August 19, 2015

ಆಧ್ಯಾತ್ಮದ ತಳಹದಿಯಲ್ಲಿ ಉಪೇಂದ್ರ ಮತ್ತು ಉಪ್ಪಿ 2

 
ಹೋದ ವಾರ ಬಿಡುಗಡೆಯಾದ 'ಉಪ್ಪಿ 2' ಚಲನಚಿತ್ರದ ಬಗ್ಗೆ ತುಂಬ ಚರ್ಚೆ ನಡೆಯುತ್ತಿದೆ. ಇದರೊಟ್ಟಿಗೆ 15 - 16 ವರ್ಷಗಳ ಹಿಂದೆ ಬಿಡುಗಡೆಯಾದ 'ಉಪೇಂದ್ರ' ಚಿತ್ರದ ಬಗ್ಗೆಯೂ ಮಾತಾಡುತ್ತಾರೆ. ಹಲವು ಜನರಿಗೆ ಈ ಚಿತ್ರಗಳು ಅರ್ಥವಾಗುವುದೇ ಅನುಮಾನ. ಇದೇ ಕಾರಣ ಹಲವರು ಚಿತ್ರಗಳನ್ನು ಚೆನ್ನಾಗಿಲ್ಲ ಎಂದಿರುವುದು ಉಂಟು. ಚಿತ್ರಗಳು ಅರ್ಥವಾಗಲಿ ಬಿಡಲಿ, ಸಮಯ ಕಳೆಯುವ ದೃಷ್ಟಿಯಿಂದ ಚಿತ್ರಗಳನ್ನು ನೋಡುವ ಹಲವರಿದ್ದಾರೆ. ಆದರೆ, ನನಗೆ ಈ ಚಿತ್ರಗಳನ್ನು 'ಆಧ್ಯಾತ್ಮಿಕ' ದೃಷ್ಟಿಕೋನದಲ್ಲಿ ನೋಡಲು ಬಯಸುತ್ತೇನೆ.

ಈ ಎರಡು ಚಿತ್ರಗಳ ಕೆಲವು ಸಂಭಾಷಣೆಗಳನ್ನು ಗಮನಿಸಿದ್ದೇನೆ. ಸಾಧ್ಯವಾದಾಗ ಎಲ್ಲರು ಗಮನಿಸಿ...
  • ''ನಾನು' ಎಂಬುದು ಹೋದರೆ ಉಳಿಯೋದೆ 'ನೀನು''
  • ''ನಾನು' ಎನ್ನುವ ಇವನು ಯಾರು?'
  • 'ನನಗೆ ಗೊತ್ತು ಎನ್ನುವವನಿಗೆ ಏನು ಗೊತ್ತಿರುವುದಿಲ್ಲ, ನನಗೆ ಗೊತ್ತಿಲ್ಲ ಎನ್ನುವವನಿಗೆ ಎಲ್ಲವೂ ಗೊತ್ತಿರುತ್ತದೆ.'
  • 'ತುಂಬ ಯೋಚಿಸಿ ಹೇಳುತ್ತಿದ್ದೇನೆ, ಯೋಚಿಸಬೇಡ.'
  • 'ಯೋಚಿಸದೆ ಇದ್ದರೆ ಪ್ರತಿ ಕ್ಷಣ ಬದುಕಬಹುದು.'
ಇಲ್ಲಿ ನಾವು ಗಮನಿಸಿದರೆ ತಿಳಿಯುತ್ತದ್ದೆ, 'ನಾನು' ಎಂಬ ಅಹಂ ಭಾವನೆಯನ್ನು ತೊರೆದಾಗ ಉಳಿಯುವುದೇ 'ನೀನು'. ಇಲ್ಲಿ ನೀನು ಎಂಬುದು ಆ ದೈವತ್ವದ ಕುರಿತಾದದ್ದು. ಎಲ್ಲ ನೀನು, ನಿನ್ನದು ಎಂಬುದು ದೇವರಿಗೆ ಸಮರ್ಪಣಾ ಮನೋಭಾವವನ್ನು ಸೂಚಿಸುತ್ತದೆ. ಉಪೇಂದ್ರ ಚಿತ್ರದಲ್ಲಿ 'ನಾನು' ಎಂಬ ಭಾವ ಹಾಗು ಅತಿಯಾದ ಕಾಮನೆಗಳು ಮನುಷ್ಯನನ್ನು ಪ್ರಪಾತಕ್ಕಿಳಿಸುತ್ತದೆ ಎಂಬ ವಿಚಾರವನ್ನು ಚೆನ್ನಾಗಿ ಚಿತ್ರಿಸಲಾಗಿದೆ.

'ನಾನು' ಯಾರು ಎಂಬುವ ವಿಚಾರ ಭಾರತೀಯರಾದ ನಮ್ಮನ್ನು ಕಾಡಿದಷ್ಟು ಬೇರೆಯವರಿಗೆ ಕಾಡಿದಿಲ್ಲ. ಈ ವಿಚಾರವೂ ಎರಡೂ ಚಿತ್ರಗಳ ಹಲವು ಭಾಗಗಳಲ್ಲಿ ಕಾಣಿಸುತ್ತದ್ದೆ. ನಮ್ಮನ್ನು ಯಾರು? ಎಂದು ಕೇಳಿದರೆ ನಮ್ಮ ತಂದೆ, ತಾಯಿ, ಅಜ್ಜ, ಅಜ್ಜಿ ಮೂಲಕ ಅಥವಾ ನಮ್ಮ ವೃತ್ತಿ ಅಥವಾ ನಮ್ಮ ಶ್ರೀಮಂತಿಕೆ ಅಥವಾ ನಮ್ಮ ಪದವಿ ಗಳ ಮೂಲಕ ನಮ್ಮನ್ನು ನಾವು ಪರಿಚಯಿಸಿಕೊಳ್ಳುತ್ತೇವೆ.  ಅಂದರೆ ನಮ್ಮನ್ನು ನಾವು ಪರಿಚಯಿಸಿಕೊಳ್ಳಲು ಒಂದು ಆಧಾರ ಬೇಕು, ಆಧಾರವಿಲ್ಲದೇ ನಾವು ಏನು ಮಾತಾಡುವುದಿಲ್ಲ, ಹಾಗು ಮಾತಾಡಲು ಸಾಧ್ಯವಿಲ್ಲ. ಈ ಮಹಾವಿಶ್ವದಲ್ಲಿ ನಾವಾದರು ಯಾರು? ಈ ಆಧಾರಗಳಾದರು ಯಾವುದು? ಇದಕ್ಕೆಲ್ಲ ಬೆಲೆ ಏನು? ಇಂತಹ ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರವಿರುವುದಿಲ್ಲ. ಆಧ್ಯಾತ್ಮಿಕವಾಗಿ ಮೇಲೇರಿದಂತ್ತೆಲ್ಲ ಇವುಗಳಿಗೆ ಉತ್ತರ ಸಿಗುತ್ತದೆ ಎಂದು ನನ್ನ ನಂಬಿಕೆ.

ನಮಗೆ ಏನು ತಿಳಿದಿಲ್ಲ ಎನ್ನುವುದು ಮತ್ತೆ ದೈವತ್ವದೆಡೆಗಿನ ಸಮರ್ಪಣ ಭಾವಕ್ಕೆ ಹೋಲಿಸಬಹುದು. 'ಇದ್ದರೂ ಇರದಂತಿರಬೇಕು' ಎಂಬ ಮಾತಿನಂತೆ. ಎಲ್ಲ ತಿಳಿದವನು ಏನು ತಿಳಿಯದಂತೆ ಇರುವುದನ್ನು ಪ್ರತಿಪಾದಿಸುತ್ತದೆ. ಕಣ್ಣನ್ನು ತೆರೆದಾಗ ಎದುರಿಗಿರುವುದು ಮಾತ್ರ ಕಾಣಿಸುತ್ತದೆ. ಧ್ಯಾನದಿಂದ ಆಧ್ಯಾತ್ಮದಲ್ಲಿ ಔನ್ನತ್ಯ ಸಾಧಿಸಿ, ಕಣ್ಮುಚ್ಚಿದರೆ ಇಡೀ ವಿಶ್ವವೇ ಕಾಣಿಸುತ್ತದೆ. ಸೃಷ್ಟಿಯ ರಹಸ್ಯಗಳಿಲ್ಲವೂ ನಮ್ಮೆದುರಿಗೆ ತೆರೆದುಕೊಳ್ಳುತ್ತದೆ.

'ಯೋಚನೆ ಮಾಡಬಾರದು' ಎಂಬ ವಾಕ್ಯಗಳು 'ಸ್ಥಿತಪ್ರಜ್ಞ' ಎಂಬ ಮನಸ್ಥಿತಿಯನ್ನು ಪ್ರತಿಪಾದಿಸುತ್ತದೆ. ಆಧ್ಯಾತ್ಮದ ಮೂಲ ತತ್ವವೇ ನಮ್ಮನ್ನು ಸ್ಥಿತಪ್ರಜ್ಞರಾಗಿಸುವುದು. 'ಉಪ್ಪಿ 2' ನಲ್ಲಿ ಆತನ ಮನೆಯವರ ಸಾವಿನ ನಾಟಕದ ಪ್ರಸಂಗವು ಈ ತತ್ವವನ್ನು ಸೂಚಿಸುತ್ತದೆ. ಇದೊಂದೆ ಅಲ್ಲದೆ ಚಿತ್ರದ ಹಲವಾರು ಸನ್ನಿವೇಶಗಳು ಈ ತತ್ವವನ್ನು ಪ್ರತಿಪಾದಿಸಿತ್ತದೆ. ಇರುವ ಸತ್ಯವನ್ನು ಇದ್ದ ಹಾಗೆ ಒಪ್ಪಿಕೊಳ್ಳಲು 'ಸ್ಥಿತಪ್ರಜ್ಞ'ನೊಬ್ಬನಿಗೆ ಮಾತ್ರ ಸಾಧ್ಯವಾಗುವಂತಹುದು. ಸನ್ನಿವೇಶ ಓಳ್ಳೆಯದಾದರು ಸರಿ, ಕೆಟ್ಟದಾದರೂ ಸರಿ ಎರಡರಲ್ಲೂ ಹಿಗ್ಗದೇ, ಕುಗ್ಗದೇ ಬದುಕುವುದನ್ನು ನಾವು ಕಲಿಯಬೇಕು. ಆಗ ಮಾತ್ರ ನಮ್ಮ ಬದುಕನ್ನು ಪ್ರತಿ ಕ್ಷಣ ಆನಂದದಿಂದ ಬದುಕಬಹುದು. ನಾವುಗಳು 'ಆನಂದ' ಮತ್ತು 'ಸಂತೋಷ, ಸುಖ' ಪದಗಳ ನಡುವಿನ ವ್ಯತ್ಯಾಸ ತಿಳಿದುಕೊಳ್ಳಬೇಕು. ಆನಂದ ಆತ್ಮಕ್ಕೆ ಸಂಭಂದಿಸಿದ್ದು. ಸಂತೋಷ, ಸುಖ ದೇಹಕ್ಕೆ ಸೀಮಿತವಾದದ್ದು. ಸೌಂದರ್ಯವೆನ್ನುವುದು ಆತ್ಮದಿಂದ ನೋಡಿ ಆನಂದಿಸಬೇಕೆ ಹೊರತು, ಇಂದ್ರೀಯಗಳಿಂದ ಅನುಭವಿಸಿ ಸುಖಿಸುವುದಲ್ಲ. ಈ 'ಆನಂದ ಮತ್ತು ಆತ್ಮಜ್ಞಾನ'ವೆಂಬ ವಿಚಾರಗಳು ಈ ಎರಡು ಚಿತ್ರಗಳಲ್ಲಿ ಮನೋರಂಜನಾತ್ಮಕವಾಗಿ ಚಿತ್ರಿಸಲಾಗಿದೆ.

ಕೊನೆಯದಾಗಿ ಹೇಳಬೇಕೆಂದರೆ, ಚಿತ್ರಗಳ ಮೂಲ ಸತ್ವ ಅರ್ಥವಾಗದಿದ್ದರೇ 'ಆಧ್ಯಾತ್ಮ'ದ ಕಡೆ ವ್ಯಕ್ತಿಯ ಮನಸ್ಸು ಹೊರಳಿಲ್ಲ ಎಂದು ನನ್ನ ಅಭಿಪ್ರಾಯ. ತುಂಬ ದಿನಗಳ ನಂತರ ಒಂದು ಒಳ್ಳೆ ಸಿನಿಮಾ ನೋಡಿದ ಹಾಗಾಯಿತು. ಉಪೇಂದ್ರರವರಿಗೆ ಈ ಮೂಲಕ ನನ್ನ ಧನ್ಯವಾದಗಳು.

No comments:

Post a Comment