December 10, 2023

ದೇಶ ಮೊದಲು; ಇದು ಭಾರತದ ವಿದೇಶಾಂಗ ನೀತಿ

ಪ್ರತಿಯೊಂದು ದೇಶಕ್ಕೂ ತನ್ನ ಮಿತ್ರ ರಾಷ್ಟ್ರಗಳಾವುದು, ಶತ್ರುಗಳಾರು, ಯಾವ ದೇಶದೊಡನೆ ಎಷ್ಟರ ಮಟ್ಟಿಗೆ ಸಂಬಂಧವಿಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆ ಇರುತ್ತದೆ. ಒಂದು ಸಾಲಲ್ಲಿ ಹೇಳುವುದಾದರೆ ರಾಷ್ಟ್ರವೊಂದರ ಸರ್ಕಾರ ಅನ್ಯರಾಷ್ಟ್ರಗಳೊಂದಿಗೆ ವ್ಯವಹರಿಸಲು ಬಳಸುವ ನೀತಿಯೇ ವಿದೇಶಾಂಗ ನೀತಿ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ವಿದೇಶಾಂಗ ವ್ಯವಹಾರ ನೀತಿ ಬಗ್ಗೆ ಗಮನ ಹರಿಸಿದ್ದು ಅತ್ಯಲ್ಪ. ಒಂದು ವಿಧದಲ್ಲಿ ಹೇಳುವುದಾದರೆ ವಿದೇಶಾಂಗ ನೀತಿ ಎಂಬುದು ನಗಣ್ಯ, ಕೆಲಸಕ್ಕೆ ಬಾರದ ಖಾತೆ ಎನ್ನುವಂತಿತ್ತು. ಆದರೆ 2014 ಮೇಲೆ - ನರೇಂದ್ರ ಮೋದಿ ಪ್ರಧಾನಿಯಾದ ನಂತರ ಈ ವಿಚಾರದಲ್ಲಿ ಆಮೂಲಾಗ್ರವಾದ ಬದಲಾವಣೆ ಬಂದಿದೆ. ದೇಶದ ಅಭಿವೃದ್ಧಿಯ ಉಪಯೋಗಕ್ಕೆ ಬಾರದ ಅಲಿಪ್ತ ನೀತಿಯನ್ನು ತೊರೆದು 'ದೇಶ ಮೊದಲು (ನೇಷನ್ ಫಸ್ಟ್)' ಎಂಬ ನೀತಿಗೆ ಭಾರತ ಇಂದು ಬಲವಾಗಿ ಆತುಕೊಂಡಿದೆ.


Nation First - India's Foreign Policy

ವಿಶ್ವದ ಎರಡನೇ ಮಹಾಯುದ್ಧ ಮುಗಿದು ಭಾರತ ಸ್ವತಂತ್ರ್ಯಗೊಳ್ಳುವ ಹೊತ್ತಿಗೆ ಜಗತ್ತು ಎರಡು ಹೋಳಾಗಿ; ಅಮೇರಿಕಾ ಹಾಗೂ ರಷ್ಯಾದ ಒಕ್ಕೂಟಗಳ ನಡುವೆ ಶೀತಲ ಸಮರ ಪ್ರಾರಂಭವಾಗಿತ್ತು. ದೂರದ ದ್ವೀಪ ಖಂಡದ ದೇಶಗಳಾದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲಾಂಡ್, ಇಸ್ರೇಲ್, ಜಪಾನ್, ದಕ್ಷಿಣ ಕೊರಿಯಾ, ಪಾಶ್ಚಾತ್ಯ ಯೂರೋಪ್ ದೇಶಗಳು ಕೂಡ ಅಮೇರಿಕಾ ಪರವಾಗಿತ್ತು. ಯೂರೋಪಿನ ಪೂರ್ವ ಭಾಗದ ರಾಷ್ಟ್ರಗಳು, ವಿಯಟ್ನಾಂ, ಉತ್ತರ ಕೊರಿಯಾ ಸೋವಿಯತ್ ಒಕ್ಕೂಟದ  ಪರವಾಗಿದ್ದವು. ನೆರೆಯ ಶತ್ರು ರಾಷ್ಟ್ರ ಪಾಕಿಸ್ತಾನ ಅಮೇರಿಕಾ ಜೊತೆಗೂಡಿತ್ತು. ಪ್ರಪಂಚದ ಎಲ್ಲಾ ದೇಶಗಳು ಈ ಎರಡೂ ಜಾಗತಿಕ ಶಕ್ತಿಗಳ ನಡುವೆ ಒಂದನ್ನು ಬೆಂಬಲಿಸುವ ಅನಿವಾರ್ಯ ಒದಗಿತ್ತು. ಆಗ ತಾನೇ ಸ್ವತಂತ್ರ್ಯ ಪಡೆದುಕೊಂಡಿದ್ದ ಭಾರತ ಈ ಅನಿವಾರ್ಯತೆಗೆ ಹೊರತಾಗಿರಲಿಲ್ಲ. ಆದರೆ ನೆಹರೂ ನೇತೃತ್ವದ ಭಾರತ ಮಾತ್ರ ತಾನು ಯಾರೊಂದಿಗೂ ಸೇರುವುದಿಲ್ಲ, ಅಲಿಪ್ತ ನೀತಿ ಅನುಸರಿಸುತ್ತೇನೆಂದು ಚೀನಾ ಹಾಗೂ ಉಳಿದ ಬಡರಾಷ್ಟ್ರಗಳ ನಾಯಕ ಎಂದು ಬಿಂಬಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಯಿತು. ಸೈನಿಕರನ್ನು ಸಾಕುವುದು, ಇತರ ದೇಶಗಳಲ್ಲಿ ಹೂಡಿಕೆ ಮಾಡುವುದು ಯುದ್ಧ ಹಾಗೂ ಇನ್ನಿತರ ಕಷ್ಟದ ಸಂದರ್ಭಗಳಲ್ಲಿ ಬೆಂಬಲಿಸಲಿ ಎಂದು. ಅಲಿಪ್ತವಾಗಿರುತ್ತೇನೆ ಎಂದ ಭಾರತವನ್ನು ಯಾರೂ ಕೇಳಲಿಲ್ಲ. ಒಂದೆಡೆ ಪಾಕಿಸ್ತಾನ ಅಮೇರಿಕಾದ ಸಹಾಯ ಪಡೆಯುತ್ತಿತ್ತು, ಮತ್ತೊಂದೆಡೆ ಚೀನಾ ಅಲಿಪ್ತ ಎಂದುಕೊಂಡೇ ಆಂತರಿಕವಾಗಿ ಗಟ್ಟಿಯಾಗುತ್ತಾ ಮುಂದುವರೆಯಿತು. 15 ವರ್ಷದ ಅಂತರದಲ್ಲಿ ಚೀನಾ ಟಿಬೆಟ್ ಅನ್ನು ಕಬ್ಜಾ ಮಾಡಿಕೊಂಡು, ನಮ್ಮ ಮೇಲೆ ದಾಳಿ ಮಾಡಿ ಸೋಲಿಸಿತು. ಈ ಎಲ್ಲದರ ಕಾರಣ ಭಾರತದ ಆರ್ಥಿಕತೆ ಸಹ ಕುಸಿಯುತ್ತಾ ಸಾಗಿತು.


ನೆಹರೂ ನಂತರ ಶಾಸ್ತ್ರೀಯವರಿಗೆ ಬಹಳ ಸಮಯ ಸಿಗಲಿಲ್ಲ. ಪಾಕಿಸ್ತಾನ ದಾಳಿ ಮಾಡಿತ್ತು. ನಂತರ ಬಂದ ಇಂದಿರಾ ರಷ್ಯಾ ಜೊತೆ ಒಳಒಪ್ಪಂದ ಮಾಡಿಕೊಂಡು ಪಾಕಿಸ್ತಾನವನ್ನು ಒಡೆದು ಬಾಂಗ್ಲಾದೇಶವನ್ನು ಹುಟ್ಟುಹಾಕಿದರು. ಆದರೆ, ದೇಶ ತುರ್ತು ಪರಿಸ್ಥಿತಿಗೆ ಹೋಗಿ ಮತ್ತೆ ವಿದೇಶಾಂಗ ನೀತಿ ಹಳ್ಳ ಹಿಡಿಯಿತು. ಪಿ.ವಿ. ನರಸಿಂಹರಾಯರ ಕಾಲದಲ್ಲಿ 'ಲುಕ್ ಈಸ್ಟ್' ಪಾಲಿಸಿ ತಂದು ನಮ್ಮ ವಿದೇಶಾಂಗ ನೀತಿಯನ್ನು ಸುಧಾರಿಸುವ ಪ್ರಯತ್ನ ಪಟ್ಟರು. ಅಟಲ್ಜೀ ಫೋಖ್ರಾನ್ ಮೂಲಕ ದೇಶದ ಸ್ವಾಭಿಮಾನವನ್ನು ಹೆಚ್ಚಿಸಿದರು. 'ಇಂಡಿಯಾ ಶೈನಿಂಗ್' ಅನ್ನುವಂತಹ ಹಣೆಪಟ್ಟಿ ಕೊಟ್ಟು ಹೋದರು. ನಂತರ ಬಂದ ಕಾಂಗ್ರೇಸ್ಸಿನ ಮನಮೋಹನ್ ಸಿಂಗ್ ಸರ್ಕಾರ ದೇಶವನ್ನು ಹಳ್ಳಹಿಡಿಸಿತು. 2008ರಲ್ಲಿ ಚೀನಾದೊಂದಿಗೆ ಕಾಂಗ್ರೇಸ್ ಪಕ್ಷವಾಗಿ ಗುಪ್ತವಾಗಿ ಒಪ್ಪಂದ ಮಾಡಿಕೊಂಡಿತು. ನಂತರ ದೇಶದಾದ್ಯಂತ ಚೀನಿ ವಸ್ತುಗಳು ಓತಪ್ರೋತವಾಗಿ ಹರಿದು ಬಂತು, ಸಾಲು ಸಾಲು ಹಗರಣಗಳು ಬೆಳಕಿಗೆ ಬಂದವು. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಡೆದ ಹಗರಣದ ಕಾರಣ ಭಾರತ ಜಗತ್ತಿನೆದುರಿಗೆ ತಲೆತಗ್ಗಿಸುವಂತಾಯಿತು. 2003ರ 'ಭಾರತ ಹೊಳೆಯುತ್ತಿದೆ' ಎಂಬ ಸ್ಥಿತಿಯಿಂದ 2013 ಹೊತ್ತಿಗೆ ದೇಶವನ್ನು ಪ್ರಪಂಚದ 5ನೇ ಅತ್ಯಂತ ದುರ್ಬಲ ಆರ್ಥಿಕತೆ ಹೊಂದುವಂತೆ ಮಾಡಿದ್ದು ಕಾಂಗ್ರೇಸ್ ಸರ್ಕಾರದ ಸಾಧನೆ.


India has improved a lot all the way since 1947.


2014 ನಂತರ ಭಾರತದ ಭಾಗ್ಯದ ಬಾಗಿಲು ತೆರೆಯಿತು. ದೇಶದ ಜನತೆ ನರೇಂದ್ರ ಮೋದಿಯವರನ್ನು ಪ್ರಧಾನಿ ಪಟ್ಟದಲ್ಲಿ ಕೂರಿಸಿದರು. ಮೋದಿ ಬಂದೊಡನೆ ವಿದೇಶ ಪ್ರವಾಸ ಮಾಡುವುದರ ಜೊತೆಗೆ ಅನೇಕ ವ್ಯಾವಹಾರಿಕ ಒಪ್ಪಂದಗಳನ್ನು ಮಾಡಿಕೊಂಡು ದೇಶ-ದೇಶಗಳ ನಡುವೆ ಉತ್ತಮ ಬಾಂಧವ್ಯ ಏರ್ಪಡಿಸಿಕೊಳ್ಳುವ ಕಾರ್ಯಕ್ಕೆ ಮುಂದಾದರು. 2015 - ಸೀಶೆಲ್ಸ್ ನೊಂದಿಗೆ ಹಿಂದೂ ಮಹಾಸಾಗರ ಒಪ್ಪಂದ, ಸಿಂಗಾಪುರದೊಂದಿಗೆ ನೀತಿ ಆಯೋಗದ ಒಪ್ಪಂದ, ರಷ್ಯಾದ ರೈಲು, ಭೂಗರ್ಭ, ತೈಲ ವಿಭಾಗದೊಂದಿಗೆ ಒಪ್ಪಂದ, ಮಂಗೋಲಿಯಾ ಜೊತೆ ಔಷಧ ಮತ್ತು ಶಿಕ್ಷಣಕ್ಕೆ ಸಂಬಂಧಪಟ್ಟ ಒಪ್ಪಂದ. 2016 - ಸೌದಿಯೊಂದಿಗೆ ಭಯೋತ್ಪಾದನೆ ಕುರಿತು, ಇರಾನ್ ಜೊತೆ ಗಣಿ ಸಹಕಾರ, ಕೀನ್ಯಾದೊಡನೆ ಶಸ್ತ್ರಾಸ್ತ್ರ, ಇಸ್ರೇಲ್ ಜೊತೆ ಬಾಹ್ಯಾಕಾಶ, ಗಲ್ಫ್ ರಾಷ್ಟ್ರಗಳ ಜೊತೆ ಜಮ್ಮು-ಕಾಶ್ಮೀರದಲ್ಲಿ ಹೂಡಿಕೆ, ಆಫ್ರಿಕಾ ಜೊತೆ ಕೃಷಿ ಒಪ್ಪಂದ ಮಾಡಿಕೊಂಡರು. ಅಮೇರಿಕಾರದಲ್ಲಿ ಹೌಡಿ ಮೋದಿ, ಇಂಗ್ಲೆಂಡಿನ ವೆಂಬ್ಲಿ, ಒಮನ್ ಪ್ರವಾಸ ನೆನಪಿರಬೇಕಲ್ಲ. ಇಸ್ರೇಲಿಗೆ ಭೇಟಿಕೊಟ್ಟ ಭಾರತದ ಮೊದಲ ಪ್ರಧಾನಿ ಮೋದಿ, 33 ವರ್ಷಗಳ ನಂತರ ಫಿಜಿಗೆ, 17 ವರ್ಷಗಳ ನಂತರ ನೇಪಾಳಕ್ಕೆ, 1950 ನಂತರ ಐರ್ಲಂಡಿಗೆ, 1973 ನಂತರ ಕೆನಡಾಕ್ಕೆ ಭೇಟಿಕೊಟ್ಟ ಭಾರತದ ಪ್ರಧಾನಿ ಇದ್ದರೆ ಅದು ಮೋದಿ.


2017ರಲ್ಲಿ ಅಂತರಾಷ್ಟ್ರೀಯ ನ್ಯಾಯಾಲಯದ ಚುಣಾವಣೆಯಲ್ಲಿ ಇಂಗ್ಲೆಂಡ್ ಅನ್ನು ಹಿಂದೆ ಸರಿಯುವಂತೆ ಮಾಡಿ, ಭಾರತ ಜಯಗಳಿಸಿದ್ದು ನಮ್ಮ ವಿದೇಶಾಂಗ ಇಲಾಖೆಯ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿ. ಜಾಗತಿಕ ಮಟ್ಟದ ಎಲ್ಲ ವೇದಿಕೆಯಲ್ಲೂ ಪಾಕಿಸ್ತಾನದ ನಿಜ ಸ್ವರೂಪವನ್ನು ಬಯಲಿಗೆಳೆದು ಅದನ್ನು ಭಿಕ್ಷೆ ಬೇಡುವ ಸ್ಥಿತಿಗೆ ತಂದಿಟ್ಟ ಕೀರ್ತಿ ಸಲ್ಲಬೇಕಾದ್ದು ನಮ್ಮ ವಿದೇಶಾಂಗ ನೀತಿಗೆ.  ಹತ್ತು ವರ್ಷಗಳ ಹಿಂದೆ ಭಾರತದ ಸುತ್ತ ಚೀನಾ ಉರುಳಂತೆ 'ಮುತ್ತಿನ ಹಾರ' ಹಾಕಿತ್ತು. ಅದಕ್ಕೆ ಪ್ರತಿಯಾಗಿ ಮೋದಿ ಮೊದಲು ಸಿಂಗಾಪುರದ ಚಂಗಿ ಬಂದರಿನಲ್ಲಿ ನೌಕಾ ನೆಲೆ ಸ್ಥಾಪಿಸುವ ಒಪ್ಪಂದ ಮಾಡಿಕೊಂಡರು. ಮಯನ್ಮಾರ್ ನೊಂದಿಗೆ ಭಾರತ-ಮಯನ್ಮಾರ್-ಥೈಲಾಂಡ್ ರಾಷ್ಟ್ರೀಯ ಹೆದ್ದಾರಿ ಯೋಜನೆ ಪ್ರಾರಂಭಿಸಿದರು, ಅಂಡಮಾನಿನ ದ್ವೀಪದಲ್ಲಿ ವಿವಿಧ ದೇಶಗಳೊಂದಿಗೆ ನೌಕಾ ಸಮರಾಭ್ಯಾಸಗಳನ್ನು ತೀವ್ರಗೊಳಿಸಿದರು. ಬಾಂಗ್ಲಾದ ಚಿತ್ತಗಾಂಗ್ ಬಂದರಿನಲ್ಲಿ ವ್ಯಾಪಾರ ಮಾಡುವ ಅನುಮತಿ ಪಡೆದುಕೊಂಡರು, ನೇಪಾಳದೊಂದಿಗೆ ವಿದ್ಯುತ್ ಒಪ್ಪಂದ, ಇರಾನಿನ ಚಾಬಹಾರ್ ಬಂದರು ಅಭಿವೃದ್ಧಿ, ವಿಯಟ್ನಾಂ ಜೊತೆಗೆ ಬಾಂಧವ್ಯ ಏರ್ಪಡಿಸಿಕೊಂಡರು. ಈಗ ಇಂಡಿಯಾ ಮಿಡಲ್ ಈಸ್ಟ್ ಯುರೋಪಿಯನ್ ಎಕನಾಮಿಕ್ ಕಾರಿಡಾರ್ (ಐಮೆಕ್)! ಇವೆಲ್ಲವೂ ಚೀನಾಕ್ಕೆ ಠಕ್ಕರ್ ಕೊಡುವ ಯೋಜನೆಗಳೇ. ಅವರ 'ಮುತ್ತಿನ ಹಾರ'ಕ್ಕೆ ಎದುರಾಗಿ ಭಾರತ 'ವಜ್ರದ ಹಾರ' ಹಾಕಿದೆ!


Necklace of Diamond


'ವಸುದೈವ ಕುಟುಂಬಕಂ' ಎಂಬ ತತ್ವದಡಿಯಲ್ಲಿ ಕರೋನಾ ಸಮಯದಲ್ಲಿ ನೂರಕ್ಕೂ ಹೆಚ್ಚು ರಾಷ್ಟ್ರಗಳಿಗೆ ಜೀವರಕ್ಷಕ ಕೋವಾಕ್ಸಿನ್ ಹಾಗೂ ಕೋವಿಡ್ ಶೀಲ್ಡ್ ಭಾರತ ನೀಡಿತು. ಇಷ್ಟೇ ಅಲ್ಲದೇ ಜಗತ್ತಿನಲ್ಲಿ ಯಾರಿಗೆ ಕಷ್ಟವಾದರೂ ಭಾರತ ಅವರ ಸಹಾಯಕ್ಕೆ ನಿಂತಿದೆ. 2015ರ ಯಮೆನ್ ಸೌದಿ ಯುದ್ಧದ ನಡುವೆ ಆಪರೇಷನ್ ರಾಹತ್, ಕರೋನಾ ಸಮಯದಲ್ಲಿ ಆಪರೇಷನ್ ವಂದೇ ಭಾರತ್, ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಆಪರೇಷನ್ ಗಂಗಾ ದಲ್ಲಿ ಭಾರತೀಯರನ್ನಷ್ಟೇ ಅಲ್ಲದೇ ವಿದೇಶಿಗರನ್ನು ಭಾರತ ರಕ್ಷಿಸಿದೆ. ಟರ್ಕಿಯ ಭೂಕಂಪದ ಸಂದರ್ಭದಲ್ಲಿ ಎಲ್ಲರಿಗಿಂತ ಮೊದಲು ಭಾರತ ತನ್ನ ಸಹಾಯ ಹಸ್ತ ಚಾಚಿತು. G20 ಸಮ್ಮಿಟ್ ನಲ್ಲಿ ಯಾರ ವಿರೋಧವೂ ಇಲ್ಲದೆ ಆಫ್ರಿಕಾದ ಒಕ್ಕೂಟವನ್ನು ಒಳಗೆ ಸೇರಿಸಿಕೊಂಡಿತು. ಭಾರತ ಸಹಾಯ ಮಾಡುವುದಷ್ಟೇ ಅಲ್ಲದೇ ತನ್ನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಭಾರತಕ್ಕೆ ಕಂಟಕ ಪ್ರಾಯರಾದ ಭಯೋತ್ಪಾದಕರು ಅವರು ನೆಲೆಸಿರುವಲ್ಲೇ ಅಸುನೀಗುತ್ತಿದ್ದಾರೆ. ಈ Unknown Gunman ಗಳು ಭಾರತವನ್ನು ಸದ್ದಿಲ್ಲದೇ ಕಾಪಾಡುತ್ತಿದ್ದಾರೆ. 2022 ಮಾರ್ಚಿನಿಂದ 2023 ಡಿಸೆಂಬರ್ ತನಕ 26 ಭಯೋತ್ಪಾದಕರನ್ನು ಪಾಕಿಸ್ತಾನ, ಕೆನಡಾ, ಲಂಡನ್ ನಲ್ಲಿ ಈ ಅನಾಮಧೇಯ ಬಂದೂಕುಧಾರಿಗಳು ಕೊಂದಿದ್ದಾರೆ. ಈ ಲೇಖನ ಪ್ರಕಟವಾಗುವಷ್ಟರಲ್ಲಿ ಮತ್ತೆರಡು ಭಯೋತ್ಪಾದಕರ ಅಥವಾ ಭೂಗತಪಾತಕಿಗಳ ಹೆಣಗಳು ಬಿದ್ದರೆ ಅಚ್ಚರಿ ಪಡಬೇಕಿಲ್ಲ! ಭಾರತದ ಬೇಹುಗಾರಿಕೆ ಸಂಸ್ಥೆಯನ್ನು ಇಸ್ರೇಲಿನ ಮೊಸಾದಿಗೆ ಹೋಲಿಸುವ ಅಮೃತಕಾಲ ಇದಾಗಿದೆ. ಇದು ನಮ್ಮ ವಿದೇಶಾಂಗ ನೀತಿಯ ಗೆಲುವಲ್ಲದೆ ಮತ್ತೇನು?


ಮೋದಿ ಸರ್ಕಾರ ಬರುವ ಮುನ್ನ ನಮ್ಮಲ್ಲಿ ವಿದೇಶಾಂಗ ಸಚಿವರಾರು ಎಂಬುದು ಬಹುತೇಕರಿಗೆ ತಿಳಿಯದ ವಿಚಾರವಾಗಿತ್ತು. ನೆಹರೂ ಕಾಲದಲ್ಲಿ ಅವರೊಬ್ಬರೇ ಎಲ್ಲಾ! ಶಾಸ್ತ್ರೀ, ಇಂದಿರಾ, ರಾಜೀವ್, ಪಿ.ವಿ.ಎನ್, ಗುಜ್ರಾಲ್, ಅಟಲ್ಜೀ ಕಾಲದಲ್ಲಿ ವಿದೇಶಾಂಗ ಸಚಿವರ್ಯಾರು ಎಂದರೆ ಗೂಗಲ್ ನೋಡುವ ಪರಿಸ್ಥಿತಿ ಇದೆ. ಯು.ಪಿ.ಎ ಕಾಲದಲ್ಲಿ ಎಸ್.ಎಂ.ಕೃಷ್ಣ ಕರ್ನಾಟಕದವರು ಎಂಬ ಕಾರಣಕ್ಕೆ ಕನ್ನಡಿಗರಿಗೆ ಗೊತ್ತಿತ್ತು ಅಷ್ಟೇ. ಈಗ ಕೇಳಿ ನೋಡಿ! ಸುಷ್ಮಾ ಸ್ವರಾಜ್, ಜಯಶಂಕರ್ ಯಾರೆಂಬುದು ಶಾಲಾ ಮಕ್ಕಳಿಗೂ ಸಹ ತಿಳಿದಿದೆ. ಹಣಕಾಸು, ಗೃಹ ಇಲಾಖೆ, ಸಾರಿಗೆ ಖಾತೆಗಳು ಮಾತ್ರವಲ್ಲ ವಿದೇಶಾಂಗ ನೀತಿಯೂ ದೇಶದ ಬೆಳವಣಿಗೆಗೆ ಅತ್ಯವಶ್ಯ ಎಂಬುದನ್ನು ದೇಶಕ್ಕೆ ಮನದಟ್ಟು ಮಾಡಿಸಿದ್ದು, ನಾವು ಯಾರೊಂದಿಗೆ ವ್ಯವಹಾರ ಮಾಡಿದರೂ ದೇಶಕ್ಕೆ ಒಳಿತಾಗುವಂತಹ 'ದೇಶ ಮೊದಲು' ಎಂಬ ವಿದೇಶಾಂಗ ನೀತಿಯನ್ನು ಜಾರಿಗೆ ತಂದದ್ದೇ ನರೇಂದ್ರ ಮೋದಿ ಸರ್ಕಾರ.


***********************************************************

References

No comments:

Post a Comment