ಭಾರತಕ್ಕೆ ಇಂಗ್ಲೀಷ್ ಶಿಕ್ಷಣ ತಂದಿದ್ದು ಥಾಮಸ್ ಬಾಬಿಂಗ್ಟನ್ ಮೆಕಾಲೆ. ೧೯೩೫ರಲ್ಲಿ ವಿಲಿಯಮ್ ಬೆನ್ಟಿಕ್ ನ ಆದೇಶದ ಮೇರೆಗೆ ಮೆಕಾಲೆ ಭಾರತದಲ್ಲಿ ಇಂಗ್ಲೀಷ್ ಶಿಕ್ಷಣವನ್ನು ಪರಿಚಯಿಸುತ್ತಾನೆ. ಜಗತ್ತಿಗೆ ಭಾರತವನ್ನು ಅನಾಗರೀಕ ನಾಡೆಂದು ಪರಿಚಯಿಸಿದ ಆಂಗ್ಲರು ನಮ್ಮನ್ನು ಉದ್ಧರಿಸಲೆಂದೇ ಇಂಗ್ಲೀಷ್ ಶಿಕ್ಷಣ ತಂದಿದ್ದು ಎಂದು ಎಲ್ಲರನ್ನು ನಂಬಿಸಿದರು. ಈಗಲೂ ನಮ್ಮ ಪಠ್ಯ ಪುಸ್ತಕಗಳು ಅದನ್ನೇ ಹೇಳುತ್ತವೆ.
- ಇಲ್ಲಿನ ಪ್ರಾದೇಶಿಕ ಭಾಷೆಯ ಬದಲಾಗಿ ಇಂಗ್ಲೀಷ್ ಅಧಿಕೃತ ಭಾಷೆಯಾಗಬೇಕು.
 - ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ, ಆಡಳಿತ ಕಛೇರಿಗಳಲ್ಲಿ ಇಂಗ್ಲೀಷ್ ಕಡ್ಡಾಯವಾಗಿ ಮಾಧ್ಯಮವಾಗಬೇಕು. ಇದರಿಂದ ವ್ಯವಹಾರ ಸುಲಭವಾಗುತ್ತದೆ.
 - ಭಾರತೀಯರಿಗೆ ಪಾಶ್ಚಿಮಾತ್ಯ ವಿಜ್ಞಾನ ಮತ್ತು ಸಾಹಿತ್ಯದ ಪರಿಚಯವಾಗುತ್ತದೆ. ಅದರ ಮೂಲಕ ಅವರ ಬುದ್ಧಿಮಟ್ಟ ಹೆಚ್ಚುತ್ತದೆ.
 
ಈ ೩ ವಿಚಾರವನ್ನು ಆಂಗ್ಲರು ಜಗತ್ತಿನೆದುರಿಗೆ ಮುಂದಿಟ್ಟು ಭಾರತದಲ್ಲಿ ಇಂಗ್ಲೀಷ್ ಶಿಕ್ಷಣ ಶುರು ಮಾಡುತ್ತಾರೆ. ಆದರೆ, ವಾಸ್ತವ ಬೇರೆನೆ ಇತ್ತು. ಭಾರತೀಯರಿಗೆ ಇಂಗ್ಲೀಷ್ ಶಿಕ್ಷಣ ಕೊಡುವ ಮೂಲಕ ತಮ್ಮ ಪರಂಪರೆಯನ್ನೇ ಮರೆಸುವ ಹುನ್ನಾರ ಅದರಲ್ಲಿ ಅಡಗಿತ್ತು. ಮೆಕಾಲೆಯೇ 'ಇಂಗ್ಲೀಷ್ ಪದ್ದತಿ ಪ್ರಕಾರ ಶಿಕ್ಷಣ ಪಡೆದ ಭಾರತೀಯರು, ಅದೇ ಪದ್ಧತಿಯನ್ನು ಅವರೇ ಮುಂದುವರೆಸುತ್ತಾರೆ. ನೋಡಲಿಕ್ಕೆ ಭಾರತೀಯರಾಗೆ ಕಂಡರೂ ಮಾನಸಿಕವಾಗಿ ಆಂಗ್ಲರಾಗಿರುತ್ತಾರೆ.' ಎಂದು ಲಂಡನ್ನಿನ 'ಹೌಸ್ ಆಫ಼್ ಕಾಮನ್ಸ್' ಅಲ್ಲಿ ಹೇಳುತ್ತಾನೆ. ಇದರ ಒಳ ಅರ್ಥವೆಂದರೆ ಭಾರತೀಯರು ತಮ್ಮ ತನವನ್ನು ಕಳೆದುಕೊಂಡು ಆಂಗ್ಲರಂತೆ ಜೀವಿಸುವುದು ಅರ್ಥಾತ್ ಮಾನಸಿಕವಾಗಿ ಬ್ರಿಟೀಷರಿಗೆ ಗುಲಾಮರಾಗುವುದು. ಅಬ್ಬ ಎಂತಹ ಷಡ್ಯಂತ್ರ! ಈ ಷಡ್ಯಂತ್ರ ಏಷ್ಟು ಕೆಲಸ ಮಾಡಿದೆ ಎಂದರೆ ಸ್ವಾತಂತ್ರ್ಯ ಬಂದು ೭೦ ವರ್ಷವಾದರೂ ನಾವುಗಳು ಈ 'ಗುಲಾಮಿ ಮಾನಸಿಕತೆ' ಇಂದ ಹೊರ ಬಂದಿಲ್ಲ.
![]()  | 
| Macaulay's address at House of Commons in 1835 | 
ಹೌದು, ಈ ಮಾತನ್ನು ಹೇಳಲು ಬಲವಾದ ಕಾರಣವಿದೆ. ಈ ವಿಚಾರದ ಕುರಿತು ೩ ಉದಾಹರಣೆಗಳನ್ನು ಕೊಡಲು ಬಯಸುತ್ತೇನೆ
೧. ವಾಟ್ಸಪ್ ಅಲ್ಲಿ ಬಂದ ಸಂದೇಶ:
"ಆಧಾರ್ ಕಾರ್ಡನ್ನು ಫ಼ೇಸ್ಬುಕ್ಕಿಗೆ ಲಿಂಕ್ ಮಾಡಿದರೆ ನಮಗೆ ಅರ್ಥವಾಗುತ್ತದೆ... Angel Priya ಅನ್ನುವವರು ತಿಮ್ಮಕ್ಕ". Angel Priya ಅನ್ನುವ ಹೆಸರಿನಡಿ ಬಿಳಿ ಚರ್ಮದ ಹೆಣ್ಣು ಮಗಳ ಚಿತ್ರ ಮತ್ತು ತಿಮ್ಮಕ್ಕ ಎನ್ನುವ ಹೆಸರಿನಡಿ ಕಂದು ಬಣ್ಣದ ಹೆಣ್ಣು ಮಗಳ ಚಿತ್ರವಿತ್ತು. ಈ ಸಂದೇಶ ಹಾಸ್ಯವೆಂದು ತುಂಬ ಕಡೆ ಓಡಾಡಿತು. ಇದರಲ್ಲಿ ಹಾಸ್ಯ ಎಂಬುದು ಏನಿದೆ ಅನ್ನೋದು ಪ್ರಶ್ನೆ. ಇಲ್ಲಿ ಬಳಸಿರುವ 'Angel' ಎಂಬ ಪದ ಆಂಗ್ಲರ ಕಲ್ಪನೆಯ ಸುಂದರವಾದ ಹೆಣ್ಣು ಮಗಳನ್ನು ಸೂಚಿಸುತ್ತದೆ. 'ತಿಮ್ಮಕ್ಕ' ಅನ್ನೋದು ಭಾರತದ ಹೆಣ್ಣು ಮಗಳ ಹೆಸರು. ಅದನ್ನು ಇಲ್ಲಿ ಕುರೂಪಿ ಅಥವಾ ನೋಡಲಿಕ್ಕೆ ಚೆನ್ನಾಗಿಲ್ಲ ಅನ್ನೋ ರೀತಿ ಬಿಂಬಿಸಿದ್ದಾರೆ.
ಬ್ರಿಟೀಷರು ಹೀಗೆ ಮಾಡುತ್ತಿದ್ದರು. ಸರ್ದಾರ್ಜಿ ಅಂದರೆ 'ಬಾರ ಬಜ್ ಗಯೆ ಕ್ಯಾ (ಹನ್ನೆರಡು ಗಂಟೆ ಆಯ್ತ?)' ಎಂದು ಮೂದಲಿಸುತ್ತಿದ್ದರು. 'ಬಾರ ಬಜ್ ಗಯೆ ಕ್ಯಾ' ಅನ್ನೋದಕ್ಕೆ ಹಿನ್ನಲೆ ಇದೆ. ಮೊಘಲರು ಹಿಂದು ಹೆಣ್ಣು ಮಕ್ಕಳನ್ನು ಅಪಹರಿಸಿದಾಗ ಅವರ ಮನೆಯವರು ಸಿಖ್ಖರ (ಸರ್ದಾರ) ಹತ್ತಿರ ತಮ್ಮ ಅಳಲು ತೋಡಿಕೊಳ್ಳುತ್ತಿದ್ದರು. ಆಗ ಖಾಲ್ಸ ಎಂಬ ಪಂಥದ ಸಿಖ್ಖರು ರಾತ್ರಿ ೧೨ಕ್ಕೆ ದಾಂಧಲೆ ಮಾಡಿ ಅಪಹರಣಕ್ಕೊಳಗಾದ ಹೆಣ್ಣು ಮಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಬರುತ್ತಿದ್ದರು. ಬ್ರಿಟೀಷರಿಗೆ ತಲೆ ನೋವಾಗಿ ಪರಿಣಮಿಸಿದ್ದು 'ಗದ್ದರ್ ಪಾರ್ಟಿ'ಯ ಸಿಖ್ಖರು. ಆದ್ದರಿಂದ ಅವರನ್ನು ಮೂರ್ಖರು ಎಂದು ಬಿಂಬಿಸಿ, ಸರ್ದಾರ್ಜೀ ಜೋಕುಗಳನ್ನು ಸೃಷ್ಟಿ ಮಾಡಿದರು. ಇಗಲೂ ನಮ್ಮವರೇ ಸಿಖ್ಖರನ್ನು ಈ ಜೋಕುಗಳ ಮೂಲಕ ಆಡಿಕೊಳ್ಳುತ್ತಾರೆ. ಅದೇ ರೀತಿ ಈ 'Angel Priya' ಮತ್ತು 'ತಿಮ್ಮಕ್ಕ'ರ ಜೋಕು. ಬ್ರಿಟೀಷರು ಮಾಡಿದ್ದನ್ನೇ ನಾವು ಈಗಲೂ ಮಡುತ್ತಿದ್ದೇವೆ.
೨. 'ಅರ್ಧಸತ್ಯ'ವನ್ನು ತಿಳಿಸುವ ಪಠ್ಯ ಪುಸ್ತಕ:
ಹತ್ತನೇ ತರಗತಿಯ ಸಮಾಜ ವಿಜ್ಞಾನದಲ್ಲಿ 'ನಮ್ಮ ಸಮಾಜ ಸುಧಾರಕರು' ಎಂಬ ಪಾಠವಿದೆ. ಅದರಲ್ಲಿ ರಾಜ ರಾಮ್ ಮೋಹನ್ ರಾಯ್, ದಯಾನಂದ ಸರಸ್ವತಿ, ಈಶ್ವರ್ ಚಂದ್ರ ವಿದ್ಯಾಸಾಗರ್ ಮತ್ತು ಮತ್ತಿತರರ ಬಗ್ಗೆ ಬಣ್ಣಿಸುತ್ತಾರೆ. 'ಈ ಸಮಾಜ ಸುಧಾರಕರು ಸತಿ ಪದ್ಧತಿ, ಬಾಲ್ಯ ವಿವಾಹವನ್ನು ವಿರೋಧಿಸುತ್ತಿದ್ದರು, ವಿಧವ ವಿವಾಹವನ್ನು ಎತ್ತಿ ಹಿಡಿಯುತ್ತಿದ್ದರು ಮತ್ತು ಇವರ ಈ ತತ್ವಕ್ಕೆ ಬ್ರಿಟೀಷರು ಬೆಂಬಲ ನೀಡುತ್ತಿದ್ದರು' ಎಂದು ವರ್ಣಿಸುತ್ತಾರೆ. ನಮ್ಮ ಪಠ್ಯ ಪುಸ್ತಕಗಳು ಹೇಳೋದು ಇಷ್ಟನ್ನೇ. ಹೌದು, ಇದು ಸತ್ಯವೇ, ಆದರೆ ಅರ್ಧಸತ್ಯ!
ಮೊಘಲರ ಕಾಲದಲ್ಲಿ ಹೆಣ್ಣು ಮಕ್ಕಳನ್ನು ಅಪಹರಿಸಿಕೊಂಡು ಹೋಗಿ ಜನಾನದಲ್ಲಿ ಕೂಡಿ ಹಾಕುತ್ತಿದ್ದರು. ಆ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಸೌಂದರ್ಯವೇ ಶಾಪವಾಗಿತ್ತು. ತಮ್ಮ ಮಾನವನ್ನು ಕಾಪಾಡಿಕೊಳ್ಳಲು ಗಂಡ ಪ್ರಾಣಬಿಟ್ಟ ನಂತರ ಚಿತೆಗೆ ಹಾರುತ್ತಿದ್ದರು, ಚಿಕ್ಕವಯಸ್ಸಿನ ಹೆಣ್ಣು ಮಕ್ಕಳನ್ನು ದೂರದ ಊರಿಗೆ ಮದುವೆ ಮಾಡಿ ಕಳಿಸುತ್ತಿದ್ದರು. ಕಾಲಕ್ರಮೇಣ ಇದು 'ಅಪ್ಪ ಹಾಕಿದ ಆಲದ ಮರಕ್ಕೆ ತೂಗಿ ಹಾಕೋ' ಎಂಬ ಗಾದೆಯಂತೆ ಒಂದು ಸಂಪ್ರದಾಯವಾಗಿ ಬೆಳೆದು ಬಂತು. ನೆನಪಿಡಿ ವೇದಗಳಾಗಲಿ, ಪುರಾಣವಾಗಲಿ ಈ ಪದ್ಧತಿಯನ್ನು ಪ್ರಸ್ತಾಪಿಸುವುದಿಲ್ಲ.
ಬ್ರಿಟೀಷರು ಇಂತಹ ಸುಧಾರಕರನ್ನು ೨ ಕಾರಣಕ್ಕಾಗಿ ಬೆಂಬಲಿಸುತ್ತಿದ್ದರು. ಒಂದು, ಭಾರತದಲ್ಲಿ ತಮ್ಮ ನೆಲವನ್ನು ಗಟ್ಟಿಮಾಡಿಕೊಳ್ಳಲು. ಎರಡು, ಭಾರತೀಯರನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡಲು. ವಿಲಿಯಂ ಆಡಮ್ಸ್ ಎಂಬ ಪಾದ್ರಿ ಭಾರತಕ್ಕೆ ಈ ಸಮಾಜ ಸುಧಾರಕರೊಬ್ಬರನ್ನ ತಮ್ಮ ಮತಕ್ಕೆ ಸೆಳೆದುಕೊಳ್ಳಲು ಬಂದ. ಸುಧಾರಕರ ಮೂಲಕ ಇಡೀ ಬಂಗಾಳವನ್ನು ಮತಾಂತರ ಮಾಡುವ ಷಡ್ಯಂತ್ರ ಅಡಗಿತ್ತು. ಆಡಮ್ಸ್ ರಾಜ ರಾಮರನ್ನು ಭೇಟಿ ಮಾಡಿ "ಕ್ರೈಸ್ತ ಮತ ಹೇಳುವುದು 'ಏಕದೇವೋಪಾಸನೆ' ಆದರೆ, ಹಿಂದುಗಳಲ್ಲಿ ಕೋಟಿ ದೇವರುಗಳಿದ್ದಾರೆ, ಇದರಲ್ಲಿ ಅರ್ಥವಿಲ್ಲ ಹಾಗಾಗಿ ನೀವ್ಯಾಕೆ ಕ್ರೈಸ್ತಮತಕ್ಕೆ ಮತಾಂತರಗೊಳ್ಳಬರದು?" ಎನ್ನುತ್ತಾನೆ.
ರಾಜರಾಮರು ಉತ್ತರಿಸುತ್ತಾ - "ನಿಮ್ಮ ಕ್ರೈಸ್ತ ಮತದಲ್ಲಿ ನಂಬುವುದು ೩ ದೇವರುಗಳನ್ನು
- ಗಾಡ್; ದಿ ಹೋಲಿ ಫ಼ಾಧರ್
 - ಗಾಡ್; ದಿ ಹೋಲಿ ಸನ್
 - ಗಾಡ್; ದಿ ಹೋಲಿ ಘೋಸ್ಟ್
 
ಹೀಗಿದ್ದು ಅದು ಏಕದೇವೋಪಾಸನೆ ಹೇಗೆ ಆಗುತ್ತದೆ. ಈ ಮೂವರೊಟ್ಟಿಗೆ ೩ ಕೋಟಿ ಸೇರಿದರೆ ಸಮಸ್ಯೆ ಏನು? ಬ್ರಹ್ಮತತ್ವವನ್ನು ಮುಂದಿಡುತ್ತಾ ವೇದಗಳು ಏಕದೇವ ಸೂತ್ರ ಮಂಡಿಸುತ್ತದೆ" ಎಂದು ಆತನನ್ನು ವಾದದಲ್ಲಿ ಸೋಲಿಸುತ್ತಾರೆ. ನಂತರ ವಿಲಿಯಂ ಆಡಮ್ಸ್ ವೇದಾಧ್ಯಾಯನಕ್ಕಾಗಿ ಹಿಮಾಲಯಕ್ಕೆ ಹೋದ ಅಂತಲೂ ಇತಿಹಾಸವಿದೆ. ಈ ಪೂರ್ಣ ಸತ್ಯವನ್ನು ನಮ್ಮ ಪಠ್ಯ ಪುಸ್ತಕಗಳು ಹೇಳುವುದಿಲ್ಲ. "ಭಾರತೀಯರು ಅವಿಧ್ಯಾವಂತರು, ಅನಾಗರೀಕರು ಎಂದೂ, ಅದೇ ರೀತಿ ಭಾರತದಲ್ಲಿ ಸತಿ ಪದ್ಧತಿ, ಬಾಲ್ಯ ವಿವಾಹವಿತ್ತು, ವಿಧವಾ ವಿವಾಹಕ್ಕೆ ಅವಕಾಶವಿರಲಿಲ್ಲ" ಎಂದು ಆಂಗ್ಲರು ಪ್ರಚಾರ ಮಾಡಿದರು. ಅದರಂತೆ ನಾವು ಈಗಲೂ ಅದನ್ನೇ ಓದುತ್ತಿದ್ದೇವೆ.
![]()  | 
| William Adams' letter on Raja Ram Mohan Roy | 
೩. ಹಿಂದಿ ಹೇರಿಕೆಯ ಹಿಂದಿನ ರಾಜಕೀಯ:
ಜೂನ್ ೨೦೧೭ ರಲ್ಲಿ ಬೆಂಗಳೂರಿನಲ್ಲಿ 'ನಮ್ಮ ಮೆಟ್ರೋ'ದ ಒಂದು ಹಂತವನ್ನು ಮಾಜಿ ರಾಷ್ಟ್ರಾಧ್ಯಕ್ಷ ಶ್ರೀ ಪ್ರಣವ್ ಮುಖರ್ಜಿ ಉದ್ಘಾಟಿಸಿದರು. ನಂತರದ ದಿನಗಳಲ್ಲಿ #nammametrohindibeda, #banhindimposition ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆ ಶುರುವಾಯಿತು. ಕರ್ನಾಟಕ ಸರ್ಕಾರ ಕೂಡ ಇದು ಕೇಂದ್ರ ಸರ್ಕಾರದ ನೀತಿ ಎಂದು ವಿರೋಧಿಸಿತು. ಇಲ್ಲಿ ನಾವು ಗಮನಿಸಬೇಕಾಗಿರುವುದು ಎರಡು ವಿಚಾರ:
೧. ಪ್ರತಿಭಟನೆ ಮಾಡುತ್ತಿರುವ ಸಾಮಾನ್ಯ ಜನ ಇಂಗ್ಲೀಷ್ ಇರಲಿ, ಅದು ಅನಿವಾರ್ಯ ಆದರೆ, ಹಿಂದಿ ಬೇಡ ಎನ್ನುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವುದು ಕನ್ನಡ. ಆದರೆ, ಲಿಪಿ ಮಾತ್ರ ಇಂಗ್ಲೀಷ್! ಸಂಸ್ಕೃತ ಭಾರತದಲ್ಲೇ ಹುಟ್ಟಿದ ಭಾಷೆ. ಅದರಿಂದಲೇ ಕನ್ನಡ, ಹಿಂದಿ ಮುಂತಾದ ಭಾರತೀಯ ಭಾಷೆಗಳು ಹುಟ್ಟಿದವು ಅನ್ನೋದು ವಾಸ್ತವ. ಇಂಗ್ಲೀಷ್ ಈ ದೇಶದ ಭಾಷೆ ಅಲ್ಲ. ವಿಪರ್ಯಾಸವೆಂದರೆ ಇಲ್ಲಿ ಜನ ಇಂಗ್ಲೀಷನ್ನು ಒಪ್ಪಿಕೊಂಡು ನಮ್ಮ ದೇಶದ್ದೇ ಭಾಷೆಯಾದ ಹಿಂದಿಯನ್ನು ವಿರೋಧಿಸುವುದು.
೨. ರಾಜಕೀಯವಾಗಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಇಲ್ಲಿನ ಕಾಂಗ್ರೇಸ್ ಪಕ್ಷದ ಉದ್ದೇಶ. ೧೯೬೮ ರಲ್ಲಿ ಇಂದಿರಾಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳನ್ನು ಪರಿಗಣನೆಗೆ ತೆಗೆದುಕೊಂಡು 'ತ್ರಿ ಭಾಷಾ ಸೂತ್ರ' ಎಂಬ ತತ್ವವನ್ನು ಜಾರಿಗೆ ತಂದಿತು. ಇದರ ಪ್ರಕಾರ ಇಂಗ್ಲೀಷ್, ಹಿಂದಿ ಮತ್ತು ಆಯಾ ರಾಜ್ಯಕ್ಕೆ ಅನುಗುಣವಾಗಿ ಪ್ರಾದೇಶಿಕ ಭಾಷೆಯೊಂದನ್ನು ಕಲಿಯತಕ್ಕದು ಎಂಬ ಆದೇಶ ಹೊರಡಿಸಿದರು. ತಮಿಳುನಾಡು ಮಾತ್ರ ಇದಕ್ಕೆ ವಿರೋಧವಾಗಿ ಈಗಲೂ ಇಂಗ್ಲೀಷ್ ಮತ್ತು ತಮಿಳನ್ನು ಮಾತ್ರ ಅಭ್ಯಾಸ ಮಾಡುತ್ತದೆ. ಇದು ಆಗಿನ ಕೇಂದ್ರ ಸರ್ಕಾರದ ನಿರ್ಣಯ. ಹೊಸದಾಗಿ ಹೊರಡಿಸಿದ ಆದೇಶವೇನಲ್ಲ. ಹಾಗಾಗಿ ಈ ವಿಷಯಕ್ಕೂ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಗೂ ಸಂಬಂಧವೇ ಇಲ್ಲ.
ನಮ್ಮದನ್ನು ವಿರೋಧಿಸಿ, ಹೊರ ದೇಶದಿಂದ ಆಮದಾದದ್ದನ್ನು ಒಪ್ಪಿಕೊಳ್ಳೋದು ಎಷ್ಟರ ಮಟ್ಟಿಗೆ ಸರಿ? ಬ್ರಿಟೀಷರು ನಮ್ಮವರ ಎದುರಿಗೆ ನಮ್ಮವರನ್ನೇ ಎತ್ತಿಕಟ್ಟುತ್ತಿದ್ದ ವಿಧಾನದಲ್ಲಿ ಇದೂ ಒಂದು. ಈಗಲೂ ಸಹ ನಮ್ಮದನ್ನು ನಾವೇ ವಿರೋಧ ಮಾಡುತ್ತಿದ್ದೇವೆ.
ಈ ಮೂರು ಉದಾಹರಣೆಯಲ್ಲಿ ಗಮನಿಸಬೇಕಾದ ಅಂಶ; ಬ್ರಿಟೀಷರು ಯಾವ ಇಂಗ್ಲೀಷ್ ಶಿಕ್ಷಣದ ಮೂಲಕ ನಮ್ಮ ಸಂಸ್ಕೃತಿಯನ್ನು ನಾಶ ಮಾಡಿದರೋ ಅದೇ ಶಿಕ್ಷಣ ಪದ್ಧತಿಯಲ್ಲೇ ನಾವು ಇಂದಿಗೂ ಅಭ್ಯಸಿಸುತ್ತಿದ್ದೇವೆ. ಆದ್ದರಿಂದ, ನಮ್ಮನ್ನೇ ನಾವು ಬೇರೆಯವರ ಕಾರಣಕ್ಕಾಗಿ ವಿರೋಧಿಸುತ್ತಿದ್ದೇವೆ. ಆಂಗ್ಲರು ನಮ್ಮನ್ನು ಬಿಟ್ಟು ಹೋದ ಮೇಲೂ ಅವರು ಹೇಳಿದಂತೆಯೇ ನಡೆದುಕೊಳ್ಳುತ್ತಿದ್ದೇವೆ. ೭೦ ವರ್ಷಗಳ ಹಿಂದೆ ಆಂಗ್ಲರ ಕೆಳಗೆ ನಾವು ಗುಲಾಮರು. ಈಗ ನಮ್ಮವರ ಕೆಳಗೆ ನಾವು ಗುಲಾಮರು. ಮೆಕಾಲೆ ತನ್ನ ಒಂದು ಶಿಕ್ಷಣ ಪದ್ದತಿಯಿಂದ ಇಡೀ ದೇಶದ ಜನರನ್ನು 'ಗುಲಾಮಿ ಮಾಸಸಿಕತೆ'ಗೆ ಒಗ್ಗುವಂತೆ ಮಾಡಿಬಿಟ್ಟ! ಇನ್ನಾದರು ನಾವು ಬದಲಾಗೋಣ. ಸ್ವಾಮೀ ವಿವೇಕಾನಂದರು ನಮಗೆ ಆದರ್ಶವಾಗಲಿ, ಯಾವುದು ಸರಿ, ಯಾವುದು ತಪ್ಪು ಎಂದು ವಿಶ್ಲೇಷಿಸೋಣ. ಭಾರತೀಯರ ಭೌತಿಕ ಮಟ್ಟ ಹೆಚ್ಚಾಗಲಿ, ಭಾರತ ಭವ್ಯವಾಗಲಿ.













