ಅದೊಂದು ದಿನ ಊರ ಹೆಣ್ಣು ಮಗಳೊಬ್ಬಳು ಸನ್ಯಾಸಿ ಹತ್ತಿರ ಬಂದು ಅಳುತ್ತಾ ಕೂರುತ್ತಾಳೆ. ಆಕೆಯನ್ನು ಸಮಾಧಾನಿಸಿ, ಸಮಸ್ಯೆಯನ್ನು ಸನ್ಯಾಸಿ ಕೇಳುತ್ತಾನೆ. ಸಮಸ್ಯೆ ಇಷ್ಟೇ, ಆಕೆಯ ಗಂಡನಿಗೆ ಸಿಟ್ಟು ಜಾಸ್ತಿ, ಇದೇ ಕಾರಣಕ್ಕೆ ಗಂಡ ಹೆಂಡತಿ ನಡುವೆ ಜಗಳ, ಮನಸ್ತಾಪ. ಹೊಂದಾಣಿಕೆ ಮಾಡಿಕೊಳ್ಳಲು ಆಗುವುದಿಲ್ಲ ಎನ್ನುವ ಮಟ್ಟಕ್ಕೆ ಆಕೆ ತಲುಪಿದ್ದಳು. ಈ ಸಮಸ್ಯೆಯನ್ನು ಮುಂದಿಟ್ಟು "ನಾನು, ನನ್ನ ಗಂಡ ಆರಾಮಾಗೆ ಬಾಳಲು ಏನು ಮಾಡಬೇಕು?" ಆ ಹೆಣ್ಣು ಮಗಳು ಕೇಳುತ್ತಾಳೆ. ಸಂಸಾರದ ಸಮಸ್ಯೆಗಳಿಂದ ದೂರವಿರುವ ಸನ್ಯಾಸಿಗಳಿಗೆ ಇಂತಹ ವಿಚಾರ ಬರುತ್ತದೆ ಎಂದು ಮನಸ್ಸಿನಲ್ಲೇ ಅಂದುಕೊಂಡು ಮುಗುಳ್ನಗುತ್ತಾನೆ.
ಒಂದೆರಡು ನಿಮಿಷ ಯೋಚಿಸಿ "ಸರಿ, ಇದಕ್ಕೊಂದು ಪರಿಹಾರ ಎಂದು ಒಂದು ಪೂಜೆ ಮಾಡೋಣ. ಆ ಪೂಜೆಗೆ ಒಂದು ಪದಾರ್ಥ ಬೇಕು. ಅದನ್ನು ನೀನೇ ತರಬೇಕು" ಎಂದು ಹೇಳುತ್ತಾನೆ. ಏನೋ ಒಂದು ಪರಿಹಾರ ಇದೆಯಲ್ಲ ಎಂಬ ಖುಷಿಯಲ್ಲಿ "ಏನದು ಪದಾರ್ಥ ಹೇಳಿ, ನಾನು ತಂದೇ ತರುತ್ತೇನೆ" ಎಂದು ಹೇಳುತ್ತಾಳೆ. "ಸರಿ ಹಾಗಾದರೆ, ಕಾಡಿಗೆ ಹೋಗಿ ಹುಲಿಯೊಂದರ ಮೀಸೆ; ಎರಡೇ ಎರಡು ಮೀಸೆಯ ಕೂದಲನ್ನು ತರಬೇಕು" ಎಂದು ಸನ್ಯಾಸಿ ಹೇಳುತ್ತಾನೆ.
ಸನ್ಯಾಸಿ ಹೇಳಿದ್ದನ್ನು ಕೇಳಿದ ಆಕೆ "ಹುಲಿಯ ಮೀಸೆನಾ! ಅದನ್ನು ಹೇಗೆ ತರುವುದು? ಬೇರೆ ಏನಾದ್ರು ಹೇಳಿ " ಎಂದು ಗಾಬರಿಗೊಂಡು ಹೇಳುತ್ತಾಳೆ. "ಇಲ್ಲ, ಇದು ಬಿಟ್ಟರೆ ಬೇರೆ ಪರಿಹಾರ ನನಗೆ ತಿಳಿದಿಲ್ಲ. ನೀನೇ ಸ್ವತಃ ಹುಲಿಯ ಮೀಸೆಯನ್ನು ತರಬೇಕು" ಎಂದು ಸನ್ಯಾಸಿ ಖಡಾಖಂಡಿತವಾಗಿ ಹೇಳುತ್ತಾನೆ. ಸರಿ, ತರುತ್ತೇನೆ ಎಂದು ಆಕೆ ನಮಸ್ಕರಿಸಿ ತನ್ನ ಮನೆಗೆ ಹಿಂದಿರುಗುತ್ತಾಳೆ.
ಮಾರನೇ ದಿನದಿಂದಲೇ ಕಾಡಿಗೆ ಹೋಗಿ ಹುಲಿಯೊಂದನ್ನು ಗುರುತಿಸಿಕೊಳ್ಳುತ್ತಾಳೆ. ಅಂದಿನಿಂದ ಪ್ರತಿದಿನವೂ ಹುಲಿಯೊಂದಕ್ಕೆ ಕಾಡಿನ ಗುರುತಾದ ಒಂದು ಜಾಗದಲ್ಲಿ ಮಾಂಸವನ್ನು ತಂದಿಟ್ಟು ಮರದ ಮೇಲೆ ಕೂರುತ್ತಿದ್ದಳು. ಹುಲಿ ಮಾಂಸವನ್ನು ತಿಂದ ಮೇಲೆ ಮನೆಗೆ ಹಿಂದಿರುಗುತ್ತಿದ್ದಳು. ಕೆಲ ದಿನಗಳು ಹೀಗೆ ಮುಂದುವರೆದು, ಒಂದು ದಿನ ಮರ ಹತ್ತದೆ ಹುಲಿ ಮಾಂಸವನ್ನು ತಿನ್ನುವುದನ್ನು ದೂರದಿಂದಲೇ ನೋಡಿ ಹಿಂದಿರುಗಿದಳು. ಇದನ್ನೇ ಮುಂದುವರೆಸಿ ಕೆಲ ದಿನಗಳ ನಂತರ ಆ ಹುಲಿಯ ಸಮೀಪ ತೆರಳಿ, ಅದು ತಿನ್ನುವುದನ್ನು ನೋಡಿ ವಾಪಸ್ಸಾಗುತ್ತಿದ್ದಳು. ಆಕೆಯ ದೇಹದ ವಾಸನೆಯನ್ನು ಗುರುತಿಸಿದ ಹುಲಿ ಆಕೆಯನ್ನು ನೋಡಿ ಸುಮ್ಮನೆ ಇರುತ್ತಿತ್ತು. ಒಂದೆರಡು ತಿಂಗಳು ಹೀಗೆ ಮುಂದುವರೆದು, ನಂತರ ಆಕೆ ಹುಲಿಯ ಪಕ್ಕದಲ್ಲೇ ಇದ್ದು, ಅದರ ಮೈಯನ್ನು ಸವರುತ್ತ ಕೂತಿದ್ದು, ಹುಲಿ ಮಾಂಸವನ್ನು ತಿಂದ ನಂತರ ಆಕೆ ಹಿಂತಿರುಗುತ್ತಿದ್ದಳು.
ಒಂದು ದಿವಸ ಹುಲಿ ತಿನ್ನಬೇಕಾದರೆ ಆಕೆ ಹುಲಿಯ ಎರಡು ಮೀಸೆಯನ್ನು ಕೀಳುತ್ತಾಳೆ. ಹುಲಿ ಕೊಸರಾಡಿತೆ ವಿನಹ ಆಕೆಗೆ ಏನು ಹಾನಿ ಮಾಡದೇ ಮಾಂಸವನ್ನು ತಿಂದು ಹೊರಟಿತು. ಮೀಸೆ ಸಿಕ್ಕ ಖುಷಿಯಲ್ಲಿ ಆಕೆ ಸಂಜೆ ಹೊತ್ತಿಗೆ ಸನ್ಯಾಸಿ ಬಳಿಗೆ ಓಡೋಡಿ ಬರುತ್ತಾಳೆ. ಸನ್ಯಾಸಿ ಆ ಮೀಸೆಯ ಕೂದಲನ್ನು ಜೋಪಾನವಾಗಿ ಇಡಲು ಹೇಳಿ ಮಾರನೇ ದಿವಸ ಬೆಳಿಗ್ಗೆ ಪೂಜೆಗೆ ಬರಲು ತಿಳಿಸುತ್ತಾನೆ.
ಮಾರನೇ ದಿವಸ ಹುಲಿಯ ಮೀಸೆಯೊಂದಿಗೆ ಆಕೆ ದೇವಸ್ಥಾನಕ್ಕೆ ಬರುತ್ತಾಳೆ. ಸನ್ಯಾಸಿಗೆ ಆ ಮೀಸೆಯನ್ನು ಕೊಟ್ಟು ತನ್ನ ಸಮಸ್ಯೆಯನ್ನು ಪರಿಹರಿಸುವಂತೆ ಕೈ ಮುಗಿಯುತ್ತಾಳೆ. ಹುಲಿಯ ಮೀಸೆಯನ್ನು ತೆಗೆದುಕೊಂಡ ಸನ್ಯಾಸಿ ಅಲ್ಲೇ ಹಣತೆಯಲ್ಲಿ ಉರಿಯುತ್ತಿದ್ದ ದೀಪದಲ್ಲಿ ಎರಡೂ ಕೂದಲನ್ನು ಸುಡುತ್ತಾನೆ. ಇದನ್ನು ನೋಡಿದ ಆ ಹೆಣ್ಣು ಮಗಳಿಗೆ ಸಿಟ್ಟು ಬಂದು "ಎಷ್ಟು ಕಷ್ಟ ಪಟ್ಟು, ತಾಳ್ಮೆಯಿಂದ, ತಿಂಗಳುಗಟ್ಟಲೆ ಕಷ್ಟ ಪಟ್ಟು ಹುಲಿಯ ಮೀಸೆಯನ್ನು ತಂದೆ. ಏನು ಮಾಡದೆ ಅದನ್ನು ಸುಟ್ಟು ಹಾಕಿದ್ದಿರಲ್ಲ" ಎಂದು ರೇಗುತ್ತಾಳೆ.
ಆಕೆಯ ಮಾತನ್ನು ಕೇಳಿದ ಸನ್ಯಾಸಿ "ನಿನ್ನ ಬುದ್ಧಿವಂತೆಕೆ ಮತ್ತು ತಾಳ್ಮೆಯಿಂದ ಆ ಕಾಡಿನ ಹುಲಿಯನ್ನೇ ಸಂಭಾಳಿಸಿ, ಅದರ ಮೀಸೆಯನ್ನು ತಂದೆ. ಇನ್ನು ನಿನ್ನ ಗಂಡನನ್ನು ಪಳಗಿಸಲು ನಿನ್ನಿಂದ ಸಾಧ್ಯವಿಲ್ಲವಾ? ಖಂಡಿತ ನಿನ್ನಿಂದ ಸಾಧ್ಯವಿದೆ. ಹೋಗು, ತಾಳ್ಮೆಯಿಂದ ಬಾಳು, ಜೀವನದಲ್ಲಿ ಜಯಿಸು" ಎಂದು ಹೇಳಿ ಸನ್ಯಾಸಿ ಆ ಹೆಣ್ಣು ಮಗಳಿಗೆ ಜೀವನದಲ್ಲಿ ಒಳಿತಾಗಲೆಂದು ಆಶೀರ್ವಾದ ಮಾಡಿ ಕಳಿಸಿಕೊಡುತ್ತಾನೆ.
~ ಅನಾಮಿಕ

ಅದ್ಭುತವಾದ ಕತೆ ಜೊತೆಗೆ ನೀತಿಯನ್ನು ಅದರಲ್ಲಿ ಅಡಗಿಸಿಕೊಂಡಿದೆ
ReplyDelete