ನಮ್ಮ ಮನೆಗಳಲ್ಲಿ ಕೆಲವು ದಿನಗಳಿಂದ ಮದುವೆ ಬಗ್ಗೆ ಮಾತು ಕಥೆ ನಡೆಯುತ್ತಿತ್ತು. ಅದೃಷ್ಟವಶಾತ್ ನನ್ನ ಮದುವೆ ವಿಚಾರವಂತೂ ಅಲ್ಲ. ಇಲ್ಲಿ ಅದೃಷ್ಟವಶಾತ್ ಅನ್ನಲು ಕಾರಣವಿದೆ. ಮದುವೆ ಎಂಬುದು ಎರಡು ಮನಸ್ಸುಗಳ, ಎರಡು ಹೃದಯಗಳ, ಎರಡು ಕುಟುಂಬಗಳ ಸಮ್ಮಿಲನ ಎಂದು ನಾನು ತಿಳಿದು ಕೊಂಡಿದ್ದೆ. ಇತ್ತೀಚೆಗೆ ಅದೆಲ್ಲವೂ ಸುಳ್ಳು ಎಂದು ಅನ್ನಿಸಲು ಶುರುವಾಗಿದೆ.
ಮೇಲೆ ನಾ ಹೇಳಿದ ಪದಗಳು; "ಮನಸ್ಸು, ಹೃದಯ, ಕುಟುಂಬ" ಇವುಗಳಿಗೆ ಇವತ್ತಿನ  ದಿನಗಳಲ್ಲಿ ನಮ್ಮ ಸಮಾಜ ಕೊಟ್ಟಿರುವ ಅರ್ಥವೇನು ಎಂದು ಕಂಡುಕೊಳ್ಳಲು ನನಗೆ ಆಗುತ್ತಿಲ್ಲ. ನಾನು ಅರ್ಥ ಮಾಡಿಕೊಂಡಿರುವ ಮಟ್ಟಿಗೆ ಇದಕ್ಕೆಲ್ಲ ಒಂದು ಪದದಲ್ಲಿ ಉತ್ತರ ಕೊಡಬಹುದು. ಆ ಪದ ಹೇಳಲು ನೋವಾಗುತ್ತದೆ, ಅದನ್ನು 'ವ್ಯವಹಾರ' ಎಂದು ಕರೆಯುತ್ತಿದ್ದೇನೆ!
ಮನೆಯಲ್ಲಿ ಇಂತಹ ಮಾತುಗಳನ್ನು ಕೇಳಬೇಕಾಗಿ ಬಂತಲ್ಲ ಎಂಬುದು ನನ್ನ ನೋವು. ನನ್ನ ಸಂಬಂಧಿಕರೊಬ್ಬರಿಗೆ ಹುಡುಗನನ್ನು ಹಾಗು ಅವರ ಅಣ್ಣನಿಗೆ ಹುಡುಗಿಯನ್ನು ಹುಡುಕುತ್ತಿದ್ದರು. ಇದೇ ವಿಚಾರವಾಗಿ ಅಮ್ಮ ತನ್ನ ಅಕ್ಕ, ತಂಗಿಯರು, ಅಣ್ಣ ತಮ್ಮಂದಿರೊಂದಿಗೆ ಮಾತು ನಡೆಯುತ್ತಿದ್ದವು. ಕೆಲವು ಗಂಡುಗಳನ್ನು ಬೇಡವೆಂದಿದ್ದರು. ಕಾರಣಗಳು ನನ್ನ ಮಟ್ಟಿಗೆ ವಿಚಿತ್ರ
- ಹುಡುಗ KMF ನಲ್ಲಿ ಕೆಲಸ ಮಾಡಿಕೊಂಡಿದ್ದ ಹಾಗಾಗಿ, ಆತ ಮುಂದೆ ಕೆಲಸ ಬದಲಾಯಿಸಲು ಸಾಧ್ಯವಿಲ್ಲ ಎಂಬ ಕಾರಣ.
 - ಹುಡುಗ BE / MBA ಮಾಡಿರಲ್ಲಿಲ್ಲ ಎಂಬುದು ಅವರು ಕೊಟ್ಟ ಪ್ರಮುಖ ಕಾರಣ.
 - ಹುಡುಗಿ ಕೆಲೆಸದಲ್ಲಿಲ್ಲ ಹಾಗಾಗಿ ಬೇಡ ಎಂದು ನಮ್ಮಮ್ಮನೇ ನಿರ್ಧಾರ ಮಾಡಿಬಿಟ್ಟಳು.
 - ಹುಡುಗ ನೋಡಲು ಸ್ವಲ್ಪ ವಯಸ್ಸಾಗಿ (30 ವರ್ಷ) ಕಾಣಿಸುತ್ತಿದ್ದ ಎಂಬ ಕಾರಣ.
 - ಸ್ವಂತ ಮನೆ ಇರಲ್ಲಿಲ್ಲ ಬೆಂಗಳೂರಿನಲ್ಲಿ ಎಂಬ ಮತ್ತೊಂದು ಕಾರಣ. ಅತ್ತೆ ಮಾವ ಒಟ್ಟಿಗಿದ್ದಾರೆ ಹಾಗಾಗಿ ಹುಡುಗ ಬೇಡ.
 
ಈ ರೀತಿಯ ಮಾತುಗಳನ್ನು ಕೇಳಿ ನನಗಂತೂ ಸಾಕಾಗಿ ಹೋಗಿದೆ. ಸಂಬಂಧಗಳನ್ನು ವ್ಯಾವಹಾರಿಕ ದೃಷ್ಟಿಯಲ್ಲಿ ನೋಡುವುದು ಅತೀ ಕ್ರೂರ ಎಂದು ನನ್ನ ಅಭಿಪ್ರಾಯ. ಯಾಕೆ ಈ ರೀತಿ ನಿಮ್ಮ ಯೋಚನೆ ಎಂದು ಕೇಳಬೇಕು ಎಂದು ಹಲವು ಸಲ ಅಂದುಕೊಂಡಿದ್ದೇನೆ. ಆದರೆ, ನನಗೆ ಸಮಾಜಾಯಿಶಿ ಕೊಡುತ್ತಾರೆ ಹೊರತು ಸಮರ್ಪಕವಾದ ಉತ್ತರ ಬರುವುದಿಲ್ಲ ಎಂದು ನನ್ನ ನಂಬಿಕೆ.
ಇನ್ನು ಕೆಲವು ಮಾತುಗಳು ಮತ್ತು ಇವರುಗಳ ಕಾರ್ಯಗಳನ್ನು ನೋಡುತ್ತಿದ್ದೇನೆ, ಪುನರಾವರ್ತನೆ ಎನಿಸಿದರೂ ನನಗೆ ಇವುಗಳು ಅಸಹನೀಯ. ಇನ್ನು ಹೇಳಬೇಕೆಂದರೆ ಇದು ಸಹನೆಯ ಮಿತಿಯನ್ನು ಮೀರಿ ಅಸಹ್ಯ ಎನಿಸುತ್ತಿದ್ದೆ.
- ಹುಡುಗನ Biodata ವನ್ನು ಕೊಡಬೇಕಾಗುತ್ತದೆ ಎಂದು ಹಣಕೊಟ್ಟು MBA Certificate ಪಡೆದುಕೊಳ್ಳುವುದು.
 - ಅದರಲ್ಲಿ ತಪ್ಪು ಮಾಹಿತಿ ಕೊಡಬೇಡಿ, ಮುಂದೆ ತೊಂದರೆಯಾಗಬಹುದು. ಇವರ ಅರ್ಥದಲ್ಲಿ ತೊಂದರೆ ಎಂದರೆ ಹುಡುಗಿ ಮದುವೆ ಬೇಡ ಎನ್ನಬಹುದು ಅಥವಾ ಬಿಟ್ಟು ಹೋಗಬಹುದು ಎಂದು.
 - ಕೆಲಸ ಸರಿ ಹೋಗಲಿ ಬಿಡಲಿ ಸಂಬಳ ಜಾಸ್ತಿ ಬರೋಕಡೆ ಸೇರಿಕೊ. ಇಲ್ಲವಾದಲ್ಲಿ ಹುಡುಗೀಯರು ಒಪ್ಪುವುದಿಲ್ಲ ಎಂಬ ಉಪದೇಶ.
 - ಬ್ಯಾಂಕಿನಲ್ಲಿರುವ ಹಣದ ಬಗ್ಗೆ ಒಂದಷ್ಟು ಮಾತು.
 - ನಾವು ನೋಡಲು ಚೆನ್ನಾಗಿ ಕಾಣಬೇಕು. ಆರೋಗ್ಯದ ಕಥೆ ಆಮೇಲಿನದು. ಕಾರಣ; ದಪ್ಪವಾಗಿರುವುದು, ಗಡ್ಡಬಿಡುವುದರಿಂದ ಹುಡುಗಿಯರು ಒಪ್ಪುವುದಿಲ್ಲ.
 
ಇದರಿಂದ ನನಗೆ ಹಲವು ಪ್ರಶ್ನೆಗಳು ಮನಸ್ಸಲ್ಲಿ ಹುಟ್ಟುತ್ತದೆ.
- ಮನುಷ್ಯ ಇದಕ್ಕಿಂತಲೂ ಕ್ರೂರವಾಗಿರಲು ಸಾಧ್ಯವ?
 - ವ್ಯವಹಾರ ಮಾಡುವುದರಲ್ಲೂ ಮೌಲ್ಯವೆನುವುದು ಇರುತ್ತದೆ. ಇದು ಏನು?
 - ಬದುಕಿನಲ್ಲಿ ಹಣಕ್ಕೆ, ಸೌಂದರ್ಯಕ್ಕೆ ಈ ಮಟ್ಟದ ಪ್ರಾಮುಖ್ಯತೆ ಕೊಡಬೇಕಾ?
 - ಇಂತಹ ಚಿಂತನೆಗಳಿಂದ ನಮ್ಮ ಸಮಾಜವನ್ನು ಏನು ಮಾಡುತ್ತಿದ್ದೇವೆ?
 - ಮುಂದಿನ ಪೀಳಿಗೆಗೆ ಹೇಳಿಕೊಡುವುದಾದರು ಏನನ್ನು?
 
ಒಳ್ಳೆ ಸಂಬಳ ಬರುತ್ತದೆ, ಸ್ವಂತ ಮನೆ ಇದೆ, ಬ್ಯಾಂಕಿನಲ್ಲಿ ಇಷ್ಟೇ ಹಣವಿದೆ ಎಂಬ ಕಾರಣಕ್ಕೆ ಮದುವೆಗೆ ಒಪ್ಪುತ್ತಾರೆ. ಹಾಗಾದರೆ, ನಾವು ಹುಡುಕುತ್ತಿರುವುದು ಬಾಳ ಸಂಗಾತಿಯನ್ನೊ? ಅಥವಾ ವ್ಯವಹಾರವನ್ನು ಹಂಚಿಕೊಳ್ಳಲೊ?
MBA / BE / MS ಮಾಡಿದ್ದಾರೆ ಎಂಬ ಕಾರಣಕ್ಕೆ ಮದುವೆ ಒಪ್ಪಿಕೊಳ್ಳುತ್ತಾರೆ. ಹಾಗಾದರೆ, ನಾವು ಹುಡುಕುತ್ತಿರುವುದು ವಧು, ವರರನ್ನೊ ಅಥವಾ ನಮ್ಮ ಕಚೇರಿಗೆ ಕೆಲಸ ಮಾಡುವವರನ್ನೊ?
ಅವರು ನೋಡಲು ಸುಂದರವಾಗಿದ್ದಾರೆ ಎಂಬ ಕಾರಣಕ್ಕೆ ಒಪ್ಪಿಕೋಳ್ಳುತ್ತಾರೆ. ಹಾಗಾದರೆ, ನಾವು ಮದುವೆ ಎಂದು ಆಗುವುದು ಜೀವನದಲ್ಲಿ ಜೊತೆಯಾಗಿ ಹೆಜ್ಜೆ ಇಡಲೊ ಅಥವಾ ಫ಼್ಯಾಶನ್ ಪ್ರದರ್ಶನದಲ್ಲಿ ಬೆಕ್ಕಿನ ನಡಿಗೆ ಮಾಡಲೊ?
ಇದು ಹೀಗೆ ಮುಂದುವರೆದರೆ ನಮ್ಮ ಸಮಾಜದ ಆರೋಗ್ಯ ಎಷ್ಟರ ಮಟ್ಟಿಗೆ ಹಾಳಾಗಬಹುದು ಎಂಬುದು ಯೊಚಿಸಬೇಕಾದ ಸಂಗತಿ. ಬದುಕಲು ಹಣದ ಅಗತ್ಯವಿಲ್ಲ ಎಂದು ಪ್ರತಿಪಾದಿಸುತ್ತಿಲ್ಲ. ಆದರೆ, ಹಣವೇ ಮುಖ್ಯವಲ್ಲ. ನಾವು ಹಣದ ಕೊರತೆ, ಊಟದ ಕೊರತೆ, ಮಾಹಿತಿಗಳ ಕೊರತೆ ಹಾಗು ಇನ್ನು ಇತರೆ ಯಾವುದೇ ರೀತಿಯ ಕೊರತೆಗಳನ್ನು ತುಂಬಿಕೊಳ್ಳಬಹುದು. ಆದರೆ, ಪ್ರೀತಿಗೆ ಬರ ಬಂದರೆ ಸಮಾಜ ಜೀವಂತ ಶವವಾಗುತ್ತದೆ. ಅಂತಹ ಸಮಾಜದ ಕಲ್ಪನೆಯೆ ನನ್ನಲ್ಲಿ ಭಯ ಹುಟ್ಟಿಸುತ್ತಿದೆ.
ಈ ಮೂಲಕ ನಾನು ಕೇಳಿಕೊಳ್ಳುವುದು ಒಂದೆ, ದಯವಿಟ್ಟು ಪ್ರೀತಿಸುವುದನ್ನು ಕಲಿಯಿರಿ.
No comments:
Post a Comment