February 23, 2024

ಮತ್ತೊಂದು ರೈತ ಹೋರಾಟ! ಏನಿದರ ಮರ್ಮ?

ಕಳೆದ ಒಂದು ತಿಂಗಳಲ್ಲಿ ಭಾರತದಲ್ಲಿ ಅನೇಕ ರಾಜಕೀಯಕ್ಕೆ ಸಂಬಂಧಿಸಿದ ವಿದ್ಯಮಾನಗಳು ನಡೆದಿದೆ. ಆಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆ ಮೊದಲಾಯ್ತು. ಕಾಂಗ್ರೆಸಿನ ರಾಹುಲ್ ಗಾಂಧಿ ನೇತೃತ್ವದ ಭಾರತ್ ನ್ಯಾಯ್ ಯಾತ್ರೆ ಶುರುವಾಯಿತು, ಇಂಡಿ ಒಕ್ಕೂಟದಿಂದ ಒಂದೊಂದೇ ಪಕ್ಷಗಳು ಹೊರಬರವುದು ಪ್ರಾರಂಭವಾಯ್ತು. ನಿತೀಶ್ ಎನ್.ಡಿ.ಏ ಸೇರಿದರು, ಮಮತಾ, ಕೇಜ್ರಿವಾಲ್ ಹೊರಬಂದರು, ಆಶೋಕ್ ಚವಾನ್ ಕಾಂಗ್ರೆಸ್ ತೊರೆದರು. ರಾಮಮಂದಿರದ ಉದ್ಘಾಟನೆಗೆ ತೆರಳಿ, ಮೋದಿಯವರನ್ನು ಭೇಟಿ ಮಾಡಿದರು ಎಂದು ಉತ್ತರಪ್ರದೇಶದ ನಾಯಕ ಪ್ರಮೋದ್ ಕೃಷ್ಣಂ ಅನ್ನು ಪಕ್ಷವೇ ಹೊರದಬ್ಬಿತು! ದುಬೈ ಅಲ್ಲಿ ಸ್ವಾಮಿನಾರಾಯಣ ಹೆಸರಿನಲ್ಲಿ ಭವ್ಯವಾದ ಹಿಂದೂ ಮಂದಿರ ಲೋಕಾರ್ಪಣೆಯಾಗಿದೆ. ಕತಾರ್ ದೇಶದಲ್ಲಿ ಗೂಢಚರ್ಯದ ಅರೋಪದ ಮೇಲೆ ನೇಣು ಶಿಕ್ಷೆಗೆ ಗುರಿಯಾಗಿದ್ದ 08 ಮಾಜಿ ನೌಕಾಪಡೆ ಸಿಬ್ಬಂದಿಗಳನ್ನು ಭಾರತ ಬಿಡಿಸಿಕೊಂಡು ಬಂದಿದೆ. ಇದೆಲ್ಲದರ ನಡುವೆ ಪಂಜಾಬಿನಲ್ಲಿ ಮತ್ತೊಮ್ಮೆ ರೈತರ ಹೋರಾಟ ಪ್ರಾರಂಭವಾಗಿದೆ. ಎರಡು-ಮೂರು ವರ್ಷಗಳ ಹಿಂದೆ ನಡೆದದ್ದು ನೆನಪಿರಬೇಕಲ್ಲ? 13 ತಿಂಗಳುಗಳ ಕಾಲ ಪ್ರತಿಭಟನ ನಿರತರಾಗಿ ಗಣರಾಜ್ಯೋತ್ಸವದ ದಿನ ಕೆಂಪು ಕೋಟೆ ಬಳಿ ದೇಶದ್ರೋಹಿ ಕೃತ್ಯವನ್ನೆಸಗಿದ್ದರು. ತನ್ಮೂಲಕ ಸತ್ತು ಮಲಗಿದ್ದ ಖಲಿಸ್ತಾನಿ ಚಳುವಳಿಗೆ ಮತ್ತೆ ಜೀವ ಬಂದಂತಾಯ್ತು

Disguised farmers unfurled the Khalistan Flag

ಎರಡು ವರ್ಷಗಳ ಹಿಂದೆ ನಡೆದ ಪ್ರತಿಭಟನೆಗೆ ಮೂಲ ಕಾರಣವೆಂಬಂತೆ ಬಿಂಬಿತವಾಗಿದ್ದು ಕೇಂದ್ರದಲ್ಲಿನ ಮೋದಿ ಸರ್ಕಾರ ಜಾರಿಗೆ ತರಬೇಕೆಂದಿದ್ದ 03 ಕೃಷಿಕಾಯ್ದೆ. ಆ ಕಾಯ್ದೆಯಲ್ಲಿದ್ದದ್ದನ್ನೇ 1987 ರಿಂದ ಭಾರತೀಯ ಕಿಸಾನ್ ಯೂನಿಯನ್ನಿನ ನಾಯಕರು ಪ್ರತಿಪಾದಿಸುತ್ತಾ ಬಂದಿದ್ದರು. ಕಾಂಗ್ರೆಸ್ ಈ ಹಿಂದೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಇದೇ ಕಾಯ್ದೆಯನ್ನು ಜಾರಿ ಮಾಡುವುದಾಗಿ ಹೇಳಿತ್ತು. ಆದರೆ ಈಗಿನ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಜಾರಿಗೊಳಿಸುವುದಾಗಿ ಹೇಳಿದಾಗ ಇದೆ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ವಿರೋಧ ಮಾಡಿತು ಹಾಗೂ ಈ ಕಾಯ್ದೆಯ ಪರವಾಗಿದ್ದ ತಥಾಕಥಿತ ಪರಿಸರವಾದಿಗಳು ಸಹ ವಿರೋಧ ವ್ಯಕ್ತಪಡಿಸಿದರು! ಅದು ರೈತರ ಆಂದೋಲನವಾಗಿರದೆ ರೈತರ ಹೋರಾಟವೆಂಬ ಮುಖವಾಡ ಧರಿಸಿ ಖಲಿಸ್ತಾನಿ ಹೋರಾಟ ನಡಿಯಿತು. ನೆರೆದಿದ್ದವರಿಗೆ ಮಸಾಜ್ ಮಾಡುವವರಿದ್ದರು, ಪಿಜ್ಜಾ ತಲುಪುತ್ತಿದ್ದವು. ಬರೊಬ್ಬರಿ 13 ತಿಂಗಳುಗಳು ಎಲ್ಲಾ ಕೆಲಸವನ್ನು ಬಿಟ್ಟು ರೈತರು ಅನ್ನುಸಿಕೊಳ್ಳುವವರು ದೆಹಲಿಯ ಗಡಿಯಲ್ಲಿ ಬೀಡುಬಿಟ್ಟಿದ್ದರು. ಉತ್ತರಪ್ರದೇಶದ ಚುಣಾವಣೆ ಕೂಡ ಹತ್ತಿರ ಬಂದಿತ್ತು, ಕೈಮೀರಿ ಹೋಗಿದ್ದ ಪರಿಸ್ಥಿತಿಯನ್ನು ಹತೋಟಿಗೆ ತರಲು ಮೋದಿ, ದೇಶದ ಸಲುವಾಗಿ ಈ ಕಾಯ್ದೆಯನ್ನು ಹಿಂಪಡೆದರು. ಪ್ರತಿಭಟನೆಗೆ ಇನ್ನೇನು ಕಾರಣವಿಲ್ಲವಾದ್ದರಿಂದ ಪರಿಸ್ಥಿತಿ ಶಾಂತವಾಗುತ್ತಾ ಬಂತು.

ಆದರೆ 13 ತಾರೀಖಿನಿಂದ ಮತ್ತೊಮ್ಮೆ ಪ್ರತಿಭಟನೆ ಮಾಡಲು ಕಾರಣವೇನು? ಈಗ ಅವರು ಮುಂದಿಡುತ್ತಿರುವ ಬೇಡಿಕೆಗಳಾದರೂ ಏನು? ಯಾರು ಆಂದೋನಲನದಲ್ಲಿದ್ದಾರೆ? ಯಾರ್ಯಾರು ಅವರ ಪರವಾಗಿದ್ದಾರೆ? ಎಂಬುದನ್ನು ನೋಡಬೇಕಿದೆ. ಹಿಂದಿನ ಪ್ರತಿಭಟನೆಯಲ್ಲಿದ್ದ ರಾಕೇಶ್ ಟಿಕಾಯತ್ ನೇತೃತ್ವದ ಉತ್ತರ ಪ್ರದೇಶದ ರೈತರು ಇಲ್ಲಿಲ್ಲ. ಇರುವವರೆಲ್ಲಾ ಪಂಜಾಬಿನವರು ಹಾಗೂ ಮುಖ್ಯವಾಗಿ ಕಾಂಗ್ರೆಸ್ಸಿನ ಗುರುಮೀತ್ ಮಾಂಗ್, ಪಂಜಾಬ್ ನಂತಹ ಶತ್ರುರಾಷ್ಟ್ರದೊಂದಿಗೆ ಗಡಿ ಹಂಚಿಕೊಳ್ಳುತ್ತಿರುವ ರಾಜ್ಯವನ್ನು ಆಳುತ್ತಿರುವ, ರಾಜಕೀಯದ ಹಿತಾಸಕ್ತಿಯೊಂದಿಗೆ ಪ್ರತಿಭಟನಾಕಾರರನ್ನು ಯಾವುದೇ ಅಡೆತಡೆಯಿಲ್ಲದೆ ದೆಹಲಿಯೊಳಗೆ ಬಿಡುತ್ತಿರುವ ಆಮ್ ಆದ್ಮಿ ಪಕ್ಷ. ಪ್ರತಿಭಟನಕಾರರ ಬೇಡಿಕೆಗಳು ಈ ಬಾರಿ ಬದಲಾಗಿವೆ ಹಾಗೂ ಆರ್ಥಿಕವಾಗಿ ಸಹ್ಯವಾದುದ್ದಲ್ಲ. ಅವರ ಮುಖ್ಯ ಬೇಡಿಕೆಗಳು; 'ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದು', 'ವಿಶ್ವ ವ್ಯಾಪಾರ ಸಂಸ್ಥೆಯಿಂದ ಭಾರತ ಹೊರಬರಬೇಕು' ಹಾಗೂ ಇವರ ಜೊತೆಗೆ ಪ್ರತಿಪಕ್ಷಗಳು 'ಚುಣಾವಣೆಗಳಲ್ಲಿ ಇವಿಎಂ ಬದಲಾಗಿ ಹಳೆಕಾಲದ ಬ್ಯಾಲೆಟ್ ಪೇಪರ್ ಉಪಯೋಗಿಸಬೇಕು' ಎಂದಾಗಿದೆ. ರೈತರ ಚಳುವಳಿಗೂ ಚುಣಾವಣೆಗೆ ಬಳಸುವ ಇವಿಎಂಗೂ ಏನು ಸಂಬಂಧ ಎಂಬುದು ಕುತೂಹಲಕಾರಿ ಪ್ರಶ್ನೆ.

Key Demands of Farmers
  • ಬ್ಯಾಲೆಟ್ ಪೇಪರ್ ಎಂಬ ಹಳೆ ಕಾಲದ ಮೋಸ ಮಾಡಲು ಅಧಿಕ ಆಸ್ಪದವಿರುವ ಪದ್ಧತಿಯನ್ನು ಮತ್ತೆ ತರಬೇಕೆಂಬುದು ಸೋತಲ್ಲೆಲ್ಲಾ ಇವಿಎಂ ಸರಿಯಿಲ್ಲ, ಗೆದ್ದಾಗ ಮಾತ್ರ ಸರಿ ಎನ್ನುವುದು ಸ್ಟೋವಿನ ಮೇಲೆ ಕಲ್ಲಿದ್ದಲನ್ನಿಟ್ಟು ಅಡುಗೆ ಮಾಡಬಹುದು ಎಂದು ಹೇಳುವಂತಹ ರಾಹುಲ್ ಗಾಂಧಿ ಮುಂದಾಳತ್ವದ ಕಾಂಗ್ರೆಸ್!
  • ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಕೊಡಬೇಕೆಂಬ ಬೇಡಿಕೆಯನ್ನು ಈಡೇರಿಸಲು ಸಾಧ್ಯವೇ ಇಲ್ಲ. ಈಗಿನ 23 ಬೆಳೆಗಳಿಗೆ ಕನಿಷ್ಠ ಬೆಂಬಲವೆಂದು ಸರ್ಕಾರ ಖರ್ಚು ಮಾಡುತ್ತಿರುವ ಮೊತ್ತ 2.3 ಲಕ್ಷ ಕೋಟಿ ರೂಪಾಯಿಗಳು. ಹಾಗೆ ಎಲ್ಲಾ ಬೆಳೆಗಳಿಗೂ ಬೆಂಬಲ ಬೆಲೆ ಕೊಡುವಂತಾಗಿ, ಖಾಸಗಿಯವರು ಬೆಳೆ ಕೊಳ್ಳಲಿಲ್ಲವೆಂದಾದರೆ ಸರ್ಕಾರವೇ ಎಲ್ಲಾ ಬೆಳೆಗಳನ್ನು ಕೊಳ್ಳಬೇಕಾಗುತ್ತದೆ. ಅದರ ಮೊತ್ತ ವಾರ್ಷಿಕವಾಗಿ ಸುಮಾರು 40 ಲಕ್ಷ ಕೋಟಿ ರೂಪಾಯಿ ಆಗಬಹುದು. ಭಾರತ ಸರ್ಕಾರದ ಈಗಿನ ಬಜೆಟ್ ಮೊತ್ತ 45 ಲಕ್ಷ ಕೋಟಿ ರೂಪಾಯಿ! ಈ ಎಲ್ಲಾ ಮೊತ್ತವನ್ನು ವ್ಯವಸಾಯಕ್ಕೆ ಮೀಸಲಿಟ್ಟರೆ ದೇಶವನ್ನು ಮುನ್ನಡೆಸುವುದಾದರೂ ಹೇಗೆ? ಹಾಗೆಂದೇ ಈ ಬೇಡಿಕೆ ಆರ್ಥಿಕವಾಗಿ ಸಹ್ಯವಾದುದ್ದಲ್ಲ ಎಂದದ್ದು.
  • ಜಾಗತೀಕರಣ ಹೊಂದಿರುವ ಈ ಶತಮಾನದಲ್ಲಿ ಯಾವುದೇ ದೇಶ ವಿಶ್ವ ವ್ಯಾಪಾರ ಸಂಸ್ಥೆಯ ಭಾಗವಾಗಿರುವುದು ಬುದ್ಧಿವಂತರ ಲಕ್ಷಣ. ಆರ್ಥಿಕವಾಗಿ ದಿವಾಳಿಯ ಅಂಚಿನಲ್ಲಿದ್ದ ಭಾರತವನ್ನು ಕಾಪಾಡಿದ್ದೇ ದೇಶದ ಆರ್ಥಿಕತೆಯನ್ನು ಜಾಗತಿಕವಾಗಿ ತೆರೆದ ಕ್ರಮ. ಈಗ ವಿಶ್ವ ವ್ಯಾಪಾರ ಸಂಸ್ಥೆಯಿಂದ ಭಾರತ ಹೊರಬರುವುದೆಂದರೆ ಜಗತ್ತಿನ ಆರ್ಥಿಕ ಸಮುದಾಯದಿಂದ ಹೊರಬರುವುದು ಎಂದರ್ಥ. ಇದರ ಪರಿಣಾಮವಾಗಿ ವಿದೇಶಿ ಹೂಡಿಕೆಯ ಮೊತ್ತ ಗಣನೀಯವಾಗಿ ಇಳಿಯುತ್ತದೆ. ರಷ್ಯಾ-ಉಕ್ರೇನ್, ಇಸ್ರೇಲ್-ಹಮಾಸ್ ನಡುವಿನ ಯುದ್ಧದ ಈ ಸಂದರ್ಭದಲ್ಲಿ ಈಗ ನಡೆಯುತ್ತಿರುವ ನಮ್ಮ ವಿದೇಶಿ ವ್ಯಾಪಾರ ವಹಿವಾಟು ನೆನೆಗುದಿಗೆ ಬೀಳುತ್ತದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಐದನೇ ಸ್ಥಾನದಲ್ಲಿರುವ ಭಾರತ ಹತ್ತು ವರ್ಷದ ಹಿಂದಿದ್ದ ದುಸ್ಥಿತಿಗಿಂತಲೂ ಹಿಂದೆ ಬೀಳುವ ಅಪಾಯವೇ ಹೆಚ್ಚು.
ಈಗ ಹೋರಾಟಕ್ಕೆ ಬಂದಿರುವವರಲ್ಲಿ ಎಷ್ಟು ಜನ ರೈತರು ಎಂಬುದು ಮತ್ತೊಮ್ಮೆ ಏಳುವಂತಹ ಪ್ರಶ್ನೆ. ಹಲವರು ಬಂದಿರುವುದು 90 ಲಕ್ಷ ಬೆಲೆಬಾಳುವ ಟ್ರ್ಯಾಕ್ಟರ್ಗಳಲ್ಲಿ, ಮತ್ತೂ ಕೆಲವರು ಕತ್ತಿ ಹಿಡಿದು. ಇದು ತಮ್ಮ ಅಹವಾಲುಗಳ ಬೇಡಿಕೆ ಇಡಲೋ ಅಥವಾ ಕೇಂದ್ರ ಸರ್ಕಾರದ ಮೇಲೆ ಯುದ್ಧ ಸಾರಲೋ? ಎಂಬ ಅನುಮಾನ ದಟ್ಟವಾಗುತ್ತಿದೆ. ರೈತರ ಹಿತಾಸಕ್ತಿಗಿಂತಲೂ ಮೋದಿಯವರನ್ನು ಕೆಳಗಿಳಿಸುವುದು ಇವರ ಉದ್ದೇಶವಾಗಿದೆ. ಜೊತೆಗೆ ಭಾರತ್ ನ್ಯಾಯಯಾತ್ರೆಯಲ್ಲಿರುವ ರಾಹುಲ್ ತಾವು ಅಧಿಕಾರಕ್ಕೆ ಬಂದರೆ ಇವರ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂಬ ಹೇಳಿಕೆ ಕೊಟ್ಟಿದ್ದಾರೆ. ಮೇಲೆ ಹೇಳಿದ ಕಾರಣಗಳನಿಟ್ಟು ನೋಡಿದರೆ ಇದು ಎಂತಹ ಅಪ್ರಬುದ್ಧ, ಮೂರ್ಖ ಹೇಳಿಕೆ ಎಂದು ತಿಳಿಯುತ್ತದೆ. ಈತನನ್ನು ಇನ್ನೂ ಒಬ್ಬ ನಾಯಕ, ದಿನದಲ್ಲಿ ಒಂದಷ್ಟು ಹೊತ್ತು ಟಿವಿಯಲ್ಲಿ ಅವರ ಬಗ್ಗೆಯೂ ಸಹ ತೋರಿಸಿ ಎಂದು ಸಮರ್ಥಿಸಿಕೊಳ್ಳುವವರಿಗೆ ಹಾಗೂ ಅವರನ್ನು ಹಿಂಬಾಲಿಸುವವರಿಗೆ ಏನು ಹೇಳುವುದು?

ಇನ್ನೊಂದು ಆಶ್ಚರ್ಯಕರವಾದ ವಿಚಾರವಿದೆ. ರಾಹುಲನ ಸೋದರಿ ಪ್ರಿಯಾಂಕಾ ಜರ್ಮನಿಯಲ್ಲಿದ್ದರು. ಕಾಕತಾಳಿಯವೋ ಅಥವಾ ಪೂರ್ವನಿರ್ಧಾರಿತವೋ; ಜರ್ಮನಿಯಲ್ಲಿಯೂ ಸಹ ಇದೇ ಟ್ರ್ಯಾಕ್ಟರ್ ಮಾದರಿ ರೈತರ ಪ್ರತಿಭಟನೆ ನಡೆಯುತ್ತಿದೆ! ಇನ್ನೆರಡು ತಿಂಗಳಲ್ಲಿ ಭಾರತದಲ್ಲಿ ಲೋಕಸಭೆ ಚುನಾವಣೆ ಇದೆ. ಏನಾದರಾಗಲಿ; ನರೇಂದ್ರ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂಬುದು ಕಾಂಗ್ರೆಸ್ ಚಿಂತನೆ. ದೇಶವನ್ನು ಮಾರಿಯಾದರೂ ತಾವು ಅಧಿಕಾರಕ್ಕೆ ಬರಬೇಕು ಅನ್ನುವ ಮನಸ್ಥಿತಿಯಿಂದ ಕಾಂಗ್ರೆಸ್ ಹೊರಬರುವುದೋ ಇಲ್ಲವೋ ದೇವರೇ ಬಲ್ಲ! ಆದರೆ ಸ್ವಾರ್ಥವನ್ನು ಬದಿಗಿಟ್ಟು ದೇಶದ ಏಳಿಗೆಗೆ ಶ್ರಮಿಸುತ್ತಿರುವ ಮೋದಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

***********************************************************

References

No comments:

Post a Comment