June 23, 2021

ಹೊಸದೊಂದು ಸಾಮಾಜಿಕ ಜಾಲತಾಣ ಬಂದಿದೆ - ಕ್ಲಬ್ ಹೌಸ್

ಕಳೆದ 4-5 ವಾರದಿಂದ ಅಂದರೆ ಮೇ ತಿಂಗಳಲ್ಲಿ ಭಾರತದಲ್ಲಿ ಹೊಸದಂದು ಸಾಮಾಜಿಕ ಜಾಲತಾಣ ಹೆಚ್ಚು ಸುದ್ಧಿಯಲ್ಲಿದೆ. ಕಳೆದ ವರ್ಷ ಲಾಕ್ಡೌನ್ ಶುರುವಾದಾಗ ಗೂಗಲ್ ಮೀಟ್, ವಾಟ್ಸಪ್ ವೀಡಿಯೋ ಕಾಲ್, ಜೂಮ್, ಸ್ಕೈಪ್ ಆಪ್ಗಳು ಹೆಚ್ಚು ಉಪಯೋಗಿಸಲ್ಪಟ್ಟವು. ಎರಡನೆಯ ಅಲೆಯ ಈ ಹೊತ್ತಲ್ಲಿ ನಮಗೆ ಪರಿಚಯವಾದದ್ದೇ ಕ್ಲಬ್ ಹೌಸ್. ಈ ಆಪ್ ಬಂದದ್ದೇ ತಡ ವಾಟ್ಸಾಪ್, ಫೇಸ್ ಬುಕ್, ಇನ್ಸ್ಟಾ ಗ್ರಾಮ್  ಮತ್ತು ಟ್ವಿಟರ್ ಬಳಿಕೆ ಕಮ್ಮಿಯಾಗಿರುವುದಂತು ನಿಜ. ಕಳೆದ ತಿಂಗಳು ಕಾಂಗ್ರೇಸ್ ನಾಯಕ ದಿಗ್ವಿಜಯ ಸಿಂಗ್ ಪಾಕೀಸ್ತಾನದ ಪತ್ರಕರ್ತನೊಂದಿಗೆ ಆರ್ಟಿಕಲ್ 370 ಬಗ್ಗೆ ವಿವಾದಾತ್ಮಕ ಚರ್ಚೆ ಮಾಡಿದ್ದು ಇದೇ ಕ್ಲಬ್ ಹೌಸಲ್ಲಿ!

Clubhouse Logo

ಏನಿದು ಕ್ಲಬ್ ಹೌಸ್? ಇದೊಂದು ಸಾಮಾಜಿಕ ಜಾಲತಾಣವಾಗಿದ್ದು, ಬಳಕೆದಾರರು ಚರ್ಚಾ ಕೋಣೆಗಳಲ್ಲಿ ಸಂವಹನ ಮಾಡಬಹುದು. ಒಂದು ಚರ್ಚಾ ಕೋಣೆಯಲ್ಲಿ ಸುಮಾರು 5000 ಜನ ಪಾಲ್ಗೊಳ್ಳಬಹುದಾಗಿದೆ. ಚರ್ಚೆಯ ಆಯೋಜಕರು ಯಾರು ಮಾತಾಡಬಹುದು ಎಂಬುದನ್ನು ನಿಯಂತ್ರಣ ಮಾಡಬಹುದಾಗಿದೆ. ಕಳೆದ ವರ್ಷ ಮಾರ್ಚಿನಲ್ಲಿ ಐ-ಫೋನ್ ಬಳಕೆದಾರರಿಗೆ ಈ ಆಪ್ ಬಿಡುಗಡೆಯಾದರೆ, ಈ ತಿಂಗಳ ಮೇ ಅಲ್ಲಿ ಆಂಡ್ರಾಯ್ಡ್‌ ಬಳಕೆದಾರರಿಗೆ ಇದು ಲಭ್ಯವಾಯಿತು. ಕೆಲವರು ಎರಡು-ಮೂರು ಗಂಟೆ ಕ್ಲಬ್ ಹೌಸ್ ಅಲ್ಲಿ ಕಾಲ ಕಳೆಯುತ್ತಿದ್ದಾರೆ, ಇನ್ನು ಕೆಲವರು ದಿನವಿಡೀ ಇದರಲ್ಲೇ ಕಾಲಕಳೆಯುವುದನ್ನು ನೋಡಬಹುದು. ಮತ್ತೂ ಕೆಲವರು ಒಂದು ಚರ್ಚಾ ಕೋಣೆಯಿಂದ ಮತ್ತೊಂದಕ್ಕೆ ಜಿಗಿಯುವುದನ್ನು ಗಮನಿಸಬಹುದು. ನಾನು ಗಮನಿಸಿರುವ ಹಾಗೆ ಸಂಜೆ ಆರರ ನಂತರ ಕೆಲವು ಮುಖ್ಯ ಎನ್ನಬಹುದಾದ ಚರ್ಚೆಗಳು ನಡೆಯುತ್ತವೆ. ರಾತ್ರಿ 10 ನಂತರ ಇದು ಮತ್ತಷ್ಟು ರಂಗು ಪಡೆದುಕೊಳ್ಳುತ್ತದೆ. ಹಾಸ್ಯ, ಹಾಡು, ಕಾಲಹರಟೆ, ಲವ್ ಗುರು, ಅಂತ್ಯಾಕ್ಷರಿ, ಕಥೆ ಅದರಲ್ಲೂ ದೆವ್ವ, ಭೂತ ಅಥವಾ ಮಾಟ ಮಂತ್ರದ ಕಥೆ ಹೇಳೋದು ಮುಂತಾದ ಅನೇಕ ರೀತಿ ರೂಮ್ಗಳು ಇಲ್ಲಿ ಶುರುವಾಗುತ್ತವೆ. ಪರಿಚರಯಸ್ಥರಿಗಿಂತ ಅಪರಿಚಿತರೇ ಹೆಚ್ಚು ಸಿಗಬಹುದಾದಂತಹ ತಾಣವಿದು. ನಮಗೆ ಆಸಕ್ತಿ ಇರುವ ವಿಚಾರಗಳನ್ನು ಆಯ್ಕೆ ಮಾಡಿಕೊಂಡು, ಅದಕ್ಕೆ ತಕ್ಕ ಚರ್ಚ ಕೋಣೆಯಲ್ಲಿ ಕೇಳುಗನಾಗಿ ಭಾಗವಹಿಸುವ ಅವಕಾಶವೂ ಇದೆ. ಇದರೊಟ್ಟಿಗೆ ನಮ್ಮ ಮೊಬೈಲ್ ಕ್ಯಾಲೆಂಡರ್ ಅಲ್ಲಿ ಮುಂಬರುವ ಕಾರ್ಯಕ್ರಮದ ವಿವರವನ್ನು ದಾಖಲಿಸಿಕೊಳ್ಳಬಹುದು.

ಯಾವುದೇ ವಿಚಾರವಾಗಲಿ ಕೆಟ್ಟದ್ದು, ಒಳ್ಳೆಯದು ಎಂಬುದು ಇದ್ದೇ ಇರುತ್ತದೆ. ಯಾವುದನ್ನು ಉಪಯೋಗಿಸಿಕೊಳ್ಳಬೇಕು ಅಥವಾ ಬಿಡಬೇಕು ಎಂಬುದು ನಮ್ಮ ವಿವೇಚನೆಗೆ ಬಿಟ್ಟದ್ದು. ಈ ವಿಚಾರ ಕ್ಲಬ್ ಹೌಸ್ಗೆ ಕೂಡ ಅನ್ವಯವಾಗುತ್ತದೆ. ಇಲ್ಲಿ ಕೂಡ ಅನೇಕ ಒಳ್ಳೆಯ ಸಂಗತಿ ಮತ್ತು ಕೆಟ್ಟದ್ದು ಸಿಗುತ್ತದೆ. ಕೆಲವು ದಿನಗಳಿಂದ ನಾನು ಕೆಲವು ಚರ್ಚಾ ಕೋಣೆಯಲ್ಲಿ ಕೇಳುಗನಾಗಿ ಇದ್ದೆ. 'Coffee with ಭಟ್ರು' ಅಲ್ಲಿ ವಿಶ್ವವಾಣಿ ಪತ್ರಿಕೆಯ ವಿಶ್ವೇಶ್ವರ ಭಟ್ಟರು ಮುದ್ರಣ ಮಾಧ್ಯಮ ಕುರಿತು ವಿಚಾರವನ್ನು ಹಂಚಿಕೊಂಡರು. ಕನ್ನಡದಲ್ಲಿ ಗಣಿತ ಮತ್ತು ವಿಜ್ಞಾನ, ಜೂನ್ 21 ರಂದು ಯೋಗದ ಬಗೆಗಿನ ವಿಚಾರಗಳು, ಭಾರತದಲ್ಲಿ ಪೆಟ್ರೋಲ್ 100 ಗಡಿ ದಾಟಿದರ ಬಗ್ಗೆ, ಡಾ.ಎಸ್.ಎಲ್.ಭೈರಪ್ಪನವರ ಸಾಹಿತ್ಯ ಕುರಿತು, ರೈತ ಮಸೂದೆಯ ಪರ ಹಾಗೂ ವಿರೋಧ ಕುರಿತು, ವೇದ-ಉಪನಿಷತ್ತು ಮತ್ತು ಸಂಸ್ಕೃತ ಭಾಷೆ, ಒಂದು ದಿನ ಚಕ್ರವರ್ತಿ ಸೂಲಿಬೆಲೆಯವರ ಪರ ಮತ್ತೊಂದು ದಿನ ವಿರೋಧವಾಗಿರುವ ಚರ್ಚ ಕೋಣೆಯಲ್ಲೂ ಇದ್ದೆ. ಹೀಗೆ ಕೆಲವು ವಿಚಾರಗಳ ಮೇಲೆ ಜನರ ದೃಷಿಕೋನ, ಅಭಿಪ್ರಾಯಗಳನ್ನು ಮತ್ತು ಮುಖ್ಯವಾಗಿ ನಮಗೆ ತಿಳಿಯದಿರುವ ವಿಚಾರವನ್ನು ತಿಳಿದಂತಾಯಿತು. ವಿಜ್ಞಾನ ಕ್ಷೇತ್ರದಲ್ಲಿ ಕೃತಕ ಬುದ್ದಿಮತೆ (Artificial Intelligence) ಕುರಿತು ಇಲ್ಲಿ ಹೆಚ್ಚು ಚರ್ಚೆ ನಡೆಯುವುದನ್ನು ಗಮನಿಸಬಹುದು.

ದುರಾದೃಷ್ಟವೆಂದರೆ ಇಲ್ಲೂ ಸಹ ಕೆಲವು ಕಿಡಿಗೇಡಿಗಳು ಫೇಕ್ ಅಕೌಂಟುಗಳ ಮೂಲಕ ಒಳಬಂದಿದ್ದಾರೆ. ಕೆಲವು ಸಲ ಮುಖ್ಯವಾದ ವಿಚಾರದ ಚರ್ಚೆ ಮಧ್ಯೆ ಕೀಟಲೇ ಮಾಡಿ ತೊಂದರೆ ಕೊಟ್ಟಿದ್ದಾರೆ. ಮಿಮಿಕ್ರಿ ಮಾಡಿ ಕೆಲವರನ್ನು ಮರುಳು ಮಾಡಿದ್ದು ಇದೆ. ಇನ್ನೂ ಕೆಲವು ಚರ್ಚಾ ಕೋಣೆಗಳಲ್ಲಿ ಕೆಲಸಕ್ಕೆ ಬಾರದ ವಿಚಾರವನ್ನು ಚರ್ಚಿಸಿದ್ದು ಇದೆ. ಈ ಚರ್ಚ ಕೋಣೆಯೊಳಗೆ ಯಾರು ಬೇಕಾದರೂ ಬರಬಹುದಾದ್ದರಿಂದ ಇಲ್ಲಿ ಖಾಸಗೀತನದ ರಕ್ಷಣೆ ಬಗ್ಗೆ ಇನ್ನೂ ಉತ್ತರವಿಲ್ಲ. ಸಾಮಾಜಿಕವಾಗಿ ಸೂಕ್ಷ್ಮವಾದ ವಿಚಾರಗಳು ಚರ್ಚೆ ಆಗಬಹುದಾದಂತಹ ಇದರಲ್ಲಿ ಮಾತುಗಳನ್ನು ಕಳ್ಳಗಿವಿಗಳು ಕೇಳಿಸಿಕೊಳ್ಳುವ ಸಾಧ್ಯತೆಗಳಿವೆ. ಫೇಕ್ ಅಕೌಂಟ್ಗಳನ್ನು ಈ ಆಪ್ ಹೇಗೆ ನಿಗ್ರಹಿಸುತ್ತದೆ ಎಂಬುದು ಕೂಡ ಪ್ರಶ್ನೆಯಾಗಿದೆ.

ಕ್ಲಬ್ ಹೌಸ್ ನಲ್ಲಿ ಈಗ ನಡೆಯುತ್ತಿರುವ ಚರ್ಚೆಗಳ ಪ್ರಕ್ರಿಯೆ ನೋಡಿದರೆ ಇದೊಂದು ಅದ್ಭುತವಾದ ವೇದಿಕೆಯೇ ಹೌದು. ಅಮೇರಿಕಾದ ಅಧ್ಯಕ್ಷೀಯ ಚುಣಾವಣೆ ಮೇಲೆ ಫೇಸ್ಬುಕ್ ಹಾಗೂ ಟ್ವಿಟ್ಟರ್ ಪ್ರಭಾವ ಬೀರಿರುವುದು ಸತ್ಯ. ಹೀಗೆ ಮುಂದೊಂದು ದಿವಸ ಕ್ಲಬ್ ಹೌಸ್ ಕೂಡ ರಾಜಕೀಯವಾಗಿ ಪ್ರಭಾವ ಬೀರಬಲ್ಲ ಆಪ್ ಆದರೆ ಆಶ್ಚರ್ಯವಿಲ್ಲ. ಹೌದು, ಹೊಸದೊಂದು ಸಾಮಾಜಿಕ ಆಪ್ ಬಂದಿದೆ. ಇದರಲ್ಲಿ ಒಳಿತು ಇದೆ, ಕೆಟ್ಟದ್ದು ಇದೆ ಆದರೆ, ಇದರಲ್ಲಿರುವ ಒಳಿತನ್ನು ಮಾತ್ರ ಉಪಯೋಗಿಸಿಕೊಳ್ಳೋಣ. ಜಗತ್ತು ತುಂಬಾ ಚಿಕ್ಕದಾಗಿದೆ, ಬನ್ನಿ, ಯಾವುದಾದರೂ ಕ್ಲಬ್ಬಿನಲ್ಲಿ ನಾವು ಭೇಟಿಯಾಗೋಣ.

ಇದನ್ನೂ ಓದಿ: ಮುಂಬರುವ ಚುನಾವಣೆ ಕ್ಲಬ್‌ ಹೌಸ್‌ನಲ್ಲಿ ನಡೆದರೆ ಆಶ್ಚರ್ಯಪಡಬೇಡಿ!

1 comment: