ಕಳೆದ ವಾರ ತಿರುವನಂತಪುರದ ನ್ಯಾಯಾಲಯದಲ್ಲಿ 18 ಮಾಜಿ ಪೋಲೀಸ್ ಅಧಿಕಾರಿಗಳ ಮೇಲೆ ಸಿ.ಬಿ.ಐ. ಅಧಿಕಾರಿಗಳು ಎಫ಼್.ಐ.ಆರ್ ದಾಖಲಿಸಿದರು. ಇವರಲ್ಲಿ ಎಸ್.ವಿಜಯನ್, ಥಂಪಿ ದುರ್ಗದತ್, ಎ.ಅರ್. ರಾಜಿವನ್, ಕೆ.ಕೆ. ಜೋಶುವಾ, ರವೀಂದ್ರನ್ ನಾಯರ್, ಅರ್.ಬಿ. ಶಿವಕುಮಾರ್, ಅಪರಾಧ ವಿಭಾಗದ ಡಿ.ಐ.ಜಿ. ಆಗಿದ್ದ ಸಿಬಿ ಮ್ಯಾಥಿವ್ಸ್ ಮತ್ತು ಕೇರಳದಲ್ಲಿ ಐ.ಬಿ. ಮುಖ್ಯಸ್ಥರಾಗಿದ್ದ ಮ್ಯಾಥಿವ್ ಜಾನ್ ಪ್ರಮುಖ 7 ಆರೋಪಿಗಳು ಎಂದು ದಾಖಲಾಗಿದ್ದಾರೆ. ಭಾರತದ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋದ ಮೇಲೆ ನಡೆದ ಷಡ್ಯಂತ್ರದ ಕೇಸಿನ ಅಡಿಯಲ್ಲಿ ಈ ಅಧಿಕಾರಿಗಳ ಮೇಲೆ ಕೇಸ್ ದಾಖಲಾಗಿದೆ. ಇಸ್ರೋ ಸಂಸ್ಥೆಗೂ, ಈ ಪೋಲೀಸ್ ಅಧಿಕಾರಿಗಳಿಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರ? ಇದು 1994 ರಲ್ಲಿ ಇಸ್ರೋದ ವಿಜ್ಞಾನಿಗಳಾದ ನಂಬಿ ನಾರಾಯಣನ್, ಸಸಿಕುಮಾರನ್ ಮತ್ತು ಮಾಲ್ಡೀವ್ಸ್ನ ಫೌಸಿಯಾ ಹಸನ್ ಮತ್ತು ಮಾರಿಯಂ ರಶೀದಾ ಎಂಬುವವರನ್ನು ಬಂಧಿಸುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂಚೂಣಿ ಸಾಧಿಸಬೇಕಿದ್ದ ಭಾರತಕ್ಕೆ ಮರ್ಮಾಘಾತವನ್ನು ನೀಡಿದ ಘಟನೆಯಾಗಿದೆ. ಈ ಕೇಸಿನ ಕೇಂದ್ರ ಬಿಂದು ನಮ್ಮ ದೇಶದ ಶ್ರೇಷ್ಠ ವಿಜ್ಞಾನಿ; ನಂಬಿ ನಾರಾಯಣನ್.
![]()  | 
| Shri Nambi Narayanan | 
1969 ರಲ್ಲಿ ಇಸ್ರೋ ಸ್ಥಾಪನೆಯಾಯಿತು. ಅಬ್ದುಲ್ ಕಲಾಂ, ಅಬ್ದುಲ್ ಮಜೀದ್, ಸಿ.ಆರ್.ಸತ್ಯ, ವಿ.ಸುಧಾಕರ್ ರಂತಹ ಶ್ರೇಷ್ಠ ವಿಜ್ಞಾನಿಳೊಂದಿಗೆ ಕೆಲಸ ಮಾಡಿಕೊಂಡು ಇಸ್ರೋವನ್ನು ತಳಮಟ್ಟದಿಂದ ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವರು ನಂಬಿಜೀ. ರಷ್ಯಾ ಮತ್ತು ಅಮೇರಿಕಾ ಬಾಹ್ಯಾಕಾಶ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ಕಾಲದಲ್ಲಿ ಭಾರತವೂ ಅಗ್ರಣಿಯಾಗಬೇಕು ಎಂಬುದಷ್ಟೇ ಇಸ್ರೋದ ವಿಜ್ಞಾನಿಗಳ ಉದ್ದೇಶವಾಗಿತ್ತು. ಪಿ.ಎಸ್.ಎಲ್.ವಿ ರಾಕೆಟ್ಗಳ ವಿನ್ಯಾಸವನ್ನು ತಯಾರಿಸಿ, ಅದನ್ನು ಉಡಾವಣೆ ಮಾಡಬೇಕು ಎಂಬುದು ಅವರ ಯೋಜನೆಯಾಗಿತ್ತು. ಈ ರಾಕೆಟ್ಗಳ ಉಡಾವಣೆಗೆ ಬೇಕಾದಂತಹ ಇಗ್ನೈಟರ್ಗಳ ವಿನ್ಯಾಸವನ್ನು ತಯಾರು ಮಾಡುವ ಮಹತ್ವದ ಜವಾಬ್ದಾರಿ ನಂಬಿಜೀ ಅವರ ಮೇಲಿತ್ತು. 20 ಸೆಪ್ಟೆಂಬರ್ 1993 ರಂದು ಭಾರತ ತನ್ನ ಮೊದಲ ಪಿ.ಎಸ್.ಎಲ್.ವಿ. ರಾಕೆಟ್ಟನ್ನು ಉಡಾವಣೆ ಮಾಡಲು ತಯಾರಿ ಮಾಡಿಕೊಂಡಿತ್ತು. ಬಾಹ್ಯಾಕಾಶದಲ್ಲಿನ ಒತ್ತಡದ ಪ್ರಮಾಣದಲ್ಲಿ ಗನ್ ಪೌಡರ್ ಕೆಲಸ ಮಾಡುವುದಿಲ್ಲ ಎಂಬ ಕಾರಣಕ್ಕೆ ರಾಕೆಟ್ ಪೂರ್ಣ ಉಡಾವಣೆಯಾಗದೆ ಸಮುದ್ರಕ್ಕೆ ಬಿತ್ತು. ಈ ರೀತಿ ಆಗುತ್ತದೆ ಎಂದು ಪ್ರಯೋಗದ ಹಂತದಲ್ಲಿ ನಂಬಿಜೀ ಪತ್ತೆಮಾಡಿ ಕಲಾಂ ರವರಿಗೆ ತಿಳಿಸಿದ್ದರು. ತಮ್ಮ ಪ್ರಯತ್ನ ವಿಫಲವಾಗುತ್ತದೆ ಎಂದು ತಿಳಿದಿದ್ದರೂ ಜಗತ್ತಿನೆದುರಿಗೆ ನಾವು ಮಾಡುವ ಕೆಲಸ ನಿಂತಿದೆ ಎಂದು ತೋರಿಸಿಕೊಳ್ಳಬಾರದೆಂದು ರಾಕೆಟ್ ಉಡಾವಣೆಯ ಪ್ರಕ್ರಿಯೆ ನಿಲ್ಲಿಸಲಿಲ್ಲ. ಅದಾದ ಒಂದೇ ವರ್ಷಕ್ಕೆ ಅಂದರೆ; 15 ಅಕ್ಟೋಬರ್ 1994 ಕ್ಕೆ ಭಾರತ ತಾನು ಕಲಿತ ಪಾಠದಿಂದ ಮೊದಲ ಬಾರಿಗೆ ಪಿ.ಎಸ್.ಎಲ್.ವಿ ರಾಕೆಟ್ಟನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. 2021 ಹೊತ್ತಿಗೆ 51 ಪಿ.ಎಸ್.ಎಲ್.ವಿ ರಾಕೆಟ್ಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ ಎಂಬುದು ಇಸ್ರೋ ಇತಿಹಾಸದ ಹೆಗ್ಗಳಿಕೆ. ಇದಾದ 10-12 ದಿನಗಳಲ್ಲಿ ಭಾರತದ ಪ್ರಧಾನಮಂತ್ರಿಗಳು ಕಸ್ತೂರಿ ರಂಗನ್ ಮತ್ತು ತಂಡದವರನ್ನು ಕರೆದು ಅಭಿನಂದಿಸಿ ಸನ್ಮಾನಿಸಿದ್ದರು. ಹಾಂ, ಆ ತಂಡದಲ್ಲಿ ನಂಬಿಜೀ ಕೂಡ ಇದ್ದರು. 26 ನೇ ತಾರೀಖು ಸನ್ಮಾನ ಸ್ವೀಕರಿಸಿದ ನಂಬಿಜೀಯವರನ್ನು 30 ನೇ ತಾರೀಖು ಪೋಲೀಸರು ಬಂಧಿಸಿ ಕರೆದೊಯ್ಯುತ್ತಾರೆ!
ರಷ್ಯಾ ಮಾತ್ತು ಅಮೇರಿಕಾಕ್ಕೆ ಬಾಹ್ಯಾಕಾಶದ ಕ್ಷೇತ್ರದಲ್ಲಿ ಸವಾಲನ್ನು ಒಡ್ಡಬಹುದಾಗಿದ್ದು ಆ ಕಾಲದಲ್ಲಿ ಭಾರತ ಮಾತ್ರ. ರಷ್ಯಾ ನಮ್ಮ ಮಿತ್ರ ರಾಷ್ಟ್ರವಾಗಿತ್ತು ಆದರೆ, ಅಮೇರಿಕಾ ನಮ್ಮ ಏಳಿಗೆಯನ್ನು ಸಹಿಸದ ರಾಷ್ಟ್ರವಾಗಿತ್ತು. ಹೇಗಾದರೂ ಮಾಡಿ ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ಎಲ್ಲಾ ಪ್ರಯತ್ನವನ್ನು ವಿಫಲಗೊಳಿಸಲು ಅದು ಯೋಜನೆ ರೂಪಿಸಿತ್ತು. ರಾಕೆಟ್ ಉಡಾವಣೆಗೆ ಬೇಕಾಗಿದ್ದ ಕ್ರಯೋಜೆನಿಕ್ ಇಂಜಿನ್ನನ್ನು ಅಮೇರಿಕಾ ಭಾರತಕ್ಕೆ ಕೊಡಲು ನಿರಾಕರಿಸಿತ್ತು ಆದ್ದರಿಂದ, ಭಾರತ ರಷ್ಯಾದ ಬಳಿ ಕೇಳಿಕೊಂಡಿತ್ತು. ರಷ್ಯಾ ನಮಗೆ 230 ಕೋಟಿ ರೂಗಳಿಗೆ ಇಂಜಿನ್ನನ್ನು ಕೊಡಲು ಒಪ್ಪಿತ್ತು. ಇದು ಅಮೇರಿಕಾ ಹೇಳಿದ್ದ ಬೆಲೆಗಿಂತ ಶೇಕಡ 400 ರಷ್ಟು ಕಡಿಮೆ ಬೆಲೆಯಾಗಿತ್ತು. ಎಂ.ಟಿ.ಸಿ.ಆರ್ ಒಪ್ಪಂದದ ಪ್ರಕಾರ ಭಾರತಕ್ಕೆ ಈ ಇಂಜಿನ್ನನ್ನು ಕೊಡಬಾರದು ಎಂದು ಅಮೇರಿಕಾ ರಷ್ಯಾದ ಮೇಲೆ ಒತ್ತಡ ಹಾಕಿತು. ಆದರೂ ರಷ್ಯಾ ಭಾರತಕ್ಕೆ ಗುಪ್ತವಾಗಿ ಸಹಾಯ ಮಾಡಿತು. 3 ಇಂಜಿನ್ಗಳು ಭಾರತಕ್ಕೆ ಬಂದವು ಮತ್ತು ಇದನ್ನು ಉಪಯೋಗಿಸಿಕೊಂಡು 1994 ರಲ್ಲಿ ಭಾರತ ರಾಕೆಟ್ ಉಡಾವಣೆ ಮಾಡಿ ಯಶಸ್ಸು ಕಂಡಿತು. ವಿದೇಶದಿಂದ ಇಂಜಿನ್ನನ್ನು ಖರೀದಿ ಮಾಡಿದರೆ ಹೆಚ್ಚು ಹಣ ಖರ್ಚಾಗುತ್ತದೆ ಆದ್ದರಿಂದ, ನಾವೇ ಅದನ್ನು ತಯಾರಿಸುವಂತಾಗಬೇಕು ಎಂದು ಫ್ರಾನ್ಸ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಆ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿದ್ದರು ನಂಬಿಜೀ. ಈ ಎಲ್ಲಾ ಬಗೆಯ ಏಳಿಗೆಯನ್ನು ಸಹಿಸದ ಅಮೇರಿಕಾ ಭಾರತದ ಪ್ರಮುಖ ವಿಜ್ಞಾನಿಗಳನ್ನು ಸಂಕಷ್ಟಕ್ಕೆ ಸಿಕ್ಕಿಹಾಕಿಸಬೇಕು ಎಂಬ ಷಡ್ಯಂತ್ರವನ್ನು ರೂಪಿಸಿತು. ಈ ಪಿತೂರಿಗೆ ಬಲಿಯಾದವರೇ Liquid Propulsion Engine ವಿಭಾಗದ ಮುಖ್ಯಸ್ಥರಾಗಿದ್ದ ನಂಬಿ ನಾರಯಣನ್!
ಈಗ ಕೇಸಿನ ಮುಖ್ಯ ವಿಚಾರವನ್ನು ಗಮನಿಸೋಣ. ಒಂದು ಕಾಲದಲ್ಲಿ ಗೂಢಾಚಾರರಾಗಿ ಕಾರ್ಯನಿವಹಿಸಿದ್ದ ಮಾಲ್ಡೀವ್ಸ್ ದೇಶದ ಮಾರಿಯಂ ರಶೀದಾ ಮತ್ತು ಫೌಸಿಯಾ ಹಸನ್ ವೀಸಾ ಅವಧಿ ಮುಗಿದ ಮೇಲೆ ಭಾರತದಲ್ಲಿದ್ದಾರೆಂದು ಕೇರಳದ ಪೋಲೀಸರು ಬಂಧಿಸುತ್ತಾರೆ. ಅವರ ಡೈರಿಯಲ್ಲಿ ನಂಬಿಜೀ ಮತ್ತು ಸಸಿಕುಮಾರ್ ರವರ ದೂರವಾಣಿ ಸಂಖ್ಯೆ ಇತ್ತು ಮತ್ತು ಇವರ ಮೂಲಕ ನಂಬಿ ಮತ್ತು ಸಸಿಕುಮಾರ್ ರಾಕೆಟ್ ತಯಾರಿಸುವ ವಿನ್ಯಾಸವನ್ನು ಪಾಕೀಸ್ತಾನಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಸುಳ್ಳು ಮೊಕದ್ದಮೆಯನ್ನು ದಾಖಲಿಸಿ, ಕೇರಳದ ಅಂದಿನ ಡಿ.ಐ.ಜಿ. ಸಿಬಿ ಮ್ಯಾಥಿವ್ಸ್ ಅವರ ಆದೇಶದ ಮೇಲೆ ಪೋಲಿಸರು ವಿಜ್ಞಾನಿಗಳನ್ನು ಬಂಧಿಸುತ್ತಾರೆ. ಯಾಕೆ ಬಂಧಿಸಿದ್ದಾರೆಂದು ಹೇಳದೆ ತಮ್ಮ ಹೆಸರನ್ನು ಸತ್ಯ ಮತ್ತು ಧರ್ಮ ಎಂದು ವಿಚಾರಣೆ ವೇಳೆ ಪೋಲೀಸರು ತಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ. ಏನು ತಪ್ಪು ಮಾಡಿದ್ದಾರೆಂದು ಹೇಳದೆ ತಮ್ಮ ತಪ್ಪನ್ನು ಒಪ್ಪಿಕೊಳ್ಳುವಂತೆ ಪೋಲೀಸರು ನಂಬಿಜೀಯವರ ಕತ್ತಿನ ಮೇಲೆ ಏಟನ್ನು ಹಾಕುತ್ತಾರೆ. ಅಕ್ಷರಶಃ ಕನ್ನಡದಲ್ಲಿ ಸಾಯಿಕುಮಾರ್ ರವರ ಸಿನಿಮಾಗಳಲ್ಲಿ ತೋರಿಸುವ ರೀತಿಯಲ್ಲಿ ಪೋಲೀಸರು ನಡೆದುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ರಾಕೆಟ್ ಇಂಜಿನ್ನಿನ ವಿನ್ಯಾಸ, ಅದರ ಹಿಂದಿನ ತಂತ್ರಜ್ಞಾನ ಮತ್ತು ಬಿಡಿ ಭಾಗಗಳನ್ನು ತಯಾರಿಸಲು ಆ ವಿನ್ಯಾಸವನ್ನು ಇತರ ಖಾಸಗಿ ಕಂಪನಿಗೆ ಕೊಟ್ಟಿರುವ ವಿಚಾರಗಳನೆಲ್ಲಾ ಪೋಲೀಸರಿಗೆ ನಂಬಿಜೀ ತಿಳಿಸುತ್ತಾರೆ. ವಿನ್ಯಾಸ ಇದ್ದ ಮಾತ್ರಕ್ಕೆ ಇಂಜಿನ್ ತಯಾರಿಸಲು ಸಾಧ್ಯವಿಲ್ಲ ಮತ್ತು ಅದನ್ನು ಯಾರೂ ಕೊಳ್ಳುವುದಿಲ್ಲ ಎಂಬುದನ್ನೂ ಸಹ ಸ್ಪಷ್ಟಪಡಿಸುತ್ತಾರೆ. ಆದರೆ, ಪೋಲಿಸರು ಅವರ ಮಾತಿಗೆ ಬೆಲೆಕೊಡದೆ ತಮ್ಮದೇ ಆದ ಕಥೆ ಕಟ್ಟಿದ್ದರು, ಮಾರಿಯಂ ರಶೀದಾರನ್ನು ಭೇಟಿಯಾಗಿದ್ದೇನೆ ಎಂದು ಒಪ್ಪಿಕೊಳ್ಳುವಂತೆ ಸೂಚಿಸುತ್ತಾರೆ. ಯಾವುದನ್ನು ಒಪ್ಪಿಕೊಳ್ಳದ ನಂಬಿಜೀಗೆ ಕಡೆಯದಾಗಿ ಯಾವುದಾದರು ಒಬ್ಬ ಮುಸಲ್ಮಾನ್ ಗೆಳೆಯರೊಬ್ಬರ ಹೆಸರನ್ನು ಹೇಳಿದರೆ ಬಿಟ್ಟುಬಿಡುತ್ತೇವೆ ಎಂಬಂತಹ ಆಮಿಷಗಳನ್ನು ಒಡ್ಡುತ್ತಾರೆ. ನಂಬಿಜೀಗೆ ಪರಿಚಯವಿದ್ದ ಮುಸಲ್ಮಾನ್ ಗೆಳೆಯ ಎಂದರೆ ಅಬ್ದುಲ್ ಕಲಾಂ ಮಾತ್ರ! ಪೋಲಿಸರು ಹೆದರಿಸಿ ಮತ್ತು ಚಿತ್ರಹಿಂಸೆ ಮುಂದುವರೆಸುತ್ತಾರೆ. ಆದರೆ, ನಂಬಿಜೀ ಸತ್ಯವನ್ನು ಮಾತ್ರ ನುಡಿಯುತ್ತೇನೆ ಎಂದು ಪೋಲಿಸರಿಗೆ ಪ್ರತಿಕ್ರಯಿಸುವುದಿಲ್ಲ ಎಂದು ಪ್ರತಿಭಟಿಸುತ್ತಾರೆ. ನಂಬಿಜೀ ತುಂಬಾ ತಾಕೀತು ಮಾಡಿದರ ಕಾರಣ ಸಿಬಿ ಮ್ಯಾಥಿವ್ಸ್ ಭೇಟಿಯಾಗುತ್ತಾರೆ ಅದೂ ಕೂಡ 3 ನಿಮಿಷ ಮಾತ್ರ!
ಇದೆಲ್ಲದರ ನಡುವೆ ಕೇರಳದ ಕಮ್ಯುನಿಸ್ಟ್ ರಿಂದ ಪ್ರೇರೇಪಿತವಾದ ಪತ್ರಿಕೆಗಳು ಇವರ ಕಥೆಯನ್ನು ಅಸಹ್ಯವಾಗುವ ರೀತಿ ಲೇಖನಗಳನ್ನು ಪ್ರಕಟಿಸುತ್ತದೆ. ಮಾರಿಯಂ ರಶೀದಾ ಜೊತೆಗೆ ಹಾಸಿಗೆ ಹಂಚಿಕೊಂಡಿದ್ದಾರೆ ಎಂದು ತಮ್ಮದೇ ಅದ ರೀತಿ ಪತ್ರಿಕೆಗಳು ವರದಿ ಮಾಡಿದವು. ರಾಷ್ಟ್ರದ ಮುಂದೆ ನಂಬಿಜೀಯವರನ್ನು ದೇಶದ್ರೋಹಿಯಂತೆ ಚಿತ್ರಿಸಲಾಯಿತು. ಸಮಾಜ ಅವರ ಮನೆಯವರನ್ನು ಕೆಟ್ಟ ರೀತಿ ನೋಡಲು ಪ್ರಾರಂಭ ಮಾಡಿತು. ಅವರ ಹೆಂಡತಿ ಖಿನ್ನತೆಗೆ ಒಳಗಾಗಿ, ಮಾತಾಡುವುದನ್ನೇ ನಿಲ್ಲಿಸುತ್ತಾರೆ. ತೀವ್ರತೆ ಹೆಚ್ಚಿದಂತೆ ಸಿಬಿ ಮ್ಯಾಥಿವ್ಸ್ ಕೇಸನ್ನು ಸಿ.ಬಿ.ಐ. ಗೆ ವಹಿಸುತ್ತಾರೆ. ಅವರ ವಿಚಾರಣೆಯಲ್ಲಿ ನಂಬಿಜೀ ವಿವರವಾಗಿ ಸತ್ಯವನ್ನು ಬಿಚ್ಚಿಡುತ್ತಾರೆ. ಎಲ್ಲಾ ರೀತಿಯ ಪರೀಕ್ಷೆಯಲ್ಲಿ ಅವರು ಸತ್ಯ ನುಡಿದಿದ್ದಾರೆಂದು ಸಿ.ಬಿ.ಐ ಅಧಿಕಾರಿಗಳಿಗೆ ಮನವರಿಕೆಯಾಗುತ್ತದೆ. ಅಲ್ಲಪ್ಪಿಯಲ್ಲಿ ಎಲ್ಲಾ ರೀತಿಯ ವಿಚಾರಣೆ ಮುಗಿಸಿ ಜೈಲಿನಲ್ಲಿ 27 ದಿನಗಳ ಕಾಲ ಕಳೆದ ನಂತರ ಕಡೆಗೆ ನಂಬಿಜೀ, ಸಸಿಕುಮಾರ್, ಎಸ್.ಕೆ.ಶರ್ಮಾ, ಚಂದ್ರಶೇಖರ್ ರವರಿಗೆ ಬೇಲಿನ ಮೇಲೆ ಬಿಡುಗಡೆಯಾಗುತ್ತದೆ. ಬೇಲಿನ ಮೇಲೆ ಬಿಡುಗಡೆಯಾದರೂ ಸಮಾಜ ಅವರನ್ನು ಕೀಳಾಗೆ ನೋಡುತ್ತಿತ್ತು. ಮನೆಗೆ ಬಂದ ನಂಬಿಜೀ ಹೆಂಡತಿ ಹತ್ತಿರ ತೆರಳುತ್ತಾರೆ. ಗಂಡನನ್ನು ನೋಡಿದ ಆಕೆ ಪ್ರಾಣಿಯೂ ಅಲ್ಲದ ಮನುಷ್ಯನೂ ಅಲ್ಲದ ವಿಚಿತ್ರವಾದ ರೀತಿಯಲ್ಲಿ ಕಿರುಚಿದರು ಎಂದು ನಂಬಿಜೀ ತಮ್ಮ ಆತ್ಮಕತೆಯಲ್ಲಿ ಹೇಳುತ್ತಾರೆ. ಕೆಲ ದಿನಗಳ ನಂತರ ಸತ್ಯಕ್ಕಾಗಿ ಹೋರಾಡಬೇಕೆಂದು ಭಾರತದ ಪ್ರಸಿದ್ದ ವಕೀಲರಾದ ಹರೀಶ್ ಸಾಳ್ವೆಯವರ ಮುಂದೆ ತಮ್ಮ ಪ್ರಕರಣವನ್ನು ಬಿಚ್ಚಿಟ್ಟು, ತಮ್ಮ ಪರವಾಗಿ ವಾದ ಮಾಡಲು ಕೇಳಿಕೊಳ್ಳುತ್ತಾರೆ. ಕೋರ್ಟಿನಲ್ಲಿ ವಿಚಾರಣೆ, ವಾದ ನಡೆದ ನಂತರ ಇದೊಂದು ಷಡ್ಯಂತ್ರವಾಗಿದ್ದು ನಂಬಿ ನಾರಾಯಣನ್ ಮತ್ತಿತರ ಆರೋಪಿಗಳು ನಿರಪರಾಧಿಗಳೆಂದು ಸಾಬೀತಾಗಿ ಬಿಡುಗಡೆಯಾಗುತ್ತಾರೆ.
ಕಾಂಗ್ರೇಸಿನ ಕರುಣಾಕರನ್ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಬೇಕೆಂದು ಕಾಂಗ್ರೇಸಿನವರೇ ಆದ, ನಂತರ ದಿನಗಳಲ್ಲಿ ಭಾರತದ ರಕ್ಷಣಾ ಮಂತ್ರಿಯಾದ ಏ.ಕೆ.ಆಂಟನಿ, ಒಮನ್ ಶ್ಯಾಂಡಿ ಮತ್ತವರ ತಂಡ ಅಮೇರಿಕಾದ ಸಿ.ಐ.ಏ ಹೆಣೆದ ಈ ಷಡ್ಯಂತ್ರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿತು. ನಮ್ಮಲ್ಲಿರುವ ರಾಜಕೀಯದ ದುರುದ್ದೇಶ ಮತ್ತು ಭ್ರಷ್ಟ ಮನಸ್ಥಿತಿ ಈ ದೇಶದ ವಿಜ್ಞಾನಿಗಳ ಉತ್ಸಾಹದ ನಾಶ ಮತ್ತು ಪ್ರತಿಷ್ಠಿತ ಸಂಸ್ಥೆಯಾದ ಇಸ್ರೋದ ಮಾನನಷ್ಟಕ್ಕೆ ಕಾರಣವಾಯಿತು. ಇಸ್ರೋ ವಿರುದ್ಧ ಇಂತಹ ಷಡ್ಯಂತ್ರ ನಡೆಯದಿದ್ದರೆ ಜಿ.ಎಸ್.ಎಲ್.ವಿ ರಾಕೆಟ್ಟನ್ನು ಉಡಾವಣೆ ಮಾಡಲು ಮುಂದಿನ 15 ವರ್ಷ ಬೇಕಾಗಿರಲಿಲ್ಲ. 2018 ರಲ್ಲಿ ಭಾರತದ ಸುಪ್ರೀಂಕೋರ್ಟು ನಂಬಿಜೀಗೆ 50 ಲಕ್ಷ ರೂಪಾಯಿ ಪರಿಹಾರ ಕೊಡಬೇಕೆಂದು ತೀರ್ಪು ನೀಡಿತು. ಇದರ ಮುಂದುವರೆದ ಭಾಗವಾಗಿ 18 ಮಾಜಿ ಪೋಲೀಸ್ ಅಧಿಕಾರಿಗಳ ಮೇಲೆ ಸಿ.ಬಿ.ಐ. ಎಫ್.ಐ.ಆರ್ ದಾಖಲಿಸಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿನ ಸೇವೆಗಾಗಿ ಭಾರತ ಸರ್ಕಾರ 2019 ರಲ್ಲಿ ನಂಬಿಜೀ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ. ಈ ರೀತಿಯ ಪರಿಸ್ಥಿತಿ ಭಾರತದ ಯಾವ ಕ್ಷೇತ್ರಕ್ಕೂ ಬರದಿರಲಿ ಎಂದು ಆಶಿಸೋಣ. ಭಾರತ ಇಂತಹ ಭ್ರಷ್ಟತೆ, ಕಾಂಗ್ರೇಸ್ ಮತ್ತು ಕಮ್ಯೂನಿಸ್ಟ್ ರಂತಹ ಹೊಲಸು ರಾಜಕೀಯದಿಂದ ಮುಕ್ತವಾಗಲಿ. ನಮ್ಮ ಪೋಲೀಸ್, ಸಿ.ಬಿ.ಐ, ಗುಪ್ತಚರ ಇಲಾಖೆ ಸ್ವಾಭಿಮಾನಿ ಮತ್ತು ಗಟ್ಟಿಯಾಗಲಿ.
****************************************************************************
Nambi Narayanan's Autobiography -
Ready To Fire: How India and I Survived the ISRO Spy Case
![]()  | 
| The Autobiography | 
"Know WHY is More Important Than Know HOW" - Nambi Narayanan



