಮ್ಮ 12 ನೇ ವಯಸ್ಸಿಗೆ.
  3. ಐನ್ಸ್ಟೀನ್ 'Theory of Relativity' ಮಂಡಿಸುವ ಮುನ್ನ ಆತ ಸಂಶೋಧನೆ ನಡೆಸಿದ್ದು ಬರೋಬ್ಬರಿ 15 ವರ್ಷ.
ಇನ್ನೂ ಹಲವಾರು ಉದಾಹರಣೆ ಕೊಡಬಹುದು. ಹಿಂದೆ ಭಾರತದಲ್ಲಿ ಗುರುಕುಲ ಪದ್ಧತಿಯಲ್ಲಿ ಕನಿಷ್ಟ 25 ವರ್ಷ ಅಧ್ಯಯನ ನಡೆಸುತ್ತಿದ್ದರು. ನಂತರ ಸ್ವಂತವಾಗಿ ಪ್ರಯೋಗಗಳನ್ನು ಮುಂದುವರೆಸುತ್ತಿದ್ದರು. ಇದು ಹಳೆಯ ಕಾಲದ ಪದ್ಧತಿಯಾದರೆ, ಈಗ, ಜರ್ಮನಿ ಅಂತಹ ದೇಶಗಳಲ್ಲಿ ಒಬ್ಬ ವಿಧ್ಯಾರ್ಥಿಗಳು ಇಂಜಿನೀರಿಂಗ್ ಪದವಿಧರನಾಗುವಷ್ಟರಲ್ಲಿ ಕನಿಷ್ಟ 28-29 ವರ್ಷವಾಗಿರುತ್ತದೆ (ಇತ್ತೀಚಿನ 3-4 ವರ್ಷಗಳಿಂದ 23ಕ್ಕೆ ಇಳಿದಿದೆ). ಕೆಲಸ ಶುರುಮಾಡಿದ ಮೇಲೆ ಕೂಡ ಪದೆ ಪದೆ ಕೆಲಸ ಬದಲಾಯಿಸುವುದಿಲ್ಲ. ಮೊದಲೇ ಹೇಳಿದ ಹಾಗಿ ಶೂಮಾಖರ್ ತರಹದವರು ಅಲ್ಲಿ ಹಲವು ಮಂದಿ ಇದ್ದಾರೆ. ಜಪಾನ್ ಮತ್ತು ಕೊರಿಯಾ ದೇಶದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಆದ್ದರಿಂದಲೇ ಅಲ್ಲಿ ಪರಿಣಿತಿ ಹೊಂದಿರುವವರು ಮತ್ತು ತಜ್ಞರು ಸಹಜವಾಗಿ ಹೆಚ್ಚು.
ಆದರೆ, ಭಾರತದಲ್ಲಿ; 21-22 ವರ್ಷಕ್ಕೆ ಇಂಜಿನೀರಿಂಗ್ ಪದವಿ ಪಡೆದಿರುತ್ತಾರೆ. ಪದವಿಧರನೊಬ್ಬನಿಗೆ ಇರಬಹುದಾದಂತಹ ಪ್ರಾಯೋಗಿಕ ಜ್ಞಾನ ಅಷ್ಟಕ್ಕಷ್ಟೆ. ಕೆಲಸಕ್ಕೆ ಸೇರಿದ ನಂತರ ವ್ಯಕ್ತಿಯೊಬ್ಬ ಸರಾಸರಿ 3-4 ವರ್ಷಕೊಮ್ಮೆ ತನ್ನ ಕಂಪನಿ ಬದಲಾಯಿಸುತ್ತಾರೆ. ಒಂದು ವಿಷಯ ಕಲಿತು ಪರಿಣಿತಿ ಹೊಂದುವಷ್ಟರಲ್ಲಿ ಬದಲಾವಣೆ. 10-12 ವರ್ಷ ಹೀಗೆ ಮುಂದುವರೆಯುತ್ತದೆ. ನಂತರ, ಕಲಿಯುವ ಮತ್ತು ಆವಿಷ್ಕಾರ ಮಾಡುವ ಸಾಮರ್ಥ್ಯ ಕಳೆದು ಹೋಗಿರುತ್ತದೆ.
ಈ ಪದ್ಧತಿ ಮತ್ತು ಮನಸ್ಥಿತಿ ಬದಲಾಗಬೇಕು. ನಾವು ಮುಂದುವರೆಯಬೇಕು ನಿಜ. ಅದರ ಅರ್ಥ ದುಡ್ಡು ಮಾಡುವುದು ಎಂದಲ್ಲ.
  • ಬಿ.ಇ. ಮಾಡಿದ ನಂತರ ಕೆಲಸ ಸಿಗಲಿಲ್ಲ ಎಂದು ಎಮ್.ಟೆಕ್. ಮಾಡುವುದು ನಿಲ್ಲಬೇಕು.
  • ಬಿ.ಇ. ಮಾಡಿ ಎಂ.ಬಿ.ಏ ಮಾಡುವುದು ನಿಲ್ಲಬೇಕು.
  • ಪದವಿ ಪೂರ್ವ ಶಿಕ್ಷಣದ ನಂತರ ವೈದ್ಯಕೀಯ ಅಥವಾ ಇಂಜಿನೀರಿಂಗ್ ಮಾತ್ರ ಓದಬೇಕು ಎಂಬ ಮನಸ್ಥಿತಿ ಹೋಗಬೇಕು.
  • ಪುಸ್ತಕ ಜ್ಞಾನಕ್ಕಿಂತ ಪ್ರಾಯೋಗಿಕ ಜ್ಞಾನಕ್ಕೆ ಮಹತ್ವ ಕೊಡಬೇಕು.
  • ಬೇರೆಲ್ಲೂ ಕೆಲಸ ಸಿಗಲಿಲ್ಲವಾದ್ದರಿಂದ ಶಿಕ್ಷಕರಾಗುವುದು ಎಂಬ ಮನಸ್ಥಿತಿ ನಿಲ್ಲಬೇಕು.
ಗುಣಕ್ಕೆ ಮತ್ಸರವಿಲ್ಲ ಎನ್ನುವಂತೆ ಒಳ್ಳೆಯ ವಿಚಾರಗಳನ್ನು ಹೊರದೇಶದಿಂದ ಪಡೆದು ನಮ್ಮ ದೇಶಕ್ಕನುಸಾರವಾಗಿ ಪದ್ಧತಿಗಳನ್ನು ಅಳವಡಿಸಿಕೊಂಡು ನಮ್ಮನ್ನು ನಾವು ಗಟ್ಟಿ ಮಾಡಿಕೊಳ್ಳಬೇಕು. ತಾಂತ್ರಿಕವಾಗಿ ಬೆಳೆಯಬೇಕು. ಭಾರತ ಈ ವಿಚಾರದಲ್ಲಿ ಪ್ರಭುತ್ವ ಸಾಧಿಸಬೇಕು. ೧೯೩೫ ರಲ್ಲಿ ಮೆಕಾಲೆ ಪರಿಚಯಿಸಿದ ಶಿಕ್ಷಣ ಪದ್ಧತಿಯಿಂದ ಸಂಪೂರ್ಣ ಹೊರಬರಬೇಕು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿ ಈ ದಿಕ್ಕೆನಲ್ಲಿ ಮಹತ್ವದ ಮತ್ತು ದೃಢವಾದ ಹೆಜ್ಜೆ ಇಟ್ಟಿದೆ. ಭಾರತ ಶಿಕ್ಷಣ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಬಲಾಡ್ಯವಾಗಿ ಬೆಳೆಯಲಿ ಎಂಬುದಷ್ಟೇ ನನ್ನ ಆಶಯ.