October 4, 2022

ನವರಾತ್ರಿ ಹಬ್ಬಕ್ಕೆ ದೇಶಕ್ಕೆ ಉಡುಗೊರೆ ಕೊಟ್ಟ ಮೋದಿ!

ಆರು ವರ್ಷಗಳ ಹಿಂದೆ ಪಾಕಿಸ್ತಾನದ ಮೇಲೆ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿತ್ತು. ಅದಾದ ಒಂದುವರೆ ತಿಂಗಳಿಗೆ ಡಿಮಾನಿಟೈಸೇಶನ್ ಎಂಬ ಅಸ್ತ್ರವನ್ನು ಪ್ರಯೋಗಿಸಿತ್ತು. ಇದರ ಪರಿಣಾಮವಾಗಿ ಕಾಶ್ಮೀರದಲ್ಲಿ ಭಯೋತ್ಪಾದನ ಕೃತ್ಯ ಗಣನೀಯವಾಗಿ ಕಮ್ಮಿಯಾಯಿತು. ಈಗ ದೇಶದಲ್ಲಿ ಆಂತರಿಕವಾಗಿ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಿ ಇಸ್ಲಾಮಿಕ್ ಮೂಲಭೂತ ಭಯೋತ್ಪಾದಕ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಅನ್ನು ಐದು ವರ್ಷಗಳ ಕಾಲ ನಿಷೇಧ ಮಾಡಿದ್ದಾರೆ. ನಿಷೇಧ ಮಾಡಿದೊಡನೆ ಮತಾಂಧತೆ ಹಾಗೂ ಮೂಲಭೂತವಾದ ಮನಸ್ಥಿತಿಯುಳ್ಳವರು ಮತ್ತೊಂದು ಹೆಸರಿನಲ್ಲಿ ಎದುರಾಗುತ್ತಾರೆ. ಆದರೆ, ಈ ಬಾರಿ ನಿಷೇಧ ಮಾಡಿದ್ದಷ್ಟೇ ಅಲ್ಲ ಸಂಘಟನೆಯ ಬಾಹುಗಳನ್ನೆಲ್ಲಾ ಕತ್ತರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಕರ್ನಾಟಕ ಫೋರಂ ಫಾರ್ ಡಿಗ್ನಿಟಿ ಹಾಗೂ ನ್ಯಾಷನಲ್ ಡೆವೆಲಪ್ಮೆಂಟ್ ಫ್ರಂಟ್ ಎಂಬ ಎರಡು ಇಸ್ಲಾಮಿಕ್ ಮಾತಾಂಧ ಸಂಘಟನೆಗಳು ವಿಲೀನಗೊಂಡು 2006ರಲ್ಲಿ ಪಿಎಫ್ಐ ಸಂಘಟನೆ ಹುಟ್ಟುಕೊಂಡಿತು. ಅಲ್ಲಿಂದಾಚೆಗೆ ಈ ಸಂಘಟನೆಯದ್ದು ರಕ್ತಸಿಕ್ತ ಅಧ್ಯಾಯ! 2001ರಲ್ಲಿ ನಿಷೇಧಿಸಲ್ಪಟ್ಟ ಸಿಮಿ ಎಂಬ ಭಯೋತ್ಪಾದಕ ಸಂಘಟನೆಯ ಮುಂದುವರೆದ ಭಾಗವೇ ಪಿಎಫ್ಐ. ನಂತರದ ದಿನಗಳಲ್ಲಿ ಮುಸಲ್ಮಾನರು ಒಳಗೊಂಡ ವಿವಿಧ ಸಂಘಟನೆಗಳು ವಿಲೀನವಾಗಿ ಪಿಎಫ್ಐ ತನ್ನ ಬಾಹುಗಳನ್ನು ಮತ್ತಷ್ಟು ಹರಡಿತು. ಅದರ ರಾಜಕೀಯದ ಮುಖವಾಣಿಯಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ), ವಿದ್ಯಾರ್ಥಿಗಳು ಒಳಗೊಂಡ ಕ್ಯಾಂಪಸ್ ಫ್ರಂಟ್ ಅಫ್ ಇಂಡಿಯಾ, ನ್ಯಾಷನಲ್ ವುಮೆನ್ಸ್ ಫ್ರಂಟ್, ರೆಹಬ್ ಇಂಡಿಯಾ ಫೌಂಡೇಶನ್ ಎಂಬ ಎನ್.ಜಿ.ಓ ಅನ್ನು ಪ್ರಾರಂಭಿಸಿತು.

Terror Organization PFI

2010ರಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ಧರ್ಮನಿಂದಕ ಅಂಶವಿದೆ ಎಂದು ಟಿ ಜೆ ಜೋಸೆಫ್ ಎಂಬ ಕೇರಳದ ಕಾಲೇಜಿನ ಪ್ರಾಧ್ಯಾಪಕನ ಅಂಗೈಯನ್ನು ಕತ್ತರಿಸುತ್ತಾರೆ. 2014ರಲ್ಲಿ ಕೇರಳ ಸರ್ಕಾರ 27 ಕೊಲೆಗಳಲ್ಲಿ ಪಿಎಫ್ಐ ಕೈವಾಡವಿದೆ ಎಂದು ಆರೋಪ ಮಾಡಿತು, 2019ರಲ್ಲಿ ತಮಿಳುನಾಡಿನ ಹಿಂದೂ ನಾಯಕನೊಬ್ಬನ ಹತ್ಯೆಯ ಆರೋಪ ಪಿಎಫ್‌ಐ ಮೇಲಿತ್ತು, 2020ರಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳ ಹಲವಾರು ಜನರನ್ನು ಅತೀ ಕ್ರೂರವಾಗಿ ಹತ್ಯೆ ಮಾಡಲಾದ ಆರೋಪ ಪಿಎಫ್ಐ ಮೇಲೆ ಬಂತು. 2021 ನವೆಂಬರ್ 15 ರಂದು ಪಾಲಕ್ಕಾಡ್ ಜಿಲ್ಲೆಯಲ್ಲಿ 27 ವರ್ಷದ ಆರ್‌ಎಸ್‌ಎಸ್ ಕಾರ್ಯಕರ್ತನನ್ನು ಬರ್ಬರವಾಗಿ ಹತ್ಯೆ ಮಾಡಿದ್ದು ಇದೇ ಪಿಎಫ್ಐ ಸಂಘಟನೆಯವರು. ಕರ್ನಾಟಕದಲ್ಲಿ 2000ರಿಂದ ಸುಮಾರು 120 ರಾಜಕೀಯ ಕೊಲೆಗಳಾಗಿವೆ. ಎಸ್.ಎಂ.ಕೃಷ್ಣ ರವರ ಆಡಳಿತದ ಸಂದರ್ಭದಲ್ಲಿ 17 ಹಾಗೂ ಸಿದ್ಧರಾಮಯ್ಯ ಅವರ ಆಡಳಿತಾವಧಿಯಲ್ಲಿ ಗರಿಷ್ಟ 34 ಕೊಲೆಗಳಾಗಿವೆ. ಎಲ್ಲದಕ್ಕೂ ಪಿಎಫ್ಐ ಕಾರಣ ಅಲ್ಲದಿದ್ದರೂ ಅವರ ಸುತ್ತಾ ಅನುಮಾನ ಇರುವುದಂತೂ ಸತ್ಯ. 2015-ಪ್ರಶಾಂತ್ ಪೂಜಾರಿ, ವಿಶ್ವನಾಥ್ ಶೆಟ್ಟಿ, 2016-ರಾಜು, ರಾಜೇಶ್, ಪ್ರವೀಣ್ ಪೂಜಾರಿ, ರುದ್ರೇಶ್, 2017-ಶರತ್ ಮಡಿವಾಳ, 2018-ದೀಪಕ್ ರಾವ್, 2022-ಹರ್ಷ ಹಾಗೂ ಪ್ರವೀಣ್ ನೆಟ್ಟಾರು ಹತ್ಯೆಗಳು ಈ ಏಳು ವರ್ಷಗಳಲ್ಲಿ ದೊಡ್ಡ ಸದ್ದು ಮಾಡಿತ್ತು. ಈ ಹತ್ಯೆಗಳ ಹಿಂದೆ ಪಿಎಫ್ಐ ಇರುವುದರ ಬಗ್ಗೆ ದಟ್ಟವಾದ ಅನುಮಾನಗಳಿವೆ. ಈ ಸಂಘಟನೆಯ ಅಂತ್ಯಕ್ಕೆ ನಾಂದಿ ಹಾಡಿದ್ದು ಪಾಟ್ನಾದಲ್ಲಿ ಸಿಕ್ಕಿಬಿದ್ದ ಮೊಹಮ್ಮದ್ ಜಲಾಲುದ್ದೀನ್, ಅಥರ್ ಪರ್ವೇಜ್ ಹಾಗೂ 2047 ಹೊತ್ತಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ 'ಇಂಡಿಯಾ ವಿಷನ್ 2047' ಹೆಸರಿನ ದಾಖಲೆ ಸಿಕ್ಕಿಬಿದ್ದಾಗ. 

ಈ ಎಲ್ಲಾ ಕಾರಣದಿಂದಾಗಿ ಎಚ್ಚೆತ್ತ ಈಡಿ, ಎನ್ಐಏ ಪಿಎಫ್ಐ ಸುತ್ತಾ ಬಲೆ ಹೆಣೆಯುವ ಕಾರ್ಯಕ್ಕೆ ಮುಂದಾದರು. ಪಿಎಫ್ಐ ಗೆ ಭಿನ್ನ ಭಿನ್ನ ರೂಪಗಳಲ್ಲಿ ಬರುತ್ತಿದ್ದ ಹಣದ ಜಾಲವನ್ನು ಗುರುತಿಸಿದರು. ಪಿಎಫ್ಐ ಹಾಗೂ ಐಸಿಸ್ ತರಹ ಭಯೋತ್ಪಾದಕ ಸಂಘಟನೆ ಜೊತೆಗಿದ್ದ ನಂಟನ್ನು ಕಲೆಹಾಕಿದರು. 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಏಕಾಯಕಿ ಸ್ಥಳಿಯ ಪೋಲಿಸರ ಸಹಾಯದೊಂದಿಗೆ ನೂರಕ್ಕೂ ಹೆಚ್ಚು ಪಿಎಫ್ಐ ನಾಯಕರನ್ನು ಬಂಧಿಸಿದರು. ಬೆಳಕಿಲ್ಲಿ ಮಾಡಿದರೆ ಆಗಬಹುದಾದ ಅನಾಹುತಗಳ ಅರಿವಿದ್ದೇ ಇತ್ತು. ಹಾಗಾಗಿ, ಎಲ್ಲರೂ ಏಳುವ ಮೊದಲೇ ಅಂದರೇ ಬೆಳಗಿನ ಜಾವ 04 ಗಂಟೆಗೆ ದಾಳಿಯಾಗಿ, ಬಂಧನಗಳಾದವು. ಇದೇ ಸಮಯಕ್ಕೆ ಭಾರತಕ್ಕೆ ಖೋಟಾನೋಟುಗಳನ್ನು ತಲುಪಿಸುತ್ತಿದ್ದ ಮೊಹಮ್ಮದ್ ಎಂಬ ಐಎಸ್ಐ ಕಾರ್ಯಕರ್ತನನ್ನು ನೇಪಾಳದಲ್ಲಿ ಹತ್ಯೆಯಾಗಿದೆ. ದೇಶದೆಲ್ಲೆಡೆ ಪಿಎಫ್ಐ ಗೆ ಸಂಬಂಧಪಟ್ಟವರ ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಂಡು ಗೆಜೆಟ್ ಅಧಿಸೂಚನೆ ಮೂಲಕ ಕೇಂದ್ರ ಸರ್ಕಾರ ಮುಂದಿನ ಐದು ವರ್ಷಗಳ ಕಾಲ ಸಂಘಟನೆಯನ್ನು ನಿಷೇಧ ಮಾಡಿತು! ಸಿಎಎ ವಿರುದ್ಧ ದೇಶದಲ್ಲಿ ಅನವಶ್ಯಕ ಪ್ರತಿಭಟನೆ ವ್ಯಕ್ತವಾಯಿತು, ನೂಪುರ್ ಶರ್ಮ ಟಿವಿ ಡಿಬೇಟ್ ಒಂದರಲ್ಲಿ ಕೊಟ್ಟ ಹೇಳಿಕೆಗೆ ಮೊಹಮ್ಮದ್ ಜುಬೇರ್ ಎಂಬ ಫ್ಯಾಕ್ಟ್ ಚೆಕ್ಕರ್ ಬಳಸಿಕೊಂಡು 'ಸರ್ ತನ್ ಸೆ ಜುದಾ' ಎಂಬುವಷ್ಟರ ಮಟ್ಟಿಗೆ ದೇಶದಾದ್ಯಂತ ಪ್ರತಿಭಟನೆ ವ್ಯಕ್ತವಾಗುವಂತೆ ನೊಡಿಕೊಳ್ಳುವಲ್ಲಿ ಪಿಎಫ್ಐ ಯಶಸ್ವಿಯಾಗಿತ್ತು. ನೆನಪಿಡಿ ಮುಸಲ್ಮಾನರನ್ನು ಧರ್ಮದ ವಿಚಾರದಲ್ಲಿ ಭಡಕಾಯಿಸುವುದು ಸುಲಭ. ಹಾಗಿದಬೇಕಾದರೆ ಪಿಎಫ್ಐ ಮೇಲೆ ದಾಳಿಯಾಗಿ, ನಿಷೇಧ ಮಾಡಿದರೂ ಎಲ್ಲೂ ಯಾವುದೇ ಅಹಿತಕರ ಘಟನೆಯಾಗದಂತೆ ನೋಡಿಕೊಂಡಿರುವ ಯಶ ಕೇಂದ್ರ ಗೃಹ ಇಲಾಖೆಯದ್ದು. ಕೆಲದಿನಗಳ ಹಿಂದೆ ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತರು ಮುಸಲ್ಮಾನ ಮುಖ್ಯಸ್ಥರೊಂದಿಗೆ ಚರ್ಚೆ ಮಾಡಿ ಅವರ ಮನವೊಲಿಸಿದ್ದರು ಎಂಬುದು ವಿಶೇಷ ಸಂಗತಿ.

ಮಜಾ ಎಂದರೆ ವಿರೋಧ ಪಕ್ಷಗಳು ಪಿಎಫ್ಐ ನಿಷೇಧದ ಕ್ರಮ ವಿರುದ್ಧ ಮೌನವಹಿಸಿರುವುದು. ಅವರಿಗೆ ಈ ಪ್ರಕ್ರಿಯೆ ಬಿಸಿ ತುಪ್ಪವಾಗಿದೆ. ಕಾಂಗ್ರೇಸ್, ಕಮ್ಯುನಿಸ್ಟರು, ಸಮಾಜವಾದಿಗಳು, ಜಾತ್ಯಾತೀತ ಎನ್ನಿಸಿಕೊಂಡವರೆಲ್ಲರೂ ಈಗ ಅಕ್ಷರಶಃ ಮೌನಿಯಾಗಿದ್ದಾರೆ. ನಿಷೇಧದ ಪರ ಮಾತಾಡಿದರೇ ಮುಸಲ್ಮಾನರ ಮತಕಳೆದುಕೊಳ್ಳುವ ಭಯ, ವಿರೋಧಿಸಿದರೆ ದೇಶದ್ರೋಹದ ಆರೋಪ! ದೇಶದ ಒಳಿತಿಗಾಗಿ ಯಾವುದೇ ನಿಲುವನ್ನು ತೆಗೆದುಕೊಳ್ಳದಿರುವುದು ದೌರ್ಭಾಗ್ಯದ ಸಂಗತಿ. ಸಿದ್ಧರಾಮಯ್ಯನವರು ದುಃಖ ತಡೆಯಲಾಗದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧಿಸಬೇಕು ಎಂದು ಒಂದು ದಿನ ಕೂಗಾಡಿದರು ಹೊರತು ಯಾವುದೇ ಬೇರೆ ಯಾವ ನಾಯಕರು ಇದರ ಕುರಿತು ಚಕಾರ ಎತ್ತಿಲ್ಲ. ಅವರಿಗೆ ಭಾರತ್ ಜೋಡೋ ಯಾತ್ರೆ ಈಗ ಮುಖ್ಯವಾಗಿದೆ. ಆರ್.ಎಸ್.ಎಸ್ ನ ಆಳ, ಅಗಲ ಅಳೆಯಲು ಹೊರಟವರು ಪಿಎಫ್ಐ ನ ಆಳ, ಅಗಲ, ಸುತ್ತಳತೆ ಬಗ್ಗೆ ಮಾತಾಡುವ ಧೈರ್ಯ ಮಾತ್ರ ತೋರಲಿಲ್ಲ.

Dyavanoor Mahadev during Bharat Jodo Yatra

ನವರಾತ್ರಿ ದುಷ್ಟರನ್ನು ಸಂಹಾರ ಮಾಡುವ ಹಬ್ಬ, ಚಾಮುಂಡೇಶ್ವರಿ ಮಹಿಷಾಸುರನನ್ನು ಕೊಂದ ಹಬ್ಬ. ಹಾಗೆ ಭಾರತದಲ್ಲಿ ಆಂತರಿಕವಾಗಿ ಕಂಟಕವಾಗಿದ್ದ ಪಿಎಫ್ಐ ಅನ್ನುವ ರಾಕ್ಷಸಿ ಸಂಸ್ಥೆಯನ್ನು ನಿಷೇಧ ಮಾಡಿರುವುದು ನಿಜಕ್ಕೂ ನವರಾತ್ರಿ ಹಬ್ಬಕ್ಕೆ ಭಾರತದ ಜನರಿಗೆ ಸಿಕ್ಕ ದೊಡ್ಡ ಉಡುಗೊರೆ. ನರೇಂದ್ರ ಮೋದಿಯವರಿಗೆ ಮತ್ತೊಮ್ಮೆ ಧನ್ಯವಾದಗಳು.

***********************************************************
References:

No comments:

Post a Comment