September 24, 2021

ಭಾರತ ಮತ್ತು ಜಗತ್ತನ್ನು ಒಮ್ಮೆ ಗಮನಿಸೋಣ

ತಾಲಿಬಾನ್‌ ಅಫ್ತಾನಿಸ್ತಾನವನ್ನು ವಶಪಡಿಕೊಳ್ಳುವುದರೊ೦ದಿಗೆ ಆಧುನಿಕ ಜಗತ್ತಿನಲ್ಲಿ ಭಯೋತ್ಪಾದಕ ಕೇಂದ್ರ ಸ್ಥಾನಕ್ಕೆ ಮರುಹುಟ್ಟು ಕೊಟ್ಟಂತಾಗಿದೆ. ಅಮೇರಿಕಾದ ಅಧ್ಯಕ್ಷ ಜೋ ಬೈಡನ್‌ ತೆಗೆದುಕೊಂಡ ನಿರ್ಧಾರ ಬಿನ್‌ ಲಾಡನ್‌ ಮತ್ತು 9/11 ದಾಳಿ ನಡೆಸಿದ ಭಯೋತ್ಪಾದಕರು ಬಯಸಿದ ಇಸ್ಲಾಮಿಕ್‌ ಆಡಳಿದ ವ್ಯವಸ್ಥೆಗೆ ಅಡಿಪಾಯವಾಗಲಿದೆ. ಈ ಪ್ರಕ್ರಿಯೆ ಅಂತಾರಾಷ್ಟ್ರೀಯ ಜಿಹಾದಿ ಚಳುವಳಿಗೆ ಉತ್ತೇಜನವನ್ನು ನೀಡುತ್ತದೆ, ತಾಲಿಬಾನ್‌ ಸ೦ಘಟನೆಗೆ ಹೊಸಬರು ಸೇರಿಕೊಳ್ಳುವುದು ಹೆಚ್ಚಲಿದೆ, ಮಧ್ಯಪ್ರಾಚ್ಯ-ದಕ್ಷಿಣ ಯೂರೋಪಿನಿಂದ ಆಫ್ರಿಕಾ ಮತ್ತು ಏಷ್ಯಾದ ಭಾಗಗಳಲ್ಲಿ ಭಯೋತ್ಪಾದನ ಕೃತ್ಯವನ್ನು ಮಟ್ಟಹಾಕುವುದು ಮತ್ತಷ್ಟು ಕಠಿಣವಾಗುತ್ತದೆ. ಅಮೇರಿಕಾದಲ್ಲಿ ಕಳೆದ ಒಂದು ತಿಂಗಳಿನಿ೦ದ ದಿನನಿತ್ಯ ಲಕ್ಷಕ್ಕೂ ಅಧಿಕ ಕೊರೋನಾ ಪ್ರಕರಣಗಳು ದಾಖಲಾಗುತ್ತಿದೆ. ಇ೦ಗ್ಲೆ೦ಡ್‌ ಅಲ್ಲೂ ಸಹ ಕಳೆದ 3-4 ತಿಂಗಳಿ೦ದ ಪ್ರತಿದಿನವೂ ಸರಾಸರಿ 35 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಫ್ರಾನ್ಸ್‌, ಇರಾನ್‌, ಟರ್ಕಿ ದೇಶಗಳಲ್ಲೂ ಪರಿಸ್ಥಿತಿ ಹೆಚ್ಚು ಕಮ್ಮಿ ಇದೇ ರೀತಿ ಇವೆ. ಅವರಲ್ಲಿರುವ ಜನಸಂಖ್ಯೆಗೆ ಹೊರಬರುತ್ತಿರುವ ಪ್ರಕರಣಗಳು ಹೆಚ್ಚು ಎ೦ದೇ ಹೇಳಬೇಕು. ಭಾರತದಲ್ಲಿ ಜುಲೈ ತಿಂಗಳಲ್ಲಿ ದಿನಕ್ಕೆ 40 ಸಾವಿರ ಪ್ರಕರಣವಿತ್ತು, ಅದೀಗ 30 ಸಾವಿರಕ್ಕೆ ಇಳಿದಿದೆ ಎ೦ಬುದು ಸಮಾಧಾನಕರ ವಿಚಾರ. ಸಾವಿನ ಸ೦ಖ್ಯೆಯೂ ಸಹ ಭಾರತದಲ್ಲಿ ಗಣನೀಯವಾಗಿ ಇಳಿದಿದೆ. ಇನ್ನು ಲಸಿಕೆ ನೀಡುವ ವಿಚಾರದಲ್ಲಿ ಭಾರತ ವಿಶ್ವದಲ್ಲಿ ಮೊದಲ ಸ್ಮಾನದಲ್ಲಿದೆ. ಇಲ್ಲಿಯವರೆಗೆ ದೇಶದ ಶೇಕಡ 44 ರಷ್ಟು ಜನರಿಗೆ ಕನಿಷ್ಠ ಒ೦ದು ಡೋಸ್‌ ಲಸಿಕೆಯನ್ನು ಭಾರತ ನೀಡಿದೆ. ಪ್ರಧಾನಿ ಮೋದಿಯವರ ಜನ್ಮದಿನದ೦ತೂ 2.5 ಕೋಟಿ ಜನರಿಗೆ ಲಸಿಕೆ ನೀಡಿ ವಿಕ್ರಮ ಮೆರೆಯಿತು. ಈ ತಿ೦ಗಳಲ್ಲಿ ಮೂರು ಬಾರಿ ದಿನಕ್ಕೆ ಒಂದು ಕೋಟಿಗೂ ಅಧಿಕ ಮಂದಿಗೆ ಭಾರತ ಲಸಿಕೆ ನೀಡಿದೆ.

Vaccination Trend In India - 2021

ಕೊರೋನಾದ ಎರಡನೆ ಅಲೆಯ ಸಂದರ್ಭದಲ್ಲಿ ಭಾರತದಲ್ಲಿ ಹೆಣಗಳನ್ನು ಸುಡುತ್ತಿರುವ ಚಿತ್ರವನ್ನು ಪ್ರಕಟಿಸಿದ್ದ ಅಮೇರಿಕಾಕ್ಕೆ ಈಗ ಅದೇ ರೀತಿಯ ಪರಿಸ್ಥಿತಿ ಬಂದಿದೆ. ಸೆಪ್ಟೆಂಬರ್ ಅಲ್ಲಿ ಬರಬಹುದು ಎನ್ನಲಾಗಿದ್ದ ಮೂರನೆ ಅಲೆಗೆ ಮುನ್ನ ಭಾರತ ತನ್ನ ಆಮ್ಲಜನಕ ಉತ್ಪಾದನಾ ಸಾಮರ್ಥ್ಯವನ್ನು ದಿನಕ್ಕೆ 15000 ಟನ್ಗಳಿಗೆ ಹೆಚ್ಚಿಸುವ ಗುರಿಯನ್ನು ಹಾಕಿಕೊಂಡು ಅದರ ಪ್ರಕಾರ ಕೆಲಸ ಮಾಡುತ್ತಿದೆ. ಕೊರೋನಾದ ಸಂದರ್ಭದ ಈ ಎರಡು ವರ್ಷಗಳಲ್ಲಿ 70 ಸಾವಿರ ಮೆಗಾವ್ಯಾಟ್ಗಳಷ್ಟು ಸೌರ ವಿದ್ಯುತ್ ಉತ್ಪಾದನೆ ಮಾಡಿದೆ. ದೇಶದಲ್ಲಿ ಲಸಿಕೆ ಉತ್ಪಾದನೆಯು ಎರಡು ಪಟ್ಟು ಹೆಚ್ಚಾಗಿದೆ ಮತ್ತು ಮುಂದಿನ ತಿಂಗಳು ನಾಲ್ಕು ಪಟ್ಟು ಅಂದರೆ 300 ಮಿಲಿಯನ್ಗಳಷ್ಟು ಆಗಲಿದೆ. ನಮಗೆ ಬೇಕಾದಷ್ಟನ್ನು ಬಳಸಿಕೊಂಡು ಹೆಚ್ಚುವರಿ ಲಸಿಕೆಯನ್ನು ಹೊರದೇಶಕ್ಕೆ ರಫ್ತು ಮಾಡುತ್ತೇವೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಫೆಬ್ರವರಿ 2021 ಹೊತ್ತಿಗೆ ಒಟ್ಟು 9,242 ಕಿಮೀ ಅಷ್ಟು ಹೆದ್ದಾರಿಯನ್ನು ಭಾರತ ನಿರ್ಮಾಣ ಮಾಡಿದೆ. 2020-21ರ ಅವಧಿಯಲ್ಲಿ ದೈನಂದಿನ ಸರಾಸರಿ 29 ಕಿಲೋಮೀಟರ್ ನಂತೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಕೊರೋನಾ ಕಾಲದಲ್ಲೂ ಹೆದ್ದಾರಿ ನಿರ್ಮಾಣ ಕಾರ್ಯ ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿ ನಡೆದಿದೆ. 2021-22 ರಲ್ಲಿ, ಸರ್ಕಾರವು 12,000 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಸಮಗ್ರ ಮಾರ್ಗದರ್ಶಿ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮ ಅಡಿಯಲ್ಲಿ ಭಾರತ ಪೃಥ್ವಿ, ಅಗ್ನಿ, ಆಕಾಶ್, ತ್ರಿಶೂಲ್, ನಾಗ ಎಂಬ ಐದು ಕ್ಷಿಪಣಿಗಳನ್ನು ತಯಾರಿಸಿದೆ. "ಕ್ಷಿಪಣಿ ತಂತ್ರಜ್ಞಾನದಲ್ಲಿ ನಾವು ಸಂಪೂರ್ಣ ಆತ್ಮನಿರ್ಭರವಾಗಿದ್ದೇವೆ ಎಂದು ಆತ್ಮವಿಶ್ವಾಸದಿಂದ ಹೇಳಬಲ್ಲೆ ಮತ್ತು ನಾವು ದೇಶದ ಅತ್ಯಾಧುನಿಕ ಕ್ಷಿಪಣಿಗಳು ಮತ್ತು ತಂತ್ರಜ್ಞಾನದ ಮೇಲೆ ಕೆಲಸ ಮಾಡಬೇಕಾಗಿದೆ" ಎಂದು ಡಿ.ಅರ್.ಡಿ.ಒ. ಅಧ್ಯಕ್ಷ ಸತೀಶ್ ರೆಡ್ಡಿ ಜೆ.ಎನ್.ಯು ಅಲ್ಲಿನ ಕಾರ್ಯಕ್ರಮವೊಂದರಲ್ಲಿ ಹೇಳಿದರು. ಅಗ್ನಿ-5 ಕ್ಷಿಪಣಿಯನ್ನು ಮತ್ತೆ ಪರೀಕ್ಷೆ ಮಾಡುವ ಉದ್ದೇಶ ಭಾರತ ಹೊಂದಿದೆ. ಇದರ ತೂಕ ಸುಮಾರು 50 ಸಾವಿರ ಕೇಜಿ ಇದ್ದು 5000 ಕೀ.ಮೀ ವ್ಯಾಪ್ತಿಯನ್ನು ತಲುಪಬಹುದಾದ ಶಕ್ತಿ ಹೊಂದಿದೆ. ಇದರ ಅರ್ಥ ಚೀನಾದ ರಾಜಧಾನಿ ಸೇರಿದಂತೆ ಬಹುತೇಕ ಪ್ರಮುಖ ಪಟ್ಟಣಗಳು ಅಗ್ನಿಯ ವ್ಯಾಪ್ತಿಗೆ ಬರುತ್ತದೆ! ಭಾರತ ಪರೀಕ್ಷೆ ಮಾಡುವ ಈ ಪ್ರಕ್ರಿಯೆ ಚೀನಾಕ್ಕೆ ನಿದ್ದೆಗೆಡಿಸಿದೆ. "ಭಾರತ ಪರಮಾಣು ಕ್ಷಿಪಣಿಯನ್ನು ತಯಾರಿಸುವ ಕುರಿತು ಯು.ಎನ್‌.ಎಸ್‌.ಸಿ.ಆರ್ 1172 ನಿಬಂಧನೆಗಳಿವೆ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲೀಜಿಯಾನ್ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ. ಒಲಂಪಿಕ್ಸ್ ಹಾಗೂ ಪ್ಯಾರಾ ಒಲಂಪಿಕ್ಸ್ ಅಲ್ಲಿ ಭಾರತ ಹಿಂದೆಂದಿಗಿಂತಲೂ ಅದ್ಭುತವನ್ನು ಸಾಧಿಸಿದೆ. ಭಾರತದ ಜನತೆ ಮತ್ತು ಸರ್ಕಾರ ಸಾಧಕರನ್ನು ಶ್ರೇಷ್ಠ ರೀತಿಯಲ್ಲಿ ಗೌರವಿಸಿದೆ. ಭಾರತ ಕ್ರಿಕೇಟ್ ಹೊರತು ಬೇರೆ ಕ್ರೀಡೆಯನ್ನು ಒಂದು ರೀತಿ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಆದರೆ, ಈ ಐದಾರು ವರ್ಷಗಳಲ್ಲಿ ಇತರ ಕ್ರೀಡೆಗೆ ಸಿಕ್ಕಿರುವ ಉತ್ತೇಜನದ ಫಲಿತಾಂಶ ಈ ವರ್ಷದ ಒಲಂಪಿಕ್ಸಲ್ಲಿ ಕಾಣಿಸಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಈ ವಾರ ಅಮೇರಿಕಾದಲ್ಲಿ ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲಿ ಕೊರೋನಾ ವಿರುದ್ಧದ ಲಸಿಕೆಗಳ ಮೇಲಿನ ಜಾಗತಿಕ ಪೇಟೆಂಟ್ ಅನ್ನು ಮನ್ನ ಮಾಡುವ ಪ್ರಸ್ತಾವವನ್ನು ಪ್ರಧಾನಿ ಮೋದಿ ಮಾಡಲಿದ್ದಾರೆ. 'ಸರ್ವೇ ಜನ ಸುಖಿನೋ ಭವಂತು' ಎಂಬ ಧ್ಯೇಯವಾಕ್ಯವನ್ನು ಭಾರತ ಎತ್ತಿಹಿಡಿಯುವ ಪ್ರಕ್ರಿಯೆ ಇದಾಗಿದೆ.

ಅಮೇರಿಕಾ, ಇಂಗ್ಲೆಂಡ್, ಭಾರತ ಮತ್ತು ಇತರ ದೇಶಗಳು ಅಫ್ಘಾನಿಸ್ತಾನದಿಂದ ರಾಜತಾಂತ್ರಿಕ ಮತ್ತು ತಮ್ಮ ದೇಶದ ನಾಗರೀಕರನ್ನು ಸ್ಥಳಾಂತರಿಸಿದರೂ ಚೀನಾ ಕಾಬೂಲಿನಲ್ಲಿ ತನ್ನ ರಾಯಭಾರ ಕಚೇರಿಯನ್ನು ತೆರವು ಮಾಡಲಿಲ್ಲ. ತಾಲಿಬಾನಿನೊಂದಿಗೆ ತಮ್ಮ ಸಹಕಾರ ಇದೆ ಎಂಬ ಹೇಳಿಕೆಯನ್ನು ನೀಡಿತು. ತನ್ನ ಯೋಜನೆಗಳಿಗೆ ಮೂಲಸೌಕರ್ಯವನ್ನು ಭದ್ರಪಡಿಸಿಕೊಳ್ಳಲು ಮತ್ತು ಉಯ್ಘರ್ ಮುಸ್ಲ್ಮಾನರನ್ನು ಪ್ರತ್ಯೆಕಿಸಲು ಚೀನಾ ತಾಲಿಬಾನಿಗಳ ಸಹಕಾರವನ್ನು ಪಡೆಯಲು ಮುಂದಾಗಿದೆ. ಚೀನಾದ ವಾಯುವ್ಯ ಪ್ರದೇಶದ ಕ್ಸಿಂಜಿಯಾಂಗ್‌ನ ಶಿಬಿರಗಳಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ಉಯ್ಘರ್ ಮುಸ್ಲಿಮರನ್ನು ಬಂಧಿಸಿ, ಅಲ್ಲಿನ ಜನರ ಮೇಲೆ ಆಕ್ರಮಣ ಮತ್ತು ಅತ್ಯಾಚಾರದ ಆರೋಪವನ್ನು ಚೀನಾ ಎದುರಿಸುತ್ತಿದೆ. ಅಲ್ಪಸಂಖ್ಯಾತರ ಮೇಲಿನ ಈ ದೌರ್ಜನ್ಯವನ್ನು ಚೀನಾ ಪದೇ ಪದೇ ನಿರಾಕರಿಸಿದೆ. ಈ ಆರೋಪದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ತಾಲಿದೊಂದಿಗಿನ ಸಂಬಂಧ ಬೆಳೆಸಲು ಚೀನಾ ಮುಂದಾಗಿದೆ. ಪಾಕೀಸ್ತಾನವಂತೂ ತಾಲಿಬಾನ್ ಜೊತೆಗಿನ ಇದೆ ಎಂಬ ವಿಚಾರ ಈಗ ಹೊಸತಲ್ಲ. ಪಂಜಶೀರ್ ಕಣಿವೆಯನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನದ ಸೇನಾ ಸಿಬ್ಬಂದಿಗಳು ತಾಲಿಬಾನಿಗಳೊಂದಿಗೆ ಹೋರಾಡುತ್ತಿದ್ದಾರೆ, ಅದಕ್ಕೆ ಪುರಾವೆ ಸಂಘರ್ಷದ ಸ್ಥಳದಲ್ಲೇ ಪತ್ತೆಯಾಗಿದೆ. ಪಂಜಶೀರ್‌ನಲ್ಲಿ ಪ್ರತಿರೋಧ ಪಡೆಗಳ ಪ್ರತಿದಾಳಿಯಲ್ಲಿ ಹುತಾತ್ಮರಾದ ಪಾಕೀಸ್ತಾನಿ ಸೈನಿಕನ ಗುರುತಿನ ಚೀಟಿ ಪತ್ತೆಯಾಯಿತು. ಇದನ್ನು ಪಾಕೀಸ್ತಾನ ಅಲ್ಲಗೆಳೆಯಿತು. ಕಾರ್ಗಿಲ್ ಯುದ್ಧದಲ್ಲಿ ಮೃತಪಟ್ಟ ತಮ್ಮ ಸೈನಿಕರನ್ನೇ ಒಪ್ಪಿಕೊಳ್ಳದ ಪಾಕೀಸ್ತಾನ ಈಗ ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತದೆ ಎಂಬುದು ಸಾಧ್ಯವೇ ಇಲ್ಲ. ಜಗತ್ತು ಕಳೆದ 3-4 ವರ್ಷದಿಂದ ಭಯೋತ್ಪಾದನೆ ಕುರಿತು ಪಾಕೀಸ್ತಾನವನ್ನು ತೆಗಳುತ್ತಾ ಬಂದಿದೆ. ಇಸ್ಲಾಮಿಕ್ ಸಹಕಾರದ ಸಂಘಟನೆ (ಒ.ಐ.ಸಿ.) ಮತ್ತು ಅರಬಿ ದೇಶಗಳು ಪಾಕೀಸ್ತಾನದ ವಿರುದ್ಧ ಮಾತಾಡಿದೆ. ಈ ದೇಶವನ್ನು ಬೆಂಬಲಿಸುತ್ತಿರುವುದು ಚೀನಾ ಮಾತ್ರ ಎಂಬುದನ್ನು ನೆನಪಿಡಬೇಕಾದ ವಿಚಾರ. ಕಳೆದ ವಾರ ನ್ಯೂಜಿಲಾಂಡ್, ಇಂಗ್ಲೆಂಡ್ ತಮ್ಮ ಆಟಗಾರರ ಸುರಕ್ಷತೆಯ ಕಾರಣದಿಂದ ಕ್ರಿಕೇಟ್ ಪ್ರವಾಸವನ್ನು ರದ್ದು ಮಾಡಿದೆ. ಪಾಕೀಸ್ತಾನ ಮತ್ತು ಅಫ್ಘಾನಿಸ್ತಾನ ದೇಶಗಳು ಕ್ರಿಕೇಟ್ ವಿಶ್ವಕಪ್ ನಲ್ಲಿ ಆಡುವುದು ಈಗ ಆನುಮಾನವಾಗಿದೆ. ಇಸ್ಲಾಂ ವಿರೋಧಿ ಚಿಂತನೆಗಳಿವೆ ಎಂಬ ಕಾರಣಕೊಟ್ಟು ತಾಲಿಬಾನಿಗಳು ಐಪಿಎಲ್ 2021 ಪ್ರಸಾರವನ್ನು ಅಫ್ಘಾನಿಸ್ತಾನದಲ್ಲಿ ನಿಷೇಧ ಮಾಡಿದ್ದಾರೆ. ಹೆಣ್ಣುಮಕ್ಕಳು ವಿದ್ಯಾಭ್ಯಾಸಕ್ಕೆಂದು ಕಾಲೇಜಿಗೆ ತೆರಳಲು ಸಹ ಗಂಡಸೊಬ್ಬನನ್ನು ಕರೆದುಕೊಂಡು ಬರಬೇಕು ಎಂದು ತಾಲಿಬಾನಿನ ಕಾನೂನು ಅಫ್ಘಾನಿಸ್ತಾನದಲ್ಲಿ ಚಾಲ್ತಿಯಾಗಿದೆ. ತಾಲಿಬಾನಿಗಳ ಆಡಳಿತದೊಂದಿಗೆ ಅಫ್ಘಾನಿಸ್ತಾನ ಅಧುನಿಕ ಆಯುಧಗಳೊಂದಿಗೆ ಮಧ್ಯಕಾಲಕ್ಕೆ ಸಾಗಿದೆ. ತಮ್ಮ ದೇಶವನ್ನು ಜಾಗತಿಕವಾಗಿ ಮುಂದುವರೆಸಬೇಕು ಎಂಬ ಉದ್ದೇಶ ಅವರಲ್ಲಿ ಇಲ್ಲ. ಉಳಿದಂತೆ ಆಫ್ರಿಕಾ ಖಂಡದ ಅನೇಕ ರಾಷ್ಟ್ರಗಳು ನಾಗರೀಕತೆಯ ವಿಚಾರದಲ್ಲಿ ಇನ್ನೂ ಕತ್ತಲೆಯಲ್ಲೇ ಉಳಿದಿದೆ.

Kiwis and England cancels its tour to Pakistan

ಪ್ರಧಾನಿ ಮೋದಿಯವರ 5 ದಿನದ ಅಮೇರಿಕಾದ ಪ್ರವಾಸ ಮಹತ್ವ ಪಡೆದುಕೊಂಡಿದೆ. ಅಲ್ಲಿರುವ ಭಾರತೀಯ ಉದ್ಯಮಿಗಳೊಂದಿಗೆ ಚರ್ಚೆ, ಕ್ವಾಡ್ ಶೃಂಗ ಸಭೆ, ಯು.ಎನ್. ಸಭೆ, ಬೈಡನ್ ಜೊತೆಗಿನ ಮೊದಲ ದ್ವಿಪಕ್ಷೀಯ ಮಾತುಕತೆ ಬಹಳ ಮುಖ್ಯವಾಗಿದೆ. ಅಫ್ಘಾನ್ ಬಿಕ್ಕಟ್ಟು ಮತ್ತದರ ಪರಿಣಾಮಗಳು, ಚೀನಾದ ವಿಸ್ತರಣಾವಾದ, ಪರಿಸರ ರಕ್ಷಣೆ ಮತ್ತು ಶುದ್ಧಶಕ್ತಿಯ ಪಾಲುದಾರಿಕೆಯ ಕುರಿತು ಚರ್ಚೆಗಳು ನಡೆಯುವುದರಲ್ಲಿದೆ. ಜಗತ್ತನ್ನು ಗಮನಿಸಿದರೆ ಭಾರತ ಒಂದು ರೀತಿ ನೆಮ್ಮದಿಯಾಗಿದೆ, ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದೆ ಮತ್ತು ಪ್ರತಿ ಹಂತದಲ್ಲೂ ಬೆಳವಣಿಗೆ ಕಾಣುತ್ತಿದೆ. ಲಸಿಕೆ ಪಡೆದ ಕೆಲವೇ ನಿಮಿಷಗಳಲ್ಲಿ ವ್ಯಾಕ್ಸಿನೇಷನ್ ಪ್ರಮಾಣಪತ್ರ ನಮ್ಮ ಮೊಬೈಲ್ ಅಲ್ಲೇ ನೋಡಬಹುದಾಗಿದೆ. ಮುಂದುವರೆದ ದೇಶ ಎಂದು ಕರೆಸಿಕೊಳ್ಳುವ ಅಮೇರಿಕಾ ಮತ್ತು ಇಂಗ್ಲೆಂಡ್ ಇನ್ನೂ ಕೈಬರಹದ ಪ್ರಮಾಣಪತ್ರ ನೀಡುತ್ತಿದೆ. ಭಾರತದಲ್ಲಿ ಒಳ್ಳೆಯದಿದ್ದರೂ, ಎಲ್ಲಾ ಅನುಕೂಲವನ್ನು ಪಡೆದುಕೊಂಡು ತಮ್ಮಷ್ಟಕ್ಕೆ ತಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದರೂ ವಿರೋಧ ಪಕ್ಷಗಳು, ಚೀನಾದ ಗುಲಾಮರಾದ ಕಮ್ಯುನಿಸ್ಟರು ಮನಸ್ಸಿಗೆ ಬಂದಂತೆ ಮಾತಾಡುತ್ತಿದ್ದರೆ. ಲೆಕ್ಕವನ್ನು ನೋಡದೆ ಲಸಿಕೆಯನ್ನು ಕಾಯ್ದಿರಿಸಿ ಮೋದಿಯವರ ಹುಟ್ಟು ಹಬ್ಬದಂದು ಕೊಟ್ಟಿದ್ದಾರೆ ಎಂದೆಲ್ಲಾ ಅರ್ಥವಿಲ್ಲದ ಮಾತಾಡಿದ್ದಾರೆ. ಇಂತಹವರ ಮಾತಿಗೆ ಬೆಲೆಕೊಡದೆ ದೇಶವನ್ನು ಗಮನಿಸುತ್ತಾ, ಅದರ ಬೆಳವಣಿಗೆಗೆ ನಾವು ಜೊತೆಯಾಗಬೇಕಿದೆ.

Hand Written Covid Vaccination Certificates in America and United Kingdom

September 15, 2021

ದಶಕಾವಲೋಕನ - Bosch ಅಲ್ಲಿ ಒಂದು ದಶಕ

ಸೆಪ್ಟಂಬರ್ 12, 2021 ಕ್ಕೆ ನನ್ನ ವೃತ್ತಿ ಜೀವನ ಶುರುಮಾಡಿ ಹತ್ತು ವರ್ಷ. ಹತ್ತು ವರ್ಷ ನಾನು Bosch ಅಲ್ಲೇ ಕೆಲಸ ಮಾಡಿದ್ದೇನೆ. ಒಂದೇ ಕಡೆ ಹತ್ತು ವರ್ಷ ಕೆಲಸ ಮಾಡಿರುವುದು ಹಲವರಿಗೆ ಹುಬ್ಬೇರಿಸುವ ವಿಚಾರವೆ. ಈಗಿನ ಕಾರ್ಪೊರೇಟ್ ಜಗತ್ತಿನಲ್ಲಿ 3-4 ವರ್ಷ ಒಂದೆಡೆ ಇರುವುದೇ ಹೆಚ್ಚು. ಕೆಲಸದ ಮೇಲಿನ ಆಸಕ್ತಿ, ಕಚೇರಿಯ ವಾತಾವರಣ, ಸಹೋದ್ಯೋಗಿಗಳು ಮತ್ತು ಮ್ಯಾನೆಜರ್ ಜೊತೆಗಿನ ಒಡನಾಟ ಅಥವಾ ಹಣ ಇವುಗಳು ಒಂದು ಕಂಪನಿಯಲ್ಲಿ ಇರುವ ಅವಧಿಯನ್ನು ನಿರ್ಧರಿಸುತ್ತದೆ ಎಂಬುದು ನನ್ನ ಅಭಿಪ್ರಾಯ. Bosch ಅಲ್ಲಿ ನನಗೆ ಇದಾವುದರಲ್ಲೂ ಕೊರತೆ ಕಾಣಲಿಲ್ಲವಾದ್ದರಿಂದ ನಾನು ಈ ಸಂಸ್ಥೆಯನ್ನು ಬಿಟ್ಟಿಲ್ಲ. ಇದರ ಬಗ್ಗೆ ನನ್ನ ಸ್ನೇಹಿತರು, ಹಾಲಿ ಮತ್ತು ಮಾಜಿ ಸಹೋದ್ಯೋಗಿಗಳಲ್ಲಿ ಆಕ್ಷೇಪವಿರಬಹುದು. ಅದು ಅವರವರ ಭಾವಕ್ಕೆ ಬಿಟ್ಟ ವಿಚಾರ ಎಂದು ನನ್ನ ಅಭಿಮತ. ವೃತ್ತಿ ಜೀವನದಲ್ಲಿ ಹತ್ತು ವರ್ಷ ದೊಡ್ಡದು ಅಥವಾ ಚಿಕ್ಕದ್ದು ಎಂಬ ಚಿಂತನೆ ನನ್ನದಲ್ಲವೇ ಅಲ್ಲ. ನನ್ನ ಅನುಭವದ ಮಾತನ್ನು ಬರೆಯುವುದು ನನ್ನ ಮನೋಧರ್ಮ, ಹಾಗಾಗಿ ಬರೆಯುತ್ತಿದ್ದೇನೆ.


Momento for a Decade @ Bosch
 
Bosch ಗೆ ನಾನು ಸೇರಬೇಕು ಎಂದು ಅಂದುಕೊಂಡವನೇ ಅಲ್ಲ. ಇಂಜಿನಿರಿಂಗ್ 7ನೇ ಸೆಮಿಸ್ಟರ್ ಓದುವಾಗಲೇ ಮತ್ತೊಂದು ಕಂಪನಿಯ ಕೆಲಸ ನನಗೆ ಸಿಕ್ಕಿತ್ತು. ಅದೊಂದು ದಿವಸ ನನ್ನ ಸಹಪಾಠಿಯೊಬ್ಬ 'ನಾಳೆ Bosch ಕಂಪನಿಯ ಕ್ಯಾಂಪಸ್ ಸೆಲೆಕ್ಶನ್ ಇದೆ' ಎಂದು ನನ್ನನ್ನು ಕರೆದ. ಬೆಂಗಳೂರಿನ SJBIT ಕಾಲೇಜಿನಲ್ಲಿ interview ಇದ್ದದ್ದು. ಒಂದು ಕೆಲಸ ಇದೆ ಎಂಬ ಉಡಾಫೆ ಭಾವದಿಂದಲೇ campus selection ಗೆ ಹೋಗಿದ್ದೆ. ಮೊದಲು C.E.T ಮಾದರಿಯ ಬರವಣಿಗೆ ಪರೀಕ್ಷೆ. ಪರೀಕ್ಷೆ ಮುಗಿದು ಫಲಿತಾಂಶ ಬರುವ ಹೊತ್ತಿಗೆ ಸಂಜೆಯಾಗಿತ್ತು. ಪರೀಕ್ಷೆ ಬರೆದವರ ಸಂಖ್ಯೆ 1450 ಎಂದು ನನಗೆ ಆಗಲೇ ತಿಳಿದದ್ದು. ಅಷ್ಟು ಜನರಲ್ಲಿ ನನ್ನನೂ ಸೇರಿದಂತೆ 85 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಈ ಸಂಖ್ಯೆಯನ್ನು ನೋಡಿ ನಾನು ಸ್ವಲ್ಪ ಗಂಭೀರನಾದೆ (ಪ್ರಾಂಶುಪಾಲರ ಕಚೇರಿಯ ಮುಂದೆ placement ಗಾಗಿ ವಿದ್ಯಾರ್ಥಿಗಳೆಲ್ಲ strike ಮಾಡಿದ್ದು, ನಾನು ಮುಂದಾಳತ್ವ ವಹಿಸಿದ್ದು ಎಲ್ಲಾ ಇಲ್ಲಿ ನೆನಪಾಗುತ್ತದೆ). ಮಾರನೆ ದಿವಸ ಎರಡನೇ ಸುತ್ತು. ಇಲ್ಲಿ ಎರಡು ಸುತ್ತು face to face technical interview ಗೆ ಕೂರಬೇಕಿತ್ತು. ಮೊದಲ ಸುತ್ತು 15-20 ನಿಮಿಷದಲ್ಲಿ ಮುಗಿದಿತ್ತು ಅದರೆ ಎರಡನೆ ಸುತ್ತು ಬರೋಬ್ಬರಿ 2.5 ಗಂಟೆಯದಾಗಿತ್ತು. ಎರಡನೇ ಸುತ್ತು ಮುಗಿಸುವಷ್ಟರಲ್ಲಿ ನಾನು ಬೆವತು ಹೋಗಿದ್ದೆ. ಮಧ್ಯಾಹ್ನ ಊಟ ಮಾಡಿರಲಿಲ್ಲ ಆದ್ದರಿಂದ ಸುಸ್ತು ಆಗಿತ್ತು. ಇದಾದ ಮೇಲೆ ಕೊನೆಯಲ್ಲಿ HR ಸುತ್ತು. ನಾನೇ ಕೊನೆಯ ಅಭ್ಯರ್ಥಿ. ನನ್ನ ಸರದಿ ಬರುವ ಹೊತ್ತಿಗೆ ರಾತ್ರಿ 8:30 ಆಗಿತ್ತು. Interview panelists ಎಲ್ಲರೂ ಹೊರಡಲು ತಯಾರಿ ಮಾಡಿಕೊಳ್ಳುತ್ತಿದ್ದರು. HR ಸುತ್ತಿನಲ್ಲಿ ನನಗೆ ಕೇಳಿದ್ದು ಎರಡೇ ಪ್ರಶ್ನೆಗಳು! Pythagoras Theorem ಹೇಳು ಮತ್ತು 25*25 ಎಷ್ಟು ಎಂದು. ನಾನು ಆಯ್ಕೆಯಾಗಿದ್ದೆ ಎಂಬುದು ಅಲ್ಲೇ ನನಗೆ ಸ್ಪಷ್ಟವಾಯ್ತು. Bosch ಅಲ್ಲಿ technical ಸುತ್ತಿನಲ್ಲಿ ಆಯ್ಕೆಯಾದರೆ ಮುಗೀತು ಎಂಬ ಅಭಿಪ್ರಾಯ ನನಗೆ ಬರಲು ಇದೇ ಕಾರಣ. ಅಂದುಕೊಂಡಂತೆ ನಾನು ಆಯ್ಕೆಯಾಗಿದ್ದೆ. ಅಧಿಕೃತವಾಗಿ ಈ ವಿಚಾರ ನಮ್ಮ ಕಾಲೇಜಿನಲ್ಲಿ ಎರಡು ದಿನಗಳ ನಂತರ ತಿಳಿಯಿತು. ಹೀಗೆ ಆಟಾಡಿಕೊಂಡೆ ನಾನು Bosch ಗೆ ಸೇರಿದೆ.
 
ಕೆಲಸಕ್ಕೆ ಸೇರುವ ಹಿಂದಿನ ದಿವಸ ಅಂದರೆ ಸೆಪ್ಟಂಬರ್ 11 ನೇ ತಾರೀಖು ಕೋರಮಂಗಲದಲ್ಲಿದ್ದ ಕಚೇರಿಗೆ ಹೇಗೆ ಬರುವುದು ಎಂದು ನೋಡಿಕೊಂಡೆ. Forum ಎದುರುಗಡೆ ನಮ್ಮ ಕಚೇರಿ ಇದೆ ಎಂದು ಅಂದಿನವರೆಗೆ ನನಗೆ ತಿಳಿದಿರಲಿಲ್ಲ. ಮೊದಲ ದಿನದ ದುಗುಡ, ಉತ್ಸಾಹ ಪದಗಳಲ್ಲಿ ಬಣ್ಣಿಸಲು ಆಗುವುದಿಲ್ಲ. ಹೊಟ್ಟೆಯಲ್ಲಿ ಚಿಟ್ಟೆ ಹಾರಾಡುವಂತೆ ಭಾಸವಾಗುತ್ತಿತ್ತು. ಕಾಲೇಜಿನ ವಿದ್ಯಾರ್ಥಿ ಜೀವನದಿಂದ ಕಾರ್ಪೊರೇಟ್ ಜಗತ್ತಿಗೆ ನನ್ನನ್ನು ತೆರೆದುಕೊಳ್ಳಬೇಕಿತ್ತು. ಅದೊಂದು ಹೊಸ ಜಗತ್ತು ನನ್ನ ಪಾಲಿಗೆ. ಅಂದು ನನ್ನ ಜೊತೆ ಸುಮಾರು 105 ಜನ ಸೇರಿದ್ದರು. ಒಂದೆರಡು ದಿವಸದಲ್ಲಿ ಕೆಲವರು ಪರಿಚಯವಾದರು. ಮೊದಲ ಬಾರಿಗೆ ಕಚೇರಿಯ filter ಅಲ್ಲಿ ಬಿಸಿ ನೀರು ಕುಡಿದು ನಾಲಿಗೆ ಸುಟ್ಟಿತ್ತು. ಒಂದು ವಾರದಲ್ಲಿ ಹೊಸ ಜಗತ್ತಿಗೆ ನಾನು ಹೊಂದಿಕೊಂಡೆ. ಮುಂದಿನ ಮೂರು ತಿಂಗಳು ತರಬೇತಿ. ನಾನು, ಗಿರೀಶ್ ಪ್ರಸನ್ನ (ಮಂಗಳೂರು. ಈತನಿಗೂ Bosch ಅಲ್ಲಿ ಹತ್ತು ವರ್ಷವಾಯ್ತು), ಬಿಭೂತಿ (ಬಹುಶಃ ಒಡಿಸ್ಸಾ) ಮತ್ತು ಕಾರ್ತಿಕ್ ಮೊಲಗು (ಆಂಧ್ರ ಪ್ರದೇಶ) ಒಂದು ತಂಡವಾಗಿ ಆಯ್ಕೆಯಾದೆವು. ಎಲ್ಲರೂ ಹೆಚ್ಚು ಮಾತಾಡುತ್ತಿದ್ದಾರೆ ಅನ್ನಿಸುತ್ತಿತ್ತು ಕಾರಣ ನಾನು ಮಾತೇ ಆಡುತ್ತಿರಲಿಲ್ಲ ಆತ್ಮವಿಶ್ವಾಸದ ಕೊರತೆಯ ಕಾರಣದಿಂದಾಗಿ. ತರಬೇತಿಯ ಫಲಿತಾಂಶ ಹೊರಬಂದಿತ್ತು. ನನ್ನ ತಂಡದ ಮೂವರು ಮೊದಲ ಹತ್ತರಲ್ಲಿ ಸ್ಥಾನ ಪಡೆದಿದ್ದರು. ಇದ್ದ 60 ಜನರ ಗುಂಪಲ್ಲಿ ನಾನು ಮೊದಲ 50 ರಲ್ಲೂ ಇರಲಿಲ್ಲ ಎಂದು ತೋರುತ್ತದೆ. ನಾಲ್ವರ ಈ ತಂಡ ಮತ್ತು ಇತರ 6-7 ಜನ Airbags Department ಸೇರಿದೆವು. ಒಬ್ಬೊಬ್ಬರು ಬೇರೆ ಬೇರೆ ತಂಡಕ್ಕೆ ಆಯ್ಕೆಯಾದೆವು. ಬಿಭೂತಿ ಮತ್ತು ಗಿರೀಶ್ ಮಾತ್ರ ಒಂದು ತಂಡದಲ್ಲಿದ್ದರು. ಅಲ್ಲಿಂದಾಚೆಗೆ ಮತ್ತೊಂದು ಹಂತ ಪ್ರಾರಂಭವಾಯಿತು.

 

***********************************************************************


ವೃತ್ತಿ ಜೀವನದ ಗುರುಗಳು

 

ಸತೀಶ್ ಶಿವ ಷಣ್ಮುಗಂ (SSS) :

ಈಜು ಬಾರದವನಿಗೆ ನದಿ ಅಥವಾ ಸಮುದ್ರಕ್ಕೆ ತಳ್ಳಿ ಈಜು ಕಲಿತುಕೊ ಅನ್ನುವಂತಹ, ಏನೇ ಪ್ರಶ್ನೆ ಕೇಳಿದರು ನಮ್ಮಿಂದಲೇ ಉತ್ತರ ಹೊರಡಿಸುವ ವ್ಯಕ್ತಿತ್ವ ಇವರದು. ಭೌತ್ತಶಾಶ್ತ್ರದ ಮೂಲತತ್ವಗಳ ಮೂಲಕವೇ ಮಾತಾಡುತ್ತಿದ್ದರು. ಇವರೊಟ್ಟಿಗೆ ಮಾತಾಡಬೇಕಾದರೆ ನನಗೆ ನಿಜಕ್ಕೂ ಭಯವೇ ಆಗುತ್ತಿತ್ತು. ಮಾತಾಡುವ ಮುನ್ನ ಪೂರ್ವತಯಾರಿಯ ಅವಶ್ಯಕತೆ ತುಂಬಾ ಇರುತಿತ್ತು. ವಹಿಸಿದ ಕೆಲಸ ನಮಗೆ ಸಾಧ್ಯವಿಲ್ಲ ಎಂದು ಕೈಚೆಲ್ಲಿದರೆ ಆತ ಹೇಳುತ್ತಿದ್ದದ್ದು "ಮನೆಗೆ ಹೋಗು" ಎಂದು. ನಮ್ಮಲ್ಲಿ ಸಾಮರ್ಥ್ಯವಿದೆ ಮತ್ತು ನಾವು ಕೆಲಸ ಮಾಡುತ್ತೇವೆ ಎಂದು ಅನ್ನಿಸಿದರೆ ಮಾತ್ರ ಅವರು ಸಹಾಯ ಮಾಡುತ್ತಿದ್ದರು. ಆಗೆಲ್ಲ ಅವರನ್ನು ಮನಸ್ಸಿನಲ್ಲೇ ಬೈದುಕೊಂಡದ್ದು ಇದೆ. ಆದರೆ, ಕೆಲವು ವರ್ಷಗಳಾದ ಮೇಲೆ ತಿಳಿಯಿತು. ಅವರು ಹಾಗೆ ಮಾಡಿದ್ದರಿಂದಲೇ ನಮ್ಮ ಕಲಿಕೆಯ ವೇಗ ಮತ್ತು ಸಾಮರ್ಥ್ಯ ಹೆಚ್ಚಿತು ಎಂದು. 4-5 ವರ್ಷಗಳ ನಂತರ ಅವರೊಂದಿಗೆ ಮತ್ತೆ ಕೆಲಸ ಮಾಡುವ ಅವಕಾಶವಾಯಿತು. ಆಗಲೂ ಒಂದು ರೀತಿಯ ಭಯವಿತ್ತು ಆದರೆ, ಅನುಭವದ ಬಲದಿಂದ, ಪೂರ್ವ ತಯಾರಿಯೊಂದಿಗೆ ಮಾತಾಡುತ್ತಿದ್ದೆ. ಇವರು ಕೆಲಸ ಮಾಡುತ್ತಿದ್ದ ಮತ್ತು ಮಾಡಿಸುತ್ತಿದ್ದ ರೀತಿಯ ಬಗ್ಗೆ ನನ್ನ juniors ಗೆ ಹಲವು ಸಲ ಹೇಳಿದ್ದೇನೆ. ಸತೀಶ್ ರವರಿಗೆ ಈ ಮೂಲಕ ನನ್ನ ಧನ್ಯವಾದಗಳು.


ವಿಜಯ್ ಜೇ :

ಅಧಿಕೃತವಾಗಿ ಇವರು ನನ್ನ ಮೊದಲ ಮೆಂಟರ್ ಆಗಿದ್ದರು. Bosch ಅಲ್ಲಿನ ಕ್ರಮದ ಬಗೆಗಿನ ಅ,ಆ,ಇ,ಈ ಹೇಳಿಕೊಟ್ಟವರು ಇವರು. ಯಾವುದೇ ಕೆಲಸವಾಗಲಿ ಪರಿಪೂರ್ಣವಾಗಿರಬೇಕು ಎಂಬುದನ್ನು ಇವರು ಅಪೇಕ್ಷಿಸುತ್ತಿದ್ದರು. ವಿಚಾರಗಳನ್ನು ಸಹ ತುಂಬಾ ತಾಳ್ಮೆಯಿಂದ ಹೇಳಿಕೊಡುತ್ತಿದ್ದರು. Mail ಅನ್ನು ಸ್ಪಷ್ಟವಾಗಿ, ತೀಕ್ಷ್ಣವಾಗಿ ಬರೆಯುವುದನ್ನು ನಾನು ಮೊದಲು ಕಲಿತದ್ದೇ ವಿಜಯ್ ಅವರಿಂದ. ಇವರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡ ಮೇಲೆ ಇವರು ಮಾಡುತ್ತಿದ್ದ ಕೆಲಸ ನನ್ನ ನಿರ್ವಹಣೆಗೆ ಬಂತು. ಸುಮಾರು 2 ವರ್ಷಗಳ ಕಾಲ ಅನೇಕ technical ವಿಚಾರಗಳಲ್ಲಿ ಒಬ್ಬನೇ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬಂತು. ಇದು ನನ್ನನ್ನು, ನನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಿಕೊಳ್ಳುವುದಕ್ಕೆ ಒದಗಿ ಬಂದ ಅವಕಾಶವಾಗಿತ್ತು ಮತ್ತು ಅದರಲ್ಲಿ ನಾನು ಸಫಲನಾಗಿದ್ದೆ. ಅದಕ್ಕೆ ವಿಜಯ್ ಹಾಕಿಕೊಟ್ಟ ಮಾರ್ಗದರ್ಶನ ಕಾರಣ. ಇವರಲ್ಲಿ ನನಗಿದ್ದ ಒಂದೇ ಒಂದು ತೊಂದರೆ ಎಂದರೆ ಈತ ಮಾತಾಡುತ್ತಿದ್ದದ್ದೇ ಕಮ್ಮಿ. ಎರಡು ವರ್ಷದ ಅವಧಿಯಲ್ಲಿ ಕೆಲಸದ ವಿಚಾರವನ್ನು ಹೊರತು ಪಡಿಸಿ ಇವರು ಮಾತಾಡಿದ್ದು 2-3 ಬಾರಿ ಮಾತ್ರ! ಈ ಮೂಲಕ ವಿಜಯ್ ಗೆ ನನ್ನ ಧನ್ಯವಾದಗಳು. ಹಾಂ, ಮುಖ್ಯವಾದ ಒಂದು ವಿಚಾರ ಒಂದಿದೆ. ನಾನು ಒಬ್ಬನೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನನ್ನ ಮೇಲೆ ನಂಬಿಕೆ ಇಟ್ಟವರು ನಮ್ಮ ಮ್ಯಾನೇಜರ್ಗಳು. ಆದ್ದರಿಂದಲೇ ನನಗೂ ನನ್ನ ಸಾಮರ್ಥ್ಯ ಸಾಬೀತು ಪಡಿಸಲು ಸಾಧ್ಯವಾಯಿತು. ನಂಬಿಕೆ ಇದ್ದಲ್ಲಿ ಬದುಕು ಅಲ್ಲವೇ!


ರಾಮಕೃಷ್ಣ (RK) ಮತ್ತು ಸಂದೀಪ್ ಜಾಂಬ್ಲಿ :

ನಾನು ಒಬ್ಬನೇ ನಿರ್ಧಾರ ತೆಗೆದುಕೊಳ್ಳುವ 2-3 ವರ್ಷದ ಅವಧಿಯಲ್ಲಿ ಈ ಇಬ್ಬರೂ ಮುಂದಾಳತ್ವ ವಹಿಸಿದ್ದ ಪ್ರಾಜೆಕ್ಟಿನಲ್ಲಿ ನಾನು ಕೆಲಸ ಮಾಡಿದ್ದು. ಇವರೊಂದಿಗೆ ಅಧಿಕೃತವಾಗಿ ಮೀಟಿಂಗ್ ಕೋಣೆಯಲ್ಲಿ ಚರ್ಚೆ ಮಾಡಿದ್ದು ನನಗಂತೂ ನೆನಪೇ ಇಲ್ಲ. ಸಂದೀಪ್ ಅವರನ್ನು ನಾನು ಮೊದಲು ಭೇಟಿಯಾಗಿ ಮಾತಾಡಿದ್ದೆ ನಮ್ಮ ಕಚೇರಿಯ ಕ್ಯಾಂಟೀನ್ನಲ್ಲಿ. ಅನೇಕ ಸಲ ಇವರ ಜೊತೆ ಕಾಫೀ, ಸಂಜೆಯ ತಿಂಡಿ ಸಮಯದಲ್ಲಿ ಮಾತಾಡಿದ್ದೇನೆ. ಮಧ್ಯಾಹ್ನ ಊಟದ ನಂತರ ಓಡಾಡಬೇಕಾದರೂ ಸಹ ಚರ್ಚೆ ಮಾಡಿದ್ದುಂಟು. ಅದೊಂದು ದಿವಸ ನಾನು 6:30 ಹೊತ್ತಿಗೆ ಮನೆಗೆ ಹೊರಡುವವನಿದ್ದೆ. ಸ್ನೇಹಿತನನ್ನು ಮಾತಾಡಿಸಿಕೊಂಡು ಹೋಗೋಣ ಎಂದು ಸಂದೀಪ್ ಮತ್ತು RK ಇರುವಲ್ಲಿಗೆ ಬಂದೆ. ಯಾವುದೋ ವಿಚಾರವಾಗಿ ನಮ್ಮ ಚರ್ಚೆ ಶುರುವಾಯಿತು. ಅವರೊಂದಿಗಿನ ಮಾತುಗಳು ನನಗೆ ಪಾಠವಾಗುತ್ತಿತ್ತು. ಅಂದು ಮಾತು ಮುಗಿಸಿ ಹೊರಡುವಷ್ಟರಲ್ಲಿ ರಾತ್ರಿ 9:30. ನನ್ನ ಸ್ನೇಹಿತ ನನಗೆ ಹೇಳಿ ಮನೆ ತಲುಪಿದ್ದನಾದರೂ ನಮ್ಮ ಚರ್ಚೆ ಮುಗಿದಿರಲಿಲ್ಲ! ಯಾವುದೇ ವಿಚಾರವನ್ನಾಗಲಿ ವಿವಿಧ ದೃಷ್ಠಿಕೋನದಿಂದ ನೋಡುವುದನ್ನು ಈ ಇಬ್ಬರಿಂದ ನಾನು ಕಲಿತೆ. ನಾನು ನನ್ನ ಕೆಲವು ಸಹೊದ್ಯೋಗಿಗಳು ಸಂದೀಪ್ ಅವರನ್ನು 'Uncle' ಎಂಬ ಅಡ್ಡಹೆಸರಿನಿಂದ ಕರೆಯುತ್ತಿದ್ದೆವು. ಇದು ನಮ್ಮಲ್ಲಿ ‍ಮಾತಾಡಬೇಕಾದರೆ ಪ್ರಯೋಗವಾಗುತ್ತಿದ್ದ ಪದ. ಇದು ಆಡಿಕೊಳ್ಳುವ ರೀತಿಯಲ್ಲ ಬದಲಾಗಿ ಅವರೊಂದಿಗೆ ನಮಗಿದ್ದ ಸಲುಗೆ. ವೃತ್ತಿಜೀವನದಲ್ಲಿ ನನ್ನ ಜ್ಞಾನವನ್ನು ಹೆಚ್ಚು ಮಾಡಿದ ಇಬ್ಬರಿಗೂ ನನ್ನ ಧನ್ಯವಾದಗಳು.


ಕಿರಣ್ :

ನಾನು Bosch ಗೆ ಸೇರುವ ಹೊತ್ತಿಗೆ ಇವರಿಗೆ ನಮ್ಮ ಕಂಪನಿಯಲ್ಲಿ 5-6 ವರ್ಷ ಮತ್ತು ಒಟ್ಟಾರೆ 10 ವರ್ಷದಷ್ಟು ಅನುಭವವಾಗಿತ್ತು. ಯಾವುದೋ ವಿಚಾರದಲ್ಲಿ ಇವರ ಹತ್ತಿರ ಚರ್ಚೆ ಮಾಡಿ ತಿಳಿದುಕೊಳ್ಳುವ ಅವಶ್ಯಕತೆ ಇತ್ತು. ನನಗೋ ನನ್ನ ಜಾಗ ಬಿಟ್ಟು ಹೋಗಿ ಯರನ್ನಾದರೂ ಮಾತಾಡಿಸಲು ಹಿಂಜರಿಕೆ ಅಥವಾ ಭಯ (RK ಮತ್ತು ಸಂದೀಪ್ ಅವರ ಜೊತೆ ಮಾತಾಡುವಷ್ಟರಲ್ಲಿ 1.5-2 ವರ್ಷ ಅನುಭವವಾಗಿತ್ತು)! ಶುಕ್ರವಾರ ಮಾತಾಡಿಸಲಾಗದೇ ಸೋಮವಾರದ ತನಕ ಕಾದು, ನನ್ನ ಮತ್ತೊಬ್ಬ ಸಹೋದ್ಯೋಗಿ ಜೊತೆ ಕಿರಣ್ ರವರ ಬಳಿ ಹೋಗಿ ಚರ್ಚಿಸಿದೆ. ಬಹುಶಃ ನಾನು ಒಬ್ಬಂಟಿಯಾಗಿ ಚರ್ಚಿಸಿದ್ದು ಇವರ ಹತ್ತಿರವೇ ಮೊದಲು ಎಂದು ತೋರುತ್ತದೆ. ವಿಷಯವನ್ನು ಕೂಲಂಕುಷವಾಗಿ ಗ್ರಹಿಸುವುದನ್ನು ಇವರಿಂದ ಕಲಿತೆ. 6-7 ವರ್ಷಗಳ ನಂತರ ನಾನು ಇವರು ಕಚೇರಿಗೆ ಕಾರಿನಲ್ಲಿ ಒಟ್ಟಿಗೆ ಹೋಗುತ್ತಿದ್ದೆವು. ಕಾರಲ್ಲಿ ಅನೇಕ ಚರ್ಚೆಗಳನ್ನು ಮಾಡಿದ್ದೇವೆ. ಕೆಲಸದ ಹೊರತಾಗಿ ಅನೇಕ ವಿಚಾರಗಳು ಸಹ ಮಾತಾಡಿದ್ದೇವೆ. ಕೆಲವು ಬಾರಿ ಜಗಳ ಅನ್ನುವ ಮಟ್ಟಿಗೆ debate ಕೂಡ ನಮ್ಮಲ್ಲಿ ನಡೆದಿದೆ. ಈ ಕಾರಣದಿಂದಾಗಿ ನಮ್ಮಲ್ಲಿ ಸ್ನೇಹದ ಸಲುಗೆ ಕೂಡ ಬೆಳೆದಿದೆ. ಆದ್ದರಿಂದ ಧನ್ಯವಾದ ಹೇಳುವುದು ತೋರಿಕೆಯಂತಾಗುತ್ತದೆ.


Volvo Group :

ಈ ತಂಡ ನಮ್ಮ department ಅಲ್ಲಿನ ಶಾಲೆ ಎಂದೇ ಹೇಳಬೇಕು. ಇಲ್ಲಿ ನಾನು ಕಲಿತದ್ದು ಬಹಳ ಇದೆ. ತಂಡದ ಪ್ರತಿಯೊಬ್ಬರೂ ಕಲಿಸಿದ್ದಾರೆ. ವಿವಿಧ ಸಂಸ್ಕೃತಿಯುಳ್ಳ ವಿದೇಶಿಯರೊಂದಿಗೆ ಮಾತಾಡುವುದನ್ನು ಕಲಿಸಿದ್ದು ಇದೇ ತಂಡ. ತಾಳ್ಮೆಯಿಂದ ವರ್ತಿಸುವುದನ್ನು ಕಲಿಸಿದ್ದು ಇದೇ ತಂಡ. ಯಾವುದೇ ಕೆಲಸವನ್ನಾಗಲಿ ವ್ಯವಸ್ಥಿತವಾಗಿ ಮಾಡುವುದನ್ನು ಕಲಿಸಿದ್ದು ಈ ತಂಡ. Juniors ಗಳಿಗೆ ನನಗೆ ತಿಳಿದಿರುವ ವಿಚಾರವನ್ನು ಯಾವ ರೀತಿ ಹೇಳಿಕೊಡಬೇಕು ಎಂದು ಕಲಿಸಿದ್ದು ಈ ತಂಡ. ತನ್ಮೂಲಕ ನಾನು ಕಲಿತಿದ್ದೇನೆ. ನಾನು ಮೂಲತಃ development ಹಿನ್ನಲೆಯಿಂದ ಬಂದವನು ಹಾಗಾಗಿ, testers ಜೊತೆ ಹೇಗೆ ನಡೆದುಕೊಳ್ಳಬೇಕು ಎಂದು ಹೇಳಿಕೊಟ್ಟವರು ಇದೇ ತಂಡದವರು. ಕೆಲಸಕ್ಕಿಂತ ಊಟ, ತಾಳ್ಮೆ, ಬಾಂಧವ್ಯ ಮುಖ್ಯ ಎಂದು ತಿಳಿಸಿಕೊಟ್ಟದ್ದು ಈ ತಂಡದವರೇ.

ಅದೊಂದು ಮಧ್ಯಾಹ್ನ ಊಟದ ಸಮಯ. ಕೆಲಸ ಮುಗಿಸಿ ಹೋಗೋಣ ಎಂದು ವಿಂಧ್ಯಾ ಎಂಬುವವರಿಗೆ ಹೇಳಿದೆ ಜೊತೆಗೆ ಕೆಲಸದ ಒತ್ತಡದಿಂದ ಸ್ವಲ್ಪ ಖಾರವಾಗೆ ಮಾತಾಡಿದ್ದೆ. ಅವರು ಕಾರಣಾಂತರದಿಂದ ಬೆಳಿಗ್ಗೆ ಉಪಹಾರ ಮಾಡಿರಲಿಲ್ಲ. ಆದರೆ, ನನಗೆ ಕೆಲಸವೇ ಮುಖ್ಯವಾಗಿತ್ತು. ನಂತರ ನಾವು ರಾಜಿ ಆದೆವು. ಕೆಲವು ದಿನಗಳ ನಂತರ ಇದೇ ರೀತಿಯ ಸಂದರ್ಭ ನನಗೆ ಬಂತು. ನಾನೂ ಸಹ ಬೆಳಗ್ಗೆ ಏನು ತಿಂದಿರಲಿಲ್ಲ. ಕೆಲಸ ಮುಗಿಸಿ ಊಟಕ್ಕೆ ಹೋಗೋಣ ಎಂದು ಕೂತಿದ್ದೆ. ಅದರೆ, ಗೀತು ಎಂಬುವವರು ನನ್ನನ್ನು ಊಟಕ್ಕೆ ಕಳುಹಿಸಿ ನಂತರ ಕೆಲಸ ನೋಡೋಣ ಎಂದರು. ಆ ಸಂದರ್ಭದಲ್ಲಿ ನಾನು ವಿಂಧ್ಯಾ ಜೊತೆ ನಡೆದುಕೊಂಡ ರೀತಿ ನೆನಪಾಯಿತು. ಅಂದಿನಿಂದ ನನ್ನಲ್ಲಿ ಬದಲಾವಣೆ ಬಂತು. ಈ ಪಾಠಕ್ಕಾಗಿ ವಿಂಧ್ಯಾ ಮತ್ತು ಗೀತೂ ಅವರಿಗೆ ನನ್ನ ಧನ್ಯವಾದಗಳು.

ಈ ತಂಡದಲ್ಲಿ ವ್ಯಕ್ತಿ ರೂಪದಲ್ಲಿ ಅಮೂಲ್ಯವಾದದ್ದನ್ನು ಕಳೆದುಕೊಂಡಿದ್ದೇನೆ ಹಾಗೂ ಮತ್ತೊಬ್ಬರನ್ನ ಪಡೆದುಕೊಂಡಿದ್ದೇನೆ.

ಈ ತಂಡಕ್ಕೆ ಸೇರಿದ ಹೊಸತರಲ್ಲಿ ನನ್ನ ಹೆಸರಿಗೆ ಒಂದು defect ವರ್ಗವಾಯ್ತು. ನನ್ನಲ್ಲಿಗೆ ಬರುವ ಮುನ್ನ 6-7 ತಿಂಗಳಿಂದ ಇಬ್ಬರ ಹೆಸರಿಗೆ ಹೋಗಿ ಪರಿಹಾರವಾಗದೇ ಬಂದಿತ್ತು. ಮೊದಲ ನೋಟದಲ್ಲಿ ಸಮಸ್ಯೆ ಸುಲಭವೆನ್ನಿಸಿತು ಆದರೆ, ವಿಶ್ಲೇಷಣೆ ಮಾಡುತ್ತಾ ಹೊದಂತ್ತೆಲ್ಲಾ ಸಮಸ್ಯೆ ಕ್ಲಿಷ್ಟವಾಯ್ತು. ಎರಡು ದಿನ ಪ್ರಯತ್ನ ಪಟ್ಟು ಸಾಧ್ಯವಾಗಲಿಲ್ಲ. ಮಾರನೇ ದಿವಸ ಇಂದು ಇದನ್ನು ಮುಗಿಸಿಯೇ ತೀರುತ್ತೇನೆ ಎಂದು ಕೂತೆ. ಕೇವಲ ಅರ್ಧ ಗಂಟೆಯಲ್ಲಿ ಸಮಸ್ಯೆ ಬಗೆಹರಿದಿತ್ತು. ನಾವು ಆಗುತ್ತದೆ ಎಂದು ಮನಸ್ಸು ಮಾಡಿ, ಗಮನವಿಟ್ಟು ಪ್ರಯತ್ನಪಟ್ಟಿದ್ದಲ್ಲಿ ಯಾವುದೇ ಸಮಸ್ಯೆಯಾಗಲಿ, ಕೆಲಸವಾಗಲಿ ಮಾಡಿ ಮುಗಿಸಬಹುದು ಎಂದು ಇದರಿಂದ ಮನದಟ್ಟಾಯಿತು. ಇದನ್ನು ಕೂಡ ನನ್ನ juniors ಗಳಿಗೆ ಉದಾಹರಣೆಯನ್ನಾಗಿ ಹೇಳಿದ್ದೇನೆ.

ಈ ರೀತಿ ಅನೇಕ technical, emotional, behavioral ಪಾಠಗಳನ್ನು ಕಲಿಸಿದ Volvo ತಂಡಕ್ಕೆ ನನ್ನ ಧನ್ಯವಾದಗಳು.
 
*********************************************************************** 

ಕೆಲಸದ ಮೂಲಕ ಕಲಿತ ಪಾಠಗಳು

ನಾನು ಕಲಸ ಮಾಡುವ department ಅಲ್ಲಿ ಹೆಚ್ಚಿನ ಕೆಲಸ ಆಗುತ್ತಿದ್ದದ್ದೇ ಸಂಜೆ 6:30 ಮೇಲೆ. ಬೆಳಗ್ಗೆ ಬಹುತೇಕ ಸಮಯ ಮೀಟಿಂಗ್, ಕಾಫೀ, ಊಟ ಇಂತಹುದರಲ್ಲೇ ಕಾಲವಾಗುತ್ತಿತ್ತು. ಕೆಲವರಿಗೆ ಮೀಟಿಂಗ್ ಎಂದರೆ time pass ಎಂಬ ಭಾವನೆ ಇದೆ ಆದರೆ, ಎಷ್ಟರ ಮಟ್ಟಿಗೆ ಅದರಿಂದ ನಾವು ಕಲಿತಿದ್ದೇವೆ ಎಂಬುದು ನಮಗೆ ಮಾತ್ರ ಗೊತ್ತಿರುವಂತಹ ವಿಚಾರ ಮಿಕ್ಕದ್ದು ಅವರವರ ಭಾವಕ್ಕೆ ಬಿಟ್ಟಿದೆ. ಕರೋನಾ ಬಂದು work from home ಶುರುವಾದ ನಂತರ ರಾತ್ರಿ ಕೆಲಸ ಮಾಡುವುದು ಹೆಚ್ಚಾಗಿದೆ. ನನ್ನ ಮಟ್ಟಿಗೆ ರಾತ್ರಿಯ ನಿಶಬ್ದದ ವಾತಾವರಣದಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಬಹುದು. ನನಗೋ ಯಾವುದಾದರು ಕೆಲಸ ಮನಸ್ಸಿಗೆ ಹಿಡಿಸಿದರೆ ಅದನ್ನು ಮುಗಿಸುವ ತನಕ ನೆಮ್ಮದಿ ಸಿಗುತ್ತಿರಲಿಲ್ಲ. ರಾತ್ರಿ ಎಷ್ಟೇ ಹೊತ್ತಾದರೂ ಮುಗಿಸಲೇಬೇಕು ಎಂಬಂತಹ ಸ್ವಭಾವ ನನ್ನದು. ಮೊದಲೆಲ್ಲಾ ಕೆಲಸದ ಮೇಲೆ ಅಷ್ಟಾಗಿ ಆತ್ಮವಿಶ್ವಾಸ ಇರಲ್ಲಿಲ್ಲ. ಒಂದು ದಿನ ತೀರ್ಮಾನಿಸಿದೆ, ನಾನು ನಿರ್ವಹಿಸಬೇಕಾಗಿರುವ ತತ್ವವನ್ನು ಮೂಲದಿಂದ ಅರ್ಥೈಸಿಕೊಳ್ಳಬೇಕು ಎಂದು. ಅಂದು ಬೇರೆ ಏನು ಕೆಲಸ ಮಾಡದೆ ಹುಡುಕಾಟ ಶುರುಮಾಡಿದೆ. ಅರ್ಥ ಮಾಡಿಕೊಂಡದನ್ನು notes ಮಾಡಿಕೊಳ್ಳುತ್ತಾ ಹೋದೆ. ಸಂಜೆ ಹೊತ್ತಿಗೆ ಒಂದಷ್ಟು ವಿಚಾರಗಳು ಅರ್ಥವಾದವು. Independent ಆಗಿ ಕೆಲಸ ಮಾಡಬಹುದು ಎಂಬ ವಿಶ್ವಾಸ ಮೂಡಿತು. ನನ್ನ ಈ ನಂಬಿಕೆಯನ್ನು ಒರೆಗೆ ಹಚ್ಚಿ ನೋಡುವ ಸಂದರ್ಭ ಬೇಗಲೇ ಒದಗಿಬಂತು.

ಅದೊಂದು ಗುರುವಾರ ಒಂದು feature implementation ಅನ್ನು ಎರಡೇ ದಿನಗಳಲ್ಲಿ ಮುಗಿಸಬೇಕು ಎಂಬಂತಹ ಪರಿಸ್ಥಿತಿ ಬಂತು. ಅಂದು ರಾತ್ರಿ ಕಚೇರಿಯಲ್ಲೇ ಉಳಿಯಬೇಕಾಯಿತು. ರಾತ್ರಿ ಅಲ್ಲೇ ಊಟ ಮಾಡಿ ಕೆಲಸ ಶುರುಮಾಡಿದೆ. ಬೆಳಿಗ್ಗೆ ನಮ್ಮ ತಂಡದವರಿಗೆ ಆಶ್ಚರ್ಯ ರಾತ್ರಿ ಅಲ್ಲೇ ಉಳಿದು ಕೆಲಸ ಮಾಡಿದ್ದೇನಲ್ಲಾ ಎಂದು. ಬೆಳಿಗ್ಗೆ ಉಪಹಾರ ಮುಗಿಸಿ ಮತ್ತೆ ಕೆಲಸ ಶುರುಮಾಡಿದೆ. ಸಂಜೆ 4:00 ತನಕ ಒಂದು ರೀತಿ marathon ಓಡಿದಂತೆ ಕೆಲಸ ಮಾಡಿದೆ. ಮಧ್ಯಾಹ್ನ ಊಟ ಮಾಡುವ ಯೋಚನೆ ಕೂಡ ಬರಲಿಲ್ಲ. ಕೆಲಸ ಮುಗಿಸಿದ ನಂತರ ಮನಸ್ಸಿಗೆ ಒಂದು ರೀತಿಯ ನೆಮ್ಮದಿ ಮತ್ತು ಅದನ್ನು ಅನುಭವಿಸಿಯೇ ಅರ್ಥ ಮಾಡಿಕೊಳ್ಳಬೇಕು. ಈಗಲೂ ನೆನಪಿದೆ, ಕೆಲಸ ಮುಗಿಸಿ ಕೂತಾಗ ಕಾಲು ನಡುಗುತ್ತಿತ್ತು. ಆದರೆ, ಮನಸ್ಸಿಗೆ ಸಮಾಧಾನವಾಗಿತ್ತು.

ಕೆಲವು ಸಲ ಯಾವುದಾದರು ಕ್ಲಿಷ್ಟವಾದ ಸಮಸ್ಯೆಯನ್ನು ಪರಿಶೀಲಿಸಬೇಕಾದಾಗ ಮನಸ್ಸು ಒಂದೆಡೆ ಸಿಕ್ಕಿಹಾಕಿಕೊಳ್ಳುತ್ತಿತ್ತು. Change of work is rest ಅನ್ನುವ ಹಾಗೆ ಹೊರಗೆ ಓಡಾಡುವುದೋ, ಟೀ ಅಥವಾ ಹಾಲು ಕುಡಿಯುವುದು ಅಥವಾ ಇಷ್ಟವಾದ ಹಾಡನ್ನು ಕೇಳುವುದು ನನ್ನ ಅಭ್ಯಾಸ. ಇದೆಲ್ಲಕ್ಕಿಂತಲೂ ಹೆಚ್ಚು ಮಾಡುತ್ತಿದ್ದದ್ದು youtube ಅಲ್ಲಿ ಸಾಯಿಕುಮಾರ್ ರವರ ಚಿತ್ರದ ಕೆಲವು ದೃಶ್ಯವನ್ನು ನೋಡುವುದು. ಅದರಿಂದ ಮನಸ್ಸು ಬೇರೆಡೆ ಹೋಗುತ್ತಿತ್ತು. ಸ್ವಲ್ಪ ಸಮಯದ ನಂತರ ಮತ್ತೆ ಕೆಲಸ ಶುರು ಮಾಡುತ್ತಿದೆ. ಅನೇಕ ಬಾರಿ ಈ ಪ್ರಕ್ರಿಕೆ ಕೆಲಸ ಮಾಡಿದ್ದುಂಟು.

Volvo ತಂಡದಲ್ಲಿದ್ದಾಗ ನಾನು software architect ಆಗಿದ್ದ project ಅಲ್ಲಿ 3-4 ತಿಂಗಳಿಂದ ಒಂದು ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದೆವು. ಕೆಲವು ತಜ್ಞರ ಬಳಿ ಚರ್ಚೆ ಕೂಡ ನಡೆದಿತ್ತು. ಈ ಸಮಸ್ಯೆಯ ಕುರಿತು ಇತರೆ ತಂಡದ ನನ್ನ ಸ್ನೇಹಿತರ ಜೊತೆಗೂ ಚರ್ಚೆ ಮಾಡಿದ್ದು ಉಂಟು. ಆದರೆ, ಪರಿಹಾರ ಮಾತ್ರ ಸಿಕ್ಕಿರಲಿಲ್ಲ. ಅದೊಂದು ರಾತ್ರಿ ಬಹುಶಃ 2:00 ರ ತನಕ ನನ್ನ ಹಾಲಿ ಮತ್ತು ಮಾಜಿ ಸಹೋದ್ಯೋಗಿಗಳ ಜೊತೆಗೆ conference call ಅಲ್ಲಿ ಚರ್ಚೆ ಮಾಡಿ ಮಲಗಿದೆ. ಈ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಅನ್ನಿಸುವುದರಲ್ಲಿತ್ತು. ಆ ದಿನ ಬೆಳಗಿನ ಜಾವ ಅದೇನು ಅರೆ ನಿದ್ರೆಯಲ್ಲೋ ಅಥವಾ ಕನಸಿನಲ್ಲೋ ನನಗೆ ನೆನಪಿಲ್ಲ ಆದರೆ, ಪರಿಹಾರವೊಂದು ಹೊಳೆಯಿತು. ಬೆಳಿಗ್ಗೆ 6:25 ಸಮಯ, ಎದ್ದು ನನಗೆ ಹೊಳೆದ ಪರಿಹಾರವನ್ನು implement ಮಾಡಿ ಪರೀಕ್ಷಿಸಿದೆ, ಕೆಲಸ ಮಾಡಿತು! ಆ ಕ್ಷಣ ಒಂದು ರೀತಿ ಜಗತ್ತನ್ನು ಗೆದ್ದ ಅನುಭವ. ನನ್ನ manager ಗೆ, ರಾತ್ರಿ ಚರ್ಚೆ ಮಾಡಿದ್ದ ಇಬ್ಬರಿಗೆ ಅದೇ ಹೊತ್ತಲ್ಲಿ ಕರೆ ಮಾಡಿ ಈ ವಿಚಾರ ಹಂಚಿಕೊಂಡೆ. ಯಾವುದೇ ಕೆಲಸವಾಗಲಿ ತಪಸ್ಸಿನ ರೀತಿ ನಮ್ಮ ಮೇಲೆ ನಂಬಿಕೆ ಇಟ್ಟು ಮಾಡಿದ್ದಲ್ಲಿ ಅದು ಸಫಲವಾಗುತ್ತದೆ ಎಂಬುದನ್ನು ನಾನು ಕಲಿತದ್ದು ಹೀಗೆ. ಈ ಪರಿಹಾರವನ್ನು ನನಗೆ ಯಾರೂ ಹೇಳಿದ್ದಲ್ಲ ಅಥವಾ ಎಲ್ಲೂ ನೋಡಿಯೂ ಇಲ್ಲ. ಇದು ನನಗೆ ಗೋಚರವಾಯಿತು (intuition ಕೆಲಸ ಮಾಡಿತು) ಎಂದೇ ನಾನು ಈವರಿಗೂ ನಂಬಿದ್ದೇನೆ.

ಕೆಲಸದಲ್ಲಿ ನಾನು ಅನೇಕ ತಪ್ಪುಗಳನ್ನು ಮಾಡಿದ್ದೇನೆ. ಹಾಗೆ ಮಾಡಿದಾಗಲೆಲ್ಲ ಇತರರಿಗಿಂತ ನನಗೆ ನನ್ನ ಮೇಲೆ ಬೇಸರವಾಗಿದೆ, ನನಗೆ ನಾನೇ ಬೈದುಕೊಂಡಿದ್ದೇನೆ. ಆದರೆ, ಎಂದು ಕೂಡ ಧೈರ್ಯಗೆಡಲಿಲ್ಲ. ಮಾಡಿದ ತಪ್ಪನ್ನು ನಾನೇ ಸರಿ ಮಾಡಿ ಮತ್ತೆ ಅದೇ ತಪ್ಪಾಗದಂತೆ ಎಚ್ಚರ ವಹಿಸಿದ್ದೇನೆ. ಇನ್ಯಾವುದೋ ಹೊಸ ತಪ್ಪನ್ನು ಮಾಡುತ್ತಿದ್ದೆ. ಹೆಚ್ಚಾಗಿ ನನ್ನನ್ನು ಕಾಡಿದ್ದು CPD (Copy Paste Defects). ಬೇರೊಂದು ಕಡೆಯಿಂದ copy ಮಾಡಿ ನಾನು ಬರೆಯಬೇಕಿದ್ದ ಕಡೆ ಅದನ್ನು ಉಪಯೋಗ ಮಾಡಿದಾಗಲೆಲ್ಲಾ ಏನಾದರು ಒಂದು ತಪ್ಪಾಗುತ್ತಿತ್ತು. ಅದರ ಪರಿಣಾಮ ತುಂಬಾ ಗಂಭೀರವಾಗಿರುತ್ತಿತ್ತು. ಆದರೆ, ತಪ್ಪನ್ನು ಹುಡುಕಿದಾಗ ಅದು silly mistake ಆಗಿರುತ್ತಿತ್ತು. ಈ ತಪ್ಪುಗಳು ನನ್ನನ್ನು ಅನೇಕ ವರ್ಷಗಳು ಕಾಡಿದೆ. ನನ್ನ ಅನೇಕ ಸಹೋದ್ಯೋಗಿಗಳು ಈ ವಿಚಾರವಾಗಿ ನನ್ನನ್ನು ರೇಗಿಸಿದ್ದು ಉಂಟು.

ಮತ್ತೊಂದು ಸಲ ಯಾವುದೋ ಒಂದು ಕೆಲಸವನ್ನು 100 ಗಂಟೆ ಎಂದು ಅಂದಾಜು ಮಾಡಿದ್ದೆ. ಪ್ರಾರಂಭದಲ್ಲಿ ಆ ಕೆಲಸಕ್ಕೆ ಅಷ್ಟು ಹೊತ್ತು ಬೇಕಾಗಿತ್ತು ಎಂಬುದು ನಿಜವಾಗಿತ್ತು. ನಂತರ ಆ ಕೆಲಸದಲ್ಲಿ ತಿದ್ದುಪಡಿಗಳಾಗಿ ಕೇವಲ 3 ಗಂಟೆಯಲ್ಲಿ ಮುಗಿದಿತ್ತು. ಕೆಲಸ ಮಾಡಿದ ಅವಧಿಯನ್ನು ಮೂರು ಎಂದೇ ದಾಖಲಿಸಿದೆ. ಮಾರನೆ ದಿವಸ manager ನನ್ನನ್ನು ಕರೆದು ನನ್ನ ತಪ್ಪನ್ನು ನನಗೆ ಅರ್ಥ ಮಾಡಿಸಿದರು. 100 ಗಂಟೆ ಎಂದು ಅಂದಾಜಿಸಿ ಕೇವಲ 3 ಗಂಟೆಯಲ್ಲಿ ಮುಗಿದಿದೆ ಎಂದರೆ ಏನೋ ಗಂಭೀರ ತಪ್ಪಾಗಿದೆ ಎಂದು ಹೊರಜಗತ್ತಿಗೆ ತೋರಿಸಿದಂತಾಗುತ್ತದೆ, ಆದ್ದರಿಂದ ಜೋಪಾನ ಎಂದು ತಪ್ಪನ್ನು ಸರಿ ಪಡಿಸಿದರು. ಅದೇ ಕೊನೆ, ಈ ರೀತಿಯ ತಪ್ಪು ಮತ್ತೆ ಮರುಕಳಿಸಲಿಲ್ಲ. ನನಗೆ ಸಿಕ್ಕ manager ಗಳು ನನ್ನ ತಪ್ಪನ್ನು ಸಹಿಸಿಕೊಂಡು, ತಿದ್ದಿ, ನನ್ನ ಮೇಲೆ ನಂಬಿಕೆ ಇಟ್ಟು ಹೆಚ್ಚಿನ ಜವಾಬ್ದಾರಿಯನ್ನು ಕೊಟ್ಟರು. ಅವರು ನನ್ನನ್ನು ನಂಬದೇ ಇದ್ದಿದ್ದರೆ ನಾನು ಕುಸಿದು ಹೋಗುತ್ತಿದ್ದೆ ಅಥವಾ Bosch ಯಿಂದ ಹೊರ ಹೋಗುತ್ತಿದ್ದೆ. ಆದರೆ, ಆ ನಂಬಿಕೆಯ ಭಾವದಿಂದಲೇ ನನ್ನ ಸಾಮರ್ಥ್ಯ ಹೆಚ್ಚಿತು. ಹಾಗಾಗಿ ನನ್ನ managers ಗಳಿಗೆ ಈ ಮೂಲಕ ನನ್ನ ಧನ್ಯವಾದಗಳು.

ವೃತ್ತಿ ಬದುಕನ್ನು ಶುರು ಮಾಡುವ ಮುನ್ನ ವಿದೇಶಿಯರ ಮಾತು ಕೇಳಿದ್ದು ಕ್ರಿಕೆಟ್ ನೋಡಬೇಕಾದರೆ ಮಾತ್ರ. ಒಂದೆರಡು ಆಂಗ್ಲ ಭಾಷೆಯ ಚಿತ್ರಗಳನ್ನು ನೋಡಿದ್ದೆ ಆದರೂ ಅವರು ಮಾತಾಡುವ ರೀತಿ ಅರ್ಥವಾಗುತ್ತಿರಲಿಲ್ಲ. Bosch ಗೆ ಬಂದ ಮೇಲೆ ಮೊದಲ ಬಾರಿಗೆ ವಿದೇಶಿಯರ ಜೊತೆ ಮಾತಾಡಿದ್ದು. ಅಚ್ಚರಿ ಎಂದರೆ ಅವರ ಶೈಲಿ ಮತ್ತು ಭಾಷೆ ನನಗೆ ಸುಲಭವಾಗಿ ಅರ್ಥವಾಗುತ್ತಿತ್ತು. ಜರ್ಮನಿ, ಚೀನಾ, ಅಮೇರಿಕಾ, ಸ್ವೀಡನ್, ಕೊರಿಯಾ, ವಿಯೆಟ್ನಾಮ್ ಮತ್ತು ಜಪಾನ್ ದೇಶದವರ ಜೊತೆ ನಾನು ಮಾತಾಡಿದ್ದೇನೆ, ಕೆಲಸ ಮಾಡಿದ್ದೇನೆ. ಇದರ ಮೂಲಕ ಆಯಾ ದೇಶದವರು ಕೆಲಸ ಮಾಡುವ ರೀತಿಯನ್ನು ಅರ್ಥ ಮಾಡಿಕೊಳ್ಳುವ ಅವಕಾಶ ನನಗೆ ಸಿಕ್ಕಿತು. ಜರ್ಮನಿ, ಸ್ವೀಡನ್, ಚೀನಾ ದೇಶಗಳಿಗೆ ಹೋಗಿ ಅಲ್ಲಿನ ಕೆಲಸದ ರೀತಿಯನ್ನು ಪ್ರತ್ಯಕ್ಷ ಕಂಡು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಅನೇಕ ಸಹೋದ್ಯೋಗಿಗಳು, ಕೆಲವು customer ಗಳು ಅವರ ಮಾತು, ಕೆಲಸದ ಮೂಲಕ ನನಗೆ ಪರೋಕ್ಷವಾಗಿ ಪಾಠ ಮಾಡಿದ್ದಾರೆ. ಅವರೆಲ್ಲರಿಗೂ ಈ ಮೂಲಕ ನನ್ನ ಧನ್ಯವಾದಗಳು.  

*********************************************************************** 

ಸಾಗರದಾಚೆಗಿನ ಅನುಭವ

ಹತ್ತು ವರ್ಷದ ಈ ಅವಧಿಯಲ್ಲಿ ಮೂರು ಬಾರಿ ಜರ್ಮನಿ, ಎರಡು ಬಾರಿ ಚೀನಾ ಮತ್ತು ಒಂದು ಬಾರಿ ಸ್ವೀಡನ್ ದೇಶಗಳಿಗೆ ಹೋಗುವ ಅವಕಾಶ ಒದಗಿಬಂತು. ಚೀನಾಕ್ಕೆ ಎರಡು ಸಲವೂ ಎರಡು ವಾರಗಳ ಕಾಲ, ಸ್ವೀಡನ್ನಿಗೆ ಒಂದು ವಾರ ಮತ್ತು ಜರ್ಮನಿಗೆ ಮೊದಲ ಬಾರಿಗೆ ಮೂರು ತಿಂಗಳು, ಮಿಕ್ಕ ಎರಡು ಸಲ ಎರಡೆರಡು ವಾರಗಳ ಕಾಲ ಹೋಗಿದ್ದೆ. ಅಲ್ಲಿನ ಅನುಭವಗಳ ಬಗ್ಗೆ ಈಗಾಗಲೇ ನನ್ನ ಬ್ಲಾಗಿನಲ್ಲಿ ಬರೆದಿದ್ದೇನೆ. ಅದರ link ಅನ್ನು ಕೆಳಗೆ ಕೊಟ್ಟಿದ್ದೇನೆ.



***********************************************************************

ಕೆಲಸದ ಹೊರತು

ಕೆಲಸಕ್ಕೆ ಸೇರಿದ ಹೊಸತರಲ್ಲಿ ನಾನು ಕಚೇರಿಯ ಬಸ್ಸಲ್ಲಿ ಓಡಾಡುತ್ತಿದ್ದೆ. ಬಸ್ಸಿನ ಸದಸ್ಯರೊಂದಿಗೆ 'Bosch During Ramayana' ಎಂಬ ನಾಟಕ ಮಾಡಿದ್ದೆವು. ರಾಮಾಯಣದ ಕಾಲದಲ್ಲಿ Bosch ಇದ್ದಿದ್ದರೆ ಏನಾಗಬಹುದಿತ್ತು ಎಂಬ ಕಲ್ಪನೆಯ ನಾಟಕ. ಸೀತಾನ್ವೇಷಣೆಗೆ ಹನುಮಂತ Bosch Navigation System ಬಳಸಿದ್ದ ಎನ್ನುವ ರೀತಿಯ ನಾಟಕವದು. ನನ್ನ ಹಿರಿಯ ಸ್ನೇಹಿತ ವಿನಯ್ ಮತ್ತು ನಾನು ಕಥೆ ಬರೆದು, ಸಂಭಾಷಣೆ ಬರೆದು ವಿನಯ್ ರಾಮನಾಗಿ ನಾನು ಹನುಮಂತನಾಗಿ ನಟಿಸಿ, ನಿರ್ದೇಶನ ಮಾಡಿದ್ದೆವು. ನಾನು ಕೂಡ stage ಹತ್ತಬಹುದು ಎಂಬಂತಹ ವಿಶ್ವಾಸ ಈ ಘಟನೆ ತುಂಬಿತು. ಇದೊಂದು ಸಾಂಸೃತಿಕ ಚಟುವಟಿಕೆಯ ಸ್ಪರ್ಧೆಯಾಗಿತ್ತು. ನಮ್ಮ ನಾಟಕಕ್ಕೆ ಮೊದಲ ಬಹುಮಾನ ಬಂದಿತ್ತು.

ನಮ್ಮ department ಅಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದೆವು. ಆಗ ನಾನು ಕಾರ್ಗಿಲ್ ಯುದ್ಧ ಮತ್ತು ಗ್ರೆನೇಡಿಯರ್ ಯೋಗಿಂದ್ರ ಸಿಂಗ್ ಯಾದವರ ಬಗ್ಗೆ ಮಾತಾಡಿದ್ದೆ. ನಮ್ಮ ತಂಡದ ಮೂರು cubicle ಗಳನ್ನು ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳಿಂದ ಅಲಂಕರಿಸಿದ್ದೆವು. ಮತ್ತೊಂದು ಬಾರಿ ಬೇರೊಂದು department ಅವರು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಪ್ರಾಸ್ತಾವಿಕ ನುಡಿಗಳನ್ನಾಡಿದ್ದೆ. ನನ್ನ ಕನಸಿನ ಕರ್ನಾಟಕದ ಕುರಿತು ಮಾತಾಡುವ ಅವಕಾಶ ಒದಗಿತು.

ಈ ವರ್ಷ 'Leadership Insights From Freedom Fighters' ಕಾರ್ಯಕ್ರಮದಲ್ಲಿ ನಮ್ಮ ನೆಚ್ಚಿನ ಸ್ವಾತಂತ್ರ್ಯ ಹೋರಾಟಗಾರರ ನಾಯಕತ್ವದ ಗುಣಗಳ ಬಗ್ಗೆ ಮಾತಾಡುವ ಕಾರ್ಯಕ್ರಮವಿತ್ತು. ಗಾಂಧಿ, ಸುಭಾಷ್, ಜಾನ್ಸಿ ರಾಣಿ ಲಕ್ಷ್ಮಿ ಬಾಯಿ, ರಾಣಿ ಅಬ್ಬಕ್ಕ, ಭಗತ್ ಸಿಂಗ್ ಮುಂತಾದವರ ಬಗ್ಗೆ ಮಾತಾಡಿದರು. ನಾನು ಚಂದ್ರಶೇಖರ್ ಆಜಾದರನ್ನು ಆಯ್ಕೆ ಮಾಡಿಕೊಂಡು ಮಾತಾಡಿದೆ.

Presentation About Chandrashekar Azad
 
***********************************************************************
 
ಹತ್ತು ವರ್ಷದ ಅನುಭವದಲ್ಲಿ ಕೆಲವು ವಿಚಾರಗಳನ್ನಷ್ಟೇ ಹಂಚಿಕೊಂಡಿದ್ದೇನೆ, ಕೆಲವರ ಹೆಸರನ್ನಷ್ಟೇ ಬರೆದಿದ್ದೇನೆ. ಕೆಲಸದಲ್ಲಿ ಜೊತೆಯಾಗಿದ್ದವರು, ಪಾಠ ಕಲಿಸಿದವರು ಅನೇಕರಿದ್ದಾರೆ. ಅವರೆಲ್ಲರಿಗೂ ನನ್ನ ಧನ್ಯವಾದಗಳು. ಇಲ್ಲಿ ನಡೆದಿರುವ ರಾಜಕೀಯವನ್ನು ಗಮನಿಸಿದ್ದೆನಾದರೂ ಅದರ ಬಗ್ಗೆ ಮಾತಾಡುವ ಇಚ್ಛೆ ನನಗಿಲ್ಲ ಹಾಗಾಗಿ ಆ ವಿಚಾರವನ್ನು ಬಿಟ್ಟಿದ್ದೇನೆ. ನನ್ನ ಜಾಗದಿಂದ ಎದ್ದು ಹೋಗಿ ಯಾರಾದರೂ ಹಿರಿಯರನ್ನು ಮಾತಾಡಿಸಲು ನಾನು ಹೆದರುತ್ತಿದ್ದೆ ಎಂದರೆ ಈಗ ನನ್ನೊಂದಿಗೆ ಕೆಲಸ ಮಾಡುವವರು ಅದನ್ನು ನಂಬುವುದಿಲ್ಲ. ಈ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ದೇನೆ ಅನ್ನುವರು. ಅಷ್ಟು ಬದಲಾಗಿದ್ದೇನೆ. ಕೆಲಸ ಮಾಡಿದ್ದೇನೆ ಎನ್ನುವುದಕ್ಕಿಂತ Bosch ಕೆಲಸ ಮಾಡಿಸಿಕೊಂಡಿದೆ. ವಯ್ಯಕ್ತಿಕ ಬದುಕಿನ ನೋವುಗಳನ್ನು ಸಹ ಮರೆಸಿ, ನೆಮ್ಮದಿ ನೀಡಿದೆ ಎಂಬುದು ಸಹಜವೇ, ಅತಿಶಯೋಕ್ತಿ ಅಲ್ಲ. ಮುಗಿಸುವ ಮುನ್ನ ಮತ್ತೊಮ್ಮೆ Bosch ಗೆ ಧನ್ಯವಾದಗಳು.

September 13, 2021

ಸೆಪ್ಟೆಂಬರ್ 11 - ಭಾರತದ ಸಂತನೋರ್ವ ವಿಶ್ವವಿಜೇತನಾದ ದಿವಸ

9/11 ಎಂದೊಡನೆ ಬಹುತೇಕರಿಗೆ ನೆನಪಾಗೋದು ಒಸಾಮ ಬಿನ್ ಲಾಡೆನ್ ನೇತೃತ್ವದ ಅಲ್ ಖೈದಾದ ಭಯೋತ್ಪಾದಕರು ಅಮೇರಿಕಾದಲ್ಲಿದ್ದ ವಿಶ್ವವಾಣಿಜ್ಯ ಕಟ್ಟಡವನ್ನು ಉರುಳಿಸಿದ್ದು. ಇದರಲ್ಲಿ ಹೆಚ್ಚೇನು ಅಶ್ಚರ್ಯ ಇಲ್ಲ ಬಿಡಿ. ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದು ಹೆಚ್ಚು ಪ್ರಚಾರವಾಗುತ್ತದೆ ಮತ್ತು ಅದೇ ನೆನಪಿನಲ್ಲಿ ಇರುತ್ತದೆ. ಸೆಪ್ಟಂಬರ್ 11 ಎಂದರೆ ಭಾರತದ ಮತ್ತು ಹಿಂದೂ ಸಂಸ್ಕೃತಿಯ ಪಾಲಿಗೆ ಮಾತ್ರ ಹೆಮ್ಮೆ ಪಡುವಂತಹ ದಿವಸ. 1893ನೇ ಇಸವಿಯಲ್ಲಿ ಇದೇ ಅಮೇರಿಕಾದ ಚಿಕಾಗೋದಲ್ಲಿ ಭಾರತ ಸಿಡಿಲ ಸಂತ ಸ್ವಾಮೀ ವಿವೇಕಾನಂದ ತಮ್ಮ ವಾಗ್ಝರಿಯ ಮೂಲಕ ಇಡೀ ಜಗತ್ತನ್ನೇ ಮಣಿಸಿದ್ದರು. "ಸಿಸ್ಟರ್ಸ್ ಅಂಡ್ ಬ್ರದರ್ಸ್ ಆಫ಼್ ಅಮೇರಿಕಾ" ಅವರು ಹೇಳಿದ ಐದೇ ಐದು ಪದಗಳಿಗೆ ಸಭೆಯಲ್ಲಿ ನೆರೆದಿದ್ದ ಅಷ್ಟೂ ಜನ ಬರೋಬ್ಬರಿ ಎರಡು ನಿಮಿಷ ಕರತಾಡನ ಮಾಡಿದ್ದು ಈಗ ಇತಿಹಾಸ. ಅಮೇರಿಕಾ ಕಂಡು ಹಿಡಿದ 400 ವರ್ಷದ ಸಂಭ್ರಮಾಚರಣೆ ಪ್ರಯುಕ್ತವಾಗಿ ಸರ್ವಧರ್ಮ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಜಗತ್ತಿನಲ್ಲಿ ಕ್ರೈಸ್ತ ಧರ್ಮವೇ ಎಲ್ಲಕ್ಕಿಂತ ಶ್ರೇಷ್ಠ ಧರ್ಮ ಎಂದು ಪ್ರಚುರಪಡಿಸಲು ಅಮೇರಿಕನ್ನರು ಮುಂದಾಗಿದ್ದರು. ಆದರೆ, ಅವರ ಉದ್ದೇಶವನ್ನು ಧೂಳಿಪಟ ಮಾಡಿ, ಭಾರತದ ಹಿಂದೂ ಧರ್ಮದ ಸತ್ವದ ಬಗ್ಗೆ ಇಡೀ ಜಗತ್ತಿಗೆ ಪಾಠ ಮಾಡಿದ್ದು ಸ್ವಾಮೀಜೀ. 9/11 ಎಂದರೆ ಜಗತ್ತಿಗೆ ಏನಾದರೂ ನೆನಪಾಗಲಿ ಆದರೆ, ಭಾರತಕ್ಕೆ ಮಾತ್ರ ನೆನಪಾಗುವುದು, ನೆನಪಾಗಬೇಕಾಗಿರುವುದು ವಿಶ್ವವಿಜೇತ ಸ್ವಾಮೀ ವಿವೇಕಾನಂದ ಮಾತ್ರ!

Swami Vivekananda at the World Parliament of Religions, Chicago, 1893

Steps of Art Institute of Chicago

ಸ್ವಾಮೀ ವಿವೇಕಾನಂದರಿಗೆ ಅಮೇರಿಕಾಗೆ ಹೋಗುವ ಉದ್ದೇಶ ಇತ್ತು ಎಂಬುದು ಖಚಿತವಾಗಿ ಹೇಳಲಾಗುವುದಿಲ್ಲ. ಆಂಗ್ಲರ ಕಪಿಮುಷ್ಠಿಯಿಂದ ಬಿಡಿಸಿ ಭಾರತವನ್ನು ಎತ್ತರದ ಸ್ಥಾನದಲ್ಲಿ ಬೆಳಗಿಸಬೇಕು ಎಂಬುದು ಅವರ ಆಶಯವಾಗಿತ್ತು. ಆದರೆ, ಅದಕ್ಕಾಗಿ ಅವರಿಗೆ ಏನು ಮಾಡಲು ತೋಚದೆ 'ನನ್ನಿಂದ ಏನು ಆಗದಿದ್ದರೆ ಸಮುದ್ರಕ್ಕೆ ಹಾರಿ ಪ್ರಾಣ ಬಿಡುತ್ತೇನೆ' ಎಂದು ಕನ್ಯಾಕುಮಾರಿಯ ಸಮುದ್ರಕ್ಕೆ ಹಾರಿ, ಈಜಿ ಅಲ್ಲಿದ್ದ ಬಂಡೆಯನ್ನೇರಿ ತಪಸ್ಸಿಗೆ ಕೂರುತ್ತಾರೆ. ಡಿಸೆಂಬರ್ 25 ರಿಂದ ಮೂರು ದಿನಗಳ ಕಾಲ ಭಾರತದ ಕುರಿತು ತಪ್ಪಸ್ಸು ಮಾಡುತ್ತಾರೆ. ತಪಸ್ಸಿನ ಫಲವಾಗಿ ತಮ್ಮ ಗುರುದೇವ ಶ್ರೀ ರಾಮಕೃಷ್ಣರು ಸ್ವಾಮೀಜೀಗೆ ಪಶ್ಚಿಮಕ್ಕೆ ಹೋಗಲು ಆದೇಶಿಸುತ್ತಾರೆ. ಸ್ವಾಮೀಜೀಯ ಭಕ್ತನಾದ ಖೇತ್ರಿಯ ಮಹಾರಾಜ ತನ್ನ ಪುತ್ರನ ನಾಮಕರಣಕ್ಕಾಗಿ ವಿವೇಕಾನಂದರನ್ನು ಕರೆಸಿಕೊಂಡು ಅವರ ಅಪೇಕ್ಷೆಯನ್ನರಿತು ನಮ್ಮ ದೇಶದ ಪ್ರತಿನಿಧಿಯಾಗಿ ಅಮೇರಿಕಾಗೆ ಕಳಿಸಿಕೊಡುತ್ತಾರೆ. ಹಡಗಿನಲ್ಲಿ ಸ್ವಾಮೀಜೀಗೆ ಜಮ್ಶೇಡ್ ಜೀ ಟಾಟಾರ ಭೇಟಿಯಾಗುತ್ತದ್ದೆ. ಸ್ವಾಮೀಜೀಯ ಪ್ರೇರಣೆಯಿಂದ ಟಾಟಾ ಭಾರತದಲ್ಲಿ ಐ.ಐ.ಎಸ್.ಸಿ. ಅನ್ನು ಸ್ಥಾಪಿಸಿದರು. ಅಮೇರಿಕಾಗೆ ಹೋಗಿ ಇಳಿದ ಮೇಲೆ ಸ್ವಾಮೀಜೀಗೆ ತಾನು ಮೂರು ತಿಂಗಳ ಮುಂಚಿತವಾಗಿಯೇ ಸಮ್ಮೇಳನಕ್ಕೆ ಬಂದಿದ್ದೇನೆ ಎಂದು ತಿಳಿಯುತ್ತದೆ. ಕಡಿಮೆ ಖರ್ಚು ಎಂಬ ಕಾರಣಕ್ಕೆ ಸ್ವಾಮೀಜೀ ಬೋಸ್ಟನ್ ನಗರದಲ್ಲಿ ಉಳಿಯುತ್ತಾರೆ. ಬೋಸ್ಟನ್ನಲ್ಲಿ ಹಾರ್ವರ್ಡ್ ಯೂನಿವರ್ಸಿಟಿಯ ಪ್ರೊ.ಜಾನ್ ರೈಟ್ ಅನ್ನು ಭೇಟಿಯಾಗುವ ಅವಕಾಶವಾಗುತ್ತದೆ. ಅವರ ಜೊತೆ ಚರ್ಚೆ ಮಾಡಿದ ನಂತರ ಸರ್ವಧರ್ಮ ಸಮ್ಮೇಳನಕ್ಕೆ ಭಾಷಣಕಾರನಾಗಿ ಹೋಗಲು ತನಗೊಂದು ಪರಿಚಯ ಪತ್ರ ಬರೆದು ಕೊಡುವಂತೆ ಸ್ವಾಮೀಜೀ ಕೇಳುತ್ತಾರೆ. 'ನಿಮಗೆ ಪರಿಚಯ ಕೇಳುವುದು ಸೂರ್ಯನಿಗೆ ಹೊಳೆಯುವುದಕ್ಕೆ ಅಧಿಕಾರವೇನಿದೆ ಎಂದು ಕೇಳಿದಂತೆ' ಎಂದು ರೈಟ್ ಹೇಳುತ್ತಾರೆ. ಆದರೂ, ನಿಯಮಾನುಸಾರ 'ನಮ್ಮಲ್ಲಿ ಇರುವಂತಹ ಎಲ್ಲಾ ಬುದ್ಧಿವಂತರಿಗಿಂತಲೂ ಹೆಚ್ಚು ತಿಳಿದವರು ಸ್ವಾಮೀಜೀ. ತನ್ನ ನಾಲ್ಕುನೂರು ವರ್ಷದ ಇತಿಹಾಸದಲ್ಲಿ ಇಂತಹ ಬುದ್ಧಿವಂತನನ್ನು ಅಮೇರಿಕಾ ಕಂಡಿರಲಿಲ್ಲ' ಎಂದು ಬರೆದು ಒಂದು ಪರಿಚಯ ಪತ್ರವನ್ನು ಕೊಡುತ್ತಾರೆ. ಸಮ್ಮೇಳನದಲ್ಲಿ ಭಾಷಣ ಮಾಡುವ ತನಕ ಯಾರಿಗೂ ಪರಿಚಯವಿಲ್ಲದಿದ್ದ ಸ್ವಾಮೀಜೀ ಒಮ್ಮೆಲೆ ಅಮೇರಿಕಾ ಪೂರ ಚರ್ಚೆಯ ವ್ಯಕ್ತಿಯಾಗುತ್ತಾರೆ. ಅಲ್ಲಿನ ಅನೇಕ ಪತ್ರಿಕೆಗಳು ಸ್ವಾಮೀಜೀಯನ್ನು ಸಮ್ಮೇಳನದ ಹೀರೋ ಎಂದು ಉದ್ಗರಿಸುತ್ತದೆ. ಅದಾದ ನಂತರ ಎರಡು ವರ್ಷಗಳ ಕಾಲ ಅಮೇರಿಕಾದಾದ್ಯಂತ ಸ್ವಾಮೀಜೀ ಪ್ರವಾಸ ಮಾಡಬೇಕಾಗುತ್ತದೆ. ಎಲ್ಲಾ ನಗರಗಳಲ್ಲೂ ಅವರ ಉಪನ್ಯಾಸದ ಕಾರ್ಯಕ್ರಮ ಆಯೋಜನೆಗೊಳ್ಳುತ್ತದೆ. ಜನರು ಅವರ ಉಪನ್ಯಾಸಕ್ಕೆ ಹಣಕೊಟ್ಟು ಬರುತ್ತಿದ್ದರು. ಸ್ವಾಮೀಜೀಯ ಹೆಸರಿನಲ್ಲಿ ಅಲ್ಲಿನ ಸಂಸ್ಥೆಯೊಂದು ಉಪನ್ಯಾಸಗಳನ್ನು ಏರ್ಪಡಿಸಿ ಹಣ ಮಾಡಿಕೊಂಡ ಘಟನೆಯೂ ಇದೆ.

Prof J.H. Wright praising Swami Vivekananda

American Newspapers Advertising Swami Vivekananda
Source: Chicago Tribune, November 1893

ಸ್ವಾಮೀಜೀಯ ಉಪನ್ಯಾಸಗಳಲ್ಲಿ ಭಾರತ ಮತ್ತು ಹಿಂದೂ ಧರ್ಮದ ಶ್ರೇಷ್ಟತೆ ಎದ್ದು ಕಾಣುತ್ತಿತ್ತು. ಕ್ರಿಶ್ಚಿಯನ್ನರನ್ನು ಮತ್ತು ಯುರೋಪಿಯನ್ನರನ್ನು ಕುರಿತು 'ನಿಮ್ಮವರನ್ನು ನೀವೇ ದೇಶಬಿಟ್ಟು ಓಡಿಸಿದಾಗ ಅಂತಹ ಜನರಿಗೆ ಆಶ್ರಯಕೊಟ್ಟ ದೇಶ ಭಾರತ. ಕತ್ತಿ ಹಿಡಿದು, ರಕ್ತ ಹರಿಸಿ ಎಲ್ಲರನ್ನು ಆಳುವುದನ್ನು ಶ್ರೇಷ್ಠ ಎಂಬುದನ್ನು ಹಿಂದೂ ಆದವನು ಎಂದೂ ಒಪ್ಪುವುದಿಲ್ಲ, ಅದು ಅವನ ಪಾಲಿಗೆ ಧರ್ಮವೇ ಅಲ್ಲ' ಎಂದು ಜಾಡಿಸುತ್ತಿದ್ದರು ಸ್ವಾಮೀಜೀ. ಇದೆಲ್ಲದರ ನಡುವೆ ಸ್ವಾಮೀಜೀಯನ್ನು ಜಗತ್ತು ಹೊಗಳುತ್ತಿದ್ದರೆ ಭಾರತದ್ದೂ ಸೇರಿದಂತೆ ಕೆಲವು ಪತ್ರಿಕೆಗಳು ಅವರನ್ನು ಟೀಕಿಸಲು ಶುರು ಮಾಡಿದವು. ಅವರು ಸನ್ಯಾಸಿಯೇ ಅಲ್ಲ, ಹಿಂದೂಧರ್ಮದ ಕುರಿತಂತೆ ಮಾತಾಡುವ ಅಧಿಕೃತ ವ್ಯಕ್ತಿತ್ವ ಅವರದಲ್ಲ ಎಂದರು. ಭಾರತದ ಹಿಂದೂ ಧರ್ಮದ ಸನ್ಯಾಸಿಯೊಬ್ಬ ಹೊಗಳಿಕೆ ಮತ್ತು ತೆಗಳಿಕೆ ಎರಡಕ್ಕೂ ಆತ ಬೆಲೆಕೊಡುವುದಿಲ್ಲ. ಹೊಗಳಿದಾಗ ಹಿಗ್ಗುವುದು, ತೆಗಳಿದಾಗ ಕುಗ್ಗುವುದು ಆತನ ಸ್ವಭಾವವಲ್ಲ. ಎಲ್ಲವನ್ನು ನಿರ್ಲಿಪ್ತತೆ ಇಂದ ಸ್ವೀಕರಿಸಿ, ತಾನು ಮಾತ್ರ ಅಚಲನಾಗಿ ನಿಲ್ಲುವುದು ಆತನ ಧರ್ಮ. ಅದರಂತೆ ಪತ್ರಿಕೆಗಳ ಹೊಗಳಿಕೆ ಮತ್ತು ತೆಗಳಿಕೆಗೆ ಸ್ವಾಮೀಜಿ ತಲೆಕೆಡಿಸಿಕೊಳ್ಳಲಿಲ್ಲ. ಹಾಗೆಂದು ಸ್ವಾಮೀಜೀ ಭಾರತ ಮತ್ತು ಹಿಂದೂ ಧರ್ಮದ ಬಗ್ಗೆ ಕೆಟ್ಟ ಮಾತಾಡುವವರ ಮುಂದೆ ಸುಮ್ಮನಿರುತ್ತಿರಲಿಲ್ಲ, ತೀಕ್ಷ್ಣವಾಗೆ ಪ್ರತಿಕ್ರಯಿಸುತ್ತಿದ್ದರು. ಸ್ವಾಮೀಜೀ ಧರಿಸುವ ಬಟ್ಟೆಯನ್ನು ನೋಡಿ 'ಈ ಮನುಷ್ಯ ಒಳ್ಳೆಯವನು ಅನ್ನಿಸುವುದಿಲ್ಲ' ಎಂದು ಹೆಣ್ಣುಮಗಳೊಬ್ಬಳು ತನ್ನ ಗಂಡನಿಗೆ ಹೇಳುತ್ತಾಳೆ. ಅದನ್ನು ಕೇಳಿ ಸ್ವಾಮೀಜೀ 'ನಿಮ್ಮ ದೇಶದಲ್ಲಿ ವ್ಯಕ್ತಿಯೊಬ್ಬನನ್ನು ಒಳ್ಳೆಯವನಾಗಿ ಮಾಡುವುದು ಟೈಲರ್. ಭಾರತದಲ್ಲಿ ವ್ಯಕ್ತಿಯ ಚಾರಿತ್ಯ ಅವನನ್ನು ಒಳ್ಳೆಯವನನ್ನಾಗಿ ಮಾಡುತ್ತದೆ' ಎಂದು ಹೇಳುತ್ತಾರೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸ್ವಾಮೀಜೀ ತಮ್ಮ ಕೆಲಸವನ್ನು ಮುಂದುವರೆಸುತ್ತಾರೆ. ಅಮೇರಿಕಾದಲ್ಲಿ ಅವರದೇ ಆದ ಶಿಷ್ಯವೃಂದ ರೂಪುಗೊಳ್ಳುತ್ತದೆ. ಅಲ್ಲೊಂದು ವೇದಾಂತ ಸೊಸೈಟಿ ಸ್ಥಾಪಿತವಾಗಲು ಸ್ವಾಮೀಜೀ ಪ್ರೇರೇಪಿತರಾಗುತ್ತಾರೆ. ಯೂರೋಪಿಗೆ ಬಂದ ಸ್ವಾಮೀಜೀಗೆ ಮಾರ್ಗ್ರೇಟ್ ನೊಬೆಲ್ ಎಂಬ ಶಿಷ್ಯೆ ಭಾರತಕ್ಕೆ ಅಕ್ಕ ನಿವೇದಿತೆಯಾಗಿ ಬರುತ್ತಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಕ್ಕನ ಕೊಡುಗೆ ಅಪಾರ ಮತ್ತು ಐತಿಹಾಸಿಕ.

ಮೊದಲೇ ಹೇಳಿದಂತೆ ಒಳ್ಳೆಯದಕ್ಕಿಂತ ಕೆಟ್ಟದ್ದು ಬೇಗ ಹರಡುತ್ತದೆ. ಕೆಲವು ಪತ್ರಿಕೆಗಳು ಸ್ವಾಮೀಜೀಯನ್ನು, ಹಿಂದೂ ಧರ್ಮವನ್ನು ಅಂದು ತೆಗಳಿದ್ದರು. ಇಂದು ತಾಲಿಬಾನಿಗಳನ್ನು ಒಳ್ಳೆಯವರು ಅನ್ನುತ್ತಿದ್ದಾರೆ. ಅಮೇರಿಕಾದ ನ್ಯೂಯಾರ್ಕ್ ಟೈಮ್ಸ್ ತಾಲಿಬಾನಿಗಳನ್ನು ಧೀರರು ಎಂದೂ ಮೋದಿ ವಿಚಾರವಾಗಿ ಉಗ್ರವಾದಿಗಳೆಂದು ಬರೆಯುತ್ತದೆ. ಅಮೇರಿಕಾದಲ್ಲಿ ಕಳೆದ ಕೆಲ ದಿನಗಳಿಂದ ದಿನಕ್ಕೆ ಒಂದುವರೆ ಲಕ್ಷಕ್ಕೂ ಅಧಿಕ ಕೊರೋನಾ ಪ್ರಕರಣಗಳು ದಾಖಲಾಗುತ್ತಿದೆ. ಇದರ ಬಗ್ಗೆ ಮಾತಾಡದ ಅಮೇರಿಕಾದ ಪತ್ರಿಕೆಗಳು ಕೊರೋನಾದ ಎರಡನೆ ಅಲೆಯ ಸಂದರ್ಭದಲ್ಲಿ ಭಾರತದಲ್ಲಿ ಹೆಣಗಳು ಸುಡುತ್ತಿರುವ ಸುದ್ಧಿಯನ್ನು ತನ್ನ ಮುಖಪುಟದಲ್ಲಿ ಪ್ರಕಟಿಸಿತ್ತು. ಆ ಚಿತ್ರಗಳನ್ನು ನಮ್ಮವರೆ ಆನ್ಲೈನ್ನಲ್ಲಿ ಬೇರೆ ದೇಶಕ್ಕೆ ಮಾರಿದ್ದಾರೆ ಎಂಬುದು ವಿಷಾದನೀಯ. ಜಗತ್ತಿಗೆ ಕೊರೋನಾವನ್ನು ರಫ್ತು ಮಾಡಿದ್ದು ಚೀನಾ, ಕಳೆದ ವರ್ಷ ಗಲ್ವಾನ್ ಕಣಿವೆಯಲ್ಲಿ ಕ್ಯಾತೆ ತೆಗೆದಿದ್ದು ಚೀನಾ. ಅವರ ಪರವಾದ ಜಾಹಿರಾತನ್ನು ಒಂದು ಇಡೀ ಪುಟದಲ್ಲಿ ಪ್ರಕಟನೆ ಮಾಡಿತ್ತು 'ದಿ ಹಿಂದೂ' ಎಂಬ ಪತ್ರಿಕೆ. 

Hypocrisy of 'The New York Times'

ಭಾರತದ ಸಂತನೋರ್ವ ಚಿಕಾಗೋದಲ್ಲಿ ಭಾರತ ಮತ್ತು ಹಿಂದೂ ಧರ್ಮದ ಕುರಿತು ಜಗತ್ತಿಗೆ ಮತ್ತೊಮ್ಮೆ ತಿಳಿಸಿಕೊಟ್ಟ ಭಾಷಣಕ್ಕೆ 128 ವರ್ಷಗಳಾಗಿವೆ. ಇಪ್ಪತ್ತು ವರ್ಷಗಳ ನಂತರ ತಾಲಿಬಾನಿನ ಆಡಳಿತ ಮತ್ತೆ ಬಂದಿದೆ. ತಾಲಿಬಾನ್ ಮತ್ತು ಪಾಕೀಸ್ತಾನದ ಮೂಲಕ ಚೀನಾ ತನ್ನ ಆಟವಾಡಲು ಶುರುಮಾಡಿದೆ. ಜಗತ್ತಿಗೆ ಇದು ನಿಜಕ್ಕೂ ಒಳ್ಳೆಯದಲ್ಲ. ಜಗತ್ತಿಗೆ ಭಾರತ ಮತ್ತು ಹಿಂದೂ ಸಂಸೃತಿ ಪಸರಿಸುವುದು ಒಳಿತು. ಸ್ವಾಮೀ ವಿವೇಕಾನಂದರ ಮಾತುಗಳು ಎಲ್ಲರಿಗೂ ಆದರ್ಶವಾಗಲಿ. ಕರೋನಾದ ಕತ್ತಲೆ ಕಳೆದು ಸದೃಢ ಭಾರತ ನಿರ್ಮಾಣವಾಗಲಿ. ಸೆಪ್ಟಂಬರ್ 11 ಎಂದರೆ ಭಯೊತ್ಪಾದನಾ ಕೃತ್ಯದ ಬದಲು ಸ್ವಾಮೀ ವಿವೇಕಾನಂದರು ನೆನಪಾಗಲಿ.