February 26, 2023

ನಿರ್ಗಮನ

ಮನಸ್ಸಿಗೆ ಒಪ್ಪದ ಬದುಕು ಕರ್ತವ್ಯವಾಗುತ್ತದೆ. ದೇಹ ಕರ್ತವ್ಯಕ್ಕೆ ಒಗ್ಗಿಕೊಳ್ಳುತ್ತಾದರೂ ಮನಸ್ಸು ಬಿಡುಗಡೆಗೆ ಹಾತೊರೆಯುತ್ತಿರುತ್ತದೆ. ಕರ್ತವ್ಯ ಹಾಗೂ ಬಿಡುಗಡೆಯ ಭಾವಗಳ ಸಮ್ಮಿಶ್ರಣದ ಸಂಕ್ಷಿಪ್ತ ಚಿತ್ರಣವಿದು. ಪಾತ್ರಗಳ ಅಂತರಂಗವನ್ನು ಮೀಟಿದ್ದರೆ ಸಣ್ಣದೊಂದು ಕಾದಂಬರಿಯೇ ಮಾಡಬಹುದಿತ್ತುಅದು ನನ್ನ ಶಕ್ತಿಗೆ ಮೀರಿದ ಸಾಹಸ ಎಂದು ಸಣ್ಣ ಕಥೆ ಎಂದೇ ಬರೆದಿದ್ದೇನೆ. ಮೂರನೆ ವ್ಯಕ್ತಿಯ ದೃಷ್ಟಿಯಲ್ಲಿ ಸನ್ನಿವೇಶಗಳನ್ನು ನಿರೂಪಿಸುವ ಪ್ರಯತ್ನವೇ 'ನಿರ್ಗಮನ'.


' "...ಬದುಕನ್ನು ಕರ್ತವ್ಯ ಅಂತಲೇ ಮಾಡು. ಇನ್ನೇನು ಕೇಳಲ್ಲ!..." ಈ ಮಾತನ್ನು ಅಪ್ಪ, ಅಮ್ಮ ನನ್ನ ಬದುಕಲ್ಲಿ ಎರಡು ಸಲ ಹೇಳಿದ್ದರು. ಮದುವೆಗೆ ಮುನ್ನ ಒಂದು ಸಲ ಹಾಗೂ ಭರತ್ ಹುಟ್ಟುವ ಮುನ್ನ ಎರಡನೇ ಸಲ ಹೇಳಿದ್ದರು. ಸುಮಾರು 35 ವರ್ಷಗಳಾಗಿರಬೇಕು ಈ ಮಾತಿಗೆ. ಈಗ ಹತ್ತು-ಹನ್ನೆರಡು ವರ್ಷಗಳ ಹಿಂದೆ 85 ವರ್ಷಗಳ ತುಂಬು ಜೀವನ ನಡೆಸಿ ಅಪ್ಪ, 81 ವರ್ಷದ ಅಮ್ಮ ಹಾರ್ಟ್ ಅಟಾಕ್ ಆಗಿ ತೀರಿಕೊಂಡರು. ಅವರು ಆಗ ಹೇಳಿದ ಮಾತಿಗೆ ಬದ್ಧವಾಗಿ ಇಷ್ಟು ವರ್ಷಗಳು ನಡೆದುಕೊಂಡೆ' ಎಂದು ದೃಢವಾದ ದನಿಯಲ್ಲಿ ರಮೇಶ ತನ್ನ ಸ್ನೇಹಿತ ಅನಂತನಿಗೆ ಹೇಳಿದ. ಬಹಳಷ್ಟು ವರ್ಷಗಳ ನಂತರ ತನ್ನ ಮನಸ್ಸಿನಲ್ಲಿದ್ದ ವಿಚಾರವನ್ನು ಸ್ವಲ್ಪವಾದರೂ ಹೇಳಿದನಲ್ಲ ಎಂಬ ಸಮಾಧಾನ ಒಂದೆಡೆಯಾದರೆ ಎಲ್ಲರನ್ನೂ ಬಿಟ್ಟು ಹೋಗುತ್ತಿದ್ದಾನೆ ತನ್ನ ಸ್ನೇಹಿತ ಎಂಬ ಭಾವ ಮತ್ತೊಂದೆಡೆ. ಈ ಭಾವ, ಖುಷಿಯ ಸಂಗತಿ ಅಂತೂ ಅಲ್ಲ ಹಾಗೇ ಬೇಸರವೂ ಅಲ್ಲ. ತಮ್ಮನ್ನೆಲ್ಲಾ ಬಿಟ್ಟು ಹೋಗುತ್ತಿದ್ದಾನೆ ನಿಜ ಆದರೆ, ಅದು ಅವನಿಗೆ ನೆಮ್ಮದಿ ತರುವಂತಹುದು ಎಂದು ಅನಂತ ಅರ್ಥ ಮಾಡಿಕೊಂಡಿದ್ದ. ಹೌದು, ರಮೇಶ ಹೆಂಡತಿ, ಮಗ, ಸೊಸೆ, ಮೊಮ್ಮಗ, ನಿವೃತ್ತಿ ಜೀವನ, ಸ್ನೇಹಿತರು ಎಲ್ಲವನ್ನು ಬಿಟ್ಟು ತನ್ನವರಾರಿಗೂ ಮತ್ತೆಂದು ಸಿಗದಂತೆ ತನ್ನ ನೆಮ್ಮದಿಯನ್ನು ಅರಸಿ ಹೊರಟು ನಿಂತಿದ್ದ. ಇಲ್ಲಿ ಅವನ ನೆಮ್ಮದಿ ಕೆಡುವಂತಹುದು ಏನಾಗಿದೆ ಎಂದು ಮಾತ್ರ ಯಾರಿಗೂ ತಿಳಿಯದ ವಿಷಯವಾಗಿತ್ತು. ಸ್ವತಃ ರಮೇಶನಿಗೆ ಈ ವಿಚಾರದಲ್ಲಿ ಸ್ಪಷ್ಟತೆ ಇಲ್ಲ ಎಂಬುದು ಅವರ ಮನೆಯವರ ಅಭಿಪ್ರಾಯವಾದರೂ ವಾಸ್ತವವಾಗಿ ಹಾಗಿರಲಿಲ್ಲ. ರಮೇಶನಿಗೆ ತನ್ನ ಸುತ್ತಲೂ ಇದ್ದ ಸಂಬಂಧಗಳ ಬೇಡಿಗಳನ್ನು ಕಳಚಿಕೊಂಡು ಒಬ್ಬಂಟಿಯಾಗಿ ದೂರ ಹೋಗಿ, ತಾನಾಯಿತು ತನ್ನ ಧ್ಯಾನ, ಓದು ಹಾಗೂ ಸಾಧ್ಯವಾದಷ್ಟು ಪರ್ಯಾಟನೆ ಮಾಡಬೇಕು ಎಂಬದು ಅವನ ಸ್ಪಷ್ಟ ನಿಲುವಾಗಿತ್ತು. ಆದರೆ, ಈ ವಿಚಾರವನ್ನು ಯಾರೊಂದಿಗೂ ಹೇಳಿರಲಿಲ್ಲ ಅಷ್ಟೇ. ಈ ಏಕಾಂತ ಭಾವ ಯಾಕೆ ಎಂಬುದನ್ನು ಕೇಳಿದಾಗ ರಮೇಶ ಕಾರಣ ಹೇಳಲಿಲ್ಲ. ತಂದೆ ತಾಯಿ ತನಗೆ ಹೇಳಿದ್ದ ಮಾತು - 'ಆಯ್ತು ಬದುಕನ್ನು ಕರ್ತವ್ಯ ಅಂತಲೇ ಮಾಡು. ಇನ್ನೇನು ಕೇಳಲ್ಲ...! ' ಎಂದು ಅಸಮಾಧಾನದಿಂದ ಹೇಳಿ ತನ್ನ ಪಾಲಿನ ಟೀ ಕುಡಿಯುತ್ತಾ ಕೂತ ರಮೇಶ

ಏಕಾಂತವನ್ನು ಬಯಸುವ ರಮೇಶನಗೆ ಮೌನ ಸಹನೀಯ ಆದರೆ ಅನಂತನಿಗೆ ಅದು ಸಲ್ಲ. ಮೌನ ಮುರಿಯಲೆಂದೇ ಪ್ರಶ್ನೆಯನ್ನು ಮುಂದಿಟ್ಟ 'ಯಾವಾಗ ಹೊರಡಬೇಕು ಅಂತ ಇದ್ಯಾ?'

'ಇನ್ನು ಒಂದು ವಾರದ ಒಳಗೆ ಹೊರಡೋಣ ಅಂತ. ಮನೆಯಲ್ಲೂ ಸಹ ಈಗಾಗಲೇ ತಿಳಿಸಿದ್ದೇನೆ.'

'ಮನೆಯಲ್ಲಿ ಒಪ್ಪಿದ್ದಾರ? '

'ಇಲ್ಲ, ಒಪ್ಪಿಲ್ಲ'

'ಮತ್ತೆ...? '

'ಇಷ್ಟು ವರ್ಷ ನನ್ನ ಮನಸ್ಸು ಒಪ್ಪದಿದ್ದರೂ ಕರ್ತವ್ಯ ಎಂದುಕೊಂಡು, ಅಪ್ಪ ಅಮ್ಮ ಹೇಳಿದಂತೆ ಬದುಕು ನಡೆಸಿದ್ದೇನೆ. ಅವರೇ ಹೇಳಿದಂತೆ ಕರ್ತವ್ಯಗಳನ್ನು ಮುಗಿಸಿದ್ದೇನೆ. ಅಪ್ಪ ಅಮ್ಮ ಹೋದರು, ಮಗನ ಮದುವೆ ಆಗಿ ಈಗ ಮೊಮ್ಮಗ ಸಹ ಇದ್ದಾನೆ. ಮನೆಯ ಜವಾಬ್ದಾರಿಯನ್ನು ಮಗನಿಗೆ ಒಪ್ಪಿಸಿಯಾಗಿದೆ. ಈಗಲಾದರೂ ನನ್ನ ಬದುಕನ್ನು ನನ್ನ ಮನಸ್ಸು ಒಪ್ಪುವಂತೆ ಬದುಕಲು ತೀರ್ಮಾನಿಸಿದ್ದೇನೆ. '

'ಅದು ಸರಿ ಆದರೆ... ನಿನ್ನ ಹೆಂಡತಿ ಸುಷ್ಮಾ? '

'ಇಷ್ಟು ವರ್ಷ ಕರ್ತವ್ಯದಂತೆ ಸಂಸಾರ ಮಾಡಿದೆ, ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಇನ್ನು ಮುಂದೆ ಅವಳ ಜವಾಬ್ದಾರಿ ಅವಳ ಮಗನದು. ನನ್ನ ದಾರಿ ನನಗೆ. '    

ತಾನು ಗಳಿಸಿದ ಆಸ್ತಿಯನ್ನು ಹೆಂಡತಿಯ ಹೆಸರಿಗೆ ಬರೆದು ಆಕೆಯ ನಂತರ ಮಗನಿಗೆ ಹೋಗುವಂತೆ ವಿಲ್ ಬರೆದಿಟ್ಟಿದ್ದ ರಮೇಶ. ಆಸ್ತಿಯ ವಿಚಾರ ಮನಸ್ಸಿಗೆ ಬಂತಾದರೂ ಸ್ನೇಹಿತನಿಗೆ ಹೇಳಲಿಲ್ಲ. ಉತ್ತರ ಸ್ಪಷ್ಟ ಹಾಗೂ ದೃಢವಾಗಿತ್ತು. ಮುಂದೆ ಏನು ಹೇಳಲು ತೋಚದೆ ರಮೇಶನನ್ನು ಬೇಸರದಿಂದ ನೋಡುತ್ತಾನೆ ಅನಂತ. ಟೀ ಮುಗಿದ ನಂತರ 'ಸಂಜೆ 6:00 ಆಯ್ತು, ಮೋಡ ಬೇರೆ ಇದೆ, ಹೊರಡೋದಾ?' ಎಂದು ರಮೇಶ ಕೇಳುತ್ತಾನೆ. ಒಲ್ಲದ ಮನಸ್ಸಿನಿಂದ 'ಹ್ಮ್' ಎನ್ನುತ್ತಾ ಇಬ್ಬರು ಹೊರಡುತ್ತಾರೆ. ಸುಮಾರು 30 ವರ್ಷಗಳ ಸ್ನೇಹಿತನನ್ನು ಈ ರೀತಿ ಬೀಳ್ಕೊಡಲು ಅನಂತನಿಗೆ ಮನಸ್ಸಿರಲಿಲ್ಲ. ಇಷ್ಟು ವರ್ಷಗಳ ಕಾಲ ಸ್ನೇಹಿತನಾಗಿದ್ದರೂ ರಮೇಶ ಕೆಲವು ದಿನಗಳಿಂದ ನಿಗೂಢ ವ್ಯಕ್ತಿಯಾಗಿದ್ದ. ಹೋಟೆಲಿನಿಂದ ಮನೆಕಡೆಗೆ ಸ್ನೇಹಿತರಿಬ್ಬರು ಮೌನವಾಗಿಯೇ ಹೆಜ್ಜೆ ಹಾಕುತ್ತಾರೆ. ತಮ್ಮ ಮನೆಗಳಿಗೆ ತೆರಳುವ ಕವಲುದಾರಿ ಎದುರಾದಾಗ 'ಇಷ್ಟು ದಿವಸ ಇಬ್ಬರ ಮನೆಯ ದಾರಿಯೂ ಬೇರೆಯಾಗಿತ್ತು ಈಗ ಬದುಕಿನ ದಾರಿಯೂ ಬೇರೆ' ಎಂಬ ಭಾವ ಅನಂತನನ್ನು ಆವರಿಸಿಸುತ್ತದೆ. ಮುಂದಿನ ನಡೆ ಸ್ಪಷ್ಟವಾಗಿತ್ತು ಆದರೆ, ಕಾರಣ ನಿಗೂಢ. ಯಾವುದೇ ಪರಿಸ್ಥಿತಿಯಲ್ಲಿ ಸಲುಗೆಯಿಂದ ಮಾತಾಡುವ ಹಕ್ಕು ಸ್ನೇಹಿತರಿಗೆ ಮಾತ್ರ. ಅದರಂತೆ 'ರಮೇಶ, ಕಡೆಯದಾಗಿ ಕೇಳುತಿದ್ದೇನೆ, ಯಾಕೀ ನಿರ್ಧಾರ? ಇಲ್ಲಿ ನೆಮ್ಮದಿ ಇಲ್ಲ ಅನ್ನಲು ಕಾರಣ ಏನೋ? '

ರಮೇಶ ಐದು ಕ್ಷಣ ಸುಮ್ಮನಿದ್ದು ಒಂದು ನಿಟ್ಟುಸಿರು ಬಿಟ್ಟು, 'ಸರಿ ಬಾ... ಪಾರ್ಕಿಗೆ ಹೋಗಿ ಮಾತಾಡುವ' ಎಂದು ಮನೆಯವರಿಗೆ ತಡವಾಗಿ ಬರುತ್ತೇವೆಂದು ಫೋನ್ ಮಾಡಿ ತಿಳಿಸಿ ಇಬ್ಬರೂ ಬೆಳಗ್ಗೆ ವಾಕಿಂಗ್ ಎಂದು ಹೋಗುತ್ತಿದ್ದ ಪಾರ್ಕಿನ ಕಡೆ ಹೆಜ್ಜೆ ಹಾಕುತ್ತಾರೆ.

***************************************

ಅಂತರ್ಮುಖಿ ವ್ಯಕ್ತಿತ್ವದವರು ಹೆಚ್ಚು ಮಾತಾಡುವುದಿಲ್ಲ ಅನ್ನುತ್ತಾರೆ. ಆದರೆ, ರಮೇಶ ಹಾಗಿರಲಿಲ್ಲ. ಅವನು ಅಂತರ್ಮುಖಿ ಆಗಿದ್ದರೂ ಎಲ್ಲರೊಟ್ಟಿಗೆ ಬೆರೆಯುತ್ತಿದ್ದ, ಅಗತ್ಯಕ್ಕೆ ತಕ್ಕಂತೆ ಎಷ್ಟು ಬೇಕೋ ಅಷ್ಟು ಮಾತ್ರ ಮಾತಾಡುತ್ತಿದ್ದ. ಆದರೆ, ಅವನ ಮನಸ್ಸಿನ ಮಾತಾಗಲಿ ಆಂತರ್ಯದ ಯೋಚನಾ ಲಹರಿಯಾಗಲಿ ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ಅದೊಂದು ದಿನ ಮನೆಯಲ್ಲಿ ರಮೇಶನ ಮದುವೆ ಕುರಿತು ಮಾತು ಶುರುವಾಯಿತು. ಅಪ್ಪ ಅಮ್ಮನ ಮಾತುಗಳನ್ನು ಶಾಂತವಾಗೇ ಆಲಿಸುತ್ತಿದ್ದ. ಕಡೆಗೆ ರಮೇಶನ ಅಭಿಪ್ರಾಯ ಕೇಳಿದಾಗ 'ನನಗೆ ಮದುವೆ ಇಷ್ಟವಿಲ್ಲ. ಈ ರೀತಿ ಹುಡುಗಿ ಹುಡುಕುವ ವ್ಯರ್ಥ ಪ್ರಯತ್ನ ಮಾಡಬೇಡಿ' ಎಂದಷ್ಟೇ ಹೇಳಿ ತಂದೆ ತಾಯಂದಿರ ಪ್ರತಿಕ್ರಿಯೆಗೂ ಕಾಯದೆ ತನ್ನ ಕೋಣೆಗೆ ಹೋಗುತ್ತಾನೆ. ಎಂದೂ ಸಹ ಹೀಗೆ ನಡೆದುಕೊಳ್ಳದ ರಮೇಶನ ಈ ನಡವಳಿಕೆ ಕಂಡು ಅವನ ತಂದೆ ತಾಯಂದರಿಗೆ ಆಶ್ಚರ್ಯ ಹಾಗೂ ಕೋಪವೂ ಬರುತ್ತದೆ. ತಂದೆ ಸಮಾಧಾನ ತಂದುಕೊಂಡು 'ಆಲ್ ಒಫ್ ದಿ ಸಡನ್ ಮದುವೆ ವಿಚಾರ ಮಾತಾಡಿದರೆ ಅವನಿಗೆ ಸರಿ ತೋರದಿರಬಹುದು. ಈಗ ಮಲಗುವ ಹೊತ್ತು ಬೇರೆ, ನಾಳೆ ಸಂಜೆ ಆರಾಮಾಗೆ ಕೂತು ಮಾತಾಡುವ' ಎಂದು ಹೇಳಿ ಮಲಗುತ್ತಾರೆ.

ಮಾರನೆ ದಿವಸ ಹಾಗು ಮತ್ತೂ ಕೆಲವು ಬಾರಿ ಮದುವೆ ವಿಚಾರವಾಗಿ ಮಾತಾಡಿದಾಗ ರಮೇಶನ ಪ್ರತಿಕ್ರಿಯೆ ನಕಾರಾತ್ಮಕವಾಗೆ ಇತ್ತು. ಯವಾಗಲೂ ಅಲ್ಪ ಹಾಗೂ ಮೃದು ಭಾಷಿಯಾಗಿದ್ದ ರಮೇಶ ಮದುವೆ ವಿಚಾರ ಎಂದೊಡೆ ಅಪ್ಪ ಅಮ್ಮನೊಂದಿಗಲ್ಲದೆ ಎಲ್ಲರೊಂದಿಗೆ ಒರಟಾಗುತ್ತಿದ್ದ, ಆದಷ್ಟು ಬೇಗ ಮಾತು ಬದಲಾಯಿಸುತ್ತಿದ್ದ ಇಲ್ಲವೇ ಮಾತು ನಡೆಯುತ್ತಿದ್ದ ಜಾಗದಿಂದ ಎದ್ದು ಹೊರಡುತ್ತಿದ್ದ. ಈ ವಿಚಾರವಾಗಿಯೇ ಮನೆಯಲ್ಲಿ ಅನೇಕ ಬಾರಿ ಮನಸ್ತಾಪ ಉಂಟಾಗುತ್ತಿತ್ತು. ರಮೇಶನ ಸ್ವಭಾವ ತಿಳಿದು ಅಪ್ಪ ಹೆಚ್ಚು ಮತಾಡುತ್ತಿರಲಿಲ್ಲ, ಆದರೆ, ಅಮ್ಮ ಭಾವೋದ್ವೇಗಕ್ಕೆ ಒಳಗಾಗಿ ಹೆಚ್ಚು ಮಾತಾಡುತ್ತಿದ್ದಳು. ಪ್ರತಿ ಬಾರಿಯೂ ಮಾತಿನಿಂದ ಶುರುವಾಗಿ ಬೈಗುಳ ಹಾಗೂ ಅವಳ ಕಣ್ಣೀರಿನಿಂದ ಕೊನೆಯಾಗುತ್ತಿತ್ತು. ಈ ಒಂದು ವಿಚಾರದಲ್ಲಿ ಮಾತ್ರ ರಮೇಶ ಅಪ್ಪ ಅಮ್ಮ ಹಾಗೂ ಸಂಬಂಧಿಕರೊಂದಿಗೆ ಅವಿಧೇಯನಾಗಿದ್ದ. ಅಮ್ಮ ಪದೆ ಪದೆ ಮದುವೆಯ ಕುರಿತು ಮಾತಾಡಲು ಪ್ರಾರಂಭಿಸಿದ ನಂತರ ರಮೇಶ ಬಹುತೇಕ ಮೌನಕ್ಕೆ ಶರಣಾದ.

ಅದೊಂದು ದಿವಸ ರಾತ್ರಿ ಊಟ ಮಾಡಬೇಕಾದರೆ ಮದುವೆ ವಿಚಾರವಾಗಿ ಅಮ್ಮ ಕೋಪಿಸಿಕೊಂಡು ಮದುವೆ ಬೇಡ ಅನ್ನಲು ಕಾರಣ ಕೇಳುತ್ತಾಳೆ. ಶಾಂತವಾಗಿದ್ದ ರಮೇಶನ ಮುಖ ಈ ಪ್ರಶ್ನೆ ಕೇಳಿ ಅಸಮಾಧಾನದಿಂದ ಬಿಳಿಚುಕೊಂಡಿತು. 'ನಾನು ಊಟ ಮಾಡೋದು ಸಹ ಇಷ್ಟವಿಲ್ಲ ಅಂದರೆ ಹೇಳು' ಎಂದು ಹೇಳಿ ಊಟವನ್ನು ಸಹ ಅರ್ಧಕ್ಕೆ ನಿಲ್ಲಿಸಿ ಕೈತೊಳೆದು ಮಲಗಲು ತೆರಳುತ್ತಾನೆ. ಈ ಮಟ್ಟದ ಒರಟುತನವನ್ನು ರಮೇಶ ಎಂದೂ ತೋರಿರಲಿಲ್ಲ. ಇದನ್ನು ನೋಡಿ ಅಮ್ಮನಿಗೆ ಮತ್ತಷ್ಟು ಕೋಪ ಬಂದು ಬೈಯ್ಯಲು ಪ್ರಾರಂಭಿಸುತ್ತಾಳೆ. ಅಪ್ಪನಿಗೆ ಬೇಸರ, ಆಶ್ಚರ್ಯವಾಗಿ 'ಅವನಿಗೆ ಇಷ್ಟವಿಲ್ಲ ಎಂದರೆ ಬಲವಂತ ಮಾಡಬೇಡ' ಎಂದು ಹೆಂಡತಿಯನ್ನು ಸಮಾಧಾನ ಮಾಡುತ್ತಾರೆ. ಅಂದಿನಿಂದ ಮನೆಯಲ್ಲಿ ರಮೇಶನ ಮದುವೆ ಬಗೆಗಿನ ಮಾತು ಕಮ್ಮಿಯಾದರೂ ಅವನ ಒರಟುತನ, ಅಮ್ಮನ ಕಾಳಜಿ, ಕೋಪವಾಗಲಿ ಕಡಿಮೆಯಾಗಲಿಲ್ಲ.

'ಅಪ್ಪನ ಸ್ನೇಹಿತ ಮಗನ ಮದುವೆ ನನ್ನ ಬದುಕನ್ನು ಬದಲಾಯಿಸಿತು!'. ಹೌದು, ಕೇಳಲು ವಿಚಿತ್ರವಾದರೂ ರಮೇಶನ ಬದುಕಿನ ಸತ್ಯ ಅದೇ ಆಗಿತ್ತು. ಅಪ್ಪನ ಸ್ನೇಹಿತನ ಮಗನ ಮದುವೆಗೆ ಮನೆಯವರೆಲ್ಲಾ ಹೋಗಿದ್ದರು. ಮದುವೆಯ ಸಂಭ್ರಮದಲ್ಲಿ ಎಲ್ಲರೂ ಮುಳುಗಿದ್ದರೂ ಅಮ್ಮನ ಮುಖ ಸಪ್ಪೆಯಾಗಿತ್ತು. ಅವಳು ನೋಡಬಯಸಿದ್ದು ಮದುಮಗನ ಸ್ಥಾನದಲ್ಲಿ ತನ್ನ ಮಗನನ್ನು. ಇದ್ದ ಕೆಲವು ಪರಿಚಯಸ್ಥರು 'ರಮೇಶನ ಮದುವೆ ಯಾವಾಗ?' ಎಂಬ ಪ್ರಶ್ನೆ ಕೇಳಿದ ಮೇಲೆ ಅಮ್ಮನ ಮನಸ್ಸು ಕಳೆದುಹೋಯಿತು. ಅಪ್ಪನ ಮನಸ್ಸು ಸಹ ದುಃಖದಿಂದ ಆವರಿಸಿತ್ತಾದರೂ ಅವರು ತೋರಿಸಿಕೊಳ್ಳುತ್ತಿರಲಿಲ್ಲ. ಮನೆಗೆ ಬರುವಷ್ಟರಲ್ಲಿ ರಾತ್ರಿ ಒಂಬತ್ತು. ಮನೆ, ಮನಸ್ಸು ಎರಡೂ ಮೌನವಾಗಿತ್ತು. ಪ್ರಯತ್ನಪೂರ್ವಕವಾಗಿ ತಡೆದಿದ್ದ ಅಮ್ಮನ ದುಃಖ ಹಾಗೂ ಕೋಪ ಆಕ್ರೋಶವಾಗಿ ಹೊರಗೆ ಬಂತು. ತನ್ನ ಕೋಣೆಗೆ ಹೋಗುತ್ತಿದ್ದ ರಮೇಶನನ್ನು ನಿಲ್ಲಲು ಹೇಳಿ, ತನ್ನ ಅಷ್ಟೂ ದಿನದ ಕೋಪ, ದುಃಖವನ್ನು ಹೊರಹಾಕುತ್ತಾಳೆ. ಅಪ್ಪ ತಡೆಯಲು ಬರುತ್ತಾರಾದರೂ ಯಾವುದೇ ಪ್ರಯೋಜನ ಆಗುವುದಿಲ್ಲ. ಅಮ್ಮನ ಕೋಪ ರಮೇಶ ನಿರೀಕ್ಷಿಸಿದ್ದ ಆದರೆ, ಆಕೆಯ ದುಃಖ ಆತನ ನಿರೀಕ್ಷೆಗೂ ಮೀರಿದ್ದಾಗಿತ್ತು. ಮಾತು ಮುಂದುವರೆಸುತ್ತಾ ಗಂಟಲು ಒಣಗಿ ಅಮ್ಮ ಬಿಕ್ಕಳಿಸಲು ಪ್ರಾರಂಭಿಸುತ್ತಾಳೆ.  ನೀರು ಕೊಡಲು ಮುಂದಾದ ಗಂಡನನ್ನು ಬಿಕ್ಕಳಿಸುತ್ತಲೇ ದೂರ ನಿಲ್ಲುವಂತೆ ಕೈಸನ್ನೆ ಮಾಡಿ ಮಗನೆಡೆಗೆ 'ಮದುವೆಗೆ ಒಪ್ಪು' ಎಂದು ಬೇಡುವಂತೆ ದೃಷ್ಟಿ ಹಾಯಿಸುತ್ತಾಳೆ. ಎಂದೂ ತನ್ನ ತಾಯಿಯನ್ನು ಅಂತಹ ಸ್ಥಿತಿಯಲ್ಲಿ ನೋಡ ಬಯಸದ ರಮೇಶನನ್ನು ಆ ನೋಟ ಸಂಪೂರ್ಣ ಕರಗಿಸುತ್ತದೆ. ಅಮ್ಮನ ಬಳಿ ತೆರಳಿ, ನೀರು ಕುಡಿಸಿ ಅವಳನ್ನು ಸಂತೈಸುತ್ತಾನೆ. ಅಮ್ಮನ ಬೆನ್ನು ಹಾಗೂ ನೆತ್ತಿ ಸವರುತ್ತಾ ಸೋಫಾ ಮೇಲೆ ಕೂರಿಸಿ ಅವಳ ಮಾತು ಕೇಳುತ್ತೇನೆ ಎನ್ನುವಂತೆ ಕಣ್ಣಲ್ಲೇ ಭರವಸೆ ನೀಡುತ್ತಾನೆ.  

ಮುಖದ ಮೇಲೆ ವ್ಯಕ್ತವಾದ ಒಪ್ಪಿಗೆಯ ಆ ಭಾವ ಅಮ್ಮನಿಗೆ ಶಕ್ತಿ ತುಂಬುತ್ತದೆ. ಮಾತಾಡಲು ಮುಂದಾದ ಅಮ್ಮನನ್ನು ಅಪ್ಪ ಮಗ ಇಬ್ಬರೂ ತಡೆದು 'ಏನೇ ಮಾತಾಡುವುದಾದರೂ ಬೆಳಗ್ಗೆ ಮಾತಾಡೋಣ' ಎಂದು ಹೇಳುತ್ತಾರೆ. ಒಪ್ಪದ ಅಮ್ಮ 'ಇಲ್ಲ ನೀನು ಮದುವೆ ಆಗಲೇಬೇಕು ಹಾಗೆಂದು ಮಾತು ಕೊಡು' ಎಂದು ಮಗನನ್ನು ಅಧಿಕಾರಾಯುತವಾಗಿ ಕೇಳುತ್ತಾಳೆ. ಅಮ್ಮನಿಗೆ ಇಲ್ಲ ಎನ್ನುವುದಕ್ಕಾಗಲಿ, ಅವಳ ಮಾತನ್ನು ಒಪ್ಪುವುದಕ್ಕಾಗಲಿ ರಮೇಶನಿಗೆ ಆಗದೇ ಏನು ಪ್ರತಿಕ್ರಯಿಸದೇ ಸುಮ್ಮನಾಗುತ್ತಾನೆ. ಅಮ್ಮನ ತಲೆ ಸವರುತ್ತಿದ್ದ ಕೈ ತಾನಾಗೆ ಹಿಂಬರುತ್ತದೆ. ಮಗನ ಮೌನದಿಂದ ಉದ್ರಿಕ್ತಗೊಂಡ ತಾಯಿ 'ನಿನ್ನನ್ನು ಸಾಕಿ, ಸಲಹಿ ದೊಡ್ಡವನನ್ನಾಗಿ ಮಾಡಿದ್ದೇವೆ. ಪ್ರೀತಿ, ಮಮತೆ ವಾತ್ಸಲ್ಯವನ್ನು ಧಾರೆ ಎರೆದಿದ್ದೇವೆ. ಪ್ರೀತಿಗೋಸ್ಕರ ಅಲ್ಲದಿದ್ದರೂ ಬದುಕನ್ನು ಕರ್ತವ್ಯ ಅಂತಲೇ ಮಾಡು. ಇನ್ನೇನು ಕೇಳಲ್ಲ, ಮದುವೆ ಮಾಡಿಕೋ.ಎಂದು ಒಂದೇ ಉಸಿರಿನಲ್ಲಿ ಹೇಳುತ್ತಾಳೆ. ಅರ್ಧ ನಿಮಿಷ ಮೌನವಾಗಿದ್ದು ಒಮ್ಮೆಲೆ ನಿಟ್ಟುಸಿರು ಬಿಟ್ಟು ಅಪ್ಪನನ್ನು ನೋಡಿ, ಅಮ್ಮನ ಕಡೆಗೆ ತಿರುಗಿ 'ಸರಿ ಮದುವೆ ಆಗುತ್ತೇನೆ. ನೀನು ಹೇಳಿದ ಹಾಗೆ ಆಗಲಿ' ಎನ್ನುತ್ತಾನೆ. ಅಮ್ಮ ಅಪ್ಪನ ಸಂತೋಷಕ್ಕೆ ಮಿತಿ ಇರಲ್ಲಿಲ್ಲ. ರಮೇಶನ ಒಪ್ಪಿಗೆ ಒಂದೇ ಕ್ಷಣದಲ್ಲಿ ಅವರ ಮುಖದ ಮೇಲೆ ನೆಮ್ಮದಿಯ ಭಾವ ತಂದಿತ್ತು. ಸಂತೋಷಕ್ಕೆ ಅಮ್ಮನ ಕಣ್ಣುಗಳು ಒದ್ದೆ ಆದವು, ಮುಖದಲ್ಲಿ ಯುದ್ಧವನ್ನು ಗೆದ್ದ ಸಂಭ್ರಮವಿತ್ತು. ಅಪ್ಪ ಮಗನ ತಲೆ ಸವರಿದರೆ, ಅಮ್ಮ ಮಗನ ಕೆನ್ನೆ ಸವರುತ್ತಾ ಭುಜದ ಮೇಲೆ ತಲೆ ಇಟ್ಟಳು. 'ಇದಾದ ಆರೇಳು ತಿಂಗಳಲ್ಲಿ ನನ್ನ ಮದುವೆ ಆಗಿ ಸುಷ್ಮಾ ನನ್ನ ಬದುಕಿಗೆ ಬಂದಳು.' ಎಂದು 35 ವರ್ಷಗಳ ಹಿಂದಿನ ಘಟನೆಗಳನ್ನು ಹೇಳುವಾಗ ರಮೇಶನ ಮುಖದಲ್ಲಿದ್ದದ್ದು ನಿರ್ಲಿಪ್ತ ಶೂನ್ಯ ಭಾವ ಮಾತ್ರ!

***************************************

ಮದುವೆಗೆ ಒಪ್ಪಿ ವೈವಾಹಿಕ ಜೀವನ ಶುರುವಾಗಿತ್ತು, ರಮೇಶನ ಪಾಲಿಕೆ ಬದುಕು ಕರ್ತವ್ಯವಾಗಿತ್ತು. ಅವನಲ್ಲಿ ಭಾವನೆಗಳು ಸಹಜತೆ ಕಳೆದುಕೊಂಡಿದ್ದವು. ದೇಹ ಮತ್ತು ಮನಸ್ಸು ಕಲೆತಿರಲಿಲ್ಲ. ದೇಹದ ಬಯಕೆ ಎಂಬ ಹಸಿವು ಹೆಂಡತಿಯ ಕಾರಣದಿಂದ ತೀರುತ್ತಿತ್ತು. ಆದರೆ, ಮನಸ್ಸು ಪಂಜರದಲ್ಲಿ ಸಿಕ್ಕ ಹಕ್ಕಿಯಾಗಿತ್ತು. ಸಂಗಾತಿಯ ಭಾವನೆಗಳಿಗೆ ಸ್ಪಂದನೆಯ ಪ್ರಯತ್ನವಿತ್ತಾದರೂ ಅದು ಪ್ರತಿಸ್ಪಂದನೆ ಆಗಿರಲ್ಲಿಲ್ಲ. ಸುಷ್ಮಾ ಸೂಕ್ಷ ಮನಸ್ಸಿನ ಹುಡುಗಿ. ಈ ಶತಮಾನದ ಸಮಾಜ ಎಷ್ಟೇ ಆಧುನಿಕವಾದರೂ ಸಂಸಾರದ ಗುಟ್ಟನ್ನು ಕಾಪಾಡಿಕೊಂಡು ತಾಳ್ಮೆಯಿಂದ ಬದುಕನ್ನು ನಡೆಸುವ ಹೆಣ್ತನ ಅವಳಲ್ಲಿತ್ತು. ಗಂಡ ಕೆಟ್ಟವನಲ್ಲ, ಸುಳ್ಳು, ಕಪಟ ಗೊತ್ತಿಲ್ಲ ಜೊತೆಗೆ, ಆತ ಸಂಸಾರಿಯೂ ಆಗಿರಲಿಲ್ಲ. ತನ್ನಿಂದಾಗಿ ಇನ್ನೊಬ್ಬರ ಬದುಕು ಹಾಳಾಗಬಾರದು ಎಂದು ರಮೇಶ ಮಾಡುತ್ತಿದ್ದ ಪ್ರಯತ್ನವನ್ನು ಸುಷ್ಮಾ ಅರ್ಥೈಸಿಕೊಂಡಿದ್ದಳು. ಕೆಲವು ಬಾರಿ ರಮೇಶನ ಮನಸ್ಥಿತಿ ಹಾಗೂ ಅದರ ಹಿಂದಿನ ಕಾರಣ ತಿಳಿಯಲು ಪ್ರಯತ್ನಿಸಿದಳಾದರೂ ಅದು ಸಾಧ್ಯವಾಗಲಿಲ್ಲ. ಹೊರ ಜಗತ್ತಿಗೆ ಇವರ ದಾಂಪತ್ಯ ಅನ್ಯೋನ್ಯ ಅನ್ನಿಸಿದರೂ ವಾಸ್ತವದಲ್ಲಿ ಇರಲಿಲ್ಲ.

ಮದುವೆಯಾಗಿ ಮೂರು ವರ್ಷಗಳಾದರೂ ಮಕ್ಕಳಾಗಲಿಲ್ಲ ಎಂಬುದು ರಮೇಶನ ಬದುಕಿನಲ್ಲಿ ಮುಂದಿನ ಗಂಭೀರ ವಿಷಯವಾಗಿತ್ತು. ಮೊಮ್ಮಕ್ಕಳ ಬಯಕೆ ತಂದೆ ತಾಯಿಯರಿಬ್ಬರಿಗೂ ಇತ್ತಾದರೂ ಮಗನ ಸ್ವಭಾವವನ್ನು ಅರ್ಥ ಮಾಡಿಕೊಂಡಿದ್ದ ಅಪ್ಪ ಈ ಕುರಿತು ಮಗ ಅಥವಾ ಸೊಸೆ ಬಳಿ ಮಾತಾಡಿರರಿಲ್ಲ. ಈ ವಿಚಾರದಲ್ಲಿ ಹೆಂಗಸರೇ ಅದೃಷ್ಟವಂತರು. ಮನಸ್ಸಿಗೆ ಬಂದ ವಿಚಾರವನ್ನು ಹೇಳಿ ಬಿಡುತ್ತಾರೆ. ಮಗನ ಬಳಿ ಅಲ್ಲದಿದ್ದರೂ ಸೊಸೆಯ ಬಳಿ ಮೊಮ್ಮಕ್ಕಳ ವಿಚಾರವನ್ನು ಅಮ್ಮ ಪ್ರಸ್ತಾಪ ಮಾಡಿದ್ದಳು. ರಾತ್ರಿ ಕೆಲಸ ಮುಗಿಸಿ ಮಲಗುವ ಮುನ್ನ ಸುಷ್ಮಾ ಮಕ್ಕಳ ವಿಚಾರವನ್ನು ಸಹಜವಾದ ನಾಚಿಕೆಯಿಂದಲೇ ಪ್ರಸ್ತಾಪಿಸುತ್ತಾಳೆ. ರಮೇಶ 'ಇನ್ನೊಂದಷ್ಟು ದಿನಗಳಾಗಲಿ' ಎಂದಷ್ಟೇ ಪ್ರತಿಕ್ರಯಿಸುತ್ತಾನೆ. ಹೆಣ್ಣು ಮಕ್ಕಳಿಗೆ ತಾಯಾಗಬೇಕೆಂಬ ಬಯಕೆ  ಪ್ರಕೃತಿ ಸಹಜವಾದದ್ದು. ಅದೇ ಭಾವದಲ್ಲಿ ಮತ್ತೆರಡು ಬಾರಿ ಸುಷ್ಮಾ ತನ್ನ ಬಯಕೆಯನ್ನು ಗಂಡನೊಂದಿಗೆ ವ್ಯಕ್ತಪಡಿಸುತ್ತಾಳೆ. ಹೆಂಡತಿಯ ಬಯಕೆಗೆ ನಕಾರಾತ್ಮಕವಾಗಿ ಪ್ರತಿಕ್ರಯಿಸುವ ಇಚ್ಛೆ ಇಲ್ಲದೇ ಈ ವಿಚಾರದಲ್ಲಿ ರಮೇಶ ಮೌನಿಯಾಗಿತ್ತಾನೆ. ತಾಯ್ತವೆಂಬುದು ಹೆಣ್ಣಿಗೆ ಉಕ್ಕಿಬರುವ ಸಹಜ ಬಯಕೆ. ವಾಸ್ತವದ ಬದುಕು ಬುದ್ಧಿಗೆ ಅರಿವಿದ್ದರೂ ಮನಸ್ಸು ಬಯಕೆಗಳನ್ನು ತೀರಿಸಿಕೊಳ್ಳಲು ಹಂಬಲಿಸುತ್ತಿರುತ್ತದೆ. ದಿನೇ ದಿನೇ ಸುಷ್ಮಾಳಿಗೂ ತಾಯಾಗಬೇಕೆಂಬ ಬಯಕೆ ಬಲಿಯುತ್ತಿತ್ತು. ಆದರೆ, ರಮೇಶನ ಮನಸ್ಸು ಇದಕ್ಕೆ ಪೂರಕವಾಗಿರಲಿಲ್ಲ. ಸೊಸೆಯನ್ನು ಪ್ರೀತಿಯಿಂದ ಕಾಣುತ್ತಿದ್ದ ಅತ್ತೆ, ಮಾವ ಹಾಗೂ ತನ್ನ ತಾಯಿಯೊಂದಿಗೆ ಸುಷ್ಮಾ ದಾಂಪತ್ಯದ ವಾಸ್ತವ ಹಾಗೂ ಮಕ್ಕಳ ಬಯಕೆಯನ್ನು ಸೂಕ್ಷ್ಮವಾಗಿ ತಿಳಿಸುತ್ತಾಳೆ. ಸೊಸೆಯ ಮನಸ್ಸನ್ನು ಅರ್ಥೈಸಿಕೊಂಡ ಮಾವ ತಾನು ಮಾತಾಡುವುದಾಗಿ ತಿಳಿಸಿ, ತನ್ನ ಹೆಂಡತಿ ಮತ್ತು ಬೀಗತಿಯರಿಗೆ ಈ ವಿಚಾರವನ್ನು ತನಗೆ ಬಿಡಿ ಎಂದು ಮನವರಿಕೆ ಮಾಡುತ್ತಾನೆ.

'ನಿನಗೆ ಇಷ್ಟ ಇತ್ತೋ ಇಲ್ಲವೋ ಮದುವೆ ಅಂತೂ ಆಯ್ತು. ಈಗ ಹಿಂತಿರುಗುವ ಮಾತಿಲ್ಲ. ಮದುವೆ ಆದ ಮೇಲೆ ಮಕ್ಕಳು ಮರಿ ಆಗಬೇಕು. ಇದು ಭಾವನಾತ್ಮಕ ವಿಚಾರವೂ ಹೌದು, ನಿನ್ನ ಕರ್ತವ್ಯವೂ ಹೌದು. ಸಾಂಗತ್ಯ ಬೇಡ, ಮಕ್ಕಳು ಬೇಡ ಅನ್ನೋದು ನಿನಗೆ ಸರಿ. ಆದರೆ, ಸಮಾಜ ಹಾಗಲ್ಲ ಅದಕ್ಕೆ ಅದರೆದೇ ಆದ ಒಂದು ರೀತಿ ನೀತಿ ಇದೆ. ಅದರಂತೆ ನಾವು ನಡೆಯಬೇಕು. ನಿನ್ನ ಚಿಕ್ಕವಯಸ್ಸಿನಲ್ಲಿ ನಾವು ಹೆಚ್ಚು ಸಮಯ ಕೊಡಲಾಗಲಿಲ್ಲ. ಈಗ ಮೊಮ್ಮಕ್ಕಳ ಜೊತೆ ಆಡಿ-ನಲಿಯುವ ಆಸೆ ನನಗೂ ಅಮ್ಮನಿಗೂ ಇದೆ. ಯೋಚಿಸಿ ನೋಡು, ಅಮ್ಮ ನಿನ್ನ ಮದುವೆ ಆಗುವ ಮುನ್ನ ಹೇಳಿದ ಮಾತನ್ನೇ ಈಗ ನಾನೂ ಹೇಳುತ್ತೇನೆ. ಬದುಕನ್ನು ಕರ್ತವ್ಯ ಅಂತಲೇ ಮಾಡು' ಎಂದು ಅಪ್ಪ ಮತ್ತೊಮ್ಮೆ ಕರ್ತವ್ಯದ ಕಾರಣ ಮುಂದಿಡುತ್ತಾರೆ. ಅವರ ಮಾತಿಗೆ ಒಪ್ಪಿ ರಮೇಶ ಸುಷ್ಮಾರ ಸಂಸಾರ ಮುಂದುವರೆದು, ವರ್ಷದ ಹೊತ್ತಿಗೆ ಮಗ ಭರತ್ ಹುಟ್ಟಿದ್ದ.  

ಮುಂದಿನ ಬದುಕು ಭರತನ ಲಾಲನೆ ಪಾಲನೆಯಲ್ಲಿ ಮುಂದುವರೆಯಿತು. ಮಕ್ಕಳಾದ ಮೇಲೆ ಹೆಂಗಸರ ಆದ್ಯತೆ ಬೇರೆಯೇ ಆಗುತ್ತದೆ. ಅವಳ ಪ್ರೀತಿ, ಗಮನ ಎಲ್ಲವೂ ಮಕ್ಕಳೆಡೆಗೆ ಹರಿಯುತ್ತದೆ. ರಮೇಶನಂತಹ ನಿರ್ಲಿಪ್ತ ಗಂಡನಿದ್ದಾಗ ಸುಷ್ಮಾಳ ಆದ್ಯತೆ ಸಂಪೂರ್ಣ ಮಗುವಿನೆಡೆಗೆ ಹೋಗುವುದು ಸಹಜವೇ. ಆಕೆಯ ಮನಸ್ಸಿನಲ್ಲಿರುವ ಪ್ರೀತಿ, ವಾತ್ಸಲ್ಯ ಯಾರಿಗಾದರೂ ಕೊಡಲೇ ಬೇಕಲ್ಲ! ಆ ದೃಷ್ಟಿಯಲ್ಲಿ ಭರತ್ ಸುಷ್ಮಾಳಿಗೆ ದೇವರ ಪ್ರಸಾದವೇ ಆಗಿದ್ದ. ಭರತನಿಗೆ ಮೂರ್ನಾಲ್ಕು ವರ್ಷ ಆಗುವವರೆಗೆ ರಮೇಶ ಅವನಿಗೆ ಸ್ವಲ್ಪ ಹಚ್ಚುಕೊಂಡಿದ್ದ. ತಾಯಿಯ ಪ್ರೀತಿ ಅವನಿಗೆ ಹೆಚ್ಚಿತ್ತು ಹಾಗಾಗಿ, ಅವನು ಸುಷ್ಮಾಳಿಗೆ ಹೆಚ್ಚು ಹಚ್ಚುಕೊಂಡ. ಭರತ್ ಹಾಗೂ ರಮೇಶ ರಕ್ತವನ್ನು ಹಂಚಿಕೊಂಡಿದ್ದರೆ ಹೊರತು ಅವರ ಮನಸ್ಸುಗಳು ಒಂದಾಗಿರಲಿಲ್ಲ. ರಮೇಶನ ಬದುಕೆಂಬ ಕರ್ತವ್ಯ ಮುಂದುವರೆದಿತ್ತು. 

***************************************

'ಸರಿ... ಬದುಕನ್ನು ಕರ್ತವ್ಯ ಎಂದು ಮಾಡಿದೆ. ಆದರೆ, ನನಗೆ ಇನ್ನೂ ಅರ್ಥವಾಗದ ವಿಷಯ ಒಂದಿದೆ. ನೀನು ಮದುವೆ ಬೇಡ ಎನ್ನಲು ಕಾರಣವೇನು?' ರಮೇಶನ ಮಾತುಗಳನ್ನು ಕೇಳಿದ ನಂತರ ಅನಂತ ತನ್ನ ಪ್ರಶ್ನೆ ಮುಂದಿಡುತ್ತಾನೆ. ಈ ಪ್ರಶ್ನೆಗೆ ಉತ್ತರ ನೀಡಲೋ ಬೇಡವೋ ಎಂಬಂತಹ ಭಾವ ರಮೇಶನ ಮುಖದ ಮೇಲೆ ಗೋಚರವಾಗುತ್ತದೆ, ಜೊತೆಗೆ ಮೌನ. 

'ಹೋಗಲಿ ಬಿಡು, ಈ ಪ್ರಶ್ನೆಗೆ ನಿನ್ನಲ್ಲಿ ಉತ್ತರ ಇಲ್ಲ ಎನ್ನುವುದಾದರೆ ನನ್ನ ಬಲವಂತವೇನಿಲ್ಲ.'

'ಈ ಪ್ರಶ್ನೆಗೆ ಉತ್ತರ ಖಂಡಿತ ಇದೆ. ಆದರೆ, ಅದು ನನ್ನಲ್ಲೇ ಇರಲಿ. ಯಾರಿಗೂ ಉತ್ತರ ಹೇಳಬೇಕಾದ ಅನಿವಾರ್ಯತೆಯಾಗಲಿ, ಅವಶ್ಯಕತೆಯಾಗಲಿ ಇಲ್ಲ. ಹೇಳಿದರೂ ಅದರಿಂದ ಯಾವುದೇ ಪ್ರಯೋಜನ ಈಗ ಇಲ್ಲ.

ಉತ್ತರ ಒರಟಾದರೂ ರಮೇಶನ ಮಾತಿನಲ್ಲಿ ಸತ್ಯವಿತ್ತು. ಮತ್ತೊಮ್ಮೆ ಬಲವಂತವಾಗಿ ಕೇಳುವುದರಲ್ಲಿ ಅರ್ಥವಿಲ್ಲ ಎಂದು ಅನಂತ ಗಂಟೆ 8:00 ಆದದ್ದನ್ನು ಗಮನಿಸಿದ. 'ಸ್ನೇಹಿತನಾಗಿ ಹೇಳುತ್ತಿದ್ದೇನೆ. ಈಗಲೂ ನಿನ್ನ ನಿರ್ಧಾರ ಬದಲಿಸು. ಇಲ್ಲೇ ನಮ್ಮೆಲ್ಲರ ಜೊತೆ ಇದ್ದುಬಿಡೋ ' ಎಂದು ಮತ್ತೊಂದು ಪ್ರಯತ್ನ ಅನಂತ ಮಾಡುತ್ತಾನೆ. ನಿರೀಕ್ಷೆಯಂತೆ ಮೌನವೇ ಉತ್ತರವಾಗುತ್ತದೆ. 

'ಮುಂದಿನ ವಾರ ಹೊರಡುತ್ತೀನಿ ಅಂತ ಇದಿ. ಹೊರಡುವ ಮುನ್ನ ಎಲ್ಲರಿಗೂ ಮನೆಗೆ ಬರಲು ಹೇಳೋಣ. ಸ್ನೇಹಿತರು, ಸಂಬಂಧಿಕರನ್ನು ನೋಡಿಕೊಂಡೇ ಹೊರಡು.'. ಇದಕ್ಕೂ ರಮೇಶ ಒಪ್ಪುವುದಿಲ್ಲ ಎಂಬ ನಿರೀಕ್ಷೆ ಅನಂತನದ್ದು. ಆಶ್ಚರ್ಯವೆಂಬಂತೆ 'ಸರಿ ಹಾಗೆ ಆಗಲಿ. ಈಗ ಸಮಯವಾಯಿತು ಹೊರಡೋಣ' ಎಂದು ಕಲ್ಲು ಬೆಂಚಿನ ಮೇಲೆ ಕೂತಿದ್ದ ಇಬ್ಬರು ಎದ್ದು ಹೊರಡುತ್ತಾರೆ.  ತಮ್ಮ ಮನೆಗೆ ಹೋಗುವ ತಿರುವು ಬಂದಾಗ ರಮೇಶ ಏನೋ ಜ್ಞಾಪಿಸಿಕೊಂಡಂತೆ ಸ್ನೇಹಿತನನ್ನು ತಡೆದು 'ಒಂದು ಮಾತು' ಅನ್ನುತ್ತಾನೆ. ಏನು ಹೇಳಬಹುದೆಂಬ ಕುತೂಹಲದಿಂದ ತಿರುವಿನಲ್ಲೇ ನಿಂತು ಹೇಳು ಅನ್ನುವಂತೆ ಅನಂತ ನೋಡುತ್ತಾನೆ.

'ಜೀವನದಲ್ಲಿ ಕೆಲವು ತಿರುವುಗಳು ನಾವು ಬದುಕುವ ರೀತಿಯನ್ನೇ ಬದಲಾಯಿಸುತ್ತದೆ. ನನ್ನ ಬದುಕಿನಲ್ಲಾದದ್ದೂ ಅದೇ. ನನ್ನ ಅಮ್ಮ, ಹೆಂಡತಿ ಸುಷ್ಮಾ ಇವರನ್ನೆಲ್ಲಾ ನೋಡಿದಾಗ ನನಗೆ ಅನ್ನಿಸಿದ್ದು ಇಷ್ಟು. ಗಂಡಸರ ಕಾಮನೆಗಳು ನಮಗಿಂತಲೂ ಹೆಂಗಸರಿಗೆ ಚೆನ್ನಾಗೆ ಅರ್ಥ ಆಗುತ್ತದೆ. ಸಾಮಾನ್ಯವಾಗಿ ಎಲ್ಲರಿಗೂ ಇರುವ ಕಾಮನೆಗಳು ಇದ್ದು, ಅದು ಹೆಂಗಸರ ಇಚ್ಛೆಗೆ ಪೂರಕವಾಗಿದ್ದರೆ ಮಾತ್ರ ನಮ್ಮ ಜೀವನ ಚೆನ್ನಾಗಿರುತ್ತದೆ. ಆದರೆ, ಗಂಡಸರು ಬಯಸುವ ಬಿಡುಗಡೆಯ ಸ್ವಾತಂತ್ರ್ಯ ಬಹುತೇಕ ಹೆಂಗಸರಿಗೆ ಅರ್ಥವೇ ಆಗುವುದಿಲ್ಲ. ಅದನ್ನು ಅರ್ಥ ಮಾಡಿಕೊಂಡಿರುವ ಹೆಂಗಸರಿಗೆ ಮದುವೆಯೂ ಆಗಿರುವುದಿಲ್ಲ, ಮಕ್ಕಳು ಇರುವುದಿಲ್ಲ! ನಾನು ಇಷ್ಟು ವರ್ಷಗಳು ಕರ್ತವ್ಯ ಮಾಡಿದ್ದೇನೆ, ನಾಳೆಯಿಂದ ನಾನು ಬದುಕುತ್ತೇನೆ!' ಎಂದು ಹೇಳಿ ರಮೇಶ ಅನಂತನ ಭುಜವನ್ನು ತಟ್ಟಿ ಮನೆಕಡೆಗೆ ಹೆಜ್ಜೆ ಹಾಕುತ್ತಾನೆ. ಒಗಟಾದ ಈ ಮಾತಿನ ಹಿಂದಿರುವ ಅರ್ಥ ಯೋಚಿಸುತ್ತಾ ಅನಂತ ತನ್ನ ಮನೆಗೆ ಹಿಂದಿರುಗುತ್ತಾನೆ. 

ಬೆಳಗ್ಗೆ 6:10 ಕ್ಕೆ ಅನಂತನ ಫೋನ್ ಸದ್ದು ಮಾಡುತ್ತದೆ. ನೋಡಿದರೆ ರಮೇಶನ ಕರೆ. ಫೋನ್ ಎತ್ತಿ 'ಹೇಳು ರಮೇಶ ' ಎನ್ನುತ್ತಾನೆ.

'ಅಂಕಲ್ ನಾನು ಭರತ್, ಅಪ್ಪ ಮನೆಯಲ್ಲಿ ಕಾಣಿಸುತ್ತಿಲ್ಲ, ಫೋನ್ ಇಲ್ಲೇ ಇದೆ. ನಿಮ್ಮ ಮನೆಗೆ ಏನಾದರೂ ಬಂದಿದ್ದಾರಾ ಅಂತ ಕರೆ ಮಾಡಿದೆ.

'ಇಲ್ಲ, ಇಲ್ಲಿಗೆ ಬಂದಿಲ್ಲ. ಬಂದೆ ಇರು ಮನೆಗೆ ನೋಡುವ.' ಎಂದು ಹೇಳಿ ರಮೇಶನ ಮನೆಗೆ ಹೊರಡುತ್ತಾನೆ. ರಮೇಶನ ಚಪ್ಪಲಿ ಹಾಗೂ ಅವನ ಕೋಣೆಯಲ್ಲಿ ಒಂದೆರಡು ಪುಸ್ತಕಗಳು ಕಾಣದಿದ್ದನ್ನು ಕಂಡ ಅನಂತ 'ಇಲ್ಲ ಭರತ್, ಅವನು ಹೊರಟಿದ್ದಾನೆ.' ಎಂದು ಹೇಳಿ ಮೌನಿಯಾಗುತ್ತಾನೆ. ರಮೇಶ ನೆನ್ನೆ ಹೇಳಿದ ಕಡೆಯ ಮಾತು ನೆನಪಾಗುತ್ತದೆ 'ಇಷ್ಟು ವರ್ಷಗಳು ಕರ್ತವ್ಯ ಮಾಡಿದ್ದೇನೆ ನಾಳೆಯಿಂದ ನಾನು ಬದುಕುತ್ತೇನೆ!'.

***************************************

February 1, 2023

ಬಿಬಿಸಿ ಎಂಬ ಬ್ರಿಟೀಷ್ ಬಾಲಬಡುಕ ಸಂಸ್ಥೆ

ಇದು ಸುಮಾರು 20-25 ವರ್ಷಗಳ ಹಿಂದಿನ ಮಾತು. ಆಗ ತಾನೆ ನಮ್ಮ ಮನೆಗಳಲ್ಲಿ ಕೇಬಲ್ ಟೀವಿ ಹಾಗೂ ಇತರ ವಾಹಿನಿಗಳ ಭರಾಟೆ ಶುರುವಾಗಿತ್ತು. 'ನಿನ್ನ ಇಂಗ್ಲೀಷ್ ಭಾಷೆ ಸುಧಾರಿಸಬೇಕು ಎಂದರೆ ಆಂಗ್ಲ ಪತ್ರಿಕೆ ಓದು, ಬಿಬಿಸಿ ವರ್ಲ್ದ್ ನೋಡು' ಎಂಬ ಹಿರಿಯರ ಮಾತು ಸಾಮಾನ್ಯವಾಗಿತ್ತು. ಒಸಾಮಾ ಬಿನ್ ಲಾಡೆನ್ ವಿಶ್ವ ವಾಣಿಜ್ಯ ಕಟ್ಟಡಗಳನ್ನು ಉರುಳಿಸಿದ ಎಂಬ ಸುದ್ದಿಯನ್ನು ಸಹ ನಾವು ನೋಡಿದ್ದೇ ಬಿಬಿಸಿ ವಾಹಿನಿಯಲ್ಲಿ. ನಮ್ಮ ಪುಣ್ಯ, ಆ ವಾಹಿನಿಯನ್ನು ಅದಾದ ಮೇಲೆ ಎಂದೂ ಸಹ ಗಂಭೀರವಾಗಿ ನೋಡಲಿಲ್ಲ. ಹೌದು, ಹೀಗೆ ಪುಣ್ಯ ಎಂದು ಹೇಳಲು ಕಾರಣವಿದೆ. ಈ ಬಿಬಿಸಿ ಅನ್ನುವ ಸಂಸ್ಥೆ ಭಾರತ ವಿರೋಧಿ ನಿರೂಪಣೆ ಮಾಡುವಲ್ಲಿ ಎತ್ತಿದ ಕೈ. ನಮ್ಮ ಆಂಗ್ಲ ಭಾಷೆ ಸುಧಾರಣೆ ಆಗದಿದ್ದರೂ ಪರವಾಗಿಲ್ಲ ಆದರೆ, ನಮ್ಮ ಮನಸ್ಸಿನಲ್ಲಿ ಭಾರತ ವಿರೋಧಿ ಭಾವವನ್ನು ಒಳಬಿಟ್ಟುಕೊಳ್ಳಲಿಲ್ಲ ಎನ್ನುವುದು ನಮ್ಮ ಪುಣ್ಯವೇ ಸರಿ!

BBC - British Blabbering Corporation
 

ಎರಡು ವಾರಗಳ ಹಿಂದೆ ಭಾರತದ ಪ್ರಧಾನಿ ಮೋದಿಯವರ ಮೇಲೆ ಆಪಾದನೆ ಮಾಡುವಂತಹ 2002ರಲ್ಲಿ ಗುಜರಾತ್ ನಲ್ಲಿ ನಡೆದ ಹಿಂಸಾಚಾರದ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದೆ. ಮೊದಲನೆ ಭಾಗ ಇದಾದರೇ ಸಾಕ್ಷ್ಯಚಿತ್ರದ ಎರಡನೇ ಭಾಗ ಆರ್ಟಿಕಲ್ 370 ಹಾಗೂ ಇತ್ತೀಚಿನ ಇತರ ಘಟನೆಗಳು. ಮತ್ತೊಮ್ಮೆ ಉದ್ದೇಶ ಪೂರ್ವಕವಾಗಿಯೇ ಕಾಶ್ಮೀರಿ ಮುಸಲ್ಮಾನರಿಗೆ ಅನ್ಯಾಯವಾಗಿದೆ ಅನ್ನುವ ರೀತಿಯಲ್ಲಿ ಚಿತ್ರಿಸಿದ್ದಾರೆ. ಭಾರತದ ಉಚ್ಛ ನ್ಯಾಯಾಲಯ ಗುಜರಾತ್ ಹಿಂಸಾಚಾರ ಪ್ರಕರಣದಲ್ಲಿ ಮೋದಿಯವರ ಪಾತ್ರವಿಲ್ಲ ಎಂದು ಸ್ಪಷ್ಟ ತೀರ್ಪಿತ್ತಿದೆ ಹಾಗೂ ಜೂನ್ 2022ರಲ್ಲಿ, ಈ ಪ್ರಕರಣದಲ್ಲಿ ಮೋದಿಯವರಿಗೆ ವಿಶೇಷ ತನಿಖಾ ತಂಡ (SIT) ನೀಡಿದ ಕ್ಲೀನ್ ಚಿಟ್ ವಿರುದ್ಧ ಸಲ್ಲಿಸಿದ ಮೇಲ್ಮನವಿಯನ್ನು ಸಹ ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಒಟ್ಟಾರೆ, ಬಿಬಿಸಿಯ ಈ ಸಾಕ್ಷ್ಯಚಿತ್ರದ ಉದ್ದೇಶ ಭಾರತ ವಿರೋಧಿ ಎಂಬುದು ಈಗಂತೂ ಸ್ಪಷ್ಟವಾಗಿದೆ. 2021 ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಕೇಂದ್ರ ಸರ್ಕಾರ ಈ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಶಾಶ್ವತವಾಗಿ ನಿರ್ಬಂಧಿಸಿದೆ. ತನ್ಮೂಲಕ ಬಿಬಿಸಿಯ ಈ ಕೃತ್ಯ ಕೀಳುಮಟ್ಟದ್ದು ಎಂಬ ಸಂದೇಶವನ್ನು ಭಾರತ ರವಾನಿಸಿದೆ. ಎರಡು ದಿನಗಳ ಹಿಂದೆ ರಷ್ಯಾದ ವಿದೇಶಾಂಗ ವಕ್ತಾರರು ಸಹ ಬಿಬಿಸಿಯ ಸಾಕ್ಷ್ಯಚಿತ್ರವನ್ನು ಖಂಡಿಸಿದ್ದಾರೆ. ಇದು ಬಿಬಿಸಿ ಸಂಸ್ಥೆಗೆ ಜಾಗತಿಕ ಮಟ್ಟದಲ್ಲಿ ಆದ ಅವಮಾನವೂ ಹೌದು.

ಬಿಬಿಸಿ ಇಂತಹ ಕೀಳುಮಟ್ಟದ ಕಾರ್ಯ ಮಾಡುತ್ತಿರುವುದು ಇದೇನು ಮೊದಲಲ್ಲ. ಭಾರತ ದೇಶ ಮಹಿಳೆಯರಿಗೆ ಅಸುರಕ್ಷಿತ ಎಂದು ಬಿಂಬಿಸುವಂತಹ ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು 2015ರಲ್ಲಿ ಬಿಡುಗಡೆ ಮಾಡಿತ್ತು. 1965ರ ಪಾಕಿಸ್ತಾನದೊಂದಿಗಿನ ಯುದ್ಧದ ಸಂದರ್ಭದಲ್ಲಿ ಭಾರತ ವಿರೋಧಿ ಲೇಖನಗಳನ್ನು ಪ್ರಕಟಿಸಿತ್ತು. ಆಗ ಸಹ ಭಾರತ ಬಿಬಿಸಿ ಅನ್ನು ನಿಷೇಧಿಸಿತ್ತು. ಖಾಲಿಸ್ತಾನಿ ಉಗ್ರರಿಗೂ ವೇದಿಕೆ ಕಲ್ಪಿಸಿಕೊಟ್ಟಿದ್ದು ಇದೇ ಬಿಬಿಸಿ ಎಂದು ಹೇಳಲಾಗುತ್ತದೆ. 2016ರಲ್ಲಿ ಭಯೋತ್ಪಾದಕ ಬುರ್ಹಾನ್ ವಾನಿಯನ್ನು 'ಮೇಷ್ಟರ ಮಗ', 'ಯುವ ಹೋರಾಟಗಾರ', ಮುಂಬೈ ಮೇಲೆ ದಾಳಿ ಮಾಡಿದ ಭಯೋತ್ಪಾದಕರನ್ನು 'ಬಂದೂಕುಧಾರಿಗಳು' ಎಂದು ಚಿತ್ರಿಸಿದ್ದು ಸಹ ಇದೇ ಬಿಬಿಸಿ. 2020ರಲ್ಲಿ ದೆಹಲಿ ಗಲಭೆ, ರೈತರ ಪ್ರತಿಭಟನೆ ಹಾಗೂ ಸಿಏಏ ಪ್ರತಿಭಟನೆ ಸಂದರ್ಭಗಳಲ್ಲಿ ಭಾರತ ವಿರೋಧಿ ಅಂಶಗಳನ್ನು ಬೆಂಬಲಿಸುತ್ತಾ ವರದಿಗಳನ್ನು ಪ್ರಕಟಿಸಿತ್ತು. ಇಷ್ಟೇ ಅಲ್ಲದೇ 2012ರಲ್ಲಿ ಹಿಂದೂಗಳ ಹೋಳಿ ಹಬ್ಬವನ್ನು 'ಕೊಳಕು' ಎಂದು ಸಹ ಬಿಬಿಸಿ ಉಲ್ಲೇಖಿಸಿತ್ತು. ಎಲ್ಲಕ್ಕಿಂತಲೂ ಹೆಚ್ಚಾಗಿ 2015, 2021ರಲ್ಲಿ ಕಾಶ್ಮೀರವನ್ನು ಬೇರ್ಪಡಿಸಿ ಭಾರತದ ನಕ್ಷೆಯನ್ನು ತನ್ನ ಕಾರ್ಯಕ್ರಮದಲ್ಲಿ ಬಿತ್ತರಿಸಿ ಅದಕ್ಕಾಗಿ ಸಂಸ್ಥೆಯ ವಕ್ತಾರರು ಕ್ಷಮೆಯಾಚಿಸಿದ್ದರು.

ಬಿಬಿಸಿ ಎಂಬ ಬಾಲಬಡುಕ ಸಂಸ್ಥೆ ಏಕಪಕ್ಷೀಯ ವರದಿಗೆ ಹೆಸರಾಗಿದೆ. ಗುಜರಾತ್ ಹಿಂಸಾಚಾರದ ಬಗ್ಗೆ ವರದಿ ಮಾಡುವ ಈ ಸಂಸ್ಥೆ ಇದಕ್ಕೆ ಕಾರಣವಾದ ಸಾಬರ್ಮತಿ ರೈಲು ದುರಂತದ ಬಗ್ಗೆ ಚಕಾರ ಎತ್ತುವುದಿಲ್ಲ. ಆರ್ಟಿಕಲ್-370 ನಿಷೇಧದಿಂದ ಮುಸಲ್ಮಾನರಿಗೆ ಅನ್ಯಾಯವಾಗಿದೆ ಎಂದು ಗೀಚುವ ಇವರುಗಳು ಕಾಶ್ಮೀರಿ ಪಂಡಿತರ ಮೇಲಾದ ನರಮೇಧದ ಬಗ್ಗೆ ಬರೆಯುವುದಿಲ್ಲ. ಭಾರತದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಊಳಿಡುವ ಇದೇ ಸಂಸ್ಠೆ ಇಂಗ್ಲೆಂಡಿನಲ್ಲಿ ಹೆಣ್ಣು ಮಕ್ಕಳ ಮೇಲಾಗುತ್ತಿರುವ ನಿಂದನೆ ಮತ್ತು ಲೈಂಗಿಕ ಶೋಷಣೆ ಬಗ್ಗೆ ಮಾತಾಡುವುದೇ ಇಲ್ಲ. ಮುಸಲ್ಮಾನರ ಬಗ್ಗೆ ಎಲ್ಲಿಲ್ಲದ ಕಾಳಜಿ ವಹಿಸುವ ಬಿಬಿಸಿ ಚೀನಾದಲ್ಲಿ ಉಯ್ಘರ್ ಮುಸಲ್ಮಾನರ ಮೇಲೆ ಆಗುತ್ತಿರುವ ದೌರ್ಜನ್ಯದ ಕುರಿತು ಮಾತೇ ಇಲ್ಲ. ಇದೆಲ್ಲಾ ಹಳೆಯದಾಯ್ತು. ಕಳೆದ ವಾರ ಜೆರುಸಲೇಮ್ ನಲ್ಲಿ ಇಸ್ರೇಲಿಗರ ಮೇಲಾದ ಭಯೋತ್ಪಾದಕ ಕೃತ್ಯದ ಬಗ್ಗೆ 'ದಿ ಟೈಮ್ಸ್ ಆಫ್ ಇಸ್ರೇಲ್' ವರದಿಯನ್ನೇ ಬಟ್ಟಿ ಇಳಿಸಿ, ವರದಿಯನ್ನಷ್ಟೇ ಮಾಡಿದೆ! ಭಾರತ, ಅಮೇರಿಕಾ ಸೇರಿದಂತೆ ಅನೇಕ ರಾಷ್ಟ್ರಗಳು ನಿಷೇಧಿಸಿರುವ ಚೀನಾದ ಹುವಾಯ್ ಸಂಸ್ಥೆಯೊಂದಿಗೆ ಹಣಕಾಸು ಒಪ್ಪಂದವಿದ್ದು ತನ್ನ ಸಾಗರೋತ್ತರ ಪತ್ರಿಕೋದ್ಯಮಕ್ಕೆ ಬಿಸಿಸಿ ಅದನ್ನು ಬಳಸಿಕೊಳ್ಳುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಹುವಾಯ್ ಕುರಿತಾದ ಜಾಹೀರಾತುಗಳು ಬಿಬಿಸಿ ವೆಬ್ಸೈಟ್ ಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಹಾಗೂ ಹುವಾಯ್ ನಿಂದ ಎಷ್ಟು ಹಣ ತೆಗೆದುಕೊಂಡಿದೆ ಎಂಬುದಕ್ಕೆ ಉತ್ತರ ನೀಡಲು ಬಿಬಿಸಿ ನಿರಾಕರಿಸಿದೆ. ಎಂದಿನಂತೆ ಚೀನಾ ಈ ವಿಚಾರವನ್ನು ಅಲ್ಲಗೆಳೆದಿದೆ. ಭಾರತ ವಿರೋಧಿ ಸಾಕ್ಷ್ಯಚಿತ್ರ ಮಾಡುವಲ್ಲಿ ಚೀನಾದ ಕೈವಾಡವಿದೆ ಎಂಬುದನ್ನು ನಾವು ಅಲ್ಲಗೆಳೆಯಲು ಸಾಧ್ಯವಿಲ್ಲ.

ತನಗೆ ಯಾರೂ ಬೆಲೆಕೊಡದಿದ್ದರೂ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದು, ಅಂತಾರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಅವಹೇಳನ ಮಾಡುವಂತೆ ಮಾತಾಡುವುದು ಪಾಕಿಸ್ತಾನಕ್ಕೆ ಅಭ್ಯಾಸವಾಗಿದೆ. ಅದೇ ರೀತಿ ಸಾಕ್ಷ್ಯಚಿತ್ರವನ್ನು ಮುಂದಿಟ್ಟುಕೊಂಡು ಮೋದಿಯವರ ವರ್ಚಸ್ಸಿಗೆ ಧಕ್ಕೆ ತರಲು ಮುಂದಾದ ಪಾಕಿಸ್ತಾನ ಮೂಲದ ಬ್ರಿಟೀಷ್ ಸಂಸದನಿಗೆ ಪ್ರಧಾನಿ ರಿಷಿ ಸುನಾಕ್ 'ಪ್ರಧಾನಿ ಮೋದಿಯವರ ಚಾರಿತ್ಯ ಹರಣವನ್ನು ನಾವು ಒಪ್ಪುವುದಿಲ್ಲ' ಎಂದು ಖಡಾಖಂಡಿತವಾಗಿ ಹೇಳಿ ಈ ವಿಚಾರವಾಗಿ ಇಡೀ ಸಂಸತ್ತಿನ ಸದ್ದಡಗಿಸಿದರು. ಭಾರತದಲ್ಲಿ ಬ್ರಿಟೀಷರ ಗುಲಾಮರಂತೆ ಸಾಕ್ಷ್ಯಚಿತ್ರದ ಬಗ್ಗೆ ಮಾತಾಡುತ್ತಿರುವುದು ಕಾಂಗ್ರೇಸ್, ಜೆ.ಎನ್.ಯೂ ಹಾಗೂ ಜಾಮಿಯಾ ಇಸ್ಲಾಂ ಯೂನಿವರ್ಸಿಟಿ ಮಾತ್ರ!

ಐ.ಎಮ್.ಎಫ್ ಪ್ರಕಾರ ಪ್ರಪಂಚದ ಐದನೇ ಬಲಿಷ್ಠ ಆರ್ಥಿಕ ಶಕ್ತಿಯಾಗಿರುವುದು ಭಾರತ, ಜಿ20 ನೇತೃತ್ವ ವಹಿಸಿಕೊಂಡಿರುವುದು ಭಾರತ, ಪ್ರಪಂಚದ ಆಗು ಹೋಗುಗಳನ್ನು ನಿರ್ಧರಿಸುವಲ್ಲಿ ಇಂದು ಭಾರತ ಪ್ರಮುಖ ಪಾತ್ರವಹಿಸುತ್ತಿದೆ. ಇಂತಹ ಸಮಯದಲ್ಲೂ ಹತ್ತೊಂಬತ್ತನೆ ಶತಮಾನದ ಚಿಂತನೆಯಿಂದ ಹೊರಬಾರದ ಬಿಬಿಸಿಯ ಯೋಗ್ಯತೆ ಅಷ್ಟೇ ಎಂದು ಮೂಲೆಗುಂಪು ಮಾಡುವುದೇ ಲೇಸು. ತನ್ನ ವಿರುದ್ಧ ಯಾರೂ ಏನೇ ಹೇಳಿದರೂ ಕೇಳದ ಬಿಬಿಸಿ ತನ್ನ ಏಕಪಕ್ಷೀಯವಾದ, ತಲೆಹರಟೆ ವರದಿಗಳನ್ನು ಮಾಡುವುದು ನಿಲ್ಲಿಸುವುದಿಲ್ಲ. ಬಿಬಿಸಿ ಒಂದು ರೀತಿ ನಾಯಿ ಬಾಲವಿದ್ದಂತೆ. ಅದು ಯಾವತ್ತಿದ್ದರೂ ಡೊಂಕು! 

***********************************************************

References