ಪ್ರಜಾಪ್ರಭುತ್ವದಲ್ಲಿ ವ್ಯವಸ್ಥೆಯ ಪರ-ವಿರೋಧಗಳ ದನಿ ಸಹಜ. ಆಡಳಿತ ವ್ಯವಸ್ಥೆ ಒಂದನ್ನು ಸರಿ ದಾರಿಯಲ್ಲಿ ನಡೆಸಲು ಮುಖ್ಯವಾಗಿ ಬೇಕಾಗಿರುವುದೇ ವಿರೋಧ ಪಕ್ಷ ಅಥವಾ ದನಿ. ಸಾರ್ವಜನಿಕ ಪ್ರತಿಭಟನೆ, ಬಂದ್ ಮಾಡುವುದು ಕೂಡ ವೈರುಧ್ಯವನ್ನು ತೋರ್ಪಡಿಸುವ ಒಂದು ಸ್ವರೂಪ. ಹಾಗೆಂದು ಮಾಡಿದ್ದನ್ನೆಲ್ಲಾ ವಿರೋಧ ಮಾಡುವುದು ಸಲ್ಲದು ಮತ್ತು ವಿರೋಧಕ್ಕೂ ಒಂದು ತಾರ್ಕಿಕ ನೆಲೆಗಟ್ಟಿರಬೇಕು. ಕಳೆದ 2 ವಾರದಿಂದ ದೇಶದಲ್ಲಿ ರೈತರ ಪ್ರತಿಭಟನೆ, ಭಾರತ್ ಬಂದ್, ಮರಾಠಾ ಪ್ರಾಧಿಕಾರದ ವಿರುದ್ಧ ಕರ್ನಾಟಕ ಬಂದ್ ನಡೆದಿದೆ. ಆದರೆ, ಈ ಪ್ರತಿಭಟನೆ ಮತ್ತು ಬಂದಿನ ಬಲ, ವ್ಯಾಪ್ತಿ ಮತ್ತು ಸಾಗಿದ ರೀತಿ ಬಹಳಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿವೆ.
ಮರಾಠಾ ಜನಾಂಗದ ಅಭಿವೃದ್ಧಿಗಾಗಿ ಪ್ರಾಧಿಕಾರವೊಂದನ್ನು ಕರ್ನಾಟಕ ಸರ್ಕಾರ ರಚಿಸಿತು. ಈ ಪ್ರಾಧಿಕಾರಕ್ಕೂ ಕನ್ನಡ ಮತ್ತು ಮರಾಠಿ ಭಾಷೆಗೂ ಯಾವುದೇ ಸಂಬಂಧವಿಲ್ಲ ಎಂದು ಸರ್ಕಾರವೇ ಸ್ಪಷ್ಟಪಡಿಸಿತು. ವಾಟಾಳ್ ನಾಗರಾಜ್ ಮತ್ತು ಇತರ ಕನ್ನಡ ಪರ ಸಂಘಟನೆಗಳು ಕಳೆದ ಶನಿವಾರ ಪ್ರಾಧಿಕಾರದ ವಿರುದ್ಧ ಕರ್ನಾಟಕ ಬಂದ್ ಘೋಷಿಸಿತು. 900ಕ್ಕೂ ಹೆಚ್ಚು ಸಂಘಟನೆಗಳು ಬಂದಿಗೆ ಬೆಂಬಲ ಕೊಟ್ಟಿವೆ ಎಂದು ಬಂದಿನ ಆಯೋಜಕರು ಹೇಳಿಕೆಕೊಟ್ಟರು. ಕನ್ನಡ ಪರ ಎಂಬುದು ನಿಜವಾದ ಉದ್ದೇಶವಾಗಿದ್ದೇ ಆದರೆ 900ಕ್ಕೂ ಹೆಚ್ಚು ವಿವಿಧ ಸಂಘಟನೆಗಳಾಗಿ ವಿಭಜಿಸಿರುವುದು ಯಾಕೆ ಎಂಬ ಆತ್ಮ ವಿಮರ್ಶೆ ಯಾರೂ ಮಾಡಿಕೊಳ್ಳಲಿಲ್ಲ. ಬಂದ್ ಹಿಂದಿನ ದಿವಸದ ತನಕ ಕರ್ನಾಟಕ ರಕ್ಷಣಾ ವೇದಿಕೆ ಸ್ಪಷ್ಟವಾಗಿ ಬೆಂಬಲ ಘೋಷಣೆ ಮಾಡಲೇ ಇಲ್ಲ. ಬದಲಾಗಿ, ಬಂದಿಗೆ ನಮ್ಮ ನೈತಿಕ ಬೆಂಬಲ ಎಂದಷ್ಟೇ ಹೇಳಿತು. ಕಡೆಯದಾಗಿ ಅನಿವಾರ್ಯವೆಂಬಂತೆ ಬಂದಿಗೆ ಮುಂದಾಯಿತು. ವಾಟಾಳ್ ನಾಗರಾಜ್ ಅಂತೂ ಬಂದಿಗೆ ಎಲ್ಲರ ಬೆಂಬಲವನ್ನು ಬೇಡಿಕೊಳ್ಳುವ ಮಟ್ಟಕ್ಕೆ ಇಳಿದರು. ಕ.ರ.ವೇ ಸಂಘಟನೆ ರಾಮನಗರದಲ್ಲಿ ಬೃಹತ್ ಪ್ರತಿಭಟನೆ, ರಸ್ತೆ ತಡೆ, ಮುಷ್ಕರ ಎಂದೆಲ್ಲಾ ಘೋಷಣೆ ಮಾಡಿತು. ಇದರೊಟ್ಟಿಗೆ ಮಾಧ್ಯಮದವರು ಸಹ ಕರ್ನಾಟಕ ಸ್ತಬ್ಧವಾಗುತ್ತಾ? ಬಂದಿನ ದಿವಸ ಏನಿರುತ್ತೆ? ಏನಿರಲ್ಲ? ಎಂಬಂತಹ ಕಾರ್ಯಕ್ರಮವನ್ನೆಲ್ಲಾ ಪ್ರಸಾರ ಮಾಡಿದರು. ಆದರೆ, ಡಿಸೆಂಬರ್ 5 ಕರ್ನಾಟಕ ಸ್ತಬ್ಧವಾಗಲಿಲ್ಲ, ಜನಜೀವನ ಎಂದಿನಂತೆ ಇತ್ತು. ಬೆಂಗಳೂರಿನಲ್ಲಿ ಕೆಲವರು ಮೆರವಣಿಗೆ ಮಾಡಿ ಬಂಧಿತರಾದರು. ರಾಮನಗರದ ಬಸ್ ನಿಲ್ದಾಣದ ಒಂದು ಮೂಲೆಯಲ್ಲಿ ಬೆರಳೆಣಿಕೆಯಷ್ಟು ಜನ ಪ್ರತಿಭಟನೆ ಎಂದು ಟೈರಿಗೆ ಬೆಂಕಿ ಹಾಕಿದ್ದರು. ಪ್ರತಿಭಟನೆಕಾರರಿಗಿಂತಲೂ ಪೋಲೀಸ್ ಮತ್ತು ಮಾಧ್ಯಮದವರ ಸಂಖ್ಯೆ ಹೆಚ್ಚಿತ್ತು! ಕೊಪ್ಪಳದ ಪರಿಸ್ಥಿತಿ ಕೂಡ ಇಷ್ಟೇ ಇತ್ತು. ಇದರ ಹೊರತಾಗಿ ರಾಜ್ಯದ ಯಾವ ಜಿಲ್ಲೆಯಲ್ಲೂ ಪ್ರತಿಭಟನೆ ಎಂದು ಕರೆಸಿಕೊಳ್ಳುವಂತಹದ್ದು ನಡೆಯಲ್ಲಿಲ್ಲ. ವಿಷಾದದ ಸಂಗತಿ ಎಂದರೆ 5ನೇ ತಾರೀಖಿನ ನಂತರ ವಾಟಾಳರಾಗಲಿ, ಕ.ರ.ವೇ. ಆಗಲಿ ಮತ್ತು ಅವರು ಹೇಳಿಕೊಳ್ಳುವ ಸಂಘಟನೆಗಳಾಗಲಿ ಈ ಪ್ರಾಧಿಕಾರಾರದ ಬಗ್ಗೆ ಒಂದೂ ಮಾತಿಲ್ಲ. ಮಾಧ್ಯಮದವರೂ ಸಹ ಇದರ ಕುರಿತು ಮಾತಾಡುತ್ತಿಲ್ಲ. ಹಾಗಿದ್ದಲ್ಲಿ ಕರ್ನಾಟಕ ಬಂದ್ ಘೋಷಣೆ ಮಾಡಿದ್ದಾದರು ಯಾಕೆ? ಇದಕ್ಕೆ ತಾರ್ಕಿಕವಾದ ಅಂತ್ಯವಾದರು ಏನು? ಎಂಬಂತಹ ಪ್ರಶ್ನೆಗಳಿಗೆ ಉತ್ತರ ದೊರೆಯದಿದ್ದಲ್ಲಿ ಇಂತಹ ಸಂಘಟನೆಗಳ ಉದ್ದೇಶದ ಬಗ್ಗೆ ಅನುಮಾನ ಹುಟ್ಟಿ, ಕಾಲಕ್ರಮೇಣ ಜನಮಾನಸದಿಂದ ಆಳಿಸಿ ಹೋಗುತ್ತದೆ.
ರೈತರ ಬದುಕನ್ನು ಹಸನುಮಾಡುವ ಉದ್ದೇಶದಿಂದ ಎರಡು ವಿಧೇಯಕಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತು. ಉದ್ದೇಶಿತ ಕಾನೂನುಗಳು ರೈತರನ್ನು ಅನೇಕ ಸಂಕಷ್ಟಗಳಿಂದ ಪಾರು ಮಾಡಲಿವೆ, ದಲ್ಲಾಳಿಗಳ ಕಪಿಮುಷ್ಟಿಯಿಂದ ಮುಕ್ತರಾಗಲಿದ್ದಾರೆ ಎಂಬ ಭರವಸೆ ಪ್ರಧಾನಿ ಮೋದಿ ನೀಡಿದ್ದಾರೆ. ಇದರ ವಿರುದ್ಧ ಅಕಾಲಿದಳ ಎನ್.ಡಿ.ಎ ಮೈತ್ರಿಕೊಟ ಸರ್ಕಾರದಿಂದ ಹೊರ ನಡೆಯಿತು. ಕಳೆದ 15-20 ದಿನಗಳಿಂದ ನಿರ್ದಿಷ್ಟವಾಗಿ ಪಂಜಾಬ್ ಮತ್ತು ಹರಿಯಾಣದಲ್ಲಿ ಪ್ರತಿಭಟನೆ ನಡಿಯುತ್ತಿದೆ. ದೆಹಲಿಯಲ್ಲಿ ಪ್ರತಿಭಟನಾ ನಿರತ ಮುಖಂಡರೊಂದಿಗೆ 5-6 ಸುತ್ತು ಮಾತು ಕಥೆ ಕೂಡ ಕೇಂದ್ರ ಸರ್ಕಾರ ಮಾಡಿತು. ಅದಕ್ಕೋಪ್ಪದ ರೈತರ ಗುಂಪು ಡಿಸೆಂಬರ್ 8ನೇ ತಾರೀಖು ಭಾರತ್ ಬಂದ್ ಎಂದು ಘೋಷಿಸಿದರು. ಅಂದು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರವರ ಗೃಹಬಂಧನವಾಗಿದೆ ಎಂಬ ಸುಳ್ಳು ಸುದ್ಧಿ ಬಂದಿಗಿಂತ ಹೆಚ್ಚು ಸದ್ದು ಮಾಡಿತು. ಪಂಜಾಬ್ ಹೊರತು ಪಡಿಸಿ ಭಾರತದ ಯಾವ ರಾಜ್ಯದಲ್ಲೂ ಸಹ ಬಂದ್ ಎಂಬಂತಹ ಪರಿಸ್ಥಿತಿ ಇರಲಿಲ್ಲ. ಬಿ.ಜೆ.ಪಿ ಆಡಳಿದ ಇಲ್ಲದ ರಾಜ್ಯಗಳಾದ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಒಡಿಸ್ಸಾ, ಕಾಶ್ಮೀರ ದಲ್ಲಿ ಕೂಡ ಪ್ರತಿಭಟನೆ ವ್ಯಕ್ತವಾಗಲಿಲ್ಲ. ಹಾಗೆಂದು ಎಲ್ಲಾ ರೈತರು ಮಸೂದೆಯ ಪರವಾಗಿ ಎಂದೋ ಅಥವಾ ಪಂಜಾಬಿನಲ್ಲಿ ಮಾತ್ರ ರೈತರಿದ್ದಾರೆ ಎಂದು ಹೇಳಲಾಗುವುದಿಲ್ಲ. ಅದರೆ, ಪಂಜಾಬಿನ ಈ ಪ್ರತಿಭಟನೆಯ ಸ್ವರೂಪ ಬದಲಾಗುತ್ತಿದೆ. ಮೊದಲು ಕೃಷಿ ಮಸೂದೆ ವಿರುದ್ಧ ಎಂದಿದ್ದ ಪ್ರತಿಭಟನೆ ಗುಂಪಲ್ಲಿ ಪಾಕೀಸ್ತಾನ, ಆರ್ಟಿಕಲ್ 370 ಪರ, ಗೌತಮ್ ನೌಲಖ, ಸುಧಾ ಭರದ್ವಾಜ್, ಉಮರ್ ಖಲಿದ್, ಶರ್ಗೀಲ್ ಇಮಾಮ್ ರಂತಹ ಆರೋಪಿಗಳ ಬಿಡುಗಡೆಯ ಘೋಷಣೆಗಳು ಕೇಳಿಸುತ್ತಿವೆ.
ಜಿಯೋ ಸಿಮ್ಮನ್ನು ಸುಟ್ಟು ಹಾಕುವ ದೃಶ್ಯಗಳು ಕಂಡು ಬಂದವು. ಕೃಷಿ ಮಸೂದೆಗೂ ಅಂಬಾನಿ ಮಾಲಿಕತ್ವದ ಜಿಯೋಗೂ ಇಲ್ಲದ ಸಂಬಂಧ ಇಲ್ಲಿ ಕಲ್ಪಿಸಲಾಗುತ್ತಿದೆ.
ಕೆನಡದ ಪ್ರಧಾನಿ ಜಸ್ಟಿನ್ ಟ್ರುಡೋ ಈ ಪ್ರತಿಭಟನೆ ಪರವಾಗಿ ಮಾತಾಡಿದ್ದಾರೆ, ಲಂಡನ್ನಿನ ಬಿ.ಬಿ.ಸಿ. ಮತ್ತು ಚೀನಾದ ಗ್ಲೋಬಲ್ ಟೈಮ್ಸ್ ಪ್ರತಿಭಟನೆಯ ಸುದ್ದಿಯನ್ನು ಬಿತ್ತರಿಸಿದೆ. ಜಾಗತಿಕ ಮಟ್ಟದಲ್ಲಿ ಭಾರತ ಸರ್ಕಾರವನ್ನು ರೈತ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಇದಾಗಿದೆ.
ರೈತರು ಮತ್ತು ಬಡವರ ಹೆಗಲ ಮೇಲೆ ಕೋವಿ ಇಟ್ಟು ಇನ್ನೊಬ್ಬರ ಮೇಲೆ ಗುಂಡು ಹಾರಿಸುವ ಪ್ರಯತ್ನ ಭಾರತದಲ್ಲಿ ಕಮ್ಯುನಿಸ್ಟರು ಮತ್ತು ಕೆಲ ವಿರೋಧ ಪಕ್ಷಗಳು ಮಾಡುತ್ತಲೇ ಇವೆ. ಇವರ ರಾಜಕೀಯದ ಷಡ್ಯಂತ್ರದ ನಡುವೆ ನಿಜವಾದ ರೈತನ ದನಿ ಕೇಳಬಹುದೆ ಎಂಬುದು ಪ್ರಶ್ನಾತೀತ.
ಆಡಳಿತ ವ್ಯವಸ್ಥೆಯ ಯಾವುದೇ ಕ್ರಮ ಜನ ವಿರೋಧಿಯಾದರೆ ಪ್ರತಿಭಟನೆ, ಬಂದ್ ಅಥವಾ ವೈರುಧ್ಯ ಸಹಜವಾಗೆ ವ್ಯಕ್ತವಾಗುತ್ತದೆ. ಸರ್ಕಾರ ಕೊರೋನಾದ ಲಾಕ್ಡೌನ್ ತೆರೆದ ಮೇಲೂ ಕೆಲವು ಜೆಲ್ಲೆಗಳಲ್ಲಿ ಸ್ವಯಂಘೋಷಿತ ಲಾಕ್ಡೌನ್ ಆಗಿದ್ದು ನಾವು ಗಮನಿಸಬಹುದು. ತಮ್ಮ ಶಕ್ತಿಯ ಅರಿವಿಲ್ಲದೆ, ತಮ್ಮ ಹೋರಾಟಕ್ಕೆ ತಾರ್ಕಿಕ ನೆಲಗಟ್ಟಿಲ್ಲದೆ ಮಿತಿಮೀರಿದ ಹೇಳಿಕೆ ಕೊಡುವುದು ತರವಲ್ಲ ಎಂಬುದು ವಾಟಾಳ್ ನಾಗರಾಜ್ ಮತ್ತು ಇತರ ಸಂಘಟನೆಗಳಿಗೆ ಅರಿವಾಗಬೇಕು. ಬೇರೆಯವರ ಹೆಸರಿನಲ್ಲಿ ತಮ್ಮ ಬೇಳೆಬೇಯಿಸಿಕೊಳ್ಳುವ ರಾಜಕೀಯದವರ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು. ಭಾರತಕ್ಕೆ ಮಾರಕವಾಗಿರುವಂತಹ ಕಮ್ಮುನಿಸ್ಟರನ್ನು ಹೊರಗಿಡಲೇಬೇಕು. ಸ್ವಾರ್ಥದ ಬುನಾದಿಯ ಮೇಲೆ ಪ್ರಜಾಪ್ರಭುತ್ವ ಯಶಸ್ಸು ಕಾಣುವುದಿಲ್ಲ.




































