ಪ್ರಾಚೀನ ಕಾಲದಿಂದಲೂ ಜಗತ್ತಿಗೆ ಅನೇಕ ಭಾರತೀಯರು ಅದ್ಭುತ ಕೊಡುಗೆಗಳನ್ನು ಕೊಟ್ಟಿದ್ದಾರೆ. ಗಣಿತದಲ್ಲಿ ಶೂನ್ಯದ ಕಲ್ಪನೆ ಕೊಟ್ಟಿದ್ದು ಆರ್ಯಭಟ, ಟ್ರಿಗ್ನಾಮಿಟ್ರಿ ಎಂದು ಕರೆಯುವ ತ್ರಿಕೋನಮಿತಿ ಶಾಸ್ತ್ರವನ್ನು ಕೊಟ್ಟಿದ್ದು ಕೇರಳದ ಖಗೋಳಶಾಸ್ತ್ರಜ್ಞ ಮಾಧವ, ಶಸ್ತ್ರಚಿಕಿತ್ಸ ಪಿತಾಮಹ ಎಂದು ಕರೆಯಲ್ಪಡುವ ಸುಶ್ರುತ, ಸೂರ್ಯ ಸಿದ್ಧಾಂತವನ್ನು ಕೊಟ್ಟಿದ್ದು ಬ್ರಹ್ಮರ್ಷಿ ಯಾಜ್ಞವಲ್ಕ್ಯರು, ಪರಮಾಣು ಸಿದ್ಧಾಂತ ಪ್ರಸ್ತುತಪಡಿಸಿದ್ದು ಆಚಾರ್ಯ ಕಣಾದ, ರಸಾಯನ ಶಾಸ್ತ್ರ ಗ್ರಂಥ 'ರಸರತ್ನಾಕರ'ದ ಕರ್ತೃ ಆಚಾರ್ಯ ನಾಗಾರ್ಜುನ. ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಕೊಡುಗೆಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಹೆಸರಿಸಲಾಗಿದೆ. ಹತ್ತೊಂಬತ್ತನೆ ಶತಮಾನದಲ್ಲಿ ಗಣಿತ ಕ್ಷೇತ್ರದಲ್ಲಿ ಭಾರತದ ಕೊಡುಗೆ ಎಂದರೆ ಶ್ರೀನಿವಾಸ ರಾಮಾನುಜನ್.
ರಾಮಾನುಜನ್ ಜನಿಸಿದ್ದು ತಮಿಳುನಾಡಿನ ಈರೋಡಿನಲ್ಲಿ, ಬೆಳದದ್ದು ಕುಂಬಕೋಣಂನಲ್ಲಿ. ಅವರದ್ದು ಬಡತನದ ಕುಟುಂಬ ಮತ್ತು ಅದರೊಟ್ಟಿಗೆ ಬಂದ ಅಸಹಾಯಕತೆ. ಬರೆಯಲು ಹೆಚ್ಚು ಕಾಗದವಿರದ ಕಾರಣ ಒಂದು ಕಾಗದದ ಮೇಲೆ ಬೇರೆ ಬೇರೆ ಬಣ್ಣದ ಲೇಖನಿಗಳಿಂದ ಬರೆಯುವಂತಹ ಪರಿಸ್ಥಿತಿ. ಶಾಲಾ-ಕಾಲೇಜುಗಳಲ್ಲಿ ಓದಬೇಕಾದರೆ ಆಸಕ್ತಿ ಇದ್ದದ್ದು ಗಣಿತದಲ್ಲಿ ಮಾತ್ರ. ಅವರು ಗಣಿತದ ಬಗ್ಗೆ ಅತ್ಯಂತ ಸ್ವಾಮ್ಯಸೂಚಕರಾಗಿದ್ದರು. ಗಣಿತದಲ್ಲಿ ಎಲ್ಲರಿಗಿಂತಲೂ ಹೆಚ್ಚು ಅಂಕ ಪಡೆಯಬೇಕು ಎಂಬ ಯೋಚನೆ ಯಾವಾಗಲೂ ಇತ್ತು. ಪ್ರಾಥಮಿಕ ಶಾಲೆಯಲ್ಲಿ ಒಮ್ಮೆ ಸಹಪಾಠಿಯೊಬ್ಬನಿಗೆ ಗಣಿತದಲ್ಲಿ ತನಗಿಂತ ಹೆಚ್ಚು ಅಂಕ ಬಂದಿತ್ತು ಎಂಬ ಕಾರಣಕ್ಕೆ ಆತನ ಜೊತೆ ಮಾತು ಬಿಟ್ಟವರು ರಾಮಾನುಜನ್. ಗಣಿತದ ಕುರಿತು ಅವರ ಆಸಕ್ತಿ ದಿನೇ ದಿನೇ ಹೆಚ್ಚಾಗುತ್ತಿತ್ತು. ಹೈಸ್ಕೂಲಿನಲ್ಲಿ ಓದಬೇಕಾದರೆ ಕಾಲೇಜು ವಿದ್ಯಾರ್ಥಿಗಳಿಗೆ ಗಣಿತ ಪಾಠ ಮಾಡುತ್ತಿದ್ದರು. ಅಂತರರಾಷ್ಟ್ರೀಯ ಜರ್ನಲ್ಗಳಲ್ಲಿ ಪ್ರಕಟವಾಗುತ್ತಿದ್ದ ಗಣಿತದ ಲೆಕ್ಕಗಳಿಗೆ ಉತ್ತರ ಬರಿಯುತ್ತಿದ್ದರು ರಾಮಾನುಜನ್. ತಮ್ಮ ಹದಿನಾರನೆ ವಯಸ್ಸಿಗೆ ಗಣಿತದ ವಿವಿಧ ಆಯಮಗಳ ಸೂತ್ರಗಳಿದ್ದಂತಹ ಜಾರ್ಜ್ ಕಾರ್ ರವರ ಪುಸ್ತಕವೊಂದು ಸಿಗುತ್ತದೆ. ಆ ಸೂತ್ರಗಳನ್ನು ಬಿಡಿಸುವುದೇ ಅವರ ಕಾಯಕವಾಗುತ್ತದೆ. ಈ ಸೂತ್ರಗಳನ್ನು ಬಿಡಿಸುತ್ತಾ ಹೋದಂತೆಲ್ಲಾ ಅವರಿಗೊಂದಷ್ಟು ಸೂತ್ರಗಳು ಹೊಳೆಯುತ್ತಿತ್ತು. ಅದನ್ನು ತಮ್ಮ ಪುಸ್ತಕದಲ್ಲಿ ಬರೆದುಕೊಳ್ಳುತ್ತಿದ್ದರು. ಯಾವುದೇ ಸಾಕ್ಷ್ಯ ಅಥವಾ ವಿವರಣೆ ಇರದ ಆ ಸೂತ್ರಗಳೇ ಮೂರು ಪುಸ್ತಕದಷ್ಟಾದವು. ರಾಮಾನುಜನ್ನರ ಬದುಕನ್ನು ಬದಲಾಯಿಸಿದ ಪುಸ್ತಕಗಳವು. ಕಾಲೇಜಿನಲ್ಲಂತೂ ಗಣಿತ ಬಿಟ್ಟರೆ ಮಿಕ್ಕ ಎಲ್ಲಾ ವಿಷಯಗಳಲ್ಲಿ ನಪಾಸಾಗಿದ್ದರು. ಬೇರೆ ವಿಚಾರಗಳು ತಿಳಿಯುತ್ತಿರಲಿಲ್ಲ ಎಂದಲ್ಲ. ಆದರೆ, ಅದರ ಕುರಿತು ಆಸಕ್ತಿ ಇರಲಿಲ್ಲ ಅಷ್ಟೇ. ಇದರ ಪರಿಣಾಮ ತನ್ನ ಸ್ವಂತ ಕಾಲಿನ ಮೇಲೆ ನಿಂತುಕೊಳ್ಳುವಂತಹ ಕೆಲಸ ಸಿಗಲಿಲ್ಲ. ಆದರೆ ಇವರ ಗಣಿತ ಜ್ಞಾನವನ್ನು ಗಮನಿಸಿ ನಾರಾಯಣ ಅಯ್ಯರ್ ಎಂಬುವವರು ಮದ್ರಾಸಿನ ಪೋರ್ಟ್ ಟರ್ಸ್ಟಿನಲ್ಲಿ ಸಾಮಾನ್ಯ ಗುಮಾಸ್ತನ ಕೆಲಸ ಕೊಡಿಸುತ್ತಾರೆ. ಅವರ ಇಪ್ಪತ್ತೊಂದನೆ ವಯಸ್ಸಿಗೆ ತಾಯಿಯ ಒತ್ತಾಸೆಯ ಮೇರೆಗೆ ಒಂಬತ್ತು ವರ್ಷದ ಹುಡುಗಿಯೊಂದಿಗೆ ಮದುವೆಯಾಗುತ್ತದೆ.
  | 
| Ramanujan's House | 
ಪೋರ್ಟ್ ಟ್ರಸ್ಟಿನ ಅಧಿಕಾರಿ ರಾಮಾನುಜನ್ ಗಣಿತದ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಅವರ ವಿಚಾರವನ್ನು ಪತ್ರದಲ್ಲಿ ಬರೆದು ಲಂಡನ್ನಿನ ಗಣಿತಜ್ಞರಿಗೆ ಒಂದಷ್ಟು ಸೂತ್ರಗಳೊಂದಿಗೆ ಕಳಿಸಿ ಕೊಡುತ್ತಾರೆ. ಭಾರತದ ವ್ಯಕ್ತಿಯೊಬ್ಬನ ವಿಚಾರದಲ್ಲಿ ನೋಡುವುದಕ್ಕೇನಿದೆ ಎಂದು ಅನೇಕರು ತಾತ್ಸಾರ ಮಾಡುತ್ತಾರೆ. ಆದರೆ, ಹಾರ್ಡಿ ಎಂಬ ಗಣಿತಜ್ಞ ರಾಮಾನುಜನ್ನರ ಕೆಲಸವನ್ನು ಗಮನಿಸಿ ಆಶ್ಚರ್ಯ ಚಕಿತರಾಗುತ್ತಾರೆ. ಅವರ ಈ ಸೂತ್ರಗಳನ್ನು ತನ್ನ ಸ್ನೇಹಿತ ಲಿಟಲ್ ವುಡ್ ಅಲ್ಲದೇ ಇತರ ಅನೇಕ ಗಣಿತಜ್ಞರಿಗೆ ತೋರಿಸುತ್ತಾರೆ. ಎಲ್ಲರಿಂದಲೂ ಮೆಚ್ಚುಗೆಯ ಮಾತು ವ್ಯಕ್ತವಾಗುತ್ತದೆ. ಈ ಕಾರಣದಿಂದಾಗಿ ರಾಮಾನುಜನ್ನರನ್ನು ಲಂಡನ್ಗೆ ಆಹ್ವಾನಿಸುತ್ತಾರೆ. ಜಾತಿಯ ಸಂಕೋಲೆಯಿಂದ ಬಂಧಿತರಾಗಿದ್ದ ಭಾರತೀಯರು ಸಾಗರವನ್ನು ದಾಟಬಾರದು ಎಂದು ನಿಶ್ಚಯಿಸಿದ್ದರು. ಅದರ ಪ್ರಕಾರ ರಾಮಾನುಜನ್ ಹಾರ್ಡಿಯ ಆಹ್ವಾನವನ್ನು ನಿರಾಕರಿಸುತ್ತಾ ತನ್ನ ಬಗ್ಗೆ ಮೆಚ್ಚುಗೆಯ ಮಾತಾಡಿ ಒಂದು ಪತ್ರವನ್ನು ಕೊಡಬಹುದ? ಇದರಿಂದ ತನ್ನ ಕೆಲಸಕ್ಕೆ ಅನುಕೂಲವಾಗುತ್ತದೆ ಎಂದು ಉತ್ತರಿಸುತ್ತಾರೆ. ಇದನ್ನು ನೋಡಿ ಬೇಸರಗೊಂಡ ಹಾರ್ಡಿ ಬ್ರಿಟೀಷ್ ಸರ್ಕಾರದ ಮೂಲಕ ಭಾರತದಲ್ಲಿದ್ದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸ್ಥಾನ ಕೊಡಿಸಿ, ಆತನ ಗಣಿತದ ಕೆಲಸಕ್ಕಾಗಿ ತಿಂಗಳಿಗೆ 75 ರೂಪಾಯಿ ಬರುವಂತಹ ವ್ಯವಸ್ಥೆ ಮಾಡುತ್ತಾರೆ. ನಂತರದ ದಿನಗಳಲ್ಲಿ ನೆವಿಲ್ಲೇ ಎಂಬ ಗಣಿತಜ್ಞನನ್ನು ಭಾರತಕ್ಕೆ ಕಳುಹಿಸಿ ರಾಮಾನುಜನ್ನರನ್ನು ಲಂಡನ್ನಿಗೆ ಕರೆಸಿಕೊಳ್ಳುತ್ತಾರೆ. 1913ರಲ್ಲಿ ರಾಮಾನುಜನ್ ಲಂಡನ್ನಿಗೆ ತೆರಳಿ ಟ್ರಿನಿಟಿ ಕಾಲೇಜಿಗೆ ಸೇರುತ್ತಾರೆ. ಅಲ್ಲಿಂದ ಅವರ ಜೀವನದ ಮತ್ತೊಂದು ಅಧ್ಯಾಯ ಪ್ರಾರಂಭವಾಗುತ್ತದೆ.
  | 
| Mathematician GH Hardy | 
  | 
| Ramanujan (centre) at Trinity College | 
ಲಂಡನ್ನಿಗೆ ಬಂದ ತಕ್ಷಣ ಹಾರ್ಡಿ ರಾಮಾನುಜನ್ ಬರೆದಿಟ್ಟುಕೊಂಡಿದ್ದ ಸೂತ್ರಗಳಿದ್ದ ಪುಸ್ತಕಗಳನ್ನು ತೆಗೆದು ನೋಡುತ್ತಾರೆ. ಅದರಲ್ಲಿದ್ದ ಸೂತ್ರಗಳಾವುವು ಶಾಸ್ತ್ರೀಯ ಪದ್ಧತಿಯಲ್ಲಿರುವುದಿಲ್ಲ ಹಾಗೂ ಕೆಲವು ಸೂತ್ರಗಳು ಸುಮಾರು 50 ವರ್ಷಗಳ ಹಿಂದೆ ಸೃಜನೆಯಾಗಿದ್ದಂತವು. ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ರಾಮಾನುಜನ್ ಶಾಸ್ತ್ರೀಯ ಪದ್ಧತಿಯಲ್ಲಿ ಗಣಿತವನ್ನು ಅಭ್ಯಾಸ ಮಾಡುತ್ತಾ ತಮ್ಮ ಗಣಿತದ ಮೇಲಿನ ಕೆಲಸಗಳನ್ನು ಮುಂದುವರೆಸುತ್ತಾರೆ. ಇವರ ಪುಸ್ತಕವೊಂದನ್ನು ಹಾರ್ಡಿ ಹಂಗೇರಿಯ ಗಣಿತಜ್ಞ ಜಾರ್ಜ್ ಪೋಲಿಯಾಗೆ ಕೊಡುತ್ತಾರೆ. ಆತ ಅದನ್ನು ನೋಡಿ ಈ ಫಾರ್ಮುಲಾಗಳ ಜಾಲದಲ್ಲಿ ಸಿಕ್ಕಿಹಾಕಿಕೊಂಡರೆ ನನ್ನ ಜೀವಮಾನದಲ್ಲಿ ಹೊರಬರಲು ಸಾಧ್ಯವಿಲ್ಲ ಎಂಬಂತಹ ಅದ್ಭುತ ಮಾತುಗಳನ್ನಾಡುತ್ತಾ ಪುಸ್ತಕವನ್ನು ಹಿಂದಿರುಗಿಸುತ್ತಾರೆ. ಮಹಲನೋಬಿಸ್ ಒಮ್ಮೆ ಭೇಟಿಯಾಗಿ ಜರ್ನಲ್ ಒಂದರಲ್ಲಿ ಕೊಟ್ಟಿದ್ದಂತಹ ಸಮಸ್ಯೆಯನ್ನು ಹೇಳುತ್ತಾರೆ. ತಕ್ಷಣಕ್ಕೆ ರಾಮಾನುಜನ್ ಆ ಸಮಸ್ಯೆಗೆ ಪರಿಹಾರವಾಗಿ ಒಂದು ಸರಣಿಯನ್ನು ಹೇಳಿ, ಈ ಸರಣಿ ಅನೇಕ ಸಮಸ್ಯೆಗಳಿಗೆ ಉತ್ತರ ಕೊಡುತ್ತದೆ ಎಂದು ಹೇಳಿದ್ದರು. ರಾಮಾನುಜನ್ನರಿಗೆ ಸಮಸ್ಯೆಗಳು ನೋಡುತ್ತಿದ್ದಂತೆ ಅದಕ್ಕೆ ಉತ್ತರ ಅವರಿಗೆ ಗೋಚರವಾಗುತ್ತಿತ್ತು. ಅವರನ್ನು ಇನ್ಟ್ಯೂಟೀವ್ ಮ್ಯಾಥೆಮಾಟೀಷಿಯನ್ ಅನ್ನುತ್ತಿದ್ದರು. ಅವರು ಗಣಿತವನ್ನು ಮಾಡುತ್ತಿದ್ದ ರೀತಿಯೇ ಬೇರೆ, ಶಾಸ್ತ್ರೀಯ ಪದ್ಧತಿ ಅಲ್ಲವೇ ಅಲ್ಲ. 1916ನೇ ಇಸವಿಯಲ್ಲಿ ರಾಮಾನುಜನ್ ಗಣಿತದ ಮೇಲೆ ಬರೆದ ಮಹಾಪ್ರಭಂದಕ್ಕೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಬಿ.ಏ. ಪದವಿಯನ್ನು ನೀಡುತ್ತದೆ. ಇದು ಬಹುಶಃ ರಾಮಾನುಜನ್ ಬದುಕಲ್ಲಿ ಕಂಡಂತಹ ಮೊದಲ ಜಯ.
  | 
| Ramanujan's Three Notebooks | 
ನಂತರದ ದಿನಗಳಲ್ಲಿ ಅವರ ಆರೋಗ್ಯ ಹಾಳಾಗಲು ಪ್ರಾರಂಭವಾಗುತ್ತದೆ. ಕಠಿಣವಾದ ಸಸ್ಯಹಾರಿಯಾಗಿದ್ದ ಅವರು ಕೆಲಸ ಮಾಡಬೇಕಾದರೆ ತರಕಾರಿಯನ್ನು ಟಿನ್ಗಳಲ್ಲಿ ಇಟ್ಟು ಬೇಯಿಸಿ ತಿನ್ನುತ್ತಿದ್ದರು. ಈ ಕಾರಣದಿಂದಾಗಿ ಅವರ ಆರೋಗ್ಯ ಹಾಳಾಗಿರಬಹುದು ಎಂದು ವೈದ್ಯರ ಅಭಿಪ್ರಾಯ. ಅದೊಂದು ದಿನ ಹಾರ್ಡಿ ರಾಮಾನುಜನ್ನರ ಮನೆಗೆ ಬಂದು 'ಇಂದು ಗಣಿತಜ್ಞನೊಬ್ಬನಿಗೆ ಬೇಸರದ ದಿನ. ಇಂದು ಟ್ಯಾಕ್ಸಿಯೊಂದರಲ್ಲಿ ಬಂದೆ, ಆ ಗಾಡಿಯ ಸಂಖ್ಯೆ 1729 ಆಗಿತ್ತು ಆದರೆ, ಈ ಸಂಖ್ಯೆಯಲ್ಲಿ ಏನು ವಿಶೇಷತೆ ನನಗೆ ಕಾಣಿಸಲಿಲ್ಲ' ಎಂದು ಹೇಳುತ್ತಾರೆ. ಬಹುಶಃ ಒಂದು ನಿಮಿಷ ಆಗಿರಬಹುದು ನಂತರ ರಾಮಾನುಜನ್ 'ಈ ಸಂಖ್ಯೆ ಕೂಡ ವಿಶೇಷವಾದದ್ದೆ. ಎರಡು ವಿಭಿನ್ನ ಜೋಡಿ ಸಂಖ್ಯೆಗಳ ಘನಗಳನ್ನು ಕೂಡಿಸಿದಾಗ ವ್ಯಕ್ತವಾಗುವ ಅತ್ಯಂತ ಕಿರಿಯ ಸಂಖ್ಯೆ 1729!' ಎಂದು ಸಹಜವಾಗಿ ವಿವರಿಸುತ್ತಾರೆ. ಇದನ್ನು ಕೇಳಿದ ಹಾರ್ಡಿ ಗಾಬರಿಯಾಗಿ 'ನೀನೊಬ್ಬ ಅಸಾಧಾರಣವಾದ ಗಣಿತಜ್ಞ' ಎಂದು ಹೊಗಳುತ್ತಾರೆ. ಹಾರ್ಡಿಯ ಕಾರಣದಿಂದಾಗಿ ತಮ್ಮ 29ನೇ ವಯಸ್ಸಿಗೆ ರಾಮಾನುಜನ್ನರು ರಾಯಲ್ ಸೊಸೈಟಿಯ ಸದಸ್ಯರಾಗುತ್ತಾರೆ. ಇದು ಆವರ ಜೀವಮಾನದ ಬಹುದೊಡ್ಡ ಗೌರವ ಮತ್ತು ಸಾಧನೆ ಎಂದು ಭಾವಿಸಿದ್ದರು. ಆರೋಗ್ಯ ಹದಗೆಟ್ಟಿದ್ದ ಕಾರಣ ಅವರು ಭಾರತಕ್ಕೆ ಹಿಂತಿರುಗುತ್ತಾರೆ. ತನ್ನ ಮನೆಯವರೊಂದಿಗೆ ಕೆಲ ದಿನಗಳು ಕಳೆಯುವ ಅವಕಾಶವಾಗುತ್ತದೆ. ಅನಾರೋಗ್ಯ ಮತ್ತು ಮನೆಯಲ್ಲಿ ನೆಮ್ಮದಿ ಇಲ್ಲದ ಕಾರಣ ತಮ್ಮ 32ನೇ ವಯಸ್ಸಿಗೆ ತೀರಿಕೊಳ್ಳುತ್ತಾರೆ.
ರಾಮಾನುಜನ್ ಸ್ವಭಾವತಃ ತುಸು ಮುಂಗೋಪಿ ಮತ್ತು ವ್ಯಗ್ರವಾಗಿ ನಡೆದುಕೊಳ್ಳುತ್ತಿದ್ದರು. ಬಹುಶಃ ತನ್ನನ್ನು ಯಾರು ಅರ್ಥ ಮಾಡಿಕೊಳ್ಳದಿದ್ದಾಗ, ತನಗೆ ಆಸಕ್ತಿ ಮತ್ತು ಸಾಮರ್ಥ್ಯವಿರುವ ಕ್ಷೇತ್ರದಲ್ಲಿ ಸಾಧಿಸಲು ಸಾಧ್ಯವಾಗದಿದ್ದಾಗ ಹತಾಶೆಯ ಭಾವಕ್ಕೆ ಒಳಗಾಗಿ ಮುಂಗೋಪಿಯಾಗೋದು ಸಹಜ ಎಂದು ತೋರುತ್ತದೆ. ಇದೇ ರಾಮಾನುಜರನ್ನು ಕಾಡಿದ್ದು. ತನ್ನ ಗಣಿತದ ಸಾಮರ್ಥ್ಯವನ್ನು ಮನೆಯವರಾರು ಅರ್ಥೈಸಿಕೊಳ್ಳಲಿಲ್ಲ, ಸುತ್ತಾಮುತ್ತಲಿನ ಜನರೂ ಅರ್ಥ ಮಾಡಿಕೊಳ್ಳಲಿಲ್ಲ, ಕಾಲೇಜಿನಲ್ಲಿ ನಪಾಸಾಗಿದ್ದರು, ತಮ್ಮ ಯವ್ವನದ ಕಾಲದಲ್ಲಿ ಸರಿಯಾದ ಕೆಲಸವಿರಲಿಲ್ಲ, ಮನೆಯಲ್ಲಿ ಅತ್ತೆ ಸೊಸೆಯ ಜಗಳದ ಕಾರಣ ನೆಮ್ಮದಿ ಸಿಗಲಿಲ್ಲ, ವಿದೇಶದಲ್ಲಿ ಒಂಟಿತನ ಕಾಡಿತು. ಈ ಕಾರಣದಿಂದಾಗಿ ಅವರ ಸ್ವಭಾವ ವ್ಯಗ್ರವಾಗಿತ್ತು ಅನ್ನಬಹುದು. ಇಷ್ಟೆಲ್ಲಾ ಇದ್ದರೂ ಅವರು ತೀರಿಕೊಳ್ಳುವ ಕೆಲವು ತಿಂಗಳುಗಳ ಮುನ್ನ 'ಮಾಕ್ ಥೀಟಾ' ಕುರಿತು 650 ಸೂತ್ರಗಳನ್ನು ಹಾಸಿಗೆಯ ಮೇಲೆ ಮಲಗಿಕೊಂಡೆ ಬರೆಯುತ್ತಾರೆ. ಆ ಸೂತ್ರಗಳನ್ನು ಗಣಿತ ಲೋಕದಲ್ಲಿನ ಶ್ರೇಷ್ಠ ಕೊಡುಗೆ ಮತ್ತು ಅದನ್ನು ಬಿಡಿಸಲು ಜಗತ್ತು 60-70 ವರ್ಷಗಳಾದ ಮೇಲೂ ಕಷ್ಟ ಪಡುತ್ತಿತ್ತು. ಅನಂತವನ್ನು ಅರಿತಿದ್ದ ಅದ್ಭುತ ಚೇತನ ರಾಮಾನುಜನ್. ಡಿಸೆಂಬರ್ 22 ಅವರ ಜನ್ಮದಿನ. ಭಾರತ ಅವರ ಜನ್ಮದಿನವನ್ನು 'ರಾಷ್ಟ್ರೀಯ ಗಣಿತ ದಿನ' ಎಂದು ಆಚರಿಸಿ ಗೌರವಿಸುತ್ತದೆ.
***********************************
Picture Source:
Color Library Blogspot 
Srinivas Ramanujan's Biography:
The Man Who Knew Infinity - Robert Kanigel
  | 
| The Biography |