December 1, 2021

ಮತ್ತೊಂದು ಯುದ್ಧಕ್ಕೆ ಭಾರತ ಸಜ್ಜಾಗುತ್ತಿದೆಯಾ?

ಯುದ್ಧವೆಂಬುದು ರಣಾಂಗಣದಲ್ಲಿ ಶಸ್ತ್ರಾಸ್ತಗಳೊಂದಿಗೆ ಮಾಡುವ ಕಾಲ ಈಗ ದೂರವಾಗಿದೆ. ವಿಜ್ಞಾನ ಮುಂದುವರೆದಂತೆಲ್ಲಾ ಯುದ್ಧದ ಸ್ವರೂಪವೂ ಬದಲಾಗಿದೆ. ಸೈನಿಕರು ಮುಖಾಮುಖಿಯಾಗಿ ಪರಸ್ಪರ ಆಯುಧಗಳಿಂದ ಸೆಣಸಾಡುತ್ತಿದ್ದ ಕಾಲವೊಂದಿತ್ತು. ನಂತರ ವಿವಿಧ ಬಗೆಯ ತುಪಾಕಿಗಳು, ಬಂದೂಕುಗಳು ಉಪಯೋಗಕ್ಕೆ ಬಂದವು. ವಿಶ್ವಯುದ್ಧದ ಶತಮಾನದಲ್ಲಿ ಯುದ್ಧವಿಮಾನಗಳು, ಕ್ಷಿಪಣಿಗಳು ಹಾಗೂ ಡ್ರೋನ್ಗಳ ಬಳಕೆ ಶುರುವಾಯಿತು. ಪ್ರತ್ಯಕ್ಷ ಯುದ್ಧಕ್ಕೆ ಮುನ್ನ ಶತ್ರು ರಾಷ್ಟ್ರದ ಮಾನಸಿಕ ಸ್ಥೈರ್ಯವನ್ನು ಕುಸಿಯುವಂತೆ ಮಾಡುವುದು ಯುದ್ಧದ ಒಂದು ತಂತ್ರವೇ. ಇದು ಈ ಕಾಲದ ಯುದ್ಧ ತಂತ್ರ. ಶತ್ರುರಾಷ್ಟ್ರಗಳು ತಮ್ಮ ಸೈನಿಕರ ಮೂಲಕ ನಮ್ಮ ಗಡಿಯಲ್ಲೋ ಅಥವಾ ಗಡಿಯನ್ನು ದಾಟಿ ನಮ್ಮನ್ನು ಎದುರಿಸುವುದಿಲ್ಲ ಬದಲಾಗಿ, ನಮ್ಮ ದೇಶದ ಕೆಲವು ಜನರನ್ನು ನಮ್ಮ ವಿರುದ್ಧವೇ ಆಯುಧಗಳನ್ನಾಗಿ ಮಾಡಿಕೊಳ್ಳುತ್ತಾರೆ. ಅವರ ಮಾತು ಕೇಳುವ ಈ ಗುಂಪು ನಮ್ಮ ನಡುವೆ ಅಶಾಂತಿ, ಅವಿಶ್ವಾಸ, ಅಂತಃಕಲಹಗಳನ್ನು ಸೃಷ್ಟಿಸಿ ದೇಶವನ್ನು ಬಲಹೀನ ಮಾಡುವುದು. ಭಾರತದಲ್ಲಿರುವ ಕಮ್ಯೂನಿಸ್ಟರು, ಮವೋವಾದಿಗಳು ಮಾಡುವ ಕೆಲಸವನ್ನು ಗಮನಿಸಿ. ಕೇಂದ್ರದಲ್ಲಿ ಸ್ಪಷ್ಟ ಬಹುಮತವಿರುವ ಸರ್ಕಾರವಿದ್ದರೂ ಕೃಷಿಕಾಯ್ದೆಯನ್ನು ಹಿಂಪಡೆಯಬೇಕಾಯಿತು. ಗಲ್ವಾನ್ ಕಣಿವೆಯಲ್ಲಿ ನಡೆದದ್ದು ಪ್ರತ್ಯಕ್ಷ ಕದನವಾದರೆ, ತನ್ನ ಮೇಲೆ ಸೈಬರ್ ಅಟ್ಯಾಕ್ ಆಗಿದೆ ಎಂದು ಹೇಳಿಕೊಂಡ ಚೀನಾ ಮಾತು ಸತ್ಯವೇ ಆದರೆ ಅದು ಪರೋಕ್ಷವಾಗಿ ನಡೆಯುವ ಕದನ.

ಕಳೆದ ವರ್ಷ ಸಂಸತ್ತಿನಲ್ಲಿ ಕೃಷಿಕಾಯ್ದೆ ಬಿಲ್ ಪಾಸಾಯಿತು. ಅಧಿವೇಶನದ ಮುನ್ನ ಕೋವಿಡ್ ಪರಿಹಾರಾರ್ಥ 20 ಲಕ್ಷ ಕೋಟಿ ಘೋಷಿಸಿದಾಗಲೇ ಕೃಷಿ ಕಾಯ್ದೆಯ ಬಗ್ಗೆ ಪ್ರಧಾನಿ ಹೇಳಿದ್ದರು. ನೆನಪಿಡಿ, ಕಿಸಾನ್ ಯೂನಿಯನ್ ನಾಯಕ ರಾಕೇಶ್ ತಿಕಾಯತ್ ಈ ಕಾಯ್ದೆಯನ್ನು ಕೂಡ ಸ್ವಾಗತಿಸಿದ್ದ. ದೆಹಲಿಯ ಗಡಿಭಾಗದಲ್ಲಿ ಪ್ರತಿಭಟನೆ ಶುರುವಾದ ನಂತರ ಮಾತು ಕಥೆಗಾಗಲಿ, ಕಾಯ್ದೆಯಲ್ಲಿನ ತಿದ್ದುಪಡಿಗಾಗಿ ಸುಪ್ರೀಂ ಕೋರ್ಟ್ ಸಮಿತಿ ರಚಿಸುವ ಪ್ರಸ್ತಾವವನ್ನು ತಿರಸ್ಕರಿಸಿದರು. ಜನವರಿ 26 ರಂದು ಇಡೀ ದೇಶವೇ ತಲೆತಗ್ಗಿಸುವಂತಹ ಪ್ರತಿಭಟನೆ ಮಾಡಿದರು. ಇದಕ್ಕೆ ಕಾಂಗ್ರೇಸ್ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಟೂಲ್ಕಿಟ್ ಮೂಲಕ ಬೆಂಬಲ ವ್ಯಕ್ತವಾಯಿತು. ಕಾಯ್ದೆಯ ಬಿಲ್ ಪಾಸಾದ ಒಂದು ವರ್ಷವಾದರೂ ಪ್ರತಿಭಟನೆ ನಿಲ್ಲಲಿಲ್ಲ. ಭಾರತದಲ್ಲಿ ಅರಾಜಕತೆ ಸೃಷ್ಟಿಸುವ ಮುನ್ನುಡಿಯಂತಿದ್ದ ಈ ಪ್ರತಿಭಟನೆಯನ್ನು ನಿಲ್ಲಿಸಲು ಪ್ರಧಾನಿ ಮೋದಿ ಈ ಕಾಯ್ದೆಯನ್ನು ಹಿಂಪಡೆಯುವ ನಿರ್ಧಾರ ಮಾಡಿದರು. ಅವರ ಭಾಷಣದಲ್ಲಿ 'ರೈತರಿಗಾಗಿ ಕಾಯ್ದೆಯನ್ನು ತಂದೆ. ದೇಶಕ್ಕಾಗಿ ಈಗ ಹಿಂಪಡೆಯುತ್ತಿದ್ದೇನೆ. ದೇಶದ ಜನರು ನನ್ನನ್ನು ಕ್ಷಮಿಸಬೇಕು' ಎಂದರು. ದೇಶಕ್ಕಾಗಿ ಕಾಯ್ದೆಯನ್ನು ಹಿಂಪಡೆಯುತ್ತಿದ್ದೇನೆ ಎಂಬುದಷ್ಟನ್ನೇ ಮುಂದಿಟ್ಟು ಮೋದಿಯನ್ನು ವಿರೋಧ ಮಾಡಲು ಕಮ್ಯೂನಿಸ್ಟರು ಮರೆಯಲಿಲ್ಲ.

ನಮ್ಮ ನಡುವಿನ ರಾಜಕೀಯದ ನಾಯಕರು ಸಹ ಈ ರೀತಿಯ ಸ್ಥಿತಿಗೆ ಕಾರಣವಾಗಿದ್ದಾರೆ. ಕೃಷಿಕಾಯ್ದೆ ಜಾರಿಗೆ ತಂದ ದಿನದಿಂದ ಈವರೆಗೂ ಭಾಜಾಪದ ಯಾವ ನಾಯಕರೂ ಜನರಿಗೆ ಮತ್ತು ರೈತರಿಗೆ ಈ ಕಾಯ್ದೆಯ ಕುರಿತು ತಿಳಿಸಿಕೊಡಲಿಲ್ಲ. ಪ್ರಾದೇಶಿಕ ಭಾಷೆಗಳಲ್ಲಿ ಕಾಯ್ದೆಯ ಬಗೆಗೆ ಕರಪತ್ರಗಳಾಗಲಿ, ಪುಸ್ತಕಗಳಾಗಲಿ ಹೊರತರಲಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳು ಹೊರಬರಲಿಲ್ಲ. ಟೀವಿ ಡಿಬೇಟ್ಗಳನ್ನು ಗಮನಿಸಿದರೆ ಸ್ಥಳಿಯ ನಾಯಕರಿಗೆ ಕಾಯ್ದೆ ಬಗೆಗಿನ ಸ್ಪಷ್ಟತೆ ಇದ್ದದ್ದೇ ಅನುಮಾನ. ಇದಕ್ಕೆ ತದ್ವಿರುದ್ಧ ವಿರೋಧ ಪಕ್ಷ ಮತ್ತು ಕಮ್ಯೂನಿಸ್ಟರ ನಡೆ. ಮೊದಲಿಂದಲೂ ಕಾಯ್ದೆ ಅರ್ಥವಾಗದಿದ್ದರೂ ಅದರ ವಿರುದ್ಧ ಮಾತುಗಳು, ಲೇಖನಗಳು, ಜಾಲತಾಣಗಳಲ್ಲಿನ ಪೋಸ್ಟ್ಗಳು ಸದಾ ಇರುವಂತೆ ನೋಡಿಕೊಂಡರು. ಕೇಂದ್ರ ಸರ್ಕಾರ ನವೆಂಬರ್ 29 ರಂದು ಅಧಿಕೃತವಾಗಿ ಕಾಯ್ದೆಯನ್ನು ಹಿಂಪಡೆಯಿತು. ಇಷ್ಟಾದರೂ ಖಾಲಿಸ್ತಾನಿ ಪ್ರೇರೇಪಿತ ಸೋಕಾಲ್ಡ್ ನಾಯಕರು ಪ್ರತಿಭಟನೆ ಮುಂದುವರೆಸುವ ಸೂಚನೆ ಕೊಟ್ಟಿದ್ದಾರೆ. ಡಿಬೇಟ್ ಮಾಡದೇ ಕಾಯ್ದೆಯನ್ನು ಹಿಂಪಡೆದಿದ್ದಾರೆ ಎಂದು ವಿರೋಧ ಪಕ್ಷದವರು ಆರೋಪ ಮಾಡುತ್ತಿದ್ದಾರೆ. ಏನಾದರೂ ಸರಿ ಮೋದಿಯನ್ನು ವಿರೋಧ ಮಾಡಬೇಕು, ಅರಾಜಕತೆ ಸೃಷ್ಟಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದಷ್ಟೇ ಇವರ ಉದ್ದೇಶ.

ಗಡಿಭಾಗದಲ್ಲಿ ನಮ್ಮ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಯುತ್ತಿದ್ದರೂ ಭಾರತದ ಪತ್ರಿಕೆಗಳಲ್ಲಿ ತಮ್ಮ ಪರವಾಗಿನ ಸಕಾರಾತ್ಮಕ ಸುದ್ಧಿಯನ್ನು ಪ್ರಕಟ ಮಾಡಿಸುವಲ್ಲಿ ಚೀನಾ ಯಶಸ್ವಿಯಾಗಿದೆ. ಭಾರತದ ಪತ್ರಿಕೋದ್ಯಮದಲ್ಲಿ ಮತ್ತು ವಾರ್ತಾವಾಹಿನಿಗಳ ಮೇಲೆ ನೀತಿಸಂಹಿತೆ ಮತ್ತು ಸ್ವಯಂ-ನಿಯಂತ್ರಣ ಕಾರ್ಯವಿಧಾನಗಳ ಸ್ಪಷ್ಟತೆಯ ಕೊರತೆ ಎದ್ದು ಕಾಣುತ್ತಿದೆ. 'ದಿ ಹಿಂದೂ' ಪತ್ರಿಕೆ ಕಳೆದ ವರ್ಷ ಪುಟಗಟ್ಟಲೆ ಚೀನಾ ಪರವಾದ ಜಾಹಿರಾತನ್ನು ಪ್ರಕಟಿಸಿತ್ತು. ನವೆಂಬರ್ 26 ರಂದು 'ದಿ ಇಂಡಿಯನ್ ಎಕ್ಸ್‌ಪ್ರೆಸ್‌' ನಾಲ್ಕು ಪುಟಗಳಗಳಲ್ಲಿ ಚೀನಾದ ಮಾಧ್ಯಮ ಸಂಬಂಧಿತ ವಿಚಾರವನ್ನು ಪ್ರಕಟಿಸಿದೆ.

chinese ad in 'The Indian Express'

ಚಾರ್‌ಧಾಮ್‌ ರಾಷ್ಟ್ರೀಯ ಹೆದ್ದಾರಿ ಯೋಜನೆಯು ಉತ್ತರಾಖ೦ಡ್‌ ರಾಜ್ಯದ ನಾಲ್ಕು ಪವಿತ್ರ ಸ್ಥಳಗಳಾದ ಬದರಿನಾಥ, ಕೇದಾರನಾಥ, ಗ೦ಗೋತ್ರಿ ಮತ್ತು ಯಮುನೋತ್ರಿಯನ್ನು ಸ೦ಪರ್ಕಿಸುವ ಎಕ್ಸ್‌ಪ್ರೆಸ್‌ ರಾಷ್ಟ್ರೀಯ ಹೆದ್ದಾರಿಯಾಗಿದೆ. ಚೀನಾದ ಗಡಿಯ ತನಕ ಅಗಲವಾದ ರಸ್ತೆಯ ಅಗತ್ಯವಿದೆ ಎ೦ದು ಸರ್ಕಾರ ಹೇಳುತ್ತದೆ ಮತ್ತದು ವಾಸ್ತವ ಕೂಡ. ಆದರೆ, ಈ ಯೋಜನೆಯನ್ನು ವಿರೋಧಿಸಿ ದಿ ಹಿ೦ದೂ, ದಿ ವೈರ್‌, ಎನ್‌ಡಿಟೀವಿ ಮು೦ತಾದ ಎಡಚರ ಪತ್ರಿಕೆಗಳು ಲೇಖನಗಳನ್ನು ಕಳೆದ ವರ್ಷದಿ೦ದ ಬರೆಯುತ್ತಲೇ ಇದೆ. ಹಣಕ್ಕಾಗಿ ಚೀನಾ ಪರವಾದ ಜಾಹಿರಾತನ್ನು ಪ್ರಕಟಿಸುವ ಪತ್ರಿಕೆಗಳು ಭಾರತದ ಪರವಾದ ಯೋಜನೆಯ ವಿರುದ್ಧ ಬರೆಯುವುದರಲ್ಲಿ ಅಚ್ಚರಿ ಇಲ್ಲ. ಡೀಮಾನಿಟೈಸೇಷನ್ ನಂತರ ನಕ್ಸಲರ ಆಟಾಟೋಪ ಅಡಗಿತ್ತು ಆದರೆ, ಈಗ ಮತ್ತೆ ಅದು ಶುರುವಾದಂತಿದೆ. ನವೆಂಬರಲ್ಲಿ ನಕ್ಸಲರು ಮನೆಯೊಂದನ್ನು ಸ್ಫೋಟಿಸಿ ನಾಲ್ಕು ಜನರನ್ನು ಕೊಂದಿದ್ದಾರೆ. ಇದೇ ವರ್ಷ ಏಪ್ರಿಲ್ ಅಲ್ಲಿ ಛತ್ತೀಸ್ಗಢದಲ್ಲಿ 22 ಭದ್ರತಾ ಸಿಬ್ಬಂದಿಗಳನ್ನು ನಕ್ಸಲರನ್ನು ಕೊಂದರು. ಇದಕ್ಕೆ ಪ್ರತಿದಾಳಿಯಾಗಿ ಗಡ್ಚಿರೋಲಿಯಲ್ಲಿ ಪೋಲೀಸರು ಎನ್‌ಕೌಂಟರ್‌ನಲ್ಲಿ 26 ನಕ್ಸಲರನ್ನು ಕೊಂದು ಬಿಸಾಡಿದ್ದಾರೆ.

Indian newspapers writing against The Char Dham Road Project

ಇದೆಲ್ಲಾ ಆಂತರಿಕ ವಿಚಾರವಾದರೆ ಜಾಗತೀಕ ಮಟ್ಟದಲ್ಲಿ ಚೀನಾ ತನ್ನದೇ ಆದ ತಯಾರಿ ಮಾಡಿಕೊಳ್ಳುತ್ತಿದೆ. ಒಂದೆಡೆ ತೈವಾನ್ ಮತ್ತೊಂದು ಕಡೆ ಭಾರತ ವಿರುದ್ಧ ಯುದ್ಧದ ತಯಾರಿಯಲ್ಲಿದೆ. ಮಧ್ಯ ಮತ್ತು ಪಶ್ಚಿಮದ ಟಿಬೆಟ್ ಭಾಗದಲ್ಲಿ 10 ಏರ್ಸ್ಟ್ರಿಪ್ಗಳನ್ನು ನಿರ್ಮಿಸಿದೆ ಮತ್ತು 20 ಸಾವಿರ ಟಿಬೆಟ್ಟಿಯನ್ನರಿಗೆ ಸೈನಿಕ ತರಬೇತಿ ಕೊಟ್ಟು ಸೈನ್ಯಕ್ಕೆ ಸೇರಿಸಿಕೊಂಡಿದೆ. ಪಾಕೀಸ್ತಾನಕ್ಕೆ ಸಾಲ ಕೊಟ್ಟಿದ್ದರೂ ಯುದ್ಧನೌಕೆಯನ್ನು ಕೊಟ್ಟು ಅವರ ಮೂಲಕ ಭಾರತವನ್ನು ಕಟ್ಟಿಹಾಕುವ ಹಳೆಯ ಚಾಳಿಯನ್ನು ಮುಂದುವರೆಸುತ್ತಿದೆ. ಒಂದೆಡೆ ಚೀನಾ ಮತ್ತೊಂದು ಕಡೆ ಪಾಕೀಸ್ತಾನ ದೇಶಕ್ಕೆ ಶತ್ರುವಾಗಿ ನಿಂತಿದೆ. ಮಯನ್ಮಾರ್ ಮೂಲಕ ನಕ್ಸಲರು ನುಸುಳುತ್ತಿದ್ದಾರೆ. ಇದರ ಜೊತೆಗೆ ಅಫ್ಘಾನಿಸ್ತಾನವನ್ನು ಮರೆಯುವಂತಿಲ್ಲ. ತಾಲಿಬಾನ್ ಭಯೋತ್ಪಾದಕ ಸಂಘಟನೆ ಎಂಬುದಂತು ಸತ್ಯ. ಈಗ ಅಲ್ಲಿ ಶುರುವಾಗಿರುವುದು ಮಾದಕವಸ್ತುವಿನ ಭಯೋತ್ಪಾದನೆ. ಅಫ್ಘಾನಿಸ್ತಾನ ತನ್ನ ಮೆಥಾಂಫೆಟಮೈನ್ ಉತ್ಪಾದನೆಯನ್ನು ತೀವ್ರವಾಗಿ ಹೆಚ್ಚುಮಾಡಿದೆ. ವಾಸ್ತವವಾಗಿ ಮೆಥ್ ಹೆರಾಯಿನ್ ಗಿಂತ ಹೆಚ್ಚಿನ ಲಾಭ ನೀಡುತ್ತದೆ. ತಾಲಿಬಾನ್ ಮಾದಕವಸ್ತುಗಳಿಂದ ಬರುವಂತಹ ಆದಾಯವನ್ನು ಸಾಧ್ಯವಾದಷ್ಟು ವೃದ್ಧಿಸಿಕೊಳ್ಳಲು ಆಶಿಸುತ್ತಿದೆ. ಅಫ್ಘಾನಿಸ್ತಾನದ ಸ್ವಾಧೀನದ ನಂತರ, ಅಫೀಮಿನ ಬೆಲೆ 3 ಪಟ್ಟು ಹೆಚ್ಚಿದೆ. ಅಫೀಮು ಕೃಷಿಯಡಿಯಲ್ಲಿ ಜಾಗತಿಕ ವಿಸ್ತೀರ್ಣದಲ್ಲಿ ಅಫ್ಘಾನಿಸ್ತಾನವು 85% ರಷ್ಟು ಭಾಗವನ್ನು ಹೊಂದಿದೆ. ತಾಲಿಬಾನ್ ವಿಶ್ವದ ಅತಿದೊಡ್ಡ ಮಾದಕವಸ್ತುವಿನ ಒಕ್ಕೂಟ ಆಗಿದೆ! ಈ ಮಾದಕ ವಸ್ತುಗಳನ್ನು ಸಾಗಿಸಲು ತಾಲಿಬಾನ್ ಅನೇಕ ಕಳ್ಳಸಾಗಣೆ ಮಾರ್ಗಗಳನ್ನು ಕಂಡುಕೊಂಡಿದೆ. ತಾಲಿಬಾನ್ ಅಲ್ಲದೆ ಬೋಕೋ ಹರಾಮ್, ಅಲ್-ಶಬಾಬ್ ಮತ್ತು ಅಲ್-ಖೈದಾ ಕೂಡ ಈ ಕಳ್ಳಸಾಗಣಿಕೆಯಲ್ಲಿ ತೊಡಗಿಸಿಕೊಂಡಿದೆ. ಪಶ್ಚಿಮ ಯೂರೋಪ್, ರಷ್ಯಾ ಮತ್ತು ಭಾರತಕ್ಕೆ ಮಾದಕವಸ್ತುವನ್ನು ತಲುಪಿಸಲು ತಯಾರಿ ಮಾಡಿಕೊಂಡಿದೆ, ತನ್ಮೂಲಕ ಭಾರತವನ್ನು ಆಂತರಿಕವಾಗಿ ಬಲಹೀನ ಮಾಡುವ ತಂತ್ರ ಇದಾಗಿದೆ.

ದೇಶದ ಹೊರಗೆ ಮತ್ತು ಒಳಗೆ ಇಷ್ಟೆಲ್ಲಾ ನಡೆಯುತ್ತಿದ್ದು, ಭಾರತ ಅದಕ್ಕೆ ತಕ್ಕಂತೆ ತಯಾರಿ ಮಾಡಿಕೊಳ್ಳುತ್ತಿದೆ. ಕಳೆದ ಎರಡು ತಿಂಗಳಲ್ಲಿ ರಕ್ಷಣಾ ಇಲಾಖೆಯಲ್ಲಿ ನಡೆದಿರುವ ಬೆಳವಣಿಗೆ ಗಮನಾರ್ಹವಾದದ್ದು. ಕಳೆದ ವಾರ ಮೋದಿ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದಾಗ ಸಶಸ್ತ್ರ ಪಡೆಗಳ ಸೇವಾ ಮುಖ್ಯಸ್ಥರಿಗೆ ದೇಶೀಯವಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಉಪಕರಣಗಳನ್ನು ಹಸ್ತಾಂತರಿಸಿದರು. ಹೆ‍ಚ್ಏಎಲ್ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಲೈಟ್ ಕಾಂಬಾಟ್ ಹೆಲಿಕಾಪ್ಟರ್ ಅನ್ನು ವಾಯುಪಡೆಗೆ, ಭಾರತೀಯ ಸ್ಟಾರ್ಟಪ್ಗಳು ವಿನ್ಯಾಸಗೊಳಿಸಿದ ಡ್ರೋನ್ಗಳನ್ನು ಆರ್ಮಿ ಮುಖ್ಯಸ್ಥರಿಗೆ, ಡಿ.ಅರ್.ಡಿ.ಓ ವಿನ್ಯಾಸ ಮಾಡಿದ, ಬಿಇಎಲ್ ನಿರ್ಮಿಸಿದ ಆತ್ಯಾಧುನಿಕ ಎಲೆಕ್ಟ್ರಾನಿಕ್ ವಾರ್ಫೇರ್ ಸೂಟ್ ಅನ್ನು ನೌಕಾಪಡೆಯ ಮುಖ್ಯಸ್ಥರಿಗೆ ಹಸ್ತಾಂತರಿಸಿದ್ದಾರೆ. ರಕ್ಷಣಾ ವಿಭಾಗದಲ್ಲಿ ಭಾರತ ಆತ್ಮನಿರ್ಭರವಾಗುವುದು ಆರ್ಥಿಕ ಸದೃಢತೆಯ ಸಂಕೇತ. ಕಳೆದ ತಿಂಗಳು ಅಗ್ನಿ-5 ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡುವ ಮೂಲಕ ಚೀನಾಕ್ಕೆ ಎಚ್ಚರಿಕೆಯ ಸಂದೇಶ ನೀಡಿದೆ. ಭಾರತದ ರಕ್ಷಣೆಯ ದೃಷ್ಟಿಯಿಂದ ಕೃಷಿಕಾಯ್ದೆ ಹಿಂಪಡೆದಿದ್ದಾರೆ. ಅಜಿತ್ ದೋವಲ್ 'ಹೊಸಬಗೆಯ ಯುದ್ಧನೀತಿಯನ್ನು ಗಮನಿಸಿ ಭಾರತವನ್ನು ರಕ್ಷಣೆ ಮಾಡುವುದು ನಿಮ್ಮ ಹೊಣೆ' ಎಂದು ಐಪಿಎಸ್ ಅಧಿಕಾರಿಗಳನ್ನು ಉದ್ದೇಶಿಸುತ್ತಾ ಹೇಳಿದ್ದರು. ಸೈನಿಕರಷ್ಟೇ ಅಲ್ಲ, ವೈಚಾರಿಕವಾಗಿ ನಾವು ಸಹ ದೇಶಕ್ಕಾಗಿ ಯುದ್ಧ ಮಾಡಬೇಕಾಗಿದೆ.

***********************************

References:

3 comments: