February 23, 2022

ಕಾಂಗ್ರೇಸ್ ಕಾಲದ ಮತ್ತೊಂದು ಬಹುಕೋಟಿ ಹಗರಣ

ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ ಹತ್ತು ವರ್ಷಗಳ ಕಾಲ ಕಾಂಗ್ರೇಸಿನ ಯೂಪಿಎ ಸರ್ಕಾರವಿತ್ತು. ದಿನ ಬೆಳಗಾದರೆ ಯಾವುದಾದರೂ ಹಗರಣದ ಸುದ್ಧಿಯೊಂದು ಕಿವಿಗೆ ಅಪ್ಪಳಿಸುತ್ತಿತ್ತು. 2ಜಿ ಸ್ಪೆಕ್ಟ್ರಂ, ಕಾಮನ್ವೆಲ್ತ್, ಆದರ್ಶ ಹೌಸಿಂಗ್ ಸೊಸೈಟಿ, ಸತ್ಯಂ ಕಂಪ್ಯೂಟರ್ಸ್ ಹಗರಣ. ಹೀಗೆ ಕೆಲವನ್ನು ಹೆಸರಿಸಬಹುದು ಆದರೆ ಪಟ್ಟಿ ದೊಡ್ಡದಿದೆ. ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ವಿಜಯ್ ಮಲ್ಯ ಮತ್ತು ನೀರವ್ ಮೋದಿ ಬಹುಕೋಟಿ ರೂಪಾಯಿಗಳ ಸಾಲ ಪಡೆದದ್ದು ಸಹ ಇದೇ ಯೂಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ. ಈಗ ಮತ್ತೊಂದು ಬಹುಕೋಟಿ ಹಗರಣದ ವಿರುದ್ಧ ಕೇಸ್ ದಾಖಲಾಗಿದೆ. ಕಳೆದ ಬುಧವಾರ ಜಾರಿ ನಿರ್ದೇಶನಾಲಯವು ಗುಜರಾತ್ ಮೂಲದ ಎಬಿಜಿ ಶಿಪ್‌ಯಾರ್ಡ್ ಕಂಪನಿ ವಿರುದ್ಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ದೂರಿನ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದೆ. ಈ ಹಗರಣ ಮೊತ್ತ 22,842 ಕೋಟಿ ರೂಪಾಯಿಗಳು!

ABG Shipyard Limited under CBI Scanner
 
ಎಬಿಜಿ ಒಂದು ಶಿಪ್ ಯಾರ್ಡ್ ಕಂಪನಿ. ಸುಮಾರು 20 ಟನ್ ತೂಕದ ಹಡಗುಗಳನ್ನು ತಯಾರಿಸುವ ಮತ್ತು ದುರಸ್ತಿ ಮಾಡುವ ಸಾಮರ್ಥ್ಯ ಹೊಂದಿರುವ ಭಾರತದ ಅತೀದೊಡ್ಡ ಖಾಸಗಿ ಹಡಗು ನಿರ್ಮಾಣ ಕಂಪನಿಗಳಲ್ಲಿ ಒಂದಾಗಿದೆ. ಇಂತಹ ಕಂಪನಿಗಳಿಗೆ ತಮ್ಮ ವ್ಯವಹಾರವನ್ನು ನಿರ್ವಹಿಸಲು ದೇಶದ ಹಣಕಾಸು ಸಂಸ್ಥೆಗಳ ಬೆಂಬಲ ಅಗತ್ಯವಿರುತ್ತದೆ. ಅಂತೆಯೆ ಈ ಕಂಪನಿಗೂ ಸಹ ಭಾರತದ 28 ಬ್ಯಾಂಕುಗಳು ಸಾಲವನ್ನು ನೀಡಿತು. ಸಾಲ ಪಡೆದುಕೊಳ್ಳುವುದರಲ್ಲಿ ಏನು ಸಮಸ್ಯೆ ಇರಲಿಲ್ಲ. ಒಪ್ಪಂದದ ಪ್ರಕಾರ ಸಾಲವನ್ನು ಕಂತುಗಳಲ್ಲಿ ಹಿಂತಿರುಗಿಸಬೇಕಿತ್ತು. ಆದರೆ, ಈ ಕಂಪನಿ ಸಾಲವನ್ನು ಹಿಂದಿರುಗಿಸುವ ಲಕ್ಷಣ ಕಾಣಿಸಲಿಲ್ಲ. ಆದರೂ ಸಹ ಬ್ಯಾಂಕುಗಳು ಮತ್ತೆ ಮತ್ತೆ ಸಾಲವನ್ನು ನೀಡಿತು. ಸಾಲದ ಮೊತ್ತ 15 ಸಾವಿರ ಕೋಟಿ, ಬಡ್ಡಿ ಸೇರಿ 22 ಸಾವಿರ ಕೋಟಿ ರೂಪಾಯಿಗೂ ಹೆಚ್ಚಾಯಿತು. 2013 ನವೆಂಬರಲ್ಲಿ ಈ ಕಂಪನಿಯ ಅಕೌಂಟ್ ಅನ್ನು ಕಾರ್ಯ ನಿರ್ವಹಿಸದ ಖಾತೆ ಎಂದು ವರ್ಗೀಕರಿಸಲಾಯಿತು. 2014 ರಲ್ಲಿ ಕಂಪನಿ ಪುನಶ್ಚೇತನಗೊಳ್ಳಲು ಸಾಧ್ಯವಿಲ್ಲ ಎಂಬ ಕಾರಣದಿಂದ ಅವರ ಅಕೌಂಟನ್ನು ನಿರ್ಬಂಧಿಸಲಾಯಿತು. ಸಾಲಕೊಟ್ಟ ಬ್ಯಾಂಕ್ 2018 ರಲ್ಲಿ ಈ ಅಂಡ್ ವೈ ಎಂಬ ಲೆಕ್ಕ ಪರಿಶೋಧನಾ ಸಂಸ್ಥೆಗೆ ಆಡಿಟ್ ನಡೆಸಲು ತಿಳಿಸುತ್ತಾರೆ. ಈ ಸಂಸ್ಥೆ ಪರಿಶೀಲನೆ ನಡಿಸಿ ಇಲ್ಲೊಂದು ಬಹುಕೋಟಿ ರೂಪಾಯಿ ಹಗರಣ ನಡೆದಿದೆ ಎಂಬುದನ್ನು ಬಹಿರಂಗ ಪಡಿಸುತ್ತದೆ. ನಂತರ 2019 ರಲ್ಲಿ ಸಿಬಿಐ ಈ ಕಂಪನಿಯ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಇವರಿಗಾಗಿ ಹುಡುಕಾಟ ನಡೆಸಲು ಪ್ರಾರಂಭಿಸುತ್ತದೆ.

ಪ್ರಕರಣದ ಪ್ರಮುಖ ಆರೋಪಿ ಕಂಪನಿಯ ಛೇರ್ಮನ್ ರಿಷಿ ಕಮಲೇಶ್ ಮತ್ತು ಇತರ ಪ್ರಮುಖ ಆರೋಪಿಗಳು ಸಿಗದಿದ್ದಾಗ ಸಿಬಿಐ ಲುಕ್ ಔಟ್ ನೋಟಿಸ್ ಜಾರಿ ಮಾಡುತ್ತದೆ. ಇದಾಗುತ್ತಿದ್ದಂತೆ ಕಾಂಗ್ರೇಸಿನ ವಕ್ತಾರ ಸುರ್ಜೇವಾಲ ಈ ಪ್ರಕರಣವನ್ನು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿ ಟ್ವೀಟ್ ಮಾಡಿದ್ದಾರೆ.

Tweets of Congress Spokesperson Randeep Surjewala
 
1985 ರಲ್ಲಿ 278 ಕೋಟಿ ರೂಪಾಯಿಯ ಬಂಡವಾಳದೊಂದಿಗೆ ಶುರುವಾದ ಈ ಕಂಪನಿ 2010 ಹೊತ್ತಿಗೆ 5394 ಕೋಟಿಯಷ್ಟು ವಹಿವಾಟು ಮಾಡುತ್ತದೆ. 2009 ರಲ್ಲಿ ಹನ್ನೊಂದು ವಾಟರ್ ಜೆಟ್ ಇಂಟರ್ಸೆಪ್ಟರ್ ತಯಾರಿಸುವ ಅವಕಾಶ ಈ ಕಂಪನಿಗೆ ಸಿಗುತ್ತದೆ. 2010 ರ ಅಕ್ಟೋಬರಲ್ಲಿ ವೆಸ್ಟರ್ನ್ ಇಂಡಿಯಾ ಶಿಪ್ ಯಾರ್ಡ್ ಲಿಮಿಟೆಡ್ ಎನ್ನುವ ಮತ್ತೊಂದು ಕಂಪನಿಯನ್ನು ಸ್ವಾಧೀನಪಡಿಸಿಕೊಂಡು ಗೋವಾದಲ್ಲಿ ಹಡಗು ದುರಸ್ತಿ ಘಟಕವನ್ನು ನಿರ್ವಹಿಸುತ್ತಿದೆ. ಇದರ ಹಿಂದೆ ಬಂಡವಾಳ ಹಾಕಿದ್ದು ಈ ದೇಶದ ಬ್ಯಾಂಕುಗಳು ಮತ್ತು ಸಾರ್ವಜನಿಕ ವಲಯದ ಘಟಕಗಳು. 2011 ರಲ್ಲಿ 9700 ಕೋಟಿ ರೂಪಾಯಿ ಮೌಲ್ಯದ ಎರಡು ನೌಕಾದಳದ ಹಡಗನ್ನು ನಿರ್ಮಾಣ ಮಾಡುವ ಟೆಂಡರ್ ಈ ಕಂಪನಿಯ ಪಾಲಾಗುತ್ತದೆ. ಮುಂದಿನ ವರ್ಷ 500 ಕೋಟಿ ರೂಪಾಯಿ ಮೌಲ್ಯದ ಟೆಂಡರ್ ಮತ್ತೆ ಇದೇ ಕಂಪನಿಯ ಪಾಲಾಗುತ್ತದೆ. ಬ್ಯಾಂಕುಗಳಿಂದ ಸಾಲ ಪಡೆದ ಈ ಕಂಪನಿ ಹಣವನ್ನು ಹಿಂದಿರುಗಿಸದಿದ್ದರೂ ಮತ್ತೆ ಮತ್ತೆ ಸಾಲ ಪಡೆದುದ್ದರ ಹಿಂದೆ ಇರುವ ಕೈವಾಡ ಯಾರದ್ದು ಎಂಬುದು ಪ್ರಶ್ನೆಯಾಗಿದೆ.

ಈ ಹಗರಣದ ಬಗ್ಗೆ ಅಂದಿನ ಕಾಂಗ್ರೇಸ್ ಸರ್ಕಾರ ಎಳ್ಳಷ್ಟೂ ತಲೆಕೆಡಿಸಿಕೊಂಡಿರಲಿಲ್ಲ. 2014 ತನಕ ಸರ್ಕಾರದ ಯಾವುದೇ ಸಂಸ್ಥೆ ಇದರ ಬಗ್ಗೆ ಯೋಚಿಸಿಯೂ ಇರಲಿಲ್ಲ. ಹಾಗೆ ನೋಡಿದರೆ ಈ ಪ್ರಕರಣದ ಹಿಂದೆ ಬಿದ್ದು, ಪರಿಹರಿಸಲು ಮುಂದಾದದ್ದು ಮೋದಿ ಸರ್ಕಾರವೇ. ಸಾರ್ವಜನಿಕ ಹಣವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಇಂತಹವರ ವಿರುದ್ಧ ಸರ್ಕಾರ, ಹಣಕಾಸು ಸಂಸ್ಥೆ, ಸಾರ್ವಜನಿಕರು ಒಂದಾಗುವ ಅಗತ್ಯವಿದೆ. ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿತು ಎನ್ನುವಂತೆ ತಾವು ಹಗರಣಕ್ಕೆ ಅವಕಾಶ ಮಾಡಿಕೊಟ್ಟು ಪ್ರಕರಣ ಹೊರಬರುತ್ತಿದ್ದಂತೆ ಈಗಿನ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಕಾಂಗ್ರೇಸ್ ನಾಯಕರ ವರ್ತನೆಯಾಗಿದೆ! ಕೇಂದ್ರದಲ್ಲಿ ಕಾಂಗ್ರೇಸ್ ಸರ್ಕಾರ ಇಲ್ಲವಾದರೂ ಅವರ ಆಡಳಿತದಲ್ಲಿ ನಡೆದಿರುವ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ ಅಷ್ಟೇ!

***********************************************************

References:

1 comment: