March 18, 2022

ಸ್ವರ್ಗದಲ್ಲಿ ನಡೆದ ನರಮೇಧವನ್ನು ತೆರೆದಿಟ್ಟ ಚಿತ್ರ!

ದೇಶದೆಲ್ಲೆಡೆ ಚಲನಚಿತ್ರವೊಂದು ದೊಡ್ಡ ಸಂಚಲನ ಉಂಟು ಮಾಡಿದೆ. ಜನತೆ ಇದನ್ನು ಚಲನಚಿತ್ರ ಎಂದು ನೋಡುವ ಬದಲು ನಮ್ಮ ನಡುವೆ ನಡೆದ ಘನಘೋರ ಘಟನೆಯ ಸಾಕ್ಷ್ಯಚಿತ್ರ ಎಂದೇ ವೀಕ್ಷಿಸುತ್ತಿದ್ದಾರೆ. ಸಾಮಾನ್ಯವಾಗಿ ಚಲನಚಿತ್ರವನ್ನು ಮನೋರಂಜನೆಗಾಗಿ ನಾವು ನೋಡುತ್ತೇವೆ ಆದರೆ, ಈ ಚಿತ್ರವನ್ನು ಹಾಗೆ ನೋಡಲು ನಿಜಕ್ಕೂ ಸಾಧ್ಯವಿಲ್ಲ. ಸತ್ಯ ಯಾವತ್ತಿದ್ದರೂ ಬೆಂಕಿ ಎನ್ನುವುದಕ್ಕೆ ಈ ಚಿತ್ರ ಖಂಡಿತವಾಗಿಯೂ ಸ್ಪಷ್ಟ ನಿದರ್ಶನ. ಕಶ್ಮೀರದಲ್ಲಿ ಮೂರು ದಶಕಗಳ ಹಿಂದೆ ಘಟಿಸಿದ ಧರ್ಮಾಧಾರಿತ ಹತ್ಯಾಕಾಂಡ ಮತ್ತು ಪಂಡಿತರ ಮೇಲಿನ ದೌರ್ಜನ್ಯ ಇದುವರೆಗೆ ಜಗತ್ತಿಗೆ ಬಿಡಿ ಭಾರತೀಯರಿಗೆ ಪೂರ ತಿಳಿಯದಿರುವುದು ನಿಜಕ್ಕೂ ವಿಷಾದನೀಯ. ಈ ಕಠೋರ ಸತ್ಯವನ್ನು ಪರಿಣಾಮಕಾರಿ ತೆರೆದಿಟ್ಟುರುವ ಚಿತ್ರವೇ 'ದಿ ಕಶ್ಮೀರ್ ಫೈಲ್ಸ್'.


ಮೂರು ಗಂಟೆಯ ಚಿತ್ರದಲ್ಲಿ ತೋರಿಸಿರುವುದು ಒಂದು ಕುಟುಂಬದ ಕಥೆ, ವ್ಯಥೆ ಮತ್ತು ತನ್ಮೂಲಕ ಇಡೀ ಘಟನೆ. ನಡೆದ ಎಲ್ಲಾ ಘಟನೆಯನ್ನು ಚಿತ್ರಿಸಿದರೆ ಮೂರು ತಿಂಗಳ ವೆಬ್ ಸೀರೀಸ್ ಆಗಬಹುದೇನೊ! ಇಷ್ಟೇಲ್ಲಾ ಘಟಿಸಿದರೂ ಭಾರತೀಯರಾದ ನಮಗೆ ಕಶ್ಮೀರದ ವಿಚಾರ ತಿಳಿದಿರುವುದು ತೀರ ಅಲ್ಪ! ಯಾಕೆ ಹೀಗೆ ಅನ್ನುವುದು ಮುಖ್ಯ ಪ್ರಶ್ನೆ. ಡಿಸೆಂಬರ್ 1989 ಹೊತ್ತಿಗೆ ಕಾಂಗ್ರೇಸಿನ ರಾಜೀವ್ ಗಾಂಧಿ ಅಧಿಕಾರ ಕಳೆದುಕೊಳ್ಳುತ್ತಾರೆ. ದೇಶದಲ್ಲಿ ಎರಡನೇ ಬಾರಿಗೆ ಕಾಂಗ್ರೇಸೇತರ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಇದಾದ ಒಂದೇ ತಿಂಗಳಲ್ಲಿ ಕಶ್ಮೀರದಲ್ಲಿ 'ಆಜಾದಿ' ಎಂಬ ಜಿಹಾದಿಗಳ ಕೂಗು ಎದ್ದು, ಕಾಫೀರ್ಗಳ ಅರ್ಥಾತ್ ಪಂಡಿತರ ನರಮೇಧವಾಯ್ತು ಎಂಬುದು ಗಮನಿಸಬೆಕಾದ ಅಂಶ.  

ಕಶ್ಮೀರದಲ್ಲೇ ಇದ್ದುಕೊಂಡು ತಮ್ಮ ಅಕ್ಕಪಕ್ಕದವರನ್ನೇ ಜಿಹಾದಿನ ಅಮಲಿನಲ್ಲಿ ಕೊಂದು ಕ್ರೌರ್ಯದ ಮೂರ್ತಿಯಂತೆ ಇದ್ದದ್ದು ಜಮ್ಮು ಅಂಡ್ ಕಶ್ಮೀರ್ ಲಿಬರೇಷನ್ ಫ್ರಂಟ್ ಮತ್ತದರ ನಾಯಕ ಯಾಸಿನ್ ಮಲಿಕ್. ಇಂತಹ ರಾಕ್ಷಸನನ್ನು ತಮ್ಮ ಕಛೇರಿಗೆ ಕರೆಸಿಕೊಂಡು ದೊಡ್ದ ನಗುವಿನೊಂದಿಗೆ ಮಾತಾಡಿದ್ದು ಇದೇ ಕಾಂಗ್ರೇಸಿನ ಮನಮೋಹನ್ ಸಿಂಗ್! ನಿಜ ಹೇಳಿ, ಪ್ರಧಾನಿಯಾಗಿ ಮನಮೋಹನ್ ಸಿಂಗರು ನಕ್ಕಿದ್ದು ಯಾರಾದರೂ ನೋಡಿದ್ದು ಉಂಟಾ? ಬಹುಶಃ ಹಿಂದೂಗಳ ಹತ್ಯೆ ಮಾಡಿದವರು ಎದುರಿಗಿದ್ದರೆ ಮಾತ್ರ ಆತ ನಗುವುದು ಎಂದು ತೋರುತ್ತದೆ! ಈಗೇನಾದರೂ ಕಾಂಗ್ರೇಸ್ ಸರ್ಕಾರ ಇದ್ದದ್ದೇ ಆದರೆ ಬಹುಶಃ ಯಾಸಿನ್ ಮಲಿಕ್ ಮತ್ತು ಬಿಟ್ಟ ಕರಾಟೆಗೆ ಪದ್ಮಭೂಷಣವೋ ಅಥವಾ ಭಾರತ ರತ್ನವೋ ಕೊಡುತ್ತಿದ್ದರು ಎಂದರೆ ಅದು ಅತಿಶಯೋಕ್ತಿ ಅಲ್ಲ. ಅಂದಿನ ಪ್ರಧಾನಿಯ ಕಥೆ ಹೀಗಿದ್ದಾಗ ಇನ್ನೂ ಮಾಧ್ಯಮದವರು ಏನು ಮಾಡಿರಬಹುದು ಊಹಿಸಿ. 2008 ರಲ್ಲಿ ಇಂಡಿಯಾ ಟುಡೆ ಸಂಸ್ಥೆ ತನ್ನ ಸಮಾವೇಶಕ್ಕೆ ಮಲಿಕ್ ನನ್ನು ಅಹ್ವಾನಿಸಿದ್ದಲ್ಲದೇ ಅವನನ್ನು 'ಯೂತ್ ಐಕಾನ್' ಎಂದು ಪ್ರಚುರಪಡಿಸಿತು. ಭಾರತ ವಿರೋಧಿ ಪ್ರಚಾರವನ್ನು ಹೆಚ್ಚಿಸುವ ಭಯೋತ್ಪಾದಕನಿಗೆ ಇಂಡಿಯಾ ಟುಡೆ ತನ್ನ ವೇದಿಕೆಯನ್ನು ನೀಡಿತು. ಪ್ರತ್ಯೇಕತಾವಾದದ ಕಾರ್ಯಸೂಚಿಯ ಯಾಸಿನ್ ಮಲಿಕ್ ನ 12 ನಿಮಿಷಗಳ ಭಾಷಣವನ್ನು ದೂರದರ್ಶನದಲ್ಲಿ ನೇರಪ್ರಸಾರ ಮಾಡಿತ್ತು!

Manmohan Singh with Yasin Malik

ಇನ್ನು ಇತಿಹಾಸಕಾರರು ಮತ್ತು ನಮ್ಮ ಪಠ್ಯಪುಸ್ತಕಗಳನ್ನು ಕೇಳುವ ಹಾಗೆ ಇಲ್ಲ. ಈ ಕಮ್ಯುಸಿಸ್ಟ್ ಪ್ರೇರಿತ ಪಠ್ಯಪುಸ್ತಕದಲ್ಲಿ ಮೊಘಲರ ವೈಭವೀಕರಣ, ಅಕ್ಬರ್ ಮಹಾತ್ಮ, ತೆರೆಸಾ ಕರುಣಾಮಯಿ, ಕಾಂಗ್ರೇಸ್ ಮಾತ್ರ ದೇಶದ ಸ್ವಾತಂತ್ರ್ಯಕ್ಕೆ ಕಾರಣ ಎಂಬಂತಹ ತಿರುಚಿದ ಇತಿಹಾಸವನ್ನು ಕಾಣಬಹುದೆ ಹೊರತು ನೈಜವಾದ, ಪರಿಪೂರ್ಣವಾದ ಇತಿಹಾಸದ ದಾಖಲೆ ಇಲ್ಲವೇ ಇಲ್ಲ. ಐ.ಸಿ.ಎಸ್.ಸಿಯ ಸಮಾಜ ವಿಜ್ಞಾನದ ಪಠ್ಯದಲ್ಲಿ ಗೋಧ್ರಾ ಹತ್ಯಾಕಾಂಡದ ಬಗ್ಗೆ ತಿಳಿಸಿದ್ದಾರೆ ಹೊರತು ಅದರ ಹಿಂದಿನ ಕಾರಣವನ್ನು ಮಾತ್ರ ತಿಳಿಸಿಲ್ಲ. 'ನಮಸ್ತೆ ಶಾರದಾ ದೇವಿ ಕಾಶ್ಮೀರ ಪುರವಾಸಿನಿ...' ಅಂತ ಶ್ಲೋಕವನ್ನು ಶಾಲೆಯಲ್ಲಿ ಸಂಸ್ಕೃತ ಓದುವ ವಿದ್ಯಾರ್ಥಿಗಳಿಗೆ ಪರೀಕ್ಷೆ ದೃಷ್ಟಿಯಿಂದ ಹೇಳಿಕೊಟ್ಟರೆ ಹೊರತು ಕಶ್ಮೀರದ ಪಂಡಿತರನ್ನು, ಅಲ್ಲಿನ ಲಿಪಿಯನ್ನು ಮತ್ತು ಶಾರದ ಮಂದಿರವನ್ನು ಯಾರು ಮತ್ತು ಯಾತಕ್ಕಾಗಿ ನಾಶ ಮಾಡಿದರು ಎಂಬುದರ ಬಗ್ಗೆ ಒಂದೇ ಒಂದು ಅಕ್ಷರವನ್ನೂ ತಿಳಿಸಿಲ್ಲ. 'ಭಾರತ್ ತೇರೆ ತುಕ್ಡೆ ಹೋಂಗೆ...' ಎನ್ನುವವರ ಪರ ನಿಲ್ಲುವ ಬುದ್ಧಿಜೀವಿಗಳು ಮತ್ತು ಪ್ರೊಫೆಸರ್ಗಳು ಇರಬೇಕಾದರೆ ನೈಜ ಇತಿಹಾಸದ ಪರಿಚಯ ಹೇಗೆ ಸಾಧ್ಯ?

ಈ ಚಿತ್ರ ನೈಜತೆಯನ್ನು ಬಿಚ್ಚಿಡುವ ಪ್ರಯತ್ನ ಮಾಡಿದೆ. ತನ್ನ ಸುತ್ತ ನಡೆಯುತ್ತಿರುವ ಸತ್ಯ ತಿಳಿದಿದ್ದರೂ ಸುಳ್ಳು ಹೇಳುವ ಪತ್ರಕರ್ತ, ತನ್ನ ಸುತ್ತಲಿನ ಜನರನ್ನು ಕಾಪಾಡಬೇಕು ಎಂಬ ಉದ್ದೇಶವಿದ್ದರೂ ಅಸಹಾಯಕನಾಗಿರುವ ಅಧಿಕಾರಿ, ಎದುರಿಗೆ ಜೀವ ಹೋಗುತ್ತಿದ್ದರೂ ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಡಾಕ್ಟರ್, ತನ್ನ ಕೈಯ್ಯಲ್ಲಿ ಬಂದೂಕಿದ್ದರೂ ಕಣ್ಣೇದುರಿಗೆ ನಡೆಯುತ್ತಿರುವ ಕಾನೂನು ಬಾಹಿರ ಕೃತ್ಯವನ್ನು ತಡೆಯಲಾಗದ ಪೋಲೀಸ್ ಅಧಿಕಾರಿ, ನಮ್ಮೆದೇ ದೇಶದ ಪಂಡಿತರನ್ನು ಹೊರದೇಶದಿಂದ ವಲಸೆ ಬಂದಿರುವವರನ್ನು ನಡೆಸಿಕೊಳ್ಳುವ ರೀತಿ. ಇವರೆಲ್ಲರ ಅಸಹಾಯಕತೆಯ ಮತ್ತು ಜಿಹಾದಿ ಮನಸ್ಥಿತಿಯ ಭಯೋತ್ಪಾದನೆಯನ್ನು ಈ ಚಿತ್ರ ಮನೋಜ್ಞವಾಗಿ ಕಟ್ಟಿಕೊಟ್ಟಿದೆ. ಯುವಜನತೆಯ ಬ್ರೈನ್ ವಾಶ್ ಮಾಡಲೆಂದೇ ಹುಟ್ಟಿರುವ ಲಿಬರಲ್ ಮತ್ತು ವಿಶ್ವವಿದ್ಯಾಲಯದ ಪ್ರೊಫೆಸ್ಸರ್ ಪಾತ್ರ ಜೆ.ಎನ್.ಯೂ ನ ನಿವೇದಿತಾ ಮೇನನ್ ಅನ್ನು ನೆನೆಪಿಸುತ್ತದೆ. ಪಂಡಿತರನ್ನು ಕೊಂದು ಮರಕ್ಕೆ ಮೊಳೆ ಹೊಡೆದು ನೇತು ಹಾಕಿರುವ, ಕೊನೆಗೆ ಶಾರದಾಳನ್ನು ಮರಕೊಯ್ಯುವ ಯಂತ್ರದಲ್ಲಿ ಜೀವಂತ ಸೀಳುವ ದೃಶ್ಯಗಳು 1990ರಲ್ಲಿ ಪಂಡಿತರು ತಿಲಕ ಇಟ್ಟ ಜಾಗದಲ್ಲಿ ಮೊಳೆ ಹೊಡೆದು ಕೊಂದ, ಗಿರಿಜಾ ಟಿಕ್ಕೂರನ್ನು ಅತ್ಯಾಚಾರ ಮಾಡಿ ಕೊಂದ ಜಿಹಾದಿಗಳ ಕ್ರೌರ್ಯತೆಯನ್ನು ನೆನಪಿಸುತ್ತದೆ. ಪುಶ್ಕರ್ ಪಾತ್ರದಲ್ಲಿ ನಟಿಸಿರುವ ಅನುಮಪಂ ಖೇರ್ ರವರ ನಟನೆಯನ್ನು ವರ್ಣಿಸುವುದು ಕಷ್ಟವೇ ಸರಿ. ಅವರ ಪಾತ್ರ 'ಕಾಶ್ಮೀರಿ ಪಂಡಿತರ ಪಿತಾಮಹ' ಅಮರ್ನಾಥ್ ವೈಷ್ಣವಿ ನೆನಪಾಗುತ್ತಾರೆ.

ಕಶ್ಮೀರದಲ್ಲಿ ನಡೆದ ಈ ಹತ್ಯಾಕಾಂಡದ ವಿಚಾರ ಹೊರಜಗತ್ತಿಗೆ ತಿಳಿದಿಲ್ಲವೆಂದೇನಿಲ್ಲ ಆದರೆ, ಮುಖ್ಯವಾಹಿನಿಗೆ ಬಂದಿಲ್ಲ ಅಷ್ಟೆ! ಸಮಾನ್ಯವಾಗಿ ಓದಿರುವ ವಿಚಾರವನ್ನು ಚಿತ್ರದಲ್ಲಿ ನೋಡಿದಾಗ ಚಿತ್ರ ನೀರಸ ಅನ್ನಿಸುತ್ತದೆ ಆದರೆ, ಈ ಚಿತ್ರ ಓದು ಅಥವಾ ಬರವಣಿಗೆಗಿಂತಲೂ ಹೆಚ್ಚು ಪರಿಣಾಮಕಾರಿ. ಇದಕ್ಕೆ ಕಾರಣವಿದೆ. ಚಿತ್ರಗಳ ವಸ್ತು ಅಸೂಯೆ, ಪ್ರೀತಿ, ಕಾರುಣ್ಯ, ದುಃಖ, ಹಾಸ್ಯವಾದರೆ ನಾವು ನಮ್ಮ ಜೀವನದಲ್ಲಿ ಸಹಜವೆಂಬಂತೆ ಅನುಭವಿಸಿರುತ್ತೇವೆ. ಹಾಗಾಗಿ, ನಿರ್ದೇಶಕನ ಕಲ್ಪನೆಯ ಚಿತ್ರವನ್ನು ನೋಡುವುದಕ್ಕಿಂತ ನಮ್ಮ ಕಲ್ಪನೆಯ ಓದು ನಮಗೆ ಹೆಚ್ಚು ಪ್ರಿಯವಾಗುತ್ತದೆ. ಆದರೆ ಈ ಚಿತ್ರದಲ್ಲಿರುವುದು ಕ್ರೌರ್ಯತೆ! ಇದನ್ನು ನಮ್ಮಲ್ಲಿನ ಹೆಚ್ಚಿನವರು ಅನುಭವಿಸಲ್ಲ. ಇದಲ್ಲದೇ ತಮ್ಮ ನೆಲ, ಪ್ರಾಣ, ಮಾನವನ್ನು ಕಳೆದುಕೊಂಡ ಪಂಡಿತರ ಮೇಲಿನ ಪ್ರೀತಿ ಹಾಗೂ ವ್ಯವಸ್ಥೆ ಅವರಿಗಾಗಿ ಏನು ಮಾಡಿಲ್ಲ ಎಂಬ ಪಶ್ಚಾತ್ತಾಪದ ಭಾವನೆ. ಈ ಕಾರಣಗಳಿಂದ ಈ ಚಿತ್ರ ನಮ್ಮ ಮನಸ್ಸನ್ನು ಕಲುಕುವಂತೆ ಮಾಡಿದೆ.

ಈಗಲೂ ಗಮನಿಸಿ, ಇತರರಂತೆ ಚಿತ್ರ ಬಿಡುಗಡೆ ಮಾಡುವ ಮುನ್ನ ದೊಡ್ಡ ಉದ್ಘಾಟನಾ ಕಾರ್ಯಕ್ರಮ ಈ ಚಿತ್ರತಂಡ ಮಾಡಲಿಲ್ಲ. ಕಪಿಲ್ ಶರ್ಮಾನ ಕಾರ್ಯಕ್ರಮದಲ್ಲಾಗಲಿ, ಯಾವುದೇ ಮಾಧ್ಯಮದಲ್ಲಾಗಲಿ ಪ್ರಚಾರವಾಗಲಿಲ್ಲ. ಎಲ್ಲಾ ಚಿತ್ರಕ್ಕೆ ಸಿಗುವಂತೆ ಥಿಯೇಟರ್ಗಳು ಸಿಗಲಿಲ್ಲ, ಅನೇಕ ಮಲ್ಟಿಪ್ಲೆಕ್ಸ್ಗಳು ಈ ಚಿತ್ರವನ್ನು ಹಾಕಲಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರಚಾರ ಪಡೆಯಿತು. ಪ್ರಧಾನಿ ಮಂತ್ರಿಗಳಿಂದಲೂ ಸಹ ಒಳ್ಳೆಯ ಅಭಿಪ್ರಾಯ ವ್ಯಕ್ತವಾಯಿತು. ಚಿತ್ರ ಬಿಡುಗಡೆಯಾದ ಆರೇ ದಿನಗಳಲ್ಲಿ 87 ಕೋಟಿಯನ್ನು ಗಳಿಸಿದೆ. ನಿಜಕ್ಕೂ ಇದು ಜನರೇ ಗೆಲ್ಲಿಸಿದ ಚಿತ್ರ. ಬಾಲಿವುಡ್ ಮಾಫಿಯಾದ ಎದುರಿಗೆ ಇಷ್ಟು ದೊಡ್ಡದಾಗಿ ತೆರೆಕಾಣುತ್ತಿರುವುದು ದೇಶದಲ್ಲಿ ರಾಷ್ಟ್ರೀಯತೆ ಪ್ರಜ್ವಲಿಸುತ್ತಿರುವ ಸಂಕೇತವಾಗಿದೆ.

Box Office Collection is 6 Days

ಹೌದು, ಚಿತ್ರ ಬಿಡುಗಡೆ ಆಯ್ತು, ಬಹಳಷ್ಟು ಜನ ನೋಡಿ ಸಂಕಟ ಪಟ್ಟಿದ್ದು ಆಯ್ತು, ಕಶ್ಮೀರದ ಕುರಿತು, ಪಂಡಿತರ ಕುರಿತು ವಿಚಾರಗಳನ್ನು ತಿಳಿಯಲು ಓದುತ್ತೇವೆ. ಆದರೆ, ಇದರಿಂದ ಕಶ್ಮೀರಿ ಪಂಡಿತರಿಗೆ ನ್ಯಾಯ ಸಿಕ್ಕಿತಾ?  ಇಲ್ಲ, ನಿಜಕ್ಕೂ ಇಲ್ಲ. ಪಂಡಿತರನ್ನು ಕಶ್ಮೀರದಲ್ಲಿ ಮತ್ತೆ ನೆಲೆಗೊಳ್ಳುವಂತೆ ಮಾಡಿ, ಪಾಕ್ ಆಕ್ರಮಿತ ಕಶ್ಮೀರವನ್ನು ಭಾರತಕ್ಕೆ ಸೇರಿಸಿಕೊಂಡು ಮತ್ತೊಮ್ಮೆ ಸರಸ್ವತಿಯ ಆವಾಸಸ್ಥಾನವನ್ನಾಗಿ ಮಾಡಿದಾಗ ಮಾತ್ರ ಪಂಡಿತರಿಗೆ ನ್ಯಾಯ, ಪ್ರಾಣತ್ಯಾಗ ಮಾಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ. ಆರ್ಟಿಕಲ್ 370 ತೆಗೆದ್ದದ್ದು ಆಗಿದೆ. ಇನ್ನು ಮಿಕ್ಕ ಪ್ರಕ್ರಿಯೆಗಳು ಆಗಿ 'ನಮಸ್ತೆ ಶಾರದಾದೇವಿ...' ಶ್ಲೋಕಕ್ಕೆ ನಿಜವಾದ ಅರ್ಥ ಬರಲಿ ಎಂದು ಪ್ರಾರ್ಥಿಸೋಣ.

***********************************************************

References:

No comments:

Post a Comment