August 18, 2021

ಅಫ್ಘಾನಿಸ್ತಾನದಲ್ಲಿ ದಿ ತಾಲಿಬಾನ್ ರಿಟರ್ನ್ಸ್!

2001 ರಲ್ಲಿ ತಾಲಿಬಾನಿಗಳು ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ದಾಳಿ ಮಾಡಿ ಉರುಳಿಸಿದರು. ಒಸಾಮಾ ಬಿನ್ ಲಾಡೆನ್ ಮತ್ತು ಅಲ್-ಕಾಯ್ದಾಗಳಿಗೆ ಬುದ್ದಿ ಕಲಿಸಬೇಕೆಂದು ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ನಿಶ್ಚಯಿಸಿದ. ಅಮೇರಿಕಾದ ಅಸಲಿ ಉದ್ದೇಶವೇ ಬೇರೆ ಇತ್ತು. ಏಷ್ಯಾದ ಮಧ್ಯ ಭಾಗದಲ್ಲಿ ತನ್ನ ಬಲವನ್ನು ವೃದ್ಧಿಸಿಕೊಳ್ಳಬೇಕಿತ್ತು, ತೈಲ ನಿಕ್ಷೇಪದ ಮೇಲೆ ತನ್ನ ಸ್ವಾಮ್ಯ ಸ್ಥಾಪಿಸುವ ಉದ್ದೇಶವಿತ್ತು. ಒಂದು ಕಾಲದಲ್ಲಿ ರಷ್ಯಾ ವಿರುದ್ಧವಾಗಿ ಇದೇ ತಾಲಿಬಾನನ್ನು ಮತ್ತು ಅಲ್-ಕಾಯ್ದಗಳನ್ನು ಅಮೇರಿಕಾ ಬೆಂಬಲಿಸಿತ್ತು. ಭಯೋತ್ಪಾದನೆಯನ್ನು ಮಟ್ಟ ಹಾಕಿ, ಅಫ್ಘಾನ್ ಸೇನೆಯನ್ನು ತನ್ನ ದೇಶವನ್ನು ರಕ್ಷಿಸಿಕೊಳ್ಳುವ ಹಾಗೆ ತಯಾರು ಮಾಡಿ, ಪ್ರಜಾಪ್ರಭುತ್ವ ಸ್ಥಾಪಿಸುವ ಉದ್ದೇಶವನ್ನು ಜಗತ್ತಿನೆದುರಿಗೆ ಹೇಳಿಕೊಳ್ಳಿತ್ತಿತ್ತು. 20 ವರ್ಷಗಳ ಕಾಲ ಅಮೇರಿಕಾ ಅಫ್ಘಾನ್ ಅನ್ನು ನಿಯಂತ್ರಿಸಿತ್ತು. ಈ ಅವಧಿಯಲ್ಲಿ ಅಮೇರಿಕಾ 144 ಮಿಲಿಯನ್ ಡಾಲರ್ ಅಷ್ಟು ಖರ್ಚು ಮಾಡಿದೆ, 2500 ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿದೆ, 22 ಸಾವಿರಕ್ಕೂ ಅಧಿಕ ಸೈನಿಕರು ಗಾಯಗೊಂಡರು! ಈ ನಷ್ಟದಿಂದಾಗಿ ಡೋನಾಲ್ಡ್ ಟ್ರಂಪ್ ಸೆಪ್ಟೆಂಬರ್ ಹೊತ್ತಿಗೆ ಹಿಂದೆ ಸೈನ್ಯವನ್ನು ತೆಗೆದುಕೊಳ್ಳುವ ಯೋಚನೆ ಮಾಡಿದ್ದ. ಆದರೆ, ಜೋ ಬೈಡನ್ ಈಗಲೇ ಒಂದು ರೀತಿ ಯೋಜನೆ ಇಲ್ಲದೆ ಹಿಂತೆಗೆದುಕೊಂಡಿದ್ದಾನೆ. ಅಮೇರಿಕಾ ಹೇಳಿದಂತೆ ಅಫ್ಗಾನ್ ಸೈನ್ಯವನ್ನು 20 ವರ್ಷಗಳ ಕಾಲ ತಯಾರು ಮಾಡಿದ್ದೆ ಆದರೆ, ಅವರ ಶ್ರಮ ನೀರಿನಲ್ಲಿ ಹೋಮ ಮಾಡಿದಂತೆ. ಕೇವಲ 10 ದಿನಗಳಲ್ಲಿ ಇಡೀ ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಆಕ್ರಮಿಸಿಕೊಂಡಿದ್ದಾರೆ. ಮತ್ತೊಮ್ಮೆ ಅಫ್ಘಾನಿಸ್ತಾನದಲ್ಲಿ ದಿ ತಾಲಿಬಾನ್ ರಿಟರ್ನ್ಸ್!

 
The Taliban Returns

ಅಮೇರಿಕಾ 88 ಬಿಲಿಯನ್ ಡಾಲರ್ ಅಷ್ಟು ಹಣವನ್ನು ಅಫ್ಘಾನಿಸ್ತಾನದ ಸೈನ್ಯ ಮತ್ತು ಪೋಲೀಸ್ ವ್ಯವಸ್ಥೆಯನ್ನು ಕಟ್ಟಲು ಖರ್ಚು ಮಾಡಿದೆ. 36 ಬಿಲಿಯನ್ ಡಾಲರ್ ಅಷ್ಟು ಮೊತ್ತವನ್ನು ಆಡಳಿತ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ವ್ಯಯಿಸಿದೆ ಎಂದು ಹೇಳಿಕೊಂಡಿದೆ. ಯೂರೋಪಿನ ಯು.ಕೆ. ಮತ್ತು ಜರ್ಮನಿ ದೇಶಗಳು 50 ಬಿಲಿಯನ್ ಡಾಲರ್ ಅಷ್ಟು ಮೊತ್ತವನ್ನು ಖರ್ಚು ಮಾಡಿದೆ. ಭಾರತ ಕೂಡ 3 ಬಿಲಿಯನ್ ಡಾಲರ್ರಷ್ಟು ಮೊತ್ತವನ್ನು ಅಫ್ಘಾನಿಸ್ತಾನದಲ್ಲಿ 500 ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳಿಗಾಗಿ ಹೂಡಿಕೆ ಮಾಡಿತ್ತು. ಅವರ ದೇಶದ ಸಂಸತ್ ಭವನವನ್ನು 90 ಮಿಲಿಯನ್ ಡಾಲರ್ ಅಷ್ಟು ಖರ್ಚು ಮಾಡಿ ಭಾರತ ಕಟ್ಟಿಕೊಟ್ಟಿತು. ಭಾರತದ ಅಮುಲ್ ಸಂಸ್ಥೆ ಅಫ್ಘಾನಿಸ್ತಾನ್ ಕ್ರಿಕೇಟ್ ತಂಡದ ಅಧಿಕೃತ ಪ್ರಧಾನ ಪ್ರಾಯೋಜಕರಾಗಿದ್ದಾರೆ. ಕೆಲವು ದಿನಗಳ ಘಟನೆಗಳನ್ನು ಗಮನಿಸುವುದಾದರೆ ಅಲ್ಲಿನ ಅಧ್ಯಕ್ಷ ಅಶ್ರಫ್ ಘನಿ ತಜಕಿಸ್ತಾನದಲ್ಲಿ ಅನುಮತಿ ಸಿಗದ ಕಾರಣ ಒಮನ್ ಗೆ ಓಡಿದ್ದಾನೆ. ಭ್ರಷ್ಟನಾಗಿದ್ದ ಆತ ತನ್ನ ಆಸ್ತಿಯನ್ನೆಲ್ಲಾ ಕರಗಿಸಿ ಹಣವನ್ನು ವಿಮಾನದಲ್ಲಿ ತುಂಬಿಸಿಕೊಂಡು ಓಡಿದ್ದಾನೆ. ನೆನಪಿಡಿ, ಅಫ್ಘಾನಿಸ್ತಾನದ ಸೈನ್ಯದ ಸಂಖ್ಯೆ ಮೂರುವರೆ ಲಕ್ಷವಾದರೆ, ತಾಲಿಬಾನಿಗಳ ಸಂಖ್ಯೆ 85 ಸಾವಿರ. ಸಂಖ್ಯೆ ದೃಷ್ಠಿಯಲ್ಲಿ ಮೂರು ಪಟ್ಟು ಹೆಚ್ಚು ಬಲವಾಗಿದ್ದರೂ ಸೈನ್ಯ ಮತ್ತು ಪೋಲೀಸ್ ವ್ಯವಸ್ಥೆ ಯಾವುದೇ ಪ್ರತಿರೋಧವಿಲ್ಲದೆ ಮತಾಂಧ, ಡಕಾಯಿತರ ಗುಂಪು ಆ ದೇಶವನ್ನು ಆಕ್ರಮಿಸಿಕೊಂಡಿದೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಿದ್ದರೆ ಇದೇ ಸ್ಥಿತಿ ಇರುತ್ತಿತ್ತಾ? ಆ ದೇಶದಲ್ಲಿ ಹೂಡಿಕೆ ಮಾಡಿದ ಇಷ್ಟು ಮೊತ್ತ ಮತ್ತು ಸಮಯ ಏನಾಯಿತು? ತಾಲಿಬಾನಿಗಳು ಇಷ್ಟು ವ್ಯವಸ್ತಿತವಾಗಿ, ಆಧುನಿಕ ಶಸ್ತ್ರಾಸ್ತ್ರ ಮತ್ತು ವಾಹನಗಳನ್ನು ಬಳಸುತ್ತಿದ್ದಾರೆ ಎಂದರೆ ಅವರಿಗೆ ಹಣ ಹರಿದು ಬರುತ್ತಿರುವುದಾದರೂ ಎಲ್ಲಿಂದ? ಈ ಪ್ರಶ್ನೆಗಳು ನಮ್ಮನ್ನು ಸಧ್ಯದ ಪರಿಸ್ಥಿತಿಯಲ್ಲಿ ಕಾಡುವುದು ಅತ್ಯಂತ ಪ್ರಸ್ತುತ.

ಅಮೇರಿಕಾದ ಗುಪ್ತಚರ ಇಲಾಖೆ - ತಾಲಿಬಾನಿಗಳು ಕಾಬುಲ್ ಸೇರಿದಂತೆ ಅಫ್ಘಾನಿಸ್ತಾನವನ್ನು ತಮ್ಮ ಸೈನ್ಯ ತೊರೆದ 90 ದಿನಗಳಲ್ಲಿ ವಶಪಡಿಕೊಳ್ಳಬಹುದು ಎಂದು ಅಭಿಪ್ರಾಯ ಪಟ್ಟಿತ್ತು! ಆದರೆ, ಅವರ ಅಭಿಪ್ರಾಯ ತಲೆಕೆಳಗಾಗುವಂತೆ ಮಾಡಿದ್ದು ತಾಲಿಬಾನಿಗಳು. ಇಷ್ಟು ವೇಗವಾಗಿ ತಾಲಿಬಾನಿಗಳು ಮುನ್ನುಗಲು ಕಾರಣವೇನಿರಬಹುದು? ವಿಚಿತ್ರ, ಆಶ್ಚರ್ಯ ಮತ್ತು ಅರಗಿಸಿಕೊಳ್ಳಲಾಗದ ವಿಷಯ ಇಲ್ಲೊಂದಿದೆ. ಲಕ್ಷಾಂತರ ಅಫ್ಘನ್ ನಾಗರಿಕರು ತಾಲಿಬಾನ್ ಅನ್ನು ಒಪ್ಪಿಕೊಳ್ಳುತ್ತಾರೆ. ಈ ವಿಚಾರ ಕೇವಲ ಊಹೆಯಲ್ಲ. 2013 ಅನುಸಾರ PEW ಸಂಶೋಧನೆಯ ಪ್ರಕಾರ, 99% ಆಫ್ಘನ್ನರು ಶರಿಯಾ ಕಾನೂನನ್ನು ಬಯಸುತ್ತಾರೆ ಮತ್ತು 43% ರಷ್ಟು ಜನ ತಾಲಿಬಾನ್ ಹೇಳುವಂತಹ ಶರಿಯಾ ಕಾನೂನನ್ನು ಒಪ್ಪುತ್ತಾರೆ. ಮತ್ತಷ್ಟು ಹೆಚ್ಚು ಆಘಾತಕಾರಿ ಸಂಗತಿಯೆಂದರೆ, PEW ಸಂಶೋಧನೆಯಿಂದ ಸಮೀಕ್ಷೆಗೆ ಒಳಪಟ್ಟಿರುವ 39% ಆಫ್ಘನ್ನರು ಇಸ್ಲಾಂ ಧರ್ಮದ ರಕ್ಷಣೆಗಾಗಿ ಆತ್ಮಹತ್ಯಾ ಬಾಂಬ್ ದಾಳಿ ಸಮರ್ಥನೀಯ ಎಂದು ಭಾವಿಸಿದ್ದಾರೆ. ತಾಲಿಬಾನಿಗಳು ಈ ರೀತಿ ವ್ಯವಸ್ಥಿತ ದಾಳಿ ಮಾಡಲು ಅಂತರಿಕವಾಗಿ ಗೌಪ್ಯತೆ ಕಾಪಾಡಿಕೊಂಡು ತಾಯಾರಿ ಮಾಡಿಕೊಂಡಿದ್ದು ಹೇಗೆ ಎಂಬುದು ಪ್ರಶ್ನಾರ್ಹ! ಪಾಕಿಸ್ತಾನದ ಐ.ಎಸ್.ಐ. ತಾಲಿಬಾನಿಗಳ ಹ್ಯಾಕರ್ಗಳನ್ನು ಸುಮಾರು ವರ್ಷಗಳಿಂದ ಬೆಂಬಲಿಸುತ್ತಾ ಇದ್ದಾರೆ. ಈ ಮೂಲಕ ಅಫ್ಘಾನಿಸ್ತಾನ ಸರ್ಕಾರದ ಮಾಹಿತಿ ತಾಲಿಬಾನಿಗಳಿಗೆ ಸಿಗುವಂತಾಯಿತು. ತಾಲಿಬಾನಿಗಳು ಅನೇಕ ನಕಲಿ ಸಾಮಾಜಿಕ ಜಾಲತಾಣದ ಪ್ರೊಫೈಲ್ಗಳನ್ನು (Social Media Fake Profiles) ಹೊಂದಿದ್ದಾರೆ ಮತ್ತು ಐ.ಎಸ್.ಐ. ತಾಂತ್ರಿಕವಾಗಿ ಯುದ್ಧ ತಂತ್ರಗಳೊಂದಿಗೆ ತಾಲಿಬಾನಿಗಳನ್ನು ಬೆಂಬಲಿಸಿದೆ. ಈ ಮೂಲಕವಾಗಿ ತಾಲಿಬಾನಿಗಳು ಮತ್ತಷ್ಟು ಬಲಾಢ್ಯವಾಗಿದ್ದಾರೆ.

PEW Survey Report

Reference: The World’s Muslims: Religion, Politics and Society 

ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡ ನಂತರ ಕೆಲವು ದೇಶಗಳ ಪ್ರತಿಕ್ರಿಯೆಯನ್ನು ಗಮನಿಸಬೇಕು. ಇಂಗ್ಲೆಂಡಿನ ಪ್ರಧಾನಿ ಬೋರಿಸ್ ಜಾನ್ಸನ್ "ತಾಲಿಬಾನ್ ಜೊತೆಗೆ ಯಾವುದೇ ದೇಶ ದ್ವಿಪಕ್ಷೀಯವಾಗಿ ಗುರುತಿಸಿಕೊಳ್ಳುವುದನ್ನು ನಾವು ಬಯಸುವುದಿಲ್ಲ" ಎಂದು ಸಣ್ಣ ಧ್ವನಿಯಲ್ಲಿ ಹೇಳಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ "ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಎಲ್ಲಕ್ಕಿಂತ ಶ್ರೇಷ್ಠ" ಎಂದು ತಾಲಿಬಾನಿಗಳ ಪರ ಎನ್ನುವಂತೆ ಮಾತಾಡಿದ್ದಾರೆ. UNSC ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರವನ್ನು ರಚಿಸಲು ಮತ್ತು ದಾಳಿಯನ್ನು ಕೊನೆಗೊಳಿಸಲು ಮಾತುಕತೆಗೆ ಕರೆ ನೀಡಿದೆ. ಅಮೇರಿಕಾದ ಅಧ್ಯಕ್ಷ ಬೈಡನ್ "ನಾವು ಸುಮಾರು 20 ವರ್ಷಗಳ ಹಿಂದೆ ಅಫ್ಘಾನಿಸ್ತಾನಕ್ಕೆ ಸ್ಪಷ್ಟ ಗುರಿಯೊಂದಿಗೆ ಹೋಗಿದ್ದೆವು. ಸೆಪ್ಟೆಂಬರ್ 11, 2001 ರಂದು ನಮ್ಮ ಮೇಲೆ ದಾಳಿ ಮಾಡಿದವರನ್ನು ಕೊಂದು ಮತ್ತೆ ನಮ್ಮ ಮೇಲೆ ಆಕ್ರಮಣ ಮಾಡದಂತೆ ಮಾಡಬೇಕು ಎಂಬುದಷ್ಟೇ ನಮ್ಮ ಉದ್ದೇಶವಾಗಿತ್ತು. ಅವರ ಸೈನ್ಯವೇ ಅವರ ದೇಶವನ್ನು ರಕ್ಷಿಸಿಕೊಳ್ಳಲಾಗಲಿಲ್ಲ ಎಂದ ಮೇಲೆ ನಾವು ಏಕೆ ಅವರನ್ನು ಕಾಯಬೇಕು" ಎಂದು ಹೇಳಿದ್ದಾರೆ. ಬಂಗ್ಲಾದೇಶ, ಟರ್ಕಿ ನಿರಾಶ್ರಿತರನ್ನು ಒಪ್ಪಿಕೊಳ್ಳುವಿವುದಿಲ್ಲ ಎಂದು ಹೇಳಿದೆ. ನೆನಪಿಡಿ, ಈ ದೇಶಗಳೇ CAA ವಿರುದ್ಧ ಮಾತಾಡಿದ್ದು. ಭಾರತ ಇದುವರೆಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಅಲ್ಲಿರುವ ಸಿಖ್ ಮತ್ತು ಹಿಂದುಗಳನ್ನು ಒಪ್ಪಿಕೊಳ್ಳುತ್ತೇವೆ ಎಂದಷ್ಟೇ ಹೇಳಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಚೀನಾದ ಪ್ರತಿಕ್ರಿಯೆಯನ್ನು ಗಮನಿಸೋಣ. ಕಳೆದ 2-3 ದಿನಗಳ ಹಿಂದೆ "ತಾಲಿಬಾನ್ ಜೊತೆ ಸ್ನೇಹ ಸಂಭಂದ ಬೆಳೆಸಲು ಸಿದ್ಧ. ಅಫ್ಘಾನ್ ಜನರಿಗೆ ತಮ್ಮ ಹಣೆಬರಹವನ್ನು ಸ್ವತಂತ್ರವಾಗಿ ನಿರ್ಧರಿಸುವ ಹಕ್ಕನ್ನು ಚೀನಾ ಗೌರವಿಸುತ್ತದೆ ಮತ್ತು ಅಫ್ಘಾನಿಸ್ತಾನದೊಂದಿಗೆ ಸ್ನೇಹಪರ ಸಹಕಾರವನ್ನು ಮುಂದುವರಿಸಲು ಸಿದ್ಧವಾಗಿದೆ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನಿಂಗ್ ತಿಳಿಸಿದರು. ಲೀಥಿಯಮ್ ಮತ್ತು ವಜ್ರ ನಿಕ್ಷೇಪ ಮತ್ತು ಮಾದಕದ್ರವ್ಯ ಅಫ್ಘಾನಿಸ್ತಾನದಲ್ಲಿ ಸಮೃದ್ಧವಾಗಿದೆ. ಇದನ್ನು ಉಪಯೋಗಿಸಿಕೊಳ್ಳಲು ಚೀನಾ ಆ ದೇಶಕ್ಕೆ ಹಣ ಸಹಾಯ ಮಾಡಿ ತಾನು ನಿಯಂತ್ರಣ ಮಾಡುವ ಸಾಧ್ಯತೆ ಕೂಡ ಇದೆ. ಪಾಕಿಸ್ತಾನದ ಇಮ್ರಾನ್ ಖಾನ್ ಅಂತೂ "ದಶಕಗಳ ಗುಲಾಮಗಿರಿಯನ್ನು ಅಳಿಸಿ ಸ್ವಾತಂತ್ರ್ಯ ಪಡೆದುಕೊಂಡಿದ್ದಾರೆ ತಾಲಿಬಾನಿಗಳು" ಎಂದು ಹೇಳಿದ್ದಾನೆ. ಹಮಾಸ್ ಎಂಬ ಉಗ್ರ ಸಂಘಟನೆಯ ಮುಖ್ಯಸ್ತ ಇಸ್ಮಾಯಿಲ್ ಹನಿಯಾ ತಾಲಿಬಾನಿಯರಿಗೆ ಶುಭಾಶಯ ಕೋರಿದ್ದಾರೆ.

china speaks supporting Taliban

Hamas leader congratulates Taliban

ಈ ಎಲ್ಲಾ ಬೆಳವಣಿಗೆ ಭಾರತಕ್ಕೆ ಅಪಾಯಕರ ಸೂಚನೆ. ಭಯೋತ್ಪಾದನ ಸಂಘಟನೆಯೊಂದು ಸರ್ಕಾರ ನಿರ್ಮಾಣ ಮಾಡಿಕೊಂಡ ದೇಶದೊಂದಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ದೇಶವೊಂದು ಸಂಭಂದ ಬೆಳೆಸಬಾರದು ಎಂದು ಮೇಲ್ನೋಟಕ್ಕೆ ಹೊಳೆಯುತ್ತದೆ. ಒಂದು ಕಡೆ ಚೀನಾ ಮತ್ತೊಂದು ಕಡೆ ಪಾಕೀಸ್ತಾನ ನಮಗೆ ಶತ್ರು ರಾಷ್ಟ್ರಗಳಾಗಿದೆ. ಇದರೊಟ್ಟಿಗೆ ಅಫ್ಘಾನಿಸ್ತಾನದ ಶತ್ರುತ್ವ ಕಟ್ಟಿಕೊಳ್ಳುಬೇಕೆ ಎಂಬ ಪ್ರಶ್ನೆ ಉಳಿದಿದೆ. ಹಾಗೆಂದು ತಾಲಿಬಾನಿಗಳನ್ನು ನಂಬಬಹುದ ಎಂಬುದಕ್ಕೆ ನಕಾರಾತ್ಮಕವಾದ ಉತ್ತರ ಇತಿಹಾಸ ನಮಗೆ ಹೇಳುತ್ತದೆ. ಭಾರತದ ಕಮ್ಯೂನಿಸ್ಟರಂತೂ ಎಡಬಿಡಂಗಿ ಸ್ಥಿತಿಯಲ್ಲಿದ್ದಾರೆ. ಇಸ್ಮಾಂ ತಾಲಿಬಾನಿಗಳ ವಿರುದ್ಧ ಮಾತಾಡಲು ಅವರ ತವರಾದ ಚೀನಾ ಅಡ್ಡಬರುತ್ತದೆ. ಮಾನವತಾವಾದದ ಮುಖವಾಡ ಹೊಂದಿರುವ ಅವರಿಗೆ ಚೀನಾದ ರೀತಿ ತಾಲಿಬಾನಿಗಳ ಪರ ಮಾತಾಡಲು ಆಗುತ್ತಿಲ್ಲ. ಅವರ ಮನಸ್ಥಿತಿ "Look for the bigger evil" ಅನ್ನುವ ರೀತಿ ಆಗಿದೆ. ಅದಕ್ಕಾಗಿ ಅವರು ಅಮೇರಿಕಾ ಮಾಡಿದ್ದು ಸರಿನಾ, ಭಾರತದಲ್ಲಿ ಹಿಂದೂಗಳು ದಲಿತರನ್ನು ನಡೆಸಿಕೊಂಡ ರೀತಿ ಸರೀನಾ ಎಂಬಂತಹ ಹುಚ್ಚು ಮಾತುಗಳನ್ನಾಡುತ್ತಿದ್ದಾರೆ. 

ಬಿಗಿಯಾದ ಬುರ್ಖಾ ಹಾಕಿಕೊಂಡು ಗಂಡಸರಿಲ್ಲದೆ ಮನೆಯಿಂದ ಹೊರಬಂದಳು ಎಂದು ಶರಿಯಾ ಕಾನೂನಿಗಿದು ವಿರುದ್ಧವಾಗಿದೆ ಎಂದು ಆಕೆಗೆ ಸಾರ್ವಜನಿಕವಾಗಿ ಛಡಿ ಏಟನ್ನು ಕೊಡಲಾಗಿದೆ. ಆಧುನಿಕ ಜಗತ್ತಿನಲ್ಲಿ ನಡೆಯಬಾರದಂತಹ ಘಟನೆಗಳು ಅಫ್ಘಾನಿಸ್ತಾನದಲ್ಲಿ ನಡೆದಿದೆ. ತಾಲಿಬಾನರ ವಿರುದ್ಧ ಮಾತಾಡುವ ಬದಲು ಅಫ್ಘಾನಿಸ್ತಾನದಲ್ಲಿರುವ ಮುಸಲ್ಮಾನರಿಗೆ ಭಾರತದ ರಕ್ಷಣೆಕೊಡಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡುತ್ತಿದ್ದಾರೆ ಈ ಎರಡು ತಲೆ ಹಾವುಗಳಾದ ಕಮ್ಯೂನಿಸ್ಟರು. ಅಫ್ಘಾನಿಸ್ತಾನದಲ್ಲಿರುವ ಮುಸಲ್ಮಾನರ ಪರವಾಗಿ ಟ್ವಿಟ್ಟರ್ ನಲ್ಲಿ ಮಾತಾಡುತ್ತಿದ್ದಾರೆ ಭಾರತಕ್ಕೆ ಕಮ್ಮಿ ನಿಷ್ಟೆಯನ್ನು ಹೊಂದಿರುವ ಕಮ್ಯುನಿಸ್ಟರು. ಇಂತಹ ಬಹಿರಂಗ ಮತ್ತು ಆಂತರಿಕ ಶತ್ರು ಮತ್ತು ದ್ರೋಹಿಗಳ ವಿರುದ್ಧ ಹೋರಾಡಿ ಭಾರತ ಬಲಾಢ್ಯವಾಗಿ ಬೆಳೆಯಬೇಕಾಗಿದೆ.

1 comment:

  1. ಪ್ರಸ್ತುತ ವಿದ್ಯಮಾನ ಮತ್ತು ಅದರ ಮೂಲದ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆ ನೀಡಿದ್ದೀರ

    ReplyDelete