September 20, 2015

ನಾವ್ಯಾಕೆ ಹೀಗೆ...? - ಸುತ್ತಮತ್ತಲಿನ ಜನ

ಇತ್ತೀಚೆಗೆ ನಮ್ಮ ಸುತ್ತಮತ್ತಲಿನ ಜನಗಳ, ನಮ್ಮ ಸಂಬಂಧಿಕರ ಮತ್ತು ನನ್ನ ಸ್ನೇಹಿತರ ಜೀವನದ ಕ್ರಮಗಳನ್ನು, ಅವರುಗಳ ಗುಣ ಸ್ವಭಾವವನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಇವರಲ್ಲಿ ನನ್ನ ವಯ್ಯಸ್ಸಿನವರು, ಹಿರಿಯರು, ಕಿರಿಯರು ಎಲ್ಲ ವಯೋಮಾನದವರು ಸೇರಿದ್ದಾರೆ. ಗಮನಿಸಿದಂತ್ತೆಲ್ಲ ಹಲವು ವಿಚಾರಗಳು ತಿಳಿಯುತ್ತಾ ಹೋಯಿತು. ಈ ಕೆಲವು ವಿಚಾರಗಳು ಎಲ್ಲರಿಗೂ ಅನ್ವಯಿಸುತ್ತದೆ ಅಂತ ಆಲ್ಲ ಆದರೆ ಬಹುತೇಕ ಜನಗಳಲ್ಲಿ ನಾ ಹೇಳುವ ವಿಚಾರಗಳು ಕಂಡುಬರುತ್ತದೆ. ಇದರಲ್ಲಿ ಕೆಲವು ನನಗೂ ಅನ್ವಯಿಸುತ್ತದೆ.
  • ವಯಸ್ಸಾದಂತ್ತೆಲ್ಲ ವಿವೇಕ ಹೆಚ್ಚಾಗಬೇಕು, ಆದರೆ ನಾ ಕಂಡಂತೆ ಅದು ಕ್ಷೀಣಿಸುತ್ತಿದೆ.
  • ಸಣ್ಣ ಪುಟ್ಟ ವಿಚಾರಗಳಿಗೆ ವೈಮನಸ್ಯ, ದುಃಖಿತರಾಗುವುದು.
  • ನಾ ಒಬ್ಬ ಚೆನ್ನಾಗಿದ್ದರೆ ಸಾಕು ಅನ್ನುವಂತಹ ಭಾವನೆ. ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ Self Centered.
  • ಹಣ ನಮ್ಮ ಬದುಕಿನ ಎಲ್ಲ ಸುಖಗಳನ್ನು ಪೂರೈಸುತ್ತದೆ ಎಂಬ ಚಿಂತನೆ.
  • ಸತ್ಯವನ್ನು / ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಕ್ಕೆ ಹಿಂಜರಿಕೆ.
  • ಸ್ವಾಭಿಮಾನದ ಕೊರತೆ. ಸ್ವಾಭಿಮಾನ ಮತ್ತು ಅಹಂಕಾರ ಗುಣಗಳ ನಡುವಿನ ವ್ಯತ್ಯಾಸದ ತಿಳುವಳಿಕೆಯ ಕೊರತೆ.
ಈ ವಿಚಾರಗಳ ಬಗ್ಗೆ ನನಗೆ ನಾನೆ ಹಲವು ಸಲ ಪ್ರಶ್ನೆ ಕೇಳಿಕೊಂಡಿದ್ದೇನೆ 'ನಾವ್ಯಾಕೆ ಹೀಗೆ?' ಎಂದು. ಕೆಲವು ಉತ್ತರಗಳು ಮನಸ್ಸಿಗೆ ಬಂದಿತಾದರೂ ಯಾವುದು ನನಗೆ ಸಮರ್ಪಕ ಎಂದನ್ನಿಸಲಿಲ್ಲ. ಆ ಉತ್ತರಗಳು ಹೀಗಿವೆ.

ನಾವು ಬೆಳೆದ ವಾತಾವರಣ

ಈ ಉತ್ತರವನ್ನು ಹಲವರು, ಹಲವಾರು ಸಮಸ್ಯೆಗಳಿಗೆ ಕಾರಣವಾಗಿ ಕೊಡುತ್ತಾರೆ. ಆದರೆ ನನಗನ್ನಿಸುವುದು, ಒಂದೇ ಮನೆಯಲ್ಲಿ ಬೆಳೆದ ಮಕ್ಕಳಿಗೆ ಬಿನ್ನ ರೀತಿಯ ವಾತಾವರಣ ಸೃಷ್ಟಿಯಾಗುವುದಾರು ಹೇಗೆ? ಮಕ್ಕಳನ್ನು ಹೆತ್ತ ತಂದೆ ತಾಯಂದಿರು ತಮ್ಮ ಸ್ವಂತ ಮಕ್ಕಳಿಗೆ ಮಲ ತಾಯಿ ಧೊರಣೆ ತೋರಿದರೆ ಇಂತಹ ಸ್ಥಿತಿ ಬರಬಹುದು. ಇದು ಸತ್ಯವಾದರೆ ಬೇಲಿಯೆ ಎದ್ದು ಹೊಲ ಮೇಯ್ದಂತೆ. ಮಾತೃತ್ವವನ್ನೇ ಪ್ರಶ್ನೆ ಮಾಡಿದಂತೆ. ಈ ದಿಕ್ಕಿನಲ್ಲಿ ಯೋಚಿಸುವುದು ಸರಿ ಇಲ್ಲ. ಹಾಗಿದಲ್ಲಿ ಒಂದೆ ಮನೆಯಲ್ಲಿ ಬೆಳೆದ ಮಕ್ಕಳು ಬಿನ್ನ ರೀತಿಯ ವ್ಯಕ್ತಿತ್ವ ರೂಪುಗೊಳ್ಳಲು ಕಾರಣವೇನು? ಈ ಪ್ರಶ್ನೆಯನ್ನು ನಾವುಗಳು ಸ್ವಲ್ಪ ಗಂಭಿರವಾಗಿ ಪರಿಗಣಿಸಬೇಕು.  ನನಗಂತು ಇದು ಹೇಗೆ ಸಾಧ್ಯವೆಂದು ಇದುವರೆಗು ಅರ್ಥವಾಗಿಲ್ಲ. ಹಾಗಾಗಿ 'ವಾತಾವರಣ' ಎಂಬ ಕಾರಣವನ್ನು ನಾನಂತು ಒಪ್ಪಿಕೊಳ್ಳಲು ತಯಾರಿಲ್ಲ.

ಶಿಕ್ಷಣದ ಕೊರತೆ

ಇಲ್ಲಿ ನಾ ಹೇಳುವುದು ಭೌತ್ತಿಕವಾದ ಶಿಕ್ಷಣದ ಬಗ್ಗೆ ಅಲ್ಲ ಬದಲಾಗಿ, ಮನೆಯಲ್ಲಿ, ಶಾಲೆಗಳಲ್ಲಿ, ಅಜ್ಜ, ಅಜ್ಜಿಂದಿರ ಮಡಿಲಲ್ಲಿ ಕೊಡಬೇಕಾದ 'ಸಂಸ್ಕಾರ' ಎಂಬುದರ ಬಗ್ಗೆ. ಇವತ್ತಿನ ದಿನಗಳಲ್ಲಿ ಅಪ್ಪ, ಅಮ್ಮ ಕೆಲಸಕ್ಕೆಂದು ಹೋಗುತ್ತಾರೆ. ಮಕ್ಕಳ ಬಗ್ಗೆ ಎಷ್ಟರ ಮಟ್ಟಿಗೆ ಗಮನ ಕೊಡುತ್ತಾರೊ ಗೊತ್ತಿಲ್ಲ.
ಅಜ್ಜ, ಅಜ್ಜಿಯರು ಯಾವುದೋ ಹಳ್ಳಿಯಲ್ಲಿ ಅಥವ ವೃಧ್ದಾಶ್ರಮದಲ್ಲಿ ಇರುತ್ತಾರೆ. ಇನ್ನು ಶಾಲೆಗಳು, ಹಣ ಪಡೆಯುವ ಆದಾಯ ತೆರಿಗೆ ಇಲಾಖೆ ಎಂಬಂತಾಗಿದೆ. ಕೆಲವು ಘಟನೆಗಳನ್ನು ನೆನೆದರಂತೂ ಮಕ್ಕಳನ್ನು ಶಾಲೆಗಳಿಗೆ ಕಳಿಸದಿರುವುದೆ ಲೇಸು ಎನ್ನಿಸುತ್ತದೆ.

ಸ್ವಾರ್ಥ

ನಾನೊಬ್ಬ ಸರಿ ಇದ್ದರಾಯಿತು, ಇತರರು ಏನಾದರು ಪರವಾಗಿಲ್ಲ. ಇಂತಹ ಮಾನಸಿಕ ಸ್ಥಿತಿಯನ್ನು ನಾವು ಸರ್ವೇಸಾಮಾನ್ಯವಾಗಿ ಕಣಬಹುದು. ಇಂತಹ ಚಿಂತನೆಗಳು ಸಮಾಜದ ಮೌಲ್ಯವನ್ನು ಕೆಡಿಸುತ್ತದೆ. ಸರ್ವೇ ಜನಃ ಸುಖಿನೋ ಬವಂತು ಎಂಬ ಅತ್ಯಂತ ದೊಡ್ಡ ವೇದಾಂತ ತತ್ವವನ್ನು ಭಾರತದ ಸನಾತನ ಧರ್ಮ ಪ್ರತಿಪಾದಿಸಿತ್ತು. ಇದನ್ನು ಮರೆತು ಇಂದಿನ ಬಹಿತೇಕ ಜನರು ಬದುಕಿದ್ದಾರೆ. ತ್ಯಾಗದಿಂದ ಮಾತ್ರ ಸಾತ್ಷಾತ್ಕಾರ ಸಾಧ್ಯ ಎಂಬ ಸ್ವಾಮೀ ವಿವೇಕಾನಂದರ ಮಾತು ಎಷ್ಟು ಜನರಿಗೆ ತಿಳಿದಿದೆ ಎಂಬುದೇ ಒಂದು ಪ್ರಶ್ನೆ.

ದುಡ್ಡೇ ದೊಡ್ಡಪ್ಪ!

ಹಣವೊಂದಿದ್ದರೆ ಸಾಕು ಎಲ್ಲವನ್ನು ಕೊಳ್ಳಬಲ್ಲೆ, ಎಲ್ಲರನ್ನು ಆಳಬಲ್ಲೆ ಎಂಬ ಚಿಂತನೆ ಬಹಳಷ್ಟು ಮಂದಿಗೆ ಇದೆ. ಅಂಗ್ಲ ಭಾಷೆಯಲ್ಲಿ ಒಂದು ವಾಕ್ಯವಿದೆ "You can dominate me but not my ideologies". ಯಾರಾದರು ನಮ್ಮನ್ನು ಹತ್ತಿಕ್ಕಬಹುದೇ ಹೊರತು ನಮ್ಮ ಚಿಂತನೆಗಳನ್ನಲ್ಲ.  ನಮ್ಮಲ್ಲಿ ಸ್ವಾಭಿಮಾನವೆಂಬುದು ಧೃಡವಾಗಿ ಜಾಗೃತವಾದರೆ ಬಹುಶಃ ನಮ್ಮನ್ನು ಯಾರು ಹತ್ತಿಕ್ಕಲು ಸಾಧ್ಯವಿಲ್ಲ ಎನ್ನಿಸಿಸುತ್ತದೆ. ಹಣದ ಮದವೇರಿದ್ದರೆ ಯೋಚನಾ ಶಕ್ತಿ ಇರುವುದ್ದುಇಲ್ಲ ಎಂದು ತಿಳಿದಿದ್ದೆ. ಆದರೆ ಕೆಲವರಿಗೆ ಹಣ (ಶಕ್ತಿ) ಇಲ್ಲದ್ದಿದ್ದರು ದರ್ಪ, ಅಹಂಕಾರಕ್ಕೆ ಏನು ಕಮ್ಮಿ ಇಲ್ಲ. ಹಾಗಾಗಿ ಅಹಂಕಾರ ಕೆಲವರ ಹುಟ್ಟು ಗುಣ, ಆದ್ದರಿಂದ ಅಂತಹವರಿಂದ ದೂರವಿರುವುದೇ ಲೇಸು. 'ಅಹಂಕಾರಕ್ಕೆ ಉದಾಸೀನವೆ ಮದ್ದು' ಅಂತಾರಲ್ಲ ಹಾಗೆ.

ಸ್ವಾಭಿಮಾನದ ಕೊರತೆ

ಅನುಕೂಲವಾಗುತ್ತದೆ ಎಂದರೆ ಸಾಕು ಜನರು ತಮ್ಮನ್ನು ತಾವೆ ಮಾರಿಕೊಂಡು ಬಿಡುತ್ತಾರೆ. ಈ ಮಟ್ಟಕ್ಕೆ ನಮ್ಮಲ್ಲಿನ ಸ್ವಾಭಿಮಾನ ಕುಸಿದು ಹೋಗಿದೆ. ನಮ್ಮ ಸಮಾಜನ್ನು ವಿಷದಂತೆ ವ್ಯಾಪಿಸಿಕೊಂಡಿರುವ 'ಬ್ರಷ್ಟಾಚಾರ'ಕ್ಕೆ ಮೂಲ ಕಾರಣ ಸ್ವಾಭಿಮಾನದ ಕೊರತೆ. ಒಬ್ಬರ ಮುಂದೆ ಕೈ ಚಾಚುವುದಕ್ಕೆ ಹೇಗೆ ಸಾಧ್ಯವೋ ನಾ ಕಾಣೆ.ನಾವು ಸಂಪಾದನೆ ಮಾಡಲು ಶುರುಮಾಡಿದ ಮೇಲೆ ಸ್ವತಃ ನಮ್ಮ ತಂದೆ ತಾಯಿಯ ಹತ್ತಿರ ಹಣ ಕೇಳಲು ಹೇಗಾದರು ಮನಸ್ಸು ಬರುತ್ತದೋ? ವರದಕ್ಷಿಣೆ (ಇತ್ತೀಚಿನ ವಧುದಕ್ಷಿಣೆ) - ಇದಂತೂ ಸ್ವಾಭಿಮಾನ ಎಂಬ ಪದದ ಪರಿಚಯವೇ ಇಲ್ಲ ಎಂಬುದಕ್ಕೆ ನಿದರ್ಶನ. ಒಬ್ಬರ ಹತ್ತಿರ ಹಣವನ್ನು ನಮ್ಮ ಕಷ್ಟಕಾಲದಲ್ಲಿ ಸಹಾಯ ಎಂದು ಪಡೆದಾಗ ನಮಗೆ ಆದಾಗ ಹಿಂದಿರುಗಿಸಬೇಕು ಎಂಬ ಕನಿಷ್ಟ ಪ್ರಜ್ಞೆ ಕೂಡ ಇಲ್ಲದಂತಾಗಿದೆ. ಇಂತಹ ಘಟನೆಗಳಿಗೆ ಕಾರಣ ಒಂದೆ, 'ಸ್ವಾಭಿಮಾನದ ಕೊರತೆ'. ಸ್ವಾಮೀ ವಿವೇಕಾನಂದರ ಮಾತು 'ಉತ್ತಿಷ್ಟತ ಜಾಗೃತ' ಎಂಬುದು ಪ್ರಪಂಚದಾದ್ಯಂತ ಹರಡಬೇಕು. ಆಗ ಮಾತ್ರ ಈ ಬವಣೆಗಳಿಂದ ಮುಕ್ತಿ, ಜಗತ್ತಿನಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ.

ಚಕ್ರವರ್ತಿ ಸೂಲಿಬೆಲೆ ಅಣ್ಣ ಸ್ವಾಭಿಮಾನ ಮತ್ತು ಅಹಂಕಾರಕ್ಕೂ ಇರುವ ವ್ಯತ್ಯಾಸವನ್ನು ಚೆನ್ನಾಗಿ ಹೇಳಿದ್ದಾರೆ. ಮೇಲುನೋಟಕ್ಕೆ, ಅಹಂಕಾರಿ ಮತ್ತು ಸ್ವಾಭಿಮಾನಿ ಒಂದೇ ತರಹ ಕಾಣಿಸುತ್ತಾರೆ. ಆದರೆ, ಇಬ್ಬರಿಗೂ ಆಂತರ್ಯದಲ್ಲಿ ವ್ಯತ್ಯಾಸವಿರುತ್ತದೆ. ಸ್ವಾಭಿಮಾನಿ ಆಂತರ್ಯ ಬಹಳವಾಗಿ ಬೆಳೆದಿರುತ್ತಾನೆ. ಆಂತರಿಕವಾಗಿ ನೋಡುವ ಪ್ರಯತ್ನ ಮಾಡಬೇಕು ಅಷ್ಟೇ.

ಸತ್ಯವನ್ನು ಒಪ್ಪಿಕೊಳ್ಳಲು ಹಿಂಜರಿಕೆ

ನಾವೆಲ್ಲರು ಒಂದು ಮಾತನ್ನು ಕೇಳ್ಳಿದ್ದೇವೆ 'ಸತ್ಯ ಯಾವಾಗಲು ಕಹಿ'. ಕಹಿ ಎಂದರೇನು? ಕಹಿಯೇ ಯಾಕೆ? ಎಂಬ ಪ್ರಶ್ನೆ ಹಲವು ಸಲ ನನ್ನನ್ನು ನಾನೆ ಕೇಳಿಕೊಂಡಿದ್ದೇನೆ. ಕಹಿ ಎಂಬುದು ನಮಗೆ ಸಾಹ್ಯವಿಲ್ಲದಿರುವುದು ಎಂಬುದನ್ನು ಸೂಚಿಸುತ್ತದ್ದೆ. ಸತ್ಯ ಬಹಳಷ್ಟು ಸಲ ನಮಗೆ ಹಿಡಿಸುವುದಿಲ್ಲ ಹಾಗು ನಮ್ಮ ಇಚ್ಚೆಗೆ ವಿರುದ್ಧವಾಗಿರುತ್ತದೆ ಹಾಗಾಗಿ ಇದನ್ನು ಕಹಿ ಎಂದು ಜನ ಕರೆದಿರಬಹುದು. ಉದಾಹರಣೆ ಕೊಡುವುದು ಒಳ್ಳೆಯದು ಎನ್ನಿಸಿತು.

ನಾನು 'ನಾಗರಹಾವು',  'ಹಂಸಗೀತೆ' ಚಲನಚಿತ್ರಗಳನ್ನು ಹಾಗು ಇದರ ಆಧಾರ ಕೃತಿಗಳನನ್ನೂ ಸಹ ಓದಿದ್ದೇನೆ. ಚಿತ್ರಗಳಿಗಿಂತ, ಪುಸ್ತಕವೇ ಹೆಚ್ಚು ಆಕರ್ಶಿಸಿದವು. ನಾ ಈ ಚಲನಚಿತ್ರಗಳನ್ನು ಪುಸ್ತಕಗಳನ್ನು ಓದುವ ಮುಂಚೆಯೆ ನೊಡಿದ್ದೆ ಎಂಬುದು ಗಮನಿಸ ಬೇಕಾದ ಸಂಗತಿ. ಇಲ್ಲಿ ಚಿತ್ರವನ್ನು ಎದುರಿಗೆ ಕಾಣುವ ಸತ್ಯ ಎನ್ನುವುದಾದರೆ, ಪುಸ್ತಕದ ವಾಕ್ಯಗಳು ಕಲ್ಪನೆಯ ಸುಳ್ಳು ಎನ್ನಬಹುದು. ಪುಸ್ತಕದಲ್ಲಿನ ವಾಕ್ಯಗಳು ನಮಗೆ ತಕ್ಕಂತೆ ಕಲ್ಪಿಸಿಕೊಳ್ಳಬಹುದು ಹಾಗಾಗಿ ನಮಗೆ ಹೆಚ್ಚು ಹಿಡಿಸುತ್ತದೆ. ಚಿತ್ರಗಳು ಬೇರೊಬ್ಬರ ಕಲ್ಪನೆಯ ದೃಶ್ಯ ರೂಪ. ಅದನ್ನು ನಮ್ಮ ಕಲ್ಪನೆಯೊಂದಿಗೆ ಹೊಂದಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಹಾಗೆಯೆ ಜೀವನದಲ್ಲಿ ನಮ್ಮ ಕಲ್ಪನೆಯ ಸುಳ್ಳು ಹಾಗು ಬೇರೊಬ್ಬರ ಕಲ್ಪನೆಯ (ದೈವ) ಸತ್ಯ. ಈ ಸತ್ಯವನ್ನು ಒಪ್ಪಿಕೊಳ್ಳಲು ನಮಗೆ ಖಂಡಿತ ತಾಕತ್ತುಬೇಕು.

ಸ್ವಾಮೀಜಿ ಹೇಳಿರುವಂತೆ ಭಾರತದ ತಾತ್ವಿಕ ಆಧಾರವಾದಂತಹ 'ಆಧ್ಯಾತ್ಮಿಕತೆ'ಯನ್ನು ಜಾಗೃತ ಗೊಳಿಸಿಕೊಳ್ಳಬೇಕು. ಕಣ್ಣು ಮುಚ್ಚಿ ನಮ್ಮೊಳಗೆ ನಾವು ನೋಡಿಕೊಳ್ಳಬೇಕು. ಸತ್ಯವನ್ನು ನಾವು ಸಾತ್ಷಾತ್ಕಾರ ಮಾಡಿಕೊಳ್ಳಬೇಕು. ಮತ್ತೊಮ್ಮೆ ಹೇಳುವೆ ಸ್ವಾಭಿಮಾನ ಜಾಗೃತ ಗೊಳಿಸಿಕೊಳ್ಳಬೇಕು. ಮತ್ತೊಬ್ಬರ ಹಂಗಿನಲ್ಲಿ ಬದುಕಬಾರದು. ಇಷ್ಟಾದರೆ, ಭಾರತ ಜಗತ್ಗುರು ಆಗುವುದರಲ್ಲಿ ಸಂದೇಹವಿಲ್ಲ.

No comments:

Post a Comment