ಇದು ಸುಮಾರು 20-25 ವರ್ಷಗಳ ಹಿಂದಿನ ಮಾತು. ಆಗ ತಾನೆ ನಮ್ಮ ಮನೆಗಳಲ್ಲಿ ಕೇಬಲ್ ಟೀವಿ ಹಾಗೂ ಇತರ ವಾಹಿನಿಗಳ ಭರಾಟೆ ಶುರುವಾಗಿತ್ತು. 'ನಿನ್ನ ಇಂಗ್ಲೀಷ್ ಭಾಷೆ ಸುಧಾರಿಸಬೇಕು ಎಂದರೆ ಆಂಗ್ಲ ಪತ್ರಿಕೆ ಓದು, ಬಿಬಿಸಿ ವರ್ಲ್ದ್ ನೋಡು' ಎಂಬ ಹಿರಿಯರ ಮಾತು ಸಾಮಾನ್ಯವಾಗಿತ್ತು. ಒಸಾಮಾ ಬಿನ್ ಲಾಡೆನ್ ವಿಶ್ವ ವಾಣಿಜ್ಯ ಕಟ್ಟಡಗಳನ್ನು ಉರುಳಿಸಿದ ಎಂಬ ಸುದ್ದಿಯನ್ನು ಸಹ ನಾವು ನೋಡಿದ್ದೇ ಬಿಬಿಸಿ ವಾಹಿನಿಯಲ್ಲಿ. ನಮ್ಮ ಪುಣ್ಯ, ಆ ವಾಹಿನಿಯನ್ನು ಅದಾದ ಮೇಲೆ ಎಂದೂ ಸಹ ಗಂಭೀರವಾಗಿ ನೋಡಲಿಲ್ಲ. ಹೌದು, ಹೀಗೆ ಪುಣ್ಯ ಎಂದು ಹೇಳಲು ಕಾರಣವಿದೆ. ಈ ಬಿಬಿಸಿ ಅನ್ನುವ ಸಂಸ್ಥೆ ಭಾರತ ವಿರೋಧಿ ನಿರೂಪಣೆ ಮಾಡುವಲ್ಲಿ ಎತ್ತಿದ ಕೈ. ನಮ್ಮ ಆಂಗ್ಲ ಭಾಷೆ ಸುಧಾರಣೆ ಆಗದಿದ್ದರೂ ಪರವಾಗಿಲ್ಲ ಆದರೆ, ನಮ್ಮ ಮನಸ್ಸಿನಲ್ಲಿ ಭಾರತ ವಿರೋಧಿ ಭಾವವನ್ನು ಒಳಬಿಟ್ಟುಕೊಳ್ಳಲಿಲ್ಲ ಎನ್ನುವುದು ನಮ್ಮ ಪುಣ್ಯವೇ ಸರಿ!
![]()  | 
| BBC - British Blabbering Corporation | 
ಎರಡು ವಾರಗಳ ಹಿಂದೆ ಭಾರತದ ಪ್ರಧಾನಿ ಮೋದಿಯವರ ಮೇಲೆ ಆಪಾದನೆ ಮಾಡುವಂತಹ 2002ರಲ್ಲಿ ಗುಜರಾತ್ ನಲ್ಲಿ ನಡೆದ ಹಿಂಸಾಚಾರದ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದೆ. ಮೊದಲನೆ ಭಾಗ ಇದಾದರೇ ಸಾಕ್ಷ್ಯಚಿತ್ರದ ಎರಡನೇ ಭಾಗ ಆರ್ಟಿಕಲ್ 370 ಹಾಗೂ ಇತ್ತೀಚಿನ ಇತರ ಘಟನೆಗಳು. ಮತ್ತೊಮ್ಮೆ ಉದ್ದೇಶ ಪೂರ್ವಕವಾಗಿಯೇ ಕಾಶ್ಮೀರಿ ಮುಸಲ್ಮಾನರಿಗೆ ಅನ್ಯಾಯವಾಗಿದೆ ಅನ್ನುವ ರೀತಿಯಲ್ಲಿ ಚಿತ್ರಿಸಿದ್ದಾರೆ. ಭಾರತದ ಉಚ್ಛ ನ್ಯಾಯಾಲಯ ಗುಜರಾತ್ ಹಿಂಸಾಚಾರ ಪ್ರಕರಣದಲ್ಲಿ ಮೋದಿಯವರ ಪಾತ್ರವಿಲ್ಲ ಎಂದು ಸ್ಪಷ್ಟ ತೀರ್ಪಿತ್ತಿದೆ ಹಾಗೂ ಜೂನ್ 2022ರಲ್ಲಿ, ಈ ಪ್ರಕರಣದಲ್ಲಿ ಮೋದಿಯವರಿಗೆ ವಿಶೇಷ ತನಿಖಾ ತಂಡ (SIT) ನೀಡಿದ ಕ್ಲೀನ್ ಚಿಟ್ ವಿರುದ್ಧ ಸಲ್ಲಿಸಿದ ಮೇಲ್ಮನವಿಯನ್ನು ಸಹ ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಒಟ್ಟಾರೆ, ಬಿಬಿಸಿಯ ಈ ಸಾಕ್ಷ್ಯಚಿತ್ರದ ಉದ್ದೇಶ ಭಾರತ ವಿರೋಧಿ ಎಂಬುದು ಈಗಂತೂ ಸ್ಪಷ್ಟವಾಗಿದೆ. 2021 ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಕೇಂದ್ರ ಸರ್ಕಾರ ಈ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಶಾಶ್ವತವಾಗಿ ನಿರ್ಬಂಧಿಸಿದೆ. ತನ್ಮೂಲಕ ಬಿಬಿಸಿಯ ಈ ಕೃತ್ಯ ಕೀಳುಮಟ್ಟದ್ದು ಎಂಬ ಸಂದೇಶವನ್ನು ಭಾರತ ರವಾನಿಸಿದೆ. ಎರಡು ದಿನಗಳ ಹಿಂದೆ ರಷ್ಯಾದ ವಿದೇಶಾಂಗ ವಕ್ತಾರರು ಸಹ ಬಿಬಿಸಿಯ ಸಾಕ್ಷ್ಯಚಿತ್ರವನ್ನು ಖಂಡಿಸಿದ್ದಾರೆ. ಇದು ಬಿಬಿಸಿ ಸಂಸ್ಥೆಗೆ ಜಾಗತಿಕ ಮಟ್ಟದಲ್ಲಿ ಆದ ಅವಮಾನವೂ ಹೌದು.
ಬಿಬಿಸಿ ಇಂತಹ ಕೀಳುಮಟ್ಟದ ಕಾರ್ಯ ಮಾಡುತ್ತಿರುವುದು ಇದೇನು ಮೊದಲಲ್ಲ. ಭಾರತ ದೇಶ ಮಹಿಳೆಯರಿಗೆ ಅಸುರಕ್ಷಿತ ಎಂದು ಬಿಂಬಿಸುವಂತಹ ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು 2015ರಲ್ಲಿ ಬಿಡುಗಡೆ ಮಾಡಿತ್ತು. 1965ರ ಪಾಕಿಸ್ತಾನದೊಂದಿಗಿನ ಯುದ್ಧದ ಸಂದರ್ಭದಲ್ಲಿ ಭಾರತ ವಿರೋಧಿ ಲೇಖನಗಳನ್ನು ಪ್ರಕಟಿಸಿತ್ತು. ಆಗ ಸಹ ಭಾರತ ಬಿಬಿಸಿ ಅನ್ನು ನಿಷೇಧಿಸಿತ್ತು. ಖಾಲಿಸ್ತಾನಿ ಉಗ್ರರಿಗೂ ವೇದಿಕೆ ಕಲ್ಪಿಸಿಕೊಟ್ಟಿದ್ದು ಇದೇ ಬಿಬಿಸಿ ಎಂದು ಹೇಳಲಾಗುತ್ತದೆ. 2016ರಲ್ಲಿ ಭಯೋತ್ಪಾದಕ ಬುರ್ಹಾನ್ ವಾನಿಯನ್ನು 'ಮೇಷ್ಟರ ಮಗ', 'ಯುವ ಹೋರಾಟಗಾರ', ಮುಂಬೈ ಮೇಲೆ ದಾಳಿ ಮಾಡಿದ ಭಯೋತ್ಪಾದಕರನ್ನು 'ಬಂದೂಕುಧಾರಿಗಳು' ಎಂದು ಚಿತ್ರಿಸಿದ್ದು ಸಹ ಇದೇ ಬಿಬಿಸಿ. 2020ರಲ್ಲಿ ದೆಹಲಿ ಗಲಭೆ, ರೈತರ ಪ್ರತಿಭಟನೆ ಹಾಗೂ ಸಿಏಏ ಪ್ರತಿಭಟನೆ ಸಂದರ್ಭಗಳಲ್ಲಿ ಭಾರತ ವಿರೋಧಿ ಅಂಶಗಳನ್ನು ಬೆಂಬಲಿಸುತ್ತಾ ವರದಿಗಳನ್ನು ಪ್ರಕಟಿಸಿತ್ತು. ಇಷ್ಟೇ ಅಲ್ಲದೇ 2012ರಲ್ಲಿ ಹಿಂದೂಗಳ ಹೋಳಿ ಹಬ್ಬವನ್ನು 'ಕೊಳಕು' ಎಂದು ಸಹ ಬಿಬಿಸಿ ಉಲ್ಲೇಖಿಸಿತ್ತು. ಎಲ್ಲಕ್ಕಿಂತಲೂ ಹೆಚ್ಚಾಗಿ 2015, 2021ರಲ್ಲಿ ಕಾಶ್ಮೀರವನ್ನು ಬೇರ್ಪಡಿಸಿ ಭಾರತದ ನಕ್ಷೆಯನ್ನು ತನ್ನ ಕಾರ್ಯಕ್ರಮದಲ್ಲಿ ಬಿತ್ತರಿಸಿ ಅದಕ್ಕಾಗಿ ಸಂಸ್ಥೆಯ ವಕ್ತಾರರು ಕ್ಷಮೆಯಾಚಿಸಿದ್ದರು.
ಬಿಬಿಸಿ ಎಂಬ ಬಾಲಬಡುಕ ಸಂಸ್ಥೆ ಏಕಪಕ್ಷೀಯ ವರದಿಗೆ ಹೆಸರಾಗಿದೆ. ಗುಜರಾತ್ ಹಿಂಸಾಚಾರದ ಬಗ್ಗೆ ವರದಿ ಮಾಡುವ ಈ ಸಂಸ್ಥೆ ಇದಕ್ಕೆ ಕಾರಣವಾದ ಸಾಬರ್ಮತಿ ರೈಲು ದುರಂತದ ಬಗ್ಗೆ ಚಕಾರ ಎತ್ತುವುದಿಲ್ಲ. ಆರ್ಟಿಕಲ್-370 ನಿಷೇಧದಿಂದ ಮುಸಲ್ಮಾನರಿಗೆ ಅನ್ಯಾಯವಾಗಿದೆ ಎಂದು ಗೀಚುವ ಇವರುಗಳು ಕಾಶ್ಮೀರಿ ಪಂಡಿತರ ಮೇಲಾದ ನರಮೇಧದ ಬಗ್ಗೆ ಬರೆಯುವುದಿಲ್ಲ. ಭಾರತದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಊಳಿಡುವ ಇದೇ ಸಂಸ್ಠೆ ಇಂಗ್ಲೆಂಡಿನಲ್ಲಿ ಹೆಣ್ಣು ಮಕ್ಕಳ ಮೇಲಾಗುತ್ತಿರುವ ನಿಂದನೆ ಮತ್ತು ಲೈಂಗಿಕ ಶೋಷಣೆ ಬಗ್ಗೆ ಮಾತಾಡುವುದೇ ಇಲ್ಲ. ಮುಸಲ್ಮಾನರ ಬಗ್ಗೆ ಎಲ್ಲಿಲ್ಲದ ಕಾಳಜಿ ವಹಿಸುವ ಬಿಬಿಸಿ ಚೀನಾದಲ್ಲಿ ಉಯ್ಘರ್ ಮುಸಲ್ಮಾನರ ಮೇಲೆ ಆಗುತ್ತಿರುವ ದೌರ್ಜನ್ಯದ ಕುರಿತು ಮಾತೇ ಇಲ್ಲ. ಇದೆಲ್ಲಾ ಹಳೆಯದಾಯ್ತು. ಕಳೆದ ವಾರ ಜೆರುಸಲೇಮ್ ನಲ್ಲಿ ಇಸ್ರೇಲಿಗರ ಮೇಲಾದ ಭಯೋತ್ಪಾದಕ ಕೃತ್ಯದ ಬಗ್ಗೆ 'ದಿ ಟೈಮ್ಸ್ ಆಫ್ ಇಸ್ರೇಲ್' ವರದಿಯನ್ನೇ ಬಟ್ಟಿ ಇಳಿಸಿ, ವರದಿಯನ್ನಷ್ಟೇ ಮಾಡಿದೆ! ಭಾರತ, ಅಮೇರಿಕಾ ಸೇರಿದಂತೆ ಅನೇಕ ರಾಷ್ಟ್ರಗಳು ನಿಷೇಧಿಸಿರುವ ಚೀನಾದ ಹುವಾಯ್ ಸಂಸ್ಥೆಯೊಂದಿಗೆ ಹಣಕಾಸು ಒಪ್ಪಂದವಿದ್ದು ತನ್ನ ಸಾಗರೋತ್ತರ ಪತ್ರಿಕೋದ್ಯಮಕ್ಕೆ ಬಿಸಿಸಿ ಅದನ್ನು ಬಳಸಿಕೊಳ್ಳುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಹುವಾಯ್ ಕುರಿತಾದ ಜಾಹೀರಾತುಗಳು ಬಿಬಿಸಿ ವೆಬ್ಸೈಟ್ ಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಹಾಗೂ ಹುವಾಯ್ ನಿಂದ ಎಷ್ಟು ಹಣ ತೆಗೆದುಕೊಂಡಿದೆ ಎಂಬುದಕ್ಕೆ ಉತ್ತರ ನೀಡಲು ಬಿಬಿಸಿ ನಿರಾಕರಿಸಿದೆ. ಎಂದಿನಂತೆ ಚೀನಾ ಈ ವಿಚಾರವನ್ನು ಅಲ್ಲಗೆಳೆದಿದೆ. ಭಾರತ ವಿರೋಧಿ ಸಾಕ್ಷ್ಯಚಿತ್ರ ಮಾಡುವಲ್ಲಿ ಚೀನಾದ ಕೈವಾಡವಿದೆ ಎಂಬುದನ್ನು ನಾವು ಅಲ್ಲಗೆಳೆಯಲು ಸಾಧ್ಯವಿಲ್ಲ.
ತನಗೆ ಯಾರೂ ಬೆಲೆಕೊಡದಿದ್ದರೂ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದು, ಅಂತಾರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಅವಹೇಳನ ಮಾಡುವಂತೆ ಮಾತಾಡುವುದು ಪಾಕಿಸ್ತಾನಕ್ಕೆ ಅಭ್ಯಾಸವಾಗಿದೆ. ಅದೇ ರೀತಿ ಸಾಕ್ಷ್ಯಚಿತ್ರವನ್ನು ಮುಂದಿಟ್ಟುಕೊಂಡು ಮೋದಿಯವರ ವರ್ಚಸ್ಸಿಗೆ ಧಕ್ಕೆ ತರಲು ಮುಂದಾದ ಪಾಕಿಸ್ತಾನ ಮೂಲದ ಬ್ರಿಟೀಷ್ ಸಂಸದನಿಗೆ ಪ್ರಧಾನಿ ರಿಷಿ ಸುನಾಕ್ 'ಪ್ರಧಾನಿ ಮೋದಿಯವರ ಚಾರಿತ್ಯ ಹರಣವನ್ನು ನಾವು ಒಪ್ಪುವುದಿಲ್ಲ' ಎಂದು ಖಡಾಖಂಡಿತವಾಗಿ ಹೇಳಿ ಈ ವಿಚಾರವಾಗಿ ಇಡೀ ಸಂಸತ್ತಿನ ಸದ್ದಡಗಿಸಿದರು. ಭಾರತದಲ್ಲಿ ಬ್ರಿಟೀಷರ ಗುಲಾಮರಂತೆ ಸಾಕ್ಷ್ಯಚಿತ್ರದ ಬಗ್ಗೆ ಮಾತಾಡುತ್ತಿರುವುದು ಕಾಂಗ್ರೇಸ್, ಜೆ.ಎನ್.ಯೂ ಹಾಗೂ ಜಾಮಿಯಾ ಇಸ್ಲಾಂ ಯೂನಿವರ್ಸಿಟಿ ಮಾತ್ರ!
ಐ.ಎಮ್.ಎಫ್ ಪ್ರಕಾರ ಪ್ರಪಂಚದ ಐದನೇ ಬಲಿಷ್ಠ ಆರ್ಥಿಕ ಶಕ್ತಿಯಾಗಿರುವುದು ಭಾರತ, ಜಿ20 ನೇತೃತ್ವ ವಹಿಸಿಕೊಂಡಿರುವುದು ಭಾರತ, ಪ್ರಪಂಚದ ಆಗು ಹೋಗುಗಳನ್ನು ನಿರ್ಧರಿಸುವಲ್ಲಿ ಇಂದು ಭಾರತ ಪ್ರಮುಖ ಪಾತ್ರವಹಿಸುತ್ತಿದೆ. ಇಂತಹ ಸಮಯದಲ್ಲೂ ಹತ್ತೊಂಬತ್ತನೆ ಶತಮಾನದ ಚಿಂತನೆಯಿಂದ ಹೊರಬಾರದ ಬಿಬಿಸಿಯ ಯೋಗ್ಯತೆ ಅಷ್ಟೇ ಎಂದು ಮೂಲೆಗುಂಪು ಮಾಡುವುದೇ ಲೇಸು. ತನ್ನ ವಿರುದ್ಧ ಯಾರೂ ಏನೇ ಹೇಳಿದರೂ ಕೇಳದ ಬಿಬಿಸಿ ತನ್ನ ಏಕಪಕ್ಷೀಯವಾದ, ತಲೆಹರಟೆ ವರದಿಗಳನ್ನು ಮಾಡುವುದು ನಿಲ್ಲಿಸುವುದಿಲ್ಲ. ಬಿಬಿಸಿ ಒಂದು ರೀತಿ ನಾಯಿ ಬಾಲವಿದ್ದಂತೆ. ಅದು ಯಾವತ್ತಿದ್ದರೂ ಡೊಂಕು!
*********************************************************** 
References

No comments:
Post a Comment