ಕರೋನಾ ಶುರುವಾಗಿ ಮೂರು ವರ್ಷವಾದರೂ ಅದರ ಮೂಲದ ಕುರಿತ ಪ್ರಶ್ನೆಗೆ ಇನ್ನೂ ಸಮರ್ಪಕವಾದ ಉತ್ತರ ಜಗತ್ತು ಕಂಡುಕೊಂಡಿಲ್ಲ. ಈ ಶತಮಾನದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗವನ್ನು ತಡೆಗಟ್ಟಬೇಕಾದರೆ, ಪ್ರಸ್ತುತ ಈ ಸಾಂಕ್ರಾಮಿಕದ ಕಾರಣವನ್ನು ಅರ್ಥ ಮಾಡಿಕೊಳ್ಳುವುದು ಅತ್ಯಗತ್ಯ. ಈಗಾಗಲೇ ಕರೋನಾ ಜಗತ್ತಿನಾದ್ಯಂತ 5.4 ದಶಲಕ್ಷಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿದೆ. ಸಾವಷ್ಟೇ ಅಲ್ಲದೆ ಈ ರೋಗವು ಸ್ಥೂಲಕಾಯತೆ, ನಿರುದ್ಯೋಗ, ಬಡತನ, ಖಿನ್ನತೆ, ಮದ್ಯಪಾನ, ನರಹತ್ಯೆ, ಕೌಟುಂಬಿಕ ಹಿಂಸೆ, ವಿಚ್ಛೇದನ ಮತ್ತು ಆತ್ಮಹತ್ಯೆ ಪ್ರಕರಣಗಳನ್ನು ಹೆಚ್ಚಿಸಿದೆ. ಒಮ್ರಿಕಾನ್ ಹೆಚ್ಚಾಗುತ್ತಿರುವಂತೆ ಪ್ರಪಂಚದ ಅನೇಕ ಭಾಗಗಳಲ್ಲಿ ಆರ್ಥಿಕತೆ ಬೆಳವಣಿಗೆ ಸಹ ಕುಂಟಿತವಾಗಿದೆ.
ದುರಾದೃಷ್ಟವಶಾತ್ ಕರೋನಾವನ್ನು ನಿರ್ಮೂಲ ಮಾಡುವ ಸಾಧ್ಯತೆಗಳು ಈಗ ಕಮ್ಮಿಯಾಗಿವೆ. ಆದರೆ, ಈ ವೈರಸ್‌ನೊಂದಿಗೆ ಹೇಗೆ ಬದುಕಬೇಕು ಎಂದು ಪ್ರಯತ್ನಿಸುತ್ತಿರುವಾಗ ಜಗತ್ತು ಈ ಕುರಿತು ತೆಗೆದುಕೊಂಡ ತಪ್ಪು ಹೆಜ್ಜೆಗಳನ್ನು ನಾವು ಗುರುತಿಸಬೇಕು. ಚೀನಾವನ್ನು ಮೊದಲು ವಿಮರ್ಶಾತ್ಮಕವಾಗಿ, ಈ ವೈರಸ್ ಆಕಸ್ಮಿಕವಲ್ಲ ಬದಲಾಗಿ ಉದ್ದೇಶಪೂರ್ವಕವಾಗಿರಬಹುದು ಎಂಬ ಅನುಮಾನದಿಂದಲೇ ನೋಡಬೇಕು. ಜಗತ್ತಿಗೆ ತಿಳಿದಿರುವಂತೆ ಕ್ಸಿ ಜಿನ್‌ಪಿಂಗ್ ನೇತೃತ್ವದ ಚೀನಾ ವೂಹಾನ್‌ನಲ್ಲಿ ಹೊಸದೊಂದು ಮಾರಣಾಂತಿಕ ವೈರಸ್ಸಿನ ಹುಟ್ಟಿನ ಕುರಿತು ಮತ್ತು ಒಬ್ಬರಿಂದ್ದೊಬ್ಬರಿಗೆ ಹರಡುವ ಕುರಿತ ಮಾಹಿತಿಯನ್ನು ಮುಚ್ಚಿಟ್ಟಿತು. ಈ ಕಾರಣದಿಂದಾಗಿ ಚೀನಾದಲ್ಲೇ ಇರಬೇಕಿದ್ದ ಈ ರೋಗ ಜಗತ್ತಿಗೆಲ್ಲಾ ಹರಡಿತು. ಕರೋನಾ ಸ್ವಾಭಾವಿಕವಾಗಿ ವನ್ಯಜೀವಿಗಳಿಂದ ಹುಟ್ಟಿದ್ದೆ ಅಥವಾ ವೂಹಾನ್ ಇಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ಸೋರಿಕೆಯಾಗಿದ್ದೆ ಎಂಬುದು ಇಂದಿಗೂ ಪ್ರಶ್ನೆಯಾಗೆ ಉಳಿದಿದೆ.
| The Origin of the Corona Virus - WIV | 
ಚೀನಾ ಈ ವಿಚಾರದಲ್ಲಾಗಲಿ ಅಥವಾ ಮತ್ತೊಂದರಲ್ಲಾಗಲಿ ಪಾರದರ್ಶಕತೆ ತೋರಿಲ್ಲ. ಕರೋನಾದ ಮೂಲವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಚೀನಾ ಇಂದಿನವರೆಗೂ ಸಹಕರಿಸಿಲ್ಲ, ವಿಚಾರಣೆಯನ್ನು ಕ್ಸಿ ಆಡಳಿತ ತನಿಖೆಯನ್ನು ಹಾಗೂ ವಿಚಾರಣೆಯನ್ನು ನಿರ್ಭಂದಿಸಿದೆ ಮತ್ತು ಇದು ತನ್ನ ವಿರುದ್ಧ ಮಾಡುತ್ತಿರುವ ಪಿತೂರಿ ಎಂದಿದೆ! ಇವೆಲ್ಲಕ್ಕಿಂತಲೂ ಅಶ್ಚರ್ಯವೆಂದರೆ ಚೀನಾದ ಪ್ರಕಾರ ಇದುವರೆಗೂ ತನ್ನ ದೇಶದಲ್ಲಿ ಪತ್ತೆಯಾದ ಪ್ರಕರಣ ಕೇವಲ 1.04 ಲಕ್ಷ ಮತ್ತು ಮೃತಪಟ್ಟವರ ಸಂಖ್ಯೆ 4,636! ಚೀನಾದ ವೈರಸ್ ನಿರ್ವಹಣೆ ಕುರಿತು ತನಿಖೆಗೆ ಆಸ್ಟ್ರೇಲಿಯಾ ತಾಕೀತು ಮಾಡಿದ ನಂತರ ಚೀನಾ ಆಸ್ಟ್ರೇಲಿಯಾ ಮೇಲೆ ಅನೇಕ ನಿರ್ಭಂದಗಳನ್ನು ಹೇರಿತು. ಚೀನಾದ ಪ್ರಮಾದವನ್ನು ಮುಚ್ಚಿಟ್ಟುಕೊಳ್ಳಲು ವಿಶ್ಚ ಆರೋಗ್ಯ ಸಂಸ್ಥೆಯೇ ಸಹಾಯ ಮಾಡಿದಂತೆ ತೋರುತ್ತದೆ. ಆರಂಭದಲ್ಲಿ ಮಹಾನಿರ್ದೇಶಕ ಟೆಡ್ರೊಸ್ ಚೀನಾದ ತಾಳಕ್ಕೆ ಕುಣಿಯುತ್ತಾ ಅವರ ಪರವಾದ ಮಾತುಗಳನ್ನು ಗಿಳಿಪಾಠದಂತೆ ಜಗತ್ತಿನೆದುರಿಗೆ ಒಪ್ಪಿಸಿದ. ಕರೋನಾದ ನಿರ್ವಹಣೆ ಕುರಿತು ಚೀನಾವನ್ನೇ ಶ್ಲಾಘಿಸಿದ! ಕರೋನಾದ ಕಾರಣ ನರಮೇಧ ಅನುಭವಿಸುತ್ತಿರುವ ಜರ್ಮನಿ ಮತ್ತು ಫ್ರಾನ್ಸ್ ಅಂತೂ ವಿಶ್ವ ಆರೋಗ್ಯ ಸಂಸ್ಥೆಯ ನಡೆಗಳನ್ನು ಖಂಡಿಸುವುದಿರಲಿ ಟೆಡ್ರೊಸ್ನನ್ನೇ ಅಧ್ಯಕ್ಷ ಸ್ಥಾನಕ್ಕೆ ಎರಡನೆ ಬಾರಿಗೆ ನಾಮ ನಿರ್ದೇಶನ ಮಾಡಿದರು, ಅಮೇರಿಕಾ ಆತನ ವಿರುದ್ಧ ಪ್ರತಿಸ್ಪರ್ಧಿಯನ್ನೂ ಸಹ ಕಣಕ್ಕಿಳಿಸಲಿಲ್ಲ. ಅವಿರೋಧವಾಗಿ ಆಯ್ಕೆಯಾಗಿರುವ ಟೆಡ್ರೋಸ್ ವಿಶ್ವ ಆರೋಗ್ಯ ಸಂಸ್ಥೆಯನ್ನು ಇನ್ನೂ ಐದು ವರ್ಷಗಳ ಕಾಲ ಮುಂದುವರೆಸುತ್ತಾನೆ!
ಅಮೇರಿಕಾ ಚೀನಾದ ವೂಹಾನ್ ಇಸ್ಟಿಟ್ಯುಟ್ ಆಫ್ ವೈರಾಲಜಿಯಲ್ಲಿ ತಾನು ಮಾಡಿರುವ ಹಣದ ಹೂಡಿಕೆ ಬಗ್ಗೆ ಸಂಪೂರ್ಣ ಮಾಹಿತಿ ಬಹಿರಂಗ ಪಡಿಸಿಲ್ಲ. ಅಮೇರಿಕಾದ ಸಂಸ್ಥೆಗಳು ಚೀನಾದ ಮಿಲಿಟರಿಗೆ ಸಂಬಂಧಿಸಿರುವ ಸಂಸ್ಥೆಗಳಲ್ಲಿ ಸಂಶೋಧನೆಗೆ ಧನಸಹಾಯ ಮಾಡುತ್ತಿವೆ ಎಂಬುದಕ್ಕೆ ಸ್ಪಷ್ಟ ಕಾರಣವಾಗಿದೆ. ಅಮೇರಿಕಾದ ಸರ್ಕಾರ ಮತ್ತು ಇತರ ಸಂಸ್ಥೆಗಳ ನಡುವೆ ಗೊಂದಲಗಳಿವೆ. ಕರೋನಾ ಲ್ಯಾಬಿನಿಂದ ಸೋರಿಕೆಯಾಯಿತು ಎಂದು ವೈರಾಲಜಿಸ್ಟ್‌ಗಳು ಹೇಳಿದರೆ, ಸುದ್ಧಿ ಸಂಸ್ಥೆಗಳು ಮತ್ತು ಸಾಮಾಜಿಕ ಜಾಲತಾಣ ಲ್ಯಾಬಿನಿಂದ ಸೋರಿಕೆಯಾಗಿರುವುದು ಕಾಲ್ಪನಿಕ ಊಹೆಯಷ್ಟೆ ಎಂದು ಪ್ರಚಾರ ಮಾಡಿಬಿಟ್ಟಿತ್ತು. 1957 ರಲ್ಲಿ ಏಸಿಯನ್ ಫ್ಲೂ, 1968 ರಲ್ಲಿ ಹಾಂಗ್ ಕಾಂಗ್ ಫ್ಲೂ, 2002 ರಲ್ಲಿ ಸಾರ್ಸ್, 2008 ರಲ್ಲಿ ಹೆಚ್5ಎನ್1, 2013 ರಲ್ಲಿ ಹೆಚ್7ಎನ್9 ಮತ್ತು 2019 ರಲ್ಲಿ ಕರೋನಾ. ನೆನಪಿಡಿ, ಈ ಎಲ್ಲಾ ರೋಗಗಳು ಹುಟ್ಟಿದ್ದು ಚೀನಾದಲ್ಲೇ!
ಚೀನಾ ಟಿಬೆಟ್ಟಿಯನ್ನರ ಮೇಲೆ ಹೊಸ ದಾಳಿ ಆರಂಭಿಸಿದೆ. ಸಿಚುವಾನ್‌ನಲ್ಲಿ 2 ಬುದ್ಧನ ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿದೆ ಎಂಬ ಸುದ್ಧಿಗಳು ಕಳೆದ ವಾರದಿಂದ ಬರುತ್ತಿದೆ. ಆಫ್ರಿಕನ್ ರಾಷ್ಟ್ರಗಳು ಕೆಲವು ವರ್ಷಗಳ ಹಿಂದೆ ಸಹಿ ಮಾಡಿದ ಕೆಲವು ಒಪ್ಪಂದಗಳ ಕಾರಣದಿಂದಾಗಿ ರಾಷ್ಟ್ರೀಯ ಆಸ್ತಿಗಳನ್ನು ತನಗೆ ಹಸ್ತಾಂತರಿಸುವಂತೆ ಚೀನಾ ಈಗ ಒತ್ತಾಯಿಸುತ್ತಿದೆ. ಚೀನಾವನ್ನು ನೆಚ್ಚಿಸುವ ಸಲುವಾಗಿ ಕೆಲವು ನಿರ್ಣಾಯಕ ಷರತ್ತುಗಳನ್ನು ಆಫ್ರಿಕಾ ನಿರ್ಲಕ್ಷಿಸಿತ್ತು ಮತ್ತು ಅದರ ಫಲವನ್ನೀಗ ಅನುಭವಿಸುತ್ತಿದೆ. 207 ಮಿಲಿಯನ್ ಡಾಲರ್ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಕಾರಣ ಹಾಗೂ 2015ರ ಒಪ್ಪಂದದ ಪ್ರಕಾರ ಉಗಾಂಡಾ ತನ್ನ ಏಕೈಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಚೀನಾದ ಕಂಪನಿಗಳಿಗೆ ಹಸ್ತಾಂತರಿಸಲು ತಯಾರಿ ನಡೆಸುತ್ತಿದೆ. ಆಫ್ರಿಕಾದ 50 ರಾಷ್ಟ್ರಗಳು ಚೀನಾದಿಂದ 150ಕ್ಕೂ ಹೆಚ್ಚು ಬಿಲಿಯನ್ ಡಾಲರ್ ಸಾಲವನ್ನು ಹತ್ತು ವರ್ಷಗಳಲ್ಲಿ ಪಡೆದುಕೊಂಡಿದೆ. ಈಗ ಕರೋನಾ ಬಿಕ್ಕಟ್ಟಿನಿಂದಾಗಿ, ಈ ದೇಶಗಳು ಸಾಲ ಮರುಪಾವತಿ ಮಾಡಲು ಹೆಣಗುತ್ತಿವೆ. ಈ ರೀತಿ ಸಾಲದ ಸುಳಿಯಲ್ಲಿ ಸಿಲುಕಿಸಿ ಇತರ ರಾಷ್ಟ್ರಗಳನ್ನು ತನ್ನ ಕೈಗೊಂಬೆಯಾಗಿಸಿಕೊಳ್ಳುವುದು ಚೀನಾಕ್ಕೆ ಹೊಸದಲ್ಲ. ಆದರೂ ಶ್ರೀಲಂಕಾ ಸಾಲಕ್ಕಾಗಿ ಐ.ಎಂ.ಎಫ್ ಗಿಂತಲೂ ಚೀನಾವನ್ನೇ ಅವಲಂವಭಿಸುತ್ತೇವೆ ಎಂಬಂತಹ ಮಾತುಗಳನ್ನಾಡಿದೆ.
| The 99-foot-tall Buddha statue was destroyed by local Chinese authorities in Drago County, Tibet. Photo: TPI | 
ಮುಂದಿನ ತಿಂಗಳು ಬೀಜಿಂಗ್ ಅಲ್ಲಿ ಚಳಿಗಾಲದ ಒಲಂಪಿಕ್ಸ್ ನಡೆಯಲಿದೆ. ಈಗಾಗಲೇ ಅಮೇರಿಕಾ, ಕೆನಡಾ, ಯೂ.ಕೆ., ಅಸ್ಟ್ರೇಲಿಯಾ, ನೆದರ್ಲಾಂಡ್ಸ್, ಡೆನ್ಮಾರ್ಕ್, ಜಪಾನ್ ರಾಜತಾಂತ್ರಿಕವಾಗಿ ಬಹಿಷ್ಕಾರ ಹಾಕಿದೆ. ಭಾರತ ಬಹಿಷ್ಕಾರ ಹಾಕದಿದ್ದರೂ ಉನ್ನತ ಮಟ್ಟದ ರಾಜಕೀಯ ಪ್ರಾತಿನಿಧ್ಯವಿಲ್ಲ ಎಂದು ಹೇಳಿದೆ. ಹಾಗೆ ನೋಡಿದರೆ ಉಯ್ಘರ್ ಮುಸಲ್ಮಾನರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ಕರೋನಾ ಕಾರಣದಿಂದಾಗಿ ಎಲ್ಲಾ ದೇಶಗಳು ಚೀನಾದ ಜಾಗತಿಕ ಮಟ್ಟದ ಈ ಆಯೋಜನೆಯನ್ನು ಸಂಪೂರ್ಣ ಬಹಿಷ್ಕರಿಸಬೇಕಿತ್ತು. ಆದರೆ, ಯಾರೂ ಸಹ ಈ ಸಾಹಸಕ್ಕೆ ಮುಂದಾಗಲಿಲ್ಲ. 90 ಕ್ಕೂ ಹೆಚ್ಚು ದೇಶಗಳು ರಾಜತಾಂತ್ರಿಕ ಬಹಿಷ್ಕಾರವನ್ನೂ ಘೋಷಣೆ ಮಾಡಿಲ್ಲ.
ಸುಮಾರು 21 ತಿಂಗಳ ಗಡಿ ಬಿಕ್ಕಟ್ಟನ್ನು ಶಮನಗೊಳಿಸಲು ಭಾರತ-ಚೀನಾ ಮಿಲಿಟರಿ ಮಾತುಕತೆಯ ಮತ್ತೊಂದು ಸುತ್ತಿನ ಮಾತುಕತೆ ಯಾವುದೇ ಪ್ರಗತಿಯಿಲ್ಲದೆ ಕೊನೆಗೊಂಡಿದೆ. ಹಿಮಾಲಯದ ಗಡಿಪ್ರದೇಶಗಳಲ್ಲಿ ಯುದ್ಧದ ಮೂಲಸೌಕರ್ಯಗಳ ನಿರ್ಮಾಣವನ್ನು ಚೀನಾ ಹೆಚ್ಚಿಸಿದೆ. ಅದರ ನಿರ್ಮಾಣ ಚಟುವಟಿಕೆಯ ವೇಗ ಮತ್ತು ಪ್ರಮಾಣವನ್ನು ಗಮನಿಸಿದರೆ ಚೀನಾ ಯುದ್ಧದ ತಯಾರಿಯಲ್ಲಿದೆ ಎಂದು ಅಂದಾಜಿಸಬಹುದು. ಪ್ಯಾಂಗೊಂಗ್ ಸರೋವರದ ಮೇಲೆ ಸೇತುವೆಯನ್ನು ನಿರ್ಮಿಸುವುದರಿಂದ ಹಿಡಿದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಭೂತಾನ್ ಪ್ರದೇಶದೊಳಗೆ ಮಿಲಿಟರಿ ಗ್ರಾಮಗಳು ಮತ್ತು ರಸ್ತೆಗಳನ್ನು ನಿರ್ಮಿಸುವವರೆಗೆ ಚೀನಾ ಭಾರತದ ಮೇಲೆ ಒತ್ತಡ ತರುವ ಪ್ರಯತ್ನ ಮಾಡುತ್ತಿದೆ. ಸಮಾಧಾನಕರವಾದ ಸಂಗತಿ ಎಂದರೆ ಭಾರತ ಚೀನಾದ ಮಿಲಿಟರಿ ನಿಯೋಜನೆ ಮಾಡಿರುವದಕ್ಕಿಂತ ಹೆಚ್ಚಿನದನ್ನು ಹೊಂದಿದೆ. ನಮ್ಮ ಸೈನ್ಯದ ಸಿದ್ಧತೆ ಉನ್ನತ ಮಟ್ಟದಲ್ಲಿವೆ ಎಂದು ಸೇನಾ ಮುಖ್ಯಸ್ಥ ಜನರಲ್ ನರವಣೆ ಅಭಿಪ್ರಾಯ ಪಟ್ಟಿದ್ದಾರೆ. ಎಲ್ಲೆಡೆ ಚೀನಾದ ಉಪಟಳ ಹೆಚ್ಚಾಗಿದೆ. ಜಗತ್ತು ಇನ್ನು ಎಷ್ಟು ದಿನಗಳು ಚೀನಾವನ್ನು ಸಹಿಸಿಕೊಳ್ಳಬೇಕು ಎಂಬ ಪ್ರಶ್ನೆ ಕಾಡುತ್ತಿದೆ.