ನಮ್ಮ ಬದುಕಿನಲ್ಲಿ ನಮ್ಮ ಹೊರತಾಗಿ ಇತರರ ಪ್ರಭಾವಕ್ಕೆ ಒಳಗಾಗಿ ಅನೇಕ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಕೆಲವು ಸಲ ಪರಿಸ್ಥಿತಿಯ ಒತ್ತಡಕ್ಕೆ ಅಥವಾ ಮತ್ಯಾವುದೋ ಬಾಹ್ಯ ಪ್ರಭಾವಕ್ಕೆ ಒಳಗಾಗಿ ನಮ್ಮ ಬದುಕಿನ ಪಥ ನಿರ್ಧಾರವಾಗುತ್ತದೆ. ಜೀವನದಲ್ಲಿ ಅನೇಕ ಸಲ ನಾವು ಅಂದುಕೊಂಡದ್ದೆಲ್ಲಾ ನಡೆಯುವುದಿಲ್ಲ ಎನ್ನುವುದು ಕಹಿಯಾದರೂ ಸತ್ಯ. ಇತರರ ಅನುಭವದ ಆಧಾರದ ಮೇಲೆ ನಾವು ಪಾಠ ಕಲಿಬೇಕು ಎನ್ನುವುದು ಬುದ್ದಿವಂತರ ಮಾತು. ನಮ್ಮ ಜೀವನಾನುಭವ ಮತ್ತು ಇತಿಹಾಸ ಪುಟಗಳು ನಮಗೆ ಪಾಠ ಕಲಿಸುತ್ತದೆ. ಮತ್ತೊಂದು ವಿಧದಲ್ಲಿ ಬದುಕನ್ನು ಗಮನಿಸಿದಾಗ 'ಪ್ರಯತ್ನ ಪೂರ್ವಕವಾಗಿ ಮಾಡುವ ಪ್ರಕ್ರಿಯೆಗಿಂತ ಸಹಜತೆಯ ಪ್ರಕ್ರಿಯೆ ಶ್ರೇಷ್ಠ' ಮತ್ತು ನಮ್ಮ ಅಂತಃಪ್ರಜ್ಞೆ ಹೇಳಿದಂತೆ ನಡೆಯುವುದು ಎಲ್ಲಕ್ಕಿಂತ ಶ್ರೇಷ್ಠ ಎಂಬುದು ನನ್ನ ಅನಿಸಿಕೆ.
ಸಹಜತೆ ಶ್ರೇಷ್ಠ ಎಂಬುದುಕ್ಕೆ ಉತ್ತಮ ಉದಾಹರಣೆಗಳು ಇತಿಹಾಸದ ಪುಟಗಳಿಂದ ನಮಗೆ ದೊರಕುತ್ತದೆ. ಸ್ವಾಮೀ ವಿವೇಕಾನಂದ ಮತ್ತು ಅಕ್ಕ ನಿವೇದಿತೆಯರ ಬದುಕು ಇದಕ್ಕೆ ನಿಜಕ್ಕೂ ಉತ್ತಮ ಉದಾಹರಣೆ. ಸ್ವಾಮೀಜೀ ತರುಣಾವಸ್ಥೆಯಲ್ಲಿದ್ದಾಗ ದೇವರ ಕುರಿತು ಪ್ರಶ್ನೆ ಕಾಡುತ್ತಿರುತ್ತದೆ. ಹಲವರನ್ನು ದೇವರ ಕುರಿತು ಪ್ರಶ್ನೆಗಳನ್ನು ಕೇಳುತ್ತಾ ತಮ್ಮ ಪ್ರಯತ್ನ ಮುಂದುವರೆಸುತ್ತಾರೆ. ಗುರುದೇವ ರವೀಂದ್ರರನ್ನು ಭೇಟಿಯಾದಗಲೂ ದೇವರ ಕುರಿತು ಪ್ರಶ್ನೆಯನ್ನು ಕೇಳುತ್ತಾರೆ. ಗುರುದೇವ "ನಿನ್ನದು ಯೋಗಿಯ ಕಣ್ಣು, ನೀನು ಬಯಸಿದರೆ ದೇವರನ್ನು ನೋಡಬಹುದು' ಎಂದು ಉತ್ತರಿಸುತ್ತಾರೆ. ಕೇಳಿದವರೆಲ್ಲರೂ ನೇರವಾದ ಉತ್ತರ ಕೊಡುವ ಬದಲು ಇಂತಹುದೆ ಉತ್ತರ ಕೊಡುತ್ತಿದ್ದರು. ಈ ಉತ್ತರಗಳಾವುದು ಸ್ವಾಮೀಜಿಗೆ ಸಮಾಧಾನ ತರುವುದಿಲ್ಲ. ಯಾರಿಂದಲೂ ಸ್ಪಷ್ಠ ಉತ್ತರ ಸಿಗದ ಕಾರಣ ಬ್ರಹ್ಮ ಸಮಾಜಕ್ಕೆ ಹೋಗಲು ಶುರುಮಾಡುತ್ತಾರೆ. ನಾವು ನಂಬಿರುವ ತತ್ವದ ಮೇಲೆ ದೃಢವಾದ ವಿಶ್ವಾಸವಿದ್ದಲ್ಲಿ ಯಾವುದೋ ಕಾಸ್ಮಿಕ್ ಶಕ್ತಿ ನಮಗೆ ಸಹಾಯ ಮಾಡುತ್ತದೆ. ಅದೊಂದು ದಿವಸ ವ್ಯಕ್ತಿಯೊಬ್ಬರು ದಕ್ಷಿಣೇಶ್ವರಕ್ಕೆ ಹೋಗಿ ಶ್ರೀ ರಾಮಕೃಷ್ಣರನ್ನು ಭೇಟಿಯಾಗು ಎಂದು ಸ್ವಾಮೀಜೀಗೆ ಸಲಹೆ ಕೊಡುತ್ತಾರೆ. ಅದರಂತೆ ಸ್ವಾಮೀಜೀ ರಾಮಕೃಷ್ಣರನ್ನು ಭೇಟಿಯಾಗುತ್ತಾರೆ. ಮುಂದಿನದ್ದು ಇತಿಹಾಸ!
![]() |
| Sri Ramakrishna Paramahamsa and Swami Vivekananda |
ಐರ್ಲೆಂಡಿನ ಮಾರ್ಗ್ರೇಟ್ ನೋಬೆಲ್ ಬದುಕು ಕೂಡ ಇದಕ್ಕೆ ಉದಾಹರಣೆ. ಮಾರ್ಗ್ರೇಟ್ ಧರ್ಮ ಜಿಜ್ಞಾಸುವಾಗಿ ತಾನು ನಂಬಿದ್ದ ಸಿದ್ಧಾಂತಗಳ ಮೇಲೆ ಅನೇಕ ಸಂದೇಹಗಳಿರುತ್ತದೆ. ತನ್ನ ಸಂದೇಹಗಳನ್ನು ಪರಿಹಾರ ಮಾಡಿಕೊಳ್ಳುಲು ಚರ್ಚಿನ ಪಾದ್ರಿ, ತನ್ನ ತಂದೆ, ತಾಯಿ, ಸ್ನೇಹಿತರು, ಶಿಕ್ಷಕರು ಮತ್ತು ತತ್ವಜ್ಞಾನಿ ಎನ್ನಿಸಿಕೊಂಡ ಅನೇಕರನ್ನು ಪ್ರಶ್ನಿಸುತ್ತಾಳೆ. ಆದರೆ, ಪ್ರಯತ್ನ ಮಾತ್ರ ವರ್ಥ್ಯ. ಯಾರಿಂದಲೂ ಸಮಾಧಾನಕರವಾದ ಉತ್ತರ ದೊರಕುವುದಿಲ್ಲ. ಒಂದು ಹಂತದಲ್ಲಿ ಚರ್ಚಿಗೆ ಹೋಗುವುದನ್ನು ನಿಲ್ಲಿಸಿ, ಮಕ್ಕಳಿಗೆ ಪಾಠ ಹೇಳುತ್ತಾ ಜೀವನ ಮುಂದುವರೆಸುತ್ತಾಳೆ ಮಾರ್ಗ್ರೇಟ್. ಮತ್ತೆ ಅದೊಂದು ದಿವಸ ಸ್ನೇಹಿತೆಯ ಬಲವಂತದ ಕಾರಣ ತನ್ನ ಸಂದೇಹಗಳಿಗೆ ಉತ್ತರ ಸಿಗಬಹುದು ಎಂಬ ನಂಬಿಕೆ ಇಲ್ಲದಿದ್ದರೂ ವಿವೇಕಾನಂದರನ್ನು ಭೇಟಿಯಾಗಲು ಹೋಗುತ್ತಾಳೆ. ಅಂದು ಸ್ವಾಮೀಜೀಯನ್ನು ಭೇಟಿಯಾಗಲು ಬಂದವರಲ್ಲಿ ಮಾರ್ಗ್ರೇಟ್ ಕೊನೆಯವಳು! ಅಚಾನಕ್ಕಾಗಿ, ಕೊನೆಯವಳಾಗಿ ಬಂದರೂ ಆಕೆಯ ಸಂದೇಹವೆಲ್ಲಾ ಪರಿಹಾರವಾಗಿ ಭಾರತಕ್ಕೆ ಅಕ್ಕ ನಿವೇದಿತಾಳಾಗಿ ನೀವೇದನಗೊಳ್ಳುತ್ತಳೆ. ಇತಿಹಾಸದಲ್ಲಿ ಅಕ್ಕನ ಹೆಸರು ಅಜರಾಮರವಾಗುತ್ತದೆ.
![]() |
| Swami Vivekananda and Sister Nivedita |
ಕನ್ನಡಿಗರಿಗೆ ಚಂದ್ರಶೇಖರ ಆಜಾದರನ್ನು 'ಅಜೇಯ' ಕೃತಿಯ ಮೂಲಕ ಪರಿಚಯಿಸಿದ್ದು ಶ್ರೀ ಬಾಬೂ ಕೃಷ್ಣಮೂರ್ತಿ. ಅಜೇಯ ಬರೆಯಬೇಕಾದರೂ ಸಹ ಅವರ ಅಂತಃಪ್ರಜ್ಞೆ ಜಾಗೃತವಾಗಿ ಅಮೂಲ್ಯ ನಿಧಿಯೊಂದು ಹೊರಬಂದದ್ದನ್ನು ಗಮನಿಸಬಹುದು. ಆ ಘಟನೆಯನ್ನು ಬಾಬೂಜೀ ಅಜೇಯದ ಮುನ್ನುಡಿಯಲ್ಲಿ ದಾಖಲಿಸಿದ್ದಾರೆ. ಆಜಾದರು 1923ರಲ್ಲಿ ಕಾಶಿ ವಿದ್ಯಾಪೀಠದ ಗಂಥ ಭಂಡಾರಕ್ಕೆ ಒಂದು ಚರಿತ್ರೆಯ ಪುಸ್ತಕವನ್ನು ತಮ್ಮ ಹಸ್ತಾಕ್ಷರದೊಂದಿಗೆ ಕೊಡುಗೆಯಾಗಿ ನೀಡಿದ್ದರು. ಅದು ಕಳೆದುಹೋಗಿದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಗ್ರಂಥಾಲಯದ ಮೇಲ್ವಿಚಾರಕರ ಅನುಮತಿ ಪಡೆದುಕೊಂಡು ಬಾಬೂಜೀ ಮತ್ತೊಮ್ಮೆ ಹುಡುಕುವ ಪ್ರಯತ್ನ ಮಾಡುತ್ತಾರೆ. ಗ್ರಂಥಾಲಯದಲ್ಲಿದ್ದ 3-4 ಸಹಾಯಕರು ಹುಡುಕಲು ಶುರು ಮಾಡುತ್ತಾರೆ. ಸ್ವಲ್ಪ ಹೊತ್ತು ಸುಮ್ಮನಿದ್ದ ಬಾಬೂಜೀ ಕಪಾಟುಗಳ ನಡುವೆ ಒಂದೊಂದೆ ಪುಸ್ತಕವನ್ನು ತೆಗೆದು ಹುಡುಕುತ್ತಾರೆ. ಬೆಳಗ್ಗೆಯಿಂದ ಮಧ್ಯಾಹ್ನ ಹನ್ನೆರಡುವರೆ ಒಂದಾದರೂ ಹುಡುಕಾಟ ನಿಲ್ಲಲಿಲ್ಲ ಆದರೆ, ಬೇಕಾದ್ದು ಸಿಗಲಿಲ್ಲ. ಅಷ್ಟರಲ್ಲಿ ನಡೆದಿದ್ದು ಯೋಗಾಯೋಗ ಘಟನೆ! ಇಂಗ್ಲೆಂಡಿನ ಚರಿತ್ರೆಯ ಪುಸ್ತಕಗಳಿದ್ದ ಕಪಾಟಿನಲ್ಲಿ ಹುಡುಕುತ್ತಿದ್ದರು ಬಾಬೂಜೀ. ಯಾವ ಪ್ರೇರಣೆಯಿಂದಲೋ ಬಾಬೂಜೀ ಒಂದು ಪುಸ್ತಕವನ್ನು ತೆಗೆಯುತ್ತಾರೆ. ಹೌದು, ಅದು ಅವರು ಹುಡುಕುತ್ತಿದ್ದ ಪುಸ್ತಕವೇ. ಅದು ಅಜಾದರ ಹಸ್ತಾಕ್ಷರವಿದ್ದ ಪುಸ್ತಕ - 'ದಿ ಶಿಲ್ಲಿಂಗ್ ಹಿಸ್ಟರಿ ಆಫ್ ಇಂಗ್ಲೆಂಡ್' (The Shilling History of England)!' ಕಾಶೀವಿದ್ಯಾ ಪೀಠ್ ಪುಸ್ತಕಾಲಯ್ ಕೋ ಸಾದರ್ ಸಪರ್ಪಿತ್, ಚಂದ್ರಶೇಖರ್ ಆಜಾದ್, 14-04-1923' ಎಂಬ ಹಸ್ತಾಕ್ಷರ ಅದರಲ್ಲಿರುತ್ತದೆ.
![]() |
| Hand Writing with Autograph of Chandrashekar Azad |
ಭಾರತದ ಶ್ರೇಷ್ಠ ಗಣಿತಜ್ಞ ಎಂದರೆ ಶ್ರೀ ಶ್ರೀನಿವಾಸ ರಾಮಾನುಜನ್. ಅವರು ಮೊಕ್ ಥೀಟಾ (Mock Theeta) ತತ್ವದ ಮೇಲೆ ಕೊಟ್ಟಿರುವ ಗಣಿತ ಸೂತ್ರಗಳನ್ನು 50 ವರ್ಷಗಳ ಮೇಲೆ ಸಹ ಬಿಡಿಸಲು ಸುಲಭವಾಗಿರಲಿಲ್ಲ. ಅವರು ಬರೆದಿಟ್ಟಿದ್ದ ಯಾವುದೇ ಸೂತ್ರಗಳಿಗೆ ಸಾಕ್ಷ್ಯ ಒದಿಗಿಸಿರಲಿಲ್ಲ. ಲಂಡನ್ನಿನ ಗಣಿತಜ್ಞ ಹಾರ್ಡಿ ಇದರ ಕುರಿತು ಕೇಳಿದಾಗ ರಾಮಾನುಜನ್ "ಇದಕ್ಕೆ ಸಾಕ್ಷ್ಯ ನನ್ನ ಹತ್ತಿರವೂ ಇಲ್ಲ ಆದರೆ, ಗಣಿತದ ಮೇಲೆ ಕೆಲಸ ಮಾಡಬೇಕಾದರೆ ಈ ಸೂತ್ರಗಳು ನನಗೆ ಹೊಳೆಯುತ್ತದೆ" ಎಂದಿದ್ದರು. ರಾಮಾನುಜನ್ ಅದೊಂದು ದಿವಸ ಆರೋಗ್ಯ ಸರಿಯಿಲ್ಲದ ಕಾರಣ ಮಲಗಿದ್ದರು. ಹಾರ್ಡಿ ಅವರ ಮನೆಗೆ ಬಂದು 'ಇಂದು ಗಣಿತಜ್ಞನೊಬ್ಬನಿಗೆ ಬೇಸರದ ದಿನ. ಇಂದು ಟ್ಯಾಕ್ಸಿಯೊಂದರಲ್ಲಿ ಬಂದೆ. ಆ ಗಾಡಿಯ ಸಂಖ್ಯೆ 1729 ಆಗಿತ್ತು ಆದರೆ, ಈ ಸಂಖ್ಯೆಯಲ್ಲಿ ಏನು ವಿಶೇಷತೆ ನನಗೆ ಕಾಣಿಸಲಿಲ್ಲ' ಎಂದು ಹೇಳಿತ್ತಾರೆ. ಬಹುಶಃ ಒಂದು ನಿಮಿಷ ಆಗಿರಬಹುದು ನಂತರ ರಾಮಾನುಜನ್ - "ಈ ಸಂಖ್ಯೆ ಕೂಡ ವಿಶೇಷವಾದದ್ದೆ. ಎರಡು ವಿಭಿನ್ನ ಜೋಡಿ ಸಂಖ್ಯೆಗಳ ಘನಗಳನ್ನು ಕೂಡಿಸಿದಾಗ ವ್ಯಕ್ತವಾಗುವ ಏಕೈಕ ಸಂಖ್ಯೆ 1729!" ಎಂದು ಸಹಜವಾಗಿ ಹೇಳುತ್ತಾರೆ. ಇದನ್ನು a. 103 + 93 = 1729 ಮತ್ತು b. 123 + 13 = 1729 ಎಂದು ವಿವರಿಸುತ್ತಾರೆ. ಇದನ್ನು ಕೇಳಿದ ಹಾರ್ಡಿ ಮೂಕವಿಸ್ಮಿತರಾಗುತ್ತಾರೆ. 'You are a born Mathematician' ಎಂದು ಮನಸ್ಪೂರ್ತಿಯಾಗಿ ಹೊಗಳುತ್ತಾರೆ. ರಾಮಾನುಜನ್ ಅವರ ಅಂತಃಪ್ರಜ್ಞೆ ಹೇಗೆ ಕೆಲಸ ಮಾಡುತ್ತಿತ್ತು ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ.
![]() |
| G.H. Hardy and Srinivasa Ramanujan |
ನಮ್ಮ ಬದುಕಿನಲ್ಲಿ ಸಹ ಇಂತಹ ಘಟನೆಗಳು ನಡೆದಿರುತ್ತದೆ, ನಾವು ಗಮನಿಸಬೇಕು ಅಷ್ಟೇ. ಬದುಕಿನಲ್ಲಿ ಎಲ್ಲಾ ಕಾರ್ಯದಲ್ಲೂ ನಮ್ಮ ಪ್ರಯತ್ನವಿರಬೇಕು ಹೌದು ಅದರೆ, ಸಹಜವಾಗಿ ದೊರಕುವ ಅಥವಾ ನಡೆಯುವ ಪ್ರಕ್ರಿಯೆ ಮತ್ತು ಅಂತಃಪ್ರಜ್ಞೆ ಹೇಳಿದಂತೆ ನಡೆದುಕೊಳ್ಳುವುದು ಶ್ರೇಷ್ಠ. ಪ್ರಕೃತಿ ಅಥವಾ ದೈವದ ಮುಂದೆ ನಮ್ಮ ದೃಷ್ಠಿಕೋನ ತೀರ ಸಂಕುಚಿತ. ನಮ್ಮ ಬದುಕನ್ನು ನಾವು ತೀರ್ಮಾನಿಸುವುದರ ಬದಲು ದೈವಕ್ಕೆ ಅರ್ಥಾತ್ ಅಂತಃಪ್ರಜ್ಞೆಗೆ ಶರಣಾಗುವುದು ಹೆಚ್ಚು ಒಳಿತನ್ನು ಮಾಡುತ್ತದೆ. ಸ್ವಾಮೀಜೀ ಶ್ರೀ ರಾಮಕೃಷ್ಣರನ್ನು ಭೇಟಿಯಾಗಿದ್ದಾಗಲಿ, ಅಕ್ಕ ನಿವೇದಿತಾ ಸ್ವಾಮೀಜೀಯನ್ನು ಭೇಟಿಯಾಗಿದ್ದಾಗಲಿ, ಬಾಬೂಜೀಗೆ ಆಜಾದರ ಹಸ್ತಾಕ್ಷರ ಇರುವ ಪುಸ್ತಕ ಸಿಕ್ಕಿದ್ದಾಗಲಿ ಅಥವಾ ರಾಮಾನುಜನ್ ರವರಿಗೆ ಗಣಿತದ ಸೂತ್ರ ಹೊಳೆದದ್ದು ಸಹಜತೆ ಮತ್ತು ಅಂತಃಪ್ರಜ್ಞೆಯ ಸಂಕೇತ. ನಮಗೆ ಬದುಕಿನಲ್ಲಿ ಯಾರದರು ಸ್ನೇಹಿತರು ಆಥವಾ ಸಂಗಾತಿ ಸಿಗಬೇಕಾದರೂ ಸಹಜತೆ ಇದ್ದರೆ ಒಳಿತು. ಕೆ.ವಿ. ಅಯ್ಯರ್ ರವರು ತಮ್ಮ 'ಶಾಂತಲ' ಕಾದಂಬರಿಯಲ್ಲಿ 'ಜಗನ್ನಿಯಾಮಕನು ಯಾವ ಪುರುಷನಿಗೆ ಯಾವ ಸ್ತ್ರೀ ಎಂದು ವಿಧಾಯಕ ಮಾಡಿರುವನೋ, ಪ್ರಾಪ್ತ ಸಮಯದಲ್ಲಿ ಆ ಜಗನ್ನಿಯಾಮಕನೇ ಆ ಸ್ತ್ರೀಗೂ ಆ ಪುರುಷನಿಗೂ ಒಬ್ಬರನ್ನೊಬ್ಬರು ಕಣ್ಮನಗಳಿಂದ ಆಕರ್ಷಿಸುವ, ಅಪೇಕ್ಷಿಸುವ, ತನ್ನ ಧರ್ಮ ಪತ್ನಿ(ಪತಿ) ಎಂದು ಅರಿಯುವ ಶಕ್ತಿಯನ್ನೂ ಕರುಣಿಸುತ್ತಾನೆ'' ಎಂದು ಹೇಳಿದ್ದಾರೆ. ಈ ಸಾಲು ಸಹ ಅಂತಃಪ್ರಜ್ಞೆಯನ್ನು ಸೂಚಿಸುತ್ತದೆ. ಆದ್ದರಿಂದಲೇ ಅಂತಃಪ್ರಜ್ಞೆ ಮತ್ತು ಸಹಜತೆ ಬದುಕಿಗೊಂದು ದಾರಿ. ಅದನ್ನು ಆನುಭವಿಸುವ ಮನಸ್ಸು ನಮ್ಮದಾಗಬೇಕು ಅಷ್ಟೇ.




ತುಂಬಾ ಅದ್ಭುತವಾದ ಅಂಕಣ
ReplyDeleteI really liked the way you narrate the story and touch the points/message you want to convey in a magical way which soothes both mind & heart and take a time travel as you narrate.....Nice blog sir, sorry for late comment, as I told you was little bit busy now a days.
ReplyDelete