October 23, 2017

ಪ್ರೀತಿ - ವಿಷವೂ ಹೌದು, ಅಮೃತವೂ ಹೌದು

ಮನುಷ್ಯನ ಮನಸ್ಸು ಅನ್ನೋದು ಭಾವನೆಗಳ ಕಡಲು. ಈ ಭಾವನೆಗಳು ವಿವಿಧ ರೂಪಗಳಲ್ಲಿ ಹೊರ ಹೊಮ್ಮುತ್ತದೆ. ಕೋಪ, ದ್ವೇಷ, ಪ್ರೀತಿ, ಮಮತೆ, ವ್ಯಂಗ್ಯ, ಸಂತೋಷ, ದುಃಖ ಹೀಗೆ ಹತ್ತು ಹಲವು. ಕೋಪ ಹೇಗೆ ದ್ವೇಷದ ಮೂಲವೋ ಹಾಗೆ ಪ್ರೀತಿ ಮಮತೆಯ ಮೂಲ. ಇವೆಲ್ಲ ಒಂದಕ್ಕೊಂದು ಪೂರಕವೂ ಹೌದು.  ಕೆಲವು ಸಲ ಎಲ್ಲ ಒಂದೆ ಅನ್ನಿಸಿದರು ಅವೆಲ್ಲ ವಿವಿಧ ಹಂತಗಳಲ್ಲಿ ಬೇರೆ ಬೇರೆಯಾಗಿ ಕಾಣುತ್ತದೆ.

ಈ ಭಾವನೆಗಳಲ್ಲಿ ಪ್ರೀತಿ ಎಂಬುದು ನನಗೆ ಎಲ್ಲಕ್ಕಿಂತ ವಿಶಿಷ್ಟವಾಗಿ ಕಾಣುತ್ತದೆ. ಈ ಭಾವನೆಗೆ ವಿವಿಧ ಹಂತಗಳು ಮತ್ತು ವಿವಿಧ ರೂಪಗಳಿರುವುದು ನನ್ನ ಅನುಭವಕ್ಕೆ ಬಂದಿದೆ. ತಾಯಿ ಮಕ್ಕಳ ಮೇಲಿನ ಭಾವವಾದ ಮಮತೆ, ಸೋದರ, ಸೋದರಿಯರ ನಡುವಿನ ಬ್ರಾತೃತ್ವ, ಮಿತ್ರರೊಡಗಿನ ಸ್ನೇಹ, ಸಂಗಾತಿಯೊಡಗಿನ ಪ್ರೇಮ ಮತ್ತು ಇವೆಲ್ಲಕ್ಕೂ ಮಿಗಿಲಾಗಿ ನಿಲ್ಲುವುದು ನಾವು ದೇಶದ ಅಥವಾ ಪರಮಾತ್ಮನ ಮೇಲೆ ಹೊಂದಿರುವ ಭಕ್ತಿಭಾವ.
  • ತಾಯಿಯ ಮಮತೆ ಸ್ವಾರ್ಥ ರಹಿತವಾದದ್ದು.
  • ಜಗತ್ತನ್ನು ಬ್ರಾತೃತ್ವದ ಹಾಗು ಮಿತ್ರತ್ವದ ನೆಲೆಗಟ್ಟಿನಲ್ಲಿ ನೋಡುವವನಿಗೆ ಅನೇಕ ಸೋದರ, ಸೋದರಿಯರು, ಸ್ನೇಹಿತರು ಸಿಗುತ್ತಾರೆ.
  • ಪರಮಾತ್ಮ ಅಥವಾ ದೇಶದ ಮೇಲಿನ ಭಕ್ತಿ ವ್ಯಕ್ತಿಗತವಾದದ್ದು, 
ಭಕ್ತಿ ಎನ್ನುವುದು ನಾವು ಪಡೆದುಕೊಂಡಿರುವ ಸಂಸ್ಕಾರದ ಮೇಲೆ ನಿರ್ಧಾರವಾಗುತ್ತದೆ ಮತ್ತು ಎಲ್ಲಕ್ಕಿಂತ ಮೇಲ್ಮಟ್ಟದ್ದು. ಸುಲಭವಾಗಿ ಎಲ್ಲರಿಗೂ ದಕ್ಕುವುದಲ್ಲ. ಕೆಲವು ಅಸಮಾನ್ಯರು; ಶ್ರೀ ರಾಮಕೃಷ್ಣ, ವಿವೇಕಾನಂದರಿಗೆ ಇಂತಹುದಕ್ಕಾಗಿ ಹಾತೊರೆಯುತ್ತಾರೆ. ಇವೆಲ್ಲಕ್ಕಿಂತ ನನಗೆ ವಿಭಿನ್ನ ಅನ್ನಿಸುವುದು, ಸಮಾನ್ಯ ಜನತೆ ಹಾತೊರೆಯುವುದು; ಸಂಗಾತಿಯೊಂದಿಗಿನ ಪ್ರೇಮಕ್ಕಾಗಿ. ಹೌದು, ಜನ ಸಾಮಾನ್ಯರಲ್ಲಿ ಸಮಾನ್ಯನಾದ ನನ್ನ ಪ್ರೇಮವೆಂಬ ಭಾವನೆ.


ವ್ಯಕ್ತವಾದರೆ ಪ್ರೇಮ ಇಲ್ಲವಾದರೆ ಅದೊಂದು ಅರ್ಥವಿಲ್ಲದ ಸಂಗತಿಯಾಗುತ್ತದೆ. ಪ್ರೇಮಕ್ಕೆ ಎರಡು ಮುಖ. ಇದು ಬದುಕಲ್ಲಿ ಸಂತೋಷ ಮತ್ತು ದುಃಖ ಎರಡನ್ನೂ ಗರಿಷ್ಟ ಮಟ್ಟದಲ್ಲಿ ಉಂಟು ಮಾಡುತ್ತದೆ ಎಂಬುದು ನನ್ನ ಅನಿಸಿಕೆ. ಸಾಯುವವರನ್ನು ಬದುಕಿಸುತ್ತದೆ ಮತ್ತು ಬದುಕಿರುವವರನ್ನು ಪ್ರತಿದಿನವೂ ಕೊಲ್ಲುತ್ತದೆ. ಸಂಗಾತಿ ಇಲ್ಲವೇ ಇದ್ದರೆ ಒಂದು ರೀತಿ ನೆಮ್ಮದಿ. ಸಂಗಾತಿಯೊಂದಿಗಿನ ಪ್ರೇಮ ಪಡೆದಾಗ ಬದುಕು, ಸುಖದ ಸೋಪಾನವೆನ್ನಬಹುದಾದ ಸ್ವರ್ಗವಾಗುತ್ತದೆ. ಸಂಗಾತಿಯ ಪ್ರೇಮ ಸಿಕ್ಕಿ ಕಳೆದುಕೊಂಡರೆ ಅದೇ ಬದುಕು ನರಕವಾಗುತ್ತದೆ. ಇದೇ ಪ್ರೇಮದ ವೈಶಿಷ್ಯ. ಏಕಕಾಲಕ್ಕೆ ನಗು ಮತ್ತು ಅಳು ಬರಿಸುವ ತಾಕತ್ತು ಪ್ರೇಮಕ್ಕಿದೆ. ಮನಸ್ಸಿನ್ನಲ್ಲಿ ಬೆಟ್ಟದಷ್ಟು ದುಃಖವಿದ್ದರೂ ಮುಖದ ಮೇಲೆ ನಗು ತರಿಸುವ ಶಕ್ತಿ ಪ್ರೇಮಕ್ಕಿದೆ.

ಭಾವನೆಗಳೇ ಬದುಕು
ಬದುಕಿನಲ್ಲಿ ನೋವು ನಲಿವು ಸಹಜ
ಏನೇ ಹೇಳಿ...
ಮೊಗದಲ್ಲಿನ ನಗು ನಕಲಾಗಬಹುದು
ದುಃಖದ ಅಳು ಎಂದೆಂದಿಗೂ ಸತ್ಯ


ಪ್ರೇಮ ಸತ್ಯದ ಸಂಕೇತ, ಅದು ಎಂದಿಗೂ ಸುಳ್ಳಾಗದು. ಪ್ರೇಮಕ್ಕೆ ಜನ ಮೋಸ ಮಾಡಬಹುದೇ ಹೊರತು ಪ್ರೇಮ ಎಂದಿಗೂ ಮೋಸ ಮಾಡುವುದಿಲ್ಲ. ಅದು ಕಷ್ಟ ಕೊಡಬಹುದು, ದಿಕ್ಕು ತೋಚದಂತೆ ಮಾಡಬಹುದು. ಅದರೆ ಅದಕ್ಕೆ ನಾವು ಕುಗ್ಗಬಾರದು. ಪ್ರೇಮದ ಮೇಲೆ ನಂಬಿಕೆ ಇಟ್ಟು, ತಾಳ್ಮೆಯಿಂದ ವರ್ತಿಸಿದರೆ ಅದೇ ಪ್ರೇಮ ನಮ್ಮ ಕೈ ಹಿಡಿಯುತ್ತದೆ ಮತ್ತು ಕಾಪಾಡುತ್ತದೆ. ಜೀವನ ಸರಾಗವಾಗುತ್ತದೆ.

ಪ್ರೀತಿಯ ಪಿಸುಮಾತು ಇರಲಿ ನಮ್ಮಲ್ಲಿ
ಅದರ ಗಂಧ ಎಲ್ಲೆಲ್ಲು ಪಸರಿಸಲಿ
ಒಲವಿಂದ ಬದುಕು ಹಸನಾಗಲಿ
ಪ್ರೀತಿ, ಪ್ರೇಮ, ಪ್ರಣಯ ಬದುಕಾಗಲಿ

ಪ್ರೇಮ ಎಂಬುದನ್ನು ವರ್ಣಿಸೋದಾದರೆ ಅದು ಬದುಕು ಮತ್ತು ಸಾವನ್ನು ಪರಿಚಯಿಸುವ ಅಮೃತವೂ ಹೌದು, ವಿಷವೂ ಹೌದು. ಆದ್ದರಿಂದಲೇ ಪ್ರೀತಿಯೆಂಬುದು ವಿಷಾಮೃತ!

No comments:

Post a Comment