April 2, 2021

ಸರ್ಕಾರ ವ್ಯಾಪಾರ ಮಾಡಬಾರದು, ಖಾಸಗಿ ಸಂಸ್ಥೆ ಸೇವೆ ಮಾಡಬಾರದು!

ಒಂದು ಕಾಲದಲ್ಲಿ ಭಾರತದಲ್ಲಿ ನಾವೆಲ್ಲರೂ ಓದಿರುವಂತೆ ಗುರುಕುಲ ಪದ್ದತಿ ಇತ್ತು. ವಿದ್ಯಾರ್ಥಿಗಳು ಗುರುಗಳ ಸಮೀಪಕ್ಕೆ ಹೋಗಿ, ಅವರ ಗುರುಕುಲದಲ್ಲೇ ಇದ್ದುಕೊಂಡು, ವಿದ್ಯೆಯನ್ನು ಕಲಿತು ಬರುತ್ತಿದ್ದರು. ದೇವಸ್ಥಾನಗಳು ಅನ್ನ ದಾಸೋಹ, ವಿದ್ಯಾದಾನ ಮಾಡುತ್ತಿದ್ದವು. ಅದಲ್ಲದೇ, ಊರಿನ ಜನರ ಆರೋಗ್ಯವನ್ನು ಸಹ ನೋಡಿಕೊಳ್ಳುತ್ತಿತ್ತು. ಕೆಲವರು ರೈತರಾಗಿ ಜಮೀನಿನಲ್ಲಿ ಬೆಳೆ ತೆಗೆಯುತ್ತಿದ್ದರು, ಮತ್ತಷ್ಟು ಜನ ವ್ಯಾಪಾರ ಮಾಡುತ್ತಿದ್ದರು, ಮತ್ತಿತರರು ಇತರ ಕೆಲಸ ಮಾಡುತ್ತಿದ್ದರು. ಪ್ರತಿ ವರ್ಷ ರಾಜನಿಗೆ ತೆರಿಗೆ ಕಟ್ಟುತ್ತಿದ್ದರು. ರಾಜ ಜನ ಸಾಮಾನ್ಯರನ್ನು ರಕ್ಷಿಸುವ ಜವಾಬ್ದಾರಿ ಹೊಂದಿದ್ದ. ಧರಂಪಾಲ್ ಜೀ ಹೇಳುವ ಪ್ರಕಾರ ಯುದ್ಧವಾಗಿ ಹಲವು ಸಲ ರಾಜ ಬದಲಾಗುತ್ತಿದ್ದ ಹಾಗೂ ತೆರಿಗೆ ಸ್ವರೂಪದಲ್ಲಿ ಅಲ್ಪ ಸ್ವಲ್ಪ ಬದಲಾಗುತ್ತಿತ್ತು. ಇದರ ಹೊರತಾಗಿ ರಾಜ ಬದಲಾಗಿರುವುದು ಬಹುತೇಕರಿಗೆ ತಿಳಿಯುತ್ತಲೂ ಇರಲಿಲ್ಲ. ಆದರೆ, ವಿದೇಶಿ ಮತ್ತು ಮುಖ್ಯವಾಗಿ ಬ್ರಿಟೀಷರ ಆಕ್ರಮಣದ ನಂತರ ನಮ್ಮ ಈ ಸಾಮಾಜಿಕ ವ್ಯವಸ್ಥೆ ಬದಲಾಗಿ ಹೋಯಿತು. 'ಹಾಗೆ ನೋಡಿದರೆ ಆ ಕಾಲ ಚೆನ್ನಾಗಿತ್ತು' ಎಂದು ಹಿರಿಯರು ಹೇಳಿದನ್ನು ಕೇಳಿದ್ದೇವೆ. ಬಹುಶಃ ಅವರು ವಿದೇಶಿಗರ ಆಕ್ರಮಣಕ್ಕೂ ಮುಂಚಿನ ಕಾಲದ ಬಗ್ಗೆ ಮಾತಾಡುತ್ತಿದ್ದಾರೆ ಎಂದನ್ನಿಸುತ್ತದೆ. ದುರಾದೃಷ್ಟವಶಾತ್ ಸ್ವಾತಂತ್ರ್ಯ ನಂತರವಾದರೂ ನಮ್ಮ ವ್ಯವಸ್ಥೆಯನ್ನು ಸರಿ ಮಾಡಿಕೊಳ್ಳಲ್ಲಿಲ್ಲ! ರಷ್ಯಾ ಮತ್ತು ಚೀನಾದ ಕಮ್ಯೂನಿಸ್ಟ್ ವ್ಯವಸ್ತೆಯಿಂದ ಪ್ರೇರೇಪಿತರಾಗಿ ಸೇವಾಕ್ಷೇತ್ರ ಎನ್ನಿಸಿಕೊಂಡಿದ್ದವನ್ನು ಖಾಸಗಿಕರಣಗೊಳಿಸಿ, ತಾವೇ ಎಲ್ಲವನ್ನೂ ಮಾಡುತ್ತೇವೆ ಎಂದು ವ್ಯಾಪಾರಕ್ಕೆ ಇಳಿಯಿತು ಸರ್ಕಾರ.

Public Sector vs Private Sector

1970-80 ರಲ್ಲಿ ಬಹುತೇಕರು ಸರ್ಕಾರಿ ಶಾಲೆಗಳಿಗೆ ಹೋಗುತ್ತಿದ್ದವರು, 2017-18ರ ಅಂಕಿ ಅಂಶದ ಪ್ರಕಾರ ನಮ್ಮ ಕರ್ನಾಟಕ ರಾಜ್ಯದಲ್ಲಿ ಖಾಸಗಿ ಶಿಕ್ಷಣ ಶಾಲೆಗಳಿಗೆ 47,71,165 ವಿದ್ಯಾರ್ಥಿಗಳು ನೊಂದಯಿಸಿಕೊಂಡಿದ್ದಾರೆ. ಮೂರರಲ್ಲಿ ಶೇಕಡ ಎರಡಿಕ್ಕಿಂತಲೂ ಹೆಚ್ಚು ಜನ ಖಾಸಗಿ ಆಸ್ಪತ್ರೆಗೆ ತೆರಳುತ್ತಾರೆ ಹಾಗು ಕರ್ನಾಟಕದಲ್ಲಿ 4000ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿವೆ ಎಂದು ನಾಷನಲ್ ಸಾಂಪಲ್ ಸರ್ವೇ (ಎನ್.ಎಸ್.ಎಸ್) 2017ರಲ್ಲಿ ವರದಿ ಮಾಡಿದೆ. ಅಂಕಿ ಅಂಶಗಳಿಗಿಂತ ಇಲ್ಲಿ ಗಮನಿಸಬೇಕಾದ ವಿಚಾರವೊಂದಿದೆ. ಭಾರತದ ಯಾವ ಮೂಲೆಗೆ ಹೋದರೂ ಇತಿಹಾಸ ಬದಲಾಗುವುದಿಲ್ಲ, ವಿಜ್ಞಾನ, ಗಣಿತ ಬದಲಾಗುವುದಿಲ್ಲ, ಕಲಿಯುವ ತತ್ವ, ಸಿದ್ದಾಂತ, ವ್ಯಾಕರಣ ಯಾವುದೂ ಬದಲಾಗುವುದಿಲ್ಲ. ಹಾಗಾಗಿ, ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧೆ ಇರಬೇಕಾದದ್ದು ವಿದ್ಯಾರ್ಥಿಗಳಲ್ಲಿ ಶಾಲೆಗಳ ಮಧ್ಯದಲ್ಲಲ್ಲ. ಜನರೆಗೆ ಆರೋಗ್ಯ ಕೊಡುವಲ್ಲಿ ಯಾವುದೇ ಸ್ಪರ್ಧೆ ಅಥವಾ ವ್ಯವಹಾರದ ಅಡೆತಡೆಗಳು ಇರಬಾರದು. ಆದರೆ, ನಮ್ಮಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸಂಸ್ಥೆಗಳು ಜನರಿಂದ ಹಣವನ್ನು ದೋಚುವ ಅಂಗಗಳಾಗಿ ಮಾರ್ಪಟ್ಟಿದೆ. ಅನೇಕ ಶಾಲೆಗಳು ನಮ್ಮಲ್ಲಿ ಶೇ 100 ರಷ್ಟು ಪಾಸ್ ರೇಟ್ ಎಂಬ ಜಾಹಿರಾತು ಕೊಡುವುದನ್ನು ನೋಡಿದ್ದೇವೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಟ್ಟು ಅವರ ಕುಶಲತೆ, ಕಾರ್ಯಕ್ಷಮತೆಯನ್ನು ಹೆಚ್ಚಿಸಬೇಕಾದ್ದು ಶಾಲೆಗಳ ಕರ್ತವ್ಯವೇ ಹೊರತು, ಈ ರೀತಿ ವ್ಯಾಪಾರಿ ಮನೋಭಾವದಿಂದ ಜಾಹಿರಾತನ್ನು ಕೊಡುವುದು ಸಲ್ಲದು. ಜನರಿಗೆ ಆರೋಗ್ಯವನ್ನು ಕೊಡುವುದು ವೈದ್ಯಕೀಯ ಸಂಸ್ಥೆಗಳ ಕರ್ತವ್ಯವೇ ಹೊರತು ಮತ್ತೊಂದು ಸಂಸ್ಥೆಯ ಮೇಲೆ ಸ್ಪರ್ಧೆ ಅಥವಾ ಜನರೊಂದಿಗೆ ವ್ಯವಾಹಾರ ಮತ್ತು ವ್ಯಾಪಾರ ಸಂಬಂಧ ಸಲ್ಲದು.


Private vs Gov't Medical Sectors

ಸ್ವಾತಂತ್ರ್ಯ ಬಂದ ಹೊಸತರಲ್ಲಿ ರಷ್ಯಾದಿಂದ ಪ್ರೇರೇಪಿತರಾಗಿ ಸರ್ಕಾರವೇ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಿ ಬೃಹತ್ ಉದ್ಯಮಗಳನ್ನು ನಿರ್ಮಿಸಿತು. ಇದನ್ನೇ ಪಬ್ಲಿಕ್ ಸೆಕ್ಟರ್ ಯುನಿಟ್ಸ್ ಎಂದು ಕರೆಯುವುದು. ಎರಡನೇ ಪಂಚವಾರ್ಷಿಕ ಯೋಜನೆಯಂತೂ ಬೃಹತ್ ಕೈಗಾರಿಕ ಯೋಜನೆ ಬಗೆಗೆ ಒತ್ತು ಕೊಟ್ಟ ಕಾರಣ ಕೃಷಿಗೆ ಪ್ರಾಧಾನ್ಯತೆ ಸಿಗಲಿಲ್ಲ. ಕೃಷಿ ಪ್ರಧಾನ ದೇಶವಾದ ಭಾರತ ಬಡವಾಯಿತು. ಬಿ.ಎಸ್.ಎನ್.ಎಲ್, ಹೆಚ್.ಏ.ಎಲ್, ಎಸ್.ಸಿ.ಐ, ಬಿ.ಇ.ಎಲ್, ಎಸ್.ಏ.ಐ.ಲ್, ಎಂ.ಟಿ.ಎನ್.ಎಲ್ ಹೀಗೆ ಮುಂತಾದ ಬೃಹತ್ ಉದ್ಯಮಗಳನ್ನು ಸರ್ಕಾರ ಸ್ವಾಮ್ಯದಡಿ ಸ್ಥಾಪನೆಯಾಯಿತು. ಉದ್ಯಮಗಳನ್ನು ಉತ್ಪನ್ನದ ಬೆಲೆ, ಉಪಯೋಗ, ಸಾಗಾಣಿಕ ವೆಚ್ಚಗಳ ಕಡೆಗೆ ಗಮನಕೊಡದೆ ತಮ್ಮ ಸ್ವಾರ್ಥಕ್ಕೆ ರಾಜಕಾರಣಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಸ್ಥಾಪಿಸಲು ಮುಂದಾದರು. ಅಧಿಕಾರದ ದುರುಪಯೋಗದಿಂದ ತಮ್ಮವರಿಗೆ ಈ ಉದ್ಯಮಗಳಲ್ಲಿ ಕೆಲಸವನ್ನು ಕೊಡಿಸಿದರು. ಉದ್ಯಮಗಳು ಸರ್ಕಾರದಡಿ ಬರುವುದರಿಂದ ಮಿಸಲಾತಿಯ ನಿಯಮಗಳು ಅನ್ವಯವಾದವು. ಈ ಕಾರಣಗಳಿಂದಾಗಿ ಉದ್ಯಮಕ್ಕೆ ಬೇಕಾಗಿರುವಷ್ಟು ನುರಿತ ಕಾರ್ಮಿಕರು ಸಿಗದೆ ಉದ್ಯಮಗಳು ಯೋಗ್ಯತೆಗೆ ತಕ್ಕ ಉತ್ಪನ್ನವನ್ನು ತರಾಯಿಸುವುದಿಲ್ಲ, ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿರುವುದಿಲ್ಲ, ಪ್ರತಿಯೊಂದು ನಿರ್ಧಾರಕ್ಕೂ ರಾಜಕಾರಣಿಗಳ ಮುಂದೆ ನಿಲ್ಲಬೇಕಾದ ಪರಿಸ್ಥಿತಿ. ಹಾಗಾಗಿ ಉದ್ಯಮ ನಷ್ಟದ ದಾರಿ ಹಿಡಿಯುತ್ತದೆ.

ರಫ಼ೇಲ್, ಡಸಾಲ್ಟ್, ಹೆಚ್.ಏ.ಎಲ್ ನೆನಪಿರಬೇಕಲ್ಲ? ಹೆಚ್.ಏ.ಎಲ್ ಸಹಯೋಗದೊಂದಿಗೆ 108 ರಫ಼ೇಲ್ ವಿಮಾನಗಳನ್ನು 3 ವರ್ಷಗಳಲ್ಲಿ ಭಾರತದಲ್ಲಿ ತಯಾರಿಸಿ, 18 ವಿಮಾನಗಳನ್ನು ಫ಼್ಲೈ ಅವೇ ಪರಿಸ್ಥಿತಿಯಲ್ಲಿ ಕೊಡಬೇಕು ಎಂಬ ಪ್ರಸ್ತಾಪವನ್ನು ಡಸಾಲ್ಟ್ ಮುಂದೆ ಇಟ್ಟಾಗ, ಎಚ್.ಏ.ಎಲ್ ನ ಕಾರ್ಯವೈಖರಿ ಮತ್ತು ವೇಗವನ್ನು ಕಾರಣವಾಗಿ ಕೊಟ್ಟು ಈ ಪ್ರಸ್ತಾಪಕ್ಕೆ ತನ್ನ ಒಪ್ಪಿಗೆ ಇಲ್ಲ ಎಂದು ಡಸಾಲ್ಟ್ ತಿರಸ್ಕರಿಸಿತು.

HAL and Dassault way of handling

ಡಿ.ಎ.ಪಿ ಗೊಬ್ಬರವನ್ನು ತಯಾರು ಮಾಡುವ 'ಪಾರದೀಪ್ ಫ಼ಾಸ್ಫ಼ೇಟ್ ಲಿಮಿಟೆಡ್' ಎಂಬ ಉದ್ಯಮ 4 ವರ್ಷಗಳಲ್ಲಿ ನಷ್ಟ ಹೊಂದಿತು. ಸರ್ಕಾರದ ಸಾಲ ಮನ್ನದ ನಂತರವೂ ಅದು 1500 ಕೋಟಿಯಷ್ಟು ನಷ್ಟ ಅನುಭವಿಸುತ್ತಿತ್ತು. ಬಿರ್ಲಾ ಕಂಪನಿಯ ಖಾಸಗಿ ಸ್ವಾಮ್ಯಕ್ಕೆ ಒಳಪಡಿಸಿದ ನಂತರ ಇದೇ ಉದ್ಯಮ ಮುಂದಿನ 4 ವರ್ಷಗಳಲ್ಲಿ ಸಾಲವನ್ನು ತೀರಿಸಿ ಲಾಭದ ಹಾದಿ ಹಿಡಿಯಿತು. ಖಾಸಗಿ ಉದ್ಯಮಗಳು ತಾವು ತಯಾರಿಸುವ ವಸ್ತುಗಳನ್ನು ಜನ ಕೊಳ್ಳಬೇಕು ಎಂಬ ಉದ್ದಿಶ್ಯದೊಂದಿಗೆ ಇತರ ಉದ್ಯಮಗಳೊಟ್ಟಿಗೆ ಸ್ಪರ್ಧೆಗೆ ಇಳಿಯುತ್ತದೆ. ಇಲ್ಲಿ ಸ್ಪರ್ಧೆ ಹೆಚ್ಚಿದಷ್ಟೂ ಉತ್ಪನ್ನದ ಗುಣಮಟ್ಟ ಹೆಚ್ಚುತ್ತದೆ ಮತ್ತು ದೇಶಕ್ಕೆ ಲಾಭವೇ ಆಗುತ್ತದೆ. ಇಲ್ಲಿ ನುರಿತ ಕಾರ್ಮಿಕರಿಗಷ್ಟೇ ಬೆಲೆ, ಮೀಸಲಾತಿಯ ಸೋಂಕು ಇಲ್ಲ. 

ಸರ್ಕಾರ ಜನರಿಗೆ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಟ್ಟು, ವ್ಯಾಪಾರ ಮಾಡಿಸಿ, ಬಂದ ಲಾಭದಿಂದ ತೆರೆಗೆ ಸಂಗ್ರಹ ಮಾಡಬೇಕು. ತಾನೇ ವ್ಯಾಪಾರ ಮಾಡಬಾರದು. ಸರ್ಕಾರ ಯಾರೊಟ್ಟಿಗೂ ಸ್ಪರ್ಧೆ ಮಾಡುವ ಅಗತ್ಯತೆ ಇರುವುದಿಲ್ಲ. ಜನರ ಶಿಕ್ಷಣ ಮತ್ತು ಆರೋಗ್ಯ ಸರ್ಕಾರದ ಜವಾಬ್ದಾರಿ, ಇದನ್ನು ಖಾಸಗಿ ಸ್ವಾಮ್ಯಕ್ಕೆ ಒಳಪಡಿಸಬಾರದು. ಸ್ಪರ್ಧೆ ಇರಬೇಕಾದದ್ದು ವಿದ್ಯಾರ್ಥಿಗಳ ನಡುವೆ ಹೊರತು ಸಂಸ್ಥೆಗಳ ನಡುವೆ ಅಲ್ಲ. ನೀತಿ ಆಯೋಗದ ಸಹಯೋಗದೊಂದಿಗೆ ಸರ್ಕಾರ ಉದ್ಯಮಗಳ ಖಾಸಗಿಕರಣಕ್ಕೆ ಮುಂದಾಗಬೇಕು, ಶಿಕ್ಷಣ ಮತ್ತು ಆರೋಗ್ಯದ ಜವಾಬ್ದಾರಿಯನ್ನು ತಾನೇ ಹೊರಬೇಕು. ಉದ್ಯಮಗಳ ನಡುವೆ ಮತ್ತು ವಿದ್ಯಾರ್ಥಿಗಳ ನಡುವೆ ಸ್ಪರ್ಧೆ ಹೆಚ್ಚಿದಷ್ಟು ದೇಶಕ್ಕೆ ಲಾಭದಾಯಕ. ರಾಜೀವ್ ಗಾಂಧಿ ಕಾಲದಲ್ಲಿ ಪ್ರಾರಂಭವಾದ ಈ ಖಾಸಗೀಕರಣ, ನರಸಿಂಹ ರಾವ್ ಕಾಲದಲ್ಲಿ ವೇಗ ಪಡೆದುಕೊಂಡಿತು, ಅಟಲ್ ಜೀ ಅದನ್ನೇ ಮುಂದುವರೆಸಿದರೆ, ನರೇಂದ್ರ ಮೋದಿ ಕೊರೋನಾ ಕಾರಣದಿಂದಾಗಿ ಉಂಟಾಗಿರುವ ಆರ್ಥಿಕ ಸಂಕಷ್ಟದಿಂದ ಹೊರಬರಲು ಇದೇ ಕ್ರಮವನ್ನು ಅನುಸರಿಸುತ್ತಿದ್ದಾರೆ. ದೇಶವನ್ನು ಬಲಾಢ್ಯವನ್ನಾಗಿಸಬೇಕು ಆದ್ದರಿಂದಲೇ ಸರ್ಕಾರ ವ್ಯಾಪಾರ ಮಾಡಬಾರದು, ಖಾಸಗಿ ಸಂಸ್ಥೆ ಸೇವೆ ಮಾಡಬಾರದು!

No comments:

Post a Comment