November 25, 2020

ಕೊರೋನಾ ಲಸಿಕೆ ನೆಪದಲ್ಲಿ ಚೀನಾವನ್ನು ಮರೆಯಬಾರದು

ಕೊರೋನಾ ಎಂಬ ಮಹಾಮಾರಿ ಜಗತ್ತನ್ನು ಕಾಡಲು ಶುರುಮಾಡಿ 1 ವರ್ಷವಾಯ್ತು. ಕಳೆದ ವರ್ಷ ನವೆಂಬರ್ ಅಲ್ಲಿ ಚೀನಾದ ವೂಹಾನಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಜಗತ್ತಿಗೆ ಈ ವೈರಸ್ಸಿನ ವಿಚಾರವನ್ನು ತಿಳಿಸದೆ 2-3 ತಿಂಗಳು ತನ್ನಲ್ಲೇ ಮುಚ್ಚಿಟ್ಟುಕೊಂಡಿತ್ತು. ತದ ನಂತರ ಇಡೀ ಜಗತ್ತಿಗೆ ಕೊರೋನಾ ಅಮರಿಕೊಂಡಿತು ಮತ್ತು ಬಹುತೇಕ ಎಲ್ಲಾ ದೇಶಗಳು ಲಾಕ್ಡೌನ್ ಮಾಡಿಕೊಂಡು ಸ್ತಬ್ದವಾಯಿತು. ನೆನಪಿಡಿ, 2020 ಫ಼ೆಬ್ರವರಿ ಹೊತ್ತಿಗೆ ಚೀನಾದ ವೂಹಾನ್ ಹೊರತಾಗಿ ಇಡೀ ದೇಶ ಸಾಮಾನ್ಯ ಸ್ಥಿತಿಗೆ ಮರಳಿತ್ತು ಹಾಗೂ 2 ತಿಂಗಳ ನಂತರ ವೂಹಾನ್ ಕೂಡ ಸಾಮಾನ್ಯವಾಯಿತು.

ಅಮೇರಿಕಾ ಮತ್ತು ಯೂರೋಪ್ ರಾಷ್ಟ್ರಗಳು ಹೈಡ್ರಾಕ್ಸಿಕ್ಲೊರೋಕ್ವಿನ್ ಔಷಧ ಬೇಕೆಂದು ಕೇಳಿಕೊಂಡಾಗ 55 ರಾಷ್ಟ್ರಗಳಿಗೆ ಭಾರತ ಔಷಧವನ್ನು ರಫ಼್ತು ಮಾಡಿತ್ತು. ಇದೇ ಸಮಯದಲ್ಲಿ ಸ್ಪೈನ್, ಕ್ರೆಝ್ ರಿಪಬ್ಲಿಕ್ ಮತ್ತು ಭಾರತ ಚೀನಾದಿಂದ ಕೊರೋನಾ ಟೆಸ್ಟಿಂಗ್ ಕಿಟ್ಗಳನ್ನು ಆಮದು ಮಾಡಿಕೊಂಡಿತು. ಆದರೆ 80% ರಷ್ಟು ಕಿಟ್ಗಳು ಕಳಪೆ ಎಂದು ಮೂರೂ ದೇಶಗಳು ತಿರಸ್ಕರಿಸಿತು. ಉತೃಷ್ಟ ಮಟ್ಟದ N-95 ಮಾಸ್ಕ್ಗಳ ಬದಲಾಗಿ ಉಳಡುಪುಗಳಿಂದ ತಯಾರಿಸಿದ ಮಾಸ್ಕ್ಗಳನ್ನು ಪಾಕೀಸ್ತಾನಕ್ಕೆ ರಫ಼್ತು ಮಾಡಿದ್ದು ಇದೇ ಚೀನಾ. ಇಷ್ಟೇ ಅಲ್ಲದೆ ವಿಸ್ತರಣವಾದಕ್ಕೂ ಮುಂದಾಯಿತು. ಏಪ್ರಿಲ್ಲಿನಲ್ಲಿ ದಕ್ಷಿಣ ಚೀನಾ ಸಮುದ್ರದಲ್ಲಿ ವಿಯಟ್ನಾಂ ಜೊತೆ ಜಗಳ ಶುರು ಮಾಡಿತು. ಹಾಂಕಾಂಗ್ ಅನ್ನು ಆಕ್ರಮಿಸಿಕೊಂಡರು, ತೈವಾನ್ ಜೊತೆಗೆ ಕಿರಿಕಿರಿ ಶುರು ಮಾಡಿದರು. ಬಹುಮುಖ್ಯವಾಗಿ ಲದಾಖ್ ಪ್ರಾಂತ್ಯದ ಗಲ್ವಾನ್ ಕಣಿವೆಯಲ್ಲಿ ಕಾಲು ಕೆರೆದುಕೊಂಡು ಜಗಳಕ್ಕೆ ಬಂತು. ಕೊರೋನಾ ವಿರುದ್ಧವಲ್ಲದೇ ಗಡಿಯಲ್ಲೂ ಹೋರಾಟ ಮಾಡಬೇಕಾದ ಪರಿಸ್ಥಿತಿ ಚೀನಾ ಭಾರತಕ್ಕೆ ತಂದೊಟ್ಟಿತು.

2018ರಲ್ಲಿ 8%, 2019 5.7% ರಷ್ಟಿದ್ದ ಭಾರತದ ಜಿ.ಡಿ.ಪಿ 2020 ಜುಲೈ ಹೊತ್ತಿಗೆ -23% ಕ್ಕೆ ಕುಸಿಯಿತು. ಲಕ್ಷಾಂತರ ಮಂದಿ ಉದ್ಯೋಗ ನಷ್ಟ ಅನುಭವಿಸಿದರು. ದೇಶದಾದ್ಯಂತ ಮೆಟ್ರೋ ಸುಮಾರು 2000 ಕೋಟಿಯಷ್ಟು ನಷ್ಟ ಅನುಭವಿಸಿತು. ವಿಮಾನಯಾನ ಇಲಾಖೆಗೆ 3600 ಕೋಟಿಯಷ್ಟು ನಷ್ಟವಾಗಿದೆ.  ಹೋಟೆಲ್ ಉದ್ಯಮ ಸುಮಾರು 1.25 ಲಕ್ಷ ಕೋಟಿ, ರೈಲ್ವೆ ಇಲಾಖೆ 35000 ಕೋಟಿ ನಷ್ಟ ಅನುಭವಿಸಿತು.

ಇಲ್ಲಿಯವರೆಗೆ 9 ದಶಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣ ಮತ್ತು 1.3 ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಗಾಯಕ ಎಸ್.ಪಿ.ಬಿ, ಬೆಳಗಾವಿಯ ಸುರೇಶ್ ಅಂಗಡಿ, ಬೀದರಿನ ನಾರಾಯಣ ರಾವ್, ಅಶೋಕ್ ಗಸ್ತಿ ಕೊರೋನಾಕ್ಕೆ ಬಲಿಯಾದ ಕೆಲವು ಖ್ಯಾತ ನಾಮರು. ಇತಿಹಾಸದಲ್ಲೇ ಆತ್ಯಂತ ಸರಳವಾದ ದಸರ ಈ ವರ್ಷದ ಆಚರಿಸಲಾಯಿತು. ವಿಶ್ವವಿಖ್ಯಾತ ಜಂಬೂಸವಾರಿ ಅರಮನೆ ಪ್ರಾಂಗಣ ಬಿಟ್ಟು ಹೊರಬರಲಿಲ್ಲ. 2020-21 ಶೈಕ್ಷಣಿಕ ವರ್ಷ ಮಕ್ಕಳು ಶಾಲೆಗೆ ಹೋಗದಂತಾಯಿತು. ಇತರರೊಂದಿಗೆ ಕಲೆತು ಆಟ ಪಾಠವನ್ನು ಕಲಿಯಬೇಕಿದ್ದ ಮಕ್ಕಳು ಮನೆಯಲ್ಲಿ ಬಂಧಿತರಾದರು. ಸಿನಿಮಾ ಕ್ಷೇತ್ರ 5000 ಕೋಟಿಯಷ್ಟು ನಷ್ಟ ಅನುಭವಿಸಿದೆ. ಹಣದ ಹೊರತಾಗಿ ಸೋಂಕುಪೀಡಿತ ಜನರಿಗೆ ಅವರ ಬಂಧು, ಸ್ನೇಹಿತರಿಗೆ ಆದ ಮಾನಸಿಕ ತುಮುಲ, ಭಯವನ್ನು ವರ್ಣಿಸಲು ಸಾಧ್ಯವಿಲ್ಲ.  ಪುಟ್ಟ ಮಗುವೊಂದು ಆಸ್ಪತ್ರೆಯಲ್ಲಿ ಕರ್ತವ್ಯ ನಿರತರಾಗಿದ್ದ ತಾಯಿ ಹತ್ತಿರ ಹೋಗಲಾಗದೆ ಕಣ್ಣೀರಿಟ್ಟ ದೃಶ್ಯ ಇಗಲೂ ಮನಕಲಕುವಂತಿದೆ. ಈ ರೀತಿ ಸಂಕಟ ಅನುಭವಿಸಿದ ಕುಟುಂಬಗಳೆಷ್ಟೋ ದೇವರೆ ಬಲ್ಲ. ಜಗತ್ತಿನಲ್ಲಿ ಈವರೆಗೂ ಕೊರೋನಾ ಕಾರಣದಿಂದಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ 14 ಲಕ್ಷಕ್ಕೂ ಹೆಚ್ಚು! 

ಭಾರತ ಚೀನಾದ 300ಕ್ಕೂ ಹೆಚ್ಚು ಆಪ್ಗಳನ್ನು ಬ್ಯಾನ್ ಮಾಡಿದೆ. ಚೀನಾದಿಂದ ಆಮದಾಗುವ ಅನೇಕ ವಸ್ತುಗಳ ಮೇಲೆ ಸುಂಕವನ್ನು ಹೆಚ್ಚಿಸಿದೆ. ಚೀನಾದ ವಿದ್ಯುತ್ ಮತ್ತು ಕಮ್ಯುನಿಕೇಷನ್ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡದಂತೆ ಕ್ರಮ ತೆಗೆದುಕೊಂಡಿದೆ. ಚೀನಾ ವಸ್ತುಗಳ ಬಹಿಷ್ಕಾರದ ಕುರಿತು ಸೂಕ್ಷ ಲೇಖನವೊಂದನ್ನು ಚೀನಾದ ಮುಖವಾಣಿ 'ಗ್ಲೋಬಲ್ ಟೈಮ್ಸ್' ವರದಿ ಮಾಡಿತ್ತು. ದೀಪಾವಳಿ ಸಮಯದಲ್ಲಿ ಚೀನಾಕ್ಕೆ 40000 ಕೋಟಿಯಷ್ಟು ನಷ್ಟವಾಗಿದೆ ಎಂದು ಭಾರತೀಯ ವ್ಯಾಪಾರಿಗಳ ಒಕ್ಕೂಟ ಸಿ.ಎ.ಐ.ಟಿ ಅಭಿಪ್ರಾಯ ಪಟ್ಟಿದೆ. ಕ್ವಾಡ್ ದೇಶಗಳೂ ಕೂಡ ಚೀನಾವನ್ನು ಎದುರಿಸುವಂತೆ ಸಮರಾಭ್ಯಾಸ ನಡೆಸಿತು.

ಆದರೆ, ಅಮೇರಿಕಾದ ಚುಣಾವಣೆ ನಂತರ ಚೀನಾ ಬಗೆಗಿನ ಮಾತು ಜಗತ್ತಿನಲ್ಲಿ ಕಮ್ಮಿಯಾಗಿದೆ! ಇತ್ತೀಚಿನ ಸುದ್ದಿ ಪ್ರಾಕಾರ ಜನವರಿ 2021 ಹೊತ್ತಿಗೆ ಕೊರೋನಾಕ್ಕೆ ಲಸಿಕೆ ಲಭ್ಯವಿರುತ್ತದೆ. ಜಗತ್ತಿನ ಕೆಲವು ರಾಷ್ಟ್ರಗಳು ಲಸಿಕೆಯನ್ನು ಮುಂಗಡವಾಗಿ ಕಾಯ್ದಿರಿಸಿದೆ ಎಂಬ ವದಂತಿಯೂ ಸಹ ಇದೆ. ಇಂದಲ್ಲ ನಾಳೆ ಕೊರೋನಾವನ್ನು ನಾಶ ಮಾಡುವ ಔಷದ ಬಂದೇ ಬರುತ್ತದೆ.

ರಷ್ಯಾ, ಅಮೇರಿಕಾ ಕೊರೋನಾ ಲಸಿಕೆ ಬಗ್ಗೆ ಹೆಚ್ಚು ಮಾತಾಡುವ ಈ ಸಮಯದಲ್ಲಿ ಚೀನಾದ ಮೌನ ಮತ್ತಷ್ಟು ಅನುಮಾನಕ್ಕೆ ಆಸ್ಪದವಾಗಿದೆ. ಲಸಿಕೆಯ ವಿಚಾರದಲ್ಲೂ ಚೀನಾದೊಂದಿಗೆ ಎಚ್ಚರಿಕೆವಹಿಸಬೇಕು. ಚೀನಾಕ್ಕೆ ಲಸಿಕೆ ಕೊಡುವ ಸಂದರ್ಭ ಬಂದರೆ ಕೊರೋನಾ ಮತ್ತು ಚೀನಾದ ಕಾರಣ ದೇಶದಲ್ಲಾದ ಕಷ್ಟ, ನಷ್ಟಗಳನ್ನು ಒಮ್ಮೆ ನೆನೆಸಿಕೊಳ್ಳುವುದು ಒಳಿತು. ಲಸಿಕೆಯ ನೆಪದಲ್ಲಿ ಪಕ್ಕದಲ್ಲಿರುವ ಶತ್ರುವನ್ನು ಮರೆಯಬಾರದು.

No comments:

Post a Comment