ಸಾಮಾನ್ಯವಾಗಿ ಬಹುತೇಕ ಜನ ಹಾಸನ ಜಿಲ್ಲೆಯಲ್ಲಿ ಹೊಯ್ಸಳ ಸಾಮ್ರಾಜ್ಯದ ದೇಗುಲಗಳು ಎಂದರೆ ಬೇಲೂರಿನ ಚನ್ನಕೇಶವ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಸ್ಥಾನಗಳನ್ನು ಮಾತ್ರ ನೋಡಿ ಬರುತ್ತಾರೆ. ಈ ಎರಡೂ ದೇವಸ್ಥಾನಗಳು ವಾಸ್ತುಶಿಲ್ಪಕ್ಕೆ ಕಳಶಪ್ರಾಯ ಎಂಬುದರಲ್ಲಿ ಎರಡು ಮಾತಿಲ್ಲ. ಇದರ ಹೊರತಾಗಿ ಹಾಸನ ಜಿಲ್ಲೆಯಲ್ಲಿ ಹೊಯ್ಸಳ ಸಾಮ್ರಾಜ್ಯದ ಮತ್ತೊಂದು ದೇವಸ್ಥಾನವಿದೆ. ಅದುವೆ, ದೊಡ್ಡಗದ್ದವಳ್ಳಿಯ ಲಕ್ಷ್ಮೀದೇವಿ ದೇವಸ್ಥಾನ.
 |
Lakshmi Devi Temple, Doddagaddavalli
|
 |
| ರಂಗ ಮಂಟಪ |
ಬೇಲೂರಿನಿಂದ ಸುಮಾರು 32 ಕೀ.ಮೀ ಹಾಸನಕ್ಕೆ ಬರುವ ದಾರಿಯಲ್ಲಿ ದೊಡ್ಡಗದ್ದವಳ್ಳಿ ಎಂಬ ಸಣ್ಣ ಹಳ್ಳಿ ಸಿಗುತ್ತದೆ. ಹಳ್ಳಿಯ ಕೊನೆಯಲ್ಲಿ ಈ ದೇವಾಲಯ ನಿರ್ಮಿತವಾಗಿದೆ. 12ನೇ ಶತಮಾನದಲ್ಲಿ ನಿರ್ಮಿತವಾದ ಈ ದೇವಾಲಯವು ಹೊಯ್ಸಳರ ಕಾಲದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಹೊಯ್ಸಳರು ನಿರ್ಮಿಸಿದ ಏಕೈಕ ಚತುಷ್ಕೂಟ ದೇವಾಲಯ ಇದಾಗಿದೆ. ಹೊಯ್ಸಳ ಶೈಲಿಯ ಇತರ ದೇವಾಲಯಗಳಲ್ಲಿ ಇಲ್ಲದಿರುವ ವಿಶಿಷ್ಟವಾದ ವಾಸ್ತುಶಿಲ್ಪದ ಅಂಶಗಳು ಈ ದೇವಾಲಯದಲ್ಲಿ ಕಾಣಬಹುದಾಗಿದೆ. ಪ್ರಾಚೀನ ಕಾಲದ ದೇವಾಲಯಗಳ ವಾಸ್ತುಶಿಲ್ಪದ ಬಗ್ಗೆ ಆಸಕ್ತಿ ಇರುವವರು 3-4 ಘಂಟೆಗಳಷ್ಟು ಹೊತ್ತು ನೋಡಬಹುದಾದ ದೇವಾಲಯ ಇದಾಗಿದೆ. ಹೊಯ್ಸಳ ಸಮ್ರಾಜ್ಯದ ಬೇಲೂರು, ಹಳೆಬೀಡು, ನುಗ್ಗೇನಹಳ್ಳಿ, ತಲಕಾಡುಗಳಲ್ಲಿ ನಿರ್ಮಿಸಲಾದ ದೇವಾಯಗಳೆಲ್ಲವೂ ವಿಷ್ಣು ಅಥವಾ ಶಿವನಿಗೆ ಸಮರ್ಪಿತವಾದವು. ಆದರೆ, ದೊಡ್ಡಗದ್ದವಳ್ಳಿಯ ಈ ದೇವಸ್ಥಾನ ಲಕ್ಶ್ಮೀದೇವಿಗೆ ಸಮರ್ಪಿತವಾಗಿದೆ. ಪೂರ್ವಕ್ಕೆ ಅಭಿಮುಖವಾಗಿ ಲಕ್ಷ್ಮೀದೇವಿ ಇದ್ದರೆ, ಆಕೆಯ ಎದುರಿಗೆ ಶಿವನ ಗುಡಿಯು ಪಶ್ಚಿಮಕ್ಕೆ ಅಭಿಮುಖವಾಗಿದೆ. ಕಾಳಿ ದೇವಿಯು ದಕ್ಷಿಣಕ್ಕೆ ಹಾಗೂ ವಿಷ್ಣು ಉತ್ತರಕ್ಕೆ ಅಭಿಮುಖವಾಗಿ ನಿಂತಿದ್ದಾರೆ.
ದೇವಾಲಯದ ಆವರಣವನ್ನು ಪ್ರವೇಶಿಸುತ್ತಿದ್ದಂತೆ 8-10 ಕಂಬಗಳಿರುವ ಸಣ್ಣ ದ್ವಾರ ಮಂಟಪ ಸಿಗುತ್ತದೆ. ಬೇಲೂರಿನ ಚೆನ್ನಕೇಶವ ಮಂದಿರದಲ್ಲಿ ಇರುವ ಶೈಲಿಯಲ್ಲೇ ಇಲ್ಲಿನ ಕಂಬಗಳು ಇವೆ. ನಂತರ, ಹೊಯ್ಸಳರ ಲಾಂಛನಗಳನ್ನು ಒಳಗೊಂಡ ನಾಲ್ಕು ಗೋಪುರಗಳನ್ನು ಕಾಣಬಹುದು. ಮುಂದೆ ಚತುಷ್ಕೂಟದ ಬಾಗಿಲನ್ನು ಸಮೀಪಿಸುತ್ತಿದ್ದಂತೆ ವಿವಿಧ ಆಭರಣಗಳನ್ನು ಹೊಂದಿರುವ ಎರಡು ಹೆಣ್ಣು ಶಿಲ್ಪಗಳನ್ನು ಕಾಣಬಹುದು. ರಂಗ ಮಂಟಪವನ್ನು ಪ್ರವೇಶ ಮಾಡುತ್ತಿದಂತೆ ಎಡ ಭಾಗದಲ್ಲಿ ಮಹಾಕಾಳಿಯ ಮಂದಿರವನ್ನು ಕಾಣಬಹುದು. ಮಹಾಕಾಳಿಯು ಶಾಂತ ಸ್ವರೂಪಿಯಲ್ಲಿದ್ದು ಆಕೆಯ ಕಾವಲಿಗಾಗಿ ಆರು ಅಡಿಗಿಂತಲೂ ಎತ್ತರವಾದ ಎರಡು ನಗ್ನ ಬೇತಾಳಗಳು ನಿಂತಿವೆ. ಎರಡೂ ಬೇತಾಳಗಳ ವಿಗ್ರಹಗಳು ನಿಜಕ್ಕೂ ಭಯಂಕರವಾಗಿವೆ. ಕಾಳಿ ಮಂದಿರದ ಎದುರಿಗೆ ಮೇಲ್ಛಾವಣಿಯಲ್ಲಿ ನೃತ್ಯ ಮಾಡುತ್ತಿರುವ ಮತ್ತು ರುದ್ರವೀಣೆಯನ್ನು ನುಡಿಸುತ್ತಿರುವ ಶಿವನ ಮೂರ್ತಿಗಳನ್ನು ಕೆತ್ತಲಾಗಿದೆ. ಮೇಲ್ಛಾವಣಿಯನ್ನೇ ಗಮನಿಸಿದರೆ ವಿವಿಧ ದಿಕ್ಕುಗಳಲ್ಲಿ ವಾಸ್ತುದೇವತೆಗಳನ್ನು ಕೆತ್ತಲಾಗಿದೆ. ಕುದುರೆಯ ಮೇಲೆ ಕುಬೇರ ಮತ್ತು ರಂಭೆ. ಕೋಣದ ಮೇಲೆ ಸವಾರಿ ಮಾಡುತ್ತಿರುವ ಯಮ, ಅಗ್ನಿ, ಶಕ್ತಿದೇವತೆ, ಮೊಸಳೆಯ ಮೇಲೆ ಸವಾರಿ ಮಾಡುತ್ತಿರುವ ವರುಣ ದೇವತೆಗಳನ್ನು ನೋಡಬಹುದಾಗಿದೆ. ಸಭಾಂಗಣದ ಮಧ್ಯದಲ್ಲಿ ಪತ್ನಿಯ ಸಮೇತ ಐರಾವತದ ಮೇಲೆ ಇಂದ್ರದೇವನನ್ನು ಕಾಣಬಹುದು.
 |
| ಶಿಲಾ ಶಾಸನ |
 |
| ಗೋಪುರ |
 |
| ಗೋಪುರದ ಮೇಲಿನ ಕೆತ್ತನೆ - 1 |
 |
| ಆವರಣ |
 |
| ಗೋಪುರದ ಮೇಲಿನ ಕೆತ್ತನೆ - 2 |
 |
| ಗೋಪುರದ ಮೇಲಿನ ಕೆತ್ತನೆ - 3 |
 |
| ಗೋಪುರದ ಮೇಲೆ ಹೊಯ್ಸಳರ ಲಾಂಛನ |
 |
| ಭಯಂಕರ ಬೇತಾಳ |
ದೇವಾಲಯದ ಪ್ರಮುಖ ದೇವರಾದ ಲಕ್ಷ್ಮೀದೇವಿಗೆ ನಾಲ್ಕು ಕೈಗಳಿದ್ದು, ಮೇಲಿನ ಬಲಗೈಯಲ್ಲಿ ಶಂಖ, ಎಡಗೈಯಲ್ಲಿ ಚಕ್ರವನ್ನು ಹಿಡಿದಿದ್ದಾಳೆ. ಕೆಳಗಿನ ಕೈಗಳಲ್ಲಿ ಗದೆ ಮತ್ತು ಜಪಮಾಲೆಯನ್ನು ಹಿಡಿದಿದ್ದಾಳೆ. ಎದುರಿಗೆ ಲಿಂಗ ರೂಪದಲ್ಲಿರುವ ಭೂತನಾಥ ಅರ್ಥಾತ್ ಶಿವನ ಮಂದಿರವಿದೆ. ಆತನ ಎರಡು ಬದಿಯಲ್ಲಿ ಸುಬ್ರಮಣ್ಯ ಮತ್ತು ಗಣೇಶನ ಮೂರ್ತಿಯನ್ನು ಕಾಣಬಹುದು. ದೇವಾಲಯದ ಆವರಣದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಮೇಲ್ಛಾವಣಿಯ ಕೆತ್ತನೆಗಳನ್ನು ಗಮನಿಸಲು ಹೆಚ್ಚು ಬೆಳಕು ಚೆಲ್ಲುವಂತಹ ಬ್ಯಾಟರಿ ತೆಗೆದುಕೊಂಡು ಹೋದರೆ ಒಳಿತು. ಇದಲ್ಲದೇ ಎರಡೂ ಕಡೆ ಆನೆಗಳುಳ್ಳ ಗಜಲಕ್ಷ್ಮೀ, ತಾಂಡವೇಶ್ವರ ಮತ್ತು ಯೋಗನರಸಿಂಹ ದೇವರುಗಳ ಪ್ರಮುಖ ಶಿಲ್ಪಗಳು ದೇವಾಲಯದ ದ್ವಾರದಲ್ಲಿ ನೋಡಬಹುದು.
ಗರ್ಭಗುಡಿಯನ್ನು ಪ್ರವೇಶಿಸಿ ಹಸಿರು ವಸ್ತ್ರದಿಂದ ಅಲಂಕೃತವಾಗಿರುವ ಲಕ್ಷ್ಮೀದೇವಿಯನ್ನು ನಾವೇ ಸ್ವತಃ ಪೂಜಿಸಿ, ಆರಾಧಿಸುವ ಅವಕಾಶ ಇಲ್ಲಿದೆ. ಈ ಪ್ರಕ್ರಿಯೆ ದೇವಾಲಯದ ಮತ್ತೊಂದು ಪ್ರಮುಖ ಆಕರ್ಷಣೆ. ದೇವಾಲಯದ ಪ್ರಾಂಗಣದಲ್ಲಿ ಕೆಲವು ಶತಮಾನಗಳಷ್ಟು ಹಳೆಯದಾದ ಒಂದೆರಡು ಶಾಸನಗಳನ್ನು ನೋಡಬಹುದಾಗಿದೆ. ಹೊಯ್ಸಳ ಸಾಮ್ರಾಜ್ಯದ ಪ್ರಮುಖ ರಾಜನಾದ ವಿಷ್ಣುವರ್ಧನನ ಕಾಲದ ಶಿಲ್ಪಕಲೆಯ ವೈಭವಕ್ಕೆ ಮತ್ತೊಂದು ಸಾಕ್ಷಿ ಎನ್ನಬಹುದಾಗಿದೆ ದೊಡ್ಡಗದ್ದವಳ್ಳಿಯ ಲಕ್ಷ್ಮೀದೇವಿ ದೇವಸ್ಥಾನ.
 |
| 3 Idiots |
ನಿಮ್ಮ ಅಂಕಣಗಳಲ್ಲಿ ಬರಿ ರಾಷ್ಟ್ರದ ಬಗ್ಗೆ ಅಥವಾ ರಾಜಕೀಯ ಅಥವಾ ಸೈನ್ಯದ ಬಗ್ಗೆ ಓದುತ್ತಿದ್ದೆ
ReplyDeleteಮೊದಲ ಬಾರಿಗೆ ಇತಿಹಾಸಕ್ಕೆ ಹಾಗೂ ಶಿಲ್ಪಕಲೆಯ ಬಗ್ಗೆ ನೀವು ಬರೆದ ಅಂಕಣ ಓದುತ್ತಿರುವುದು
ಒಟ್ಟಾರೆ ಅದ್ಭುತವಾಗಿದೆ