ಇತ್ತೀಚೆಗೆ ಶ್ರೀ ಸೇತುರಾಂರವರ 'ಗತಿ' ಎಂಬ ನಾಟಕವನ್ನು ನೋಡಿದೆ. ಆ ನಾಟರ್ಕದ ಕಥಾವಸ್ತು ನನ್ನ ಮೇಲೆ ಬಹಳ ಪ್ರಭಾವ ಬೀರಿತು. ಅದರ ಬಗ್ಗೆ ನನ್ನ ಅಭಿಪ್ರಾಯವನ್ನು ಬರೆಯಬೇಕು ಎಂದು ನಾ ಅಂದುಕೊಂಡಿದ್ದು ಉಂಟು ಮತ್ತು ನನ್ನ ಅಣ್ಣ (ಮಾವನ ಮಗ) ಸಿಂಹ ಕೇಳಿದ್ದು ಉಂಟು. ನಾಟಕ ನೋಡಿದ ದಿನವಂತು ಮಾತಾಡದೆ ಮೌನಿಯಾಗಿದ್ದೆ. ಬರೆಯ ಬೇಕು ಎಂದು ಕೊತಾಗ ಹೇಗೆ, ಏನು ಎಂಬುದು ಹೊಳೆಯಲು ಕೆಲ (ತುಂಬ) ಹೊತ್ತು ಹಿಡಿಯಿತು. ಬರಯಲೇ ಬೇಕು ಎಂದು ಹಟ ಹಿಡಿದು ಕೂತಾಗ ವಿಚಾರಗಳು ಹೊರಬಂತು.
'Green Tea' ಕುಡಿದಾಗ ನಮ್ಮ ಉದರ ಹೇಗೆ ಶುಚಿಯಾಗುತ್ತದೋ ಹಾಗೆ ಈ ನಾಟಕ ನೋಡಿ ಮನಸ್ಸು ಶುಚಿಯಾದ ಭಾವನೆ ನನ್ನನ್ನು ಆವರಿಸಿತು. ಸಂಭಾಷಣೆಗಳಂತೂ ತುಂಬಾ ನೇರ ಮತ್ತು ಹರಿತವಾಗಿತ್ತು. ಅವುಗಳನ್ನು ಅರಗಿಸಿಕೊಳ್ಳಲು ಸ್ವಲ್ಪ ಕಷ್ಟವಾಗಿತ್ತು. ಬದುಕಿನ ಕಹಿ ಸತ್ಯವನ್ನು ನೇರವಾಗಿ ಹೇಳಲಾಗಿತ್ತು. ನಾವು ನಮ್ಮ ಪಾಪ ಪುಣ್ಯಗಳ ವಿಮರ್ಶೆ ಮಾಡಿಕೊಳ್ಳುವುದು ಅವಶ್ಯಕ ಅನ್ನಿಸಿತು. ನಾವುಗಳು ಸಾತ್ವಿಕರಾಗಿದ್ದರೂ ನಮ್ಮ ಎದುರಿಗೆ ಅನ್ಯಾಯ ನಡೆದರೆ, ಆ ಪಾಪದಲ್ಲಿ ನಮ್ಮ ಪಾಲು ಇದೆ ಎಂದು ಅನ್ನಿಸಿತು, ಮನುಷ್ಯ ಜವಾಬ್ದಾರಿಯಯನ್ನು ಮರೆತು, ಸತ್ಯ ಅಸತ್ಯಗಳ ಅರಿವಿಲ್ಲದೆ, ಪ್ರಜ್ಞಾ ಶೂನ್ಯರಾಗಿ, ಬಾಳುವುದನ್ನು ಜೀವಂತ ಶವ ಎಂಬುವುದಕ್ಕೆ ಹೋಲಿಸಬಹುದು.
ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಮೊಮ್ಮಕ್ಕಳ ನಡುವಿನ ಸಂಬಂಧಗಳ ಅರ್ಥ, ಮೌಲ್ಯಗಳ ಬಗ್ಗೆ ಚರ್ಚಿಸುವುದು ಇತ್ತೀಚಿನ ದಿನಗಳಲ್ಲಿ ಖಂಡಿತ ಅವಶ್ಯಕ. ನಾವುಗಳು 'Generation Gap' ಎಂಬ ಹಾರಿಕೆ ಉತ್ತರವನ್ನು ಕೊಟ್ಟು ಮತ್ತೊಂದು ಪೀಳಿಗೆಯವರನ್ನು ದೂರವಿಡುತ್ತಿದ್ದೇವೆ. ಅವರುಗಳ ಮನಸ್ಸನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಅಜ್ಜಿ ಅಜ್ಜಂದಿರ ಪ್ರೀತಿ (ಮುದ್ದು) ಮಕ್ಕಳಿಗಾಗಲಿ, ಮೊಮ್ಮಳಿಗಾಗಲಿ ಸಹ್ಯವಾಗುವುದಿಲ್ಲ. ಹಾಗೆಂದು ಮನಸ್ಸಿಗೆ ಅನ್ನಿಸಿದಾಗ ಅವರುಗಳನ್ನು ದೂರವಿಡುತ್ತಾರೆ. ಹತ್ತಿರವಿದ್ದರೂ ದೂರ. ಅವರನ್ನು ನೋಡಿಕೊಳ್ಳುವುದಿಲ್ಲ ಬದಲಾಗಿ ಸಾಕುತ್ತಾರೆ. ಸಾಕುವುದು ಪ್ರಾಣಿಗಳನ್ನು ಎಂದು ಮರತುಹೋಗಿಬಿಡುತ್ತಾರೆ. ಇದು ಕ್ರೌರ್ಯದ ಪರಮಾವಧಿ. ಅದು ಸಾಧ್ಯಾವಾಗದಿದ್ದಾಗ ವೃದ್ಧಾಶ್ರಮದ ದಾರಿ ಹುಡುಕುತ್ತಾರೆ. ಇದು 5 - 10 ವರ್ಷದ ಹಿಂದಿನ ಮಾತಾಯಿತು. ವೃದ್ಧಾಶ್ರಮದಲ್ಲಿದ್ದಾರೆ ಎಂದು ಹೊರಗಿನವರಿಗೆ (ಸಂಬಂಧಿಕರಿಗೆ) ಗೊತ್ತಾದರೆ...? ಅವಮಾನ, ತಮ್ಮಗಳ ಪ್ರತಿಷ್ಠೆಯ ಪ್ರಶ್ನೆ. ಹಾಗಾಗಿ ವೃದ್ಧರು 70 -75 ಮೀರಿದ ಮೇಲೆ ಮಕ್ಕಳು ಮೊಮ್ಮಕ್ಕಳ ದೃಷ್ಠಿಯಲ್ಲಿ ಬದುಕುವ ಅರ್ಹತೆ ಕಳೆದುಕೊಳ್ಳುತ್ತಾರೆ...!!! ಇದನ್ನು ಮಕ್ಕಳೇ ತೀರ್ಮಾನಿಸಿಬಿಡುತ್ತಾರೆ...!!!
ಈ ಮೇಲಿನ ಮಾತುಗಳು ಕಟುವಾದರೂ, ಸಹಜವಾದ ಸತ್ಯ. ಇದರ ಪರಿಣಾಮವಾಗಿ ಅವರುಗಳಿಗೆ ಊಟವನ್ನು, ಪಥ್ಯವನ್ನು ಕೊಟ್ಟೋ, ಕೊಡದೆಯೋ ಕೊಲ್ಲುತ್ತಾರೆ. ಮೊಮ್ಮಕ್ಕಳು, ಅಜ್ಜಂದಿರ ಪ್ರೀತಿ, ಮಮತೆಯನ್ನು ಕಳೆದುಕೊಳ್ಳುತ್ತರೆ. ಆದ್ದರಿಂದ ಪ್ರೀತಿಯನ್ನು ಬೇರೆಲ್ಲೋ ಹುಡುಕುತ್ತಾರೆ. ಹೀಗೆ ಸಿಗುವ ಪ್ರೀತಿ/ಸ್ನೇಹದ ಪಾವಿತ್ರ್ಯತೆ ಎಷ್ಟರ ಮಟ್ಟಿದ್ದೋ ನಮಗೆ ತಿಳಿಯುವುದಿಲ್ಲ. ಅಲ್ಲಿ ನಾವುಗಳು compromise ಆಗಲು ತಯಾರಾಗಿಬಿಡುತ್ತೇವೆ. ಇದರ ವಿಚಾರದ ಬಗ್ಗೆ ನಾವು ಯೋಚೆಸುವುದೇ ಇಲ್ಲ.
ಹೊರದೇಶಗಳಲ್ಲಿ ಮಕ್ಕಳಿಗೆ 14-18 ವರ್ಷಗಳಾದ ಮೇಲೆ ತಂದೆ ತಾಯಂದರಿಂದ ದೂರ ಹೋಗಿ ಸ್ವತಂತ್ರ್ಯರಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಅದು ಅಲ್ಲಿನ ಸಂಸೃತಿ ಅಥವಾ ಜೀವನ ಪದ್ದತಿ. ಅವರುಗಳನ್ನು ಅನುಸರಿಸಲು (ಅನುಕರಣೆ) ಹೋಗಿ ನಮ್ಮತನವನ್ನು ನಾವು ನಾಶಮಾಡಿಕೊಳ್ಳುತ್ತಿದ್ದೇವೆ. ಇದರಿಂದ ಭಾರತೀಯತೆ ಹಾಳಾಗುತ್ತಿದೆ. ಇದೆಲ್ಲಾ ನೋಡುತ್ತಾ ಹೋದರೆ ನಾವು ಯಾವ ಸ್ಥಿತಿ ಮುಟ್ಟುತ್ತೇವೆ ಎಂಬುದು ಮುಖ್ಯವಾದ ಪ್ರಶ್ನೆ. ಇಂತಹ ಜನಗಳ ಮಧ್ಯೆ ಒಂಟಿಯಾಗಿರುವುದೇ ಲೇಸು ಎಂಬ ಭಾವ ನಮ್ಮನ್ನು ಆವರಿಸುವುದು ಸಹಜ. ಸಂಬಂಧಗಳ ಮೌಲ್ಯ ಅರ್ಥವಾಗಲಿ, ಹೋದಿಕೊಂಡು ಬಾಳುವ ಮನಸ್ಥಿತಿ ನಮ್ಮದಾಗಲಿ, ಭಾರತೀಯತೆ ಮೆರೆಯಲಿ, ಭಾರತ ಮತ್ತೊಮ್ಮೆ ಜಗದ್ಗುರುವಾಗಲಿ ಎಂದು ಆಶಿಸುತ್ತೇನೆ.

No comments:
Post a Comment