ಕೆಲವು ದಿನಗಳಿಂದ ಭಾರತದಲ್ಲಿ ಕೇಳಿ ಬರುತ್ತಿರುವ ಪತ್ರಕರ್ತನ ಹೆಸರು ಅರ್ನಬ್. ಸುಶಾಂತ್ ಸಾವಿನ ಪ್ರಕರಣ, ರಾಜಕೀಯ ಪಕ್ಷಗಳ ಹಗರಣಗಳು, ಬಾಲಿವುಡ್ಡಿನ ಡ್ರಗ್ಸ್ ಮಾಫಿಯ, ಮಾಧ್ಯಮದವರ ಟಿ.ಆರ್.ಪಿ ಹಗರಣ, ಪಾಲ್ಘರ್ ಸಾಧುಗಳ ಕೊಲೆ ಪ್ರಕರಣ ಹಾಗು ಮುಖ್ಯವಾಗಿ ದೇಶದ ಪರವಾಗಿ ಮತ್ತು ಸಮಸ್ಯೆ ಕುರಿತು ಸುಸ್ಪಷ್ಟವಾಗಿ ದನಿ ಎತ್ತುವ ರಾಷ್ಟ್ರೀಯವಾದಿ ಪತ್ರಕರ್ತ ಅರ್ನಬ್.
ಆತ 2016 ರಲ್ಲಿ ಟೈಮ್ಸ್ ನೌ ಸಂಸ್ಥೆಯಿಂದ ಹೊರಬಂದು ರಿಪಬ್ಲಿಕ್ ಸಂಸ್ಥೆ ಕಟ್ಟಿದ ರೀತಿ ಅದ್ಭುತ. ಕಟ್ಟಡದ ವಿನ್ಯಾಸದ ಸಲುವಾಗಿ ಅನ್ವಯ್ ನಾಯ್ಕರ ಕಾನ್ಕಾರ್ಡ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತದೆ ರಿಪಬ್ಲಿಕ್ ಸಂಸ್ಥೆ. ಹಣದ ಕಾರಣವನ್ನು ಕೊಟ್ಟು ಅರ್ನಬ್ ಮತ್ತು ಇನ್ನಿಬ್ಬರ ಹೆಸರು ಬರೆದಿಟ್ಟು ನಾಯ್ಕ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಕಳೆದ ವರ್ಷ ಅರ್ನಬ್ ಮತ್ತು ಇತರರನ್ನು ಆರೋಪ ಮುಕ್ತಗೊಳಿಸಿತ್ತು. ರಿಪಬ್ಲಿಕ್ ಶುರುವಾದ ನಂತರವಂತೂ ಅರ್ನಬ್ನ ದನಿ ಮತ್ತಷ್ಟು ಜೋರಾಯಿತು. ಶುಶಾಂತ್ ಪ್ರಕರಣವನ್ನು ಪ್ರತಿದಿನ ಜನಮಾನಸದಲ್ಲಿ ಇರುವಂತೆ ನೋಡಿಕೊಳ್ಳುವಲ್ಲಿ ಅರ್ನಾಬ್ನ ಪಾತ್ರ ದೊಡ್ಡದು. ಬಾಲಿವುಡ್ಡಿನ ಡ್ರಗ್ಸ್ ಪ್ರಕರಣ ಬಗ್ಗೆ ಕೂಡ ಸಾಧ್ಯವಾದಷ್ಟು ಆಳಕ್ಕಿಳಿದು ಅದರ ವಿರುದ್ಧ ದನಿ ಎತ್ತಿದ. ಪಾಲ್ಘರ್ನ ಸಾಧುಗಳ ಕೊಲೆ ಪ್ರಕರಣದ ಕುರಿತು ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸುತ್ತಲೇ ಮುಂದುವರೆದ. ಇತ್ತೀಚಿನ ಟಿ.ಆರ್.ಪಿ ಹಗರಣ ವಿಚಾರದಲ್ಲಿ ರಿಪಬ್ಲಿಕ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ಪರಂ ಬಿರ್ ವಿರುದ್ಧ ಸಹ ದನಿ ಎತ್ತಿದ್ದು ಇದೇ ಅರ್ನಬ್. ಕಾಂಗ್ರೆಸಿನ ಸೋನಿಯಾರನ್ನು ಅಂಟೋನಿಯೋ ಮೈನೋ ಎಂದು ಪದೇ ಪದೇ ಕರೆದ. ಈ ದೇಶದ ಕಮ್ಯುನಿಸ್ಟರಿಗಂತೂ ಅರ್ನಬ್ ತನ್ನ ನೇರ ಮತ್ತು ನಿಷ್ಠುರವಾದ ಪ್ರಶ್ನೆಗಳಿಂದ ಸಿಂಹಸ್ವಪ್ನವಾಗಿ ಕಾಡಿದ್ದ.
ಇದೆಲ್ಲದರ ಪರಿಣಾಮ ಎಂಬಂತೆ ಈ ವರ್ಷದ ಏಪ್ರಿಲ್ ಅಲ್ಲಿ ಕೆಲವು ಗೂಂಡಾಗಳಿಂದ ಅರ್ನಬ್ ಮತ್ತು ಆತನ ಪತ್ನಿಯ ಮೇಲೆ ಹಲ್ಲೆ ಪ್ರಯತ್ನವಾಯಿತು. ಮುಚ್ಚಿಹೋದ ಅನ್ವಯ್ ನಾಯ್ಕರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷವಾದ ವಾರೆಂಟ್ ಸಹ ಇಲ್ಲದೆ ಕಳೆದ ವಾರ ಆತನನ್ನು ಮುಂಬೈ ಪೊಲೀಸ್ ಬಂಧಿಸಿತು. ಜೈಲಿನಲ್ಲಿ ತನ್ನ ಜೀವಕ್ಕೆ ಆಪತ್ತಿದೆ ಎಂದು ಅರ್ನಬ್ ಹೇಳಿದನ್ನು ನೋಡಿದ್ದೇವೆ. ಪೊಲೀಸ್ ವ್ಯವಸ್ಥೆ ಬಗೆಗೆ ಸಾಮಾನ್ಯ ಜನರಿಗಿಂತ, ಪತ್ರಕರ್ತನಿಗಿಂತ ನಿಜವಾದ ಅಪರಾಧಿಗಳಿಗೆ, ಭಯೋತ್ಪಾದಕರಿಗೆ ನಂಬಿಕೆ ಹೆಚ್ಚಾಗಿರುವುದು ಆಘಾತಕಾರಿ!
ಮುಂಬೈ ಕೋರ್ಟು ಕೂಡ ಅರ್ನಬ್ ಗೆ ಬೇಲ್ ಕೊಡಲಿಲ್ಲ. ದೇಶದಾದ್ಯಂತ ಅರ್ನಬ್ ಪರವಾಗಿ ಜನ ದನಿ ಎತ್ತಲು ಶುರು ಮಾಡಿದರು. ಮಾರನೇ ದಿವಸ ಅರ್ನಬ್ ಸುಪ್ರೀಂ ಕೋರ್ಟ್ ಮೆಟ್ಟಲೇರಿದರು. ಸುಪ್ರೀಂ ಕೋರ್ಟ್ ಅರ್ನಬ್ ಗೆ ಬೇಲ್ ಕೊಟ್ಟಿದ್ದಲ್ಲದೆ, ಕೆಲವು ಗಂಭೀರ ಎಚ್ಚರಿಕೆಯನ್ನೂ ಮಹಾರಾಷ್ಟ್ರ ಸರ್ಕಾರಕ್ಕೆ ನೀಡಿತು. ಸೈದ್ಧಾಂತಿಕ ವಿರೋಧದ ಕಾರಣ ಸರ್ಕಾರವೊಂದು ವ್ಯಕ್ತಿಯೊಬ್ಬನನ್ನು ಗುರಿಯಾಗಿಸುವುದು ತಪ್ಪು, ಅಂತವರ ರಕ್ಷಣೆಗೆ ಸುಪ್ರೀಂ ಕೋರ್ಟು ನಿಲ್ಲುತ್ತದೆ ಎಂದು ಕೋರ್ಟು ಸ್ಪಷ್ಟಪಡಿಸಿದೆ. ಸಮಾಜದ ನಾಲ್ಕನೇ ಸ್ತಂಭವಾದ ಮಾಧ್ಯಮವನ್ನು ಸರ್ಕಾರವೊಂದು ಹತ್ತಿಕ್ಕಲು ಪ್ರಯತ್ನಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ.
ಎಲ್ಲಾ ವಿಚಾರಗಳು ಸುಲಭವಾಗಿ, ಕಡಿಮೆ ಸಮಯದಲ್ಲಿ ಜನರನ್ನು ತಲುಪುವ ಮತ್ತು ಜನರು ಹೆಚ್ಚು ಜಾಗೃತವಾಗಿರುವ ಡಿಜಿಟಲ್ ಯುಗವಿದು. ಹೀಗಿದ್ದೇ ಪತ್ರಕರ್ತನೊಬ್ಬನನ್ನು ಸುಮ್ಮನಾಗಿಸುವ ಪ್ರಯತ್ನಗಳು ಢಾಳಢಾಳಾಗಿ ನಡೆಯುತ್ತಿದೆ. ಇನ್ನು ಇಂದಿರಾ ಗಾಂಧಿ ಕಾಲದ ತುರ್ತು ಪರಿಸ್ಥಿತಿ ದಿನಗಳಲ್ಲಿ ಏನೆಲ್ಲಾ ಆಗಿರಬಹುದು ಎಂದು ಊಹಿಸಿಕೊಳ್ಳಿ.

No comments:
Post a Comment