April 3, 2022

ಹಿಜಾಬ್ ಆಯ್ತು ಈಗ ಹಲಾಲ್!

ಕಳೆದ ತಿಂಗಳು ಉಡುಪಿಯ ಕಾಲೇಜಿನಲ್ಲಿ ಹಿಜಾಬ್ ವಿವಾದ ಶುರುವಾಯಿತು. ಕರೋನಾ ಕಳೆದು, ಶಾಲೆಗಳೆಲ್ಲಾ ಶುರುವಾದ ಸಂದರ್ಭದಲ್ಲಿ ವಿದ್ಯೆಗಿಂತ ಧರ್ಮದ ಆಚರಣೆ ಮುಖ್ಯವೆಂದು ಹೊಸದೊಂದು ಬೇಡವಾದ ವಿವಾದವನ್ನು ಆರು ಮುಸಲ್ಮಾನ್ ವಿದ್ಯಾರ್ಥಿನಿಯರು ಶುರು ಮಾಡಿದರು. ಇದನ್ನು ಕೇಸರಿ-ಹಿಜಾಬ್ ಸಂಘರ್ಷ ಎಂದು ಕೆಲವರು ದಾರಿ ತಪ್ಪಿಸಲು ಪ್ರಯತ್ನ ಪಟ್ಟರಾದರೂ ಅದು ನಿಲ್ಲಲಿಲ್ಲ. ಇದರ ಬೆನ್ನಲ್ಲೇ ಶಿವಮೊಗ್ಗದಲ್ಲಿ ನಡೆದ ಹರ್ಷನ ಕೊಲೆ ಹಿಂದೂ ಸಮಾಜವನ್ನು ಒಟ್ಟು ಮಾಡಿತು. ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯದ ಚುಣಾವಣೆ ನಡೆಯಬೇಕಾದರೆ, ಪರೀಕ್ಷೆ ಇನ್ನೊಂದು ತಿಂಗಳಿರಬೇಕಾದಾಗ ಆ ಆರು ವಿದ್ಯಾರ್ಥಿನಿಯರು 'ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗ' ಎಂದು ಹೈಕೋರ್ಟ್ ಮೆಟ್ಟಿಲು ಹತ್ತಿದರು. ಅಲ್ಲಿ ನಡೆದ ವಾದ ವಿವಾದವನ್ನು ಯೂಟ್ಯೂಬಿನಲ್ಲಿ ಬಿತ್ತರಿಸಲಾಯಿತು. ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗ ಎಂದು ನಿರೂಪಿಸುವಲ್ಲಿ ಅರ್ಜಿದಾರರು ಸೋತಿದ್ದಾರೆ ಎಂದು ಕೋರ್ಟು ತೀರ್ಪುಕೊಟ್ಟು ಸಮವಸ್ತ್ರದ ತತ್ವವನ್ನು ಎತ್ತಿಹಿಡಿಯಿತು.

ಕೋರ್ಟ್ ತೀರ್ಪು ಬರುವವರೆಗೂ ಸಂವಿದಾನ, ಕಾನೂನು ಎಂದೆಲ್ಲಾ ಮಾತಾಡುತ್ತಿದ್ದ ಧರ್ಮಾಂದರು ತೀರ್ಪಿನ ನಂತರ ತೀರ್ಪು ನಮಗೆ ಸಮಾಧಾನ ತಂದಿಲ್ಲ ಎಂದರು, ತೀರ್ಪಿನ ವಿರುದ್ಧ ಮುಸಲ್ಮಾನರು ಬಂದ್ ಮಾಡಿದರು. ಇದು ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಮತ್ತು ನೆಲದ ಕಾನೂನು ಗೌರವಿಸುವ ಎಲ್ಲರನ್ನು ಒಟ್ಟು ಮಾಡಿತು. ಇದರ ನಡುವೆ ವಿವೇಕ್ ಅಗ್ನಿಹೋತ್ರಿ ರವರ 'ದಿ ಕಾಶ್ಮೀರ್ ಫೈಲ್ಸ್' ದೇಶದೆಲ್ಲಡೆ ಸಂಚಲನ ಎಬ್ಬಿಸಿತು. ಚಿತ್ರದಲ್ಲಿ ತೋರಿಸಿರುವುದು ಪಂಡಿತರ ಏಳನೇ ಹತ್ಯಾಕಾಂಡದ ಝಲಕ್ ಅಷ್ಟೇ. ಹಲವರು ಹಿಂದಿನ ಆರೂ ಹತ್ಯಾಕಾಂಡದ ಬಗ್ಗೆ ಓದಲು ಶುರು ಮಾಡಿದ್ದಾರೆ. ಈ ಚಿತ್ರವೂ ಹಿಂದೂ ಸಮಾಜವನ್ನು ಒಟ್ಟು ಮಾಡಲು ತನ್ನದೇ ಆದ ಕೊಡುಗೆಯನ್ನು ನೀಡಿದೆ. ಏನೇ ಹೇಳಿ,  ಹಿಂದೂ ಸಮಾಜ ಜಾಗೃತವಾಗಿರುವುದಂತೂ ನಿಜ. ಈಗ ಕರ್ನಾಟಕದ ಅನೇಕ ಕಡೆ ಜಾತ್ರೆ ಮತ್ತು ಊರ ಹಬ್ಬ ನಡೆಯುತ್ತಿದೆ. ಇದರಲ್ಲಿ ಮುಸಲ್ಮಾನರು ವ್ಯಾಪಾರ ಮಾಡುವಂತ್ತಿಲ್ಲ ಎಂದು ಎಲ್ಲಾ ಹಿಂದೂಗಳು ತೀರ್ಮಾನಿಸಿ ಸಾರ್ವಜನಿಕವಾಗಿ ಫಲಕವನ್ನು ಹಾಕುವಷ್ಟು ತಾಕತ್ತು ತೋರಿದ್ದಾರೆ. ಮೂರ್ತಿ ಪೂಜೆಯನ್ನು ದ್ವೇಷಿಸುವ ಮುಸಲ್ಮಾನರಿಗೆ ಹಿಂದೂಗಳ ಜಾತ್ರೆಯಲ್ಲಿ ಏನು ಕೆಲಸ ಎಂದು ಕೇಳುವಷ್ಟು ಜಾಗೃತವಾಗಿದ್ದಾನೆ. ಈಗ ಮಾತ್ರ ಸಂವಿದಾನ, ಸೌಹಾರ್ದತೆ, ಸಾಮರಸ್ಯದ ಮಾತುಗಳು ಹೊರಬರುತ್ತಿವೆ. ಈ ಸೌಹಾರ್ದಯುತ ಮಾತುಗಳು ಹಲಾಲ್ ವಿಚಾರದಲ್ಲಿ ಮಾತ್ರ ಬರುವುದಿಲ್ಲ ಎಂಬುದು ಇವರುಗಳ ಬೂಟಾಟಿಕೆಯನ್ನು ಎತ್ತಿ ತೋರಿಸುತ್ತದೆ.

ಕೆಲವು ವರ್ಷಗಳ ಹಿಂದೆ ಝೊಮಾಟೋ ಗ್ರಾಹಕನೊಬ್ಬ ಡೆಲಿವರಿ ಮಾಡುವವ ಮುಸಲ್ಮಾನ್ ಎಂಬ ಕಾರಣಕ್ಕೆ ತನ್ನ ಆರ್ಡರ್ ಅನ್ನು ರದ್ದುಗೊಳಿಸಿದ್ದು ನೆನಪಿರಬೇಕಲ್ಲ. ಊಟಕ್ಕೆ ಧರ್ಮವಿಲ್ಲ ಎಂದು ಶುರು ಮಾಡಿದ ಝೊಮಾಟೋ,  ಗ್ರಾಹಕರು ಅವರ ವಿರುದ್ಧ ಆಪ್ ಮೂಲಕ ಮಾತಾಡಲು ಪ್ರಾರಂಭಿಸಿದಾಗ ಇದು 'ಬೇಡಿಕೆ ಮತ್ತು ಪೂರೈಕೆ' ಎಂಬ ವಾದವನ್ನು ಮುಂದಿಟ್ಟು, ಜಟ್ಕಾ ಮಾಂಸವನ್ನು ಬೇಡಿಕೆಗೆ ಅನುಗುಣವಾಗಿ ಪೂರೈಸುತ್ತೇವೆ ಎಂದು ನುಣುಚಿಕೊಂಡರು. ಹಲಾಲ್ ಮಾಂಸವನ್ನು ಒಪ್ಪಿಕೊಳ್ಳುವ ಮುಸಲ್ಮಾನರು ದೇಶದ ಜನಸಂಖ್ಯೆಯ ಶೇಕಡ 15 ರಷ್ಟು ಮಾತ್ರ. ಆದರೆ, ಭಾರತದಲ್ಲಿ ಮಾರಾಟವಾಗುವ ಹಲಾಲ್ ಮಾಂಸದ ಅನುಪಾತ ಹೆಚ್ಚಿದೆ ಮತ್ತು ಪ್ರತಿ ವರ್ಷವೂ ಹೆಚ್ಚುತ್ತಿದೆ ಎಂಬುದು ಗಮನಿಸಬೇಕಾದ ಅಂಶ.

ಹಲಾಲ್ ಉತ್ಪನ್ನಗಳು ಇಸ್ಲಾಂ ಆರ್ಥಿಕತೆಯ ಬೆನ್ನೆಲುಬಾಗಿ ಮಾರ್ಪಟ್ಟಿದೆ. ಶರಿಯಾ ಕಾನೂನಿನ ಪ್ರಕಾರ ಬ್ಯಾಂಕುಗಳಾಗಲಿ, ಯಾರೇ ಆಗಲಿ ಬಡ್ಡಿ ವ್ಯವಹಾರ ಮಾಡುವ ಹಾಗಿಲ್ಲ. 1983 ಯಲ್ಲಿ ಮಲೇಷ್ಯಾದಲ್ಲಿ ಶರಿಯಾ ಕಾನೂನಿಗೆ ಅನುಗುಣವಾಗಿ ಪ್ರಾರಂಭವಾದ ಬ್ಯಾಂಕ್ ಆಫ್ ಇಸ್ಲಾಂ ಮಲೇಷ್ಯಾ ಬೆರ್ಹಾದ್ ಅನ್ನು ಭಾರತ ಸೇರಿದಂತೆ ಇಸ್ಲಾಮೇತರ ದೇಶಗಳು ಈ ಬ್ಯಾಂಕಿನ ವ್ಯವಸ್ಥೆಯನ್ನು ಮಾನ್ಯ ಮಾಡಲಿಲ್ಲ. 2006 ರಲ್ಲಿ ಹಲಾಲ್ ಉದ್ಯಮವನ್ನು ಉತ್ತೇಜಿಸಲು ಮಲೇಷ್ಯಾದಲ್ಲಿ ಹಲಾಲ್ ಇಂಡಸ್ಟ್ರಿ ಡೆವಲಪ್‌ಮೆಂಟ್ ಕಾರ್ಪೊರೇಶನ್ ಅನ್ನು ಸ್ಥಾಪಿಸಲಾಯಿತು. 2013 ರಲ್ಲಿ, ಕೌಲಾಲಂಪುರದಲ್ಲಿ ವಿಶ್ವ ಹಲಾಲ್ ಸಂಶೋಧನೆ ಮತ್ತು ಹಲಾಲ್ ಫೋರಮ್ ಶೃಂಗಸಭೆಯನ್ನು 'ಹಲಾಲ್ ಆರ್ಥಿಕತೆ'ಯನ್ನು ಕೇಂದ್ರವಾಗಿರಿಸಿಕೊಂಡು ಆಯೋಜಿಸಿದ್ದರು. ಈ ಶೃಂಗಸಭೆಯಲ್ಲಿ ಹಲಾಲ್ ಉದ್ಯಮ, ಇಸ್ಲಾಮಿಕ್ ಬ್ಯಾಂಕಿಂಗ್ ಮತ್ತು ಹಣಕಾಸು ವಲಯಗಳ ನಡುವಿನ ಹೆಚ್ಚಿನ ಸಹಕಾರದ ಮೂಲಕ ವಿಶ್ವಾದ್ಯಂತ ಹಲಾಲ್ ಉತ್ಪನ್ನಗಳ ಬಳಸುವಿಕೆಯನ್ನು ಹೆಚ್ಚಿಸುವ ತೀರ್ಮಾನ ಮಾಡಿದರು. ಹಲಾಲ್ ಉದ್ಯಮವು ಉತ್ಪನ್ನಗಳ ಉತ್ಪಾದನೆಯಿಂದ ಹಿಡಿದು ಗ್ರಾಹಕರಿಗೆ ತಲುಪುವವರೆಗಿನ ಎಲ್ಲಾ ಅಂಶಗಳನ್ನು ನಿಯಂತ್ರಿಸುತ್ತದೆ. ಹಲಾಲ್ ಆರ್ಥಿಕತೆ ಈ ಮೂಲಕ ಎಲ್ಲೆಡೆ ವ್ಯಾಪಕವಾಗುತ್ತಿದ್ದಂತೆ ಇಸ್ಲಾಂ ಆರ್ಥಿಕತೆಯನ್ನು ಬಲಗೊಳಿಸಬೇಕು ಎಂಬುದನ್ನು ತೀರ್ಮಾನಿಸಲಾಯಿತು. ಇದಲ್ಲದೆ ಹಲಾಲ್ ಉತ್ಪನ್ನದಿಂದ ಬರುವ ಲಾಭಾಂಶವನ್ನು ಮತ್ತಷ್ಟು ಹಲಾಲ್ ಉತ್ಪನ್ನಗಳಿಗಾಗಿ ಹಾಗೂ ಇಸ್ಲಾಂ ಆರ್ಥಿಕತೆಯ ಬಲವರ್ಧನೆಗಾಗಿ ವಿನಿಯೋಗಿಸಲಾಗುತ್ತದೆ. ಈ ಎಲ್ಲಾ ವ್ಯವಹಾರಗಳು ಇಸ್ಲಾಮಿಕ್ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕವೇ ನಡೆಯುತ್ತದೆ. ಮಲೇಷ್ಯಾ ಒಂದರಲ್ಲೇ ಈ ಕ್ರಮದಿಂದಾಗಿ 2000 ರಲ್ಲಿ 6.9% ರಷ್ಟಿದ್ದ ಇಸ್ಲಾಮಿಕ್ ಬ್ಯಾಂಕಿಂಗ್ ಮಾರುಕಟ್ಟೆಯ ಪಾಲುದಾರಿಕೆ 2011ರ ಹೊತ್ತಿಗೆ  22% ಗೆ ಏರುತ್ತದೆ. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆದ ಉದ್ಯಮವೆಂದರೆ ಹಲಾಲ್!

ಇದು ಇಷ್ಟಕ್ಕೆ ನಿಲ್ಲದ ವಿಚಾರ. ಕೆಲ ವರ್ಷಗಳ ಹಿಂದೆ ಸೌಂದರ್ಯವರ್ಧಕಗಳನ್ನು ಹರಾಮ್ ಎಂದು ಪರಿಗಣಿಸಲಾಗಿತ್ತು ಆದರೆ, ಈಗ ಹಲಾಲ್ ಸೌಂದರ್ಯವರ್ಧಕಗಳು ಸಹ ಲಭ್ಯವಿದೆ. ಹಲಾಲ್ ಉದ್ಯಮ ವ್ಯಾಪಕವಾಗುತ್ತಿರುವುದಕ್ಕೆ ಉದಾಹರಣೆಗಳನ್ನು ಬಹಳಷ್ಟು ಕೊಡಬಹುದು. ಮಾಂಸ ಮತ್ತು ಸಸ್ಯಾಹಾರ ಪದಾರ್ಥಗಳು, ಚಾಕಲೇಟ್ಗಳು, ಸಿಹಿತಿಂಡಿಗಳು, ಸೋಪು, ಶಾಂಪೂ, ಲಿಪ್ಸ್ಟಿಕ್, ಟೂತ್ ಪೇಸ್ಟ್, ಯುನಾನಿ, ಆಯುರ್ವೇದದ ಔಷಧ ಪದಾರ್ಥಗಳು, ಹಿಮಾಲಯ ಡ್ರಗ್ಸ್ ಅಂತಹ ಕಂಪನಿಗಳು, ಜೇನುತುಪ್ಪ, ಡಾಮಿನೋಸ್ ಪಿಜ್ಜ, ಮೆಕ್ಡೊನಾಲ್ಡಿನ ಬರ್ಗರ್ಗಳೂ ಸಹ ಹಲಾಲ್ ಪ್ರಮಾಣಿಕೃತವಾಗಿದೆ. ಕೇರಳದ ಕೊಚಿಯಲ್ಲಿ ಹಲಾಲ್ ಪ್ರಮಾಣಿಕೃತವಾದ, ಶರಿಯಾ ಕಾನೂನಿಗೆ ಅನುಗುಣವಾದ ಅಪಾರ್ಟ್ಮೆಂಟ್ ಸಹ ಇದೆ! ಇಲ್ಲಿ ಪ್ರತ್ಯೇಕವಾದ ಈಜುಕೊಳ, ಪ್ರಾರ್ಥನಾ ಮಂದಿರ, ಮೆಕ್ಕಾದ ವಿರುದ್ಧ ದಿಕ್ಕಿಗೆ ಮುಖಮಾಡಿರುವಂತಹ ಶೌಚಾಲಯ, ನಮಾಝ್ ಮಾಡುವ ಸಮಯಕ್ಕೆ ಎಚ್ಚರಿಸುವಂತಹ ಗಡಿಯಾರಗಳು ಸಹ ಇದೆ! ಹಲಾಲ್ ಪ್ರಮಾಣಿಕೃತ ಆಸ್ಪತ್ರೆ ಹಾಗೂ ಡೇಟಿಂಗ್ ಅಪ್ಗಳೂ ಬಂದಿವೆ. ಇಸ್ಲಾಮಿಕ್ ರಾಷ್ಟ್ರಗಳೊಂದಿಗಿನ ವ್ಯವಹಾರಕ್ಕಾಗಿ ಇದು ಅವಶ್ಯ ಎಂಬ ಉತ್ತರ ಸಮಾಜಕ್ಕೆ ಹೇಳುವಂತಹ ಸಮಜಾಯಿಶಿ.

Halal Certificate of Himalaya Drug Company

ಹಿಜಾಬ್ ನಿಂದ ಶುರುವಾದ ಗಲಾಟೆ ಸಧ್ಯಕ್ಕೆ ಹಲಾಲ್ ವರೆಗೂ ಬಂದಿದೆ. ಪಂಚರಾಜ್ಯ ಚುಣಾವಣೆ ಸಮಯದಲ್ಲಿ ಶುರುವಾದ ಈ ವಿವಾದಗಳು ಮೇಲುನೋಟಕ್ಕೆ ರಾಜಕೀಯದ ಮೇಲಾಟ ಎಂದು ತೋರಿದರೂ ಒಳಗಿರುವುದು ಧರ್ಮದ ಕಾವು. ಕಾಂಗ್ರೇಸ್ ಪಕ್ಷವಂತೂ ಹಿಜಾಬ್ ವಿಚಾರದಲ್ಲಿ ಒಂದು ಸ್ಪಷ್ಟ ನಿಲುವು ತೆಗೆದುಕೊಳ್ಳದಿರುವುದು ಮುಸಲ್ಮಾನರಿಗೆ ಬೇಸರ, ಆತುರಕ್ಕೆ ಬಿದ್ದು ಬೇಕಾಬಿಟ್ಟಿ ಮಾತಾಡಿ ಹಿಂದೂ ಸಮಾಜದ ವಿರೋಧವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.

ಹನ್ನೊಂದನೇ ಶತಮಾನದಿಂದ ಇಸ್ಲಾಮಿನ ಆಕ್ರಮಣಕ್ಕೆ ಒಳಗಾದ ಹಿಂದೂ ಸಮಾಜ ಸ್ವಾತಂತ್ಯ ನಂತರವೂ ಈ ರಾಜಕೀಯದ ತುಷ್ಟೀಕರಣದ ಕಾರಣ ದೌರ್ಜನ್ಯಕ್ಕೆ ಒಳಗಾಗುತ್ತಲೇ ಇದೆ. ಈಗ ಹಿಂದೂ ಸಮಾಜ ಜಾಗೃತವಾಗಿದೆ, ತನ್ನ ಮೇಲೆ ಯಾವುದೇ ರೀತಿಯ ದೌರ್ಜನ್ಯ ಆಗುವುದನ್ನು ಸಹಿಸುವುದಿಲ್ಲ. ಸಾಮರಸ್ಯ ಎನ್ನುವುದು ಎರಡು ಕೈಗಳು ಸೇರಿ ಹೊಡೆಯುವಂತಹ ಚಪ್ಪಾಳೆ. ಇತಿಹಾಸದಲ್ಲಿ ನಡೆದ ಘಟನೆಗಳು, ಪ್ರಮಾದಗಳನ್ನು ಅರಿತು, ಒಪ್ಪಿಕೊಂಡು ಮತ್ತೆ ಅಂತಹ ತಪ್ಪುಗಳಾಗದಂತೆ ಎಲ್ಲರೂ ಒಟ್ಟಿಗೆ ಮುಂದುವರೆಯಬೇಕಾಗಿದೆ.

***********************************************************

References:


 

No comments:

Post a Comment